ಕ್ರಿಕೆಟಿಗೂ ನವೀನ ತಂತ್ರಜ್ಞಾನಕ್ಕೂ ಸಮೀಪದ ನಂಟಿರುವುದು ಎಲ್ಲರಿಗೂ ಗೊತ್ತಿದೆ. ತಂತ್ರಜ್ಞಾನದ ಬಳಕೆಯು ಫಲಿತಾಂಶದ ನಿಖರತೆಯನ್ನು ಖಚಿತಪಡಿಸುತ್ತದೆಯಷ್ಟೇ ಅಲ್ಲದೆ, ವಿಶ್ಲೇಷಣೆಗೆ ನೆರವಾಗುತ್ತದೆ. ಜತೆಗೆ ಆಟಗಾರನೊಬ್ಬನ ಸಾಮರ್ಥ್ಯವೇನು, ಎಲ್ಲಿ ಕೊರತೆಯಿದೆ ಎಂಬುದನ್ನು ವಿಶ್ಲೇಷಿಸಿ ಕ್ಷಮತೆ ಸುಧಾರಣೆಯೂ ಸಹಾಯ ಮಾಡುತ್ತದೆ.
ಬೌಲರ್‌ನ ಎಸೆತದ ಜಾಡನ್ನು ಟಿವಿಯಲ್ಲಿ ತೋರಿಸಬಲ್ಲ ಹಾಕ್-ಐ ತಂತ್ರಜ್ಞಾನ, ಚೆಂಡು ಬ್ಯಾಟಿಗೆ ತಗುಲಿದೆಯೇ ಇಲ್ಲವೇ ಎಂಬುದನ್ನು ಅತ್ಯಂತ ಸೂಕ್ಷ್ಮ ಅಂತರದಿಂದ ಕಂಡುಹಿಡಿದು ಬ್ಯಾಟ್ಸ್‌ಮನ್ ಔಟ್ ಆಗಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಸಬಲ್ಲ ಹಾಟ್‌ಸ್ಪಾಟ್ ತಂತ್ರಜ್ಞಾನ, ಬೌಲರ್ ಎಸೆದ ಚೆಂಡು ಎಷ್ಟು ವೇಗವಾಗಿ ತಿರುಗುತ್ತದೆ ಎಂದು ತಿಳಿಸಬಲ್ಲ ಬಾಲ್ ಸ್ಪಿನ್ ಆರ್‌ಪಿಎಂ (ರೌಂಡ್ಸ್ ಪರ್ ಮಿನಿಟ್) ತಂತ್ರಜ್ಞಾನ, ಚೆಂಡು ಬ್ಯಾಟಿಗೆ ತಗುಲಿದರೆ ಶಬ್ದ ಸಹಿತವಾಗಿ ತಿಳಿಸಬಲ್ಲ ಸ್ನಿಕ್-ಒ-ಮೀಟರ್ ತಂತ್ರಜ್ಞಾನಗಳೆಲ್ಲವೂ ಹಲವಾರು ಕ್ರಿಕೆಟ್ ಸರಣಿಗಳಲ್ಲಿ ಈಗಾಗಲೇ ಬಳಕೆಯಾಗಿ, ಆಟಗಾರ ಔಟ್ ಆಗಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಸುವಲ್ಲಿ ಮಹತ್ತರ ಪಾತ್ರ ವಹಿಸಿವೆ.
ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲೂ ತಂತ್ರಜ್ಞಾನ ಸಮರ್ಥವಾಗಿ ಬಳಕೆಯಾಗುತ್ತಿದೆ. ಕಳೆದ ಬಾರಿ ಪಿಚ್‌ಸೈಡ್ ಕ್ಯಾಮೆರಾ ತಂತ್ರಜ್ಞಾನವನ್ನು ಬಳಸಲಾಗಿತ್ತು. ಇದು ಪಿಚ್‌ನಿಂದಲೇ ಆಟವನ್ನು ರೆಕಾರ್ಡ್ ಮಾಡಿ ಲೈವ್ ಸ್ಟ್ರೀಮ್ ಮಾಡಲು ನೆರವಾಗಿತ್ತು.
ಈ ಬಾರಿಯ ವಿಶೇಷತೆಯೆಂದರೆ, 360 ಡಿಗ್ರಿ ಕೋನದಲ್ಲಿ ಚಿತ್ರ ಹಾಗೂ ವೀಡಿಯೋ ದಾಖಲಿಸಬಲ್ಲ ಕ್ಯಾಮೆರಾ. ನಾನಾ ವಿಭಾಗಗಳಲ್ಲಿ 360 ಡಿಗ್ರಿ ಕ್ಯಾಮೆರಾ ಬಳಸಲಾಗುತ್ತಿದ್ದರೂ, ಕ್ರಿಕೆಟಿಗೆ ಸಂಬಂಧಿಸಿದಂತೆ ಇದು ದೇಶದಲ್ಲೇ ಮೊದಲು. ಅಂಗಣದಲ್ಲಿ ಅದೇ ರೀತಿ ಅಂಗಣ ಹೊರಗೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಏನೇನಾಗುತ್ತಿದೆ ಎಂಬುದನ್ನು ಏಕಕಾಲದಲ್ಲಿ ಸೆರೆಹಿಡಿಯಬಲ್ಲ ಕ್ಯಾಮೆರಾ ಇದು. ಕ್ರಿಕೆಟ್ ಅಭಿಮಾನಿಗಳನ್ನಂತೂ ಭ್ರಮಾಲೋಕಕ್ಕೆ ಕೊಂಡೊಯ್ಯಬಲ್ಲ ತಂತ್ರಜ್ಞಾನವಿದಾಗಿದ್ದು, 4ಕೆ ಪಿಕ್ಸೆಲ್ ರೆಸೊಲ್ಯುಶನ್‌ನಲ್ಲಿ ವೀಡಿಯೋ ರೆಕಾರ್ಡ್ ಆಗುತ್ತದೆ. ಪ್ರಸ್ತುತ ಐಫೋನ್ ಮೂಲಕವೇ ರೆಕಾರ್ಡ್ ಮಾಡಿ ಸ್ಟ್ರೀಮಿಂಗ್ ಮಾಡಲಾಗುತ್ತಿರುವುದು ವಿಶೇಷ.
ಆನಂದಾನುಭವ ಮತ್ತಷ್ಟು ಎತ್ತರಕ್ಕೆ
‘ನಾವು ಇದೇ ಮೊದಲ ಬಾರಿಗೆ ಭಾರತದಲ್ಲಿ 360 ಡಿಗ್ರೀ ಕ್ಯಾಮೆರಾವನ್ನು ಕ್ರಿಕೆಟ್‌ನಲ್ಲಿ ಪರಿಚಯಿಸುತ್ತಿದ್ದೇವೆ. ಡಿಜಿಟಲ್ ಜಗತ್ತಿನಲ್ಲಿ ಕರ್ನಾಟಕ ಪ್ರೀಮಿಯರ್ ಲೀಗ್ ಮೂಲಕ ಕ್ರಿಕೆಟಿನ ಆನಂದಾನುಭವವನ್ನು ಮತ್ತೊಂದು ಎತ್ತರಕ್ಕೇರಿಸಿದ್ದೇವೆ.’
-ಜಯಂತ್ ದೇವ್, ಕೆಪಿಎಲ್ ಸೋಷಿಯಲ್ ಮೀಡಿಯಾ ತಂಡ
ಅವಿನಾಶ್ ಬಿ. ವಿಜಯ ಕರ್ನಾಟಕ ಕ್ರೀಡಾ ಪುಟದಲ್ಲಿ ಪ್ರಕಟವಾದ ಬರಹ, ಸೆಪ್ಟೆಂಬರ್ 05, 2017