iPad 9th Gen Review: ಅದ್ಭುತ ವೇಗದ ಬ್ರೌಸಿಂಗ್, ಕಣ್ಣುಗಳಿಗೆ ಹಿತಕರ

0
378

ಟ್ಯಾಬ್ಲೆಟ್ ಅಥವಾ ಐಪ್ಯಾಡ್ – ಇವು ಸ್ಮಾರ್ಟ್ ಫೋನ್‌ಗಿಂತ ದೊಡ್ಡದಾದ, ಆದರೆ ಲ್ಯಾಪ್‌ಟಾಪ್‌ಗಳಿಗಿಂತ ಚಿಕ್ಕದಾದ, ಎಲ್ಲಿ ಬೇಕೆಂದರಲ್ಲಿ ಒಯ್ಯಲು ಸುಲಭವಾಗುವ ಗ್ಯಾಜೆಟ್‌ಗಳು. ಜನರಿಗೆ, ಸ್ಮಾರ್ಟ್‌ಫೋನ್ ಮೊದಲ ಆದ್ಯತೆಯಾದರೆ, ಲ್ಯಾಪ್‌ಟಾಪ್ ಎರಡನೇ ಆದ್ಯತೆ. ಮೂರನೇ ಸ್ಥಾನ ಈ ಟ್ಯಾಬ್ಲೆಟ್ ಅಥವಾ ಐಪ್ಯಾಡ್‌ಗಳಿಗೆ.

ಇತ್ತೀಚೆಗೆ ಕೋವಿಡ್ ಕಾರಣದಿಂದಾಗಿ ಮನೆಯಿಂದಲೇ ಕೆಲಸ ಅಥವಾ ತರಗತಿ ವ್ಯವಸ್ಥೆಯು ಜಾರಿಗೆ ಬಂದ ಬಳಿಕ, ಮೀಟಿಂಗ್, ತರಗತಿಗಳೆಲ್ಲವನ್ನೂ ಚಿಕ್ಕ ಸ್ಕ್ರೀನ್‌ನಲ್ಲಿ ನೋಡುತ್ತಿದ್ದರೆ ಕಣ್ಣುಗಳಿಗೆ ತ್ರಾಸ ಜಾಸ್ತಿ ಎಂಬ ಕಾರಣಕ್ಕೆ, ದೊಡ್ಡ ಸ್ಕ್ರೀನ್ ಇರುವ ಟ್ಯಾಬ್ಲೆಟ್ ಅಥವಾ ಐಪ್ಯಾಡ್ ಬಳಸುವುದು ಜಾಸ್ತಿಯಾಗಿದೆ. ಈ ಹಿನ್ನೆಲೆಯೊಂದಿಗೆ, ಆ್ಯಪಲ್ ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ 9ನೇ ಪೀಳಿಗೆಯ, 10.2 ಇಂಚು ಸ್ಕ್ರೀನ್ ಉಳ್ಳ ಐಪ್ಯಾಡ್-9 ಅನ್ನು ಒಂದು ವಾರ ಬಳಸಿ ನೋಡಿದಾಗ ಗಮನಿಸಿದ ಪ್ರಮುಖ ಅಂಶ ಅದರ ವೇಗದ ಕಾರ್ಯಾಚರಣೆ. 2020ರ ಐಪ್ಯಾಡ್‌ಗೂ 2021ರ ಐಪ್ಯಾಡ್‌ಗೂ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯಾಗಿದೆ.

ನೋಟ, ವಿನ್ಯಾಸ
ತೆಳ್ಳಗಿರುವ ಈ ಐಪ್ಯಾಡ್‌ನ ಸ್ಕ್ರೀನ್ (ಪರದೆ) 10.2 ಇಂಚು ಇದೆ. ಐಪಿಎಸ್ ಸ್ಕ್ರೀನ್‌ನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಬೆಝೆಲ್ (ಸ್ಕ್ರೀನ್‌ನಲ್ಲಿ ಏನೂ ಗೋಚರಿಸದ ಖಾಲಿ ಭಾಗ) ಜಾಸ್ತಿಯೇ ಇದೆ. ಕೆಳಭಾಗದಲ್ಲಿ ವೃತ್ತಾಕಾರದ ಹೋಮ್ ಬಟನ್ ಮತ್ತು ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಇದೆ. ಈ ಪೋರ್ಟ್‌ನ ಎರಡೂ ಭಾಗದಲ್ಲಿ ಸ್ಪೀಕರ್‌ಗಳಿವೆ. ಎಡ ಮೇಲ್ಭಾಗದಲ್ಲಿ 3.5 ಮಿಮೀ ಹೆಡ್‌ಫೋನ್ ಜ್ಯಾಕ್ ಹಾಗೂ ಬಲ ಮೇಲ್ಭಾಗದಲ್ಲಿ ಪವರ್ ಬಟನ್ ಇದೆ. ಸ್ಕ್ರೀನ್‌ನಲ್ಲಿ ವಿಡಿಯೊ ಕರೆಗಳಿಗೆ ಅನುವಾಗುವಂತೆ ಕ್ಯಾಮೆರಾ ಮಧ್ಯ ಭಾಗದಲ್ಲಿದ್ದರೆ, ಹಿಂಭಾಗದ ಕ್ಯಾಮೆರಾ ಒಂದು ಪಾರ್ಶ್ವದಲ್ಲಿದೆ.

ಕೇವಲ 7.5 ಮಿಮೀ ದಪ್ಪ ಇರುವ ಐಪ್ಯಾಡ್, ಸುಮಾರು ಅರ್ಧ ಕೆಜಿ ತೂಕ ಹೊಂದಿದೆ. ಆದರೆ, ಅದರಲ್ಲಿ ಆ್ಯಪಲ್ ಎ13 ಬಯೋನಿಕ್ ಚಿಪ್‌ಸೆಟ್ ಜೊತೆಗೆ 3ಜಿಬಿಯಷ್ಟು RAM ಇರುವುದರಿಂದ, ಒಳಗಿನಿಂದಲೂ ಶಕ್ತಿಶಾಲಿಯಾಗಿದೆ. ಹಿಂದಿನ ಐಪ್ಯಾಡ್‌ಗಳಿಗೆ ಹೋಲಿಸಿದರೆ, ತುಂಬಾ ಸುಲಲಿತವಾಗಿ ಇದರಲ್ಲಿ ಬ್ರೌಸ್ ಮಾಡಬಹುದು, ಸ್ವೈಪ್ ಮಾಡಬಹುದಾಗಿದೆ. ಎಂದಿನಂತೆ ಭೌತಿಕ ಹೋಂ ಬಟನ್ ಇದ್ದು, ಇದರಲ್ಲಿ ಟಚ್ ಐಡಿ ಕೆಲಸ ಮಾಡುತ್ತದೆ. ಅಂದರೆ, ಸ್ಕ್ರೀನ್ ಅನ್‌ಲಾಕ್ ಮಾಡುವುದಕ್ಕೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಈ ಬಟನ್‌ನಲ್ಲೇ ಅಡಕವಾಗಿದೆ.

ಪ್ರಮುಖ ಸುಧಾರಣೆಯೆಂದರೆ, ಮುಂಭಾಗದ ಕ್ಯಾಮೆರಾದ ಸ್ಥಾನ. ಫೇಸ್‌ಟೈಮ್ ಅಥವಾ ಯಾವುದೇ ವಿಡಿಯೊ ಕರೆಗಳಿಗೆ ಅನುಕೂಲವಾಗುವಂತೆ ಅದನ್ನು ಸ್ಕ್ರೀನ್‌ನ ಮಧ್ಯ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ. ಗ್ರೂಪ್ ಕರೆಗಳ ಸಂದರ್ಭದಲ್ಲಿ ಮಾತನಾಡುವವರು ಮಧ್ಯಭಾಗದಲ್ಲಿ ಎದ್ದುಕಾಣಿಸುವಂತೆ ತೋರಿಸುವ ‘ಸೆಂಟರ್ ಸ್ಟೇಜ್’ ವ್ಯವಸ್ಥೆ ಇಲ್ಲಿದೆ. ಝೂಮ್, ವೆಬೆಕ್ಸ್ ಮುಂತಾದ ವಿಡಿಯೊ ಕಾನ್ಫರೆನ್ಸಿಂಗ್ ಆ್ಯಪ್‌ಗಳಲ್ಲಿಯೂ ಇದು ಕೆಲಸ ಮಾಡುತ್ತದೆ. ಕರೆ ಜೊತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಮೋಜಿಗಾಗಿ ಹಂಚಿಕೊಳ್ಳುವುದಕ್ಕಾಗಿ ನಮ್ಮದೇ ವ್ಯಂಗ್ಯಭಾವದ ವಿಡಿಯೊಗಳನ್ನೂ ಶೂಟ್ ಮಾಡಿಕೊಳ್ಳಬಹುದು. ಹೆಚ್‌ಡಿ ಗುಣಮಟ್ಟದ ವೀಡಿಯೊ ಕರೆಗಳನ್ನು ಮಾಡಬಹುದಾಗಿದ್ದು, 122 ಡಿಗ್ರಿ ವ್ಯಾಪ್ತಿಯಲ್ಲಿ ಅದು ವಿಡಿಯೊ ಸೆರೆಹಿಡಿಯುತ್ತದೆ. ಹೀಗಾಗಿ, ಕೌಟುಂಬಿಕ ಕರೆಗಳು, ಗ್ರೂಪ್ ಕರೆಗಳಿಗೆ ಅನುಕೂಲಕರ. ರೆಟಿನಾ ಡಿಸ್‌ಪ್ಲೇ ಮತ್ತು ಟ್ರೂಟೋನ್ ವ್ಯವಸ್ಥೆಯಿರುವುದರಿಂದ ಚಲನಚಿತ್ರಗಳು, ವಿಡಿಯೊ ವೀಕ್ಷಣೆಯು ಅತ್ಯಂತ ಆನಂದದಾಯಕವಾಗುತ್ತದೆ. ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸರ್‌ನ ಕ್ಯಾಮೆರಾ ಇದೆ. ಇದು ವೀಡಿಯೊ ಕರೆಗಳಿಗಾಗಿಯೇ ಇರುವುದರಿಂದ, ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ಇದರಲ್ಲಿ ನಿರೀಕ್ಷಿಸಲಾಗದು. ‘ಲೈವ್ ಟೆಕ್ಸ್ಟ್’ ಬೆಂಬಲಿಸುವುದರಿಂದ, ಯಾವುದೇ ಚಿತ್ರದಲ್ಲಿರುವ ಅಕ್ಷರಗಳನ್ನು ನಕಲಿಸುವುದು, ಅದರ ಬಗ್ಗೆ ಇಂಟರ್ನೆಟ್‌ನಲ್ಲಿ ಹುಡುಕುವುದು ಸಾಧ್ಯವಾಗುತ್ತದೆ.

ಐಪ್ಯಾಡ್‌ನಲ್ಲಿ ಇದೇ ಮೊದಲ ಬಾರಿಗೆ ಈ ಟ್ರೂಟೋನ್ ಎಂಬ ವೈಶಿಷ್ಟ್ಯವನ್ನು ಅಳವಡಿಸಲಾಗಿದೆ. ಅಂದರೆ, ಸ್ಕ್ರೀನ್‌ನಲ್ಲಿ ಚಿತ್ರಗಳು ಸುತ್ತಮುತ್ತಲಿನ ಬೆಳಕಿಗೆ ಅನುಗುಣವಾಗಿ ತಾನಾಗಿ ನೈಜಬಣ್ಣ ಹಾಗೂ ಬೆಳಕಿನ ಪ್ರಖರತೆಯನ್ನು ಹೊಂದಿಸಿಕೊಳ್ಳಬಲ್ಲ ತಂತ್ರಜ್ಞಾನವಿದು. ಇದನ್ನು ಕಂಟ್ರೋಲ್ ಸೆಂಟರ್ ಮೂಲಕ ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದಾಗಿದೆ. ಜೊತೆಗೆ, ಹಿಂದಿನ ಆವೃತ್ತಿಗೆ ಹೋಲಿಸಿದರೆ, ಮೂಲಭೂತ (ಬೇಸಿಕ್) ಐಪ್ಯಾಡ್‌ನ ಸ್ಟೋರೇಜ್ ಕೂಡ 32ರಿಂದ 64 ಜಿಬಿಗೆ ಏರಿಸಲಾಗಿದೆ. ಮತ್ತೊಂದು ಆವೃತ್ತಿ 256 ಜಿಬಿಯದು. ವೈಫೈಯಲ್ಲಿ ಮಾತ್ರವೇ ಕೆಲಸ ಮಾಡಬಲ್ಲ ಮತ್ತು 4ಜಿ (ಎಲ್‌ಟಿಇ) ನ್ಯಾನೋ ಸಿಮ್ ಕಾರ್ಡ್ ಅಳವಡಿಸಬಹುದಾದ ಮಾದರಿಗಳೂ ಇವೆ.

ಪೆನ್ಸಿಲ್ ಮತ್ತು ಸ್ಮಾರ್ಟ್ ಕೀಬೋರ್ಡ್ ಬೆಂಬಲ
ಆ್ಯಪಲ್ ಪೆನ್ಸಿಲ್‌ಗೆ ಐಪ್ಯಾಡ್ 9ನೇ ಸರಣಿಯಲ್ಲೂ ಬೆಂಬಲವಿದೆ. ಪ್ರಖರವಾದ ಮತ್ತು ನಿಖರವಾದ ರೆಟಿನಾ ಡಿಸ್‌ಪ್ಲೇ (260 ಪಿಕ್ಸೆಲ್ಸ್ ಪರ್ ಇಂಚ್) ಮತ್ತು ಅತ್ಯಗತ್ಯ ಆ್ಯಪ್‌ಗಳ ಲಭ್ಯತೆಯು ಆ್ಯಪಲ್ ಐಪ್ಯಾಡ್ ಒಎಸ್ 15ರ ಕಾರ್ಯಾಚರಣಾ ವ್ಯವಸ್ಥೆಗೆ ಪೂರಕವಾಗಿ ಒದಗಿಬಂದಿದೆ.

ಸ್ಕ್ರೀನ್ ಮೂಲಕ ಈ ಪೆನ್ಸಿಲ್‌ನಿಂದ ಬರೆದರೆ ಅದು ಪಠ್ಯವಾಗಿ ಪರಿವರ್ತನೆಯೂ ಆಗುತ್ತದೆ, ಒಳ್ಳೆಯ ಚಿತ್ರವನ್ನೂ ಕೈಯಿಂದಲೇ ರಚಿಸಬಹುದಾಗಿದೆ. ವಿನ್ಯಾಸಕಾರರಿಗೆ, ಕಲಾವಿದರಿಗೆ ಇದೊಂದು ಅತ್ಯುಪಯುಕ್ತ ಪರಿಕರ. ಜೊತೆಗೆ, ಮೀಟಿಂಗ್ ಅಥವಾ ತರಗತಿಗಳ ಸಂದರ್ಭದಲ್ಲಿ, ಸ್ಕ್ರೀನ್ ಮೇಲೆಯೇ ನೋಟ್ ಆ್ಯಪ್ ಮೂಲಕ ಟಿಪ್ಪಣಿ ಮಾಡಿಕೊಳ್ಳುವುದಕ್ಕೆ ಪೆನ್ಸಿಲ್ ನೆರವಾಗುತ್ತದೆ. ಪೆನ್ಸಿಲ್ ಉತ್ತಮವಾಗಿಯೇ ಮೂಲಕ ಸ್ಕ್ರೀನ್ ಮೇಲೆ ಬರೆದು, ಅಲ್ಲಿಂದಲೇ ನೇರವಾಗಿ ಇಂಟರ್ನೆಟ್ ಸರ್ಚ್ ಮಾಡುವುದಕ್ಕೆ ಅನುಕೂಲವಿದೆ.

ಸ್ಮಾರ್ಟ್ ಕೀಬೋರ್ಡ್ ಬೆಂಬಲವಿದೆಯಾದರೂ, ಅದರ ಕೀಲಿಗಳು ಹೆಚ್ಚು ಟೈಪ್ ಮಾಡುವವರಿಗೆ ಸ್ವಲ್ಪ ಗಟ್ಟಿ ಎನಿಸಬಹುದು. ಕೀಬೋರ್ಡನ್ನು ಆಯಸ್ಕಾಂತೀಯವಾಗಿ ಐಪ್ಯಾಡ್‌ಗೆ ಜೋಡಿಸಲು ವ್ಯವಸ್ಥೆಯಿದೆ. ಅದು ಸ್ಕ್ರೀನ್ ರಕ್ಷಕವಾಗಿಯೂ, ಐಪ್ಯಾಡ್ ಸ್ಟ್ಯಾಂಡ್ ಆಗಿಯೂ ಕೆಲಸ ನಿಭಾಯಿಸುತ್ತದೆ. ಹೆಚ್ಚು ದಪ್ಪವಿಲ್ಲದ ಕಾರಣ ಐಪ್ಯಾಡ್ ಜೊತೆಗೇ ಒಯ್ಯುವುದು ಸುಲಭ. ಪವರ್ ಕನೆಕ್ಟರ್ ಮೂಲಕವೇ ಐಪ್ಯಾಡ್ ಜೊತೆ ಇದು ಸಂಪರ್ಕವಾಗುವುದರಿಂದ, ಇದಕ್ಕೆ ಪ್ರತ್ಯೇಕ ಚಾರ್ಜಿಂಗ್ ಅಥವಾ ಬ್ಲೂಟೂತ್ ಸಂಪರ್ಕವೇನೂ ಬೇಕಾಗಿಲ್ಲ. ಐಪ್ಯಾಡ್ಒಎಸ್ 15ರಲ್ಲಿ ಲಕ್ಷಾಂತರ ವೈವಿಧ್ಯಮಯ ಆ್ಯಪ್‌ಗಳಿಗೆ ಬೆಂಬಲ ಇರುವುದರಿಂದ, ದೊಡ್ಡ ಪರದೆಯಲ್ಲೇ ಸ್ಮಾರ್ಟ್ ಫೋನ್ ಹಾಗೂ ಲ್ಯಾಪ್‌ಟಾಪ್‌ನಲ್ಲಿ ಮಾಡಬಲ್ಲ ಕೆಲಸಗಳನ್ನು ಈ ಐಪ್ಯಾಡ್‌ನಲ್ಲಿ ಮಾಡುವುದು ಸುಲಲಿತವಾಗುತ್ತದೆ. ಮಲ್ಟಿಟಾಸ್ಕಿಂಗ್, ಎಂದರೆ ಏಕಕಾಲಕ್ಕೆ ಹಲವು ಆ್ಯಪ್‌ಗಳನ್ನು ತೆರೆದಿಟ್ಟು ಕೆಲಸ ಮಾಡಿದರೂ ಯಾವುದೇ ರೀತಿಯಲ್ಲೂ ಸ್ಥಾಗಿತ್ಯದ ಅಥವಾ ಹ್ಯಾಂಗಿಂಗ್ ಅನುಭವವಾಗಿಲ್ಲ. ಇದಕ್ಕೆ ಕಾರಣ, ಇದರ ಶಕ್ತಿಶಾಲಿ ಎ13 ಬಯೋನಿಕ್ ಚಿಪ್‌ಸೆಟ್.

ಅಂತರ್‌ನಿರ್ಮಿತ ಸ್ಪೀಕರ್ ಮೂಲಕ ಹಾಡುಗಳನ್ನು ಆಲಿಸುವುದು ಹಿತಕರವಲ್ಲದಿದ್ದರೂ, 3.5 ಮಿಮೀ ಜ್ಯಾಕ್ ಇರುವುದರಿಂದ ಹೆಡ್‌ಫೋನ್ ಮೂಲಕ ಅತ್ಯುತ್ತಮವಾಗಿ ಸಂಗೀತ ಆಲಿಸಬಹುದು.

ಇನ್ನು ಗಮನಿಸಬೇಕಾದ ಸಂಗತಿಯೆಂದರೆ, ಪರಿಸರ ರಕ್ಷಣೆಗೆ ಆ್ಯಪಲ್ ಕಂಪನಿಯ ಕೊಡುಗೆ ಬಹಳಷ್ಟಿದೆ. ಐಫೋನ್ 13 ಸರಣಿಯ ಫೋನ್‌ಗಳು ಮತ್ತು ಅತ್ಯಾಧುನಿಕ ಐಪ್ಯಾಡ್‌ಗಳಲ್ಲಿ ಬಹುತೇಕ ಮರುಸಂಸ್ಕರಣೆ ಮಾಡಿದ ಲೋಹಗಳನ್ನೇ ಬಳಸಲಾಗಿದೆ. ಐಪ್ಯಾಡ್‌ನಲ್ಲಿ ಶೇ.100ರಷ್ಟು ಪ್ರಮಾಣದಲ್ಲಿ ಅಲ್ಯೂಮೀನಿಯಂ ಕವಚ, ಒಳಗಿನ ಸರ್ಕಿಟ್‌ನಲ್ಲಿ ಸೋಲ್ಡರಿಂಗ್‌ಗೆ ಬಳಸುವ ತವರ ಮತ್ತು ಅಯಸ್ಕಾಂತೀಯ ಲೋಹಕ್ಕೂ ಶೇ.100ರಷ್ಟು ಮರುಬಳಕೆ ಮಾಡಲಾಗುತ್ತಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಒಟ್ಟಿನಲ್ಲಿ, ಮಲ್ಟಿ ಟಾಸ್ಕಿಂಗ್, ಮಕ್ಕಳಿಗೆ ಆನ್‌ಲೈನ್ ತರಗತಿ, ದೊಡ್ಡವರಿಗೆ ಆನ್‌ಲೈನ್ ಮೀಟಿಂಗ್‌ಗೆ ಮತ್ತು ದೊಡ್ಡ ಪರದೆಯಲ್ಲಿ ವಿಡಿಯೊ ವೀಕ್ಷಿಸಲು, ಗೇಮ್ ಆಡುವುದಕ್ಕೆ ಈ ಐಪ್ಯಾಡ್ ಅನುಕೂಲಕರ. ಒಯ್ಯುವುದು ಸುಲಭ. 10.2 ಇಂಚಿನ ಐಪ್ಯಾಡ್ 9ನೇ ಸರಣಿಯ ಬೆಲೆ 64 ಜಿಬಿ ಮಾಡೆಲ್‌ಗೆ ₹30,900 (ಸಿಮ್ ಕಾರ್ಡ್ ಅಳವಡಿಸಬಹುದಾದ ಮಾಡೆಲ್‌ಗೆ ₹42,900) ಹಾಗೂ 256 ಜಿಬಿ ಮಾಡೆಲ್‌ಗೆ ₹44,900 (ಸಿಮ್ ಕಾರ್ಡ್ ಹಾಕಬಹುದಾದ ಮಾಡೆಲ್‌ಗೆ ₹56,900).

ಪ್ರಮುಖ ಅಂಶಗಳು
ಗಾತ್ರ: 250.6×174.1×7.5mm
ಕ್ಯಾಮೆರಾ: 12MP ಅಲ್ಟ್ರಾವೈಡ್ ಸೆನ್ಸರ್ ಮುಂಭಾಗದ, 8MP ಹಿಂಭಾಗದ ಕ್ಯಾಮೆರಾ
ತೂಕ: 487 ಗ್ರಾಂ (ವೈಫೈ ಮಾತ್ರ); 498 ಗ್ರಾಂ(ವೈಫೈ+ಸೆಲ್ಯುಲಾರ್)
ಪ್ರೊಸೆಸರ್: ಆ್ಯಪಲ್ A13 ಬಯೋನಿಕ್, 3GB RAM
ಸ್ಕ್ರೀನ್ ರೆಸೊಲ್ಯುಶನ್: 2160×1620
ಸ್ಕ್ರೀನ್: 10.2 ಇಂಚು ಐಪಿಎಸ್ ರೆಟಿನಾ
ಸ್ಟೋರೇಜ್: 64GB/256GB

My Gadget Review Published in Prajavani on 19/20 Oct 2021

LEAVE A REPLY

Please enter your comment!
Please enter your name here