ಆ್ಯಪಲ್ iPhone 14 ವಿಮರ್ಶೆ: ವೇಗ, ಹಗುರ, ಉತ್ತಮ ಕ್ಯಾಮೆರಾ

ಕಳೆದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಆ್ಯಪಲ್ iPhone 14 ಅನ್ನು ಸುಮಾರು ಒಂದು ತಿಂಗಳ ಕಾಲ ಬಳಸಿ ನೋಡಿದ ಸಂದರ್ಭದಲ್ಲಿ, ಅದರ ಕಾರ್ಯಾಚರಣೆ, ವೇಗ, ಕ್ಯಾಮೆರಾ ಗುಣಮಟ್ಟ ಹೇಗಿದೆ? ಇಲ್ಲಿದೆ ಮಾಹಿತಿ. ಐಫೋನ್ 13ಕ್ಕೆ ಹೋಲಿಸಿದರೆ, ಅದೇ ವಿನ್ಯಾಸ ಆದರೆ ಕಾರ್ಯಾಚರಣೆ ಮತ್ತು ವೇಗ – ಹೆಚ್ಚು ಗುಣಮಟ್ಟದ ಕ್ಯಾಮೆರಾ ಈ ಐಫೋನ್ 14ರಲ್ಲಿದೆ.

ಇದನ್ನೂ ಓದಿ: ಐಫೋನ್ 14 ಪ್ರೊ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಪ್ರಮುಖ ವೈಶಿಷ್ಟ್ಯಗಳು
ಗಾತ್ರ: 146.7×71.5×7.8mm, ತೂಕ: 172 ಗ್ರಾಂ
ಡಿಸ್‌ಪ್ಲೇ: 6.10 ಇಂಚಿನ ಸೂಪರ್ ರೆಟಿನಾ XDR OLED, HDR10, 460ppi
ಮುಂಭಾಗ ಹಾಗೂ ಹಿಂಭಾಗದಲ್ಲಿ ಕಾರ್ನಿಂಗ್ ಗಾಜುಗಳು
ಐಪಿ68 ದೂಳು/ಜಲ ನಿರೋಧಕತೆ
ಆ್ಯಪಲ್ ಎ15 ಬಯೋನಿಕ್ ಚಿಪ್‌ಸೆಟ್
ಮೆಮೊರಿ: 512ಜಿಬಿ, 6GB RAM (128 GB ಹಾಗೂ 256 GB ಯಲ್ಲೂ ಲಭ್ಯ)
ಕಾರ್ಯಾಚರಣಾ ವ್ಯವಸ್ಥೆ: ಐಒಎಸ್ 16
ಪ್ರಧಾನ ಕ್ಯಾಮೆರಾ ವೈಡ್ ಲೆನ್ಸ್ 12MP, ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್ 12MP
ಮುಂಭಾಗದ ಕ್ಯಾಮೆರಾ: 12MP
ಕ್ಯಾಮೆರಾ ವೈಶಿಷ್ಟ್ಯಗಳು: 4ಕೆ ವಿಡಿಯೊ, ಸಿನೆಮ್ಯಾಟಿಕ್ ಮೋಡ್
ಬ್ಯಾಟರಿ: 3279 mAh, ವೇಗದ ಚಾರ್ಜಿಂಗ್ ಬೆಂಬಲ
ಕಾರ್ಯಾಚರಣಾ ವ್ಯವಸ್ಥೆ: ಐಒಎಸ್ 16

ವಿನ್ಯಾಸ ಹಾಗೂ ಡಿಸ್‌ಪ್ಲೇ
ಐಫೋನ್ 13ನ್ನೇ ಬಹುತೇಕ ಹೋಲುವ ಐಫೋನ್ 14, ಕೈಯಲ್ಲಿ ಹಿಡಿದುಕೊಳ್ಳುವಾಗ ಕೂಡ ಅದೇ ಭಾವನೆ ನೀಡುತ್ತದೆ. ಅತ್ಯುತ್ತಮ ಬಿಲ್ಡ್ ಗುಣಮಟ್ಟದೊಂದಿಗೆ ಹಗುರವಾಗಿದೆ, ಆದರೆ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿನ್ಯಾಸವು ಆಕರ್ಷಕವಾಗಿ ಗಮನ ಸೆಳೆಯುತ್ತದೆ. ರಿವ್ಯೂಗೆ ದೊರೆತದ್ದು ಬಿಳಿ ಬಣ್ಣದ ಐಫೋನ್ 14 ಆಗಿದ್ದು, ಉಳಿದಂತೆ ಕಪ್ಪು, ನೇರಳೆ ಮತ್ತು ಕೆಂಪು ಬಣ್ಣಗಳಲ್ಲಿಯೂ ಲಭ್ಯವಿದೆ. ವಾಲ್ಯೂಮ್ ಹಾಗೂ ಸೈಲೆಂಟ್ ಬಟನ್‌ಗಳು ಎಡಭಾಗದಲ್ಲಿಯೂ, ಪವರ್ ಬಟನ್ ಬಲಭಾಗದಲ್ಲಿಯೂ ಇದ್ದು, ಕೆಳಭಾಗದಲ್ಲಿ ಸ್ಪೀಕರ್ ಹಾಗೂ ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಇದೆ.

6.1 ಇಂಚಿನ OLED ಪ್ಯಾನೆಲ್ ಡಿಸ್‌ಪ್ಲೇ ಇದ್ದು, ಉತ್ತಮ ರೆಸೊಲ್ಯುಶನ್‌ನಿಂದಾಗಿ ಚಿತ್ರಗಳು, ವಿಡಿಯೊಗಳು ಸ್ಫುಟವಾಗಿ ಮತ್ತು ಬಣ್ಣಗಳು ನಿಖರವಾಗಿ ಗೋಚರಿಸಲು ನೆರವಾಗುತ್ತದೆ. 60Hz ರೀಫ್ರೆಶ್ ರೇಟ್ ಇದ್ದು ಸ್ಕ್ರಾಲಿಂಗ್ ಮತ್ತು ಬ್ರೌಸಿಂಗ್ ಸುಲಲಿತವಾಗಿದೆ.

ಕ್ಯಾಮೆರಾ
12 ಮೆಗಾಪಿಕ್ಸೆಲ್ ವೈಡ್ ಹಾಗೂ 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸರ್‌ಗಳಿರುವ ಪ್ರಧಾನ ಕ್ಯಾಮೆರಾ ಸೆಟಪ್ ಚೌಕಾಕಾರದಲ್ಲಿದ್ದು, ಫ್ಲ್ಯಾಶ್ ಕೂಡ ಇದೆ. ಈ ಬಾರಿ ಫೋಟೋನಿಕ್ ಎಂಜಿನ್ ಎಂಬ ತಂತ್ರಾಂಶ ಸಂಬಂಧಿತ ವ್ಯವಸ್ಥೆಯನ್ನು ಕ್ಯಾಮೆರಾದಲ್ಲಿ ಅಳವಡಿಸಲಾಗಿದ್ದು, ಫೊಟೊ ತೆಗೆಯುವಾಗ ಚಿತ್ರಗಳನ್ನು, ವಿಶೇಷವಾಗಿ ಕಡಿಮೆ ಬೆಳಕಿರುವಲ್ಲಿ ಅತ್ಯುತ್ತಮವಾಗಿ ತೋರಿಸುತ್ತದೆ. ಇದರ ಮೂಲಕ ಚಿತ್ರಗಳ ಗುಣಮಟ್ಟವನ್ನು ಕೂಡ ಹೆಚ್ಚಿಸಲಾಗಿದೆ. ಚಿತ್ರಗಳು ಬಹುತೇಕವಾಗಿ ಐಫೋನ್ 14 ಪ್ರೊ ಗುಣಮಟ್ಟದಲ್ಲೇ ಸೆರೆಯಾಗುತ್ತವೆ (ಅದರಲ್ಲಿರುವುದು 48 ಮೆಗಾಪಿಕ್ಸೆಲ್ ಆಗಿರುವುದರಿಂದಾಗಿ ಸ್ವಲ್ಪ ಹೆಚ್ಚು ಸ್ಪಷ್ಟವಾಗಿರುತ್ತದೆ).

ಚೆನ್ನಾಗಿ ಬೆಳಕಿರುವಲ್ಲಂತೂ ಫೋಟೊ ಹಾಗೂ ವಿಡಿಯೊಗಳು ಅತ್ಯುತ್ತಮವಾಗಿ, ನಿಖರವಾದ ಬಣ್ಣಗಳೊಂದಿಗೆ ಸೆರೆಯಾದವು. ವಿಡಿಯೊ ಶೂಟಿಂಗ್‌ಗೆ ಹೆಚ್ಚು ಬೆಳಕಿರುವಲ್ಲಿ ನೆರವಾಗುವ ಆ್ಯಕ್ಷನ್ ಮೋಡ್ ಪರಿಚಯಿಸಲಾಗಿದೆ. ಇದು ನಡೆಯುತ್ತಾ ವಿಡಿಯೊ ಶೂಟ್ ಮಾಡುವವರಿಗೆ, ವಿಶೇಷವಾಗಿ ಯೂಟ್ಯೂಬರ್‌ಗಳು, ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಮಾಡುವವರಿಗೆ ಹೆಚ್ಚು ಅನುಕೂಲಕರವಾಗಿದೆ. ಜೊತೆಗೆ ಸಿನೆಮ್ಯಾಟಿಕ್ ಮೋಡ್ ಮೂಲಕ ವಿಡಿಯೊಗಳಲ್ಲಿ ಚಲಿಸುವ ವಸ್ತುಗಳ ಮೇಲೆ ಸ್ವಯಂಚಾಲಿತ ಫೋಕಸ್ ಮಾಡಬಹುದಾಗಿದೆ. ಹಿಂದಿನ ಮಾಡೆಲ್‌ಗಳಲ್ಲಿಯೂ ಇರುವ ಈ ಮೋಡ್‌ನ ವಿಶೇಷತೆಯೇನೆಂದರೆ, ವಿಡಿಯೊ ಸೆರೆಹಿಡಿದ ಬಳಿಕ, ಫೋಕಸ್ ಆಗಬೇಕಾದ ವಸ್ತುವನ್ನು ನಾವು ತಿದ್ದಬಹುದಾಗಿದೆ. 5x ಝೂಮ್ ಚೆನ್ನಾಗಿ ಕೆಲಸ ಮಾಡುತ್ತಿದ್ದು, ದೂರದ ವಸ್ತುಗಳು ಹೆಚ್ಚು ಸ್ಪಷ್ಟವಾಗಿ ಸೆರೆಯಾಗಬಲ್ಲವು.

ಸೆಲ್ಫೀ ಕ್ಯಾಮೆರಾ ಕೂಡ 12 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದ್ದು, ಇದರಲ್ಲಿನ ಪೋರ್ಟ್ರೇಟ್ ಮೋಡ್ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ.

ಕಾರ್ಯಾಚರಣೆ, ಬ್ಯಾಟರಿ
ಐಒಎಸ್ 16 ಕಾರ್ಯಾಚರಣಾ ವ್ಯವಸ್ಥೆಯು ಫೋನ್‌ನ ಕಾರ್ಯಾಚರಣೆಯನ್ನು ಮತ್ತಷ್ಟು ಸುಲಲಿತವಾಗಿಸಿದೆ. ಹೊಸದಾಗಿ ಪರಿಚಯಿಸಿರುವ ಲಾಕ್‌ಸ್ಕ್ರೀನ್ ಕಸ್ಟಮೈಸ್ (ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವ) ವ್ಯವಸ್ಥೆಯು ಅನುಕೂಲಕರವಾಗಿದೆ. ಇಲ್ಲಿ ಗಡಿಯಾರದ ಫಾಂಟ್ ಮತ್ತು ಬಣ್ಣ ಕೂಡ ಬದಲಿಸಿಕೊಳ್ಳಬಹುದಾಗಿದೆ.

ಹೊಸದಾಗಿ ಪರಿಚಯಿಸಲಾಗಿರುವ ಕ್ರ್ಯಾಶ್ ಡಿಟೆಕ್ಷನ್ ವೈಶಿಷ್ಟ್ಯವು, ಅಪಘಾತವೇನಾದರೂ ಆದರೆ, ತಾನಾಗಿಯೇ (ಮೊದಲೇ ಫೀಡ್ ಮಾಡಲಾಗಿರುವ) ಆತ್ಮೀಯರಿಗೆ ಕರೆ ಮಾಡುತ್ತದೆ.

ಬಾಕ್ಸ್‌ನಲ್ಲಿ ಯುಎಸ್‌ಬಿ ಟೈಪ್ ಸಿ ಚಾರ್ಜರ್‌ಗೆ ಹೊಂದಿಕೊಳ್ಳುವ ಲೈಟ್ನಿಂಗ್ ಕೇಬಲ್ ನೀಡಲಾಗಿದ್ದು, ಚಾರ್ಜರ್ ನೀಡಲಾಗಿಲ್ಲ. ಟೈಪ್-ಸಿ ಚಾರ್ಜಿಂಗ್ ಪೋರ್ಟನ್ನೇ ಒದಗಿಸುವುದರ ಬಗ್ಗೆ ಆ್ಯಪಲ್ ಬಹುಶಃ ಮುಂದಿನ ವರ್ಷ ಯೋಚನೆ ಮಾಡಬಹುದು. ಯಾಕೆಂದರೆ, ಈಗಾಗಲೇ ಐಪ್ಯಾಡ್ 10ರಲ್ಲಿ ಟೈಪ್ ಸಿ ಪೋರ್ಟ್ ಇದೆ. ಇದು ಬಂದರೆ, ಆಂಡ್ರಾಯ್ಡ್, ಆ್ಯಪಲ್ ಹಾಗೂ ವಿಂಡೋಸ್ ಮುಂತಾದ ಕೆಲವು ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಕೂಡ ಟೈಪ್-ಸಿ ಪೋರ್ಟ್ ಬೆಂಬಲಿಸಲು ಆರಂಭಿಸಿದ್ದು, ಚಾರ್ಜಿಂಗ್‌ಗೆ ಹಲವು ಕೇಬಲ್‌ಗಳನ್ನು ಒಯ್ಯುವ ತ್ರಾಸ ತಪ್ಪಬಹುದು. ಬ್ಯಾಟರಿ ಚಾರ್ಜ್ ಬಾಳಿಕೆ ಬಗ್ಗೆ ಹೇಳುವುದಾದರೆ ಸಾಮಾನ್ಯ ಕಾರ್ಯಾಚರಣೆಯಲ್ಲಿ, ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ ವಿಶೇಷವಾಗಿ ಹೆಚ್ಚು ವೈಫೈ ಬಳಸಿದಲ್ಲಿ ಎರಡು ದಿನಗಳಿಗೆ ಅಡ್ಡಿಯಿಲ್ಲ.

ಒಟ್ಟಿನಲ್ಲಿ, ಐಫೋನ್ 14 ಪ್ರೊ ಮಾದರಿಗೆ (ಎ16) ಹೋಲಿಸಿದಾಗ ಐಫೋನ್ 14ರಲ್ಲಿ ಎ15 ಬಯೋನಿಕ್ ಪ್ರೊಸೆಸರ್ ಇದೆ ಎಂಬುದು ಬಿಟ್ಟರೆ, ಕಾರ್ಯಾಚರಣೆಯಲ್ಲಿ ಇದೇನೂ ಹಿಂದುಳಿದಿಲ್ಲ. ಗ್ರಾಫಿಕ್ಸ್ ಹೆಚ್ಚಿರುವ ಗೇಮ್ ಆಡುವುದಕ್ಕಾಗಲೀ, 4ಕೆ ವಿಡಿಯೊ ವೀಕ್ಷಣೆ ಸಂದರ್ಭದಲ್ಲಾಗಲೀ ಮತ್ತು ಮಲ್ಟಿಟಾಸ್ಕಿಂಗ್ ಸಂದರ್ಭದಲ್ಲಿ ಯಾವುದೇ ಅಡಚಣೆ ಕಂಡುಬಂದಿಲ್ಲ. ಫೇಸ್ ಐಡಿ ಮೂಲಕ ವೇಗವಾಗಿ ಸ್ಕ್ರೀನ್ ಅನ್‌ಲಾಕ್ ಆಗುತ್ತದೆ.

ಉತ್ತಮ ಸ್ಕ್ರೀನ್, ವೇಗದ ಕಾರ್ಯಾಚರಣೆ, ಸುಲಲಿತವಾದ ತಂತ್ರಾಂಶ ಮತ್ತು ಅತ್ಯುತ್ತಮ ಕ್ಯಾಮೆರಾ – ಈ ವೈಶಿಷ್ಟ್ಯಗಳು ಐಫೋನ್ 14ನ್ನು ಖರೀದಿಸುವವರ ಗಮನ ಸೆಳೆಯಬಲ್ಲವು. ಬೆಲೆ ₹79900 (128GB) ₹89900 (256GB) ಹಾಗೂ ₹109900 (512GB).

iPhone 14 Review by me Published in Prajavani on 10 Dec 2022

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 days ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago