ಡೆಮಾಕ್ರಸಿ ಮೇಲೆ ಅತ್ಯಾಚಾರ

2
458

ಮತ್ತೊಂದು ವಾರ್ಷಿಕ ನಾಟಕೋತ್ಸವ ಆರಂಭವಾಗಿದೆ, ಇಲ್ಲಿ ವ್ಯಾಪಾರಕ್ಕಿರುವ ಕುದುರೆಗಳು, ತೂಗುತಕ್ಕಡಿಯಿಂದ ಹಾರುವ ಕಪ್ಪೆಗಳು, ಮರದಿಂದ ಮರಕ್ಕೆ ಜಿಗಿಯುವ ಕೋತಿಗಳು, ಶ್ವಾನನಿಷ್ಠೆಗೆ ಅವಮಾನ ಮಾಡುವವರು ಎಲ್ಲ ಪಾತ್ರಗಳೂ ಇರುತ್ತವೆ – ಜನರ ನಡುವೆ ಚರ್ಚೆಯಾಗುತ್ತಿರುವಾಗ ಇಂಥವೆಲ್ಲಾ ಮಾತುಗಳು ಕೇಳಿಬರುತ್ತಿರುವುದು ಪ್ರತೀ ಬಾರಿ ಸಂಪುಟ ವಿಸ್ತರಣೆ ನಡೆಸಿದಾಗ ಅಥವಾ ನಡೆಸಲಿರುವಾಗ ಎಂಬುದು ಗಮನಿಸಬೇಕಾದ ಅಂಶ.

ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಹೇಳಿದ್ದಾರಲ್ಲ – “ನಾಯಿಯ ನಿಷ್ಠೆ ಬದಲಾಗುವುದಿಲ್ಲ, ಆದರೆ ಮನುಷ್ಯನ ನಿಷ್ಠೆ ಪರಿಸ್ಥಿತಿಗೆ ತಕ್ಕಂತೆ ಬದಲಾಗುತ್ತಿರುವುದನ್ನು ನಾವು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಕಾಣುತ್ತೇವೆ. ಆಡಿದ ಮಾತುಗಳಿಗಿಂತ ಮಾಡಿದ ಕಾರ್ಯ ಹೆಚ್ಚು ಮಹತ್ವದ್ದು.”

ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಎಂ ಒತ್ತಿ ಒತ್ತಿ ಹೇಳಿದ ಈ ಪದಗಳನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿ. ಅದರಲ್ಲಿ ಕೊನೆಯ ವಾಕ್ಯವನ್ನು ಮತ್ತೆ ಓದಿ ನೋಡಿದರೆ ಅದರೊಳಗಿರುವ ಗೂಢಾರ್ಥ ತಿಳಿಯುತ್ತದೆ.

ಜನಹಿತಕ್ಕಿಂತ ಸ್ವಹಿತ ಮುಖ್ಯ…
ಹೌದು. ಕರ್ನಾಟಕ ರಾಜಕೀಯ ಗಬ್ಬೆದ್ದು ಹೋಗಿದೆ. ಒಬ್ಬೊಬ್ಬ ಶಾಸಕ 20-30 ಕೋಟಿ ಬೆಲೆ ಬಾಳುತ್ತಾನೆಂದಾದರೆ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಗೆಲ್ಲಿ ಬೆಲೆಯಿದೆ? ಗೆದ್ದು ಹೋದ ಮೇಲೆ ಅಧಿಕಾರ ಸಿಕ್ಕಿದರೆ ಮಾತ್ರವೇ ತಮ್ಮದು “ಜನಸೇವೆ”ಯಾಗುತ್ತದೆ ಎಂಬ ಭಾವನೆ ರಾಜಕಾರಣಿಗಳಲ್ಲಿದೆ. ಈ ಎಲ್ಲಾ ಆಟಾಟೋಪಗಳು ಬರೇ ಅಧಿಕಾರಕ್ಕಾಗಿಯೇ ಅಲ್ಲವೇ? ಅಕ್ಷರಶಃ ಪಕ್ಷ ಹಿತ, ರಾಜ್ಯದ ಹಿತಕ್ಕಿಂತ ಸ್ವಹಿತವೇ ಮುಖ್ಯವಾದಾಗ ಆಗುವುದು ಹೀಗೆಯೇ. ಹೇಳಿಕೊಳ್ಳುವವರು ಹೇಳುತ್ತಾರೆ – ನಾವೆಲ್ಲಾ ಮಾಡುವುದು “ಪ್ರಜಾಪ್ರಭುತ್ವ ರಕ್ಷಣೆಗೆ, ರಾಜ್ಯದ ಜನತೆಯ ಕಣ್ಣೀರು ಒರೆಸಲು, ಆರು ಕೋಟಿ ಕನ್ನಡಿಗರ ಹಿತದೃಷ್ಟಿಯಿಂದ, ಸಾಮಾಜಿಕ ನ್ಯಾಯಕ್ಕಾಗಿ”…. ಇವೆಲ್ಲವೂ ಬರೀ ಬೊಗಳೆ ಬೊಗಳೆ ಬೊಗಳೆ. ಈ ಶಾಸಕ ಮಹೋದಯರುಗಳ ಪ್ರತಿಯೊಂದು ನಡೆಯಲ್ಲಿಯೂ ಸ್ವಾರ್ಥವೇ ಕಾಣಿಸುತ್ತಿದೆ ಎಂದು ತಿಳಿಯದಷ್ಟು ಮೂರ್ಖರಲ್ಲ ಕರ್ನಾಟಕದ ಎಚ್ಚೆತ್ತ ಮತದಾರರು!

ಬಿಸ್ಕತ್ತು ತಿಂದ ನಾಯಿಗಾದರೂ ನಿಷ್ಠೆ ಇರುತ್ತೆ ಎಂಬುದು ಚೆನ್ನಾಗಿ ಗೊತ್ತಿದೆ ಮತದಾರರಿಗೆ. ಇಲ್ಲವೆಂದಾದರೆ, ರಾಜ್ಯದ ಜನರನ್ನು ಕಾಡುತ್ತಿರುವ ಅದೆಷ್ಟೋ ಸಮಸ್ಯೆಗಳಿವೆ – ಭೂಹಗರಣವಿದೆ, ಪ್ರವಾಹ ಸಂತ್ರಸ್ತರಿಗೆ ಸರಿಯಾದ ಪರಿಹಾರ ದೊರಕಿಲ್ಲ ಎಂಬ ವಿಷಯವಿದೆ, ಬೆಲೆ ಏರಿಕೆಯ ಸಂಗತಿಯಿದೆ, ರಸ್ತೆಗಳು ಸರಿ ಇಲ್ಲ ಎಂಬ ವಾದವಿದೆ, ರೈತರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂಬ ಕೂಗಿದೆ, ವಿದ್ಯುತ್ ಸಮಸ್ಯೆ ಇದೆ…. ಇಷ್ಟೆಲ್ಲ ಇರುವಾಗ ಈ ಶಾಸಕರು ‘ಅಧಿಕಾರ ಸಿಗಲಿಲ್ಲ’ ಎಂಬ ಗುಪ್ತ ಅಜೆಂಡಾ ಇಟ್ಟುಕೊಂಡು, ಅದಕ್ಕೆ ‘ಪ್ರಜಾಪ್ರಭುತ್ವಕ್ಕೆ, ಸಾಮಾಜಿಕ ನ್ಯಾಯಕ್ಕೆ ತೊಂದರೆಯಾಗಿದೆ’ ಎಂಬ ಮುಖವಾಡ ಹಾಕಿಕೊಂಡು, ದೇಶಾದ್ಯಂತ ಪ್ರವಾಸ ಮಾಡುತ್ತಿರುವುದು ಎಷ್ಟು ಸರಿ? ಬೆಂಗಳೂರಿನಿಂದ ಹೊಸೂರು, ಚೆನ್ನೈ, ಕೊಚ್ಚಿ, ಮುಂಬೈ, ಶಿರಡಿ, ದೆಹಲಿ, ಗೋವಾ, ಹೈದರಾಬಾದ್ ಎಂದೆಲ್ಲಾ ವಿಮಾನದಲ್ಲೇ ಹಾರಾಡುತ್ತಾ, ವ್ಯಯ ಮಾಡುವ ರಾಜ್ಯದ ಜನರ ಹಣವನ್ನು ಒಂದಿನಿತಾದರೂ ಜನೋದ್ಧಾರಕ್ಕೆ ಬಳಸಬಹುದಿತ್ತಲ್ಲಾ?

ನಿಷ್ಠೆಯ ಬಗ್ಗೆ ಸ್ವಸಂದೇಹ...
ಹಾಗಿದ್ದರೆ ಅವರು ಪಕ್ಷಕ್ಕೆ, ನಾಯಕತ್ವಕ್ಕೆ ನಿಷ್ಠೆ ಬದಲಿಸಿದ ರೀತಿಯಲ್ಲಿಯೇ ಬೇರೆ ರಾಜ್ಯಗಳಿಗೆ ಓಡಿ ಹೋಗಿ ತಲೆಮರೆಸಿಕೊಂಡಿದ್ದೇಕೆ? ತಮ್ಮ ಉದ್ದೇಶ ಸಾಧನೆಯ ಈ ಅಭಿಯಾನದಲ್ಲಿ ಯಾರು ಹೆಚ್ಚು ಆಮಿಷವೊಡ್ಡುತ್ತಾರೆಯೋ ಅಲ್ಲಿಗೆ ವಾಲಿಹೋದರೆ, ಉದ್ದೇಶ ಸಾಧನೆಯಾಗದಿದ್ದರೆ ಎಂಬ ಆತಂಕ. ತಮ್ಮ ಬಗ್ಗೆಯೇ ತಮಗೆ ಅಭದ್ರತೆಯ ಆತಂಕ. ಒಟ್ಟಿನಲ್ಲಿ ತಮ್ಮ ನಿಷ್ಠೆಯ ಬಗ್ಗೆ ತಮಗೇ ಸಂದೇಹ. ಹೀಗಾಗಿಯೇ ಅವರು ಊರು ಬಿಟ್ಟಿರುವುದು!

ಆಪರೇಶನ್ ಕಮಲದಿಂದ ರೋಗ ಉಲ್ಬಣ…
ಒಂದು ಮಾತು ಇಲ್ಲಿ ಉಲ್ಲೇಖಿಸಲೇಬೇಕು. ಸರಕಾರ ಭದ್ರಗೊಳಿಸುವ ಕಾರಣವೊಡ್ಡಿ ಬಿಜೆಪಿ ನಡೆಸಿದ ಆಪರೇಶನ್ ಕಮಲದ ಪರಿಣಾಮ ಇದೇ. ಪಕ್ಷಕ್ಕೆ ನಿಷ್ಠೆ ತೋರಿಸದವರನ್ನೆಲ್ಲಾ ಅಲ್ಲಿಂದ ಇಲ್ಲಿಂದ ಎತ್ತಾಕಿಕೊಂಡು ಸರಕಾರ ಸೇರಿಸಿಕೊಂಡು ಅಧಿಕಾರ ಕೊಟ್ಟು ಬೆಳೆಸಿದ್ದು ಬಿಜೆಪಿಯೇ. ಇದರಿಂದ ಕಟ್ಟಾ ಬಿಜೆಪಿ ಕಾರ್ಯಕರ್ತರಿಗೆ, ಹಲವಾರು ವರ್ಷಗಳಿಂದ ನಿಷ್ಠಾವಂತರಾಗಿ ದುಡಿದವರಿಗೆ ನೋವಾಗುವುದು ಸಹಜ. ಹಸಿವಾಗಿದೆ ಎಂಬ ಕಾರಣಕ್ಕೆ, ಹಾದಿ ಬೀದಿಯಲ್ಲಿ ಇದ್ದಬದ್ದದ್ದನ್ನೆಲ್ಲಾ ತಿಂದ್ರೆ ಹೇಗೆ ಅಜೀರ್ಣವಾಗುತ್ತದೆಯೋ, ಬೊಜ್ಜು ಬಂದು ರೋಗ ರುಜಿನ ಬರುತ್ತದೋ, ಅದುವೇ ಪರಿಸ್ಥಿತಿ ಬಿಜೆಪಿಗೂ ಆಗಿದೆ.

ಒಟ್ಟಿನಲ್ಲಿ ಈ ನಿಷ್ಠಾಂತರ ಮಾಡುವ ಆಯಾರಾಮ್-ಗಯಾರಾಮ್‌ಗಳಿಂದಾಗಿ ಜನರು ರಾಜಕಾರಣಿಗಳ ಬಗ್ಗೆ ಪಕ್ಷಾತೀತವಾಗಿ ಅಸಹ್ಯ ಪಟ್ಟುಕೊಳ್ಳುತ್ತಿರುವ ಪರಿಸ್ಥಿತಿ ಬಂದಿದ್ದಂತೂ ಸುಳ್ಳಲ್ಲ.

ಮುಂದೇನು?
ಅಕ್ಟೋಬರ್ 12ರ ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತಿಗೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆಯಾಗಿರುವ 113 ಶಾಸಕರನ್ನು ತೋರಿಸದೇ ಇದ್ದರೆ ಯಡಿಯೂರಪ್ಪ ಸರಕಾರ ಪತನವಾಗುತ್ತದೆ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸರಕಾರ ಬೆಂಬಲಿಸುತ್ತಿರುವ ಶಾಸಕರ (ಬಿಜೆಪಿ) ಬಲವು 117ರಿಂದ 106ಕ್ಕೆ ಬಂದಿದೆ. (ಬಿ.ಪಿ.ಹರೀಶ್, ದೊಡ್ಡನಗೌಡ ಪಾಟೀಲ ಮತ್ತು ಎಸ್.ಕೆ.ಬೆಳ್ಳುಬ್ಬಿ ಇತ್ತೀಚಿನ ವರದಿ ಬಂದಾಗ ಬಿಜೆಪಿ ಪರವಾಗಿ ಮರಳಿ ನಿಷ್ಠೆ ಬದಲಾಯಿಸಿದ್ದಾರೆ.) ಉಳಿದ 11 ಬಿಜೆಪಿ ಶಾಸಕರು ಅತ್ತಿತ್ತ ತಿರುಗಾಡುತ್ತಿದ್ದು, ಜನಾರ್ದನ ರೆಡ್ಡಿ ಹೇಳಿಕೆ ಪ್ರಕಾರ, ಇನ್ನೂ ಐವರು ಇತ್ತ ಕಡೆಗೆ ವಾಲುತ್ತಿದ್ದಾರೆ!

ಸದ್ಯದ ಬಲಾಬಲದ ಪ್ರಕಾರ
ಬಿಜೆಪಿ 103
ಬಂಡಾಯ ಬಿಜೆಪಿ 14
ಕಾಂಗ್ರೆಸ್ 73
ಜೆಡಿಎಸ್ 28
ಸ್ವತಂತ್ರರು 6

ಈಗ ಬದಲಾಗಿರುವ ಸನ್ನಿವೇಶವದಲ್ಲಿ (ಈ ಕ್ಷಣದ ಲೆಕ್ಕಾಚಾರ ಮಾತ್ರ, ಯಾವುದೇ ಕ್ಷಣ ಬದಲಾಗಬಹುದು!)
ಬಿಜೆಪಿ 106 (ಪಿ.ಬಿ.ಹರೀಶ್, ಬೆಳ್ಳುಬ್ಬಿ, ದೊಡ್ಡನಗೌಡ ಪಾಟೀಲ ವಾಪಸ್)
ಬಂಡಾಯ ಬಿಜೆಪಿ 11
ಕಾಂಗ್ರೆಸ್ 73
ಜೆಡಿಎಸ್ 28
ಸ್ವತಂತ್ರರು 6

ಹಾಗೆಯೇ, ಬಳ್ಳಾರಿಯ ಗಣಿ ಧಣಿಗಳು ಜತೆಗಿರುವಾಗ 11 ಶಾಸಕರನ್ನು ಇತ್ತಕಡೆಗೆ ಸೆಳೆಯುವುದು ದೊಡ್ಡ ಸಂಗತಿಯೇನಲ್ಲ. ಯಾಕೆಂದರೆ ರಾಜಕೀಯದಲ್ಲಿ ಯಾರೂ ಶತ್ರುಗಳು ಅಲ್ಲ, ಯಾರೂ ಮಿತ್ರರೂ ಅಲ್ಲ. ಯಾವುದೇ ಕ್ಷಣದಲ್ಲಿ ನಿಷ್ಠೆ ಬದಲಾಗಬಹುದು ಎಂಬ ಅಲಿಖಿತ ಸಿದ್ಧಾತವೇ ಇದೆಯಲ್ಲ!

ಸ್ಪೀಕರ್ ಬದಲಾವಣೆ….
ಅದರ ಹೊರತು ರಾಜಕೀಯ ತಂತ್ರ-ಪ್ರತಿ ತಂತ್ರಗಳು ನಡೆಯುತ್ತಲೇ ಇವೆ. ವಿಶ್ವಾಸಮತದ ವೇಳೆ ಪ್ರಮುಖ ಪಾತ್ರ ವಹಿಸಲಿರುವ ಸ್ಪೀಕರ್ ಅವರನ್ನೇ ಬದಲಿಸಬೇಕೆಂದು ಪ್ರತಿಪಕ್ಷಗಳು ಈಗಾಗಲೇ ತಂತ್ರ ಹೂಡಿವೆ. ಸ್ಪೀಕರ್ ಬದಲಾವಣೆಗೆ ಸಮಯ ತಗುಲುತ್ತದೆ, ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿ, ನಿರ್ಣಯ ಅಂಗೀಕಾರವಾಗಿ, ಮತದಾನವಾಗಿ ಆ ಬಳಿಕವಷ್ಟೇ ಸ್ಪೀಕರ್ ಬದಲಾವಣೆ ಸಾಧ್ಯ. ಅದಕ್ಕೆ ಕಾಲಮಿತಿಯೇನೂ ಇಲ್ಲ. ಆದರೆ, ಬಹುಮತ ಸಾಬೀತು ಅದಕ್ಕೆ ಮೊದಲೇ ಆಗಬೇಕು, ಯಾಕೆಂದರೆ ರಾಜ್ಯಪಾಲರು ಅ.12ರ ಗಡುವು ವಿಧಿಸಿದ್ದಾರಲ್ಲ!

ವಿಧಾನಸಭೆ ವಿಸರ್ಜಿಸಬಹುದೇ…
ಇವ್ಯಾವುದರ ಗೊಡವೆಯೇ ಬೇಡ, ನೇರ ಜನರ ಬಳಿಗೆ ಹೋಗೋಣ ಎಂದು ಯಡಿಯೂರಪ್ಪ ಅವರು ವಿಧಾನಸಭೆ ವಿಸರ್ಜನೆ ಮಾಡುವಂತೆಯೂ ಇಲ್ಲ. ಒಂದೊಮ್ಮೆ ಅವರಿಗೆ ಸಂಪೂರ್ಣ ಬಹುಮತವಿದ್ದಿದ್ದರೆ ಈ ಕುರಿತು ಶಿಫಾರಸು ಮಾಡಿದರೆ ರಾಜ್ಯಪಾಲರು ಸಾಂವಿಧಾನಿಕವಾಗಿ ಈ ಕೋರಿಕೆಯನ್ನು ಪುರಸ್ಕರಿಸಬಹುದಾಗಿತ್ತು. ಆದರೆ ಈಗ ಸರಕಾರ ಅಲ್ಪಮತದಲ್ಲಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

ರಾಷ್ಟ್ರಪತಿ ಆಳ್ವಿಕೆ ಹೇರಬಹುದೇ...
ಇನ್ನು ಕೇಂದ್ರ ಸರಕಾರವೇ ರಾಷ್ಟ್ರಪತಿ ಆಳ್ವಿಕೆ ಹೇರಬಹುದೇ? ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸದ್ಯಕ್ಕೆ ಇದು ಸಾಧ್ಯವಿಲ್ಲ. ಅಂದರೆ ಸದನದಲ್ಲಿ ವಿಶ್ವಾಸ ಮತದ ಬಲಾಬಲ ಪರೀಕ್ಷೆ ನಡೆಯದೆ ಇದು ಸಾಧ್ಯವಿಲ್ಲ. ಪ್ರಜಾತಾಂತ್ರಿಕ ಸರಕಾರ ಸ್ಥಾಪಿಸುವ ಎಲ್ಲ ಅವಕಾಶಗಳನ್ನು ಅಳೆದು ನೋಡಿದ ಬಳಿಕ, ಸಾಧ್ಯವೇ ಇಲ್ಲ ಎಂದಾದಾಗ ಮಾತ್ರ ರಾಜ್ಯಪಾಲರು ಈ ಕುರಿತು ಮಾಡಬಹುದಾದ ಶಿಫಾರಸು ಕೊನೆಯ ಅಸ್ತ್ರವಾಗುತ್ತದೆ. ಇಲ್ಲೂ ಒಂದು ಅಂಶವಿದೆ. ಬಲಾಬಲ ಪರೀಕ್ಷೆ ವೇಳೆ ಏನಾದರೂ ಪಕ್ಷಗಳು ತಂತ್ರ ರೂಪಿಸಿ, ಗದ್ದಲವೆಬ್ಬಿಸಿ, ಅಲ್ಲಿ ಸಾಂವಿಧಾನಿಕ ವ್ಯವಸ್ಥೆಯೇ ಕುಸಿಯುವ ಪ್ರಸಂಗ ಬಂದಿತೆಂಬುದು ಆಧಾರಸಹಿತವಾಗಿ ಮನದಟ್ಟಾದರೆ, ರಾಷ್ಟ್ರಪತಿ ಆಳ್ವಿಕೆ ಹೇರಬಹುದಾಗಿದೆ.

ಈಗ ಯಡಿಯೂರಪ್ಪ ಅವರ ಬಳಿ ಇರುವ ಏಕೈಕ ಹಾದಿಯೆಂದರೆ ವಿಶ್ವಾಸಮತ ಸಾಬೀತುಪಡಿಸುವುದು ಇಲ್ಲವೇ ರಾಜೀನಾಮೆ ಕೊಡುವುದು. ಅವರೇ ಹೇಳಿಕೊಂಡ ಪ್ರಕಾರ ಬಹುಮತ ಸಾಬೀತು ಮಾಡಿಯೇ ತೋರಿಸುತ್ತೇನೆ ಎಂಬ ವಿಶ್ವಾಸ ಅವರಲ್ಲಿದೆ.

ಶಾಸಕರನ್ನು ಉಚ್ಚಾಟಿಸಬಹುದೇ…
ಇನ್ನು, ಬಂಡಾಯ ಶಾಸಕರನ್ನು ಸರಕಾರದಿಂದ ಉಚ್ಚಾಟಿಸಬಹುದಷ್ಟೇ ಹೊರತು, ಪಕ್ಷದಿಂದಲೇ ಉಚ್ಚಾಟನೆ ಮಾಡಿದರೆ, ಇದರಿಂದ ಬಿಜೆಪಿಗೇ ನಷ್ಟ. ಯಾಕೆಂದರೆ ಬಂಡಾಯ ಶಾಸಕರು ಮತ ಹಾಕಲು ಸ್ವತಂತ್ರರಾಗಿಬಿಡುತ್ತಾರೆ. ಉಚ್ಚಾಟಿಸದೆ, ವಿಶ್ವಾಸಮತದಂದು ಹಾಜರಿರಬೇಕು, ಬಿಜೆಪಿ ಸರಕಾರಕ್ಕೇ ಮತ ಹಾಕಬೇಕು ಎಂಬ ವಿಪ್ (ಸಚೇತಕಾಜ್ಞೆ) ಜಾರಿಗೊಳಿಸುವುದು ಸಾಮಾನ್ಯ. ಇದರ ಉಲ್ಲಂಘನೆಯಾದರೆ ಮಾತ್ರವೇ ಪಕ್ಷವು ಅವರ ಸದಸ್ಯತ್ವವನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಬಹುದು. ತತ್ಪರಿಣಾಮವಾಗಿ ಅವರು ಕನಿಷ್ಠ 6 ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ. ಇದೆಲ್ಲಾ ಆಗುವುದು ವಿಶ್ವಾಸಮತದ ಬಳಿಕವಷ್ಟೇ.

ವಿಶ್ವಾಸಮತ ಕಲಾಪಕ್ಕೆ ಅಬ್ಸೆಂಟ್…
ಇನ್ನೂ ಒಂದು ತಂತ್ರವಿದೆ. ಪ್ರತಿಪಕ್ಷದ ಅಥವಾ ಬಂಡಾಯ ಬಿಜೆಪಿ ಶಾಸಕರನ್ನು ವಿಶ್ವಾಸಮತದ ಕಲಾಪಕ್ಕೆ ಹಾಜರಾಗದಂತೆ ಮಾಡುವುದು. ಉದಾಹರಣೆಗೆ, ಒಂದು ಹತ್ತು ಮಂದಿಯನ್ನು ಹೀಗೆ ತಡೆದರೆ, ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯೂ ಕುಸಿಯುತ್ತದೆ. 224ರಿಂದ 10 ಶಾಸಕರನ್ನು ತೆಗೆದರೆ, ಒಟ್ಟು ಸಂಖ್ಯೆ 214ಕ್ಕೆ ಇಳಿಯುತ್ತದೆ, ಹೀಗಾಗಿ ಆಗ ಸದನದಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆಯು ಅರ್ಧಕ್ಕಿಂತ ಒಂದು ಹೆಚ್ಚು, ಅಂದರೆ 108ಕ್ಕೆ ಇಳಿಯುತ್ತದೆ. ಇಲ್ಲಿ ಕಾಂಗ್ರೆಸ್ 73, ಜೆಡಿಎಸ್ 28, ಪಕ್ಷೇತರರು 6 ಸೇರಿದರೆ 107 ಆಗುತ್ತದೆ. ಬಿಜೆಪಿ ಕಡೆಯಲ್ಲಿ 104ಕ್ಕೆ ಒಂದಿಷ್ಟು ಅತ್ತಕಡೆಯಿಂದ ‘ಸೇರಿಸಿಕೊಂಡರೆ’ ಪವಾಡವೇ ಆಗುತ್ತದೆ. (ಆ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದೆಯಲ್ಲ…!) ಈ ತರಹದ ಲೆಕ್ಕಾಚಾರ ಹಾಕಲು ಹೋಗುವುದೇ ವ್ಯರ್ಥ. ಇಲ್ಲಿ ಸಾಕಷ್ಟು ಸಮೀಕರಣಗಳು ಬರುವುದು ಸಾಧ್ಯ. ಯಾಕೆಂದರೆ ರಾಜಕೀಯದಲ್ಲಿ ಏನೂ ನಡೆಯಬಹುದು, ಎಲ್ಲವೂ ನಡೆಯಬಹುದು! ಮತ್ತು ರಾಜಕಾರಣಿಗಳ ನಿಷ್ಠೆ ಯಾರ ಕಡೆಗೂ ವಾಲಬಹುದು!

ಹೀಗಾಗಿ, ರಾಜಕೀಯದಲ್ಲಿ ಏನೂ ಆಗಬಹುದು ಎಂಬ ಅಲಿಖಿತ ತತ್ವದಿಂದಾಗಿ ಸದ್ಯಕ್ಕೆ ಯಾರು ಕೂಡ ಬಿಪಿ ಹೆಚ್ಚಿಸಿಕೊಳ್ಳಬೇಕಿಲ್ಲ! ಪಕ್ಷಾಂತರ ನಿಷೇಧ ಕಾಯಿದೆಯಿರುವ ಹೊರತಾಗಿಯೂ ಈ ರಾಜಕೀಯದ ನಾಟಕಕ್ಕೆ ಕಾನೂನಿನಲ್ಲಿ ಸಮರ್ಪಕವಾದ ಯಾವುದೇ ಪರಿಹಾರ ಇಲ್ಲ, ಅಥವಾ ಅಂಥದ್ದೊಂದು ಪರಿಹಾರ ನೀಡಬಲ್ಲ ಕಾನೂನು ರೂಪಿಸಲು ಕೂಡ ಖಂಡಿತಾ ಇಂದಿನ ಧನದಾಹಿ ರಾಜಕಾರಣಿಗಳು ಮನಸ್ಸು ಮಾಡಲಾರರು. ಎಲ್ಲವೂ ರಾಜಕೀಯ ನೈತಿಕತೆಯನ್ನು ಅವಲಂಬಿಸಿರುವುದರಿಂದ ಮತದಾರ ಪ್ರಜೆಗಳಂತೂ ಈ ನಾಟಕವನ್ನು ಮೌನವಾಗಿ ನೋಡುತ್ತಲೇ ಇರಬೇಕು, ನೋಡಿ ಆನಂದಿಸುತ್ತಲೇ ಇರಬೇಕು!

ಮತದಾರರನ್ನು ಮೂರ್ಖರಾಗಿಸಲು ಹೊರಟಿರುವ ಈ ಸ್ವಘೋಷಿತ, ತಥಾಕಥಿತ ಜನ ನಾಯಕರಿಗೆ ಪಾಠ ಕಾದಿದೆ… (ಬಂಡಾಯ ಬಣದಲ್ಲಿರುವ ನೆಲಮಂಗಲ ಶಾಸಕ ನಾಗರಾಜ್ ಕಚೇರಿಗೆ, ಮನೆಗೆ ಮುತ್ತಿಗೆಯಾಗಿದೆ) ಬುದ್ಧಿವಂತ ಮತದಾರರಿಂದಲೂ ಇದನ್ನು ನಿರೀಕ್ಷಿಸೋಣ.
[ವೆಬ್ದುನಿಯಾಕ್ಕೆ ಬರೆದಿದ್ದು]

2 COMMENTS

  1. ಅವಿನಾಶ್,

    ಈಗೀನ ರಾಜಕೀಯ ಗಣಿತವನ್ನು , ಲಜ್ಜೆಗೇಡಿತನವನ್ನು ಮತ್ತು ಸಾಧ್ಯತೆಗಳನ್ನು ಸವಿವರವಾಗಿ ಮೂಡಿಬಂದೆವೆ ಲೇಖನಲ್ಲಿ.
    ಧನ್ಯವಾದಗಳು

  2. ಪಾತರಗಿತ್ತಿ ಶಿವು, ತುಂಬಾ ದಿನಗಳ ಬಳಿಕ ನೀವು ಸಕ್ರಿಯವಾಗುತ್ತಿದ್ದೀರಿ ಅಂತ ಕಾಣುತ್ತೆ, ನನ್ನಂತೆಯೇ! ಧನ್ಯವಾದಗಳು

LEAVE A REPLY

Please enter your comment!
Please enter your name here