ರಾಜ್ಯಪಾಲ ಹುದ್ದೆಯ ಘನತೆ ಎಲ್ಲಿ ಹೋಯಿತು!

0
590

ಈ ರಾಜ್ಯಪಾಲ ಹುದ್ದೆ ಇರುವುದೇ ದೇಶದ ಯಾವುದೇ ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಮಟ್ಟ ಹಾಕುವುದಕ್ಕಾಗಿಯೇ? ಸದಾ ಕಿರುಕುಳ ನೀಡುತ್ತಾ ಅವುಗಳನ್ನು ಕೆಲಸ ಮಾಡಲು ಬಿಡದೇ ಇರುವುದಕ್ಕಾಗಿಯೇ? ಈ ಮೂಲಕ ಜನರನ್ನು ಕೂಡ ಅಭಿವೃದ್ಧಿ-ವಂಚಿತರನ್ನಾಗಿ ಮಾಡುವುದಕ್ಕಾಗಿಯೇ? ಕಳೆದೆರಡು ದಶಕಗಳಲ್ಲಿ ಬಿಹಾರ, ಗೋವಾ, ಜಾರ್ಖಂಡ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮುಂತಾದೆಡೆ ನಡೆದ ಘಟನೆಗಳನ್ನು ಅವಲೋಕಿಸಿದರೆ ಈ ಪ್ರಶ್ನೆಗೆ ಉತ್ತರ ದೊರೆಯುತ್ತದೆ.

ಈಗ ಕರ್ನಾಟಕದಲ್ಲಿಯೂ ಆಗುತ್ತಿರುವುದು ಹೀಗೆಯೇ. ಎಷ್ಟೇ ಹಗರಣ ಎಂದು ಹೋರಾಟ, ಪಾದಯಾತ್ರೆ, ಪ್ರತಿಭಟನಾ ಸಮಾವೇಶ, ಜನಾಂದೋಲನ, ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಹಾಕಿ, ರೆಸಾರ್ಟ್ ರಾಜಕಾರಣ ಇತ್ಯಾದಿಗಳ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಸರಕಾರ ಉರುಳಿಸಲು ಮಾಡಿರುವ ಎಲ್ಲ ಪ್ರಯತ್ನಗಳು ವಿಫಲವಾಗಿ, ಯಡಿಯೂರಪ್ಪ ಗಟ್ಟಿಯಾಗಿ ಕುರ್ಚಿಯಲ್ಲಿ ಕೂತಿದ್ದಾರೆ. ಆನಂತರದ ಚುನಾವಣೆಗಳಲ್ಲಿ ಕೂಡ ಬಿಜೆಪಿಯೇ ಮೇಲುಗೈ ಸಾಧಿಸುತ್ತಿದೆ, ತಮ್ಮ ಪಕ್ಷಗಳ ಪಂಚಾಂಗ ಕುಸಿಯುತ್ತಿದೆ ಎಂಬುದು ಅವುಗಳ ಅನುಭವಕ್ಕೆ ಬಂದಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಂದಿನಿಂದ 19 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದಕ್ಕಿದ್ದು ಎರಡು ಸ್ಥಾನಗಳು ಮಾತ್ರ. ತೀರಾ ಇತ್ತೀಚೆಗಿನ (ಚನ್ನಪಟ್ಟಣ, ಬಂಗಾರಪೇಟೆ ಮತ್ತು ಜಗಳೂರು) ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ. ಹೀಗಾಗಿ, ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಗೆಲ್ಲುವುದು ಸಾಧ್ಯವಿಲ್ಲ ಎಂದುಕೊಂಡಿರುವ ಕಾಂಗ್ರೆಸ್, ಈ ರೀತಿಯಾಗಿ ಸರಕಾರವನ್ನು ವಜಾಗೊಳಿಸಿ, ರಾಜ್ಯಪಾಲರ ಆಳ್ವಿಕೆಯ ಮೂಲಕ ಛಾಯಾ ಸರಕಾರ ನಡೆಸುವುದಕ್ಕೆ ವಾಮ ಮಾರ್ಗ ಅನುಸರಿಸುತ್ತಿದೆಯೇ ?

ರಾಜ್ಯಪಾಲರು ಕಳುಹಿಸಿದ ವರದಿಯಲ್ಲಿ ನಿಜಕ್ಕೂ ಏನಿದೆ…
ಈಗಿನ ಬೆಳವಣಿಗೆಗಳನ್ನು ನೋಡಿದಾಗ ಈ ಪ್ರಶ್ನೆ ಮನಸ್ಸಿನಲ್ಲಿ ಮೂಡುತ್ತದೆ. ರಾಜ್ಯಪಾಲರು ಅದೇನೋ ವರದಿಯನ್ನು ಕೇಂದ್ರ ಸರಕಾರಕ್ಕೆ ರವಾನಿಸಿದ್ದಾರಂತೆ, ಅದರಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿರಿಸಲು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸುಗಳಿವೆಯಂತೆ ಎಂಬೆಲ್ಲಾ ಅಂತೆ-ಕಂತೆ ಮಾತುಗಳೇ ಬುಧವಾರ ಸಾಯಂಕಾಲದವರೆಗೂ ಕೇಳಿಬರುತ್ತಿದ್ದವು. ನಾಲ್ಕು ದಿನಗಳಿಂದ ಬಿಜೆಪಿ ಈ ಬಗ್ಗೆ ಹುಯಿಲೆಬ್ಬಿಸಿ, ಭರ್ಜರಿಯಾಗಿಯೇ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಸೆಟೆದು ನಿಂತಿದ್ದು, ದೆಹಲಿವರೆಗೂ ಹೋರಾಟವನ್ನು ಕೊಂಡೊಯ್ದಿದೆ. ಈಗ ರಾಜ್ಯಪಾಲರೇ ಸ್ವತಃ ವರದಿಯಲ್ಲೇನಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಒಂದೆಡೆ ರಾಜ್ಯಪಾಲರ ವರದಿಯನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಸಲುವಾಗಿ, ‘ರಾಷ್ಟ್ರಪತಿ ಆಳ್ವಿಕೆ ಹೇರದಿದ್ದರೆ ನಾವು ಶಾಸಕರೆಲ್ಲರೂ ರಾಜೀನಾಮೆ ನೀಡ್ತೀವಿ’ ಅಂತೆಲ್ಲಾ ಹೇಳಿ ಕಾಂಗ್ರೆಸ್ ಪಕ್ಷವು ಹೆದ್ದಾರಿ ಬಂದ್‌ಗಳನ್ನು ಆಯೋಜಿಸಿ ಜನರನ್ನು ಟ್ರಾಫಿಕ್ ಜಾಮ್ ಸಂಕಷ್ಟದಲ್ಲಿ ಸಿಲುಕಿಸಿದ್ದರೆ, ಬಿಜೆಪಿ ತಾನೇನು ಕಡಿಮೆ ಎನ್ನುತ್ತಾ ರಾಜ್ಯಾದ್ಯಂತ ಅಲ್ಲಲ್ಲಿ ಪ್ರತಿಭಟನೆಗಳನ್ನು ಮಾಡಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸತೊಡಗಿದೆ.

ವರದಿಯ ಅಂಶ ಬಚ್ಚಿಟ್ಟದ್ದೇಕೆ…?
ರಾಜ್ಯದಲ್ಲಿ, ದೆಹಲಿಯಲ್ಲಿ ಇಷ್ಟೆಲ್ಲಾ ವಿದ್ಯಮಾನಗಳು ನಡೆಯುತ್ತಿದ್ದರೂ, ರಾಜ್ಯಪಾಲರು ಸಲ್ಲಿಸಿರುವ ಆ ‘ವಿಶೇಷ ವರದಿ’ಯಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸುವ ಗೋಜಿಗೇ ಹೋಗಲಿಲ್ಲ ಕೇಂದ್ರ ಸರಕಾರ. ತಮ್ಮನ್ನು ಸೋಮವಾರ ಸಂಜೆ ಭೇಟಿಯಾದ ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಆಡ್ವಾಣಿಗೆ ಕೂಡ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ‘ವರದಿಯಲ್ಲೇನಿದೆ ಅಂತ ನಾನಿನ್ನೂ ನೋಡಿಲ್ಲ’ ಎಂದು ಹೇಳಿ ಸಾಗಹಾಕಿದ್ದಾರೆ.

ಆದರೆ, ಬೆಳಿಗ್ಗೆ ತಮ್ಮದೇ ಸಂಪುಟ ಸಹೋದ್ಯೋಗಿಗಳಾದ ಚಿದಂಬರಂ, ಕಪಿಲ್ ಸಿಬಾಲ್, ವೀರಪ್ಪ ಮೊಯ್ಲಿ, ಎ.ಕೆ.ಆಂಟನಿ ಮುಂತಾದವರೊಂದಿಗೆ ಚರ್ಚೆ ನಡೆಸಿದ ಬಳಿಕವೂ, ವರದಿಯನ್ನು ಪ್ರಧಾನಿ ಈ ರೀತಿ ನಿಗೂಢವಾಗಿರಿಸಿದ್ದರ ಹಿಂದಿನ ಹಕೀಕತ್ತು ಏನು ಎಂಬುದು ಇನ್ನೂ ಪ್ರಶ್ನಾರ್ಹವೇ ಆಗುತ್ತಿದೆ.

ಏನೋ ನಡೆದಿದೆ…
ಒಟ್ಟಿನಲ್ಲಿ ರಾಜ್ಯಪಾಲರ ಇತ್ತೀಚಿನ ವರ್ತನೆಗಳನ್ನು ನೋಡಿ, ಕಾಂಗ್ರೆಸ್, ಜೆಡಿಎಸ್‌ಗಳು ರಾಜಭವನಕ್ಕೆ ಆಗಾಗ್ಗೆ ಹೋಗಿ ಬರುತ್ತಿದ್ದುದನ್ನು ನೋಡಿದರೆ, ಮತ್ತು ಮೇ 16ರಂದು ಅಧಿವೇಶನ ಕರೆಯುವ ತಮ್ಮ ಮನವಿಯನ್ನು ತಿರಸ್ಕರಿಸಿರುವುದನ್ನೆಲ್ಲಾ ನೋಡಿದ ಬಿಜೆಪಿ, ‘ಒಳಗಿಂದೊಳಗೇ ಏನೋ ನಡೆದಿದೆ’ ಎಂದುಕೊಂಡು, ರಾಜ್ಯಪಾಲರು ಸರಕಾರ ವಜಾಗೊಳಿಸಲು, ವಿಧಾನಸಭೆಯನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಿದ್ದಾರೆ ಎಂದು ಊಹಿಸಿಯೇ, ಹೋರಾಟಕ್ಕಿಳಿದಿದೆ.

ಇದೀಗ ರಾಜ್ಯಪಾಲರು, ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿದ್ದಾರೆ ಎಂಬುದು ದೃಢಪಟ್ಟಿದೆ. ಹೀಗಾಗಿ ಖಂಡಿತವಾಗಿಯೂ ರಾಜ್ಯಪಾಲರು ಈ ಹಿಂದಿನ ತಪ್ಪುಗಳಿಂದ ಪಾಠ ಕಲಿತಿಲ್ಲವೆಂಬುದಕ್ಕೆ, ಹೈಕಮಾಂಡ್ ಓಲೈಕೆಗಾಗಿಯೇ ಈ ರೀತಿ ಮಾಡಿದ್ದಾರೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದಷ್ಟೇ ಹೇಳಬಹುದು.

ಸರಕಾರ ವಜಾಗೊಳಿಸುವುದು ಅಸಾಧ್ಯ…
ಯಾಕೆಂದರೆ, ಚುನಾಯಿತವಾಗಿ ಗೆದ್ದುಬಂದಿರುವ ಸರಕಾರಕ್ಕೆ ಸ್ಪಷ್ಟ ಬಹುಮತ ಇರುವ ಸಂದರ್ಭಗಳಲ್ಲಿ, ವಿಧಾನಸಭೆಯನ್ನು ಅಮಾನತಿನಲ್ಲಿಡುವಂತೆ, ಸರಕಾರ ವಜಾಗೊಳಿಸುವಂತೆ ಶಿಫಾರಸು ಮಾಡುವುದು ಸಂವಿಧಾನಬದ್ಧ ಕ್ರಮವಲ್ಲ. ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಕ್ರಮವು ತಪ್ಪಾಗಿದ್ದಿರಬಹುದು. (ಹಾಗಂತ ಸುಪ್ರೀಂ ಕೋರ್ಟ್ ಕೂಡ ತೀರ್ಪು ಕೊಟ್ಟಿದೆ). ಆದರೆ ಇದೇನೂ ಖಂಡಿತವಾಗಿಯೂ ಸಾಂವಿಧಾನಿಕ ಬಿಕ್ಕಟ್ಟಿನ ಪರಿಧಿಯಲ್ಲಿ ಬರುವುದಿಲ್ಲ. ಇದರೊಂದಿಗೆ, ರಾಜ್ಯ ಶಾಸಕಾಂಗದ ಕಾರ್ಯನಿರ್ವಹಣೆಗೆ ಧಕ್ಕೆಯಾಗುವಂತೆ ಕಾರ್ಯನಿರ್ವಹಿಸುವುದು ಕೂಡ ತರವಲ್ಲ. ಮೇ 16ರಂದು ಅಧಿವೇಶನ ಕರೆಯಿರಿ, ಬಜೆಟ್‌ಗೆ ಅಂಗೀಕಾರ ದೊರೆತರೆ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡಬಹುದು ಎಂದು ಮನವಿ ಮಾಡಿದರೆ, “ಇಲ್ಲ, ಸಾಧ್ಯವಿಲ್ಲ” ಎನ್ನುತ್ತಾ ಈ ಪತ್ರವನ್ನು ಮೂಲೆಗೆ ತಳ್ಳಿದ್ದಾರೆ ರಾಜ್ಯಪಾಲರು.

ಅವರಿಗೆ ಬಿಜೆಪಿ ಸರಕಾರಕ್ಕಿರುವ ಬಹುಮತದ ಬಗ್ಗೆ ಸಂಶಯ ಇದೆಯೆಂದಾದರೆ, ಎರಡು ಬಾರಿ ಬಹುಮತ ಸಾಬೀತುಪಡಿಸಿ ಈಗಾಗಲೇ ಆರು ತಿಂಗಳು ಕಳೆದಿವೆ. ಹೀಗಾಗಿ ಮತ್ತೊಂದು ಬಾರಿ ವಿಶ್ವಾಸಮತ ಸಾಬೀತುಪಡಿಸುವಂತೆ ಕೇಳಲು ಏನೂ ಅಡ್ಡಿಯಿಲ್ಲ. ಆದರೆ, ಅಧಿವೇಶನ ಕರೆಯುವ ಸಾಂವಿಧಾನಿಕ ಕರ್ತವ್ಯವನ್ನು ನಿಭಾಯಿಸುವ ಬದಲು ರಾಜ್ಯಪಾಲರು ಮತ್ತೊಂದು ರಾಜಕೀಯ ನಡೆಗೆ ಮುಂದಾದರು. ಸರಕಾರದ ಭವಿಷ್ಯವು ರಾಜಭವನದಲ್ಲಿ ನಿರ್ಧಾರವಾಗುವುದಲ್ಲ, ಅದು ಸದನದಲ್ಲೇ ನಿರ್ಧಾರವಾಗಬೇಕು ಎಂಬ ಸುಪ್ರೀಂ ಕೋರ್ಟಿನ ತೀರ್ಪು ಸರಳವಾಗಿ ಯಾರಿಗೇ ಆದರೂ ಅರ್ಥವಾಗುವ ಸಂಗತಿ. ಆದರೆ ರಾಜ್ಯಪಾಲರಿಗೇ ಯಾಕೆ ಅರ್ಥವಾಗಿಲ್ಲ?

ಕೇಂದ್ರದಲ್ಲಿ ಅಭಿಪ್ರಾಯಭೇದ…
ಬಹುಶಃ ಅವರಿಗೆ ಅರ್ಥವಾಗದಿರುವ ಈ ಸಂಗತಿಯು ಕೇಂದ್ರದ ಯುಪಿಎ ಸಂಪುಟದಲ್ಲಿರುವ ಕೆಲವು ಸಚಿವರಿಗೆ ಅರ್ಥವಾಗಿದೆ. ಹೀಗಾಗಿಯೇ, ಈ ಶಿಫಾರಸುಗಳನ್ನು ಒಪ್ಪುವ ಬಗ್ಗೆ ಸಂಪುಟದಲ್ಲಿ ಅಭಿಪ್ರಾಯಭೇದ ಏರ್ಪಟ್ಟಿದೆ. ಯಾವುದೇ ತೀರ್ಮಾನ ಕೈಗೊಂಡರೆ, ಈಗಾಗಲೇ ಹಲವು ಕೇಸುಗಳಲ್ಲಿ (2ಜಿ ಹಗರಣ ತನಿಖೆ, ವಿದೇಶೀ ಬ್ಯಾಂಕುಗಳಲ್ಲಿ ಕಪ್ಪು ಹಣ, ಹಸನ್ ಅಲಿ ತನಿಖೆ, ಕಾಮನ್ವೆಲ್ತ್ ಹಗರಣ, ಸಿವಿಸಿ ನೇಮಕಾತಿ ಮುಂತಾದವುಗಳಲ್ಲಿ) ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡ ಕಾಂಗ್ರೆಸ್‌ಗೆ, ಈ ಹೊಸ ಬೆಳವಣಿಗೆಯೂ ಮತ್ತೊಂದು ಹೊಡೆತವಾದೀತು ಎಂಬುದು ಅವರ ಆತಂಕ. ಅಲ್ಲದೆ, ಇದು ಕಾಂಗ್ರೆಸ್‌ನ ಭವಿಷ್ಯಕ್ಕೂ ಮಾರಕವಾಗುತ್ತದೆ ಎಂಬುದು ಕೆಲವು ಕಾಂಗ್ರೆಸಿಗರ ಅಂಬೋಣ. ಬಹುಮತವುಳ್ಳ ಸರಕಾರ ವಜಾಗೊಳಿಸುವುದು ಯುಕ್ತವಲ್ಲ, ಇದು ಬಿಜೆಪಿಗೆ ಮತ್ತಷ್ಟು ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ, ಅನುಕಂಪದ ಅಲೆಗಳನ್ನು ಸೃಷ್ಟಿ ಮಾಡುತ್ತದೆ ಮತ್ತು ಇದರಿಂದ ಕಾಂಗ್ರೆಸಿಗೆ ಇನ್ನಿಲ್ಲದ ಹೊಡೆತ ಬೀಳಬಹುದು ಎಂಬುದೂ ಅವರ ಆತಂಕ.

ಕೇಂದ್ರ ಸರಕಾರಕ್ಕೆ ಈಗ ಎರಡು ಅವಕಾಶಗಳಿವೆ. ಒಂದು ರಾಜ್ಯಪಾಲರ ಶಿಫಾರಸನ್ನು ಒಪ್ಪಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ, ಬಿಜೆಪಿಯ ಕಾನೂನಿನ ಹೋರಾಟವನ್ನು ಎದುರಿಸುವುದು, ಇಲ್ಲವೇ ರಾಜ್ಯಪಾಲರ ವರದಿಯನ್ನು ತಿರಸ್ಕರಿಸುವುದು. ವರದಿ ತಿರಸ್ಕರಿಸಿದರೆ, ರಾಜ್ಯಪಾಲರ ವರದಿಯೊಂದು ಎರಡನೇ ಬಾರಿ ಕೇಂದ್ರದಿಂದ ತಿರಸ್ಕೃತವಾಯಿತು ಎಂಬ ಇತಿಹಾಸ ಸೃಷ್ಟಿಗೆ ಹಂಸರಾಜ ಭಾರಧ್ವಾಜರು ಕಾರಣರಾಗುತ್ತಾರೆ (ಕಳೆದ ಅಕ್ಟೋಬರ್ ತಿಂಗಳಲ್ಲಿಯೂ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ ವರದಿ ಕಳುಹಿಸಿದ್ದು, ಅದು ಕೇಂದ್ರದಿಂದ ತಿರಸ್ಕೃತಗೊಂಡು, ‘ರಾಜಿ’ಗಾಗಿ ಎರಡನೇ ಬಾರಿ ವಿಶ್ವಾಸ ಮತ ಸಾಬೀತುಪಡಿಸುವಂತೆ ಕೋರಿ ಕಾಂಗ್ರೆಸ್‌ನ ಕೆಲವು ಮುಖಂಡರ ಕೆಂಗಣ್ಣಿಗೂ ಗುರಿಯಾಗಿದ್ದರು). ಇದು ಒಂದು ರೀತಿಯಲ್ಲಿ ಮುಖಭಂಗವಾದಂತೆ. ಹೀಗಾಗಿ ಅವರೇ ಪದತ್ಯಾಗ ಮಾಡಬಹುದು.

ಆದರೂ ರಾಜ್ಯಪಾಲರ ಕ್ರಮದ ಬಗ್ಗೆ ಒಂದಿಷ್ಟು ಗಮನ ಹರಿಸಿದರೆ, ಅವರು ನಿಜಕ್ಕೂ ಅವಸರದ ತೀರ್ಮಾನ ಕೈಗೊಂಡರೇ ಎಂಬ ಪ್ರಶ್ನೆ ಏಳುವುದು ಸಹಜ. ಯಾಕೆಂದರೆ, ಚರ್ಚುಗಳ ಮೇಲೆ ದಾಳಿಯಾಗುತ್ತಿದ್ದ ಸಂದರ್ಭದಲ್ಲಿದ್ದಂತೆ, ರಾಜ್ಯದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಯ ಸಮಸ್ಯೆ ಇಲ್ಲ, ಹಗರಣ ಆರೋಪ ಹೊತ್ತಿರುವ ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಕೂಡ ನ್ಯಾಯಾಲಯದಿಂದ ತಡೆಯಾಜ್ಞೆಯಿದೆ. ಹೀಗಾಗಿ, ಸದ್ಯದ ಪರಿಸ್ಥಿತಿಯಲ್ಲಿ ಸರಕಾರವನ್ನೇ ವಜಾಗೊಳಿಸುವಂತಹಾ ಗಂಭೀರವಾದ ಸಂಗತಿಯೇನೂ ಕಾಣಿಸುತ್ತಿಲ್ಲ.

ರಾಜ್ಯಪಾಲರು ಕಳೆದ ಶುಕ್ರವಾರ ಸುಪ್ರೀಂ ಕೋರ್ಟು ತೀರ್ಪು ಬರುವ ಕೆಲವು ದಿನಗಳ ಮೊದಲೇ ದೆಹಲಿಗೆ ಹೋಗಿ ಪ್ರಧಾನಮಂತ್ರಿ, ಗೃಹ ಸಚಿವ ಮತ್ತು ಇತರ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದರು. ಇದು ಗೂಢಾಲೋಚನೆಯಾಗಿತ್ತೇ ಎಂಬುದು ಬಹಿರಂಗಗೊಳ್ಳಲಾರದು. ಆದರೆ, ಸುಪ್ರೀಂ ಕೋರ್ಟು ಶಾಸಕರ ಅನರ್ಹತೆ ರದ್ದುಗೊಳಿಸಿದ ನಂತರ, ಅವರೆಲ್ಲ ಯಡಿಯೂರಪ್ಪ ನಾಯಕತ್ವಕ್ಕೇ ಜೈ ಎಂದುಬಿಟ್ಟಾಗ, ಬಹುಶಃ ರಾಜ್ಯಪಾಲರು ಇದನ್ನು ನಿರೀಕ್ಷಿಸಿರಲಿಲ್ಲ ಎಂಬಂತೆ ಕಾಣಿಸುತ್ತದೆ. ಏನು ಮಾಡಬೇಕೆಂಬುದು ತಿಳಿಯದೆ, ಈ ನಿರ್ಧಾರಕ್ಕೆ ಬಂದರೋ ತಿಳಿಯದು. ಭಾನುವಾರ ಬೆಳಿಗ್ಗೆ ತಮ್ಮನ್ನು ಭೇಟಿಯಾಗಲೆಂದು ಬಂದ ‘ಮಾಜಿ ಬಂಡಾಯ’ ಶಾಸಕರಿಗೆ, ಭೇಟಿಗೆ ಅವಕಾಶವನ್ನೂ ನೀಡಿರಲಿಲ್ಲ. ವಿಶೇಷವೆಂದರೆ, ಈ ಶಾಸಕರ ಭೇಟಿಗೆ ‘ಸಿಬ್ಬಂದಿ ಕೊರತೆಯಿದೆ’ ಎಂಬ ಕಾರಣವೊಡ್ಡಿದ್ದ ರಾಜ್ಯಪಾಲರು, ಅದೇ ಹೊತ್ತಿಗೆ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಮೋಟಮ್ಮ ಮತ್ತು ಡಾ.ಜಿ.ಪರಮೇಶ್ವರ್ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದರು! ಅದೇ ದಿನ ರಾತೋರಾತ್ರಿ ಅವರು ವರದಿ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿಬಿಟ್ಟರು. ಹೀಗಾಗಿ, ಶಾಸಕರ ಭೇಟಿಗೆ ಅನುಮತಿ ಕೊಡದ ರಾಜ್ಯಪಾಲರು ಸಾಂವಿಧಾನಿಕವಾಗಿ ನಡೆದುಕೊಂಡರೇ?

ಈ ರಾಜಕೀಯ ಬೆಳವಣಿಗೆಗಳಿಂದ ಕರ್ನಾಟಕದ ಷಟ್ಕೋಟಿ ಮತದಾದರರಿಗೆ ಒಂದಂತೂ ವಿಷಯ ಸ್ಪಷ್ಟವಾಗಿದೆ. ಕರ್ನಾಟಕವನ್ನು ಇದುವರೆಗೆ ಆಳಿದವರು ಮತ್ತು ಈಗ ಆಳುತ್ತಿರುವವರಲ್ಲಿ ಯಾರನ್ನೂ ಸಾಚಾ ಎಂದು ನಂಬಲಾಗದು. ಅವರ ಮೇಲೆ ಇವರು, ಇವರ ಮೇಲೆ ಅವರು ಹಗರಣಗಳ ಆರೋಪಗಳನ್ನು ಪುಂಖಾನುಪುಂಖವಾಗಿ ಮಾಡುತ್ತಿರುವಾಗ, ಯಾರನ್ನು ನಂಬುವುದು? ಒಟ್ಟಿನಲ್ಲಿ, ಈಗಿನ ಬೆಳವಣಿಗೆಯನ್ನು ಹೇಳುವುದಾದರೆ, ರಾಜ್ಯದಲ್ಲಿ ಬಿಜೆಪಿಯು ಪಕ್ಷವನ್ನು ಉಳಿಸಿಕೊಳ್ಳಲು, ಸರಕಾರ ಉಳಿಸಿಕೊಳ್ಳಲು, ಆರೋಪಗಳಿಗೆ ಉತ್ತರಿಸುತ್ತಲೇ ಇರಲು ಸಮಯ ವ್ಯಯಿಸುತ್ತಲೇ ಇರಬೇಕು, ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಬಾರದು ಎಂದು ನೋಡಿಕೊಳ್ಳುವ ಹುನ್ನಾರ ಎಲ್ಲ ಕಡೆಯಿಂದಲೂ ನಡೆಯುತ್ತಿದೆಯೇ? ಒಂದಿಷ್ಟು ಕಾಲ ಮೌನವಾಗಿದ್ದು, ಇದೀಗ ದಿಢೀರ್ ಎಚ್ಚೆತ್ತುಕೊಂಡಂತೆ ವರ್ತಿಸಿರುವ ಹಂಸರಾಜ ಭಾರದ್ವಾಜರು ರಾಜ್ಯಪಾಲರ ಘನತೆಯನ್ನು, ರಾಜಭವನದ ಪ್ರತಿಷ್ಠೆಯನ್ನು ನಿಜಕ್ಕೂ ಮೇಲೆತ್ತಲಿಲ್ಲ!
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here