ಕಚೇರಿಯಲ್ಲೊಂದು ಮೋಜಿನಾಟ

8
829

ಇದು ಹೆಮ್ಮೆಯ ವಿಷಯ ಅಂದ್ಕೊಳ್ತೀನಿ.

ನಾನು ಚೆನ್ನೈಗೆ ಕಾಲಿಟ್ಟು ಒಂದು ವರ್ಷ ಆಯಿತಷ್ಟೆ. ಪತ್ರಿಕಾ ರಂಗದಿಂದ ತಥಾಕಥಿತ ಕಾರ್ಪೊರೇಟ್ ಸಂಸ್ಕೃತಿಯುಳ್ಳ ಹೊಸ ಉದ್ಯೋಗಕ್ಕೆ ಕಾಲಿಟ್ಟ ನನಗೆ ಬಹುತೇಕ ಎಲ್ಲವೂ ಹೊಸತೇ.

ಈಗ ಇಲ್ಲಿ ನಾನು ಕಳೆದ 12 ತಿಂಗಳ ಮೇಲೆ ಹಿನ್ನೋಟ ಹರಿಸಿದಾಗ… ಈ ದಿನಗಳಲ್ಲಿ ಮರೆಯಲಾಗದ ದಿನಗಳ ಬಗ್ಗೆ ಯೋಚಿಸುತ್ತಿದ್ದೆ. ಅಂಥದ್ದೊಂದು ದಿನ ಕಳೆದ ಬಾರಿಯ ಕ್ರಿಸ್‌ಮಸ್ ದಿನ ಮತ್ತು ಜತೆಗೆ ಬಂದ ಹೊಸ ವರ್ಷಾಚರಣೆ.

ಈ ಪದ್ಧತಿ ಎಲ್ಲ ಆಧುನಿಕ ತಂತ್ರಜ್ಞಾನ ಕಂಪನಿಗಳಲ್ಲಿ ಇವೆಯೋ ಎಂಬ ಬಗ್ಗೆ ವಿಚಾರಿಸಲು ಹೋಗಿಲ್ಲ. ಪ್ರತಿ ಕ್ರಿಸ್ಮಸ್‌ಗೆ ನಮ್ಮಲ್ಲಿ Cris-ma, Cris-pa, Cris-child ಎಂಬ ಒಂದು ಮೋಜಿನಾಟ, ಬಹುಶಃ ಇತರ ನೌಕರರೊಂದಿಗೆ ಆತ್ಮೀಯತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಕೆಲಸದ ಒತ್ತಡದ ನಡುವೆ ಮನಸನ್ನು ಒಂದಷ್ಟು ಹಗುರಾಗಿಸಲು ಇವನ್ನು ಏರ್ಪಡಿಸಲಾಗುತ್ತದೆ.

ಇದು ಹೇಗೆಂದರೆ ಚೀಟಿಗಳ ರಾಶಿಯಿಂದ ನಾವು ಒಂದು ಚೀಟಿ ಎತ್ತಿಕೊಳ್ಳಬೇಕು. ನಾವು default ಆಗಿ ಕ್ರಿಸ್-ಪಾ ಆಗಿರುತ್ತೇವೆ. ನಮಗೆ ದೊರೆತ ಚೀಟಿಯಲ್ಲಿ ನಮ್ಮ ಕ್ರಿಸ್-ಚೈಲ್ಡ್ ಆಗುವವರ ಹೆಸರಿರುತ್ತದೆ. ಈ ಕ್ರಿಸ್ ಚೈಲ್ಡ್‌ಗೆ ಗೊತ್ತಾಗದ ರೀತಿಯಲ್ಲಿ ನಾವು ಕೆಲವೊಂದು instruction ಗಳನ್ನು ಯಾರದೋ ಮುಖಾಂತರ ತಲುಪಿಸಬೇಕು. ಮತ್ತು ಆ ಕ್ರಿಸ್ ಚೈಲ್ಡ್ ಅದನ್ನು ಯಥಾವತ್ತಾಗಿ ಪಾಲಿಸಬೇಕು. ಆದರೆ ಇಲ್ಲಿ ಆರೋಗ್ಯಕರ ತುಂಟಾಟದ ಸೂಚನೆಗಳನ್ನೇ ನೀಡಬೇಕಾಗುತ್ತದೆ. ಅಂದರೆ… ಎಲ್ಲರಿಗೂ ಚಾಕಲೇಟ್ ಹಂಚು, ನೋಟೀಸ್ ಬೋರ್ಡಲ್ಲಿ ‘ಇಂದು ನನ್ನ ಬರ್ತ್ ಡೇ, ಎಲ್ಲರೂ ಬಂದು ಇಲ್ಲಿ ಸಹಿ ಮಾಡಿ ಶುಭ ಹಾರೈಸಿ’ ಅಂತ ಬರೆದು ಅಂಟಿಸು…. ನಾಳೆ ಬರುವಾಗ ಕೆಂಪು ಗುಲಾಬಿಯನ್ನು ಷರ್ಟ್ ಜೇಬಿಗೆ ಸಿಕ್ಕಿಸಿಕೊಂಡು ಬಾ ಅಥವಾ ಇಂಥದ್ದೇ ಬಣ್ಣದ ಡ್ರೆಸ್ ಧರಿಸಿಕೊಂಡು ಬಾ… ಎಂಬಿತ್ಯಾದಿ ಸೂಚನೆಗಳನ್ನು ನೀಡಬಹುದಾಗಿದೆ.

ಅದೇ ರೀತಿ ನನಗೂ ಒಬ್ಬ ಕ್ರಿಸ್-ಪಾ ಇದ್ದರು. ಅದು ಕ್ರಿಸ್ ಪಾ ನೋ ಅಥವಾ ಕ್ರಿಸ್-ಮಾ ನೋ ಅಂತ ನನಗೆ ತಿಳಿದಿರಲಿಲ್ಲ. ಒಂದು ವಾರ ನಡೆಯುವ ಈ ಆಟದಲ್ಲಿ ನನಗೆ ಆಗಾಗ್ಗೆ ಕೆಲವು ಸೂಚನೆಗಳು ಬರುತ್ತಿದ್ದವು. ಆದರೆ decent ಆಗಿದ್ದವು. ಒಂದು ಇಂಗ್ಲಿಷ್ ಪದದ ಅರ್ಥ ಪತ್ತೆ ಮಾಡಿ, ಅದನ್ನು ನಮ್ಮ ಕಂಪನಿ ಹೆಸರಿನೊಂದಿಗೆ ಜೋಡಿಸಿ ವಾಕ್ಯ ಬರೆಯಲು ಸೂಚನೆ ಇತ್ತು. ಇದೇ ರೀತಿಯ ಹಲವು ಸೂಚನೆಗಳಿದ್ದವು. ಎಲ್ಲದಕ್ಕೂ ನಾನು ತಮಾಷೆಯಿಂದಲೇ ಉತ್ತರಿಸುತ್ತಾ, ಎಲ್ಲಿ ಅಡಗಿದ್ದೀ ನನ್ನಪ್ಪಾ ಎಂದೆಲ್ಲಾ ಬರೆದಿದ್ದೆ. ಕಂಪನಿ ಜತೆಗೆ ಒಂದು ಪದ ಸೇರಿಸಿ ವಾಕ್ಯ ಮಾಡು ಎಂಬ ಸೂಚನೆಗಂತೂ ತೀರಾ ತುಂಟತನದ ವಾಕ್ಯ ಬರೆದು ಕಳುಹಿಸಿದ್ದೆ. ಅದು ಯಾರಿಗೆ ತಲುಪುತ್ತಿತ್ತು ಎಂಬುದು ನನ್ನ ಗಮನದಲ್ಲಿರಲೇ ಇಲ್ಲ. ಇಷ್ಟೆಲ್ಲಾ ಆದಮೇಲೆ ತಮ್ಮ ತಮ್ಮ ಕ್ರಿಸ್ ಚೈಲ್ಡ್‌ಗೆ ಹೊಸ ವರ್ಷದಂದು ನಮ್ಮಿಷ್ಟದ ಉಡುಗೊರೆ ಕೊಡಬೇಕು.

ಕೊನೆಗೊಂದು ದಿನ ಬಂದೇ ಬಿಟ್ಟಿತು. ಜನವರಿ 1, 2006ರಂದು ಯಾರೆಲ್ಲಾ ಯಾರು ಯಾರಿಗೆ ಅಪ್ಪ, ಯಾರಿಗೆ ಮಗ ಆಗಿ ಕಾರ್ಯನಿರ್ವಹಿಸಿದ್ದೇವೆ ಎಂದು ತಿಳಿದುಕೊಳ್ಳುವ ದಿನವದು. ನನಗೋ ಇನ್ನಿಲ್ಲದ ಕುತೂಹಲ. ಹೊಸದಾಗಿ ಕೆಲಸಕ್ಕೆ ಸೇರಿದ್ದರಿಂದ ಒಂಥರಾ ಇರಿಸುಮುರಿಸು. ಒಬ್ಬೊಬ್ಬರಾಗಿ ತನ್ನ ಕ್ರಿಸ್ ಚೈಲ್ಡ್‌ನ್ನು ಕರೆದು ಉಡುಗೊರೆ ಕೊಡುತ್ತಿದ್ದರೆ… ನನ್ನ ಉದ್ವೇಗ ಹೆಚ್ಚಿತು. ಯಾಕೆಂದರೆ ಬಹುತೇಕ ಎಲ್ಲರ ಹೆಸರುಗಳೂ ಮುಗಿದಿತ್ತು. ಅಷ್ಟರಲ್ಲಿ ನಮ್ಮ HR executive ನನ್ನ ಕ್ರಿಸ್-ಪಾ ಹೆಸರು ಘೋಷಿಸಿದರು. ಅವರೇ ನಮ್ಮ ಕಂಪನಿ ಬಾಸ್!!! ಹೇಗಾಗಿರಬೇಡ!

ನನ್ನ ತುಂಟತನದ ಉತ್ತರಗಳಿಗೆ ಏನು ಹೇಳುತ್ತಾರೋ ಅಂತ ಹೆದರಿಕೆಯಿಂದ ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ಅವರೇ ಹತ್ತಿರ ಕರೆದು ಉಡುಗೊರೆ ಕೊಟ್ಟು ಬೆನ್ನು ತಟ್ಟಿದಾಗ ಹೋದ ಜೀವ ಮರಳಿ ಬಂದಂತಾಯಿತು. ಆ ಮೇಲೆ ತಿಳಿದುಬಂದ ಸಂಗತಿಯೆಂದರೆ, ಅವರ ಪ್ರಶ್ನೆಗೆ ನಾನು ಚೀಟಿಯಲ್ಲೇ ಬರೆದು ಕಳುಹಿಸಿದ್ದ ಉತ್ತರ ನೋಡಿ ಅವರು ಸಾಕಷ್ಟು ನಕ್ಕಿದ್ದರಂತೆ!

ಅಂತೂ ಹೊಸ ವರ್ಷವನ್ನು ಹೊಸ ಅನುಭವದೊಂದಿಗೇ ಬರಮಾಡಿಕೊಂಡಿದ್ದೆ. ವರ್ಷ ಕಳೆಯುತ್ತಾ ಬಂದಿದೆ, ಅದೆಷ್ಟೋ ಜನ ಬಂದಿದ್ದಾರೆ… ಹೋಗಿದ್ದಾರೆ… ಕಚೇರಿಯಲ್ಲಿ ಜನಸಂಖ್ಯೆ ಹೆಚ್ಚಾಗಿದೆ. ಈ ಬಾರಿಯೂ ಇಂಥದ್ದೇ ಮೋಜಿಗೆ ಸಿದ್ಧತೆ ನಡೆಯುತ್ತಿದೆ.

8 COMMENTS

  1. ನಿಮ್ಮ ಅನುಭವ ಆಟಗಳ ನಿರೂಪಣೆ ಬಹಳ ಚೆನ್ನಾಗಿದೆ. ಎಷ್ಟೇ ಆಗಲಿ ಬಾಸ್ ತಂದೆಯಂತೆಯೇ. ಹಾಗೆಯೇ ಆಟದಲ್ಲಿಯೂ ಆಗಿದ್ದು, ಕಂಪೆನಿಯೊಂದಿಗೆ ನಿಮ್ಮ ನಂಟು ಇನ್ನೂ ಗಟ್ಟಿ ಮಾಡಿದೆ ಅಲ್ಲವೇ? ಬರುವ ನವ ವರ್ಷಾಚರಣೆಯೂ ಹೀಗೆಯೇ ತಮಾಷೆಯಾಗಿರಲಿ ಎಂದು ಆಶಿಸುವೆ.

  2. ಶ್ರೀನಿವಾಸರೆ,
    ಕಂಪನಿ ಜತೆ ನಂಟು ಗಟ್ಟಿ ಮಾಡುವುದಕ್ಕಿಂತಲೂ ಕೆಲಸದ ಒತ್ತಡದ ಮಧ್ಯೆ ಇಂಥ ಅನುಭವಗಳು relief ದೊರಕಿಸುತ್ತವೆ. ನಿಮ್ಮ ಆಶಯಕ್ಕೆ ಧನ್ಯವಾದ.

  3. ಅವೀ,

    ಚೆನ್ನಾಗಿದೆ ನಿಮ್ಮ ಕ್ರಿಸ್-ಪಾ ಕತೆ !

    ನೀವು ಬರೆದ ತುಂಟತನದ ಸಾಲು ನೋಡಿ ನಿಮ್ಮ ಕ್ರಿಸ್-ಪಾ, ನಿಮ್ಮನ್ನು ಗೇಟ್-ಪಾ-ಸ್ ಮಾಡಲಿಲ್ಲವಲ್ಲ ಅಷ್ಟೇ ಸಾಕು 🙂

    ಅಂದಾಗೆ ಎನು ಬರೆದಿದ್ದೀರಿ ಅಂತದ್ದು?

    ಸೋ..ಈ ವರ್ಷ ನೀವು ಕ್ರಿಸ್-ಪಾ ಆಗಿ ಮಾಡಿಸಬೇಕಿಂದಿರುವ ತುಂಟ ಕೆಲಸಗಳೇನು 🙂

  4. ಶಿವ್ ಅವರೆ,
    ಏನು ಬರೆದಿದ್ದೇನೆ, ಅವರೇನು ಕೊಟ್ಟರು ಇತ್ಯಾದಿ ಎಲ್ಲಾ ನಾನು ಯಾಕೆ ಮರೆಯುತ್ತೇನೆಂಬುದೇ ನನಗಿನ್ನೂ ಅರ್ಥವಾಗದ ವಿಷಯ.

    ಬಹುಶಃ ಆವಾಗ ಬ್ಲಾಗಿಸುವುದು ಗೊತ್ತಿರಲಿಲ್ಲವಾಗಿತ್ತು ಎಂಬುದು ಒಂದು ಕಾರಣವಾಗಿದ್ದರೆ, ಹೊಸ ಊರು ಹೊಸ ಜಾಗದಲ್ಲಿ ಕೆಲಸದ ಮೇಲೇ ಹೆಚ್ಚು ಗಮನ ಕೊಟ್ಟಿದ್ದು ಮತ್ತೊಂದು ಕಾರಣವೂ ಆಗಿರಬಹುದು.

    ಈ ವರ್ಷ ಕೂಡ ಅಂಥದ್ದೇ ನಡೆಯುತ್ತದೆ ಎಂಬ ಭರವಸೆ ನನಗಿಲ್ಲ. ಯಾಕೆಂದರೆ HR ಬದಲಾವಣೆ ಬಯಸಿ ಬೇರೆಡೆ ಸೇರಿಕೊಂಡಿದ್ದಾರೆ. 🙂

  5. ಅನುಭವ, ನಿರೂಪಣೆ ಎರಡೂ ಚೆನ್ನಾಗಿವೆ. ೨೦೦೬’ರ ಡಿಸೆಂಬರ್’ನಲ್ಲಿ ಹೇಗಿತ್ತು? ಏನಾಯ್ತು? ಇನ್ನೊಮ್ಮೆ ಬರೀತೀರಿ ತಾನೆ?

  6. ಜ್ಯೋತಿ ಅವರೆ,
    2206ರಲ್ಲಿ ಇದರ ಆಚರಣೆ ಇತ್ತಾದರೂ ಅದು ಕೊನೆಮುಟ್ಟಿರಲಿಲ್ಲ… ಹಾಗಾಗಿ ಅರ್ಧಕ್ಕೇ ಸ್ಥಗಿತಗೊಂಡಿತು. ನಾನು ಕೂಡ ಇಂದೋರ್‌ನಲ್ಲಿ ಇದ್ದೆ…

LEAVE A REPLY

Please enter your comment!
Please enter your name here