ಅವಿನಾಶ್ ಬಿ.

ಆಗ ಪ್ರೆಸ್, ಎಕ್ಸ್-ಪ್ರೆಸ್, ನ್ಯೂ ಮೀಡಿಯಾ…!

ನಾನು ಅವಿನಾಶ್ ಬಿ. ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲವೇ?

ಮೂಲತಃ ಮಂಗಳೂರಿನ, ಈಗ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ನಾನು, ಪತ್ರಕರ್ತನಾಗಿ ಸುಮಾರು ಎರಡು ದಶಕಗಳಿಗೂ ಹೆಚ್ಚುಕಾಲಗಳಿಂದ ಮುಂಬಯಿ, ಮಂಗಳೂರು, ಬೆಂಗಳೂರು, ಮಂಗಳೂರು, ಚೆನ್ನೈ ಬಳಿಕ ಮತ್ತೆ ಬೆಂಗಳೂರಿಗೆ ಬಂದು, ಬದಲಾವಣೆಯೇ ಜಗದ ನಿಯಮ ಎಂಬ ಧ್ಯೇಯ ವಾಕ್ಯಕ್ಕೆ ಕಟ್ಟುಬಿದ್ದವ. ಹೇಗೂ ಬದಲಾವಣೆ. ಇದರ ಪರಿಣಾಮವೋ ಎಂಬಂತೆ ಮುದ್ರಣ ಮಾಧ್ಯಮ ಕ್ಷೇತ್ರಕ್ಕೆ ಗುಡ್ ಬೈ ಹೇಳಿ, ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿರಿಸಿದವನಾದರೂ, ಬಿಟ್ಟರೂ ಬಿಟ್ಟಿರಲಾಗದ ಮೀಡಿಯಾ ಎಂಬೋ ಧನಾತ್ಮಕ ವ್ಯಸನ ಮತ್ತೆ ಇಂಟರ್ನೆಟ್ ಮೂಲಕ ನನಗಂಟಿಕೊಂಡಿದ್ದು ನನಗರಿವಿಲ್ಲದಂತೆಯೇ. ಈ ಕ್ಷೇತ್ರವಂತೂ ನನಗೆ ಕಲಿಸಿದ ಪಾಠ ಅನೇಕ. ಅದಕ್ಕಾಗಿ ನನ್ನೊಳಗಿನ ಮಿಡಿತವನ್ನು ನೆಟ್ ಮೂಲಕ ಅಕ್ಷರ ರೂಪಕ್ಕಿಳಿಸುವ ಸಾಹಸದ ಫಲ ಈ ಜಾಲ ತಾಣ….

ಸಾಫ್ಟ್‌ವೇರ್ ಕ್ಷೇತ್ರಕ್ಕೇಂತ ಹೋದವನಾದರೂ, ಮಾಧ್ಯಮದ ಆಕರ್ಷಣೆ ಬಿಟ್ಟಿರಲಿಲ್ಲ. ಪರಿಣಾಮವಾಗಿ ಅಂತರ್ಜಾಲ ಮಾಧ್ಯಮ ವೆಬ್‌ದುನಿಯಾ ಎಂಬ ಕನ್ನಡ ತಾಣದ ಹೊಣೆಯೊಂದಿಗೆ ನನ್ನನ್ನು ಕೈಬೀಸಿ ಎರಡೂ ತೋಳಿನಿಂದ ಅಪ್ಪಿಕೊಂಡಿತ್ತು. ಕನ್ನಡದ ಗಂಧವಿಲ್ಲದ ದೂರದ ಚೆನ್ನೈಯಲ್ಲಿ ಆರು ವರ್ಷಗಳ ಕಾಲ ಎಂಎಸ್ಎನ್ ಕನ್ನಡ, ಯಾಹೂ ಕನ್ನಡ ಹಾಗೂ ವೆಬ್‌ದುನಿಯಾ ಕನ್ನಡ ಎಂಬ ಮೂರು ಪೋರ್ಟಲ್‌ಗಳನ್ನು ಆರಂಭಿಸಿದ ಮತ್ತು ಏಕಕಾಲದಲ್ಲಿ ಮೂರನ್ನೂ ನಿಭಾಯಿಸಿದ ಅನೂಹ್ಯವಾದ ಅನುಭವವೇ ನನ್ನನ್ನು ಮರಳಿ ರಾಜ್ಯಕ್ಕೆ ಕರೆಸಿಕೊಂಡಿತ್ತು. ಮರಳಿ ಬೆಂಗಳೂರಿಗೆ ಬಂದಿದ್ದು ನಾನು ಈ ಹಿಂದೆ ಕೆಲಸ ಮಾಡಿದ ವಿಜಯ ಕರ್ನಾಟಕಕ್ಕೆ… ಅದು ಕೂಡ ವಿಜಯ ಕರ್ನಾಟಕದ ವೆಬ್ ಪೋರ್ಟಲ್‌ಗಾಗಿಯೇ. ಅದನ್ನು ಕಟ್ಟಿ ಬೆಳೆಸುವ ಹೊಣೆಗಾರಿಕೆಯನ್ನು ನೀಡಿದವರು ಟೈಮ್ಸ್ ಗ್ರೂಪಿನ ಅಂದಿನ ಸಿಇಒ ಸುನಿಲ್ ರಾಜಶೇಖರ್. ವಿಜಯ ಕರ್ನಾಟಕ ಡಾಟ್ ಕಾಂ ಆರಂಭಿಸಿ, ಅದನ್ನು ಅಲ್ಪಾವಧಿಯಲ್ಲಿಯೇ ಕನ್ನಡ ಪತ್ರಿಕಾ ರಂಗದ ಶ್ರೇಷ್ಠ ಪೋರ್ಟಲ್ ಆಗಿ ರೂಪಿಸುವಲ್ಲಿ, ಹಗಲಿರುಳೆನ್ನದ ಶ್ರಮವಿದ್ದುದು ಸುಳ್ಳಲ್ಲ. ಆ ಬಳಿಕ ನಾನು ಕೆಲಸ ಮಾಡುತ್ತಿದ್ದ ಕಂಪನಿ VPL ನಿಂದ MMCL ಆಗಿ ಬದಲಾಯಿತು. ಕೊನೆಗೆ ನನ್ನ ಪೋರ್ಟಲ್ ತಂಡವೇ ಟೈಮ್ಸ್ ಇಂಟರ್ನೆಟ್ ಲಿ. ಎಂಬ ಸಂಸ್ಥೆಗೆ ವರ್ಗಾವಣೆಗೊಂಡಾಗ, ಅಲ್ಲಿ ನನ್ನ ಬಾಸ್ ರಾಜೇಶ್ ಕಾಲ್ರಾ. ಟೈಮ್ಸ್ ಸಮೂಹದ ಎಲ್ಲ ಸುದ್ದಿಯ ವೆಬ್ ತಾಣಗಳ ಮುಖ್ಯಸ್ಥರಾಗಿ ಅವರ ಮಾರ್ಗದರ್ಶನದಲ್ಲಿ ವಿಜಯ ಕರ್ನಾಟಕವು ಮತ್ತೊಂದು ಶಿಖರವನ್ನೇರಿತು.

ಇದಾಗಿ, 8 ವರ್ಷಗಳ ಕಾಲ ಆನ್‌ಲೈನ್ ಕೆಲಸ ಮಾಡುತ್ತಲೇ, ಜನ ಸಾಮಾನ್ಯರಿಗೂ ಟೆಕ್ನಾಲಜಿಯನ್ನು ಸುಲಭವಾಗಿಸುವ ಉದ್ದೇಶದಲ್ಲಿ ಪತ್ರಿಕೆಯಲ್ಲಿಯೂ ಟೆಕ್ನಾಲಜಿ ಅಂಕಣವನ್ನು ನಿರಂತರವಾಗಿ 8 ವರ್ಷಗಳ ಕಾಲ ಬರೆದೆ, ಬರೆದೆ, ಬರೆದೆ. ನನ್ನೊಡನಿದ್ದ ಎಲ್ಲ ಎಡಿಟರ್‌ಗಳೂ ನನ್ನಿಂದ ಬರೆಸಿದರು, ಬರೆಸಿದರು, ಬರೆಸಿದರು. ಅಷ್ಟು ಹೊತ್ತಿಗೆ, ಕೊಂಚ ತಿರುಗಿ ನೋಡಿದಾಗ, ಅರೆ! ಲೈಫು ಸ್ಟ್ಯಾಗ್ನೆಂಟ್ ಆಯಿತಲ್ಲಾ? ಎಂಬುದು ಥಟ್ಟನೇ ಗೋಚರಿಸಿತು. ಆಗಷ್ಟೇ ಟೈಮ್ಸ್ ಇಂಟರ್ನೆಟ್ ಲಿ. ಸಂಸ್ಥೆಯಲ್ಲಿ ಬದಲಾವಣೆಯ ಗಾಳಿ ಬೀಸಿತು. ಅಷ್ಟರಲ್ಲಾಗಲೇ ಯಕ್ಷಗಾನದ ತುಡಿತವಂತೂ ತಡೆದುಕೊಳ್ಳಲಾಗಲೇ ಇಲ್ಲ. ಕಟೀಲು ಮೇಳಕ್ಕೆ ಮದ್ದಳೆಗಾರನಾಗಿ ಸೇರುವ ನಿರ್ಣಯದೊಂದಿಗೆ ಮತ್ತು ಕೆಲವೊಂದು ಫ್ರೀಲ್ಯಾನ್ಸಿಂಗ್ ಭರವಸೆಯೊಂದಿಗೆ ಕೆಲಸಕ್ಕೆ ರಾಜೀನಾಮೆ ನೀಡಿಬಿಟ್ಟೆ.

ಆದರೆ, ಅಲ್ಲೇ ಸಮೀಪದಲ್ಲಿ ಈ ಆನ್‌ಲೈನ್ ಮೀಡಿಯಾದಲ್ಲಿ ನನಗಾಗಿಯೇ ಕಾಯುತ್ತಿದ್ದಂತಿದ್ದ ಹುದ್ದೆಯೊಂದು ಕೈಬೀಸಿ ಕರೆಯಿತು. ದಿ ಮೈಸೂರು ಪ್ರಿಂಟರ್ಸ್ ಲಿ.ನ ಪ್ರಜಾವಾಣಿ ಆನ್‌ಲೈನ್ ತಾಣದ ಜವಾಬ್ದಾರಿಯೊಂದು ಆರೇಳು ತಿಂಗಳಿಂದ ಖಾಲಿ ಇತ್ತು. ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟರು ಹಾಯ್ ಎಂದರು. ಬಳಗದ ನಿರ್ದೇಶಕರಲ್ಲೊಬ್ಬರಾದ ಶಾಂತ ಕುಮಾರ್ ಜೈ ಎಂದರು. ನಾನು ಸೈ ಅಂದುಬಿಟ್ಟೆ.

ಹಿನ್ನೆಲೆ: ಕರ್ನಾಟಕ ಕರಾವಳಿಯ ರಮ್ಯಾದ್ಭುತ ಕಲೆ ಎಂದೆನಿಸಿಕೊಂಡು ದೇಶ ವಿದೇಶಗಳಲ್ಲಿ ಮನೆಮಾತಾಗಲು ಹೊರಟಿರುವ ಯಕ್ಷಗಾನವೆಂಬ ಶ್ರೀಮಂತ ಕಲಾ ಪ್ರಕಾರ ನನ್ನ ರಕ್ತದಲ್ಲೇ ಇದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳಬೇಕಾಗಿದೆ. ಇದಕ್ಕೆ ಕಾರಣ, ನನ್ನ ಹೆತ್ತವರು. ಯಕ್ಷಗಾನ ರಂಗದಲ್ಲಿ ಬೈಪಾಡಿತ್ತಾಯ ಎಂಬ ಉಪನಾಮ ಕೇಳದವರೇ ಇಲ್ಲ. ಅಷ್ಟರ ಮಟ್ಟಿಗೆ ತಂದೆ, ಹಿರಿಯ ಯಕ್ಷಗಾನ ಕಲಾವಿದರೂ, ಉತ್ತಮ ಗುರುಗಳೂ ಆದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ತಾಯಿ, ಏಕೈಕ ವೃತ್ತಿಪರ ಮಹಿಳಾ ಭಾಗವತರೆಂಬ ಹೆಗ್ಗಳಿಕೆಗೆ ಪಾತ್ರವಾದ ಲೀಲಾ ಬೈಪಾಡಿತ್ತಾಯ ಅವರ ದಣಿವರಿಯದ ಸಾಧನೆ.

ಹವ್ಯಾಸ: ಇಂಥ ಹೆಮ್ಮೆಯ ಹೆತ್ತವರ ಮತ್ತು ಅವರು ಸವೆಸಿದ ಕ್ಷೇತ್ರದಲ್ಲಿಯೇ ಆಡುತ್ತಾಡುತ್ತಾ ಬೆಳೆದ ನನಗೆ ಯಕ್ಷಗಾನದ ಗಂಧ-ಗಾಳಿ ಹತ್ತದಿರಲು ಸಾಧ್ಯವೇ? ಯಕ್ಷಗಾನದಲ್ಲಿ ಹಿಮ್ಮೇಳದ ಸಾಧನಗಳಾದ ಚೆಂಡೆ-ಮದ್ದಳೆಗಳಲ್ಲಿ ಬೆರಳಾಡಿಸಬಲ್ಲಷ್ಟು ಪರಿಣತಿ ಪಡೆದಿರುವ ನಾನು, ತಾಯಿಯ ಗಾಯನ ಪರಂಪರೆಯನ್ನು ಉಳಿಸುವಲ್ಲಿ ಅದನ್ನು ಕಲಿಯಲಿಲ್ಲವಲ್ಲಾ ಎಂಬ ಕೊರಗು ಮನದ ಮೂಸೆಯಲ್ಲಿ ಇದ್ದೇ ಇದೆ. ಬದಲಾವಣೆಯೇ ಜಗದ ನಿಯಮ ಎಂಬುದು ಇಲ್ಲಿಯೂ ಅನ್ವಯಿಸಿತೇ ಎಂಬ ಪ್ರಶ್ನೆಯೊಂದಿಗೆ ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತಿದ್ದೇನೆ.

ಮುಂದೆ ನನ್ನ ಸುಮ್ಮನಿರಲಾರದ ಕೈಗಳು, ಬಾಲ್ಯದಿಂದಲೂ ಸೆಳೆತಕ್ಕೀಡಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅದ್ಭುತ ಧ್ವನಿ ಹೊಮ್ಮಿಸುವ ಮತ್ತು ಯಕ್ಷಗಾನದ ಮದ್ದಳೆಯನ್ನೇ ಸ್ವಲ್ಪಮಟ್ಟಿಗೆ ಹೋಲುವ ಮೃದಂಗ ಎಂಬ ತಾಳವಾದ್ಯದತ್ತ ತನ್ನ ಆಕರ್ಷಣೆಯನ್ನು ತಡೆಯದಾಯಿತು. ಪರಿಣಾಮ, ಕರ್ನಾಟಕದ ಶ್ರೇಷ್ಠ ಮೃದಂಗ ವಾದಕರಲ್ಲೊಬ್ಬರಾದ, ಮಂಗಳೂರು ಆಕಾಶವಾಣಿ ಕಲಾವಿದ ಎಂ.ಆರ್.ಸಾಯಿನಾಥ್ ಅವರ ಶಿಷ್ಯತ್ವ. ಇಲ್ಲೂ ಕಾಡಿದ್ದು ಬದಲಾವಣೆಯ ನಿಯಮವೋ, ವಿಧಿ ಬರಹವೋ… ಅಂತೂ ಅದರಲ್ಲಿ ಪರಿಪೂರ್ಣತೆ ಸಾಧಿಸಲಾಗಲಿಲ್ಲ. ಸಣ್ಣಪುಟ್ಟ ಸಂಗೀತ ಕಛೇರಿಗಳಿಗೆ ವಿದ್ವತ್ ಪ್ರದರ್ಶಿಸುವ ಗೋಜಿಗೆ ಹೋಗದೆ ಮೃದಂಗ ವಾದಿಸುವಷ್ಟಕ್ಕೇ ನನ್ನನ್ನು ಸೀಮಿತಗೊಳಿಸಿದ ನನ್ನದೇ ಔದಾಸೀನ್ಯವೋ ಅಥವಾ ಪತ್ರಕರ್ತನ ಕೆಲಸದ ಒತ್ತಡವೋ, ಅಂತೂ ಅದರ ಕಲಿಕೆಗೆ ಬೇರೆಯ ಕೆಲವು ಕಾರಣಗಳೂ ಸೇರಿಕೊಂಡು, ತಡೆಯುಂಟಾಯಿತು. ಘಟಂ ಕೂಡ ನುಡಿಸಿದೆ, ರಾಮಕೃಷ್ಣಾಶ್ರಮದಲ್ಲಿರುವಾಗ ತಬಲಾ ಕೂಡ ನುಡಿಸುತ್ತಿದ್ದೆ. ಇದರ ನಡುವೆಯೂ ಮಂಗಳೂರಿನ ಕಲಾನಿಕೇತನದಲ್ಲಿ ಹಿರಿಯರಾದ ಗೋಪಾಲಕೃಷ್ಣ ಅಯ್ಯರ್ ಅವರಲ್ಲಿ ಕೊಳಲು ವಾದನ ಅಭ್ಯಾಸ ಆರಂಭಿಸಿದ್ದೆನಷ್ಟೇ. ಅಷ್ಟರಲ್ಲಿ…..

ಅನಿರೀಕ್ಷಿತವಾಗಿ ಕರ್ನಾಟಕ ಸಂಗೀತವು ಇನ್ನಿಲ್ಲದಂತೆ ಬೆಳಗುತ್ತಿರುವ ಪ್ರದೇಶವಾದ ಚೆನ್ನೈಯಿಂದ ಉದ್ಯೋಗವೊಂದು ಕೈಬೀಸಿ ಕರೆದಾಗ, ಕಲಾ ಮಾತೆಯೇ ಕರೆದಂತಾಗಿ, ಕುಲದೇವಿಯೇ ಕರುಣಿಸಿದಂತಾಗಿ ಪುಳಕಗೊಂಡು ಆದದ್ದಾಗಲಿ ಎಂದು ಚೆನ್ನೈಯ ರೈಲೇರಿದಾಗ ಒಂದು ರೀತಿಯ ಧನ್ಯತಾ ಭಾವ. ಅಲ್ಲಿಯೂ ಅಲ್ಪಕಾಲ ಮೃದಂಗ ವಿದ್ವಾಂಸ ಗಣೇಶ್ ಕೆ. ಆರ್. ಅವರಲ್ಲಿ ಮೃದಂಗಾಭ್ಯಾಸ ಮುಂದುವರಿಕೆ. ಸಂಗೀತ, ಭರತನಾಟ್ಯ ಕ್ಷೇತ್ರದಲ್ಲಿ ಹೆಸರು ಗಳಿಸುವ ಮಹದಾಸೆಯಿತ್ತಾದರೂ, ಅನ್ನ ಕೊಡುವ ಕೆಲಸವೇ ಪ್ರಧಾನವಾಯಿತು. ಹೀಗಾಗಿ ಅದು ಕೂಡ ಹವ್ಯಾಸವೇ ಆಗಿ ಉಳಿಯಿತು.

ಪತ್ರಿಕಾ ರಂಗ: ವಿದ್ಯೆಗಾಗಿ ದುಡ್ಡಿಲ್ಲದ ಸಂದರ್ಭ, ಹೋಟೆಲ್‌ನಲ್ಲಿ, ಲಾಡ್ಜ್‌ನಲ್ಲಿ ಕೆಲಸ ಮಾಡಿಕೊಂಡೇ ಹುಟ್ಟೂರಿಗೆ ದೂರದ ತಿಪಟೂರು ಎಂಬಲ್ಲಿ ವಿಜ್ಞಾನ ಪದವಿ ಮುಗಿಸಿದ ತಕ್ಷಣ, ಬದಲಾವಣೆ ಬಯಸಿ ಮುಂಬಯಿಗೆ ಹಾರಿದ ನನಗೆ, ಪತ್ರಿಕಾ ರಂಗ ಪ್ರವೇಶಕ್ಕೆ ಮೊದಲ ಮೆಟ್ಟಿಲಾದ ಮುಂಬಯಿಯ ಕರ್ನಾಟಕ ಮಲ್ಲ ಕನ್ನಡ ದಿನಪತ್ರಿಕೆಯ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಆ ಬಳಿಕ ಅನಾರೋಗ್ಯದಿಂದಾಗಿ ಮತ್ತೆ ಮಂಗಳೂರಿಗೆ ಎಳೆದುತಂದಂತೆ ಬಂದು ಬಿದ್ದ ನನ್ನೊಳಗಿನ ಪತ್ರಕರ್ತನನ್ನು ಬಡಿದೆಬ್ಬಿಸಿದ ಮಂಗಳೂರಿನ ಕನ್ನಡ ಜನ ಅಂತರಂಗ ದಿನ ಪತ್ರಿಕೆ ಮತ್ತು ಕರಾವಳಿ ಅಲೆ ಸಂಜೆ ದೈನಿಕದ ಸಂಪಾದಕ ಮತ್ತು ಮಾಲೀಕರೂ ಆದ ಬಿ.ವಿ.ಸೀತಾರಾಂ, ದೇಶದ ನಂ.1 ಕನ್ನಡ ದಿನಪತ್ರಿಕೆ ಎಂಬ ನಾಮಧೇಯವನ್ನು ಅಲ್ಪ ಕಾಲಾವಧಿಯಲ್ಲಿ ಪಡೆದು ಪತ್ರಿಕಾ ರಂಗದಲ್ಲಿ ಕ್ರಾಂತಿಯ ಕಹಳೆಯೂದಿದ ವಿಜಯ ಕರ್ನಾಟಕಕ್ಕೆ ನನ್ನನ್ನು ಸೇರಿಸಿಕೊಂಡು ತಿದ್ದಿ ತೀಡಿದ ಈಶ್ವರ ದೈತೋಟ, ಆ ಬಳಿಕ ನನ್ನೊಳಗಿನ ಪತ್ರಕರ್ತನಿಗೆ ಹೊಸ ರೂಪ, ನವೀನತೆ ತುಂಬಿ, ಆಗಾಗ್ಗೆ ಗೆಳೆಯನಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ವಿಶ್ವೇಶ್ವರ ಭಟ್, ಮಂಗಳೂರು ಕಚೇರಿಯಲ್ಲಿ ಸದಾ ಕಾಲ ನನ್ನನ್ನು ಕಾರ್ಯನಿರತನಾಗುವಂತೆ ಮಾಡಿ, ನನ್ನೊಳಗಿನ ಔದಾಸೀನ್ಯವನ್ನು ತೊಡೆದು ಹಾಕಿದ ಕುಮಾರನಾಥ್….. ಹೀಗೆಯೇ ಬೆಳೆಯುತ್ತಿದೆ ನನ್ನನ್ನು ತಿದ್ದಿ ತೀಡಿದವರ ಪಟ್ಟಿ. ಬೆಂಗಳೂರಿಗೆ ಮರಳಿದ ಬಳಿಕ ವಿಕ ಸಂಪಾದಕ ಹುದ್ದೆ ಅಲಂಕರಿಸಿದ್ದ ಇ.ರಾಘವನ್, ಸುಗತ ಶ್ರೀನಿವಾಸ ರಾಜು, ತಿಮ್ಮಪ್ಪ ಭಟ್, ಹರಿಪ್ರಕಾಶ್ ಕೋಣೆಮನೆ ಅವರೊಂದಿಗೆ ಕೆಲಸ ಮಾಡಿಯೂ ಸಾಕಷ್ಟು ಕಲಿತುಕೊಂಡಿದ್ದೇನೆ. ಟೈಮ್ಸ್ ಇಂಟರ್ನೆಟ್ ಬಳಗದಲ್ಲಿ ರಾಜೇಶ್ ಕಾಲ್ರಾ ಅವರ ಕೈಕೆಳಗೆ ಟೈಮ್ಸ್ ಬಳಗದ ಎಲ್ಲ ಭಾಷಾ ಜಾಲತಾಣಗಳ ಮುಖ್ಯಸ್ಥರೊಂದಿಗೆ ಸಮೂಹ ಸಂಪರ್ಕದೊಂದಿಗೆ ನಾನು ಬೆಳೆದ ಬಗೆ, ಅಥವಾ ಅವರೆಲ್ಲ ಸೇರಿ ನನ್ನನ್ನು ಬೆಳೆಸಿದ ಬಗೆ ಅದ್ಭುತ. ಈಗ ಪ್ರಜಾವಾಣಿಯಲ್ಲಿ ರವೀಂದ್ರ ಭಟ್ಟರ ಸಮರ್ಥ ಮುಂದಾಳುತ್ವದಲ್ಲಿ.

ಇಷ್ಟೆಲ್ಲದರ ಮಧ್ಯೆ, ಹೈಸ್ಕೂಲು ವಿದ್ಯಾಭ್ಯಾಸಕ್ಕಾಗಿ ಮಂಗಳೂರಿನ ಶ್ರೀ ರಾಮಕೃಷ್ಣ ಬಾಲಕಾಶ್ರಮ ಸೇರಿದ ನನ್ನೊಳಗಿನ ಒಳ್ಳೆಯ ಗುಣಗಳನ್ನು ಗುರುತಿಸಿ, ನನ್ನೊಳಗಿನ ನನ್ನತನವನ್ನು ಸರಿಯಾದ ದಿಕ್ಕಿಗೆ ಹೋಗುವಂತೆ ನಿರ್ದೇಶಿಸಿದ ಸ್ವಾಮೀಜಿಗಳಾದ ಶ್ರೀ ಜಿತಕಾಮಾನಂದಜಿ ಮಹಾರಾಜ್ ಅವರ ಮಾರ್ಗದರ್ಶನ ಎಂದಿಗೂ ಮರೆಯಲಾಗದು. ಇವರಿಗೆಲ್ಲಾ ಸದಾ ಋಣಿಯಾಗಿದ್ದುಕೊಂಡಿದ್ದೇನೆ. ಬಾಳ ಪಯಣದಲ್ಲಿ ವಾಣಿ, ಮಗ ಅಭಿಷೇಕ್ ಸೇರಿಕೊಂಡಿದ್ದಾರೆ.

ಬದಲಾವಣೆಯೇ ಜಗದ ನಿಯಮ ಯಾಕೆ?

ಬದಲಾವಣೆ ಎಂಬುದು ಆಟೋಮ್ಯಾಟಿಕ್ ಆಗಿ ನನ್ನ ಜೀವನದ ಧ್ಯೇಯವಾಗಿಬಿಟ್ಟಿದೆ. ಕಾರಣ ಹೇಳುತ್ತೇನೆ ಕೇಳಿ. ನನ್ನ ವಾಸಸ್ಥಳಗಳು ಚಿಕ್ಕಂದಿನಿಂದ ಇದುವರೆಗೆ ಬದಲಾಗುತ್ತಲೇ ಬಂದವು. ಕಡಬ, ಕಟೀಲು, ಕುಡುಪು, ಅಳದಂಗಡಿ(ಅರುವ), ಮಂಗಳೂರು, ಬೆಳ್ತಂಗಡಿ, ಧರ್ಮಸ್ಥಳ, ತಿಪಟೂರು, ಮುಂಬಯಿ, ಮಂಗಳೂರು (ಬಜಪೆ), ಚೆನ್ನೈ, ಮತ್ತೀಗ ಬೆಂಗಳೂರು. ಅಂಥಾ ಚೆನ್ನೈಯಲ್ಲೇ ಫ್ಲ್ಯಾಟ್ ಖರೀದಿಸಿದ್ದೀಯಲ್ಲಾ… ಗ್ರೇಟ್ ಅಂತ ಸ್ನೇಹಿತರು, ಆಪ್ತರು ಹೇಳುವಷ್ಟರಲ್ಲಿ, ಅದನ್ನು ಮಾರಿ ಬೆಂಗಳೂರಿಗೆ ಬಂದಿರುವುದು ಒಂಥರಾ ನಾಸ್ಟಾಲ್ಜಿಯಾ ಅನ್ನಬಹುದೇನೋ! ಇನ್ನು ಬೆಂಗಳೂರಲ್ಲಿ ಸ್ವಂತ ಗೂಡು ಕಟ್ಟಿಕೊಂಡಿದ್ದೇನೆ.

ಈ ಪರಿಯಾಗಿ ವಾಸಸ್ಥಳ ಬದಲಾವಣೆಯೊಂದಿಗೆ ನನ್ನ ಶಾಲೆ-ಕಾಲೇಜುಗಳೂ, ಉದ್ಯೋಗಗಳೂ, ಬದಲಾಗತೊಡಗಿದವು. ಆ ಮೇಲೆ ನನ್ನದೇ ಕಾರುಬಾರು. ಉದ್ಯೋಗಗಳನ್ನು ಬದಲಿಸಿದೆ, ಸೆಲ್ ಫೋನ್‌ಗಳನ್ನು ಬದಲಿಸಿದೆ, ಫೋನ್ ಸಿಮ್ ಕಾರ್ಡ್ ಬದಲಿಸಿದ ಕಾರಣ ನಂಬರ್‌ಗಳೂ ಬದಲಾಗತೊಡಗಿದವು. ಮೋಟಾರು ಬೈಕುಗಳನ್ನು ಬದಲಾಯಿಸಿದೆ, ಕಾರುಗಳನ್ನೂ ಖರೀದಿಸಿದೆ-ಬದಲಾಯಿಸುವ ಸಲುವಾಗಿ! ಇ-ಮೇಲ್ ಐಡಿಗಳನ್ನು ಬದಲಾಯಿಸತೊಡಗಿದೆ. ನನ್ನ ಇಚ್ಛೆಗಳನ್ನು ಬದಲಿಸಿದೆ, ಆಕಾಂಕ್ಷೆಗಳನ್ನು ಬದಲಿಸಿದೆ, ಮಹತ್ವಾಕಾಂಕ್ಷೆ ಬದಲಿಸಿದೆ, ಏನೇನೋ ಬದಲಾಗತೊಡಗಿದವು. ಈ ಬದಲಾವಣೆ ಎಂಬುದು ನಿರಂತರ ಪ್ರಕ್ರಿಯೆ.

ಹಾಗಿದ್ದರೆ ಈಗ ನನ್ನ ಜೀವನದ ಧ್ಯೇಯವೇ ಆಗಿಬಿಟ್ಟಿರುವ ಬದಲಾವಣೆಯನ್ನೇ ಬದಲಿಸಿದರೆ ಹೇಗೆ?

ಪ್ರಶ್ನೆಗೆ ಉತ್ತರ ಗೊತ್ತಿಲ್ಲ!

ಸಂಪರ್ಕ: avinash ಡಾಟ್ net ಅಟ್ ಜೀಮೇಲ್.com