ನಿನ್ನೆ ಹೀಗೆಯೇ ಹಳೆಯ ಫೋಟೋ ಆಲ್ಬಂ ಒಂದನ್ನು ಮನೆಯಲ್ಲೇ ಕುಳಿತು ತಿರುವುತ್ತಿದ್ದೆ. ಕಾಲೇಜು ದಿನಗಳ ನಮ್ಮ ಕೀಟಲೆಗಳೆಲ್ಲಾ ಧುತ್ತನೆ ನೆನಪಾದವು. ಹಾಗಾಗಿ ಒಂದು ಹಿನ್ನೋಟ….
1992ರಲ್ಲಿ ಪಿಯುಸಿ ಮುಗಿಸುವ ಹೊತ್ತಿಗೆ, ಮನೆಯ ಆರ್ಥಿಕ ಸ್ಥಿತಿಯಿಂದಾಗಿ ಓದು ಮುಂದುವರಿಸುವುದು ಸಾಧ್ಯವೇ ಇಲ್ಲವೆಂಬಂಥ ಪರಿಸ್ಥಿತಿ. ನನಗೋ ಪದವಿ ಗಳಿಸಬೇಕೆಂಬ ಹಂಬಲವಿತ್ತು. ಈ ಕಾರಣಕ್ಕೆ ಎಂದೋ ಒಮ್ಮೆ ಪರಿಚಯಸ್ಥರಾಗಿದ್ದವರ ಹೋಟೆಲಿನಲ್ಲಿ ಕೆಲಸಕ್ಕೆ ಸೇರುವ ಇರಾದೆಯೊಂದಿಗೆ ಅಮ್ಮನಲ್ಲಿ ಬಸ್ ಚಾರ್ಜಿಗೆ ಹಣ ಕೇಳಿ, ತಿಪಟೂರು (ದೇಶದಲ್ಲೇ ಹೆಸರುವಾಸಿಯಾಗಿರುವ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತುಮಕೂರು ಜಿಲ್ಲೆಯಲ್ಲಿದೆ) ಬಸ್ಸೇರಿದ್ದೆ.
ಹೋಟೆಲ್ ಮಾಲೀಕರಾದ ವೈ.ಸದಾನಂದ ರಾವ್ ಅವರ ಮನಸ್ಸು ದೊಡ್ಡದು. ಸ್ವೀಟ್ ಸ್ಟಾಲ್, ಹೋಟೆಲ್, ಲಾಡ್ಜ್, ನಾರ್ತ್ ಇಂಡಿಯನ್ ರೆಸ್ಟಾರೆಂಟ್, ಡಿಲಕ್ಸ್ ಲಾಡ್ಜ್… ಇತ್ಯಾದಿಗಳ ಒಡೆತನ ಅವರದು. ಅವರ ವ್ಯವಹಾರ ಕ್ಷೇತ್ರ ಎಷ್ಟು ವಿಶಾಲವಾದುದೋ, ಹೃದಯವೂ ಅಷ್ಟೇ ವಿಶಾಲವಾಗಿತ್ತು. ಅಲ್ಲಿ ಕ್ಯಾಶ್‌ನಲ್ಲಿ ಕೂರುತ್ತಿದ್ದ ನಾನು, ರಾತ್ರಿ ಕೆಲಸ ಮಾಡಿ ಹಗಲು ಕಾಲೇಜು ಹೋಗುತ್ತಿದ್ದೆ…. ಕಾಲೇಜು ಮುಗಿದ ತಕ್ಷಣ ಮತ್ತೆ ಯಾವುದಾದರೂ ಹೊಣೆ ಇರುತ್ತಿತ್ತು. ಬೇರೆಯವರು ರಜೆಯಲ್ಲಿದ್ದರೆ ಅವರ ಜಾಗಕ್ಕೆ ನಾನು ಸಬ್‌ಸ್ಟಿಟ್ಯೂಟ್. ಅಲ್ಲಿ ಕೆಲವೊಮ್ಮೊಮ್ಮೆ ಲೋಟ, ತಟ್ಟೆ ತೊಳೆದದ್ದೂ ಇದೆ. ಬಹುಶಃ ನನ್ನ ವ್ಯಕ್ತಿತ್ವವನ್ನು ಆ ಕಾಲೇಜು ಜೀವನವೇ ಬಹುವಾಗಿ ರೂಪಿಸಿಬಿಟ್ಟಿದೆ ಎನ್ನಬಹುದು. ಇಂದು ನಾನೇನಾಗಿದ್ದೇನೆಯೋ ಅದಕ್ಕೆಲ್ಲಾ ಆ ದಿನಗಳ ಜೀವನಾನುಭವವೇ ಕಾರಣ. ಒತ್ತಡದಲ್ಲಿ ಕೆಲಸ ಮಾಡುವುದು ಹೇಗೆ, ಶ್ರಮ ಪಡುವುದು ಹೇಗೆ, ಶ್ರದ್ಧೆಯಿಂದ ಹಿಡಿದ ಕೆಲಸ ಮುಗಿಸುವುದು ಹೇಗೆ, ನಿದ್ದೆಗೆಟ್ಟರೂ ಕಾಲೇಜು ಜೀವನ ಸಾಗಿಸುವುದು ಹೇಗೆ ಎಂಬಿತ್ಯಾದಿಗಳನ್ನು ಕಲಿತುಬಿಟ್ಟೆ. ಅದು ಬಿಡೋಣ. ಅಂಥ ದಿನಗಳ ಬಗ್ಗೆ ಬರೆದರೆ ಕಾದಂಬರಿಯೇ ರಚನೆಯಾಗಬಹುದು.
ಒಟ್ಟಿನಲ್ಲಿ, ಓದು ಮುಂದುವರಿಸಬೇಕೆಂಬ ನನ್ನ ಆಸೆಯ ಬೀಜಕ್ಕೆ ನೀರೆರೆದು ಪೋಷಿಸಿದ ಸದಾನಂದರಾಯರ ಸದಾಶಯದಿಂದಾಗಿ, ಅಲ್ಲಿನ ಕಲ್ಪತರು ವಿಜ್ಞಾನ ಕಾಲೇಜು ಸೇರಿಕೊಂಡೆ. ಹೊಸ ಊರು, ಹೊಸ ಭಾಷೆ, ಯಾವಾಗಲೂ ಗಾಳಿಬೀಸುತ್ತಿರುವ ಹೊಸ ವಾತಾವರಣ… ಮೊದಲ ವರ್ಷ ಬಾವಿಯೊಳಗಿನ ಕಪ್ಪೆಯಂತಿದ್ದೆ. ಅಷ್ಟರಲ್ಲಿ ನಮ್ಮದೊಂದು ಪುಟ್ಟ ಗೆಳೆಯರ ಬಳಗ ಸೃಷ್ಟಿಯಾಗಿತ್ತು.
ಅವಿ, ಜಗ್ಗು, ಗಂಗು, ಮಲ್ಲು!!!
ಮೊದಲ ವರ್ಷದ ಅಂತ್ಯದಲ್ಲಿ ಮತ್ತು ದ್ವಿತೀಯ ವರ್ಷಾರಂಭದ ವೇಳೆಗೆ ಈ ನಾಲ್ಕು ಹೆಸರುಗಳು ಕಾಲೇಜಿನಲ್ಲಿ “ಜಗತ್ಪ್ರಸಿದ್ಧ”ವಾಗಿದ್ದವು. ಇದಕ್ಕೆ ಕಾರಣ?
ಸಹಪಾಠಿಗಳಾಗಿದ್ದ ಜಗದೀಶ್, ಗಂಗಾಧರ್, ಮಲ್ಲೇಶ ಎಂಬವರ ಜತೆಗೆ ನಾನೂ ಸೇರಿಕೊಂಡು ಕಾಲೇಜಿನಲ್ಲಿ ಲ್ಯಾಬ್‌ಗಳಿಗೋ ಅಥವಾ ಬೇರೆ ಬೇರೆ ತರಗತಿಗೋ ತೆರಳುತ್ತಿದ್ದಾಗ ಕೈಯಲ್ಲೊಂದು ಚಾಕ್ ಪೀಸ್ ಹಿಡಿದೇ ಸಾಗುತ್ತಿದ್ದೆವು. ನನ್ನದು ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯವಾಗಿದ್ದುದರಿಂದ ಕೈಯಲ್ಲಿ ಮೀನು, ಕಪ್ಪೆಗಳನ್ನು ಕೊಯ್ಯಲು ಬಳಸುವ ಫೋರ್ಸೆಪ್ಸ್, ನೀಡ್ಲ್ ಮತ್ತಿತರ “ಆಯುಧ”ಗಳು ಇದ್ದೇ ಇರುತ್ತಿದ್ದವು. ಇವುಗಳನ್ನು ಬಳಸಿ ನಾವು ತೆರಳುವ ದಾರಿಯಲ್ಲಿ ಸಿಗುವ ಎಲ್ಲ ಖಾಲಿ ಮತ್ತು ಕಪ್ಪು ಜಾಗದಲ್ಲಿ “ಅವಿ ಜಗ್ಗು ಗಂಗು ಮಲ್ಲು” ಎಂಬ ಹೆಸರುಗಳನ್ನು ಬರೆಯುತ್ತಿದ್ದೆವು ಇಲ್ಲವೇ ಡೆಸ್ಕ್, ಬೆಂಚುಗಳಲ್ಲಾದರೆ ಕೆತ್ತುತ್ತಿದ್ದೆವು!
ಇದು ಎಷ್ಟರ ಮಟ್ಟಿಗೆ ಬೆಳೆದಿತ್ತೆಂದರೆ ಒಂಥರಾ ದೆವ್ವಭೂತದ ಕಾಟದಂತೆ! ನಾವು ಕಾಲೇಜು ಆವರಣದಲ್ಲಿ ಕ್ಲಾಸಿನಿಂದ ಕ್ಲಾಸಿಗೆ ಅಡ್ಡಾಡುತ್ತಿದ್ದಾಗ ನಮಗೆ ಎದುರಾದ ಬೇರೆ ತರಗತಿಯವರೆಲ್ಲರೂ ನಮ್ಮನ್ನೇ ಪ್ರಶ್ನಿಸುತ್ತಿದ್ದರು “ಏನಿದು ಅವಿ ಜಗ್ಗು ಮಲ್ಲು ಗಂಗು? ವಿಜ್ಞಾನದ ಯಾವ ಫಾರ್ಮುಲಾ ಇರಬಹುದು?” ಎಂಬಿತ್ಯಾದಿ ಪ್ರಶ್ನೆ ಕೇಳಿದಾಗ ನಮಗೋ… ತಡೆಯಾರದ ನಗು.
ಒಂಥರಾ ಎಲೆಮರೆಯ ಕಾಯಿಯಂತೆ ನಾವೆಲ್ಲಾ ಫೇಮಸ್ಸಾಗಿಬಿಟ್ಟಿದ್ದೆವು. ಅದು ಯಾರ ಹೆಸರೆಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಆ ಊರಿನಲ್ಲಿರುವವರ ಹೆಸರುಗಳಿಗೆ ಹೋಲಿಸಿದರೆ ನನ್ನ ಹೆಸರು ಸ್ವಲ್ಪ ಎದ್ದುಕಾಣುತ್ತಿದ್ದುದರಿಂದಾಗಿ “ಅವಿ” ಎಂದು ನೋಡಿದವರಿಗೆ ನನ್ನ ಮೇಲೆ ಗುಮಾನಿಯ ಕಣ್ಣು ಇತ್ತು ಎಂಬುದು ನನಗೂ ಗೊತ್ತಿತ್ತು. ಒಟ್ಟಿನಲ್ಲಿ ಈ ಗುಂಪಿನ ನಾಲ್ವರದು ಕೂಡ ತದ್ವಿರುದ್ಧ ಸ್ವಭಾವ.
ನನ್ನದು ಮಾತು ಕಡಿಮೆ, ಆದರೆ ಉಳಿದವರಿಗೆ ಹೋಲಿಸಿದರೆ ಕಲಿಕೆಯಲ್ಲಿ ಸ್ವಲ್ಪ ಮುಂದಿದ್ದುದರಿಂದ “ಅಳಿದವರಿಗೆ ಉಳಿದವನೇ ರಾಜ” ಎಂಬಂತಾಗಿಬಿಟ್ಟಿದ್ದೆ. ಜಗ್ಗ ಒರಟು ಸ್ವಭಾವ, ಹಿಂದೆ ಮುಂದೆ ಯೋಚನೆ ಮಾದರೆ ಬಡಬಡನೆ ಹೇಳಿಬಿಡುತ್ತಾನೆ, ಗಂಗು ಒಂಥರಾ ತತ್ವಜ್ಞಾನಿಯಂತೆ, ಅಳೆದು ತೂಗಿ ನಿರ್ಧಾರ ಕೈಗೊಳ್ಳುವವನು. ಮಲ್ಲು ಮಾತಿನ ಮಲ್ಲ, ಆದರೆ ಯೋಚಿಸಿ ಮಾತನಾಡುತ್ತಾನೆ, ಪರೋಪಕಾರಿ. ಇಂಥ ನಾಲ್ಕು ಒಂದಕ್ಕೊಂದು ಪೂರಕವಲ್ಲದ ಕಂಬಗಳು ಒಂದೇ ತಳಹದಿಯಲ್ಲಿ ಹೇಗೆ ಬಂದವೋ…. ದೇವರಿಗೇ ಗೊತ್ತು!
ನಾನು ಹಳ್ಳಿಯಿಂದ ಬಂದವನಾಗಿದ್ದುದರಿಂದ (ಹಳ್ಳಿ ಗುಗ್ಗು!) ಕೇವಲ ಪುಸ್ತಕದ ಬದನೆಕಾಯಿ ಗೊತ್ತಿತ್ತೇ ಹೊರತು ಸಾಮಾನ್ಯ ಜ್ಞಾನ ಸ್ವಲ್ಪ ಕಡಿಮೆ ಇತ್ತು. ಈ ಕಾಲೇಜು ಬೆಂಗಳೂರು ವಿವಿ ವ್ಯಾಪ್ತಿಯಲ್ಲಿದೆ. ಈ ವಿವಿಯಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷ ಫೇಲ್ ಆದ್ರೂ ಪದವಿ ಮುಗಿಸಬಹುದು ಎಂದು ಯಾರೋ ಹೇಳಿದ್ದರು ಮತ್ತು ಅದನ್ನು ನನ್ನ ಒಡನಾಡಿಗಳಲ್ಲಿ ಕೇಳಿಯೂ ಖಚಿತಪಡಿಸಿಕೊಂಡಿದ್ದೆ. ಇದರಿಂದಾಗಿ ಓದಿನ ಬಗ್ಗೆ ನನಗೆ ಅಷ್ಟೊಂದು ಸೀರಿಯಸ್‌ನೆಸ್ ಇರಲಿಲ್ಲ. ಪರೀಕ್ಷೆ ತಪ್ಪಿಸಿಯೂ ಸಿನಿಮಾಕ್ಕೆ ಹೋಗುವುದು, ಬೇರೆಯವರ ಮನೆಗೆ ಹೋಗಿ ಟಿವಿ ನೋಡುವುದು… ನನ್ನ ರೂಮಿಗೆ ಮರಳಿದರೆ ಅಲ್ಲೇನಿರುತ್ತದೆ, ಕೆಲಸ ಮಾಡಬೇಕಾಗುತ್ತದೆ, ಮತ್ತೆ ಕಾಲೇಜು ಜೀವನ ಎಂಜಾಯ್ ಮಾಡೋದು ಹೇಗೆ ಎಂಬ ಲೆಕ್ಕಾಚಾರ ಇದಕ್ಕೆ ಕಾರಣವಾಗಿತ್ತು. ಆ ದಿನಗಳಲ್ಲಿ ನನಗಿಷ್ಟವಾಗಿದ್ದ ಒಂದು ವಾಕ್ಯವೆಂದರೆ…. Life is short, make it sweet ಅನ್ನೋದು. ಆದರೆ ಪದವಿ ಮುಗಿಸಬೇಕಿದ್ದರೆ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂಬುದು ಒಂದು ವಿಷಯದಲ್ಲಿ ಫೇಲ್ ಆದ ಬಳಿಕವೇ ಗೊತ್ತಾಗಿದ್ದು!
ನನ್ನ ಗೆಳೆಯರ ಬಳಗದಲ್ಲಿದವರಿಗೆ ಕುಡಿತ, ಸಿಗರೇಟು ಅಭ್ಯಾಸವಿತ್ತು. ನಾನಂದುಕೊಂಡಂತೆ ಆ ಊರಿನವರಲ್ಲಿ ಮಂಗಳೂರಿನವರಿಗೆ ಹೋಲಿಸಿದರೆ ಒರಟುತನವೂ ಜಾಸ್ತಿ. ಅವರೊಂದಿಗೆ ಹೊಂದಿಕೊಂಡಿದ್ದ ನನ್ನ ಸ್ವಭಾವ ಅವರಿಗೂ ಅದು ಹೇಗೆ ಇಷ್ಟವಾಗಿತ್ತೋ… ಅವರೊಂದಿಗೆ ಬಾರ್‌ಗೂ ತೆರಳುತ್ತಿದ್ದ ನಾನು ಅವರಿಗೆ ಕಂಪನಿ ನೀಡುತ್ತಿದ್ದೆ. ಆದರೂ ಎರಡರ ಸೇವನೆಯೂ ನನ್ನನ್ನು ತಬ್ಬಿಕೊಂಡಿಲ್ಲ ಎಂಬುದು ಹೆಮ್ಮೆಯ ಸಂಗತಿ.
ಹುಡುಗಿ ವಿಷಯದಲ್ಲಿ ಕಾಲೇಜಿನಲ್ಲೇ ದೊಡ್ಡ ಗಲಾಟೆಯಾಗಿತ್ತು ಮತ್ತು ಅದು ತಿಪಟೂರು ಬಂದ್‌ವರೆಗೂ ಹೋಗಿತ್ತು. ಆ ಸಂದರ್ಭ ನನ್ನ ಜತೆಗಿದ್ದವರು ಕೂಡ ಹೊಡೆದಾಟದಲ್ಲಿ ಪ್ರಧಾನ ಪಾತ್ರ ವಹಿಸಿದ್ದು, ಆ ಮೇಲೆ ಪ್ರಿನ್ಸಿಪಾಲರಿಂದ ಕಚೇರಿಗೆ ಕರೆಸಿ ಬೋಧನೆ… ನಾನು “ಅವಿ ಜಗ್ಗು ಗಂಗು ಮಲ್ಲು” ಗ್ಯಾಂಗಿನ ಸದಸ್ಯನಾಗಿದ್ದರಿಂದ ನಾನೂ ಹೋಗಬೇಕಾಗಿಬಂದಿತ್ತು. ಕಾಲೇಜಿನಲ್ಲಿ ಗ್ಯಾಂಗುಗಳ ನಡುವೆ ಹೊಡೆದಾಟ, ರೌಡಿ ಗ್ಯಾಂಗುಗಳ ಜತೆಗಿನ ಸಂಪರ್ಕ… ಎಲ್ಲ ಸಾಮಾನ್ಯವಾಗಿದ್ದರಿಂದ ಈ ರೀತಿಯಾಗಿತ್ತು. ರೌಡಿಸಂ ಕಾಲೇಜಿನೊಂದಿಗೆ ಹೇಗೆ ತಳುಕು ಹಾಕಿಕೊಂಡಿತ್ತು ಎಂಬುದು ನನಗೆ ಆಗಲೇ ಅರಿವಿಗೆ ಬಂದಿತ್ತು. ಈ ಮೂವರೊಂದಿಗೆ ನಾನು ಕೂಡ ಯಾವತ್ತೂ ತಿರುಗಾಡುತ್ತಿದ್ದುದರಿಂದ ನನಗೂ ಪೊಲೀಸರು ಎಚ್ಚರಿಸಿ ಹೋಗಿದ್ದರು! ಅಂದರೆ ಕಾಲೇಜು ಜೀವನದಲ್ಲೇ ರೌಡಿ ಮತ್ತು ಪೊಲೀಸರ ಬಗ್ಗೆಯೂ ಪರಿಚಯವಾಗಿತ್ತು!
ಆ ಮೂರು ವರ್ಷಗಳು ಎಷ್ಟು ಬೇಗ ಕಳೆದುಹೋಯಿತು ಎಂಬುದೇ ತಿಳಿದಿರಲಿಲ್ಲ. ಇಷ್ಟಾಗಿಯೂ ಉಪನ್ಯಾಸಕರಿಗೆಲ್ಲಾ “ಮಂಗ್ಳೂರು ಹುಡುಗ” ಇಷ್ಟವಾಗಿದ್ದು, ನಾವು ಕೊನೆಯ ವರ್ಷಕ್ಕೆ ಬಂದಾಗ ನಮ್ಮ ಜೂನಿಯರ್‌ಗಳೆಲ್ಲರ ಪ್ರೀತಿಗೆ ಪಾತ್ರನಾಗಿದ್ದು ನನಗೊಂದು ಹೆಮ್ಮೆ. ನಮ್ಮ “ಗುಂಪಿನ” ಬಗ್ಗೆಯೂ ಅವರಿಗೆ ಒಳ್ಳೆಯ ಅಭಿಪ್ರಾಯವಿತ್ತು.
ಇದರಿಂದ ನಮಗೆ ಪ್ರಥಮ ಮತ್ತು ದ್ವಿತೀಯ ಪದವಿ ವಿದ್ಯಾರ್ಥಿಗಳು ಸೇರಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ನನಗೂ ಅವರ ಅಭಿಮಾನಕ್ಕೋಸ್ಕರ ಒಂದೆರಡು ಮಾತನಾಡುವ ಪ್ರೀತಿಯ ಒತ್ತಡವಿತ್ತು. ಮಾತಿನಲ್ಲಿ ಯಾವತ್ತೂ ಹಿಂದೆ ಇದ್ದರೂ, ನಗೆ ಚಟಾಕಿಯಿಂದ ಶುರು ಮಾಡಿ ಧನ್ಯವಾದ ಹೇಳಿ ಮಾತು ಮುಗಿಸಿದಾಗ ನನ್ನೊಳಗಿನ ಹೃದಯ ಚೀರುತ್ತಿತ್ತು “ಈ ಕಾಲೇಜು ಜೀವನ ಹೀಗೆಯೇ ಮುಂದುವರಿಯಬಾರದೇ” ಎಂದು! ಎದುರಿಗಿದ್ದವರೆಲ್ಲರ ಕಣ್ಣಾಲಿಗಳು ಆರ್ದ್ರವಾಗಿದ್ದುದೂ ಅಷ್ಟೇ ಸತ್ಯ.
(ಕಾಲೇಜು ಕೀಟಲೆ ಜಗತ್ತಿನ ಕುರಿತಾದ ಸ್ವಾರಸ್ಯಕರ ಪ್ರಸಂಗ ಮುಂದಿನ ಲೇಖನದಲ್ಲಿ)
ಅವೀ,
ಎಲ್ಲಿ ಹೋದವು ಆ ದಿನಗಳು…
ಆ ಗೆಳಯರು, ಆ ತರಲೆ, ಆ ಪರೀಕ್ಷೆ ಒತ್ತಡ…
ಒಬ್ಬ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಜೀವನದ ಅನೇಕ ಮಜಲುಗಳು ಕಾರಣವಾಗಿರುತ್ತೆ.ನೀವು ಪಟ್ಟ ಪರಿಶ್ರಮ-ಈಗ ನೀವು ಜೀವನದಲ್ಲಿ ಎರಿರುವ ಪರಿ..ನಿಜಕ್ಕೂ ಪ್ರಶಂಸನೀಯ..
ನೀವು ಇನ್ನೂ ಎತ್ತರಕ್ಕೆ ಏರೀರಿ..
ಅವಿ,
ಜೀವನದ ಎಲ್ಲ ಘಟ್ಟಗಳೂ ಅವುಗಳದ್ದೇ ಆದ ಛಾಪು ಒತ್ತುತ್ತವೆ ನಮ್ಮ ಮನದ ಮೇಲೆ, ಬೆಳವಣಿಗೆಯ ಮೇಲೆ. ಅವುಗಳಲ್ಲಿ ಕೆಲವು ಹಿತವಾದರೆ ಕೆಲವು ಅಗತ್ಯಗಳಾಗಿರುತ್ತವೆ. ಅದರಿಂದಲೇ ಬದಲಾವಣೇ ಸಾಧ್ಯ. ನಿತ್ಯ ಬದಲಾಗುವ ಜಗದಲ್ಲಿ ನೆನಪುಗಳ ನೆರಳು ಶಾಶ್ವತ ಅಂದುಕೊಳ್ಳುತ್ತೇವೆ, ಸ್ವಲ್ಪ ಕಾಲದ ಬಳಿಕ ಅದೂ ಇಲ್ಲ ಅನ್ನುವ ಅರಿವಾಗುತ್ತದೆ. ಇದೇ ಜೀವನದ ಪರಿ.
ನಿಮ್ಮ ಜೀವನದಲ್ಲಿ ಬದಲಾವಣೆಗಳೆಲ್ಲವೂ ಅನುಭವಾತ್ಮಕವಾಗಿಯೂ ಬೆಳವಣಿಗೆಗೆ ಪೂರಕವಾಗಿಯೂ ಇರಲೆಂದು ಹಾರೈಕೆ.
ಶಿವ್,
ಕಾಲೇಜು ದಿನಗಳನ್ನು ಮೆಲುಕು ಹಾಕುವುದೆಂದರೆ ಚೂಯಿಂಗ್ ಗಮ್ ಮೆದ್ದಂತೆ… ಅಂಥ ದಿನಗಳು ಮತ್ತೆ ಬರಲು ಸಾಧ್ಯವೇ ಇಲ್ಲ ಎಂಬುದೇ ಕೊರಗು 🙂
ನಿಮ್ಮ ಸದಾಶಯಕ್ಕೆ ಧನ್ಯವಾದ.
ಜ್ಯೋತಿ ಅವರೆ,
ನೀವು ಹೇಳುವುದು ಹೌದು.. ನೆನಪುಗಳ ನೆರಳು ಶಾಶ್ವತವೇನೂ ಅಲ್ಲ… ಶಾಶ್ವತ ಅಂತ ನಾವು ಅಂದುಕೊಳ್ಳುವುದು ಮಾತ್ರ. ಒಳ್ಳೆಯ ಸಂಗತಿಗಳು ಬೇಗನೇ ಮರೆಯುವುದೂ, ಕೆಟ್ಟ ಸಂಗತಿಗಳು ಬಹುಕಾಲ ಕೊರಗಿಸುವುದು ಕೂಡ ಜೀವನದ ಭಾಗವೇ ಆಗಿದೆ…
ನಿಮ್ಮ ಹಾರೈಕೆಗೆ ತುಂಬಾ ತುಂಬಾ ಧನ್ಯವಾದಗಳು.
A – Avismaraneeya
J – Jagathprasiddha
G – Gundu-Gangu-Galate
M – Mahaprachandaru
ಇದೇನು ಹೆಸರಿಟ್ಕೊಂಡಿದ್ದೀರಿ ಸಾರ್…?
ತಲೆ ಹರಟೆಯೇನೂ ಅಲ್ಲ….
ಬ್ಲಾಗಿಗೆ ಸ್ವಾಗತ..
ಚೆನ್ನಾಗಿ ವಿಶ್ಲೇಷಿಸಿದ್ದೀರಿ! 🙂
ಧನ್ಯವಾದ
ಚಿಕ್ಕಂದಿನಲ್ಲಿ ಮನೇಲಿ ಬಯ್ಯೋರು:
ತಲೆಹರಟೆ ಮಾಡದೆ ಕೂತ್ಕೊ ಸುಮ್ನೆ ಅಂತ.
ಇಷ್ಟು ವರ್ಷ ಗಂಬೀರವಾಗಿದ್ದೂ ಇದ್ದೂ, ಬಿ.ಪಿ. ಶುರು ಆಗಿದೆ.
ಡಾಕ್ಟ್ರು ಹೇಳಿದ್ರು: ತಲೆಹರಟೆ ಆರೋಗ್ಯಕ್ಕೆ ಒಳ್ಳೇದು ಅಂತ…
ಅದಕ್ಕೆ ಈ ಹೆಸರು.
ನಿಮ್ಮ ಬ್ಲಾಗು ಬಹಳ ಸೊಗಸಾಗಿದೆ ಸಾರ್.
ವಂದನೆಗಳು
ತಲೆಹರಟೆ
ಬ್ಲಾಗುಸ್ಪಾಟ್ ತಲೆ ಹರಟೆ ಬೇರೆಯೇ ಇದೆ. ನಿಮ್ಮದು ವರ್ಡ್ ಪ್ರೆಸ್ ತಲೆಹರಟೆಯಾ?
ನಿಮ್ಮ ಡಾಕ್ಟ್ರ ವಿಳಾಸ ಕೊಡಿ. ನಾವೂ ಚೆಕ್ ಮಾಡಿಸಿಕೊಳ್ಳಬೇಕೆಂದಿದ್ದೀವೆ 🙂
ಧನ್ಯವಾದ.
ಅಬ್ಬಾ……ಎಷ್ಟು ಚೆನ್ನಾಗಿ ಬಿಂಬಿಸಿದ್ದಿರಾ ಆ ನಿಮ್ಮ ಸುಂದರವಾದ ದಿನಗಳು ಮತ್ತು ಕ್ಷಣಗಳನ್ನು ಅಬ್ಬಬ್ಬಾ. ಕಾಲೇಜು ದಿನಗಳು ನಿಜವಾಗಿಯು ರೋಮಾಂಚನ,ನೋವು-ನಲಿವು,ಸಂತೋಷದಿಂದ ಕೂಡಿರುವ ದಿನಗಳು..
ತುಂಬಾ ಚೆನ್ನಾಗಿ ಬರೆದಿದ್ದಿರಾ… ಮುಖ್ಯವಾಗಿ ಅವಿ-ಮಲ್ಲು ಪಾತ್ರಗಳು ರೋಮಾಂಚನ ಉಂಟುಮಾಡುತ್ತದೆ ಪ್ರತಿ ಸಾಲಿನಲ್ಲೂ ಕೂತೂಹಲ ಎದ್ದುಕಾಣುತ್ತದೆ..
ಪುಷ್ಪಲತಾ ಅವರಿಗೆ ಸ್ವಾಗತ.
ನಿಮ್ಮ ಮೆಚ್ಚುಗೆಗೆ ಧನ್ಯವಾದ. ಬಹುಶಃ ನಿಮ್ಮ ಕಾಲೇಜು ಜೀವನವೂ ಇದೇ ತರಹದ ಆತ್ಮೀಯ ನೆನಪುಗಳಿಗೆ ಕಾರಣವಾಗುವ ಸನ್ನಿವೇಶಗಳನ್ನು ಒಳಗೊಂಡರಬಹುದು.
– ಶುಭವಾಗಲಿ
To
avinash
i hope iam guessing correctly,
i know akll the four people
sugur gangadhar
bislehalli jagadish
hosadurga mallesh
mangalore avinash
send your emailid i will contact your friends share this article
by reading this article i got remembered my college days with u & ur friend
lingadevaru
ಹಾಯ್ ಲಿಂಗದೇವರು.
ಬಹಳ ಆಶ್ಚರ್ಯ. ಎಷ್ಟು ವರ್ಷದ ಬಳಿಕ ನಿಮ್ಮ ಭೇಟಿ!
ಮೇಲ್ ಐಡಿ ಕಳ್ಸಿದೀನಿ ನೋಡಿ.
ಸಖತ್ ಖುಷಿ ಆಯ್ತು….
ಧನ್ಯವಾದ.