ಫೇಸ್‌ಬುಕ್‌ನಿಂದ ಹೊರಗಿನ ಅಂತರಜಾಲ ಚಟುವಟಿಕೆ ಅದಕ್ಕೆ ತಿಳಿಯದಂತೆ ಮಾಡುವುದು ಹೇಗೆ?

0
366

ಶ್! ಇಂಟರ್ನೆಟ್‌ನಲ್ಲಿ ನಮ್ಮನ್ನು ಫೇಸ್‌ಬುಕ್ ಹಿಂಬಾಲಿಸುತ್ತಿದೆ…

ಆನ್‌ಲೈನ್ ಅಥವಾ ಇಂಟರ್ನೆಟ್‌ಗೆ ಬಂದಿದ್ದೀರಿ ಎಂದಾದರೆ ಪ್ರೈವೆಸಿ (ನಮ್ಮ ಖಾಸಗಿತನ) ರಕ್ಷಣೆಯ ಕುರಿತಾಗಿ ಯೋಚಿಸುವುದನ್ನು ಬಿಟ್ಟುಬಿಡಬೇಕು ಎಂಬೊಂದು ಮಾತಿದೆ. ನಾವು ಇಂಟರ್ನೆಟ್‌ನಲ್ಲಿ ಎಲ್ಲಿಗೆ ಹೋದೆವು, ಏನು ನೋಡಿದೆವು ಎಂಬ ಎಲ್ಲ ಮಾಹಿತಿಯನ್ನೂ ತಿಳಿಯುವವರು ಇರುತ್ತಾರೆ, ಅದು ಎಲ್ಲೆಲ್ಲಿಗೋ ರವಾನೆಯಾಗಿಬಿಡುತ್ತದೆ. ಅಂದರೆ ಗೂಢಚರನೊಬ್ಬ ನಮ್ಮನ್ನು ಹಿಂಬಾಲಿಸುತ್ತಿದ್ದಾನೆ ಎಂಬ ಆತಂಕವೊಂದು ನಮಗಿರಬೇಕು ಮತ್ತು ಈ ಆತಂಕದೊಂದಿಗೆಯೇ ನಮ್ಮ ಕಾರ್ಯಚಟುವಟಿಕೆಗಳನ್ನೂ ನಡೆಸಬೇಕಾಗುತ್ತದೆ. ಹೀಗಿದ್ದರೆ ಮಾತ್ರ ಆನ್‌ಲೈನ್‌ನಲ್ಲಿ ಒಂದಿಷ್ಟು ಮಟ್ಟಿಗೆ ಸುರಕ್ಷಿತವಾಗಿರುವುದು ಸಾಧ್ಯ.

ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣದಿಂದ ಬಳಕೆದಾರರ ಖಾಸಗಿತನ ಸೋರಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ, ವಿವಾದವೂ ಆಗಿದೆ. ಆದರೂ ಜನರಿಗೆ ಅದರ ಅರಿವು ಇದ್ದಂತಿಲ್ಲ. ನಾವು ಎಲ್ಲಿ ಹೋದೆವು, ಏನು ಮಾಡಿದೆವು ಅಂತ ಸೆಲ್ಫೀ ತೆಗೆದು ಫೇಸ್‌ಬುಕ್‌ನಲ್ಲಿ ಹಾಕುವುದೊಂದು ಪರಂಪರೆಯಾಗಿಬಿಟ್ಟಿದೆ. ಫೇಸ್‌ಬುಕ್‌ಗೆ ನಮ್ಮ ಬಗ್ಗೆ ತಿಳಿದಿರುವಷ್ಟು ಮಾಹಿತಿ ನಮ್ಮ ಸ್ನೇಹಿತರಿಗೂ ಗೊತ್ತಿರಲಾರದು ಎಂಬಷ್ಟರ ಮಟ್ಟಿಗೆ ನಾವು ಅದನ್ನು ಬಳಸಿಕೊಳ್ಳುತ್ತಿದ್ದೇವೆ.

ಇಷ್ಟಾದರೆ ಸಮಸ್ಯೆಯಿರಲಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ನೋಡಿದ ವಿಚಾರಗಳಷ್ಟೇ ಅಲ್ಲದೆ, ಬೇರೆ ಜಾಲತಾಣಗಳಲ್ಲಿ ನೋಡಿದ ವಿಷಯಗಳೂ ಅದಕ್ಕೆ ತಿಳಿಯುತ್ತದೆ. ಇದುವೇ ‘ಆಫ್-ಫೇಸ್‌ಬುಕ್’ ಮಾಹಿತಿ. ‘ನಾವು ಸ್ವತಃ ಇದರ ಜಾಡು ಹಿಡಿಯುವುದಿಲ್ಲ, ಈ ಮಾಹಿತಿಯನ್ನು ಬೇರೆ ಜಾಲತಾಣಗಳು ನಮ್ಮೊಂದಿಗೆ ಹಂಚಿಕೊಳ್ಳುತ್ತವೆ’ ಅಂತ ಫೇಸ್‌ಬುಕ್ ತನ್ನ ಗೌಪ್ಯತಾ ನೀತಿಯಲ್ಲಿ ಹೇಳಿಕೊಂಡಿದೆ. ಬಳಕೆದಾರರ ವಿಶ್ವಾಸವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ವೈಶಿಷ್ಟ್ಯವನ್ನು ಆಫ್ ಮಾಡಿಕೊಂಡರೆ ನಿಮ್ಮ ಖಾಸಗಿತನ (ಪ್ರೈವೆಸಿ) ಸುರಕ್ಷಿತ ಅಂತನೂ ಉದಾರವಾಗಿ ಹೇಳಿಕೊಳ್ಳುತ್ತದೆ ಫೇಸ್‌ಬುಕ್.

ಹೇಗೆ ಗೊತ್ತಾಗುವುದು?
ನೀವು ಒಂದು ಬೈಕ್ ಖರೀದಿಸಬೇಕೆಂದಿದ್ದೀರಿ. ಆ ದ್ವಿಚಕ್ರ ವಾಹನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅದರ ಜಾಲತಾಣಕ್ಕೆ ಭೇಟಿ ನೀಡುತ್ತೀರಿ. ಆ ವೆಬ್‌ಸೈಟಿನಲ್ಲಿ ಅಳವಡಿಕೆಯಾಗಿರುವ ಫೇಸ್‌ಬುಕ್ ಪಿಕ್ಸೆಲ್ ಅಥವಾ ಫೇಸ್‌ಬುಕ್ ಎಸ್‌ಡಿಕೆ ಅಥವಾ ಫೇಸ್‌ಬುಕ್ ಮೂಲಕ ಲಾಗಿನ್ ಆಗುವ ಆಯ್ಕೆ ಮುಂತಾಗಿ ಯಾವುದಾದರೊಂದು ಬಿಸಿನೆಸ್ ಟೂಲ್ ಮೂಲಕ ಈ ಮಾಹಿತಿಯು ತಕ್ಷಣ ಫೇಸ್‌ಬುಕ್‌ಗೆ ರವಾನೆಯಾಗುತ್ತದೆ. ಮುಂದೆ ನೀವು ಫೇಸ್‌ಬುಕ್‌ಗೆ ಲಾಗಿನ್ ಆದಾಗ, ನಿಮ್ಮ ಟೈಮ್‌ಲೈನ್‌ನಲ್ಲಿ ಶೇ.5 ಡಿಸ್ಕೌಂಟ್‌ನಲ್ಲಿ ಅದೇ ದ್ವಿಚಕ್ರ ವಾಹನದ ಜಾಹೀರಾತೊಂದು ನಿಮಗೆ ಕಾಣಿಸುತ್ತದೆ. ಅಂದರೆ, ತನಗೆ ದೊರೆತ ಮಾಹಿತಿಯ ಆಧಾರದಲ್ಲಿ ಫೇಸ್‌ಬುಕ್, ಅದಕ್ಕೆ ಸಂಬಂಧಿತ ಜಾಹೀರಾತನ್ನು ನಿಮಗೆ ತೋರಿಸುತ್ತದೆ. ಇದರಿಂದ ಫೇಸ್‌ಬುಕ್‌ಗೆ ಜಾಹೀರಾತು ಸಂಬಂಧಿತ ಲಾಭ ಆಗುತ್ತದೆ.

ಆ ಜಾಲತಾಣದಲ್ಲಿ ನೀವು ಯಾವ ಪುಟ ತೆರೆದಿರಿ, ಏನನ್ನು ಓದಿದಿರಿ, ಏನನ್ನು ಹುಡುಕಾಡಿದಿರಿ, ಖರೀದಿ ಮಾಡಿದಿರಿ, ಶಾಪಿಂಗ್ ಕಾರ್ಟ್‌ಗೆ ಏನನ್ನು ಸೇರಿಸಿದಿರಿ, ಹಣ ಪಾವತಿಸಿದಿರೇ ಮುಂತಾದ ಎಲ್ಲ ಚಟುವಟಿಕೆಗಳ ಮಾಹಿತಿಯೂ ಫೇಸ್‌ಬುಕ್‌ಗೆ ತಿಳಿದುಬಿಡುತ್ತದೆ. ಅದರ ಆಧಾರದಲ್ಲಿ ಫೇಸ್‌ಬುಕ್ ನಿಮಗೆ ತತ್ಸಂಬಂಧಿತ ಜಾಹೀರಾತನ್ನು, ಅದಕ್ಕೆ ಸಂಬಂಧಿಸಿದ ಗ್ರೂಪ್‌ಗಳನ್ನು, ಮಾರ್ಕೆಟ್‌ಪ್ಲೇಸ್ ಲಿಂಕ್‌ಗಳನ್ನು ಧುತ್ತನೇ ತೋರಿಸುತ್ತಿರುತ್ತದೆ.

ಹೇಗೆ ಅದನ್ನು ತಪ್ಪಿಸುವುದು?
ನಾವು ಅಂತರಜಾಲದಲ್ಲಿ ನೋಡಿದ ಪುಟಗಳ ಬಗ್ಗೆ ಫೇಸ್‌ಬುಕ್‌ಗೆ ತಿಳಿಯದಂತೆ ಮಾಡುವುದು ಹೇಗೆ? ಇದಕ್ಕಾಗಿ ಬಳಕೆದಾರರಿಗೆ ಫೇಸ್‌ಬುಕ್ ಆಯ್ಕೆ ನೀಡಿದೆ. ಅದೆಂದರೆ, ಸೆಟ್ಟಿಂಗ್ಸ್ ಮೆನುವಿಗೆ ಹೋಗಿ, ಅಲ್ಲಿ Your Facebook Information ಎಂಬ ವಿಭಾಗದಲ್ಲಿ Off-Facebook Activity ಎಂಬುದನ್ನು ಕ್ಲಿಕ್ ಮಾಡಿ. ಅಥವಾ ಲಾಗಿನ್ ಆಗಿದ್ದರೆ ನೇರವಾಗಿ facebook.com/off_facebook_activity ಎಂಬಲ್ಲಿ ಕ್ಲಿಕ್ ಮಾಡಿದರೂ ಸಾಕು. ನಂತರ ಅಲ್ಲೇ ಲಭ್ಯವಾಗುವ Clear History ಆಯ್ಕೆ ಮಾಡಿ. ಆಗ ಹಿಂದಿನ ಮಾಹಿತಿಯ ಜಾಡನ್ನು ಅಳಿಸಲಾಗುತ್ತದೆ. ಮುಂದೆಯೂ ಅದು ನಿಮ್ಮ ಜಾಡು ಹಿಡಿಯದಂತೆ ಮಾಡಬೇಕಿದ್ದರೆ ಅಲ್ಲೇ ಕೆಳಗೆ ಲಭ್ಯವಿರುವ Manage Future Activity ಎಂಬುದನ್ನು ಕ್ಲಿಕ್ ಮಾಡಿ ಮುಂದುವರಿಯಬಹುದು.

‘ಹಿಸ್ಟರಿ ಕ್ಲಿಯರ್’ ಮಾಡುವುದರಿಂದ ಅಥವಾ ಪೂರ್ಣವಾಗಿ ಚಟುವಟಿಕೆ ತಡೆಯುವುದರಿಂದ ಈಗಾಗಲೇ ಫೇಸ್‌ಬುಕ್ ಮೂಲಕ ಲಾಗಿನ್ ಆಗಿರುವ ಎಲ್ಲ ಆ್ಯಪ್ ಮತ್ತಿತರ ಖಾತೆಗಳಿಂದಲೂ ನೀವು ಸೈನ್-ಔಟ್ ಆಗುತ್ತೀರಿ ಎಂಬುದು ಗಮನದಲ್ಲಿರಲಿ. ಮತ್ತು ಭವಿಷ್ಯದಲ್ಲಿ ಟ್ರ್ಯಾಕ್ ಮಾಡುವುದು ಬೇಡ ಅಂತ ಆಯ್ಕೆ ಮಾಡಿದರೆ, ಯಾವುದೇ ಜಾಲತಾಣ ಅಥವಾ ಆ್ಯಪ್‌ಗಳಿಗೆ ಫೇಸ್‌ಬುಕ್ ಖಾತೆಯ ಮೂಲಕ ಲಾಗಿನ್ ಆಗುವ ಆಯ್ಕೆ ನಿಮಗೆ ದೊರೆಯುವುದಿಲ್ಲ.

ಇಷ್ಟೆಲ್ಲ ಆದರೂ, ಎಲ್ಲ ರೀತಿಯ ಜಾಹೀರಾತುಗಳು ಕಾಣಿಸುವುದಿಲ್ಲ ಎಂಬುದು ಖಚಿತವಿಲ್ಲ. ಮುಂದೆಯೂ ಜಾಹೀರಾತು ಕಾಣಿಸುತ್ತದೆ, ಆದರೆ ಅದರ ಪ್ರಮಾಣ ಕಡಿಮೆ ಇರುತ್ತದೆ ಅಂತ ಫೇಸ್‌ಬುಕ್ ಸ್ವತಃ ಹೇಳಿದೆ. ಹೀಗಾಗಿ ಎಚ್ಚರಿಕೆ ಬಳಸಿ, ಅಂತರಜಾಲ ಜಾಲಾಡಿ. ಮುಖ್ಯವಾಗಿ ಫೇಸ್‌ಬುಕ್‌ನಿಂದ ಲಾಗೌಟ್ ಆದ ಮೇಲೆ ಬೇರೆ ಜಾಲತಾಣಗಳನ್ನು ನೋಡಿ ಅಥವಾ ಇನ್‌ಕಾಗ್ನಿಟೋ ವಿಂಡೋದ (ಗೂಗಲ್ ಕ್ರೋಮ್‌ನಲ್ಲಿ) ಮೂಲಕವೇ ಬೇರೆ ತಾಣಗಳನ್ನು ಜಾಲಾಡಬಹುದು.

My article published in Prajavani on 27/28 April 2021

LEAVE A REPLY

Please enter your comment!
Please enter your name here