ಇದೊಂದು ಕಾಮನ್ ಸೆನ್ಸ್ ಪ್ರಶ್ನೆ. ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾನ್ಯ ಕುಡುಕನೊಬ್ಬ ಯಾವತ್ತೂ ಮಾಡುವಂತೆ, ತನ್ನ ಮನೆಗೆ ಆ ದಿನ ಬಂದು ಅಮಲಿನಲ್ಲಿ ಪತ್ನಿಗೆ ಚೆನ್ನಾಗಿ ಮುಖ ಮೂತಿಯೆಂದು ನೋಡದೆ ಥಳಿಸುತ್ತಾರೆ. ಇದುವರೆಗೆ ನೋವನ್ನು ಸಹಿಸಿಕೊಂಡೇ ಇದ್ದ ಪತ್ನಿ ವಿಜಯಲಕ್ಷ್ಮಿಗೆ ಆ ದಿನ ಮಾತ್ರ ನೋವಿನ ನಡುವೆಯೂ ಸ್ವಾಭಿಮಾನವು ಎದ್ದು ನಿಂತಿದೆ. ಕೆರಳಿ ಕೆಂಡವಾಗಿ ಸಿಟ್ಟಿನ ಭರದಲ್ಲಿ ಪೊಲೀಸರಿಗೆ ದೂರು ನೀಡಿಯೇ ಬಿಡುತ್ತಾರೆ. ಕೊನೆಗೆ ಹೊಡೆತ ತಿಂದು ತನ್ನ ಮೇಲಿನ ಗಾಯಗಳಿಂದಾಗಿ ಆಸ್ಪತ್ರೆ ಸೇರಲೇಬೇಕಾಗುತ್ತದೆ. ಆಗ ರಂಗಕ್ಕಿಳಿಯುವ ಚಿತ್ರ ನಿರ್ಮಾಪಕರ ಸಂಘವು, ಈ ಗಂಡ-ಹೆಂಡಿರ ಜಗಳಕ್ಕೆ ಮೂರನೆಯ ಹೆಣ್ಣುಮಗಳೊಬ್ಬಳನ್ನು ತಪ್ಪಿತಸ್ಥೆ ಎಂದು ಶಿಕ್ಷೆ ವಿಧಿಸಿಬಿಡುತ್ತದೆ!
ಹಾಂ, ನೀವೆಂದಾದರೂ ದೊಡ್ಡ ದೊಡ್ಡ ಭಾಷಣಗಳಲ್ಲೋ, ಅಥವಾ ಲೇಖನಗಳಲ್ಲೋ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ’ ಎಂಬ ಗಾದೆ ಮಾತನ್ನು ಬರೇ ಗಾದೆ ಮಾತು ಎಂದಷ್ಟೇ ಅಂದುಕೊಂಡು ಕೇಳಿರುತ್ತೀರಿ, ಓದಿರುತ್ತೀರಿ. ಹಾಗಂದರೆ ಏನು, ಅದರ ನಿಜವಾದ ಅರ್ಥ ಏನು ಎಂಬುದು ನಿಮಗೀಗ ಅರಿವಾಗಿರಬೇಕು.
ಇಲ್ಲಿ ನಾನು ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನು ಬೆಂಬಲಿಸಿಯೋ, ಅಥವಾ ಪತಿ ಮತ್ತು ಪತ್ನಿಯ ಮಧ್ಯೆ ಬಂದಿದ್ದಾರೆಂಬ ಆರೋಪ ಹೊತ್ತಿರುವ ‘ಅವಳು’ – ಬಹುಭಾಷಾ ನಟಿ ನಿಖಿತಾ ಅವರನ್ನು ಸಪೋರ್ಟ್ ಮಾಡಿಯೋ ಬರೆಯುತ್ತಿಲ್ಲ. ಒಂದು ತೀರಾ ಜನಸಾಮಾನ್ಯನ ದೃಷ್ಟಿಯಿಂದ ನೋಡಿದರೆ ಕೂಡ ಇದೆಂಥಾ ಅನ್ಯಾಯ ಅಂತ ಅನಿಸದೇ ಇರದು.
ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಪರಿಸ್ಥಿತಿ ಈ ಕಾಲದಲ್ಲಿ ಖಂಡಿತಾ ಇಲ್ಲ. ಇದು ಸ್ತ್ರೀಸಮಾನತೆಯ ಕಾಲ. ಬದಲಾಗಿರುವ ಕಾಲದಲ್ಲಿ ಹೆಣ್ಣು ಮಕ್ಕಳಲ್ಲಿ ಕೂಡ ಆತ್ಮಾಭಿಮಾನ ಎದ್ದು ಕೂತಿದೆ. ಮಹಿಳೆಯೀಗ ತಾನೇನೂ ಕಮ್ಮಿ ಇಲ್ಲ ಎಂದು ಬಹುತೇಕ ಎಲ್ಲ ಕ್ಷೇತ್ರಗಳಲ್ಲಿಯೂ ತೋರಿಸಿಕೊಡುತ್ತಿದ್ದಾಳೆ.
ಅದು ಒತ್ತಟ್ಟಿಗಿರಲಿ. ಬರೇ ಗಾಸಿಪ್ ಕಾಲಂಗಳಲ್ಲಿ ಬರುತ್ತಿದ್ದ ಸುದ್ದಿಯ ಆಧಾರದಲ್ಲಿ ಸತ್ಯಾಸತ್ಯತೆ ವಿವೇಚನೆ ಮಾಡದೆ, ಕರ್ನಾಟಕ ಚಿತ್ರ ನಿರ್ಮಾಪಕರ ಸಂಘವು ಅರಳು ಪ್ರತಿಭೆಯಾಗಿರುವ ನಟಿಯೊಬ್ಬಳಿಗೆ ನಿಷೇಧ ಹೇರಿದೆ ಎಂದರೆ, ಇದು “ನಮ್ಮ ನೆಚ್ಚಿನ ನಟ ದರ್ಶನ್‌ಗೆ ನ್ಯಾಯ ಒದಗಿಸಿಕೊಟ್ಟಿದ್ದೇವೆ” ಎಂದು ಎದೆಯುಬ್ಬಿಸಿ ಹೇಳಿಕೊಳ್ಳುವಂತಹಾ ತೀರ್ಮಾನವೇನಲ್ಲ. ಅಲ್ಲೊಬ್ಬಳು ಇನ್ನೂ ಬೆಳೆಯಬೇಕಾದ ನಟಿಯಿದ್ದಾಳೆ, ‘ನಟಿ’ ಎಂಬುದನ್ನು ಮರೆತುಬಿಡಿ. ಮಾನವೀಯತೆಯ ದೃಷ್ಟಿಯಿಂದಲಾದರೂ, ಒಬ್ಬ ‘ಅವಿವಾಹಿತೆ ಹೆಣ್ಣು ಮಗಳಿ’ದ್ದಾಳೆ ಅಂತ ನೋಡಿಕೊಳ್ಳಬಹುದಿತ್ತು. ಇಂತಹಾ ನಿರ್ಧಾರಗಳಿಂದಾಗಿ ಅವಳ ಜೀವನ, ಅವಳ ಭವಿಷ್ಯ ಏನಾಗಬೇಡ?
ಗ್ಲ್ಯಾಮರ್ ಜಗತ್ತಿನಲ್ಲಿ ಸೆಳೆತ, ಅಫೇರು, ಮುಂತಾದವುಗಳನ್ನೆಲ್ಲಾ ಲೆಕ್ಕವಿಲ್ಲದಷ್ಟು ಕಂಡಿದೆ ಕನ್ನಡ ಚಿತ್ರರಂಗ. ಇಂತಹಾ ರಂಗು ರಂಗಿನ ಸಿನಿಮಾ ರಂಗದಲ್ಲಿ ಗಾಸಿಪ್‌ಗಳು ಎಷ್ಟು ಸಾಮಾನ್ಯವೋ, ಈ ಸಂಬಂಧಗಳ ಸೂಕ್ಷ್ಮತೆಯ ಪರಿಧಿ ಮೀರಿ ಹೋಗುವ ಪ್ರಕರಣಗಳೂ ಅಷ್ಟೇ ಸಾಮಾನ್ಯ. ತಮ್ಮ ವೈಯಕ್ತಿಕ ಜೀವನವನ್ನು ಅದೆಷ್ಟು ಜಾಗರೂಕತೆಯಿಂದ ಬಣ್ಣದ ಬದುಕಿಗೆ ಹೊಂದಿಸಿಕೊಂಡು ಹೋಗಬೇಕು ಎಂಬುದು ಈ ರಂಗದಲ್ಲಿರುವವರಿಗೇ ಗೊತ್ತು. ನಟನೆ ಮತ್ತು ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವ ಅತ್ಯಂತ ಸೂಕ್ಷ್ಮ ಜವಾಬ್ದಾರಿ, ಅಂಥದ್ದೊಂದು ಪ್ರಜ್ಞೆ ಇಲ್ಲಿ ಪ್ರತಿಯೊಬ್ಬ ನಟನಿಗೂ, ನಟಿಗೂ ಇರುತ್ತದೆ; ಇರಬೇಕು.
ಗಂಡ-ಹೆಂಡಿರ ಜಗಳಕ್ಕೆ ಸಂಬಂಧಿಸಿದಂತೆ, ಕನ್ನಡ ಚಿತ್ರರಂಗವು ಇಂಥದ್ದೊಂದು ನಿಷೇಧದ ತೀರ್ಮಾನ ತೆಗೆದುಕೊಂಡಿದೆ ಎಂದರೆ, ಅದಕ್ಕೆ ಯಾವುದೇ ಸಮರ್ಥನೆ ಕೊಟ್ಟರೂ ಅದು ಒಪ್ಪತಕ್ಕದ್ದಲ್ಲ. ಬೇಕಿದ್ದರೆ, ‘ನಿಜವಾಗಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಲು ನಮಗೆ ಮನಸ್ಸಿಲ್ಲ’ ಎಂದು ಘಂಟಾಘೋಷವಾಗಿ ಹೇಳಿಬಿಡಲಿ ಬೇಕಾದರೆ; ಆದರೆ, ಮತ್ತೊಂದು ಹೆಣ್ಣಿನ ಬಾಳು ಹಾಳು ಮಾಡುವುದು ಎಷ್ಟು ಸರಿ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಅದೇನೇ ಇರಲಿ. ದರ್ಶನ್ ಮೇಲೆ ಕೋಟಿ ಕೋಟಿ ಹೂಡಿದ ನಿರ್ಮಾಪಕರಿಗೆ ಅವರು ಈಗ ಜೈಲು ಪಾಲಾಗಿರುವುದರಿಂದ ನಷ್ಟವಾಗುತ್ತದೆ ಎಂದಾದರೆ, ನಿಖಿತಾ ಕೂಡ ಅವರಂತೆಯೇ ಒಬ್ಬ ನಟಿ, ಆಕೆಯ ಚಿತ್ರದ ಮೇಲೆ ಹಣ ಹೂಡಿದವರ ಪರಿಸ್ಥಿತಿ ಏನಾಗಬೇಡ?
ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಿಗರೇಟಿನ ಬೆಂಕಿಯಿಂದ ಸುಟ್ಟಿಸಿಕೊಂಡು, ಕಪಾಳ ಮೋಕ್ಷ ಮಾಡಿಸಿಕೊಂಡು, ರಕ್ತಸ್ರಾವ ಮಾಡಿಸಿಕೊಂಡು, ಸಿಟ್ಟಿನ ಭರದಲ್ಲಿ ಪೊಲೀಸರಿಗೆ ದೂರು ನೀಡಿದ ಪರಿಣಾಮವನ್ನು ಅರಿತುಕೊಂಡು ಪಶ್ಚಾತ್ತಾಪ ಪಟ್ಟುಕೊಂಡಿದ್ದಾರೆ. ತಮ್ಮ ಸಂಸಾರ ಸರಿಹೋಗಲಿ, ಗಂಡನಿಗೆ ಯಾವುದೇ ತೊಂದರೆಯಾಗದಿರಲಿ ಎಂದು ದೂರು ವಾಪಸ್ ಪಡೆಯಲು ಕೂಡ ಒಪ್ಪಿಕೊಂಡು, ಪತಿಯೇ ಪರದೈವ ಎಂಬೋ ಭಾವನೆಯಿಂದ, ಇದೇನೋ ಸಣ್ಣಪುಟ್ಟ ಗಲಾಟೆ ಎಂದು ಸುಮ್ಮನಾಗುವಂತಿಲ್ಲ. ಯಾಕೆಂದರೆ, ದರ್ಶನ್ ಪತ್ನಿ ಐಸಿಯು ಸೇರುವಷ್ಟರ ಮಟ್ಟಿಗೆ ಥಳಿಸಲ್ಪಟ್ಟಿದ್ದಾರೆ! ಆದರೂ, ಗಂಡನ ಮೇಲಿನ ಪ್ರೀತಿಯಿಂದ, ಮಗ ವಿನೀಶನ ಭವಿಷ್ಯದ ದೃಷ್ಟಿಯಿಂದಲಾದರೂ ರಾಜಿಗೆ ಮುಂದಾಗಿದ್ದಾರೆ. ಹೀಗಾಗಿ, ಬಹುಶಃ, “ಗಂಡ ಏನೂ ಕೈ ಮಾಡಿಲ್ಲ, ತನಗೆ ಗಾಯವಾಗಿದ್ದು ಬಾತ್‌ರೂಮಲ್ಲಿ ಜಾರಿ ಬಿದ್ದ ಪರಿಣಾಮವಾಗಿ” ಎಂಬ ಹೇಳಿಕೆಯನ್ನು ಕೊಟ್ಟಿದ್ದಾರೆ. ಸ್ವತಃ ಆಕೆಯೇ ಸಂಕಷ್ಟ ಸ್ಥಿತಿಯಲ್ಲಿದ್ದರೂ, ಈಗ ಆಸ್ಪತ್ರೆಯಲ್ಲಿರುವ ತನ್ನ ಪತಿ, ದರ್ಶನ್‌ರನ್ನು ನೋಡಿ, ಕಳಕಳಿಯಿಂದ ಆರೋಗ್ಯ ವಿಚಾರಿಸಿ ಬಂದಿದ್ದಾರೆ.
ಪರಿಸ್ಥಿತಿ ಹೀಗಿರುವಾಗ, ನನಗೆ ಮತ್ತಷ್ಟು ಅಚ್ಚರಿಯಾಗಿದ್ದು, ನಿರ್ಮಾಪಕರ ಸಂಘದ ಕಡೆಯವರು ಟಿವಿ ಚಾನೆಲ್‌ಗಳಲ್ಲಿ ಕೊಟ್ಟ ಹೇಳಿಕೆ. ‘ವಿಜಯಲಕ್ಷ್ಮಿ ಬಾತ್‌ರೂಮಿಂದ ಬಿದ್ದಿದ್ದಕ್ಕೆ ದಾಖಲೆ ಏನಾದರೂ ಇದೆಯೇ?’ ಎಂದು ಚಾನೆಲ್ ಮಂದಿಯನ್ನೇ ಪ್ರಶ್ನಿಸಿದ್ದರು. ಹಾಗಿದ್ದರೆ, ನಿಖಿತಾಳೇ ಬಂದು ದರ್ಶನ್ ಕುಟುಂಬವನ್ನು ಹಾಳು ಮಾಡಿರುವುದಕ್ಕೆ ಏನಾದರೂ ದಾಖಲೆ ಇದೆಯೇ ಎಂಬ ಪ್ರಶ್ನೆಯೂ ಅಲ್ಲೇ ಇದೆಯಲ್ಲಾ… ಸರಿ ಪೊಲೀಸ್ ಸ್ಟೇಶನ್‌ಗೆ ನೀಡಿದ ಎಫ್ಐಆರ್ ಆಧಾರದಲ್ಲಿ ಈ ಕ್ರಮ ಕೈಗೊಂಡಿದ್ದೇವೆ ಎಂದು ನಿರ್ಮಾಪಕರ ಸಂಘ ವಾದಿಸುತ್ತದೆಯೆಂದಾದರೆ, ದೂರು ಕೊಟ್ಟ ತಕ್ಷಣವೇ ಯಾರೂ ಅಪರಾಧಿ ಆಗಿರುವುದಿಲ್ಲ. ಯಾರು ಬೇಕಿದ್ದರೂ ಯಾರ ಮೇಲಾದರೂ ಏನಾದರೂ ದೂರು ಕೊಡಬಹುದು. ಈ ಅಂಶಕ್ಕೆ ಸ್ಪಷ್ಟನೆ ಇಲ್ಲ.
ಸರಿ. ಚಿತ್ರರಂಗದ ಅಳಿವು-ಉಳಿವಿನ ಬಗ್ಗೆ, ಈ ನಟನ ಜೀವನದ ಬಗ್ಗೆ ಇವರಿಗೆ ಇಷ್ಟು ಕಾಳಜಿ ಇದೆ ಎಂದಾದರೆ, ಈ ಒಡೆದ ಮನೆಯನ್ನು, ಮುರಿದ ಸಂಸಾರದ ನೌಕೆಯನ್ನು ಸರಿಪಡಿಸಲು ಏನು ಬೇಕಾದರೂ ಮಾಡಲಿ. ಆದರೆ ಅದ್ಯಾರೋ ಮೂರನೆಯವರು ಕಾರಣ ಅಂತೆಲ್ಲಾ ದೂರಿ, ಇಂತಹಾ ನಿರ್ಧಾರ ತೆಗೆದುಕೊಂಡಿರುವುದು ಹಾಸ್ಯಾಸ್ಪದವಲ್ಲವೇ? ಹಾಗಂತ ಕನ್ನಡ ಚಿತ್ರರಂಗದ ಮಾನ ಹರಾಜು ಆಗುತ್ತಿದೆ ಎಂಬುದೇನಾದರೂ ಆತಂಕವಿದ್ದರೆ ದರ್ಶನ್ ಅವರಿಗೇ ನಿರ್ಮಾಪಕರ ಸಂಘ ನಿಷೇಧ ಹೇರಬೇಕು ಎಂದು ನಾನೇನೂ ಇನ್ನೂ ಒತ್ತಾಯಿಸಿಲ್ಲ! ಕನಿಷ್ಠ ಪಕ್ಷ, “ನಮ್ಮ ಹುಡುಗನ” ಸಂಸಾರ ಸರಿ ಮಾಡುವ ಇರಾದೆ ಇದ್ದದ್ದೇ ಆದರೆ, ನಿಖಿತಾ ಹೇಳಿಕೆಯನ್ನು ಕೇಳಿಕೊಂಡು, ವಿಜಯಲಕ್ಷ್ಮಿಯನ್ನೂ ಕೂರಿಸಿಕೊಂಡು, ಮಾತುಕತೆ ನಡೆಸಿ ವಿವಾದ ಬಗೆಹರಿಸಬಹುದಿತ್ತಲ್ಲ ಎಂಬ ಪ್ರಶ್ನೆಗೂ ಉತ್ತರ ಸಿಗಬೇಕಿದೆ.
ಒಂದು ಸಂಸಾರದ, ಇಬ್ಬರ ನಡುವಿನ ವೈಯಕ್ತಿಕ ಸಮಸ್ಯೆಯನ್ನು ಇಡೀ ಕನ್ನಡ ಚಿತ್ರರಂಗದ ಸಮಸ್ಯೆಯಾಗಿ ಬದಲಾಯಿಸಿ, ಮೂರನೆಯವರಿಗೆ ಶಿಕ್ಷೆ ವಿಧಿಸಿದ್ದು ಖಂಡಿತಾ ತಪ್ಪು ಅನ್ನಿಸದಿರದು.
ಗಂಡ-ಹೆಂಡತಿ ಇಬ್ಬರೂ ಮಾತನಾಡುವ ಸ್ಥಿತಿಯಲ್ಲಿ ಇಲ್ಲ. ಅವರ ಹೇಳಿಕೆ ಪಡೆಯದೇ ಸಂಘವು ಕ್ರಮ ಘೋಷಿಸಿದ್ದು ಮತ್ತು ಮನೆ ಜಗಳದ ವಿಷಯವನ್ನು ಪರಿಹರಿಸುವುದು ಬಿಟ್ಟು ಮೂರನೆಯವರ ಮೇಲೆ ಕ್ರಮ ಕೈಗೊಳ್ಳುವುದು ಎಷ್ಟು ಸರಿ? ಅದಕ್ಕೂ ಮಿಗಿಲಾಗಿ, ಚಿತ್ರರಂಗದವರೆಲ್ಲರೂ ದರ್ಶನ್ ಬೆಂಬಲಕ್ಕೆ ನಿಂತಿದ್ದುದು! ಮಂಡ್ಯದ ಮಹಿಳೆಯರು ಕೂಡ ಬಂದು, ದರ್ಶನ್ ಬಿಡುಗಡೆ ಮಾಡಬೇಕು ಎಂದು ಪೊಲೀಸ್ ಠಾಣೆಯೆದುರು ಒತ್ತಾಯಿಸಿದ್ದು!
ಅದೆಲ್ಲಾ ಇರಲಿ; ಕುಡಿದು ಬಂದು, ರಿವಾಲ್ವರ್ ಸೇರಿಸಿ ಏನೂ ಅರಿಯದ ಆ ಮುಗ್ಧ ಮಗುವಿಗೆ ಹೆದರಿಸುವುದು ಖಂಡಿತಾ ಪೌರುಷ ಅಲ್ಲ. ನಾನು ನನ್ನ ಅಪ್ಪನ ಹಾಗೆ ಆಗಬೇಕು ಅಂದುಕೊಳ್ಳೋ ಆ ಅಮಾಯಕ ಮಗುವಿನ ಪರಿಸ್ಥಿತಿ ಯಾರಾದರೂ ಊಹಿಸಿಕೊಂಡಿದ್ದೀರಾ? ಅಥವಾ ನಾನು ಹೀರೋ ದರ್ಶನ್ನ ಹಾಗೆ ಅಂದುಕೊಳ್ಳುವ ನಮ್ಮ ನಿಮ್ಮ ಮನೆಯ ಮಕ್ಕಳ ಬಗ್ಗೆ ಯೋಚಿಸಿದ್ದೀರಾ?
[ವೆಬ್‌ದುನಿಯಾಕ್ಕಾಗಿ]
ರಾಕ್ಲೈನ್ ಹೇಳಿದಾರೆ..ನಿಖಿತಾ ನ ban ಮಾಡಿ, ಬೇರೆ ನಟಿಯರಿಗೆ ಎಚ್ಚರಿಕೆ ಗಂಟೆ ಹೊಡೆದಿದ್ದೀವಿ ಅಂತ.
ಹಾಗಾದ್ರೆ, ಒಂದು ಹುಡುಗಿಯ ಪ್ರಾಣ ತೆಗೆದ ಗೋಡೆ ಕಟ್ಟಿದ ಮುನಿರತ್ನನ್ನ ban ಮಾಡಿ ಅಂಥವರಿಗೆ ಎಚ್ಚರಿಕೆ ಗಂಟೆ ಬಾರಿಸಕ್ಕೆ ಅವರ ಕೈ ನ ಯಾರಾದ್ರೂ ಕಟ್ಟಾಕಿದ್ರಂತ?
ಇಂಥವ್ರು ಮಾಡೊ ಚಿತ್ರಗಳನ್ನ ನೋಡಲ್ಲ ಅಂತ ನಾವು ಅವರ ಮೇಲೆ ನಿಷೇದ ಹಾಕ್ಬೇಕು.
Darshan maadiddu tappu…..producer sangadavaru maadiddu tappu…. Darshan na tappige avalige nirbhandana maadiddu nijavaagalu khandaneeya vichaara..
ಹೌದು, ಮನಬಂದಂತೆ ವರ್ತಿಸುವ ಈ ರೀತಿಯ ಮಂದಿಯ ಹುನ್ನಾರ ಏನೆಂಬುದೇ ಅರ್ಥವಾಗ್ತಿಲ್ಲ…
ಧನ್ಯವಾದ
ಹೌದು ಗಿರೀಶ್, ಈಗ ಒತ್ತಡ ತಡೆಯಲಾರ್ದೆ ನಿಷೇಧ ಹಿಂತೆಗೆದುಕೊಂಡಿದ್ದಾರೆಂಬುದು ನೋವಿನ ಮಧ್ಯೆ ಸಂತೋಷಪಡಬೇಕಾದ ವಿಚಾರ.