ಸಪ್ತಸಾಗರ ದಾಟಿ ಹುಡುಕಾಡಿದರೂ ಬೇರೊಬ್ಬರಿಗೆ ನಿನ್ನಂತಹ ಅಮ್ಮ ದೊರೆಯುವುದು ಖಂಡಿತಾ ಸಾಧ್ಯವಿಲ್ಲ!
ಈ ಮೇಲಿನ ವಾಕ್ಯವನ್ನು ಮಗದೊಮ್ಮೆ ಯೋಚಿಸಿ ನೋಡಿ. ಹೌದಲ್ವಾ… ಅಮ್ಮ ಎಂಬುದೊಂದು ಯುನೀಕ್ ಐಡೆಂಟಿಟಿ. ಬಹುಶಃ ದೇವರು ಕೂಡ ಆ ಅಮ್ಮನಿಗೆ ಸಾಟಿಯಲ್ಲ ಎಂದರೂ ತಪ್ಪಾಗಲಾರದು.
ಬದುಕಿನ ತಲ್ಲಣಗಳ ನಡುವೆ ಪ್ರತಿಯೊಂದು ಕ್ಷಣ ಪಾತ್ರ ಬದಲಿಸುತ್ತಾ, ಅಮ್ಮನಾಗಿ, ಅನಿವಾರ್ಯತೆ ಬಂದಾಗ ಅಪ್ಪನಾಗಿಯೂ, ಅಕ್ಕನಾಗಿ, ಮಗಳಾಗಿ, ತಂಗಿಯಾಗಿ, ಅಪ್ಪನ ಸಿಡುಕಿನ ನಡುವೆ ಮಗುವಿಗೆ ಗೆಳತಿಯಾಗಿ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಕರುಣಾಮಯಿ ಮಾತೆಗೆ, ಸದಾ ಇನ್ನೊಬ್ಬರ ಏಳಿಗೆಗಾಗಿಯೇ ಶ್ರೀಗಂಧದಂದದಲಿ ಜೀವ ಸವೆಸುವ ಅಮ್ಮನಿಗೆ ತನ್ನದೇ ಅಂತ ಒಂದು ದಿನವಾದರೂ ಬೇಡವೇ? ಬಹುಶಃ ಪ್ರತಿ ವರ್ಷದ ಮೇ ತಿಂಗಳ ಎರಡನೇ ಭಾನುವಾರವನ್ನು ಅಮ್ಮನಿಗಾಗಿ ಮೀಸಲಿಡುವ ಕಲ್ಪನೆ ಮೊಳಕೆಯೊಡೆದದ್ದು ಇದೇ ಕಾರಣಕ್ಕೆ. ಅಮ್ಮಂದಿರಿಗಾಗಿಯೇ ಮೀಸಲಾದ ಈ ದಿನ ಆ ಮಹಾ ಮಮತಾಮಯಿ ಮಾತೆಗೆ ಅಕ್ಕರೆಯ ಅಕ್ಷರಾಂಜಲಿ.
ಹೌದು. ಅನಿವಾರ್ಯತೆ ಎಂಬುದೊಂದಿದೆಯಲ್ಲ, ಅದುವೇ ಅದೆಷ್ಟೋ ಮಂದಿಯ ಜೀವನದ ಜಂಜಡಗಳಿಗೆ, ಸಾಹಸಕ್ಕೆ, ಛಲಕ್ಕೆ ಮೂಲ ಹೇತು. ಅಂಥ ಸಂದರ್ಭ ಬಂದಾಗ ಹೆತ್ತ ಕರುಳ ಕುಡಿಯನ್ನು ಹೊತ್ತು ಸಲಹಲು, ಅದು ಮುಂದೆ ಔನ್ನತ್ಯಕ್ಕೇರಲು ಆ ಮಹಾತಾಯಿ ಬದುಕಿನ ಎಲ್ಲ ಕಾಠಿಣ್ಯಗಳನ್ನೂ ಸಹಿಸಿಕೊಳ್ಳಬಲ್ಲಳು. ಅಮ್ಮನೆಂಬ ದೇವತೆ ಎಲ್ಲವೂ ಆಗಬಲ್ಲಳು.
ನಾವು ನಡೆಯುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಆ ಅಮ್ಮ ಬಾಳ ದೀವಿಗೆಯಾಗುತ್ತಾಳೆ, ಅಥವಾ ಆಕೆ ಹಾಕಿಕೊಟ್ಟ ಹೂವಿನ ಹಾಸು ನಮಗೆ ದಾರಿ ದೀವಿಗೆಯಾಗುತ್ತದೆ. ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಆ ಅಮ್ಮನೆಂಬ ತ್ಯಾಗಮಯಿಯ ಬೆವರು, ಕಣ್ಣೀರು, ರಕ್ತವಿರುತ್ತದೆ, ಆ ಕರುಣಾಮಯಿಯ ಛಾಪು ಖಂಡಿತಾ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ನನ್ನ ಮಗು ಮುಂದೆ ಚೆನ್ನಾಗಿ ಬೆಳೆದು ಸಮಾಜದಲ್ಲಿ ಗೌರವಯುತವಾಗಿ ಬಾಳುವಂತಾಗಬೇಕೆಂಬ ಅದಮ್ಯ ತುಡಿತವಿರುತ್ತದೆ.
ನಾವು ಇಂದು ಜೀವನದಲ್ಲಿ ನಮ್ಮ ಕಾಲ ಮೇಲೆ ನಿಲ್ಲುವಂತಾಗಲು, ಸನ್ಮಾರ್ಗದಲ್ಲಿ ಸಾಗಿ ಜೀವನದ ನದಿಯಲ್ಲಿ ಯಶಸ್ವೀ ಈಜುಗಾರರಾಗುವಂತಾಗಲು, ನಮ್ಮೆಲ್ಲ ಯಶಸ್ಸು, ಕೀರ್ತಿ, ಸಾಧನೆಗಳ ಕ್ರೆಡಿಟ್ಟು ಸಲ್ಲಬೇಕಾಗಿದ್ದೆಲ್ಲವೂ ಅಮ್ಮನಿಗೆ. ಮಕ್ಕಳ ನೋವುಗಳಿಗೆ ಕಿವಿಯಾಗುವ, ನಲಿವುಗಳಿಗೆ ದನಿಗೂಡಿಸುವ, ಕರುಳ ಕುಡಿ ನಕ್ಕಾಗ ಅಕ್ಕರೆಯಿಂದ ಸಂಭ್ರಮಿಸುವ, ಮುಖ ಬಾಡಿಸಿದಾಗ ಒಳಗೊಳಗೇ ಮುದುಡುವ, ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ? ಆಕೆ ಹರಿಸುವ ವಾತ್ಸಲ್ಯದ ಸಾಗರದಲ್ಲಿ ಮಿಂದೇಳುವುದು ಅನಿರ್ವಚನೀಯ ಆನಂದದಾಗರ.
ಮಾತೇ ಮೌನವಾಗುವ ಅಮ್ಮ, ಒಮ್ಮೊಮ್ಮೆ ಮೌನವೇ ಮಾತಾಗುವ ಅಮ್ಮ. ಆದರೆ ಅಮ್ಮ ಅಮ್ಮನೇ. ಆಕೆ ಹರಿಸುವ ನಿರ್ವ್ಯಾಜ ಪ್ರೇಮ, ಅಕಳಂಕ ಪ್ರೀತಿಯ ಧಾರೆ… ಅದಕ್ಕೆ ಎಂದಾದರೂ ಸಾಟಿಯುಂಟೇ? ಮುತ್ತು ಕೊಡುವವಳು ಬಂದಾಗ ತುತ್ತು ಕೊಟ್ಟವಳ ಮರೆಯಬೇಡ ಎಂಬ ನಾಣ್ಣುಡಿ ಹುಟ್ಟಿಕೊಂಡದ್ದಕ್ಕೆ ಕಾರಣ ಹುಡುಕುವ ಬದಲು, ಈ ನಾಣ್ಣುಡಿಯ ಅಗತ್ಯವೇ ಇಲ್ಲವೆಂಬಷ್ಟರ ಮಟ್ಟಿನ ಕ್ಷಮಯಾಧರಿತ್ರಿ ಅಮ್ಮ. ಇದು ಅಲಂಕಾರಿಕ ವಾಕ್ಯವಲ್ಲ. ಸದಾ ಮಗನ ಒಳಿತಿಗಾಗಿ ಹಂಬಲಿಸುವ ತಾಯಿಮನದ ಸಾರಸರ್ವಸ್ವವೇ ಸಾಲಿನಲ್ಲಿದೆ.
ಬದುಕಿನ ಯಾವುದೋ ಒಂದು ಹಂತದಲ್ಲಿ, ಮ್ಲಾನವದನರಾಗಿ ಯೋಚಿಸುತ್ತಾ, ನನ್ನ ಬಳಿ ಏನಿದೆ ಅಂತ ಒಂದು ಕ್ಷಣ ಯೋಚಿಸಿದರೆ ಥಟ್ಟಂತ ನೆನಪಾಗುವುದು – ಮೇರೇ ಪಾಸ್ ಮಾ ಹೈ ಎಂಬ ವಾಕ್ಯವೇ ಅಲ್ಲವೇ?
ಈ ಭೂಮಿಯಲ್ಲಿ ಒಳ್ಳೆಯವರಿರುತ್ತಾರೆ, ಕೆಟ್ಟವರು, ಕೊಲೆಗಡುಕರು, ಅಪರಾಧಿಗಳು ಇರುತ್ತಾರೆ. ಆದರೆ ಭೂಮಿ ತಾಯಿ ಕೆಟ್ಟವಳು ಎಂದು ದೂಷಿಸುತ್ತಾರೆಯೇ? ಅದಕ್ಕೇ ಹೇಳುವುದು ಅಮ್ಮ ಕ್ಷಮಯಾ ಧರಿತ್ರಿ ಅಂತ. ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರುವುದು ಸಾಧ್ಯವೇ ಇಲ್ಲ. ತಾಯಿ ಬರೇ ತಾಯಿಯಲ್ಲ, ಆಕೆ ಎಲ್ಲ ರೀತಿಯ ಪಾಪ ಕರ್ಮಗಳಿಗೆ ಈಡಾಗಿಯೂ, ದೌರ್ಜನ್ಯಕ್ಕೆ ತುತ್ತಾಗಿಯೂ, ಅವನ್ನೆಲ್ಲಾ ಒಡಲೊಳಗೆ ಅದುಮಿಕೊಂಡು, ಹೊರಗೆ ಕಳೆಗಟ್ಟುವ ಭೂಮಿ ತಾಯಿಯಂತೆ ಕ್ಷಮಾಗುಣಸಾಗರಿ.
ಬದುಕಿನಲ್ಲಿ ಯಾವುದೇ ಯಶಸ್ಸಿನ ಮೆಟ್ಟಿಲೇರಿದರೂ, ಅಮ್ಮನ ಕೈಯಡುಗೆಯ ಸವಿಯನ್ನು ಮರೆಯಲಾದೀತೇ? ಊರಿಗೆ ಅರಸನಾದರೂ ತಾಯಿಗೆ ಆತ ಮಗನೇ ಸೈ. ಮಗು ತಿಂದನೇ, ಕುಡಿದನೇ, ಸರಿಯಾಗಿ ಸಕಾಲಕ್ಕೆ ನಿದ್ದೆ ಮಾಡಿದನೇ, ಉದ್ಯೋಗ ಕ್ಷೇತ್ರದಲ್ಲಿ ಎಷ್ಟು ಒತ್ತಡಗಳಿರುತ್ತವೆಯೋ ಏನೋ ಎಂದು ಬೆಳೆದ ತನ್ನ ಕಾಲ ಮೇಲೆ ನಿಂತ ಮಗನಲ್ಲಿಯೂ ತಾನು ಎತ್ತಿಯಾಡಿಸಿದ ಮಗುವನ್ನೇ ಕಾಣುವ, ಅವನಿಗ್ಯಾವುದೇ ಒತ್ತಡಗಳಿರಬಾರದು ಎಂದು ನೋಡಿಕೊಳ್ಳುವ, ಸದಾ ಹಾರೈಸುವ, ಮಸುಕಿದೀ ಮಬ್ಬಿನಲಿ ಕೈಹಿಡಿದು ಮುನ್ನಡೆಸುವ ಮಮತಾಮಯಿ ಈ ತಾಯಿ.
ರಾತ್ರಿ ತಡವಾಗಿ ಬಂದರೆ, ನಿದ್ದೆ ಹಾಳಾಯಿತೆಂದು ಮುನಿಸಿಕೊಳ್ಳದೆ ಬಾಗಿಲು ತೆಗೆದು, ಮಗು ಸುಸ್ತಾಗಿರಬಹುದು ಅಂತ ಆರೈಕೆ ಮಾಡುವ ಕೈಗಳು, ಪರೀಕ್ಷೆ ಬಂದಾಗ ಕರುಳ ಕುಡಿಗಿಂತ ಹೆಚ್ಚು ಜವಾಬ್ದಾರಿಯುತವಾಗಿ ಪ್ರತಿದಿನ ಬೆಳಗ್ಗೆ ಅಲಾರಂನಂತೆ ಪ್ರೀತಿಯಿಂದ ಎಬ್ಬಿಸುವ ಕೈಗಳು, ಪರೀಕ್ಷೆಯ ಫಲಿತಾಂಶ ದಿನದಂದು ಮಗನಿಗಿಂತ ಹೆಚ್ಚು ತಳಮಳಗೊಳ್ಳುವ, ಮಗ ಮಾಡಿದ ಸಾಧನೆಗೆ ‘ಇದಕ್ಕೆಲ್ಲ ನಾನೇ ಕಾರಣ’ ಎಂದು ಎಂದಿಗೂ ಕ್ರೆಡಿಟ್ ತೆಗೆದುಕೊಳ್ಳಲು ಎಳಸದ ಮನಸ್ಸು, ಕರುಳ ಕುಡಿಯ ಹೃದಯ ನುಚ್ಚುನೂರಾಗಿ, ಆಕಾಶವೇ ಕಳಚಿ ಬಿದ್ದಂತೆ ಆದಾಗ, ತನಗೆ ತಲೆಬುಡ ತಿಳಿಯದಿದ್ದರೂ ಮಗುವಿಗೇನೋ ಆಗಿದೆ ಅಂತ ತಲೆ-ಮನಸ್ಸು ನೇವರಿಸುವ, ಸಾಂತ್ವನಗೈಯುವ ಈ ಅಮ್ಮನಿಗೆ, ಮಗುವಿನ ಮನಸ್ಸು ಕಣ್ಣರಿಯದಿದ್ದರೂ ಕರುಳರಿಯದೇ? ಆಕೆಯ ಆ ಹಂಬಲ, ಆಕಾಂಕ್ಷೆ, ಸ್ವಾರ್ಥವಿಲ್ಲದ ಮಹದಾಸೆಯೇ ಆ ಮಗುವಿನ ಉನ್ನತಿಗೆ ಮೂಲಾಧಾರವಾಗುತ್ತದೆ, ಪ್ರೇರಣೆಯಾಗುತ್ತದೆ, ಚೈತನ್ಯವೂ ಆಗುತ್ತದೆ.
“ಒಬ್ಬ ಗಂಡಿಗೆ ಶಿಕ್ಷಣ ನೀಡಿದರೆ ಒಬ್ಬ ವ್ಯಕ್ತಿ ಸುಶಿಕ್ಷಿತನಾದಂತೆ, ಆದರೆ ಹೆಣ್ಣೊಬ್ಬಳಿಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬವೇ ಸುಶಿಕ್ಷಿತವಾದಂತೆ” ಎಂಬ ಮಾತು ಸುಮ್ಮನೇ ಹೇಳಿದ್ದಲ್ಲ. ಮಗುವಿನ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿ ಕೊಡುವವಳು ತಾಯಿ. ಆದರೆ ಆಕೆಯ ಕೈಗಳನ್ನು ಕಟ್ಟಿ ಹಾಕಿದರೂ, ಅವರಿವರಿಂದ ಕೇಳಿ ತಿಳಿದುಕೊಂಡು, ತನ್ನ ಮಗು ದೊಡ್ಡವನಾಗಬೇಕೆಂಬ ಹಂಬಲ, ತುಡಿತ ಸದಾ ಆಕೆಯ ಮನದೊಳಗಿರುತ್ತದೆ.
ಅಂಥದ್ದೊಂದು ಅಮ್ಮನೆಂಬ ಅಮ್ಮನನ್ನು ಪಡೆದ ನಾವೆಷ್ಟು ಧನ್ಯರು!
(ವೆಬ್‌ದುನಿಯಾ)
ಸರ್,
ಅಮ್ಮಂದಿರ ದಿನದಂದೂ ಅಮ್ಮನ ಬಗ್ಗೆ ಒಂದು ಸುಂದರ ಲೇಖನ…ಮನಮುಟ್ಟುತ್ತದೆ….
chanda ide avi… lEkhanavoo ammanooo
ಶಿವು ಅವರೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಶಮ,
ಪ್ರೋತ್ಸಾಹಕ್ಕೆ ತುಂಬ ಥ್ಯಾಂಕ್ಸ್
super !
ಲಕ್ಷ್ಮಿ, ಧನ್ಯವಾದ.