ಕನ್ನಡ ಅಸ್ಮಿತೆ: ಐಫೋನ್‌ಗೂ ಬಂತು ಕನ್ನಡದ ಕೀಲಿಮಣೆ

2
602

Kannada Keyboard in iPhone1ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11 ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡ ಕೀಲಿಮಣೆ ಸದ್ದು ಮಾಡುತ್ತಿದೆ.

ಐಷಾರಾಮಿಗಳ ಫೋನ್ ಎಂದೋ, ಪ್ರತಿಷ್ಠೆಯ ಸಂಕೇತವೆಂದೋ ಪರಿಗಣಿತವಾಗಿದ್ದ ಆ್ಯಪಲ್ ಫೋನ್‌ಗಳು ಕನ್ನಡಿಗರ ಮನವನ್ನೂ ಗೆದ್ದಿದ್ದವು. ಇದುವರೆಗೆ ಸಂಗಮ್ ಅಥವಾ ಗೂಗಲ್ ಒದಗಿಸಿದ ಜಿ-ಬೋರ್ಡ್ ಎಂಬ ಕೀಬೋರ್ಡ್ ಅಳವಡಿಸಿ ಕನ್ನಡ ಟೈಪ್ ಮಾಡುತ್ತಿದ್ದವರೆಲ್ಲರೂ ಐಒಎಸ್‌ನ ಹೊಸ ಆವೃತ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತ್ಯೇಕ ಆ್ಯಪ್ ಅಗತ್ಯವೇ ಇಲ್ಲದೆ ಟೈಪ್ ಮಾಡಬಹುದಾಗಿದೆ. ಕೀಬೋರ್ಡ್ ಎನೇಬಲ್ ಮಾಡಿಕೊಂಡರಾಯಿತು. ಇಲ್ಲಿರುವ ಕನ್ನಡ ಕೀಲಿಮಣೆಯ ವಿನ್ಯಾಸವು ಇನ್‌ಸ್ಕ್ರಿಪ್ಟ್ ಮಾದರಿಯದ್ದು. ಹೀಗಾಗಿ ಕಗಪ ವಿಧಾನ ಟೈಪ್ ಮಾಡುವವರಿಗೆ ಒಂದಿಷ್ಟು ನಿರಾಸೆಯೂ ಆಗಿದೆ.

ಹೋರಾಟಕ್ಕೆ ಜಯ: ಐಫೋನ್‌ನಲ್ಲಿ ಕನ್ನಡದ ಕೀಲಿಮಣೆಯಿಲ್ಲ ಎಂಬ ಕನ್ನಡಿಗರ ಕೊರಗು ಇಂದು ನಿನ್ನೆಯದಲ್ಲ. 2012ರಿಂದ ವಿಶೇಷವಾಗಿ ಕನ್ನಡ ಗ್ರಾಹಕ ಕೂಟ ಸೇರಿದಂತೆ ಹಲವಾರು ಕನ್ನಡ ಹೋರಾಟಗಾರರು ಫೇಸ್‌ಬುಕ್, ಟ್ವಿಟರ್ ಮೊದಲಾದ ಸಾಮಾಜಿಕ ಜಾಲತಾಣಗಳು ಮೂಲಕ ಹೋರಾಟ ಮಾಡುತ್ತಲೇ ಬಂದಿದ್ದರು ಮತ್ತು ಆ್ಯಪಲ್ ಕಂಪನಿಗೆ ಇಮೇಲ್‌ಗಳನ್ನೂ ಬರೆದಿದ್ದರು. ಇದೀಗ ಕನ್ನಡಿಗರ ಹೋರಾಟಕ್ಕೆ ಜಯ ದೊರೆತಂತಾಗಿದೆ.

ಐಫೋನ್‌ಗಳಲ್ಲಿ ಹಿಂದಿ ಕೀಬೋರ್ಡ್ ಈಗಾಗಲೇ ಇತ್ತು. ತಮಿಳು ಕೀಬೋರ್ಡನ್ನು ಐಒಎಸ್ 7ರಲ್ಲಿ 2013ರಲ್ಲೇ ಸೇರಿಸಲಾಗಿತ್ತು. ಐಒಎಸ್ 9ರಲ್ಲಿ ಹಿಂಗ್ಲಿಷ್ (ಇಂಗ್ಲಿಷ್ ಅಕ್ಷರಗಳಲ್ಲಿ ಟೈಪ್ ಮಾಡಿದ್ದನ್ನು ಹಿಂದಿಗೆ ಪರಿವರ್ತಿಸುವ ವಿಧಾನ) ಜತೆಗೆ ತೆಲುಗು, ಪಂಜಾಬಿ, ಗುಜರಾತಿ, ಮರಾಠಿ, ಬಂಗಾಳಿ ಹಾಗೂ ಉರ್ದು ಕೀಬೋರ್ಡ್‌ಗಳಿದ್ದವು. ಇದೀಗ ಐಒಎಸ್ 11ರಲ್ಲಿ ಕನ್ನಡ ಜತೆಗೆ ಮಲಯಾಳಂ ಕೀಬೋರ್ಡ್ ಕೂಡ ಸ್ಥಾನ ಪಡೆದಿದೆ.

ಐಒಎಸ್ 11 ಆಪರೇಟಿಂಗ್ ಸಿಸ್ಟಂ ಜಾಗತಿಕವಾಗಿ ಸೆ.19ರಂದು ಬಿಡುಗಡೆಯಾಗಿದ್ದರೆ, ಬುಧವಾರದಿಂದ ಭಾರತೀಯ ಸಾಧನಗಳಿಗೂ ಲಭ್ಯವಾಗತೊಡಗಿದೆ. ಐಫೋನ್ 5 ಎಸ್ ನಂತರದ ಆವೃತ್ತಿಗಳಿಗೆ ಮತ್ತು ಹೊಸ ಐಪ್ಯಾಡ್‌ಗಳಿಗೂ ತಾಜಾ ಸಾಫ್ಟ್‌ವೇರ್ ದೊರೆಯುತ್ತಿದೆ. ಕಾರ್ಯಾಚರಣಾ ವ್ಯವಸ್ಥೆಯ ತಂತ್ರಾಂಶದ ಗಾತ್ರವು 1.89 ಜಿಬಿ ಇದ್ದು, ವೈಫೈ ಸಂಪರ್ಕದ ಮೂಲಕ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ. ಗಾತ್ರ ದೊಡ್ಡದಿರುವುದರಿಂದ 16 ಜಿಬಿ ಅಥವಾ 32 ಜಿಬಿ ಸಾಮರ್ಥ್ಯವಿರುವ ಫೋನ್/ಐಪ್ಯಾಡ್ ಹೊಂದಿರುವವರು ತಮ್ಮ ಸಾಧನದಲ್ಲಿನ ಫೋಟೋ/ವೀಡಿಯೋಗಳನ್ನು ಕಂಪ್ಯೂಟರಿಗೆ ವರ್ಗಾಯಿಸಿ ಸಾಕಷ್ಟು ಸ್ಥಳಾವಕಾಶ ಮಾಡಿಕೊಂಡ ಬಳಿಕವೇ ಅಪ್‌ಡೇಟ್ ಮಾಡಿಕೊಳ್ಳುವುದೊಳಿತು.

ಯಾವುದಕ್ಕೆಲ್ಲ ಲಭ್ಯ?
ಇತ್ತೀಚೆಗೆ ಬಿಡುಗಡೆಯಾದ ಐಫೋನ್ 8 (ಅದರಲ್ಲೇ ಇರುತ್ತದೆ)
ಐಫೋನ್ 7
ಐಫೋನ್ 6, 6S
ಐಫೋನ್ SE
ಐಫೋನ್ 5S
ಐಪ್ಯಾಡ್ ಏರ್
ಐಪ್ಯಾಡ್ ಪ್ರೋ
ಐಪ್ಯಾಡ್ ಮಿನಿ 4, 3 ಮತ್ತು 2 ಸರಣಿ

ಯಾವುದಕ್ಕೆ ಇಲ್ಲ?
ಹಿಂದಿನ ಐಫೋನ್ 4ಎಸ್, ಐಫೋನ್ 5 ಹಾಗೂ 5ಸಿ ಹಾಗೂ ಐಪ್ಯಾಡ್ 4 ಸರಣಿಯ ಸಾಧನಗಳ ಬಳಕೆದಾರರಿಗೆ ಹೊಸ ಐಒಎಸ್ ಲಭ್ಯವಿಲ್ಲ, ಪ್ರಮುಖ ಕಾರಣವೆಂದರೆ ಅದರಲ್ಲಿರುವ ಹಾರ್ಡ್‌ವೇರ್ (ಯಂತ್ರಾಂಶಗಳು) ಹೊಸ ತಂತ್ರಾಂಶವನ್ನು ಬೆಂಬಲಿಸುವುದಿಲ್ಲ.

ಅವಿನಾಶ್ ಬಿ. ವಿಕದಲ್ಲಿ ಪ್ರಕಟ: 21 ಸೆಪ್ಟೆಂಬರ್ 2017

2 COMMENTS

LEAVE A REPLY

Please enter your comment!
Please enter your name here