ಇದು ಛೀ ಥೂ ರಾಜಕೀಯಕ್ಕೆ ಪಕ್ಕಾ ಉದಾಹರಣೆ.
ಇರುವ ಸರಕಾರದಲ್ಲೊಂದು ಬಂಡಾಯ ಸೃಷ್ಟಿಯಾಗುತ್ತದೆ. ದೇವೇಗೌಡರ ಮಗ ಕ್ಷಿಪ್ರಕ್ರಾಂತಿ ನಡೆಸಿ, ಅವರ ಅಪ್ಪನ ಅರಿವಿಗೂ ಬಾರದಂತೆ (ಎಷ್ಟು ಸತ್ಯವೋ ಗೊತ್ತಿಲ್ಲ) ಜೆಡಿಎಸ್ ಶಾಸಕರ ಬೆಂಬಲ ಪಡೆದು, ಕಾಂಗ್ರೆಸಿಗೆ ನಿಜವಾದ ಕೈಕೊಟ್ಟು ಸರಕಾರ ಉರುಳಿಸುತ್ತಾರೆ. ಸರಕಾರ ಧಢಾರನೆ ಮಗುಚಿಬಿದ್ದು ಹೊಸ ಸರಕಾರ ಹುಟ್ಟಿಕೊಳ್ಳುತ್ತದೆ. ಎರಡು ಪಕ್ಷಗಳ ಮಧ್ಯೆ ಒಪ್ಪಂದ ಆಗುತ್ತದೆ. ಇಪ್ಪತ್ತು ಇಪ್ಪತ್ತು ತಿಂಗಳ ಅಧಿಕಾರ ಹಂಚಿಕೊಳ್ಳೋಣ ಅಂತ ತೀರ್ಮಾನವಾಗುತ್ತದೆ. 2007ರ ಅಕ್ಟೋಬರ್ 3ಕ್ಕೆ ಅಧಿಕಾರ ಅದಲುಬದಲು ಅಂತ ನಿರ್ಧಾರವಾಗುತ್ತದೆ. ಕುಮಾರಸ್ವಾಮಿ ನನ್ನ ಮಗನೇ ಅಲ್ಲ, ಇದು ನನ್ನ ಜೀವನದ ಅತ್ಯಂತ ದುಃಖದ ದಿನ ಅಂತ ದೇವೇಗೌಡರು ಬೊಗಳೆ ಬಿಡುತ್ತಾರೆ. ನನಗೇನೂ ಗೊತ್ತಿಲ್ಲ, ಎಲ್ಲಾ ಮಗನದೇ ತೀರ್ಮಾನ ಅಂತ ಘಂಟಾಘೋಷವಾಗಿ ಸಾರಿಬಿಡುತ್ತಾರೆ. ಇದು ಹಳೆಯ ನಡೆದು ಹೋದ ಮತ್ತು ಜೆಡಿಎಸ್ ಮಂದಿ ಮರೆತುಬಿಡುತ್ತಿರುವ ಕಥೆ.
ಈಗಿನ ಕಥೆಗೆ ಬನ್ನಿ. ಅಧಿಕಾರ ಹಸ್ತಾಂತರ ಮಾಡಬೇಕಿದ್ರೆ ಅಪ್ಪನನ್ನು ಕೇಳಬೇಕು, ನಾನು ರಾಜೀನಾಮೆ ನೀಡಲು ಸಿದ್ಧ. ಆದರೆ ಅಪ್ಪ ಏನು ಹೇಳುತ್ತಾರೋ ನೋಡಬೇಕು. ಅಕ್ಟೋಬರ್ 3ಕ್ಕೆ ಅಧಿಕಾರ ಹಸ್ತಾಂತರ ಅಂತ ತೀರ್ಮಾನವಾಗಿದ್ರೂ, ಅಪ್ಪನನ್ನು ಕೇಳಬೇಕು. ಅದಕ್ಕೊಂದು ಸಭೆ ನಡೆಯಬೇಕು, ನಾನು ಆಮೇಲೆ ನಿರ್ಧಾರ ಪ್ರಕಟಿಸುತ್ತೇನೆ ಎಂದು ರಾಜ್ಯದ ಒಂದು ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿ ಕುಮಾರಸ್ವಾಮಿ ಬಡಬಡಾಯಿಸುತ್ತಾರೆ.
ಹಾಗಿದ್ದರೆ, ಸರಕಾರ ರಚನೆಯಾದಾಗ ಇಲ್ಲದ “ಅಪ್ಪ” ಈಗ ಬಂದದ್ದೆಲ್ಲಿಂದ? ಈಗಿನ ಸರಕಾರ ಕಟ್ಟಿದ್ದು ಕುಮಾರಸ್ವಾಮಿಯೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈಗ ಈ ಸರಕಾರದ ಅಳಿವು-ಉಳಿವು ನಿರ್ಧರಿಸಲು, ಕೊಳಚೆ ರಾಜಕೀಯಕ್ಕೆ ಅತ್ಯಂತ ಪ್ರಸಿದ್ಧಿಪಡೆದಿರುವ (ನೆನಪಿದೆಯೇ? ದಿ.ರಾಮಕೃಷ್ಣ ಹೆಗಡೆಯವರಿಗೆ ಚಪ್ಪಲಿಯಲ್ಲಿ ಹೊಡೆಸಿದ್ದು?, ಸಚ್ಚಾರಿತ್ರ್ಯದ ರಾಜಕಾರಣಿ ಎಂಬ ಹೆಗ್ಗಳಿಕೆ ಪಡೆದಿದ್ದ ಹೆಗಡೆಯನ್ನು ಪಕ್ಷದಿಂದ ಉಚ್ಚಾಟಿಸಿದ್ದು…) ದೇವೇಗೌಡರು ಯಾರು, ಅವರಿಗ್ಯಾವ ಅಧಿಕಾರ ಇದೆ ಎಂಬ ಪ್ರಶ್ನೆ ಇಲ್ಲಿ ಪ್ರಸ್ತುತವಾಗುತ್ತದೆ.
ಈ ಹಿಂದೆ ಕೂಡ ಒಲ್ಲದ ಗಂಡನ ಸಂಬಂಧದ ರೀತಿಯಲ್ಲೇ ಕಾಂಗ್ರೆಸ್ ಜತೆಗೆ ಸೇರಿ ಜೆಡಿಎಸ್ ಅಧಿಕಾರ ನಡೆಸುತ್ತಿದ್ದಾಗ, ಮಾಜಿ ಮುಖ್ಯಮಂತ್ರಿ ಧರ್ಮ ಸಿಂಗ್ ಅವರಿಗೆ ಒಂದು ಕ್ಷಣವಾದರೂ ಸರಿಯಾಗಿ ನಿದ್ದೆ ಮಾಡಲು ಬಿಟ್ಟಿದ್ದಾರೆಯೇ ಈ ದೇವೇಗೌಡರು? ಯಾವುದೇ ಅಭಿವೃದ್ಧಿ ಕಾರ್ಯ ನಡೆಯುವುದಿದ್ದರೆ ಅದಕ್ಕೆ ಕಾಲೆಳೆಯುವುದು ತಮ್ಮ ಆಜನ್ಮಸಿದ್ಧ ಹಕ್ಕು ಎಂದೇ ಭಾವಿಸಿದಂತಿದೆ ಈ ಮಹಾನ್ ಭಾರತದ ಮಹಾನ್ ಮಾಜಿ ಪ್ರಧಾನಿ.
ಬಿಜೆಪಿಗೆ ಅಧಿಕಾರ ನಡೆಸಲು ಈ ಅಪ್ಪ ಮಕ್ಕಳು ಖಂಡಿತವಾಗಿಯೂ ಬಿಡುವುದಿಲ್ಲ, ಕೈಕೊಡುವುದೇ ಅವರ ಪಕ್ಷದ ಸಿದ್ಧಾಂತ ಅಂತ ಕಾಂಗ್ರೆಸ್ ಮುಖಂಡರು ಮತ್ತು ಒಂದುಕಾಲದಲ್ಲಿ ದೇವೇಗೌಡರಿಗೆ ಅತ್ಯಂತ ಆಪ್ತರಾಗಿದ್ದ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗಳು ಇಂದು ನಿಜವಾಗುತ್ತಿದೆ.
ಇನ್ನು ರಾಜ್ಯ ಬಿಜೆಪಿ ಬಗ್ಗೆ ಒಂದು ಮಾತು. ಅವರೊಳಗಿನ ಆಂತರಿಕ ಜಗಳ ಎಂದಿಗೂ ಮುಗಿಯುವುದಿಲ್ಲ. 1994ರ ಚುನಾವಣೆ ಸಂದರ್ಭ ಫಲಿತಾಂಶ ಬರುವ ಮುನ್ನವೇ ಯಾರು ಮುಖ್ಯಮಂತ್ರಿ, ಯಾರು ಆ ಮಂತ್ರಿ, ಈ ಮಂತ್ರಿ ಅಂತ ತೀರ್ಮಾನಿಸಿಬಿಟ್ಟಿದ್ದ ಬಿಜೆಪಿ ಮಂದಿ, ಅಧಿಕಾರಕ್ಕಾಗಿ ಹಪಹಪಿಸುವುದಿಲ್ಲ ಅಂತ ಅಂದವರು ಮತ್ತು ಅನ್ನುತ್ತಿರುವವರು ಯಾರು? ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವಣ ವೈಮನಸ್ಯ ಬೂದಿ ಮುಚ್ಚಿದ ಕೆಂಡವೇ. ಅದೇ ಕಾರಣಕ್ಕೆ ಈಗಲೂ ಗೊಂದಲ ಸೃಷ್ಟಿಯಾಗಿರುವುದು. ಜೆಡಿಎಸ್ ಅಧಿಕಾರ ಹಸ್ತಾಂತರಿಸಿದರೂ ಕೂಡ, ಬಿಜೆಪಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಖಂಡಿತಾ ಪೂರ್ಣಾವಧಿ ಪೂರೈಸುವುದಿಲ್ಲ. ಜೆಡಿಎಸ್ ಕೈಕೊಡುವುದು ಖಂಡಿತ ಎಂಬ ಒಂದು ಪಕ್ಕಾ option ಬದಿಗಿಟ್ಟರೆ, ಬಿಜೆಪಿಯ ಒಂದು ಬಣವೇ ಯಡಿಯೂರಪ್ಪ ವಿರುದ್ಧ ಎದ್ದು ನಿಲ್ಲುತ್ತದೆ ಎಂಬುದು ಮತ್ತೊಂದು ವಿವಾದಾತೀತ ಅಂಶ. ಅಂತೂ ಇಂತೂ ಸರಕಾರ ಅಸ್ಥಿರ. ರಾಜ್ಯದ ಪ್ರಜೆಗಳ ಸ್ಥಿತಿ ಅಧೋಗತಿ. ದೈನಂದಿನ ಬದುಕಿನ ಜಂಜಡಗಳಿಂದ ಸೋತಿದ್ದ ಮನಕ್ಕೆ ಒಂದಿಷ್ಟು ಮುದನೀಡುವ ಇಂಥ ನಾಟಕವನ್ನಾದರೂ ನೋಡೋಣ, ಮನರಂಜನೆಯಾದರೂ ದೊರೆಯುತ್ತದೆ ಎಂದು ಸುಮ್ಮನೆ ಕೂತರೂ, ರಾಜ್ಯದ ಜನತೆ ಕಟ್ಟುತ್ತಿರುವ ತೆರಿಗೆ ಹಣವನ್ನೇ ಈ ನಾಟಕಕ್ಕಾಗಿ ಪೋಲು ಮಾಡಲಾಗುತ್ತದೆಯಲ್ಲಾ ಎಂದು ಒಳಮನಸ್ಸು ಎಚ್ಚರಿಸುತ್ತದೆ.
ಬೇಡಪ್ಪಾ ಇಂಥ ಒಲ್ಲದ ಮದುವೆ! ಒಮ್ಮೆ ನಮ್ಮ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿ. ರಾಜ್ಯದ ಪ್ರಜ್ಞಾವಂತ ಜನರೇ… ಮುಂದಿನ ಚುನಾವಣೆಯಲ್ಲಿ ದಯವಿಟ್ಟು ಒಂದೇ ಪಕ್ಷಕ್ಕೆ ಅಧಿಕಾರ ನೀಡಿ, ರಾಜ್ಯವನ್ನೂ ಅಭಿವೃದ್ಧಿಯತ್ತ ನಡೆಸಿ, ನೀವೂ ನೆಮ್ಮದಿಯಿಂದಿರಿ.
ಕೊನೆಗೊಂದು ಮಾತು. ರಾಜ್ಯದ ಅಭಿವೃದ್ಧಿಗಾಗಿ ದೇವೇಗೌಡರು ಏನು ಕೊಡುಗೆ ನೀಡಿದ್ದಾರೆ ಎಂದು ಒಮ್ಮೆ ಯೋಚಿಸಿಕೊಳ್ಳಿ… ಹಾಗೆಯೇ ಈ ದೇವೇಗೌಡರು ರಾಜಕೀಯಕ್ಕೆ ನಿವೃತ್ತಿ ಘೋಷಿಸಿದಲ್ಲಿ ಕರ್ನಾಟಕ ರಾಜ್ಯವು ಎಲ್ಲ ರೂಪದಲ್ಲೂ ಯಾವ ರೀತಿ ಬೆಳವಣಿಗೆ ಸಾಧಿಸಬಹುದು ಎಂಬುದನ್ನೂ ಯೋಚಿಸಿಕೊಳ್ಳಿ!