ಪ್ರಮುಖ ದಾಖಲೆಗಳ Data Backup ಇರಿಸಿಕೊಳ್ಳಿ!

0
236

Data Backup: ಆಧಾರ್, ಪಾನ್ ಕಾರ್ಡ್, ಡಿಎಲ್, ಅಂಕಪಟ್ಟಿ, ಸರ್ಟಿಫಿಕೆಟ್‌ಗಳೇ ಮುಂತಾಗಿ ನಮ್ಮ ಜೀವನಕ್ಕೆ ಬೇಕಾದ ಅತ್ಯಂತ ಪ್ರಮುಖ ಕಡತಗಳು, ಅಮೂಲ್ಯ ನೆನಪುಗಳನ್ನು ಕಾಪಿಡುವ ಚಿತ್ರ, ವಿಡಿಯೊಗಳು, ಕಚೇರಿ ಕೆಲಸಕ್ಕೆ ಸಂಬಂಧಿಸಿದ ಮಾಹಿತಿ ಕಡತಗಳು – ಇವೆಲ್ಲವನ್ನೂ ಬಳಸುವುದು ಎಷ್ಟು ಮುಖ್ಯವೋ, ಈ ಡಿಜಿಟಲ್ ಯುಗದಲ್ಲಿ ರಕ್ಷಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಗ್ಯಾಜೆಟ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಈ ಕಾಲದಲ್ಲಿ ಅವುಗಳನ್ನು ಬಳಸುವಲ್ಲಿಯೂ ಶಿಸ್ತು ಇರಬೇಕಾಗುತ್ತದೆ.

ಉದಾಹರಣೆಗೆ, ಪ್ರಮುಖ ಕಡತಗಳನ್ನು ನಾವು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿಟ್ಟುಕೊಂಡಿರುತ್ತೇವೆ. ಅತಿಯಾದ ಕಡತಗಳ ಭಾರದಿಂದಾಗಿಯೋ, ತಂತ್ರಾಂಶ – ಯಂತ್ರಾಂಶಗಳ ವೈಫಲ್ಯದಿಂದಾಗಿಯೋ ಈ ಫೋನ್ ಒಂದು ದಿನ ದಿಢೀರನೇ ಕೈಕೊಡುತ್ತದೆ. ಆನ್ ಆಗುವುದಿಲ್ಲ. ಅದರ ಮದರ್‌ಬೋರ್ಡ್ ಸಮಸ್ಯೆಗೆ ಸಿಲುಕಿರಬಹುದು ಅಥವಾ ಯಾವುದಾದರೂ ವೈರಸ್, ಫೀಶಿಂಗ್, ರ‍್ಯಾನ್ಸಮ್-ವೇರ್ ಮುಂತಾದ ಮಾಲ್‌ವೇರ್‌ಗಳು (ಕುತಂತ್ರಾಂಶಗಳು) ಬಾಧಿಸಿರಬಹುದು ಇಲ್ಲವೇ ಗ್ಯಾಜೆಟ್ ಕಳೆದುಹೋಗಬಹುದು. ಇಂಥ ಸಂದರ್ಭಗಳಲ್ಲಿ ಈ ಅಮೂಲ್ಯ ಕಡತಗಳನ್ನೂ ಕಳೆದುಕೊಳ್ಳಬೇಕಾಗಬಹುದು.

ಫೋಟೊ, ವಿಡಿಯೊ ಅಥವಾ ಬೇರಾವುದೇ ಡಾಕ್ಯುಮೆಂಟ್ ರೂಪದಲ್ಲಿರುವ ಡಿಜಿಟಲ್ ಕಡತಗಳ ನಿರ್ವಹಣೆಯಲ್ಲಿ ಒಂದಿಷ್ಟು ಶಿಸ್ತು ಅಳವಡಿಸಿಕೊಂಡರೆ ಮತ್ತು ಇವುಗಳ ಬ್ಯಾಕಪ್ ಇರಿಸಿಕೊಂಡಲ್ಲಿ, ಈ ಅಮೂಲ್ಯ ದಾಖಲೆಗಳನ್ನು ಕಳೆದುಕೊಂಡು ಪರಿತಪಿಸಬೇಕಾದ ಪ್ರಮೇಯವನ್ನು ತಪ್ಪಿಸಬಹುದು. ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಕಳೆದುಹೋಗುವ ಸಾಧ್ಯತೆಗಳು ಕೂಡ ಹೆಚ್ಚಿರುವ ಈ e-ಕಾಲದಲ್ಲಿ ಡಿಜಿಟಲ್ ಶಿಸ್ತು ಅತ್ಯಂತ ಮುಖ್ಯ.

ಆ ಶಿಸ್ತುಬದ್ಧತೆಯಲ್ಲಿ ಒಂದನೆಯ ಕ್ರಮ ಎಂದರೆ, ವಾಟ್ಸ್ಆ್ಯಪ್, ಟೆಲಿಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದನ್ನೆಲ್ಲ ಡೌನ್‌ಲೋಡ್ ಮಾಡಿಕೊಳ್ಳದಿರುವುದು. ಮತ್ತು ಡೌನ್‌ಲೋಡ್ ಮಾಡಿಕೊಂಡರೂ, ಅದರ ಅಗತ್ಯ ಮುಂದೆ ಇದೆಯೇ ಎಂದು ತೀರ್ಮಾನಿಸಿಕೊಂಡು, ಅಗತ್ಯವಿಲ್ಲದಿದ್ದರೆ ತಕ್ಷಣವೇ ಡಿಲೀಟ್ ಮಾಡಿಕೊಳ್ಳುವುದು ಸೂಕ್ತ. ಅಥವಾ ವಾರಕ್ಕೊಮ್ಮೆ ಈ ಪ್ರಕ್ರಿಯೆ ಮಾಡಬಹುದು. ಹೀಗಾದರೆ, ಸ್ಮಾರ್ಟ್‌ಫೋನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವೂ ಇರುವಂತಾಗುತ್ತದೆ. ಇಲ್ಲದಿದ್ದರೆ, ಬಂದಿರುವ ಎಲ್ಲ ಫೋಟೊ, ವಿಡಿಯೊಗಳನ್ನು ಡೌನ್‌ಲೋಡ್ ಮಾಡಿಕೊಂಡು, ಸ್ಮಾರ್ಟ್‌ಫೋನ್‌ನ ಮೆಮೊರಿ (ಸ್ಥಳಾವಕಾಶ) ಭರ್ತಿಯಾಗಿ, ಫೋನ್ ಹ್ಯಾಂಗ್ ಆಗುವುದು ಅಥವಾ ವಿಳಂಬದ ಕಾರ್ಯಾಚರಣೆ, ಇಲ್ಲವೇ ಕೊನೆಗೊಂದು ದಿನ ಸಂಪೂರ್ಣವಾಗಿ ಕೈಕೊಡುವುದಕ್ಕೆ (ಯಂತ್ರಾಂಶ-ತಂತ್ರಾಂಶ ವೈಫಲ್ಯದಿಂದ) ಕಾರಣವಾಗಬಹುದು. ಹೀಗಾಗಿ ಡಿಜಿಟಲ್ ಶಿಸ್ತು ಅನಿವಾರ್ಯ.

ಎರಡನೆ ಶಿಸ್ತು ಎಂದರೆ, ಕಡತಗಳ ಬ್ಯಾಕಪ್ ಇರಿಸಿಕೊಳ್ಳುವುದು. ಅಂದರೆ, ಅತ್ಯಂತ ಪ್ರಮುಖವಾದ ದಾಖಲೆಗಳನ್ನು ಕ್ಲೌಡ್‌ನಲ್ಲಿ (ಅಂತರಜಾಲದಲ್ಲಿ ಲಭ್ಯವಿರುವ ಡ್ರೈವ್‌ಗಳಲ್ಲಿ) ಕಾಪಿಟ್ಟುಕೊಳ್ಳುವುದು ಅಥವಾ ಸೇವ್ ಮಾಡಿಡುವುದು. ಬೇಕೆಂದಾಗ ಬೇಕೆಂದಲ್ಲಿಂದ ಅದನ್ನು ಪುನಃ ಡೌನ್‌ಲೋಡ್ ಮಾಡಿಕೊಳ್ಳಲು ಇದು ಸೂಕ್ತ. ಅಂತರಜಾಲ ಸಂಪರ್ಕವಿದ್ದರಾಯಿತು. ಗೂಗಲ್ ಡ್ರೈವ್ (ಜಿಮೇಲ್‌ನ ಮೂಲಕ ಉಚಿತವಾಗಿ 15GB ಸ್ಟೋರೇಜ್ ಲಭ್ಯ, ಹೆಚ್ಚುವರಿ ಬೇಕಿದ್ದರೆ ಮಾಸಿಕ ಶುಲ್ಕ ಪಾವತಿಸಿ ಪಡೆಯಬಹುದು) ಅಥವಾ ಡ್ರಾಪ್‌ಬಾಕ್ಸ್, ಬಾಕ್ಸ್, ಪಿ-ಕ್ಲೌಡ್, ಮೈಕ್ರೋಸಾಫ್ಟ್ ಒನ್ ಡ್ರೈವ್, ಆ್ಯಪಲ್ ಐಕ್ಲೌಡ್ – ಹೀಗೆ ಸಾಕಷ್ಟು ಇತರ ಆಯ್ಕೆಗಳೂ ಇವೆ. ಉಚಿತವಾಗಿ ಒಂದಿಷ್ಟು ಸ್ಟೋರೇಜ್ ಜಾಗ ಲಭ್ಯವಿರುತ್ತವೆ ಮತ್ತು ಹೆಚ್ಚುವರಿ ಬೇಕಿದ್ದರೆ ಮಾಸಿಕ ಶುಲ್ಕ ಪಾವತಿಸಬೇಕಾಗುತ್ತದೆ.

ಮೂರನೆಯದು, ನಮ್ಮ ಸ್ಮಾರ್ಟ್‌ಫೋನ್‌ನ ಅತ್ಯಂತ ಮುಖ್ಯವಾದ ಫೈಲ್‌ಗಳನ್ನು ನಮ್ಮದೇ ಹಾರ್ಡ್ ಡಿಸ್ಕ್ (ಕಂಪ್ಯೂಟರ್ ಅಥವಾ ಬೇಕೆಂದಲ್ಲಿಗೆ ಒಯ್ಯಬಹುದಾದ ಎಕ್ಸ್‌ಟರ್ನಲ್ ಹಾರ್ಡ್ ಡ್ರೈವ್) ಒಂದರಲ್ಲಿ ಕಾಲಕಾಲಕ್ಕೆ ಸೇವ್ ಮಾಡಿಟ್ಟುಕೊಳ್ಳುವುದು. ಇಲ್ಲಿಯೂ ಕೂಡ, ಬೇಕಾಗಿರುವುದನ್ನಷ್ಟೇ ಆಯ್ಕೆ ಮಾಡಿಕೊಂಡರೆ, ಮುಂದಕ್ಕೆ ಅಗತ್ಯವೆನಿಸಿದಾಗ ಹುಡುಕುವುದು ಸುಲಭವಾಗುತ್ತದೆ.

ಬ್ಯಾಕಪ್ ಇರಿಸಿಕೊಳ್ಳುವಾಗಲೂ ಸ್ವಲ್ಪ ಶಿಸ್ತು ಇರಬೇಕಾಗುತ್ತದೆ. ನಿರ್ದಿಷ್ಟ ವಿಷಯದ ಫೋಲ್ಡರ್‌ಗಳನ್ನು ರಚಿಸಿಕೊಂಡು, ತತ್ಸಂಬಂಧಿತ ಫೈಲುಗಳನ್ನು ಆಯಾ ಫೋಲ್ಡರ್‌ನಲ್ಲಿ ಇರಿಸುವಂತಿರಬೇಕು. ಉದಾಹರಣೆಗೆ, ಶಿಕ್ಷಣ ಸಂಬಂಧಿತ ಕಡತಗಳು, ಕಚೇರಿ ಕಡತಗಳು, ಕೌಟುಂಬಿಕ ಚಿತ್ರ-ವಿಡಿಯೊಗಳು, ಬದುಕಿನ ಅಮೂಲ್ಯ ಕ್ಷಣಗಳು – ಹೀಗೆ ವಿಂಗಡಿಸಿಕೊಂಡಲ್ಲಿ, ಮುಂದೆ ಹುಡುಕಿ ಬಳಸುವುದು ಸುಲಭವಾಗುತ್ತದೆ.

ಎಲ್ಲಕ್ಕೂ ಮುಖ್ಯವಾಗುವುದು ಒಂದು ಸಶಕ್ತವಾದ ಆ್ಯಂಟಿ-ಮಾಲ್‌ವೇರ್ ಬಳಕೆ. ನಮ್ಮ ಕಂಪ್ಯೂಟರಿನಲ್ಲಿ ಇದು ಇಲ್ಲದಿದ್ದರೆ, ಡೇಟಾ (ದತ್ತಾಂಶ) ನಾಶ, ಹಾರ್ಡ್ ಡ್ರೈವ್ ವೈಫಲ್ಯಗಳಿಂದಾಗಿ ಯಾವುದೇ ಕಡತಗಳೂ ಮರಳಿ ಸಿಗಲಾರದಂತೆ ನಾಶವಾಗುವ ಆತಂಕವಿದ್ದೇ ಇದೆ. ಇದಕ್ಕಾಗಿ ಸೂಕ್ತ ಮುನ್ನೆಚ್ಚರಿಕೆ ಮತ್ತು ಸದ್ಬಳಕೆಯ ವಿಧಾನ ಅನುಸರಿಸುವುದು ಸೂಕ್ತ.

Tech Article by Avinash B (Me) Published in Prajavani on 07 Jun 2023

LEAVE A REPLY

Please enter your comment!
Please enter your name here