Samsung Galaxy M52: ಸ್ಲಿಮ್ ಮತ್ತು ಲೈಟ್ ಆದರೆ ಶಕ್ತಿಶಾಲಿ ಸ್ಮಾರ್ಟ್‌ಫೋನ್

0
583

120Hz AMOLED ಸ್ಕ್ರೀನ್, ವೇಗದ ಸ್ನ್ಯಾಪ್‌ಡ್ರ್ಯಾಗನ್ 778G ಪ್ರೊಸೆಸರ್, 5G ಸಂಪರ್ಕ ವ್ಯವಸ್ಥೆ ಮತ್ತು ಬಿಕ್ಸ್‌ಬಿ ಎಂಬ ಜಾಣ ಸಹಾಯಕ ತಂತ್ರಾಂಶದೊಂದಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ52 ಸ್ಮಾರ್ಟ್‌ಫೋನ್ ಇತ್ತೀಚೆಗೆ ಬಿಡುಗಡೆಯಾಗಿದೆ. ಮಧ್ಯಮ ದರ್ಜೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ, ತೀರಾ ಹಗುರವಾದ ಮತ್ತು ಅತ್ಯುತ್ತಮ ಬ್ಯಾಟರಿಯುಳ್ಳ ಹೊಚ್ಚ ಹೊಸ ಸ್ಮಾರ್ಟ್ ಸಾಧನವಿದು.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿ ಆರಂಭವಾದಂದಿನಿಂದ ಹೊಸ ಹೊಸ ವೈಶಿಷ್ಟ್ಯಗಳ ಸೇರ್ಪಡೆಯೊಂದಿಗೆ, ಸರಣಿಯ ಸ್ಮಾರ್ಟ್ ಫೋನ್ ಕೂಡ ವಿಕಾಸವಾಗುತ್ತಾ ಬಂದಿದೆ. ಇದರ ಫಲವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ52 (5ಜಿ) ಫೋನ್. ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಭಾರತೀಯ ಮಾರುಕಟ್ಟೆಗೆ ಇದು ಬಿಡುಗಡೆಯಾಗಿದ್ದು, ಮಧ್ಯಮ ಶ್ರೇಣಿಯ ಬಜೆಟ್ ವಿಭಾಗದಲ್ಲಿ ಇದು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂಬುದು ಇದನ್ನು ಹತ್ತು ದಿನಗಳ ಕಾಲ ಬಳಸಿ ನೋಡಿದಾಗ ತಿಳಿದುಬಂದ ವಿಚಾರ.

ವಿನ್ಯಾಸ, ಮೊದಲ ನೋಟ
ಬಾಕ್ಸ್ ತೆರೆದು ಫೋನ್ ಕೈಗೆತ್ತಿಕೊಂಡಾಕ್ಷಣ ಗಮನಕ್ಕೆ ಬರುವುದು ತೀರಾ ಹಗುರ ಮತ್ತು ಸ್ಲಿಮ್, ಆದರೂ ಐಷಾರಾಮಿ ಫೋನ್‌ನ ನೋಟ. 6.7 ಇಂಚಿನ ದೊಡ್ಡ ಸ್ಕ್ರೀನ್ ಗಾತ್ರ, ಗೊರಿಲ್ಲಾ ಗಾಜು ರಕ್ಷಣೆ, 5000 mAh ಬ್ಯಾಟರಿಯಿದ್ದರೂ 7.4 ಮಿಮೀ ಮಾತ್ರವೇ ದಪ್ಪ ಇರುವ ಈ ಫೋನ್‌ನ ತೂಕ ಕೇವಲ 173 ಗ್ರಾಂ. ಸ್ಕ್ರೀನ್ ಮೇಲೆ ಅತ್ಯಂತ ಚಿಕ್ಕದಾದ ಡಾಟ್ ನಾಚ್ ಸೆಲ್ಫೀ ಕ್ಯಾಮೆರಾ, ಹಿಂಭಾಗದಲ್ಲಿ, ನೋಡಲು ಆಕರ್ಷಕವಾಗಿರುವ ಲಂಬ ಗೆರೆಗಳಿರುವ ಪ್ಲಾಸ್ಟಿಕ್ ಕವಚ ಮತ್ತು ತ್ರಿವಳಿ ಕ್ಯಾಮೆರಾ, ಫ್ಲ್ಯಾಶ್; ಎಡ ಪಾರ್ಶ್ವದ ಮೇಲ್ಭಾಗದಲ್ಲಿ ವಾಲ್ಯೂಮ್ ಬಟನ್ ಇದೆ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇರುವ ಪವರ್ ಬಟನ್ ಇದೆ. ಕೆಳಭಾಗದಲ್ಲಿ ಮೋನೋ ಸ್ಪೀಕರ್, ಯುಎಸ್‌‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್, ಎಡ ಮೇಲ್ಭಾಗದಲ್ಲಿ ಸಿಮ್ ಕಾರ್ಡ್/ಮೈಕ್ರೋ ಎಸ್‌ಡಿ ಕಾರ್ಡ್ ಟ್ರೇ ಇದೆ. ಫೋನ್‌ನ ಗಾತ್ರ ದೊಡ್ಡದಿರುವುದರಿಂದ, ಕ್ಯಾಮೆರಾಗಳು ಎದ್ದುಕಾಣಿಸುವಂತೆ ಅಂಗಿಯ ಸಾಮಾನ್ಯ ಜೇಬಿನಲ್ಲಿ ಕೂರುತ್ತದೆ. ಆದರೆ, ಹಗುರ ಎಂಬುದು ಪ್ಲಸ್ ಪಾಯಿಂಟ್. ಹೀಗಾಗಿ ಹೆಚ್ಚು ಹೊತ್ತು ಕೈಯಲ್ಲಿ ಹಿಡಿದುಕೊಳ್ಳುವುದು ಕೂಡ ತ್ರಾಸದಾಯಕವಲ್ಲ. ಹಿಂದಿನ ಫೋನ್‌ನಂತೆ ಇದರಲ್ಲಿ 3.5 ಮಿಮೀ ಹೆಡ್‌ಫೋನ್ ಜ್ಯಾಕ್ ಇಲ್ಲ.

ಡಿಸ್‌ಪ್ಲೇ, ಕಾರ್ಯಾಚರಣೆ
ಅಮೋಲೆಡ್ (AMOLED) 1080p ಡಿಸ್‌ಪ್ಲೇ ಜೊತೆಗೆ ಅತ್ಯಾಧುನಿಕ ಫೋನ್‌ಗಳಲ್ಲಿರುವ 120Hz ರೀಫ್ರೆಶ್ ರೇಟ್ – ಇವು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ52 ಸಾಧನದ ಮತ್ತೊಂದು ಆಕರ್ಷಣೆ. ಈ ಕಾರಣದಿಂದಾಗಿ, ಸ್ಕ್ರೀನ್ ಮೇಲೆ ಕೈಯಾಡಿಸಿದಾಕ್ಷಣ ಅನುಭವಕ್ಕೆ ಬರುವುದು ಅತ್ಯಂತ ಸುಲಲಿತವಾದ ಬ್ರೌಸಿಂಗ್. ಬೆರಳಿನಿಂದ ಸ್ವೈಪ್ ಮಾಡಿದಾಗಲೇ ಇದು ವೇದ್ಯವಾಗುತ್ತದೆ. ಹಿಂದಿನ ಯಾವುದೇ ಎಂ ಸರಣಿಯ ಫೋನ್‌ಗಳಿಗಿಂತ ಇದು ಹೆಚ್ಚು ಸುಧಾರಿತ ಆವೃತ್ತಿಯಾಗಿದ್ದು, ಬ್ಲೇಝಿಂಗ್ ಬ್ಲ್ಯಾಕ್ (ಹೊಳೆಯುವ ಕಪ್ಪು) ಹಾಗೂ ಐಸ್ ಬ್ಲೂ (ನೀಲಿ) ಬಣ್ಣಗಳಲ್ಲಿ ದೊರೆಯುತ್ತಿದೆ. ಅಮೋಲೆಡ್ ಡಿಸ್‌ಪ್ಲೇ ಅಂತೂ ಚಿತ್ರಗಳು, ವಿಡಿಯೊಗಳನ್ನು ಸುಸ್ಪಷ್ಟವಾಗಿ, ನೈಜ ಬಣ್ಣಗಳೊಂದಿಗೆ ತೋರಿಸುತ್ತದೆ. ಬಿರುಬಿಸಿಲಲ್ಲಿ ಕೂಡ ವಾಟ್ಸ್ಆ್ಯಪ್ ನೋಡುವುದು ಅಥವಾ ಸುದ್ದಿ ಓದುವುದಕ್ಕೆ ಸೂರ್ಯನ ಬೆಳಕು ಯಾವುದೇ ಅಡ್ಡಿಯಾಗದಂತೆ ಹೊಂದಿಕೊಳ್ಳುತ್ತದೆ.

120Hz ರೀಫ್ರೆಶ್ ರೇಟ್‌ನಿಂದಾಗಿ ಗೇಮಿಂಗ್ ಮತ್ತು ಸ್ಟ್ರೀಮಿಂಗ್‌ಗೆ ಹಾಗೂ ಸೋಷಿಯಲ್ ಮೀಡಿಯಾ ಅಥವಾ ವೆಬ್ ಪುಟಗಳ ಬ್ರೌಸಿಂಗ್ – ತುಂಬಾ ಸುಲಲಿತವಾಗಿದೆ ಮತ್ತು ನಯವಾಗಿದೆ. ಜೊತೆಗೆ ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 778ಜಿ ಪ್ರೊಸೆಸರ್ ಕೂಡ ಅದ್ಭುತವಾಗಿ ಪೂರಕ ಕೆಲಸಗಳಿಗೆ ಸ್ಪಂದಿಸುತ್ತದೆ. ರಿವ್ಯೂಗೆ ದೊರೆತಿರುವುದು 8 ಜಿಬಿ RAM ಹಾಗೂ 128 ಜಿಬಿ ಸ್ಟೋರೇಜ್ ಸಾಧನ. ಇದನ್ನು ಬಾಹ್ಯ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 1ಟಿಬಿ ವರೆಗೂ ವಿಸ್ತರಿಸಬಹುದಾಗಿರುವುದು ಮತ್ತೊಂದು ವಿಶೇಷ. ಆಂಡ್ರಾಯ್ಡ್ 11 ಕಾರ್ಯಾಚರಣೆ ವ್ಯವಸ್ಥೆ ಆಧಾರಿತ ಒನ್ ಯುಐ 3.1 ಆವೃತ್ತಿಯೊಂದಿಗೆ, ಯಾವುದೇ ಸಂದರ್ಭದಲ್ಲಿಯೂ ತೊಡಕು ಅಥವಾ ಸ್ಥಾಗಿತ್ಯ (ಲ್ಯಾಗಿಂಗ್) ಅನುಭವಕ್ಕೆ ಬಂದಿಲ್ಲ. ಎಂದಿನಂತೆ, ಮೊದಲೇ ಅಳವಡಿಸಿರುವ ಕೆಲವೊಂದು ಥರ್ಡ್ ಪಾರ್ಟ್ ಆ್ಯಪ್‌ಗಳು ಕಿರಿಕಿರಿಯಾಗುತ್ತವೆ. ಅವುಗಳಲ್ಲಿ ಹೆಚ್ಚಿನವನ್ನು ಅನ್-ಇನ್‌ಸ್ಟಾಲ್ ಮಾಡಬಹುದು.

ಇನ್ನು, ಅಗತ್ಯ ಬಂದಾಗ RAM ವಿಸ್ತರಣೆಗಾಗಿ, ವರ್ಚುವಲ್ RAM ವ್ಯವಸ್ಥೆಯಿದ್ದು, ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವಾಗ ಅಗತ್ಯ ಬಿದ್ದರೆ 4GB ಹೆಚ್ಚುವರಿಯಾಗಿ RAM ತಾನಾಗಿಯೇ ಸರಿದೂಗಿಸಿಕೊಳ್ಳುವ ವ್ಯವಸ್ಥೆಯು ಸಾಧನದ ಕಾರ್ಯಾಚರಣೆಗೆ ಮತ್ತಷ್ಟು ಪುಷ್ಟಿ ನೀಡಿದೆ.

5000 mAh ಬ್ಯಾಟರಿ ಇದ್ದು ಸಾಮಾನ್ಯ ಬಳಕೆದಾರರಿಗೆ ಎರಡು ದಿನಗಳ ಕೆಲಸಕ್ಕೆ ಅಡ್ಡಿಯಿಲ್ಲ. ನೆಟ್‌ವರ್ಕ್ ಸಿಗ್ನಲ್ ದುರ್ಬಲವಿದ್ದರೆ ಮಾತ್ರ ಒಂದೇ ದಿನಕ್ಕೆ ಚಾರ್ಜ್ ಮಾಡಬೇಕಾಗುತ್ತದೆ. ಬಾಕ್ಸ್‌ನಲ್ಲಿರುವ ಚಾರ್ಜರ್‌ನಲ್ಲಿ 15W ವೇಗದ ಚಾರ್ಜಿಂಗ್ ಅಡಾಪ್ಟರ್ ಇದೆಯಾದರೂ, ಇದು 25W ಚಾರ್ಜಿಂಗ್ ಬೆಂಬಲಿಸುತ್ತದೆ.

ಕ್ಯಾಮೆರಾ


ಮೇಲೆ ಹೇಳಿರುವ ತಂತ್ರಾಂಶ, ಯಂತ್ರಾಂಶಗಳೊಂದಿಗೆ 64 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್, 12MP ಅಲ್ಟ್ರಾವೈಡ್ ಹಾಗೂ 5MP ಮ್ಯಾಕ್ರೋ ಕ್ಯಾಮೆರಾ ಸೆನ್ಸರ್‌ಗಳು ಅದ್ಭುತವಾದ ಚಿತ್ರಗಳನ್ನು ಸೆರೆಹಿಡಿಯುತ್ತವೆ. ಹೊರಾಂಗಣದ ಫೋಟೋಗಳಂತೂ ಅತ್ಯಂತ ಸ್ಪಷ್ಟವಾಗಿ, ನೈಜ ಬಣ್ಣಗಳೊಂದಿಗೆ ಮೂಡಿಬಂದಿದ್ದರೆ, ರಾತ್ರಿ ವೇಳೆಯ ಫೋಟೋಗಳೂ ಉತ್ತಮವಾಗಿಯೇ ಸೆರೆಯಾಗಿವೆ. ಆದರೆ ಹಗಲಿನಷ್ಟು ಸ್ಪಷ್ಟತೆ ಇಲ್ಲ. ಇದು ಕ್ಯಾಮೆರಾ ಸೆನ್ಸರ್‌ಗಳ ಮಿತಿಯೂ ಹೌದು. 32 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾದಲ್ಲಿ ಕೂಡ ಒಳ್ಳೆಯ ಫಿಲ್ಟರ್‌ಗಳು, ಫನ್ ಫಿಲ್ಟರ್‌ಗಳು, ಹಿನ್ನೆಲೆ ಮಸುಕಾಗಿಸುವ ಪೋರ್ಟ್ರೇಟ್ ಮೋಡ್ ಇದೆ. ಜೊತೆಗೆ, ಅದರಲ್ಲಿರುವ AR Zone ನಲ್ಲಿ ನಮ್ಮದೇ ಎಮೋಜಿಗಳನ್ನು ರಚಿಸಿ, ಯಾವುದೇ ಮೆಸೆಂಜರ್ ಆ್ಯಪ್‌ಗಳಲ್ಲಿ ಅವುಗಳನ್ನು ಭಾವನೆ ವ್ಯಕ್ತಪಡಿಸುವ ಎಮೋಜಿಗಳು ಅಥವಾ ಸ್ಟಿಕರ್‌ಗಳ ರೂಪದಲ್ಲಿ ಕಳುಹಿಸಬಹುದು.

ಜೊತೆಗೆ ಸುರಕ್ಷತೆಗಾಗಿ Knox ತಂತ್ರಾಶವಿದ್ದು, ಅತ್ಯಾಧುನಿಕ ಫೋನ್‌ಗಳಿಗಾಗಿ ಸ್ಯಾಮ್‌ಸಂಗ್ ರೂಪಿಸಿರುವ ಬಿಕ್ಸ್‌ಬಿ ಎಂಬ ಗೂಗಲ್ ಅಸಿಸ್ಟೆಂಟ್/ಲೆನ್ಸ್‌ಗೆ ಪರ್ಯಾಯವಾದ ಜಾಣ ಸಹಾಯಕ ತಂತ್ರಾಂಶ ಉತ್ತಮವಾಗಿ ಕೆಲಸ ಮಾಡುತ್ತದೆ. ಇದನ್ನು ಪವರ್ ಬಟನ್ ಮೂಲಕವೂ ಹೊಂದಿಸಬಹುದು. ಹಾಗೆ ಮಾಡಿದಾಗ, ಸ್ಕ್ರೀನ್‌ನಲ್ಲಿ ನೋಟಿಫಿಕೇಶನ್ ಟ್ರೇಯನ್ನು ಕೆಳಕ್ಕೆ ಎಳೆದಾಗ, ಪವರ್ ಆಫ್ ಬಟನ್ ಗೋಚರಿಸುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಧ್ಯಮ ಶ್ರೇಣಿಯ ಫೋನ್‌ಗೆ ಉನ್ನತ ಶ್ರೇಣಿಯ ಅತ್ಯಾಧುನಿಕ ಯಂತ್ರಾಂಶ-ತಂತ್ರಾಂಶಗಳನ್ನು ಅಳವಡಿಸಿ ಗ್ಯಾಲಕ್ಸಿ ಎಂ52 5ಜಿ ಸಾಧನ ರೂಪಿಸಲಾಗಿದೆ ಎನ್ನಬಹುದು. ಮುಖ ಗುರುತಿಸುವುದಾಗಲೀ, ಫಿಂಗರ್ ಪ್ರಿಂಟ್ ಸ್ಕ್ಯಾನ್ ಆಗಲೀ, ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಜೊತೆಗೆ 5ಜಿ ಸಂಪರ್ಕ ಬೆಂಬಲ, 778ಜಿ ಪ್ರೊಸೆಸರ್, 120Hz ವೇಗದ FHD+ ಅಮೋಲೆಡ್ ಸ್ಕ್ರೀನ್, 64 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ, ಸುಲಲಿತವಾದ ಪರ್ಫಾರ್ಮೆನ್ಸ್ – ಇವುಗಳೆಲ್ಲವೂ ಪ್ಲಸ್ ಪಾಯಿಂಟ್. ಬೆಲೆ: 6ಜಿಬಿ+128ಜಿಬಿ ಆವೃತ್ತಿಗೆ ₹29999 ಹಾಗೂ 8ಜಿಬಿ+128ಜಿಬಿ ಆವೃತ್ತಿಗೆ ₹31999.

My article Published in Prajavani on 12/13 October 2021

LEAVE A REPLY

Please enter your comment!
Please enter your name here