ಮತ್ತೆ ಬಂದಿದೆ ನವ ವರುಷ, ಹೊತ್ತು ತರಲಿ ನವೋಲ್ಲಾಸ

8
780

ಪ್ರತಿವರ್ಷ ಡಿಸೆಂಬರ್ ಆಗಮಿಸುತ್ತಿರುವಂತೆಯೇ ಏನೋ ಒಂದು ಹುಮ್ಮಸ್ಸು. ಕೆಲವರಿಗೆ ಒಳಗಿಂದೊಳಗೆ ಏನೋ ಚೇಳು ಹರಿದ ಅನುಭವವಾದರೆ, ಮತ್ತೆ ಕೆಲವರ ಮನದ ಮೂಸೆಯಲ್ಲಿ ಹೊಸ ನಿರೀಕ್ಷೆಗಳ ತಾಂಡವನೃತ್ಯ.

ಡಿಸೆಂಬರ್ ಮುಗಿದ ತಕ್ಷಣ ಅಲ್ಲೊಂದು ನಿಟ್ಟುಸಿರು ಮೂಡುತ್ತದೆ. ಕೆಟ್ಟದ್ದನ್ನು ಮರೆಯೋಣ, ಹೊಸ ಜೀವನ ಸಾಗಿಸೋಣ ಎಂದುಕೊಂಡು ನಿರಾಳರಾಗುತ್ತೇವೆ. ಡಿಸೆಂಬರ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ, ಮುಂದಿನ ವರ್ಷದ ಜನವರಿ ಎಂಬ ಹೊಸ ತರಗತಿಗೆ ಬಡ್ತಿ ಪಡೆಯುತ್ತೇವೆ.

ಈ ಅವಧಿಯಲ್ಲಿ ಆತ್ಮಾನುಸಂಧಾನ ಮಾಡಿಕೊಳ್ಳುವವರ ಮನದಲ್ಲಿ ಗೊಂದಲಗಳ ಸರಮಾಲೆ ಮೂಡಿದರೆ ಅವರು ಜೀವನದಲ್ಲಿ ಖಂಡಿತಾ ಉದ್ಧಾರವಾಗುತ್ತಾರೆ ಎಂಬುದು ನನ್ನ ಅನಿಸಿಕೆ. ಯಾಕೆ ಗೊತ್ತೇ? ಪ್ರತಿಬಾರಿ ಹೊಸ ವರ್ಷಾರಂಭದಲ್ಲಿ ನಾವು ಕೆಲವೊಂದು resolution ಕೈಗೊಳ್ಳುತ್ತೇವೆ. ಅದನ್ನು ಎಷ್ಟರ ಮಟ್ಟಿಗೆ ಪೂರೈಸಿದ್ದೇವೆ, ಎಷ್ಟರ ಮಟ್ಟಿಗೆ ಮುರಿದಿದ್ದೇವೆ ಎಂಬ ಗೊಂದಲ ಮನದಲ್ಲಿ ಮೂಡಿತೋ…. ಆಗ ಖಂಡಿತಾ ಬದಲಾವಣೆಗೆ ಅವಕಾಶ ಇದೆಯೆಂದಾಯಿತು. ಆ ತುಡಿತವೇ ನಮ್ಮನ್ನು ಜೀವನಪಥದಲ್ಲಿ ಮುನ್ನಡೆಸುತ್ತದೆ.

ಅದು ಬಿಟ್ಟು, ಕಳೆದ ಬಾರಿಯ ನಿರ್ಣಯದ ಬಗ್ಗೆ ಯಾವುದೇ ರೀತಿಯಲ್ಲೂ ಆತ್ಮಾವಲೋಕನ ಮಾಡಿಕೊಳ್ಳದೆ, ಕಳೆದ ವರ್ಷವೂ ನಿರ್ಣಯ ಮಾಡಿದ್ದೇವೆ, ಈ ಬಾರಿಯೂ ನಿರ್ಣಯ ಮಾಡುತ್ತೇವೆ ಎಂದುಕೊಳ್ಳುವರು, ಈ ಬಾರಿ ಹೊಸದೊಂದು ನಿರ್ಣಯ ಕೈಗೊಳ್ಳೋಣ ಎಂದುಕೊಳ್ಳುತ್ತಾ, ಮಾತು ಮುರಿಯಲೆಂದೇ ಹೊಸ ಹೊಸ ನಮೂನೆಯ ನಿರ್ಣಯ ಕೈಗೊಳ್ಳುವವರು, ಎಲ್ಲರೂ ಆತ್ಮನಿರ್ಣಯ ಮಾಡುತ್ತಾರೆ, ನಾವೂ ಮಾಡೋಣ ಎಂಬ ಹಠಕ್ಕೆ ಬಿದ್ದೋ… ಅಥವಾ ಅದು ಫ್ಯಾಶನ್ ಎಂದುಕೊಂಡೋ… ಇಂಥ ಹೊಸ ವರ್ಷದ ನಿರ್ಣಯಕ್ಕೆ ತಮ್ಮನ್ನು ಒಗ್ಗಿಸಿಕೊಂಡವರು ಯಾವತ್ತೂ ಸಫಲರಾಗುವುದಿಲ್ಲ.

ಈ ಕಾರಣಕ್ಕೆ, New Year Resolution ಕೈಗೊಂಡು ಅದನ್ನು ಈಡೇರಿಸಲಾರದೆ ಚಡಪಡಿಸುತ್ತಿರುವವರಿಗೆ ಮತ್ತು ಹೊಸದಾಗಿ ಇಂಥ ಹವ್ಯಾಸಕ್ಕೆ ಕಟ್ಟುಬಿದ್ದವರಿಗೆ ನನ್ನ ಪುಟ್ಟ ಸಲಹೆ ಏನೆಂದರೆ, ಈಡೇರಿಸಲಾರದ ನಿರ್ಣಯಕ್ಕೆ ಕಟ್ಟುಬೀಳದಿರಿ. ದಿನಕ್ಕೆ ನಾಲ್ಕೈದು ಪ್ಯಾಕೆಟ್ ಖಾಲಿ ಮಾಡಬಲ್ಲ Chain smokerಗಳು ಧೂಮಪಾನ ಬಿಡುವ ನಿರ್ಣಯ ಕೈಗೊಳ್ಳುವುದು ಸಾಧ್ಯವೇ? ವಿಪರೀತ ಕುಡಿತಕ್ಕೆ ಬಲಿಬಿದ್ದವರಿಗೆ ಅಮಲಿನಿಂದಲೇ ದೂರವಾಗುತ್ತೇನೆ ಎಂಬ ನಿರ್ಣಯ ಕೈಗೊಳ್ಳುವುದು ಸಾಧುವೇ? ಖಂಡಿತಾ ಅಸಾಧ್ಯ. ಬದಲಾಗಿ, ದಿನಕ್ಕೆ ಒಂದು ಪ್ಯಾಕ್ ಕಡಿಮೆ ಸೇದುವೆ, ದಿನಕ್ಕೊಂದು ಬಾಟಲಿ ಕಡಿಮೆ ಸೇವಿಸುವೆ ಎಂಬ ನಿರ್ಣಯ ಕೈಗೊಂಡು ನೋಡಬಹುದು. ಅಂದರೆ ಈಡೇರಿಸಲು ಸಾಧ್ಯವಿರುವ ನಿರ್ಣಯ ಕೈಗೊಳ್ಳಿ ಅನ್ನುತ್ತೇನೆ ನಾನು. ಇದು ಮೊದಲಿಗರಿಗೆ ಸಲಹೆ.

ಯಾಕೆಂದರೆ ನೀವು ಕಳೆದ ವರ್ಷ ಕೈಗೊಂಡ ನಿರ್ಣಯವನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದೇನೆ ಎಂಬುದನ್ನು ಪುನರಾವಲೋಕನ ಮಾಡಿದಾಗ, ನೀವು ಸಂಪೂರ್ಣ ಯಶಸ್ವಿಯಾಗಿದ್ದರೆ ಆಗ ಮನಸ್ಸಿಗಾಗುವ ಸಂತೋಷ ಅಷ್ಟಿಷ್ಟಲ್ಲ. ನಾವು ಅಸಾಧ್ಯ ಎಂದುಕೊಂಡ ಕಾರ್ಯವನ್ನು ಮುಂದಿನ ವರ್ಷಕ್ಕೆ ಮಾಡಿತೋರಿಸುವಷ್ಟು ಹುಮ್ಮಸ್ಸು, ಉತ್ಸಾಹ ನಮ್ಮಲ್ಲಿ ಮೂಡುತ್ತದೆ. ಯಶಸ್ಸೇ ನಮಗೆ ಈ ನಿರ್ಣಯಕ್ಕೆ ಬದ್ಧರಾಗಲು ಪ್ರೇರಣೆಯಾಗುತ್ತದೆ.

ಕಳೆದ ಬಾರಿ ಎಂಥಹ ನಿರ್ಧಾರ ಕೈಗೊಂಡಿದ್ದೇವೆ, ಅದು ಎಷ್ಟರ ಮಟ್ಟಿಗೆ ಈಡೇರಿದೆ ಎಂಬುದನ್ನೊಮ್ಮೆ ಪುನರಾವಲೋಕಿಸಿಕೊಂಡರೆ, ಅದರ ಯಶಸ್ಸಿನ ಆಧಾರದಲ್ಲಿ ಈ ಬಾರಿ ಹೊಸ ನಿರ್ಣಯ ಕೈಗೊಂಡು ವ್ಯಕ್ತಿತ್ವವನ್ನು ಮತ್ತಷ್ಟು ಸುಂದರವಾಗಿ ರೂಪಿಸಿಕೊಳ್ಳಬಹುದಲ್ಲ…. ಏನಂತೀರಿ?

ಹೊಸ ವರ್ಷಾಚರಣೆ ನಮ್ಮ ಸಂಪ್ರದಾಯಕ್ಕೆ ತಕ್ಕುದಲ್ಲ ಎಂಬ ವಾದವಿದೆ. ಆದರೆ ನಾವೆಲ್ಲರೂ ಕ್ರಿಸ್ತಶಕೆ ಕ್ಯಾಲೆಂಡರ್ ಪದ್ಧತಿಗೇ ಒಗ್ಗಿ ಹೋಗಿರುವುದರಿಂದ ಜನವರಿ 1ನ್ನೇ ಹೊಸ ವರ್ಷದ ಆರಂಭದ ದಿನವಾಗಿ ಆಚರಿಸುತ್ತೇವೆ ಎಂಬುದು ಎಲ್ಲರಿಗೂ ತಿಳಿದಿದೆ. ಇಲ್ಲಿ ಸಂಪ್ರದಾಯದ ತಾಕಲಾಟವನ್ನು ಮರೆತು, ನಮ್ಮ ಜೀವನ ರೂಪಿಸಿಕೊಳ್ಳಲು ಅಥವಾ ತಿದ್ದಿಕೊಳ್ಳಲು ಇದನ್ನೇ ಒಂದು ಅವಕಾಶವಾಗಿ ಬದಲಾಯಿಸಿಕೊಳ್ಳಬಾರದೇಕೆ?

2006ರ ವೈಫಲ್ಯಗಳು, ದುಃಖ ದುಮ್ಮಾನಗಳನ್ನೆಲ್ಲಾ 2007 ಸಾಫಲ್ಯ ಮತ್ತು ಸಂತೋಷದಾಯಕ ಕ್ಷಣಗಳಾಗಿ ಪರಿವರ್ತನೆ ಮಾಡಲಿ ಎಂಬ ಹಾರೈಕೆ.

8 COMMENTS

  1. ಅವೀ,

    ಸರಿಯಾಗಿ ಹೇಳಿದೀರಿ..
    ಸಂಪ್ರದಾಯದ ತಾಕಲಾಟ ಬಿಟ್ಟು, ಹೊಸ ವರ್ಷ ಜೀವನ ತಿದ್ದಿಕೊಳ್ಳಲು/ರೂಪಿಸಿಕೊಳ್ಳೋಕೆ ಒಂದು ಅವಕಾಶ.

    ಹೊಸ ವರ್ಷದ ನಿರ್ಧಾರಗಳು ಕೆಲವೊಮ್ಮೆ ನಿಜಕ್ಕೂ ಒಂದು ಲಕ್ಷ್ಯದ ತರ ಕೆಲಸ ಮಾಡುವದುಂಟು.ನಿರ್ಧಾರ ಸರಿ ಇದ್ದು, ಕೈಗೆಟುಕವಂತಿದ್ದರೆ ನಿಜಕ್ಕೂ ಅದನ್ನು ಮುರಿಯುವ ಅವಶ್ಯಕತೆಯೇ ಬರೋಲ್ಲಾ.

    ಅಂದಾಗೆ ತಮ್ಮ ನಿರ್ಧಾರಗಳೇನು ಈ ನವ ವರುಷಕ್ಕೇ?

  2. ಶಿವ್,

    ಕೆಲವು ಸಮಸ್ಯೆಗಳು ಎದುರಾಗಬಹುದಾದ್ದರಿಂದ ನನ್ನ ನವ ವರುಷದ ನಿರ್ಧಾರವನ್ನು ಇಲ್ಲಿ ಬಹಿರಂಗಪಡಿಸಲಾಗುತ್ತಿಲ್ಲ. ಅದು ಜೀವನದಲ್ಲಿ ಉನ್ನತಿಗೇರುವುದಕ್ಕೆ ಸಂಬಂಧಿಸಿದ್ದು ಎಂದಷ್ಟೇ ಹೇಳಬಲ್ಲೆ.

    ಮತ್ತೊಂದು ಉದ್ಯೋಗ ಕ್ಷೇತ್ರದಲ್ಲಿ ತಪ್ಪು ಮಾಡಬಾರದೂಂತ decide ಮಾಡಿದ್ದೀನಿ.

    ಕೆಟ್ಟದ್ದು ಎಂದು ಹೇಳಬಹುದಾದ ದುರಭ್ಯಾಸಗಳು ಯಾವುವೂ ಇಲ್ಲವಾದ ಕಾರಣ ಅವುಗಳನ್ನು ತ್ಯಜಿಸುವ ನಿರ್ಣಯವಂತೂ ಅಲ್ಲ. 🙂

  3. ಶ್ರೀನಿಧಿ ಅವರೆ,
    ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರೋತ್ಸಾಹದ ಮಾತಿಗೆ ಧನ್ಯವಾದಗಳು.

  4. ಹೊಸ ವರುಷದಲಿ ಹೊಸ ಬಾಳು ಬರಲಿ
    ಹೊಸ ಬಾಳಿನಲಿ ಹೊಸ ಚೈತನ್ಯ ತುಂಬಲಿ
    ಹೊಸ ಚೈತನ್ಯದಿ ಜಗದಲಿ ಶುಭ ಬದಲಾವಣೆಯಾಗಲಿ
    ಇದೇ ನನ್ನ ಆಶಯ

    ಹೊಸ ನಿರ್ಣಯ ತೆಗೆದುಕೊಳ್ಳುವುದೇ ಬೇಡ. ಅದನ್ನು ತೆಗೆದುಕೊಂಡರೆ ತಾನೆ, ಮುರಿಯುವ ಮನಸ್ಸಾಗುವುದು.
    ನಿಮ್ಮ ಉತ್ತಮ ಲೇಖನಕ್ಕೆ ನನ್ನ ಟೋಪಿ ಕೆಳಗೆ

  5. ಶ್ರೀನಿವಾಸರೆ,
    ಶುಭ ಬದಲಾವಣೆಯಾಗಲಿ ಎಂಬ ನಿಮ್ಮ ಶುಭ ಹಾರೈಕೆಗೆ ಧನ್ಯವಾದ.

    ನಿಮ್ಮ ಸಲಹೆಯಂತೂ ಬಂಬಾಟ್ ಆಗಿದೆ. New year ಎಂಬ ವಿದೇಶೀ hypeಗೆ ಸೊಪ್ಪು ಹಾಕದಿರಲು ಈ ಸೂತ್ರವೇ ಸರಿ ಅನ್ಸುತ್ತೆ.

  6. ಮಹೇಶ್ ಅವರೆ,
    ಕನ್ನಡದಲ್ಲಿ ಬ್ಲಾಗಿಸಲು ಬರುತ್ತಿರುವ ನಿಮಗೆ ಸ್ವಾಗತ.
    ಬೇಗನೆ ಬ್ಲಾಗ್ ಬಾಗ್ಲು ತೆರೆದುಬಿಡಿ.
    ಧನ್ಯವಾದ

LEAVE A REPLY

Please enter your comment!
Please enter your name here