Apple iPhone 13 Pro: ಛಾಯಾಗ್ರಾಹಕರ ಕನಸಿನ ಫೋನ್, ಪವರ್ ಫುಲ್ ಮತ್ತು ಗಟ್ಟಿ ಫೋನ್

0
476

ಐಫೋನ್ 13 ಸರಣಿಯ ಫೋನ್‌ಗಳನ್ನು ಆ್ಯಪಲ್ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಮಾರುಕಟ್ಟೆಗೆ ಇಳಿಸಿದೆ. ಜೊತೆಗೆ ಆ್ಯಪಲ್ ಸಾಧನಗಳ (ಮ್ಯಾಕ್, ಐಪ್ಯಾಡ್, ಐಫೋನ್) ಕಾರ್ಯಾಚರಣಾ ವ್ಯವಸ್ಥೆಯ ಸುಧಾರಿತ ಆವೃತ್ತಿ ಐಒಎಸ್ 15 ಕೂಡ ಬಿಡುಗಡೆಯಾಗಿದೆ. ಈ ಹೊಸ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಬಂದಿರುವ ಐಫೋನ್ 13 ಪ್ರೊ ಸಾಧನವನ್ನು ಒಂದು ವಾರ ಬಳಸಿ ನೋಡಿದಾಗಿನ ಅನುಭವ ಇಲ್ಲಿದೆ.

ಮೊದಲ ನೋಟ, ವಿನ್ಯಾಸ
ಕೈಗೆತ್ತಿಕೊಂಡ ತಕ್ಷಣ ಇದೊಂದು ಆಂತರಿಕವಾಗಿಯೂ ಶಕ್ತಿಶಾಲಿಯಾಗಿ, ಬಾಹ್ಯವಾಗಿಯೂ ಗಟ್ಟಿಮುಟ್ಟಾಗಿ ಇರುವ ಸಾಧನ ಎಂಬುದು ಮನದಟ್ಟಾಗುತ್ತದೆ. 6.1 ಇಂಚಿನ ಡಿಸ್‌ಪ್ಲೇ (ಸ್ಕ್ರೀನ್), ಸುತ್ತಲೂ ಸ್ಟೇನ್‌ಲೆಸ್ ಸ್ಟೀಲ್ ಚೌಕಟ್ಟು, ಹಿಂಭಾಗದಲ್ಲಿ ಉಬ್ಬಿದ 3 ಸೆನ್ಸರ್‌ಗಳ ಕ್ಯಾಮೆರಾ ಸೆಟಪ್ ಮತ್ತು ಸ್ವಲ್ಪ ತೂಕ (203 ಗ್ರಾಂ) ಜಾಸ್ತಿ – ಇದು ಆರಂಭದಲ್ಲೇ ಗಮನಕ್ಕೆ ಬರುವ ವಿಚಾರಗಳು. ನೋಡಲು ಆಕರ್ಷಕವಾಗಿಯೂ, ಐಷಾರಾಮಿಯೂ ಆಗಿದೆ.

ಸೂಪರ್ ರೆಟಿನಾ XDR OLED (2352×1170 ಪಿಕ್ಸೆಲ್) ಸ್ಕ್ರೀನ್, ಎ15 ಬಯೋನಿಕ್ ಚಿಪ್‌ಸೆಟ್, 6ಜಿಬಿ RAM, ತಲಾ 12 ಮೆಗಾಪಿಕ್ಸೆಲ್‌ನ ವೈಡ್, ಅಲ್ಟ್ರಾವೈಡ್ ಹಾಗೂ ಟೆಲಿಫೊಟೊ ಲೆನ್ಸ್ ಇರುವ ಹಿಂಭಾಗದ ಕ್ಯಾಮೆರಾ ಹಾಗೂ ಅಷ್ಟೇ ರೆಸೊಲ್ಯುಶನ್ ಇರುವ ಸೆಲ್ಫೀ ಕ್ಯಾಮೆರಾ, 20W ವೇಗದ ಚಾರ್ಜಿಂಗ್ ವ್ಯವಸ್ಥೆ, ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್- ಇವು ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್‌ನ ಹೆಗ್ಗಳಿಕೆಗಳು.

ಹಿಂಭಾಗದ ತ್ರಿವಳಿ ಕ್ಯಾಮೆರಾಗಳು ಉಬ್ಬಿರುವ ಚೌಕಾಕೃತಿಯಲ್ಲಿದ್ದರೆ, ಮುಂಭಾಗದ ಕ್ಯಾಮೆರಾದ ನಾಚ್ (ಕ್ಯಾಮೆರಾ ಲೆನ್ಸ್ ಕಾಣಿಸುವ, ಖಾಲಿ ಜಾಗ) ಐಫೋನ್ 12ಗೆ ಹೋಲಿಸಿದರೆ ಚಿಕ್ಕದಾಗಿರುವುದು ಪ್ಲಸ್ ಪಾಯಿಂಟ್. ಬೆಝೆಲ್ ಕೂಡ (ಸ್ಕ್ರೀನ್ ಸುತ್ತ ಖಾಲಿ ಅಂಚು) ಕಡಿಮೆಯೇ ಇರುವುದರಿಂದ ಹೆಚ್ಚು ವಿಸ್ತಾರವಾಗಿ ಚಿತ್ರಗಳ ವೀಕ್ಷಣೆ ಸಾಧ್ಯ. ಸೂಪರ್ ರೆಟಿನಾ ಡಿಸ್‌ಪ್ಲೇ ಇರುವುದರಿಂದ ಹಿಂದಿನ ಆವೃತ್ತಿಯ ಫೋನ್‌ಗಿಂತ ಐಫೋನ್ 13 ಪ್ರೊದಲ್ಲಿ ವರ್ಣಮಯ ಚಿತ್ರಗಳು ಅತ್ಯುತ್ತಮವಾಗಿ ಕಾಣಿಸುತ್ತವೆ. ಗ್ರಾಫಿಕ್ಸ್ ಇರುವ ಆನಿಮೇಟೆಡ್ ದೃಶ್ಯಗಳು ಅತ್ಯಂತ ಸುಂದರವಾಗಿಯೂ, ನಿಖರವಾಗಿಯೂ ಗೋಚರಿಸುತ್ತದೆ.

ಗುಣಮಟ್ಟ ಹಾಗೂ ಸುರಕ್ಷತೆಗೆ ಹೆಸರಾಗಿರುವ ಆ್ಯಪಲ್, ಈಗ ಐಫೋನ್ 13 ಪ್ರೊ ಫೋನ್ ಮೂಲಕ ಅದ್ಭುತ ಸಾಧನವನ್ನು ಹೊರತಂದಿದೆ. ಈಗಿನ ಐಷಾರಾಮಿ ಫೋನ್‌ಗಳಿಗೆ ಹೋಲಿಸಿದರೆ ಕೊರತೆ ಎಂದರೆ ಟಚ್ ಐಡಿ (ಫಿಂಗರ್‌ಪ್ರಿಂಟ್ ಸ್ಕ್ಯಾನರ್) ಇಲ್ಲದಿರುವುದು ಮತ್ತು ಚಾರ್ಜಿಂಗ್ ವೇಗವನ್ನು 20W ಗೆ ಸೀಮಿತಗೊಳಿಸಿರುವುದು. ಕೋವಿಡ್ ಕಾಲದಲ್ಲಿ ಮಾಸ್ಕ್ ಧರಿಸುವುದು ಅನಿವಾರ್ಯವಿರುವುದರಿಂದ, ಮುಖ ಗುರುತಿಸಿ (ಫೇಸ್ ಐಡಿ) ಸ್ಕ್ರೀನ್ ಅನ್‌ಲಾಕ್ ಮಾಡುವುದು ಕೊಂಚ ತೊಡಕಾಗಬಹುದು. ಯಾಕೆಂದರೆ, ಫೇಸ್ ಅನ್‌ಲಾಕ್ ವ್ಯವಸ್ಥೆಗೆ, ಮೊದಲೇ ದಾಖಲಿಸಿದ್ದರೂ ಮಾಸ್ಕ್ ಧರಿಸಿ ಪ್ರಯತ್ನಿಸಿದಾಗ ಫೋನ್ ಅದನ್ನು ಸ್ವೀಕರಿಸುವುದಿಲ್ಲ.

120Hz ನಷ್ಟು ರೀಫ್ರೆಶ್ ರೇಟ್ ಇರುವ OLED ಡಿಸ್‌ಪ್ಲೇ ಜೊತೆಗೆ ಎ15 ಬಯೋನಿಕ್ ಪ್ರೊಸೆಸರ್ – ಇವುಗಳ ಮಿಳಿತವು ಫೋನನ್ನು ಶಕ್ತಿಶಾಲಿಯಾಗಿಸಿದೆ. ಪ್ರೊ-ಮೋಷನ್ ಎಂಬ ವೈಶಿಷ್ಟ್ಯವಿರುವುದರಿಂದ, ವೇಗದ ಮತ್ತು ಹೆಚ್ಚು ಗ್ರಾಫಿಕ್ಸ್ ಇರುವ ಗೇಮ್ ಆಡುವಾಗ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗಲಿಲ್ಲ. ಮಾತ್ರವಲ್ಲ, ಅತ್ಯಂತ ಸುಲಲಿತವಾಗಿ ಸ್ವೈಪ್ ಮಾಡಬಹುದಾಗಿದೆ. ಈ ಉಕ್ಕಿನ ಚೌಕಟ್ಟು ಎಷ್ಟು ಗಟ್ಟಿ ಇದೆ ಎಂದರೆ, ಒಮ್ಮೆ ಫೋನ್ ಕೈಯಿಂದ ಜಾರಿ ಬಿದ್ದಿತಾದರೂ ಸ್ಕ್ರೀನ್‌ಗಾಗಲೀ, ಒಳಗಿನ ಹಾರ್ಡ್‌ವೇರ್‌ಗಾಗಲೀ ಏನೂ ಆಗಿಲ್ಲ.

ಕ್ಯಾಮೆರಾ, ಸಿನೆಮ್ಯಾಟಿಕ್ ಮೋಡ್
ಅತ್ಯಾಧುನಿಕ ಕ್ಯಾಮೆರಾ ತಂತ್ರಾಂಶ ಐಫೋನ್ 13 ‘ಪ್ರೊ’ ಸಾಧನದ ಹೆಗ್ಗುರುತು. ಸೆನ್ಸರ್ ಆಧಾರಿತ ಒಐಎಸ್ (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ಇದ್ದು, ಲೆನ್ಸ್ ಬದಲಾಗಿ ಸೆನ್ಸರ್ ಅನ್ನೇ ಸ್ಥಿರವಾಗಿಸುವುದರಿಂದ, ಚಿತ್ರಗಳು ಉತ್ತಮ ಗುಣಮಟ್ಟದಲ್ಲಿ ಮೂಡಿಬರುತ್ತವೆ. ಮತ್ತು ಇದರಲ್ಲಿ ಉಲ್ಲೇಖಿಸಲೇಬೇಕಾದ ವಿಚಾರವೆಂದರೆ ವಿಡಿಯೊ ತೆಗೆಯಲು ಇರುವ ಸಿನೆಮ್ಯಾಟಿಕ್ ಮೋಡ್. ಸಾಮಾನ್ಯರೂ ಕೂಡ ಅತ್ಯದ್ಭುತ ವಿಡಿಯೊ ರೆಕಾರ್ಡ್ ಮಾಡಲು ಈ ಮೋಡ್ ಅನುಕೂಲ ಕಲ್ಪಿಸುತ್ತದೆ. ಯಾವುದೇ ವಿಡಿಯೊ ಶೂಟ್ ಮಾಡಬೇಕಾದಾಗ, ನಿರ್ದಿಷ್ಟ ವಸ್ತುವನ್ನೇ ಫೋಕಸ್ ಮಾಡಿ, ಅದರ ಹಿನ್ನೆಲೆಯೆಲ್ಲವೂ ಮಸುಕಾಗಿಸುವ ಪೋರ್ಟ್ರೇಟ್ ಮೋಡ್ ಇದಾಗಿದ್ದರೂ, ಬೇರೆ ಬೇರೆ ವಸ್ತುಗಳನ್ನು ಅಥವಾ ಚಲಿಸುವ ವಸ್ತುವನ್ನೂ ಫೋಕಸ್ ಮಾಡುವ ವೈಶಿಷ್ಟ್ಯವಿದು. ವಿಡಿಯೊ ಶೂಟ್ ಮಾಡಿದ ಬಳಿಕವೂ, ವಸ್ತುವಿನ ಫೋಕಸ್ ಅನ್ನು ಬದಲಾಯಿಸಬಹುದಾಗಿದೆ. HDR ವಿಡಿಯೊ ರೆಕಾರ್ಡಿಂಗ್ ಸಾಮರ್ಥ್ಯವೂ ಇದರಲ್ಲಿದೆ.

3x ಆಪ್ಟಿಕಲ್ ಝೂಮ್ ಹಾಗೂ 15x ಡಿಜಿಟಲ್ ಝೂಮ್ ವೈಶಿಷ್ಟ್ಯವಿದ್ದು, ದೂರದ ವಸ್ತುಗಳ ಫೊಟೊ ತೆಗೆದಾಗ ಹೆಚ್ಚು ಸ್ಪಷ್ಟವಾದ ಚಿತ್ರಗಳು ಮೂಡಿಬರಲು ಇದು ಸಹಾಯಕವಾಗಿದೆ. ಹೊರಾಂಗಣದಲ್ಲಿ ಅದ್ಭುತ ಎಂದು ಹೇಳಬಹುದಾದ ಚಿತ್ರಗಳನ್ನು ಮೂಡಿಸುವ ಈ ಕ್ಯಾಮೆರಾ ಲೆನ್ಸ್‌ಗಳು, ಮಂದ ಬೆಳಕಿನಲ್ಲಿ ಅಥವಾ ಒಳಾಂಗಣದಲ್ಲಿಯೂ ಅತ್ಯುತ್ತಮ ಚಿತ್ರಗಳನ್ನು ಸೆರೆಹಿಡಿದಿವೆ. ಬಣ್ಣಗಳು ಅತ್ಯಂತ ಸಹಜವಾಗಿವೆ. ಪೋರ್ಟ್ರೇಟ್ ಮೋಡ್‌ನಲ್ಲಿ ವ್ಯಕ್ತಿಯ ಚಿತ್ರಗಳು ಮಾತ್ರ ಫೋಕಸ್ ಆಗಿ, ಹಿನ್ನೆಲೆ ಮಸುಕಾಗಿಸಿ ಆಕರ್ಷಕ ಚಿತ್ರಗಳನ್ನು ಸೆರೆಹಿಡಿಯಬಹುದಾಗಿದೆ. ನೈಟ್ ಮೋಡ್ ಸೆಲ್ಫೀ ಚಿತ್ರಗಳು ಸ್ಪಷ್ಟವಾಗಿ ಪಡಿಮೂಡುತ್ತವೆ. ಅದೇ ರೀತಿ, ಫೊಟೋಗ್ರಫಿ ಇಷ್ಟಪಡುವವರಿಗೆ ಇದೊಂದು ಅತ್ಯುಪಯುಕ್ತ ಮತ್ತು ಸೂಕ್ತ ಸಾಧನ. ಸಮೀಪದ ಶಾಟ್‌ಗಳು, ಉದಾಹರಣೆಗೆ ಹೂವಿನ ಶಲಾಕಾಗ್ರದ ಚಿತ್ರವನ್ನು ಅತ್ಯಂತ ಸಮೀಪದಿಂದ ನಿಖರವಾಗಿ ಸೆರೆಹಿಡಿಯಲು, ಮ್ಯಾಕ್ರೋ ಲೆನ್ಸ್ ಅಗತ್ಯವೇ ಇಲ್ಲ. ಪ್ರಧಾನ ಲೆನ್ಸ್‌ನ ಸ್ವಯಂಚಾಲಿತ ಫೋಕಸ್ ಮೋಡ್ ಎಲ್ಲವನ್ನೂ ಸಶಕ್ತವಾಗಿ ನಿಭಾಯಿಸುತ್ತದೆ. ಇನ್ನು, ಈ ಯೂಟ್ಯೂಬ್ ಯುಗದಲ್ಲಿ ವಿಡಿಯೊ ಮಾಡಿ ಹಣ ಗಳಿಕೆಯಲ್ಲಿ ತೊಡಗಿರುವವರಿಗೆ ಕಿರುಚಿತ್ರ ನಿರ್ಮಾಣಕ್ಕೆ ಸಿನೆಮ್ಯಾಟಿಕ್ ಮೋಡ್ ಒಂದು ವರದಾನವೇ ಹೌದು.

ಈ ಕ್ಯಾಮೆರಾದ ಸ್ಮಾರ್ಟ್ ಹೆಚ್‌ಡಿಆರ್ ವ್ಯವಸ್ಥೆಯು ಮಾನವನ ಕಣ್ಣು ನೋಡಿದಷ್ಟೇ ನಿಖರ ವರ್ಣ ವ್ಯವಸ್ಥೆಯೊಂದಿಗೆ ಚಿತ್ರಗಳನ್ನೂ ತೋರಿಸುತ್ತದೆ.

ಫೊಟೊ ತೆಗೆಯಲು ಹಲವಾರು ಫಿಲ್ಟರ್‌ಗಳಿವೆ. ವಿಡಿಯೊಗಳಂತೂ ಅದ್ಭುತವಾಗಿ ಮೂಡಿಬರುವುದಕ್ಕೆ ಸಿನೆಮ್ಯಾಟಿಕ್ ಮೋಡ್ ಪ್ರಧಾನ ಕಾರಣ. ಹೀಗಾಗಿ, ಸಾಮಾನ್ಯ ಛಾಯಾಗ್ರಹಣ ಹಾಗೂ ಸಿನಿಮಾಟೋಗ್ರಫಿ ಮಾಡುವವರಿಗೆ ಇದೊಂದು ಅಮೂಲ್ಯ ಆಸ್ತಿಯಾಗಬಹುದು.

ಬ್ಯಾಟರಿ ಬಗ್ಗೆ ಹೇಳುವುದಾದರೆ, ಅದರ ಚಾರ್ಜ್ ಸಾಮರ್ಥ್ಯ ಎಷ್ಟೆಂಬುದನ್ನು ಆ್ಯಪಲ್ ಹೇಳಿಕೊಂಡಿಲ್ಲವಾದರೂ, ಸಾಮಾನ್ಯ ಬಳಕೆ (ಇಂಟರ್ನೆಟ್ ಬ್ರೌಸಿಂಗ್, ಸೋಷಿಯಲ್ ಮೀಡಿಯಾ ಬಳಕೆ, ಇಮೇಲ್) ಸಂದರ್ಭ ಎರಡು ದಿನಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಗೇಮಿಂಗ್, ವಿಡಿಯೊ ಹೆಚ್ಚು ಪ್ಲೇ ಮಾಡಿದರೆ, ಬ್ಯಾಟರಿ ಹೆಚ್ಚು ಬೇಕಾಗುತ್ತದೆ. ಬ್ಯಾಟರಿಗೆ 20W ವೇಗದ ಚಾರ್ಜಿಂಗ್ ವ್ಯವಸ್ಥೆಯಿದೆ. ಇನ್ನೂ ವೇಗವಾಗಿ ಚಾರ್ಜ್ ಆಗಬೇಕಾಗುತ್ತದೆ ಎಂಬುದು ಅನುಭವಕ್ಕೆ ಬಂದ ವಿಚಾರ. ಬಾಕ್ಸ್‌ನಲ್ಲಿ ಟೈಪ್-ಸಿಯಿಂದ ಲೈಟ್ನಿಂಗ್ ಪೋರ್ಟ್‌ಗೆ ಸಂಪರ್ಕಿಸಬಲ್ಲ ಚಾರ್ಜಿಂಗ್ ಕೇಬಲ್ ಮಾತ್ರ ನೀಡಲಾಗಿದ್ದು, ಅಡಾಪ್ಟರ್ ಇಲ್ಲ.

ಇದರಲ್ಲಿ ಐಒಎಸ್ 15 (ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ) ಇರುವುದರಿಂದ, ನೋಟಿಫಿಕೇಶನ್‌ಗಳ ಗುಚ್ಛ ವೀಕ್ಷಣೆ ಸುಲಭವಾಗಿದೆ. ಜೊತೆಗೆ, ಕಾರ್ಯವ್ಯಸ್ತತೆಯ ವೇಳೆ ಕರೆ, ಸಂದೇಶಗಳಿಂದ ತೊಂದರೆಯಾಗದಂತಿರಲು ಫೋಕಸ್ ಮೋಡ್ ಇದೆ; ಫೇಸ್‌ಟೈಮ್ ಕರೆಯಲ್ಲಿ ಪೋರ್ಟ್ರೇಟ್ ಚಿತ್ರದ ವ್ಯವಸ್ಥೆ ಅಳವಡಿಸಲಾಗಿದೆ. ಆಂಡ್ರಾಯ್ಡ್‌ನ ಗೂಗಲ್ ಲೆನ್ಸ್ ಮಾದರಿಯಲ್ಲಿ ಲೈವ್ ಟೆಕ್ಸ್ಟ್ ಎಂಬ ವೈಶಿಷ್ಟ್ಯ ಪರಿಚಯಿಸಲಾಗಿದೆ. ಪಠ್ಯದ ಗಾತ್ರವನ್ನು ನಿರ್ದಿಷ್ಟ ಆ್ಯಪ್‌ಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದಾಗಿದೆ.

ಕ್ಲಿಕ್ ಮಾಡಿ ನೋಡಿ: ಐಒಎಸ್‌ನ 6 ಪ್ರಮುಖ ವೈಶಿಷ್ಟ್ಯಗಳು

ಬೆಲೆ
ನಾಲ್ಕು ಸ್ಟೋರೇಜ್ ಮಾದರಿಗಳಲ್ಲಿ ಐಫೋನ್ 13 ‘ಪ್ರೊ’ ಮಾರುಕಟ್ಟೆಗೆ ಬಂದಿದೆ. 128GB, 256GB, 512GB ಹಾಗೂ ಇದೇ ಮೊದಲ ಬಾರಿಗೆ 1TB (ಟೆರಾಬೈಟ್) ಸಂಗ್ರಹ ಸಾಮರ್ಥ್ಯದ ಐಫೋನ್ 13 ಪ್ರೊ ಪರಿಚಯಿಸಲಾಗಿದೆ. ಅನುಕ್ರಮವಾಗಿ ಇವುಗಳ ಬೆಲೆ ₹1,19,900, ₹1,29,900, ₹1,49,900 ಹಾಗೂ ₹1,69,900. ಗ್ರಾಫೈಟ್, ಸಿಲ್ವರ್, ಗೋಲ್ಡ್, ಸಿಯೆರಾ ಬ್ಲೂ ಹೀಗೆ 4 ಬಣ್ಣಗಳಲ್ಲಿ ಇದು ಮಾರುಕಟ್ಟೆಯಲ್ಲಿ ದೊರೆಯುತ್ತಿದೆ.

ಒಟ್ಟಾರೆಯಾಗಿ, ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಕ್ಯಾಮೆರಾ ಗುಣಮಟ್ಟ ಹೆಚ್ಚಿಸಲಾಗಿದೆ, ಅದ್ಭುತವಾದ ಡಿಸ್‌ಪ್ಲೇ, ಬ್ಯಾಟರಿ ಚಾರ್ಜಿಂಗ್ ಬಾಳಿಕೆ, ವೇಗ ಹೆಚ್ಚಿದೆ, 120Hz ರೀಫ್ರೆಶ್ ರೇಟ್ ಮೂಲಕ ಸುಲಲಿತ ಬ್ರೌಸಿಂಗ್/ಸ್ವೈಪಿಂಗ್ – ಇವು ಎದ್ದುಕಾಣುವ ವಿಚಾರಗಳು. ಹಿಂದಿನ ಐಫೋನ್ ಆವೃತ್ತಿ ಇದ್ದವರು, ಹೆಚ್ಚು ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮವಾದ ಕ್ಯಾಮೆರಾ ಬೇಕು, ಐಷಾರಾಮಿ ಫೋನ್ ಬೇಕು ಅಂತ ಅನ್ನಿಸಿದರೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು.

My Article (Gadget Review) Published in Prajavani on 5/6 October 2021

LEAVE A REPLY

Please enter your comment!
Please enter your name here