ಅಂಗೈಯಲ್ಲೇ ಜಗತ್ತು ಎನ್ನುವ ತಂತ್ರಜ್ಞಾನ ಯುಗದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ, ಸುಶಿಕ್ಷಿತರೇ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಸುದ್ದಿಗಳನ್ನು ದಿನಂಪ್ರತಿ ಕೇಳುತ್ತಿದ್ದೇವೆ. ವಿಶೇಷವಾಗಿ ಹಣಕಾಸು ವಿಚಾರದಲ್ಲಿ ಆಸೆ ಆಮಿಷವೊಡ್ಡುವ ಕರೆಗಳು, ಇಮೇಲ್‌ಗಳು, ಎಸ್ಸೆಮ್ಮೆಸ್, ವಾಟ್ಸ್ಆ್ಯಪ್ ಸಂದೇಶಗಳ ಮೂಲಕ ಸೈಬರ್ ವಂಚಕರು ಬೀಸುವ ಬಲೆಗೆ ಜನರು ಸುಲಭವಾಗಿ ಸಿಲುಕುತ್ತಾರೆ.
ಕೆವೈಸಿ (Know Your Customer) ಎಂಬ ಗ್ರಾಹಕರ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ವಿಧಾನದ ಹೆಸರಿನಲ್ಲಿ ಸೈಬರ್ ವಂಚಕರು ಸಾಕಷ್ಟು ಅನಾಹುತಗಳನ್ನು ಈಗಾಗಲೇ ಮಾಡಿದ್ದಾರೆ. ಆದಾಯ ತೆರಿಗೆ ವಾಪಸ್, ವಿಮೆ ಮೆಚ್ಯೂರ್ ಆಗಿರುವ ಬಗ್ಗೆ, ಕೇಂದ್ರ ಸರ್ಕಾರದಿಂದ ಹಣ ಸಹಾಯ ದೊರೆತಿರುವ ಬಗ್ಗೆ ಜನರನ್ನು ಪುಸಲಾಯಿಸಿ, ಒಟಿಪಿ ಪಡೆದುಕೊಂಡು ಬ್ಯಾಂಕ್ ಖಾತೆ ಬರಿದು ಮಾಡುವ ವಂಚಕರಿನ್ನೂ ಸಕ್ರಿಯವಾಗಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲದೆ ಭಾರತೀಯ ರಿಸರ್ವ್ ಬ್ಯಾಂಕ್ ಕೂಡ ನಾಗರಿಕರಿಗೆ ಈ ಕುರಿತು ಆಗಾಗ್ಗೆ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುತ್ತಲೇ ಇವೆ. ನಾವೇನು ಮುನ್ನೆಚ್ಚರಿಕೆ ವಹಿಸಬೇಕು?
- ಪದೇ ಪದೇ ಹೇಳುವ ವಿಚಾರವೆಂದರೆ, ಏಕ ಕಾಲಿಕ ಪಾಸ್‌ವರ್ಡ್ (ಒಟಿಪಿ), ಯುಪಿಐ (ಏಕೀಕೃತ ಪಾವತಿ ಇಂಟರ್ಫೇಸ್) ಪಿನ್, ಬ್ಯಾಂಕ್ ಖಾತೆಯ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಫೋನ್ ಮೂಲಕ ಹಂಚಿಕೊಳ್ಳಬಾರದು.
- ನಿಮ್ಮ ಕೆವೈಸಿ ಅಪ್‌ಡೇಟ್ ಮಾಡಬೇಕಿದೆ, ಇಲ್ಲದಿದ್ದರೆ ನಿಮ್ಮ ಡೆಬಿಟ್ (ಎಟಿಎಂ), ಆಧಾರ್ ಕಾರ್ಡ್ ರದ್ದಾಗುತ್ತದೆ, ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗುತ್ತದೆ ಎಂಬ ನಕಲಿ ಅಧಿಕಾರಿಗಳ ಹೆಸರಿನಲ್ಲಿ ಬರುವ ಬೆದರಿಕೆಯ ಕರೆಗಳಿಗೆ, ಸಂದೇಶಗಳಿಗೆ ಜಗ್ಗಬೇಡಿ. ಯಾವುದೇ ಬ್ಯಾಂಕ್ ನಿಮ್ಮಿಂದ ಒಟಿಪಿ, ಪಿನ್ ಅಥವಾ ಪಾಸ್‌ವರ್ಡ್ ಇತ್ಯಾದಿಯನ್ನು ಫೋನ್ ಮೂಲಕ ಕೇಳುವುದೇ ಇಲ್ಲ.
- ಇಂಟರ್ನೆಟ್ ಬ್ಯಾಂಕಿಂಗ್ ಸೇವೆಯನ್ನು ಬಳಸುತ್ತಿದ್ದರೆ, ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಏನಾದರೂ ಖರೀದಿ ಮಾಡಿ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿಸುತ್ತಿದ್ದರೆ, ಉಚಿತವಾಗಿ ದೊರೆಯುವ ಸಾರ್ವಜನಿಕ ವೈಫೈ ಬಳಸಲೇಬಾರದು.
- ಇತ್ತೀಚಿನ ಸೈಬರ್ ಅಪರಾಧಗಳನ್ನು ಪರಿಗಣಿಸಿದಲ್ಲಿ, ವಿಮಾನ/ಬಸ್ಸು/ರೈಲು ನಿಲ್ದಾಣಗಳಲ್ಲಿರಬಹುದಾಗಿರುವ ಸಾರ್ವಜನಿಕ ಚಾರ್ಜಿಂಗ್ ಸ್ಟೇಶನ್‌ಗಳನ್ನೂ ಬಳಸಬಾರದು. ಸೈಬರ್ ವಂಚಕರು ಈ ಚಾರ್ಜಿಂಗ್ ಕೇಬಲ್/ಅಡಾಪ್ಟರ್‌ಗಳಲ್ಲಿಯೂ ಮಾಲ್‌ವೇರ್ ಅಳವಡಿಸಿ, ಸ್ಮಾರ್ಟ್ ಫೋನ್‌ಗಳಲ್ಲಿರುವ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕಿಂಗ್ ಖಾತೆಯ ವಿವರಗಳನ್ನು ಸಂಗ್ರಹಿಸಬಲ್ಲರು.
- ನಿಮ್ಮ ಖಾತೆ ನಿಷ್ಕ್ರಿಯವಾಗಲಿದೆ ಅಥವಾ ನಿಮ್ಮ ಫೋನ್‌ನಲ್ಲಿ ವೈರಸ್ ಇದೆ, ಇದರ ಪರಿಹಾರಕ್ಕೆ ಲಿಂಕ್ ಕ್ಲಿಕ್ ಮಾಡಿ ಮಾಹಿತಿ ಭರ್ತಿ ಮಾಡಿ ಎಂದೋ, ಈಗ ಬರುವ ಒಟಿಪಿ ಹೇಳಿರೆಂದೋ ಕೇಳುವ ಕರೆಗಳು ಬರಬಹುದು. ಎಟಿಎಂ ಪಿನ್, ಕ್ರೆಡಿಟ್ ಕಾರ್ಡ್ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಪಾಸ್‌ವರ್ಡ್ ಮುಂತಾದ ಖಾಸಗಿ ಮಾಹಿತಿಯನ್ನೂ ಕೇಳಬಹುದು. ಖಡಾಖಂಡಿತವಾಗಿ ನಿರಾಕರಿಸಿಬಿಡಿ.
- ನೀವು ಕಟ್ಟಿದ ಹೆಚ್ಚುವರಿ ಆದಾಯ ತೆರಿಗೆಯನ್ನು ತೆರಿಗೆ ಇಲಾಖೆ ವಾಪಸ್ ಮಾಡುತ್ತದೆ. ತಕ್ಷಣ ನಿಮ್ಮ ಬ್ಯಾಂಕ್ ಖಾತೆ ವಿವರ ನೀಡಿ ಅಂತಲೂ ಫೋನ್ ಕರೆ, ಸಂದೇಶಗಳು ಬರಬಹುದು. ಲಿಂಕ್‌ಗಳನ್ನೂ ಕಳುಹಿಸಬಹುದು. ಇಂಥವೆಲ್ಲವೂ ವಂಚಕರ ತಂತ್ರಗಳು. ಸುಮ್ಮನಿದ್ದುಬಿಡಿ.
- ಏನೇ ಸೂಕ್ಷ್ಮ ಮಾಹಿತಿ ಇದ್ದರೂ, ಬ್ಯಾಂಕ್ ಅಥವಾ ಸಂಬಂಧಪಟ್ಟ ಸಂಸ್ಥೆಯ ಕಚೇರಿಗೆ ಹೋಗಿಯೇ ಮಾಡಿಸಿಕೊಳ್ಳಿ.