ನೀವೂ ಆಗಿದ್ದೀರಾ ಹೆಮ್ಮೆಯ ‘ಸ್ವಾತಂತ್ರ್ಯ-II’ ಹೋರಾಟಗಾರ?

0
414

ಇದು ಐತಿಹಾಸಿಕ ಶಾಂತಿಯುತವಾದ ಕ್ರಾಂತಿ! ಸಂಸತ್ ಸದಸ್ಯರು ಜನರಿಂದ ಓಟು ಕೇಳಿ, ಸಂಸತ್ತಿನಲ್ಲಿ ಅಧಿಕಾರ ಪಡೆಯಲು ಹೋಗುವುದಲ್ಲ, ಜನತೆಯ ಆಶೋತ್ತರಗಳನ್ನು, ಜನ ಸಾಮಾನ್ಯರು ಸರಕಾರದ ಪ್ರತೀ ಹಂತದಲ್ಲಿಯೂ ಎದುರಿಸುತ್ತಿರುವ ಕಷ್ಟ-ನಷ್ಟಗಳಿಗೆಲ್ಲಾ ಉತ್ತರದಾಯಿಗಳು ಎಂಬುದನ್ನು ಎತ್ತಿ ತೋರಿಸಿದ್ದಾರೆ 74ರ ಹರೆಯದ ವಯೋವೃದ್ಧ ಮತ್ತು ಇಂದಿನ ಯುವಕರಿಗೆ, ಭವ್ಯ ಭಾರತದ ಭವಿಷ್ಯದ ಪೀಳಿಗೆಗಳಿಗೆ ಆದರ್ಶರಾಗಿರುವ ಅಣ್ಣಾ ಹಜಾರೆ. ಆಗಸ್ಟ್ ಕ್ರಾಂತಿಯನ್ನೇ ಮಾಡಿಬಿಟ್ಟಿದ್ದಾರೆ, ತಮ್ಮ ಅಹಿಂಸಾತ್ಮಕ ಶಾಂತಿಯುತ ಹೋರಾಟದಿಂದ ಮತ್ತು ತಳಮಟ್ಟದಲ್ಲಿರುವ ಸರಕಾರಿ ನೌಕರರಲ್ಲಿಯೂ ಭ್ರಷ್ಟಾಚಾರದ ಕುರಿತು ಚಳಿ ಮೂಡಿಸಿದ್ದಾರೆ!

ಅಣ್ಣಾ ಹಜಾರೆ ಒಬ್ಬ ವ್ಯಕ್ತಿಯಲ್ಲ. ಇಡೀ ದೇಶವನ್ನೇ ಭ್ರಷ್ಟಾಚಾರದ ವಿರುದ್ಧ ಎತ್ತಿ ಕಟ್ಟಿ, ನಮ್ಮನ್ನು ಆಳುವವರಿಗೆ ‘ಸರಿಯಾಗಿ ಕೆಲಸ ಮಾಡಿ’ ಅಂತ ತೋರಿಸಿಕೊಟ್ಟ, ಸಂಸತ್ಸದಸ್ಯರಿಗೆ ತಮ್ಮ ಜವಾಬ್ದಾರಿ ಏನೆಂಬುದನ್ನು ತೋರಿಸಿಕೊಟ್ಟ ಶಕ್ತಿ. ಅಣ್ಣಾ ಹಜಾರೆಗೆ ದೊರೆತ ಜನ ಬೆಂಬಲದ ಮುಂದೆ, ‘ನಾವು ಜನರಿಂದ ಆರಿಸಿ ಬಂದವರು, ಜನ ಬೆಂಬಲವಿದೆ. ಏನು ಬೇಕಾದರೂ ಮಾಡುತ್ತೇವೆ, ನಾವೇನು ಮಾಡಬೇಕೆಂದು ಹೇಳಲು ಅವರು ಯಾರು’ ಎಂಬ ಉಡಾಫೆ ವರ್ತನೆ ತೋರಿದವರ ಅಟ್ಟಹಾಸ ನಡೆಯಲಿಲ್ಲ ಎಂಬುದು ಗಮನಾರ್ಹ. ಅಷ್ಟು ಹೇಳಿ ಸುಮ್ಮನಾಗಬೇಕಿಲ್ಲ. ಕೊನೆಗೂ ನಮ್ಮ ಸಂಸದರು, ಅಣ್ಣಾ ಹಜಾರೆ ಹೋರಾಟದ ಹಿಂದಿನ ಉದ್ದೇಶವನ್ನು, ವಾಸ್ತವಿಕತೆಯನ್ನು ಅರ್ಥೈಸಿಕೊಂಡರಲ್ಲಾ…. ತಾವು ಇದುವರೆಗೆ ಮಾಡುತ್ತಿದ್ದುದು ಸರಿಯಲ್ಲ ಎಂಬುದು ಅವರಿಗೆ ಮನದಟ್ಟಾಗಿದೆಯಲ್ಲಾ, ಅದು ಕೂಡ ಸಮಾಧಾನದ ಸಂಗತಿಯೇ.

ಐತಿಹಾಸಿಕ ಅಧಿವೇಶನ
ಈ ಕುರಿತು ಸಂಸತ್ತಿನಲ್ಲಿ ಶನಿವಾರ ನಡೆದ ಐತಿಹಾಸಿಕವೆನಿಸುವ ವಿಶೇಷ ಅಧಿವೇಶನದಲ್ಲಿ, ಮಾತುಗಾರರೆಲ್ಲರೂ ಕೂಡ ಅಣ್ಣಾ ಹಜಾರೆಯ ಆಗ್ರಹದ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಂಡಿದ್ದುದು ಅರ್ಥವಾಗಿತ್ತು. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪವಿತ್ರ ಸಂಸತ್ತಿನಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ಇಡೀ ವಿಶ್ವವೇ ಬೆರಗಾಗಿ, ಕುತೂಹಲದಿಂದ ನೋಡುತ್ತಿದ್ದರೆ, ಕೆಲವು ರಾಜಕಾರಣಿಗಳು, ಈ ಗಂಭೀರ ಚರ್ಚೆಯ ಸಂದರ್ಭದಲ್ಲಿ ವೈಯಕ್ತಿಕ ದೂಷಣೆಯ ಅಥವಾ ದಾಸ್ಯದ ಸಂಕೇತವಾದ ವ್ಯಕ್ತಿಪೂಜೆಯ ತಮ್ಮ ಚಾಳಿಯನ್ನು ಬಿಡಲಾಗದೆ, ತಾವೇನೆಂದು ಇಡೀ ವಿಶ್ವಕ್ಕೇ ತೋರಿಸಿಕೊಟ್ಟಿರುವುದು ಮಾತ್ರ ಕಪ್ಪು ಚುಕ್ಕಿ.

ಅಣ್ಣಾ ಹಜಾರೆ ಹೋರಾಟದಲ್ಲಿ ಕಳಂಕವಿರಲಿಲ್ಲ, ಸ್ವಾರ್ಥದ ಲವಲೇಶವಿರಲಿಲ್ಲ. ಮುಗ್ಧ ಮನಸ್ಸು, ಮುಗ್ಧ ಮುಖಭಾವ. ಅಂಥಹಾ ಸಜ್ಜನನ ಮೇಲೆಯೇ ಭ್ರಷ್ಟಾಚಾರ ಆರೋಪ ಹೊರಿಸುತ್ತಾ, ಅವರ ಆಂದೋಲನಕ್ಕೇ ಮಸಿ ಬಳಿಯಲು ಏನೆಲ್ಲಾ ಪ್ರಯತ್ನಗಳಾದವು! ಆದರೂ ಜಗ್ಗಲಿಲ್ಲ. ಈ ದೇಶದ ಬಡ ಪ್ರಜೆಯೊಬ್ಬಾತ, ಒಂದು ಪಹಣಿ ಪತ್ರ ಪಡೆಯಲು, ಒಂದು ಜನನ ಪ್ರಮಾಣ ಪತ್ರ ಪಡೆಯಲು, ಒಂದು ಸರ್ಟಿಫಿಕೆಟ್ ಪಡೆಯಲು, ಎಷ್ಟು ತ್ರಾಸ ಪಡಬೇಕಾಗುತ್ತದೆ, ಎಷ್ಟೊಂದು ದುಡ್ಡು ಸುರಿಯಬೇಕಾಗುತ್ತದೆ! ಇಂಥದ್ದಕ್ಕೆಲ್ಲಾ ಕಡಿವಾಣ ಹಾಕಲೆಂದೇ, ತಳಮಟ್ಟದ ಸರಕಾರಿ ನೌಕರರೂ ಲೋಕಪಾಲ ವ್ಯಾಪ್ತಿಗೆ ಬರಬೇಕೆಂಬ ಪ್ರಬಲ ಆಗ್ರಹವಿರುವ ಶಕ್ತಿಶಾಲಿ ಕಾಯ್ದೆಯೊಂದು ಜಾರಿಗೆ ಬರುತ್ತದೆಯೆಂದಾದಾಗ ಯಾರಿಗೆ ಸಂತೋಷ ಉಕ್ಕಿ ಹರಿಯದಿರಲು ಸಾಧ್ಯ?

12 ದಿನಗಳ ಈ ವ್ರತ…
ಹಾಂ, ಇಲ್ಲಿ ಅಣ್ಣಾ ಹಜಾರೆ ಒಬ್ಬ ಪ್ರತಿನಿಧಿ ಮಾತ್ರ. ಅವರ ಹಿಂದೆ 12 ದಿನಗಳ ಕಾಲ ಮನೆ ಮಠ, ಕಚೇರಿ, ಶಾಲೆ, ಕಾಲೇಜು- ಎಲ್ಲವನ್ನೂ ಮರೆತು “ಈ ಬಾರಿ ಸಾಧ್ಯವಾಗದಿದ್ದರೆ, ಇನ್ನೆಂದೂ ಸಾಧ್ಯವಾಗದು” ಎಂಬುದನ್ನು ಅರಿತುಕೊಂಡು ಕೈಜೋಡಿಸಿದ ಜನ ಸಾಮಾನ್ಯರು, ವಿಶೇಷವಾಗಿ ಯುವಜನಾಂಗವಿದೆಯಲ್ಲ…. ಅವರೆಲ್ಲರಿಗೂ ಹ್ಯಾಟ್ಸ್ ಆಫ್! ಅದೆಷ್ಟು ಮಂದಿ ಯುವಜನರು ಕೂಡ ಅಣ್ಣಾ ಜೊತೆಗೇ ಉಪವಾಸ ಸತ್ಯಾಗ್ರಹ ನಡೆಸಿಲ್ಲ! ಜನ ಸಾಮಾನ್ಯರ, ಯುವಜನಾಂಗದ ಮನೋಬಲದ ಮುಂದೆ ನಾವೆಲ್ಲರೂ ‘ನಮ್ಮ ನಾಯಕರು’ ಅಂದುಕೊಂಡು ಸಂಸತ್ತಿಗೆ ಕಳುಹಿಸಿದವರೆಲ್ಲರೂ ಕುಬ್ಜರಾಗಿಬಿಟ್ಟರು.

ಇಡೀ ದೇಶಕ್ಕೆ ದೇಶವೇ ಅಣ್ಣಾ ಹಿಂದೆ ನಿಂತಾಗ, ಸರಕಾರ ಮತ್ತು ಸಂಸತ್ತಿನೊಳಗಿರುವವರಿಗೆ ತಮ್ಮ ತಪ್ಪಿನ ಅರಿವಾಗಿದೆ ಮತ್ತು ತಮ್ಮ ಜವಾಬ್ದಾರಿಯೇನು ಎಂಬುದು ಅರ್ಥವಾಗಿದೆ, ಜನರಿಗಾಗಿ ಸ್ವಲ್ಪವಾದರೂ, ಏನನ್ನಾದರೂ ಮಾಡಬೇಕು ಎಂಬುದು ಮನಸ್ಸಿಗೆ ತಟ್ಟಿದೆ ಅಂತ ನಾವು ಅಂದುಕೊಳ್ಳುತ್ತೇವೆ. ಅಣ್ಣಾ ಹಜಾರೆ ಆಗ್ರಹಿಸುತ್ತಿದ್ದ ಎಲ್ಲ ಷರತ್ತುಗಳಲ್ಲಿ ಅತ್ಯಂತ ಪ್ರಮುಖವಾದದ್ದು, ಕೆಳ ಹಂತದ ಸರಕಾರಿ ನೌಕರರು ಕೂಡ ಲೋಕಪಾಲ ಕಾಯ್ದೆಯ ವ್ಯಾಪ್ತಿಗೆ ಬರಬೇಕು ಮತ್ತು ಸಂಸತ್ ಸದಸ್ಯರ ವರ್ತನೆಯೂ ಕಾಯ್ದೆಯಡಿ ಬರಬೇಕು ಎಂಬುದು. ಇವೆರಡು ಈ ದೇಶದ ಜನರನ್ನು ನೇರವಾಗಿ ತಟ್ಟುವ ವಿಷಯ. ಇಲ್ಲಿಯೂ ಕೂಡ, ‘ಆದರೆ’ ಎಂಬ ಪದವೊಂದನ್ನು ಸೇರಿಸುವುದು ಅನಿವಾರ್ಯವೇ ಆಗಿದೆ. ಹಣ ಬಂದಾಗ ಹೆಣವೂ ಬಾಯ್ಬಿಡುವ ಕಾಲವಿದು. ಹೀಗಾಗಿ, ಚಾಪೆ ಕೆಳಗೆ ತೂರಿದರೆ, ರಂಗೋಲಿಯ ಕೆಳಗೆಯೇ ತೂರುವ ಚಾಣಾಕ್ಷತೆ ಇರುವವರು ಇದ್ದಾರೆ. ಲೋಕಪಾಲ ಕಾಯ್ದೆಯಿಂದ ಭ್ರಷ್ಟಾಚಾರವನ್ನು ಶೇ.100ರಷ್ಟು ಮಟ್ಟ ಹಾಕುವುದು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದರೂ, ಜನರು ಸ್ವಲ್ಪವಾದರೂ ಉಸಿರಾಡುವಂತಾಗಬಹುದೇ ಎಂದು ಆಶಾವಾದ ನಮ್ಮ ನಿಮ್ಮೆಲ್ಲರದು.

ಒಗ್ಗಟ್ಟಿನಲ್ಲಿ ಬಲವಿದೆ
ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಈ ಆಂದೋಲನ ಎತ್ತಿ ತೋರಿಸಿದೆ. ದೇಶದ ಜನತೆ ಒಗ್ಗಟ್ಟಾಗಿದ್ದರೆ, ಇಡೀ ಸಂಸತ್ತೇ ಅನಿವಾರ್ಯವಾಗಿ ಒಗ್ಗಟ್ಟಾಗಬೇಕಾಯಿತು. ಸಂಸದರ/ಶಾಸಕರ ವೇತನ ಏರಿಕೆಗೆ ಮಾತ್ರವೇ ಒಂದಿಷ್ಟೂ ಚರ್ಚೆಯಿಲ್ಲದೆ, ಒಗ್ಗಟ್ಟಿನಿಂದ ದಿಢೀರನೇ ಕಾನೂನು ಜಾರಿಗೊಳಿಸುವ ಸಂಸದರಿಗೆ, ಭ್ರಷ್ಟಾಚಾರವನ್ನು ಬೇರುಸಹಿತವಾಗಿ, ಮೂಲ ಮಟ್ಟದಿಂದಲೇ ಮಟ್ಟ ಹಾಕುವ ಸಮರ್ಥ ಕಾನೂನು ಸಿದ್ಧಪಡಿಸಲು ಯಾಕೆ ಇಷ್ಟು ತಡವಾಯಿತು? ಎಂಬ ಪ್ರಶ್ನೆ ಇನ್ನು ಕಾಡದಂತೆ ಆಗಿದೆ. ಅಣ್ಣಾ ಹಜಾರೆಯ ತ್ಯಾಗ, ಅಹಿಂಸೆಯು ಜನರ ಧ್ವನಿಯೊಂದಿಗೆ ಮಿಳಿತವಾಗಿ, ಎಲ್ಲ ಸಂಸದರೂ ಒಗ್ಗಟ್ಟಾಗಿ, ಭ್ರಷ್ಟಾಚಾರ ಮಟ್ಟಹಾಕುವ ನಿರ್ಣಯವೊಂದಕ್ಕೆ ಸಹಮತ ಸೂಚಿಸುವಂತಾಯಿತು. ಪ್ರತೀ ಬಾರಿಯೂ ಕಿರುಚಾಡುತ್ತಾ, ವ್ಯರ್ಥ ಆರೋಪ-ಪ್ರತ್ಯಾರೋಪಗಳಿಂದಲೇ ಸಂಸತ್ತೆಂಬ ಪವಿತ್ರ ಸದನದ ಪಾವಿತ್ರ್ಯವೇ ಹಾಳಾಗುತ್ತಿರುವ ಈ ಹಂತದಲ್ಲಿ ಅಣ್ಣಾ ಎಂಬ ಕಿಡಿಯೊಂದು ಅಮಾವಾಸ್ಯೆಯ ಕತ್ತಲಲ್ಲಿ ಬೆಳಕು ಪ್ರಜ್ವಲಿಸಿದಂತಾಗಿದೆ. ಇನ್ನಾದರೂ ಶಾಸನ ಸಭೆಗಳ ಸದಸ್ಯರು ನಿಜಕ್ಕೂ ಜನಸೇವೆಯೆಂಬ ಪದಕ್ಕೆ ಪುನಶ್ಚೇತನ ನೀಡುವರೇ? ತಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ನಾನೇ ಇದಕ್ಕೆ ಜವಾಬ್ದಾರ ಎಂಬಂತಹಾ ಉತ್ತರದಾಯಿತ್ವ ಪ್ರದರ್ಶಿಸುವರೇ ಎಂಬುದು ಪ್ರತಿಯೊಬ್ಬನ ನಿರೀಕ್ಷೆ.

ಶಂಕೆಗೆ ಕಾರಣಗಳೇನು?
ಇಂಥದ್ದೊಂದು ಶಂಕೆಯ ಅಲೆ ಏಳಲೂ ಕಾರಣಗಳಿಲ್ಲದಿಲ್ಲ. ಮೊನ್ನೆ ಶನಿವಾರ ಅಷ್ಟೊಂದು ಗಂಭೀರವಾಗಿ ಚರ್ಚೆ ಮಾಡಿ, ಇನ್ನೇನು ನಿರ್ಣಯಕ್ಕೆ ಮತದಾನವಾಗಲಿದೆ ಎಂದು ನಿರೀಕ್ಷಿಸುತ್ತಿರುವಾಗಲೇ, ‘ಮತದಾನಕ್ಕೆ ಬಿಜೆಪಿ ಬೆಂಬಲಿಸುತ್ತಿಲ್ಲ, ಮತದಾನ ಇಲ್ಲ’ ಎಂಬ ಹೇಳಿಕೆಯೊಂದು ಹೊರಬಿತ್ತು. ನಂತರವೂ, ಚರ್ಚೆ ದಿಢೀರ್ ಆಗಿ ಮುಂದಕ್ಕೆ ಹೋದಾಗ ಜನರು ಗೊಂದಲದಲ್ಲಿ ಸಿಲುಕಿದ್ದರು. ಆನಂತರ ಸ್ಪಷ್ಟನೆ ಬಂತು, ಡೆಸ್ಕ್‌ಗೆ ಬಡಿದು ಬೆಂಬಲ ಸೂಚಿಸುವುದೇ “ಸರ್ವಾನುಮತದ ನಿರ್ಣಯ” ಎಂಬ ಹೇಳಿಕೆ. ಈಗಲೂ ಅಣ್ಣಾಗೆ ಸಂಸತ್ತಿನಿಂದ ಭರವಸೆ ದೊರೆತಿದೆ. ಕಾರ್ಯರೂಪಕ್ಕೆ ಬರುವುದೇ ಎಂಬುದನ್ನು ಕಾಯ್ದೆ ಜಾರಿಗೆ ಬಂದಾಗಲೇ ನಂಬಬೇಕಾದ ವಾತಾವರಣವೊಂದು ಸೃಷ್ಟಿಯಾಗಿರುವುದು ಇಲ್ಲಿ ಹೇಳಬಾರದ, ಆದರೆ ಹೇಳಲೇಬೇಕಾದ ಬೇಸರದ ಸಂಗತಿಯೂ ಹೌದು. ಜನರಿಗೆ ಸರಕಾರದ ಬಗ್ಗೆ, ಸಂಸದರ ಬಗ್ಗೆ ಈ ರೀತಿ ವಿಶ್ವಾಸ ಹೊರಟುಹೋಗಲು ಕಾರಣಗಳೇನು ಎಂಬುದನ್ನು ಓಟು ಪಡೆದು ಹೋದವರೇ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಇನ್ನು, ಪ್ರಸ್ತಾಪಿತ ಲೋಕಪಾಲ ಕಾಯ್ದೆಗೆ ಅಂತಿಮ ರೂಪ ನೀಡಲು ಕೇಂದ್ರ ಸರಕಾರವು ರಚಿಸಿರುವ ಸ್ಥಾಯಿ ಸಮಿತಿಯಲ್ಲಿ ಯಾರ್ಯಾರಿದ್ದಾರೆ ಎಂದು ಕಣ್ಣು ಹಾಯಿಸಿದರೆ, ಸ್ವಲ್ಪ ಬೆಚ್ಚಿ ಬೀಳುವ ಸರದಿ ನಿಮ್ಮದಾಗಬಹುದು.

ಕಾಂಗ್ರೆಸ್ ವಕ್ತಾರರಾಗಿ ಪ್ರಸಿದ್ಧರಾಗಿರುವ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಈ ಸ್ಥಾಯಿ ಸಮಿತಿಯ ಅಧ್ಯಕ್ಷರು. ಪ್ರಮುಖವಾಗಿ ನಮ್ಮ ಕಣ್ಣು ಸೆಳೆಯುವುದೆಂದರೆ, ಇದರಲ್ಲಿ ಮೇವು ಹಗರಣದಲ್ಲಿ ಬಿಹಾರದಲ್ಲಿ ಅಧಿಕಾರ ಕಳೆದುಕೊಂಡ ಆರ್‌ಜೆಡಿಯ ಲಾಲು ಪ್ರಸಾದ್ ಯಾದವ್, ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ (ವಿಶೇಷವಾಗಿ ಸಂಸದರಿಗೆ ಲಂಚ ಪ್ರಕರಣ) ಹೆಸರು ಕೇಳಿಬರುತ್ತಿರುವ ಅಮರ್ ಸಿಂಗ್, ಅಣ್ಣಾ ಹಜಾರೆಯನ್ನು ‘ಕಾಲಿನಿಂದ ತಲೆಯವರೆಗೆ ಭ್ರಷ್ಟ’ ಎಂದು ದೂಷಿಸಿದ ಕಾಂಗ್ರೆಸಿನ ಮನೀಷ್ ತಿವಾರಿ ಮುಂತಾದವರಿದ್ದಾರೆ. ಉಳಿದಂತೆ, ಕರ್ನಾಟಕದಿಂದ ಬಿಜೆಪಿ ಸಂಸದ ಡಿ.ಬಿ.ಚಂದ್ರೇಗೌಡ ಅವರೂ ಈ ಸ್ಥಾಯಿ ಸಮಿತಿಯಲ್ಲಿದ್ದಾರೆ. ಸ್ವಿಸ್ ಬ್ಯಾಂಕಿನ ಹಣ ತರಲೇಬೇಕು ಎಂದು ವಾದಿಸುತ್ತಿರುವ ವಕೀಲ ರಾಂ ಜೇಠ್ಮಲಾನಿ ಇರುವುದು ಒಂದಿಷ್ಟು ಆಶಾವಾದ ಮೂಡಿಸಿದೆ. ಉಳಿದಂತೆ, ರಾಂ ವಿಲಾಸ್ ಪಾಸ್ವಾನ್-ಎಲ್‌ಜೆಪಿ (ಬಿಹಾರ), ಮೀನಾಕ್ಷಿ ನಟರಾಜನ್-ಕಾಂಗ್ರೆಸ್ (ಮ.ಪ್ರ.), ಪರಿಮಳ್ ನಾತ್ವಾನಿ- ಸ್ವತಂತ್ರ (ಜಾರ್ಖಂಡ್), ಬಲವಂತ ಅಲಿಯಾಸ್ ಬಾಳ ಅಪ್ಟೆ- ಬಿಜೆಪಿ (ಮಹಾರಾಷ್ಟ್ರ), ಒ.ಟಿ.ಲೆಪ್ಚಾ-ಎಸ್‌ಡಿಎಫ್ (ಸಿಕ್ಕಿಂ), ಚಂದ್ರೇಶ್ ಕುಮಾರಿ -ಕಾಂಗ್ರೆಸ್ (ರಾಜಸ್ತಾನ), ಶೈಲೇಂದ್ರ ಕುಮಾರ್-ಎಸ್ಪಿ (ಉ.ಪ್ರ.), ಕಿರೋರಿಲಾಲ್ ಮೀನಾ -ಸ್ವತಂತ್ರ (ರಾಜಸ್ತಾನ), ಹರೇನ್ ಪಾಠಕ್- ಬಿಜೆಪಿ (ಗುಜರಾತ್), ಎನ್.ಎಸ್.ವಿ.ಚಿತ್ತನ್ -ಕಾಂಗ್ರೆಸ್ (ತ.ನಾ.), ದೀಪಾ ದಾಸಮುನ್ಷಿ -ಕಾಂಗ್ರೆಸ್ (ಪ.ಬಂಗಾಳ), ಜ್ಯೋತಿ ಧ್ರುವೆ -ಬಿಜೆಪಿ (ಮ.ಪ್ರ.), ಮೊನಜೀರ್ ಹುಸೇನ್ -ಜೆಡಿಯು (ಬಿಹಾರ), ದೇವ್‌ಜಿ ಎಂ.ಪಟೇಲ್ -ಬಿಜೆಪಿ (ರಾಜಸ್ತಾನ), ಎಸ್.ಸೆಮ್ಮಲೈ -ಎಐಎಡಿಎಂಕೆ (ತ.ನಾ.), ವಿಜಯ್ ಬಹಾದೂರ್ ಸಿಂಗ್ -ಬಿಎಸ್ಪಿ (ಉ.ಪ್ರ.), ಪ್ರಭಾ ಕಿಶೋರ್ ತವಿಯಾದ್ -ಕಾಂಗ್ರೆಸ್ (ಗುಜರಾತ್), ಆರ್.ತಾಮರೈಸೆಲ್ವನ್ -ಡಿಎಂಕೆ (ತ.ನಾ.), ಪಿ.ಟಿ.ಥಾಮಸ್ -ಕಾಂಗ್ರೆಸ್ (ಕೇರಳ). ಆರು ಸ್ಥಾನಗಳು ಖಾಲಿ ಇವೆ.

ಸ್ವಾತಂತ್ರ್ಯ ಹೋರಾಟ ನೋಡಿದಿರಾ?
ಸ್ವಾತಂತ್ರ್ಯ ಹೋರಾಟ ಹೇಗಿತ್ತೆಂಬುದನ್ನು ನಾವ್ಯಾರೂ ನೋಡಿಲ್ಲ. ಆದರೆ ಎರಡನೇ ಸ್ವಾತಂತ್ರ್ಯ ಹೋರಾಟದ ಚಿತ್ರಣಗಳನ್ನು ನೋಡಿ, ಹೀಗಿತ್ತು ನಮ್ಮ ಹೋರಾಟ. ನಾವು ಕೂಡ ಈ ಐತಿಹಾಸಿಕ ಕ್ಷಣಗಳ ಒಂದು ಭಾಗ ಎಂದು ಎದೆ ತಟ್ಟಿಕೊಂಡು ಹೇಳಬಲ್ಲವರು, ನಾವು ಕೂಡ ಎರಡನೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೇವೆ ಎಂಬುದಾಗಿ ಹೆಮ್ಮೆ ಪಟ್ಟುಕೊಳ್ಳುವವರು ನಮ್ಮಲ್ಲಿಯೂ ಇದ್ದಾರಲ್ಲಾ… ವೆಬ್‌ದುನಿಯಾ ಓದುಗರೇ, ನಿಮ್ಮಲ್ಲಿ ಯಾರ್ಯಾರು ಈ ಐತಿಹಾಸಿಕ ಆಂದೋಲನದಲ್ಲಿ ಹೇಗೆಲ್ಲಾ ಭಾಗಿಯಾಗಿದ್ದೀರಿ ಅಂತ ಓದುಗರೊಂದಿಗೆ ಹಂಚಿಕೊಳ್ಳಿ ನೋಡೋಣ!

ಒಂದು ಒಳ್ಳೆಯ ಉದ್ದೇಶಕ್ಕಾಗಿ ಒಬ್ಬ ‘ಅಣ್ಣ’ನ ಐತಿಹಾಸಿಕ ಹೋರಾಟದ ಹಿಂದೆ ನಿಂತು ಬೆಂಬಲಿಸಿದ ಎಲ್ಲರಿಗೂ ವೆಬ್‌ದುನಿಯಾ ಕಡೆಯಿಂದ ಹಜಾರ್ ಹಜಾರ್ ಪ್ರಣಾಮಗಳು.
[ವೆಬ್‌ದುನಿಯಾಕ್ಕಾಗಿ]

LEAVE A REPLY

Please enter your comment!
Please enter your name here