ಆಂಡ್ರಾಯ್ಡ್ ಪೈ ಕಾರ್ಯಾಚರಣಾ ಆವೃತ್ತಿಯ ಒನ್‌ಪ್ಲಸ್ 6ಟಿ ಭಾರತದಲ್ಲಿ ಬಿಡುಗಡೆ

0
264

ಅವಿನಾಶ್ ಬಿ, ಹೊಸದಿಲ್ಲಿ:
ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್ ವಲಯದಲ್ಲಿ ನಂ.1 ಸ್ಥಾನಕ್ಕೇರಿರುವ ಚೀನಾದ ಒನ್‌ಪ್ಲಸ್, ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಫೋನ್ ‘ಒನ್‌ಪ್ಲಸ್ 6ಟಿ’ ಮಾದರಿಯನ್ನು ಮಂಗಳವಾರ ರಾತ್ರಿ ಇಲ್ಲಿನ ಇಂದಿರಾ ಗಾಂಧಿ ಸ್ಟೇಡಿಯಂನ KDJW ಅಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಭಾರತೀಯ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿತು.

ಭಾರತೀಯ ಮಾರುಕಟ್ಟೆಗೆ Oneplus 6T ಅನಾವರಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಹ ಸಂಸ್ಥಾಪಕ ಕಾರ್ಲ್ ಪೈ, ಹಿಂದಿನ ಒನ್‌ಪ್ಲಸ್ 6 ಫೋನ್‌ಗಳಿಗೂ ಬುಧವಾರದಿಂದ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಕ್ಯಾಮೆರಾದ ಹೊಸ ವೈಶಿಷ್ಟ್ಯವು ಲಭ್ಯವಾಗಲಿದೆ ಎಂದು ಪ್ರಕಟಿಸುವ ಮೂಲಕ, ಲಕ್ಷಾಂತರ ಒನ್‌ಪ್ಲಸ್ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದರು.

ಭಾರತದಲ್ಲಿ ಗೂಗಲ್ ಪಿಕ್ಸೆಲ್ ಬಳಿಕ ಆಂಡ್ರಾಯ್ಡ್ ಪೈ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಲಭ್ಯವಿರುವ ಎರಡನೇ ಫೋನ್ ಒನ್‌ಪ್ಲಸ್ 6ಟಿ. ಇದರಲ್ಲಿ 3.5 ಮಿಮೀ ಜ್ಯಾಕ್‌ನ ಇಯರ್‌ಫೋನ್ ಇಲ್ಲ, ಬದಲಾಗಿ ಟೈಪ್ ಸಿ ಪೋರ್ಟ್ ಇರುವ ಬುಲೆಟ್ ಹೆಡ್‌ಫೋನ್ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ಈ ಪೋರ್ಟ್ ಬ್ಯಾಟರಿ ಚಾರ್ಜಿಂಗ್ ಹಾಗೂ ಹೆಡ್‌ಫೋನ್ ಎರಡಕ್ಕೂ ಉಪಯೋಗವಾಗಲಿದೆ. ವಿನ್ಯಾಸವನ್ನು ಮತ್ತಷ್ಟು ಸರಳವಾಗಿಸಲು ಈ ವ್ಯವಸ್ಥೆ ಎಂದು ಒನ್‌ಪ್ಲಸ್ ಹೇಳಿಕೊಂಡಿದೆ. ಸ್ಕ್ರೀನ್‌ನಲ್ಲೇ ಫಿಂಗರ್‌ಪ್ರಿಂಟ್ ವ್ಯವಸ್ಥೆಯೊಂದಿಗೆ ಹಿಂದಿನ ಒನ್‌ಪ್ಲಸ್ 6ಗೆ ಹೋಲಿಸಿದರೆ ಸುಧಾರಿತ ಕ್ಯಾಮೆರಾ, ಹೆಚ್ಚಿನ ಬ್ಯಾಟರಿ ಸಾಮರ್ಥ್ಯ ಪ್ರಮುಖ ಬದಲಾವಣೆಗಳು. 64 ಜಿಬಿ ಸ್ಟೋರೇಜ್‌ನ ಆವೃತ್ತಿಯಿಲ್ಲ, ಬದಲಾಗಿ 128 ಜಿಬಿಯಲ್ಲಿ 6 ಜಿಬಿ ಮತ್ತು 8 ಜಿಬಿ RAM ಇರುವ ಹಾಗೂ 256 ಜಿಬಿ ಜತೆಗೆ 8 ಜಿಬಿ RAM – ಹೀಗೆ ಒಟ್ಟು ಮೂರು ವಿಧಗಳಲ್ಲಿ ಲಭ್ಯ.

ಭಾರತದಲ್ಲಿ ಇದರ ಬೆಲೆ ಹೀಗಿದೆ:
6 GB+128 GB ಆವೃತ್ತಿಗೆ 37,999 ರೂ.
8GB + 128 GB ಆವೃತ್ತಿಗೆ 41,999 ರೂ.
8 GB+ 256 GB ಆವೃತ್ತಿಗೆ 45,999 ರೂ.

ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಅಮೆಜಾನ್ ಪ್ರೈಮ್ ನೌ ಗ್ರಾಹಕರಿಗೆ ಇದು ನವೆಂಬರ್ 1ರಂದೇ ಕೈಗೆ ಸಿಗಲಿದೆ. ಗರಿಷ್ಠ ಸಂಖ್ಯೆಯಲ್ಲಿ ಅನ್‌ಬಾಕ್ಸಿಂಗ್ ಮಾಡುವ ಅಭಿಯಾನವನ್ನು ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳಿಸಲು ಕಂಪನಿ ಉತ್ಸುಕವಾಗಿದೆ. ಇದಕ್ಕಾಗಿಯೇ ನವೆಂಬರ್ 1ರಂದು ಮುಂಬಯಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಕಂಪನಿಯ ವೆಬ್‌ಸೈಟು, ಕ್ರೋಮಾ ಸ್ಟೋರ್ ಹಾಗೂ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಕೂಡ ಒನ್‌ಪ್ಲಸ್ 6ಟಿ ಲಭ್ಯವಿರುತ್ತದೆ. ರಿಲಯನ್ಸ್ ಜಿಯೋ ಜತೆಗೆ ಕ್ಯಾಶ್‌ಬ್ಯಾಕ್ ಆಫರ್ ಕೂಡ ದೊರೆಯಲಿದೆ.

6.4 ಇಂಚು AMOLED ಡಿಸ್‌ಪ್ಲೇ, ಫುಲ್ ಹೆಚ್‌ಡಿ ಪ್ಲಸ್ 2340p x 1080 ರೆಸೊಲ್ಯುಶನ್, 16 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ, 3700 mAh ಬ್ಯಾಟರಿ, 20 ಮೆಗಾಪಿಕ್ಸೆಲ್ ಹಾಗೂ 16 ಮೆಗಾಪಿಕ್ಸೆಲ್ ಸೋನಿ ಸೆನ್ಸರ್ ಸಾಮರ್ಥ್ಯದ ಪ್ರಧಾನ (ಹಿಂಭಾಗದ) ಡ್ಯುಯಲ್ ಕ್ಯಾಮೆರಾಗಳಿವೆ. ಕಡಿಮೆ ಬೆಳಕಿನಲ್ಲಿ ಫೋಟೋ ತೆಗೆಯಲು ಅನುವಾಗುವಂತೆ ನೈಟ್‌ಸ್ಕೇಪ್ ಎಂಬ ಮೋಡ್ ಕೂಡ ಇದೆ. ನವೆಂಬರ್ 2ರಿಂದ ಈ ಫೋನ್ ಲಭ್ಯವಾಗಲಿದೆ.

ಆಂಡ್ರಾಯ್ಡ್ ಪೈ ಕಾರ್ಯಾಚರಣಾ ಆವೃತ್ತಿಯ ಒನ್‌ಪ್ಲಸ್ 6ಟಿ ಭಾರತದಲ್ಲಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಪನಿ ಆಹ್ವಾನದ ಮೇರೆಗೆ ಭಾಗಿ

LEAVE A REPLY

Please enter your comment!
Please enter your name here