ವಂಚಕರಿಗೆ, ವಿಶೇಷವಾಗಿ ಸೈಬರ್ ಕ್ರಿಮಿನಲ್‌ಗಳಿಗೆ ಪ್ರತಿಯೊಂದು ವಿಪತ್ತು ಕೂಡ ಒಂದು ಅವಕಾಶವಿದ್ದಂತೆಯೇ. ಆತಂಕದಲ್ಲಿರುವ ಜನರನ್ನು ಹೇಗೆ ಸುಲಿಯುವುದು ಎಂದು ಲೆಕ್ಕಾಚಾರ ಹಾಕುತ್ತಲೇ ಇರುತ್ತಾರೆ. ಇತ್ತೀಚೆಗೆ, ಕೊರೊನಾ ವೈರಸ್ ಪೀಡಿತರ ಸಂಕಷ್ಟಕ್ಕೆ ಆಸರೆಯಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಾಳಜಿ (ಪಿಎಂ ಕೇರ್ಸ್) ನಿಧಿ ಸ್ಥಾಪಿಸಿ ಘೋಷಣೆ ಮಾಡಿದ ತಕ್ಷಣ ಕಾರ್ಯಪ್ರವೃತ್ತರಾದ ಈ ಸೈಬರ್ ವಂಚಕರು, ಅದೇ ಹೆಸರನ್ನೇ ಹೋಲುವ ಅದೆಷ್ಟೋ ಯುಪಿಐ ಐಡಿಗಳನ್ನು ವಿಭಿನ್ನ ಬ್ಯಾಂಕುಗಳಲ್ಲಿ ನೋಂದಾಯಿಸಿಕೊಂಡು, ಹಣ ಮಾಡುವ ದಂಧೆಗಿಳಿದಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಬೇಕಾಯಿತು. pmcares@sbi ಎಂಬ ಯುಪಿಐ ಐಡಿಗೆ ಮಾತ್ರವೇ ಹಣ ಕಳುಹಿಸುವಂತೆ ಅದು ಸಾರ್ವಜನಿಕರನ್ನು ವಿನಂತಿಸಿತು. pmcare ಎಂದೋ, ಅಥವಾ ಬೇರೆ ಬ್ಯಾಂಕ್ ಖಾತೆಗಳ ಹೆಸರಿನೊಂದಿಗೆ pmcares ಇರುವ ಐಡಿಗಳಿಗೆ ಹಣ ಕಳುಹಿಸಬಾರದೆಂದು ಸೈಬರ್ ಭದ್ರತಾ ಸಂಸ್ಥೆಯಾಗಿರುವ CERT ಕೂಡ ಹೇಳಿದೆ.
ಇದೀಗ, ಕೊರೊನಾ ವೈರಸ್ ಪೀಡೆಯಿಂದಾಗಿ ಮನೆಯಲ್ಲೇ ಕುಳಿತಿರಬೇಕಾದ ಸಾಲಗಾರ ಉದ್ಯೋಗಿಗಳಿಗೆ ನೆರವಾಗಲೆಂದು ಮೂರು ತಿಂಗಳು ಕಂತು ಕಟ್ಟದೇ ಇರಬಹುದಾದ ಅವಕಾಶವನ್ನೂ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಕ ಕೊಡಿಸಿದೆ. ಇದನ್ನೂ ಸೈಬರ್ ವಂಚಕರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ.
ಬ್ಯಾಂಕ್ ಅಧಿಕಾರಿಯೆಂದೋ ಅಥವಾ ನಿಮ್ಮ ಸಾಲದಾತ ಬ್ಯಾಂಕಿನ ಪ್ರತಿನಿಧಿಯೆಂದೋ ಯಾರೋ ಒಬ್ಬರು ನಿಮಗೆ ಕರೆ ಮಾಡಿ ನಂಬಿಸುತ್ತಾರೆ. ನಿಮ್ಮ ಸಾಲದ ಮೂರು ತಿಂಗಳ ಮಾಸಿಕ ಕಂತುಗಳನ್ನು ಕಟ್ಟದೇ ಭಾರಿ ಪ್ರಯೋಜನ ಪಡೆಯಬೇಕೇ? ಎಂದು ಕೇಳುತ್ತಾರೆ. ಹಾಗೂ ಸರ್ಕಾರದ ಈ ಯೋಜನೆ ಬಗ್ಗೆ ನಿಮಗೆ ವಿವರಣೆ ನೀಡುತ್ತಾರೆ ಮತ್ತು ನಿಮ್ಮ ಸಾಲದ ಕಂತುಗಳ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತಾರೆ. ಸಾಲದ ಕಂತುಗಳನ್ನು ಮುಂದೂಡಬೇಕೆಂದಿದ್ದರೆ ನಿಮ್ಮ ಮೊಬೈಲ್ ಫೋನ್‌ಗೆ ಬರುವ ಏಕ ಕಾಲಿಕ ಪಾಸ್‌ವರ್ಡ್ (ಒಟಿಪಿ) ಹಂಚಿಕೊಳ್ಳಿ ಎಂದು ಪುಸಲಾಯಿಸುತ್ತಾರೆ. ಬ್ಯಾಂಕಿಗೆ ಹೋಗದೆಯೇ ಅಥವಾ ಬ್ಯಾಂಕಿನ ಅಧಿಕಾರಿಗಳನ್ನು ಸಂಪರ್ಕಿಸದೆಯೇ ನಮ್ಮ ಕೆಲಸ ಕುಳಿತಲ್ಲೇ ಆಗಿಬಿಡುತ್ತದೆ ಎಂಬ ಧೈರ್ಯದಿಂದ ನೀವೂ ಒಟಿಪಿ ಹಂಚಿಕೊಳ್ಳುತ್ತೀರಿ. ಅಲ್ಲಿಗೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರುವ ಹಣವನ್ನೂ ಲಪಟಾಯಿಸಲು ಈ ಸೈಬರ್ ವಂಚಕರಿಗೆ ಅನುಕೂಲ ಮಾಡಿಕೊಟ್ಟಿರುತ್ತೀರಿ. ನಿಮ್ಮ ಫೋನ್ ಸಂಖ್ಯೆಗೆ ಲಿಂಕ್ ಆಗಿರುವ ಖಾತೆಯಿಂದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಲು ಅಗತ್ಯವಿರುವ ಒಟಿಪಿಯನ್ನು ನಿಮಗರಿವಿಲ್ಲದಂತೆಯೇ ನೀವು ಕೊಟ್ಟಿರುತ್ತೀರಿ.
ಹೀಗಾಗಿ, ಯಾವುದೇ ಕಾರಣಕ್ಕೂ ಯಾರ ಜೊತೆಗೂ ಒಟಿಪಿಯನ್ನಾಗಲೀ, ಬೇರಾವುದೇ ಖಾಸಗಿ ಮಾಹಿತಿಯನ್ನಾಗಲೀ ಫೋನ್ ಮೂಲಕ ಹಂಚಿಕೊಳ್ಳದಿರುವುದೇ ಕ್ಷೇಮ. ಈ ಕುರಿತು ಸೈಬರ್ ತಜ್ಞರು, ರಿಸರ್ವ್ ಬ್ಯಾಂಕ್ ಹಾಗೂ ಇತರ ಬ್ಯಾಂಕುಗಳು ಕೂಡ ತಮ್ಮ ಗ್ರಾಹಕರಿಗೆ ಈಗಾಗಲೇ ಎಚ್ಚರಿಕೆ ನೀಡಿವೆ.