ಫೋನ್ ಬದಲಿಸಿದಾಗ ಹೊಸ ಫೋನ್‌ಗೆ WhatsApp ವರ್ಗಾಯಿಸುವುದು ಹೇಗೆ?

0
603

Avinash-Logo_thumb.pngಸ್ಮಾರ್ಟ್ ಫೋನ್ ಇದ್ದವರಲ್ಲಿ ಬಹುತೇಕರು ವಾಟ್ಸಾಪ್ ಬಳಸಿಯೇ ಇರುತ್ತಾರೆ. ಆದರೆ, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಫೋನ್‌ಗಳು ಕೂಡ ಆಧುನೀಕರಣವಾಗುತ್ತಿವೆ ಮತ್ತು ಅಗ್ಗದ ದರದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಆಧುನಿಕತೆಗೆ ಮರುಳಾದವರು, ಅದರ ಆಕರ್ಷಣೆಗೆ ಒಳಗಾದವರು, ಮೊಬೈಲ್ ಫೋನ್ ಬಗ್ಗೆ ಕ್ರೇಝ್ ಹೊಂದಿರುವವರು, ಹಣವಂತರು ಪದೇ ಪದೇ ಫೋನ್ ಬದಲಾಯಿಸುವುದು ಸಾಮಾನ್ಯ. ಇನ್ನು ಜನಸಾಮಾನ್ಯರಾದರೆ, ಫೋನ್ ಕೆಟ್ಟು ಹೋದಾಗಲೋ, ಸಾಕಷ್ಟು ವರ್ಷಗಳ ಕಾಲ ಬಳಸಿದ ಬಳಿಕವೋ ಅಥವಾ ಹಳೆಯ ತಂತ್ರಜ್ಞಾನ ಸಪೋರ್ಟ್ ಮಾಡುತ್ತಿಲ್ಲವೆಂಬ ಕಾರಣಕ್ಕೋ ಮೊಬೈಲ್ ಬದಲಾಯಿಸುತ್ತಾರೆ. ಇಂಥ ಸಂದರ್ಭದಲ್ಲಿ ಅತ್ಯಮೂಲ್ಯ ವಾಟ್ಸಾಪ್ ಸಂದೇಶಗಳೂ ಹೋಗುತ್ತವಲ್ಲ, ಅವುಗಳನ್ನು ಉಳಿಸಿಕೊಳ್ಳುವುದು ಹೇಗೆ ಅಂತ ಹಲವರು ನನ್ನಲ್ಲಿ ಕೇಳಿದ್ದಾರೆ. ಹೀಗಾಗಿ, ನಮ್ಮ ವಾಟ್ಸಾಪ್ ಖಾತೆಯನ್ನು ಹೊಸ ಫೋನ್‌ಗೆ ವರ್ಗಾಯಿಸುವುದು, ಸಂದೇಶಗಳನ್ನು ಬೇರೆ ಫೋನ್‌ನಲ್ಲಿ ನೋಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ. ಇವೆಲ್ಲವೂ ತೀರಾ ಸರಳ ಪ್ರಕ್ರಿಯೆಯಾಗಿದ್ದು, ಐದು ನಿಮಿಷವೂ ಬೇಕಾಗುವುದಿಲ್ಲ.

ಹೇಗೆ?: ಹೊಸ ಫೋನ್ ಖರೀದಿಸಿದಾಗ, ಈಗಿರುವ ವಾಟ್ಸಾಪ್ ಖಾತೆಯನ್ನೇ (ಅಂದರೆ ನಿಮ್ಮ ಫೋನ್ ನಂಬರ್) ಅದರಲ್ಲಿ ಬಳಸುತ್ತೀರೆಂದಾದರೆ ಮತ್ತು ಹಳೆಯ ಯಾವುದೇ ಸಂದೇಶಗಳು ಬೇಡವೆಂದಾದರೆ, ನೇರವಾಗಿ ವಾಟ್ಸಾಪ್ ಆ್ಯಪ್ ಇನ್‌ಸ್ಟಾಲ್ ಮಾಡಿ, ಎಂದಿನಂತೆ ಫೋನ್ ನಂಬರ್ ನಮೂದಿಸಿ, ಎಸ್ಸೆಮ್ಮೆಸ್ ರೂಪದಲ್ಲಿ ಬರುವ ಒಟಿಪಿ ನಮೂದಿಸಿ ಲಾಗಿನ್ ಆದರಾಯಿತು. ಹಿಂದಿನ ಫೋನ್ ನಂಬರನ್ನೇ ಬಳಸಿದರೆ ನೀವಿರುವ ವಾಟ್ಸಾಪ್ ಗ್ರೂಪುಗಳ ಸದಸ್ಯತ್ವವೂ ಹಾಗೆಯೇ ಉಳಿಯುತ್ತದೆ.

ಹಳೆಯ ಸಂದೇಶ ಬೇಕಿದ್ದರೆ: ಇನ್ನು, ಮೊಬೈಲ್ ಬದಲಾಯಿಸಿದಾಗ ನಮ್ಮ ಹಿಂದಿನ ಸಂದೇಶಗಳೆಲ್ಲ ಸಿಗುವಂತಾಗಲು 3 ವಿಧಾನಗಳಿವೆ. ವಾಸ್ತವವಾಗಿ ವಾಟ್ಸಾಪ್ ಪ್ರತಿ ದಿನವೂ ತಾನಾಗಿ ನಮ್ಮ ಸಂದೇಶಗಳ ಬ್ಯಾಕಪ್ ಇರಿಸಿಕೊಳ್ಳುತ್ತದೆ. ಅದು ನಮ್ಮ ಫೋನ್‌ನಲ್ಲಿರುವ ವಾಟ್ಸಾಪ್ ಫೋಲ್ಡರ್‌ನಲ್ಲಿ ಸೇವ್ ಆಗುತ್ತಿರುತ್ತದೆ. ಜತೆಗೆ, ನಾವು ಜಿಮೇಲ್ ಖಾತೆಯ ಮೂಲಕವೂ ಗೂಗಲ್ ಡ್ರೈವ್‌ನಲ್ಲಿ ಸಂದೇಶಗಳ ಬ್ಯಾಕಪ್ ಇರಿಸಿಕೊಳ್ಳುವ ಆಯ್ಕೆಯಿದೆ. ಇವುಗಳನ್ನು ಬಳಸಿಕೊಂಡು ಹೊಸ ಮೊಬೈಲ್‌ನಲ್ಲಿ ನಾವು ವಾಟ್ಸಪ್‌ನ ಎಲ್ಲ ಸಂದೇಶಗಳನ್ನು ಮರಳಿ ಪಡೆಯಬಹುದು.

ವಾಟ್ಸಾಪ್ ತಾನಾಗಿಯೇ ಬ್ಯಾಕಪ್ ಕ್ರಿಯೇಟ್ ಮಾಡಿಟ್ಟುಕೊಳ್ಳುತ್ತದೆಯಲ್ಲವೇ? ಅದಕ್ಕೆ ಸಂಬಂಧಿಸಿದ ಫೈಲ್ ನಮ್ಮ ಫೋನ್‌ನಲ್ಲಿ ಸೇವ್ ಆಗಿರುತ್ತದೆ. ಅದನ್ನು ನಾವು ಹುಡುಕಬೇಕಷ್ಟೆ. ಹುಡುಕಿ, ಅದನ್ನು ಮೆಮೊರಿ ಕಾರ್ಡಿಗೆ ವರ್ಗಾಯಿಸಿ, ಅದೇ ಮೆಮೊರಿ ಕಾರ್ಡನ್ನು ಹೊಸ ಮೊಬೈಲ್‌ನಲ್ಲಿ ಅಳವಡಿಸಿ ಹಿಂದಿನ ಸಂದೇಶಗಳನ್ನು ಪಡೆಯುವುದು ಒಂದು ವಿಧಾನ.

ಅದಕ್ಕಾಗಿ ಹೀಗೆ ಮಾಡಿ: ಫೈಲ್ ಎಕ್ಸ್‌ಪ್ಲೋರ್ ಮಾಡುವ ಆ್ಯಪ್‌ಗಳು ಹೆಚ್ಚಿನ ಸ್ಮಾರ್ಟ್ ಫೋನ್‌ಗಳಲ್ಲಿ ಇನ್-ಬಿಲ್ಟ್ ಆಗಿರುತ್ತವೆ. ಇಲ್ಲವೆಂದಾದರೆ ES Explorer ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಅದನ್ನು ತೆರೆದು, ಡಿವೈಸ್ ಸ್ಟೋರೇಜ್ (ಫೋನ್ ಮೆಮೊರಿ, ಇಂಟರ್ನಲ್ ಮೆಮೊರಿ) ಎಂಬಲ್ಲಿಗೆ ಹೋಗಿ, WhatsApp ಫೋಲ್ಡರ್ ಹುಡುಕಿ, ಅದರೊಳಗೆ ‘Databases’ ಎಂಬ ಫೋಲ್ಡರಿಗೆ ಹೋಗಿ. ಅದರಲ್ಲಿರುವ msgstore.db.crypt12 ಎಂಬ ಫೈಲನ್ನು ಒತ್ತಿ ಹಿಡಿದುಕೊಳ್ಳಿ. ಬಲ ಮೇಲ್ಭಾಗದಲ್ಲಿ MORE ಅಂತ ಇರುವಲ್ಲಿ (ಅಥವಾ Options) ಒತ್ತಿದಾಗ, Move ಎಂಬ ಆಯ್ಕೆ ದೊರೆಯುತ್ತದೆ. ಅದನ್ನು ಒತ್ತಿದಾಗ, ಮುಂದಿನ ಆಯ್ಕೆಗಳಲ್ಲಿ SD Card ಆಯ್ಕೆ ಮಾಡಿಕೊಳ್ಳಿ, Done ಒತ್ತಿಬಿಡಿ. ಈ ಫೈಲ್ ಮೆಮೊರಿ ಕಾರ್ಡ್‌ಗೆ ಮೂವ್ ಆಗುತ್ತದೆ.

ನಂತರ, ಇಂಟರ್ನೆಟ್ ಸಂಪರ್ಕವಿರುವ ಹೊಸ ಮೊಬೈಲ್ ಫೋನಲ್ಲಿ ವಾಟ್ಸಾಪ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಿ. ಲಾಗಿನ್ ಆಗಬೇಡಿ. ಬ್ಯಾಕಪ್ ಫೈಲ್ ಇರುವ ಎಸ್‌ಡಿ ಕಾರ್ಡನ್ನು (ಮೆಮೊರಿ ಕಾರ್ಡ್) ಹೊಸ ಮೊಬೈಲ್‌ಗೆ ಅಳವಡಿಸಿದ ನಂತರವೇ, ವಾಟ್ಸಾಪ್‌ಗೆ ಅದೇ ಫೋನ್ ನಂಬರ್ ಮೂಲಕ ಲಾಗಿನ್ ಆಗಿ. ಒಟಿಪಿ ದಾಖಲಿಸಿದ ಬಳಿಕ, ಅದುವೇ ತಾನಾಗಿ ಸ್ಕ್ಯಾನ್ ಮಾಡಲಾರಂಭಿಸಿ, ‘ಬ್ಯಾಕಪ್ ಫೈಲ್ ಲಭ್ಯವಿದೆ, ರೀಸ್ಟೋರ್ ಮಾಡಬೇಕೇ’ ಅಂತ ನಿಮ್ಮನ್ನು ಕೇಳುತ್ತದೆ. Yes ಒತ್ತಿಬಿಟ್ಟು ಸ್ವಲ್ಪ ಸಮಯ ಕಾದರೆ, ನಿಮ್ಮ ಹಳೆಯ ಎಲ್ಲ ವಾಟ್ಸಾಪ್ ಸಂದೇಶಗಳು ಹೊಸ ಫೋನ್‌ನಲ್ಲಿ ಗೋಚರಿಸುತ್ತವೆ.

ಎರಡನೇ ವಿಧಾನವಿದೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಫೈಲ್ ಎಕ್ಸ್‌ಪ್ಲೋರರ್ ಮೂಲಕ, ಇಂಟರ್ನಲ್ ಮೆಮೊರಿ (ಡಿವೈಸ್ ಸ್ಟೋರೇಜ್, ಫೋನ್ ಸ್ಟೋರೇಜ್) ಫೋಲ್ಡರಿಗೆ ಹೋಗಿ, ಅದರಲ್ಲಿರುವ ಇಡೀ ವಾಟ್ಸಾಪ್ ಫೋಲ್ಡರನ್ನೇ ಮೆಮೊರಿ ಕಾರ್ಡ್‌ಗೆ ವರ್ಗಾಯಿಸಿಕೊಳ್ಳಬೇಕು. ಇದರಲ್ಲಿ ಸಂದೇಶಗಳಲ್ಲದೆ ಆಡಿಯೋ, ವೀಡಿಯೋ, ಫೋಟೋಗಳೂ ಇರುವುದರಿಂದ ಫೈಲುಗಳ ವರ್ಗಾವಣೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಬಹುದು. ಮೆಮೊರಿ ಕಾರ್ಡ್ ಅಲ್ಲದಿದ್ದರೆ ಕಂಪ್ಯೂಟರ್ ಮೂಲಕವೂ ಫೈಲ್ ವರ್ಗಾಯಿಸಬಹುದು. ಹೇಗೆಂದರೆ, ಹಳೆಯ ಫೋನನ್ನು ಕಂಪ್ಯೂಟರ್‌ಗೆ ಲಗತ್ತಿಸಿ, ಕಂಪ್ಯೂಟರಿನ ಯಾವುದಾದರೂ ಫೋಲ್ಡರಿಗೆ ವಾಟ್ಸಾಪ್ ಫೋಲ್ಡರನ್ನು ವರ್ಗಾಯಿಸಬೇಕು. ಬಳಿಕ ಹೊಸ ಫೋನನ್ನು ಈ ಕಂಪ್ಯೂಟರಿಗೆ ಲಗತ್ತಿಸಿ, ಅದರಲ್ಲಿರುವ ವಾಟ್ಸಾಪ್ ಫೋಲ್ಡರನ್ನು ಹೊಸ ಫೋನ್‌ನ ಇಂಟರ್ನಲ್ ಮೆಮೊರಿಗೆ ವರ್ಗಾಯಿಸಬೇಕು. ಬಳಿಕ ವಾಟ್ಸಾಪ್ ಆ್ಯಪ್‌ಗೆ ಲಾಗಿನ್ ಆಗುವಾಗ, ಈ ಮೊದಲು ತಿಳಿಸಿದಂತೆ, ‘ರೀಸ್ಟೋರ್ ಮಾಡಬೇಕೇ’ ಎಂದು ಕೇಳುವಾಗ ಒಪ್ಪಿಗೆ ಕೊಟ್ಟು ಮುಂದುವರಿಯಬೇಕು. ಸ್ವಲ್ಪ ಸಮಯದಲ್ಲಿ ವಾಟ್ಸಾಪ್ ಹಿಂದಿನ ಸಂದೇಶಗಳ ಸಹಿತ ಎಲ್ಲ ಫೈಲುಗಳು ನಿಮ್ಮ ಹೊಸ ಮೊಬೈಲ್ ಸಾಧನದಲ್ಲಿ ಇರುತ್ತವೆ.

ಮೂರನೇ ವಿಧಾನಕ್ಕೆ ಮೆಮೊರಿ ಕಾರ್ಡ್ ಅಗತ್ಯವಿರುವುದಿಲ್ಲ.ಇದು ಕ್ಲೌಡ್ ಸ್ಟೋರೇಜ್ ಮೂಲಕ ವರ್ಗಾವಣೆಯಾಗುವ ವಿಧಾನ. ಹಳೆಯ ಫೋನ್‌ನಲ್ಲಿ ವಾಟ್ಸಾಪ್ ಸೆಟ್ಟಿಂಗ್ಸ್‌ನಲ್ಲಿ (Settings > Chats > Chat Backup > Backup) ಗೂಗಲ್ ಡ್ರೈವ್ ಸೆಟ್ಟಿಂಗ್ಸ್ ಇರುತ್ತದೆ. ಅದರಲ್ಲಿ ಜಿಮೇಲ್ ಖಾತೆಗೆ ಲಾಗಿನ್ ಆಗಿ, ಬ್ಯಾಕಪ್ ಮಾಡುವ ಮೂಲಕ ಗೂಗಲ್ ಡ್ರೈವ್‌ಗೆ ಬ್ಯಾಕಪ್ ಇರಿಸಿಕೊಂಡರೆ ಸಾಕು. ಹೊಸ ಫೋನ್‌ನಲ್ಲಿಯೂ ಇದೇ ಜಿಮೇಲ್ ಖಾತೆಯ ಮೂಲಕ ಲಾಗಿನ್ ಆಗಬೇಕು ಹಾಗೂ ಅದೇ ಫೋನ್ ನಂಬರ್ ಬಳಸಿ ವಾಟ್ಸಾಪ್‌ಗೆ ಸೈನ್ ಇನ್ ಆಗಬೇಕು. ಲಾಗಿನ್ ಆಗುತ್ತಿರುವಾಗ ‘ರೀಸ್ಟೋರ್’ ಮಾಡಿಕೊಂಡರಾಯಿತು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. (ವಿಜಯ ಕರ್ನಾಟಕ ಅಂಕಣ 24 ಜುಲೈ 2017)

LEAVE A REPLY

Please enter your comment!
Please enter your name here