ಆನ್‌ಲೈನ್ ಶಾಪಿಂಗ್: ಎಚ್ಚರಿಕೆ ವಹಿಸಿದರೆ ಸಮಯ, ಹಣ ಉಳಿತಾಯ

0
276

Online shopping safetyಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಇಂಡಿಯಾಕ್ಕೆ ಉತ್ತೇಜನ ದೊರೆತ ಫಲವಾಗಿ ಇಂದು ಆನ್‌ಲೈನ್ ಮಾರುಕಟ್ಟೆ ಅಗಾಧವಾಗಿ ಬೆಳೆದಿದೆ. ಹಲವಾರು ಮಂದಿ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಒಂದಾದರೊಂದು ಬ್ಯಾಂಕಿಂಗ್ ಆ್ಯಪ್, ಆನ್‌ಲೈನ್ ಖರೀದಿಗೆ ಸಹಕರಿಸುವ ಆ್ಯಪ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಮತ್ತು ಕುಳಿತಲ್ಲೇ ಹಣ ಪಾವತಿಸಲು ಸಾಕಷ್ಟು ಹಣಕಾಸು ಸಂಬಂಧಿತ ಆ್ಯಪ್‌ಗಳೂ ನೆರವಾಗುತ್ತಿವೆ. ಈ ಕಾರಣದಿಂದಾಗಿ ಆನ್‌ಲೈನ್ ಮಾರುಕಟ್ಟೆ ಜಾಲ ವಿಸ್ತರಣೆಯಾಗಿದೆ. ಹಿಂದೆಲ್ಲ ಭರ್ಜರಿ ಆಫರ್‌ಗಳು ಅಂತರ್ಜಾಲ ಮಾರಾಟ ತಾಣಗಳಲ್ಲೇ ದೊರೆಯುತ್ತಿದ್ದವು. ಈಗಲೂ ಒಳ್ಳೆಯ ಆಫರ್‌ಗಳು ಇಲ್ಲವೆಂದೇನಿಲ್ಲ. ವರ್ಷದಲ್ಲಿ ಹಬ್ಬ-ಹರಿದಿನಗಳಲ್ಲಿ ಮಾತ್ರವಲ್ಲದೆ, ವಿಭಿನ್ನ ಆನ್‌ಲೈನ್ ಖರೀದಿ ತಾಣಗಳು ವರ್ಷಕ್ಕೊಮ್ಮೆ ವಿಶೇಷ ಮಾರಾಟವನ್ನೂ ಏರ್ಪಡಿಸಿರುತ್ತವೆ. ಆ ಸಮಯದಲ್ಲಿ ರಿಯಾಯಿತಿ, ಹಣಕಾಸು ಕಂತಿನ ನೆರವು, ಉಚಿತ ಕೊಡುಗೆಗಳು ಮುಂತಾಗಿ ಒಳ್ಳೆಯ ಆಫರ್‌ಗಳು ಇರುತ್ತವೆ.

ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಸಾಕಷ್ಟು ವರದಿಯಾಗಿರುವುದರಿಂದಾಗಿ ಹೊಸದಾಗಿ ಶಾಪಿಂಗ್ ಮಾಡಲಿಚ್ಛಿಸುವವರು ಅಂತರ್ಜಾಲದಲ್ಲಿ ಹಣಕಾಸು ವಹಿವಾಟು ನಡೆಸಲು ಹಿಂಜರಿಕೆ ತೋರುತ್ತಿದ್ದಾರೆ ಎಂಬುದು ದಿಟ. ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿಸಿದರೆ, ಅದು ಯಶಸ್ವಿಯಾದರೆ ಮತ್ತಷ್ಟು ಖರೀದಿಗೆ ಉತ್ತೇಜನ ದೊರೆಯುತ್ತದೆ, ವಿಫಲವೇನಾದರೂ ಆದರೆ, ಮತ್ತೆಂದೂ ಅವರು ಆನ್‌ಲೈನ್ ವ್ಯವಹಾರದತ್ತ ತಲೆ ಹಾಕುವುದಿಲ್ಲ. ಇತ್ತೀಚೆಗೆ ಮೋಸದ ಪ್ರಕರಣಗಳು ಕಡಿಮೆ ಆಗಿವೆಯಾದರೂ, ಸಂಪೂರ್ಣವಾಗಿ ನಿಂತಿಲ್ಲ. ಆದರೆ, ನಮ್ಮ ಎಚ್ಚರದಲ್ಲಿ ನಾವು ಇದ್ದರೆ ಏನೂ ತೊಂದರೆಯಾಗದು. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಖರೀದಿ ಮಾಡುವುದು ಹೇಗೆ ಎಂಬ ಕುರಿತು ತಿಳಿಯದವರಿಗಾಗಿ ಇಲ್ಲಿ ಕೆಲವೊಂದಿಷ್ಟು ಸಲಹೆಗಳಿವೆ.

ಮೂಲಭೂತ ಅಗತ್ಯ
ಆನ್‌ಲೈನ್‌ನಲ್ಲಿ ಏನನ್ನಾದರೂ ಖರೀದಿ ಮಾಡಬೇಕಿದ್ದರೆ, ಆಯಾ ಇ-ಕಾಮರ್ಸ್ ತಾಣದಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯ. ಇದಕ್ಕೆ ಇಮೇಲ್ ಖಾತೆ ಹಾಗೂ ಫೋನ್ ನಂಬರ್ ಬೇಕಾಗುತ್ತದೆ. ಜತೆಗೆ, ಕ್ರೆಡಿಟ್ ಕಾರ್ಡ್, ಡೆಬಿಟ್ (ಎಟಿಎಂ) ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯೂ ಇರಬೇಕು. ಬ್ಯಾಂಕಿಂಗ್ ತಾಣಗಳಲ್ಲಿ ಕಡ್ಡಾಯವಾದ ಸುರಕ್ಷತಾ ವ್ಯವಸ್ಥೆ, ಉದಾಹರಣೆಗೆ ನಿಮ್ಮ ಮೊಬೈಲ್ ಫೋನ್‌ಗೇ ಒಟಿಪಿ ಬರುವಂತೆ ಮಾಡಿಟ್ಟುಕೊಳ್ಳುವ ವ್ಯವಸ್ಥೆ ಇರಬೇಕು, ಎರಡು ಹಂತದ ವೆರಿಫಿಕೇಶನ್ ವ್ಯವಸ್ಥೆ ಮಾಡಿಕೊಳ್ಳಬೇಕು. ಇದು ನಮ್ಮ ಸುರಕ್ಷತೆಗಾಗಿ. ಈ ಪೂರ್ವ ತಯಾರಿಯೊಂದಿಗೆ ಆನ್‌ಲೈನ್‌ನಲ್ಲಿ ಖರೀದಿಗೆ ಮನಸ್ಸು ಮಾಡಿ.

ಯಾವ ವೆಬ್ ತಾಣಗಳು?
ಸಾಧ್ಯವಿದ್ದಷ್ಟೂ ಜನಪ್ರಿಯವಾಗಿರುವ, ಈಗಾಗಲೇ ಜನರ ವಿಶ್ವಾಸ ಗಳಿಸಿರುವ ವೆಬ್ ತಾಣಗಳನ್ನೇ ಖರೀದಿಗೆ ಆಶ್ರಯಿಸಿ. ನೀವು ಯಾವ ವೆಬ್ ತಾಣದಲ್ಲಿ ನಿಮ್ಮ ಮೊದಲ ಖರೀದಿ ಮಾಡುತ್ತೀರಿ, ಅದರ ಅನುಭವವೇನು ಎಂಬುದರ ಮೇಲೆ ನಿಮ್ಮ ಭವಿಷ್ಯದ ಆನ್‌ಲೈನ್ ಖರೀದಿಯೂ ನಿಂತಿರುತ್ತದೆ. ಸದ್ಯಕ್ಕೆ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್, ಪೇಟಿಎಂ ಮಾಲ್ ಮುಂತಾದವು ಜನಪ್ರಿಯವಾಗಿವೆ. ಅವುಗಳನ್ನು ಪರಿಗಣಿಸಬಹುದು. ಹೊಸ ತಾಣಗಳಿಗೆ ಹೋಗುವ ಮುನ್ನ ಅವುಗಳ ವಿಶ್ವಾಸಾರ್ಹತೆಯ ಬಗ್ಗೆ ಇತರರಿಂದ ಕೇಳಿ ತಿಳಿದುಕೊಳ್ಳಿ ಅಥವಾ ಜಾಲತಾಣಗಳಲ್ಲಿ ಈ ಕುರಿತು ಸಾಕಷ್ಟು ಮಂದಿ ಬರೆದಿರುತ್ತಾರೆ. ಅವುಗಳನ್ನು ಓದಿಯೂ ತಿಳಿದುಕೊಳ್ಳಬಹುದು.

ಖರೀದಿಗೆ ಮುನ್ನ ಹಲವು ವೆಬ್ ತಾಣಗಳಲ್ಲಿ ನಿರ್ದಿಷ್ಟ ವಸ್ತುವಿನ ಬೆಲೆ ಹೋಲಿಸಿ ನೋಡಬಹುದು. ಹೆಚ್ಚಿನ ಎಲ್ಲ ದೊಡ್ಡ ಆನ್‌ಲೈನ್ ಸ್ಟೋರ್‌ಗಳಲ್ಲಿ ಬೆಲೆ ಬಹುತೇಕ ಒಂದೇ ರೀತಿಯಾಗಿರುತ್ತದೆ. ಆದರೆ, ಕೆಲವೊಂದು ಎಲೆಕ್ಟ್ರಾನಿಕ್ ಐಟಂಗಳು ನಿರ್ದಿಷ್ಟ ತಾಣದಲ್ಲಷ್ಟೇ ದೊರೆಯುತ್ತವೆ. ಜತೆಗೆ, ಕೆಲವು ತಾಣಗಳು ತಮ್ಮದೇ ಆದ ವಿಶೇಷ ಮಾರಾಟ ಪ್ರಚಾರಾಂದೋಲನವನ್ನು ಮಾಡುತ್ತವೆ. ಅದನ್ನು ಶಾಪಿಂಗ್ ಹಬ್ಬ ಎಂಬಂತೆ ಬಿಂಬಿಸಿ, ಸಾಕಷ್ಟು ರಿಯಾಯಿತಿ ದರಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಇಲ್ಲಿ, ಸಾವಿರಾರು ರೂಪಾಯಿ ಕಡಿತ ಎಂದು ತೋರಿಸುತ್ತವೆಯಾದರೂ, ಸಮೀಪದ ಮಳಿಗೆಗಳಲ್ಲಿ ಅದಕ್ಕೂ ಕಡಿಮೆಗೆ ಮಾರಾಟವಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ, ನಿಮ್ಮ ಸಮೀಪದ (ಆಫ್‌ಲೈನ್) ಅಂಗಡಿಗಳಲ್ಲಿಯೂ ದರ ವಿಚಾರಿಸುವುದೊಳಿತು.

‘ಅತ್ಯಂತ ಕಡಿಮೆ ದರ’ ಎಂದು ಹೇಳಿಕೊಳ್ಳುವಾಗ, ಅದರಲ್ಲಿ ಅನ್ವಯವಾಗುವ ‘ಷರತ್ತುಗಳು ಮತ್ತು ನಿಯಮಗಳು’ ಕುರಿತಾಗಿಯೂ ಓದಿಕೊಳ್ಳುವುದು ಜಾಣತನ. ನೀವೇನೋ ವಸ್ತುವನ್ನು ಕಡಿಮೆ ದರ ತೋರಿಸಲಾಗಿದೆ ಎಂದು ಖರೀದಿಸಿ, ಕ್ಲಿಕ್ ಮಾಡುತ್ತಾ ಹೋದಾಗ, ಕೊನೆಯಲ್ಲಿ ಬೇರೆಯೇ ದರ ಇರಬಹುದು. ಹೀಗಾಗಿ ಪಾವತಿಗೆ ಮುನ್ನ ಮತ್ತೊಮ್ಮೆ ನೋಡಿಕೊಳ್ಳಿ.

ಕ್ಯಾಶ್‌ಬ್ಯಾಕ್ ಎಂದರೇನು ಎಂಬುದನ್ನೂ ತಿಳಿದುಕೊಳ್ಳಿ. ಆಯಾ ಇ-ಕಾಮರ್ಸ್ ತಾಣಗಳು ತಮ್ಮದೇ ಆದ ಆನ್‌ಲೈನ್ ವ್ಯಾಲೆಟ್ (ಹಣವನ್ನು ಲೋಡ್ ಮಾಡಿಟ್ಟುಕೊಳ್ಳುವ) ವ್ಯವಸ್ಥೆಯನ್ನು ಹೊಂದಿರಬಹುದು. ಹತ್ತು ಸಾವಿರ ರೂ. ವಸ್ತು ಖರೀದಿಸಿದರೆ 2 ಸಾವಿರ ಕ್ಯಾಶ್‌ಬ್ಯಾಕ್ ಎಂದು ಅವರು ಪ್ರಚಾರ ಮಾಡಿದ್ದರೆ, ಅದು ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ಖಾತೆಗೇ ಜಮೆಯಾಗುತ್ತದೆಯೇ ಅಥವಾ ಅವರದ್ದೇ ಆದ ವ್ಯಾಲೆಟ್‌ಗೆ ಜಮೆಯಾಗುತ್ತದೆಯೇ ಎಂಬುದನ್ನು ನೋಡಿಕೊಳ್ಳಿ. ವ್ಯಾಲೆಟ್‌ಗೆ ಜಮೆಯಾದರೆ, ಅದನ್ನು ಖರ್ಚು ಮಾಡಬೇಕಿದ್ದರೆ ಆ ಜಾಲತಾಣದಿಂದಲೇ ಪುನಃ ಬೇರೇನಾದರೂ ಖರೀದಿಸಬೇಕಾಗುತ್ತದೆ. ಬೇರೆ ಜಾಲತಾಣಗಳಲ್ಲಿ ಏನಾದರೂ ವಸ್ತು ಖರೀದಿಸಲು ಆ ಹಣವನ್ನು ಬಳಸುವುದು ಸಾಧ್ಯವಾಗಲಾರದು.

ಆಯಾ ಇ-ಕಾಮರ್ಸ್ ತಾಣಗಳಲ್ಲಿ, ನಿರ್ದಿಷ್ಟ ವಸ್ತುವಿನ ಮಾರಾಟಗಾರರು ಹಲವಾರು ಮಂದಿ (ಒಂದೇ ಇ-ಕಾಮರ್ಸ್ ತಾಣದಲ್ಲಿ ಒಂದೇ ಉತ್ಪನ್ನವನ್ನು ಮಾರುವ ಹಲವರು) ಇರಬಹುದು. ಖರೀದಿಸಿದವರು ಈ ಮಾರಾಟಗಾರರಿಗೆ ರೇಟಿಂಗ್ಸ್ ನೀಡಿರುತ್ತಾರೆ ಮತ್ತು ರಿವ್ಯೂ ಕೂಡ ಬರೆದಿರುತ್ತಾರೆ. ಅವುಗಳನ್ನು ಓದಿಕೊಳ್ಳಿ. ಯಾವುದೇ ವಸ್ತು ಖರೀದಿಗೆ ಮುನ್ನ, ಅದನ್ನು ಖರೀದಿಸಿದವರು ಬಳಸಿದ ಬಳಿಕ ಬರೆದ ಅನಿಸಿಕೆಗಳನ್ನು ಓದುವುದು ಜಾಣತನ. ತೀರಾ ಧನಾತ್ಮಕ ರಿವ್ಯೂಗಳಿದ್ದರೆ ಅದು ಖರೀದಿಗೆ ಪ್ರೇರೇಪಿಸುತ್ತದೆ. ನೆಗೆಟಿವ್ ಅಂಶಗಳನ್ನೂ ಓದಿಕೊಳ್ಳಿ. ಖರೀದಿಸಿದವರ ಅನುಭವಗಳು ಅಲ್ಲಿ ದಾಖಲಾಗಿರುತ್ತವೆ. ಇದು ನಿಮಗೆ ಉತ್ಪನ್ನವನ್ನು ಅಥವಾ ಮಾರಾಟಗಾರರನ್ನು ಆಯ್ಕೆ ಮಾಡಿಕೊಳ್ಳಲು ನೆರವಾಗುತ್ತದೆ. ನಿರ್ದಿಷ್ಟ ತಾಣದಿಂದ ವೆರಿಫೈ ಆಗಿರುವ ಮಾರಾಟಗಾರರನ್ನೇ ಆಯ್ಕೆ ಮಾಡಿಕೊಳ್ಳಿ.

ಆಯಾ ಮಾರುಕಟ್ಟೆ ತಾಣಗಳಿಗೆ ಅದರದ್ದೇ ಆದ ಕಸ್ಟಮರ್ ಕೇರ್ ಸಂಖ್ಯೆಗಳಿರುತ್ತವೆ. ಅವುಗಳನ್ನು ಗಮನಿಸಿ. ಖರೀದಿಗೆ ಮುನ್ನ, ಅಲ್ಲಿಗೆ ಕರೆ ಮಾಡಿ ಅವರಿಂದಲೂ ಸಲಹೆ ಪಡೆಯಬಹುದು. ಏನಾದರೂ ಸಮಸ್ಯೆಯಾದರೆ, ಆ ತಾಣಗಳ ಟ್ವಿಟರ್ ಅಥವಾ ಫೇಸ್‌ಬುಕ್ ಖಾತೆಯ ಮೂಲಕವೂ ಸಮಸ್ಯೆಗಳನ್ನು ಅವರ ಗಮನಕ್ಕೆ ತರಬಹುದು. ಚರ್ಚೆ ಬಹಿರಂಗವಾಗಿ ಆಗುವುದರಿಂದಾಗಿ ಇ-ಕಾಮರ್ಸ್ ತಾಣಗಳು ಹೆಚ್ಚಾಗಿ ತಕ್ಷಣವೇ ಸ್ಪಂದಿಸುತ್ತವೆ. ಯಾವುದೇ ಕಾರಣಕ್ಕೆ ಪರಿಚಯವಿಲ್ಲದ ಲಿಂಕ್‌ಗಳ ಮೂಲಕ ಶಾಪಿಂಗ್ ಮಾಡಬೇಡಿ. ಈ ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್ ಮುಂದುವರಿಸಿ.

ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ for 16 ಜುಲೈ 2018 by ಅವಿನಾಶ್ ಬಿ.

LEAVE A REPLY

Please enter your comment!
Please enter your name here