[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ]
ದೇಶವನ್ನು ಕ್ಯಾನ್ಸರ್ ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರ ಮಟ್ಟ ಹಾಕುವ ಇಚ್ಛಾಶಕ್ತಿಯಾಗಲೀ, ಬದ್ಧತೆಯಾಗಲೀ, ಯಾವುದೇ ರಾಜಕಾರಣಿಗೆ ಇಲ್ಲ. ಇದರಲ್ಲಂತೂ ಪಕ್ಷಭೇದವಂತೂ ಇಲ್ಲವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ, ನಾಲ್ಕು ದಶಕಗಳಿಂದಾಗದ ಕಾರ್ಯವೊಂದು ಈಗ ನಡೆಯುತ್ತಿದೆ ಎಂದಾದರೆ, ಅದಕ್ಕೇಕೆ ಅವಕಾಶ ಕೊಟ್ಟು ನೋಡಬಾರದು? ಇಂತಹಾ ಒಂದು ಪರಿಸ್ಥಿತಿಗೆ, ಇಂತಹಾ ಒಂದು ಹತಾಶೆಯ ಬೇಡಿಕೆಗೆ ಕಾರಣವೂ ಇದೆ. ಆಗಸ್ಟ್ ತಿಂಗಳಲ್ಲಿ ಯುಪಿಎ ಸರಕಾರವು ಸಂಸತ್ತಿನಲ್ಲಿ ಮಂಡಿಸಿದ ಲೋಕಪಾಲ ವಿಧೇಯಕಕ್ಕೆ ಹೋಲಿಸಿದರೆ, ಮೊನ್ನೆ ಡಿಸೆಂಬರ್ 22ರಂದು ಸಂಸತ್ತಿನಲ್ಲಿ ಮಂಡಿಸಿದ ಲೋಕಪಾಲ ವಿಧೇಯಕ ತೀರಾ ದುರ್ಬಲ! ಇನ್ನೂ ಹಠ ಹಿಡಿದರೆ, ಲೋಕಪಾಲದ ಜಾಗದಲ್ಲಿ ತೀರಾ ನಾಮಕಾವಾಸ್ತೇ ಸಂಸ್ಥೆಯೊಂದು ಬಂದರೂ ಅಚ್ಚರಿಯಿಲ್ಲ!
ಕಳೆದ ಗುರುವಾರ ಲೋಕಸಭೆಯಲ್ಲಿ ಈ ಕುರಿತು ನಡೆದ ಚರ್ಚೆಯನ್ನು ಗಮನಿಸಿದರೆ, ಸರಕಾರದ ಉದ್ದೇಶ ಸ್ಪಷ್ಟವಾಗುತ್ತದೆ. ‘‘ದೇಶದ ಸಂವಿಧಾನ ರೂಪಿಸುವವರು ರಾಜಕಾರಣಿಗಳು, ನಾವು ಜನರಿಂದ ಚುನಾಯಿತರು. ಸಂಸತ್ತಿನಲ್ಲಿ ಕೂತು ಎಲ್ಲವನ್ನೂ ಮಾಡುತ್ತೇವೆ. ನಮ್ಮನ್ನು ಯಾರೂ ಪ್ರಶ್ನಿಸಬಾರದು’’ ಎಂದು ಸಂಸತ್ತಿನೊಳಗೆ ಕುಳಿತವರು ಗರ್ಜಿಸಿದ್ದಾರೆ. ಇದರಲ್ಲೇನೂ ತಪ್ಪಿಲ್ಲ ಬಿಡಿ. ಸಂಸತ್ತಿಗೇ ಪರಮಾಧಿಕಾರ ಇದೆ ಎಂಬುದು ನಿಜವಾದರೂ, ನಮ್ಮನ್ನು ಪ್ರತೀ ಹೆಜ್ಜೆಗೂ ಕಾಡುತ್ತಿರುವ, ಸರಕಾರದ ಪ್ರತಿಯೊಂದು ಯೋಜನೆಯಲ್ಲಿಯೂ ತೆರಿಗೆದಾರರ ಹಣ ಪೋಲಾಗಲು ಕಾರಣವಾಗುತ್ತಿರುವ ಭ್ರಷ್ಟಾಚಾರವೆಂಬೋ ಪೆಡಂಭೂತವನ್ನು ನಿಯಂತ್ರಿಸಿ ಅಂತ ಕೂಗಾಡಲು- ತೆರಿಗೆ ಕಟ್ಟುವ ಪ್ರತಿಯೊಬ್ಬ ನಾಗರಿಕನಿಗೂ ಇದೆಯಲ್ಲವೇ?
ಅವರು ‘ಪರಮ’ ಅಧಿಕಾರವುಳ್ಳವರಾದರೂ, ಪ್ರಜೆಗಳ ಪ್ರತಿನಿಧಿಗಳು ಅನ್ನಿಸಿಕೊಂಡವರು- ನಾವೇ ಆರಿಸಿ ಕಳುಹಿಸಿದವರು ಇದುವರೆಗೆ ಮಾಡಿದ್ದೇನು ಮತ್ತು ಈಗಲೂ ಮಾಡುತ್ತಿರುವುದೇನು? ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕಿದೆ ಎಂಬ ಕೂಗು ಈ ಮಟ್ಟಕ್ಕೆ ಹೋಗಲು ಕಾರಣವಾಗಿರುವುದಾದರೂ ಏನು ಅಂತ ಒಂದು ಕ್ಷಣ ಯಾಕೆ ಯಾವುದೇ ಸಂಸತ್ ಸದಸ್ಯನೂ ಯೋಚಿಸುವುದಿಲ್ಲ? ನಾಲ್ಕು ದಶಕಗಳೇ ಬೇಕಾಯಿತೇ ಸಂಸತ್ತಿನೊಳಗೆ ಕುಳಿತವರಿಗೆ ಇಂಥದ್ದೊಂದು ಲೋಕಪಾಲದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂಬುದು ಮನಸ್ಸಿಗೆ ನಾಟಲು?
‘ಲೋಕಪಾಲ’ ಮತ್ತು ‘ಲೋಕಾಯುಕ್ತ’ ಪದವಿಗೇ ಒಂದು ಇತಿಹಾಸವಿದೆ. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅದುವರೆಗೆ ಸ್ವೀಡಿಶ್ ಪರಿಕಲ್ಪನೆಯಾಗಿದ್ದ ‘ಓಂಬುಡ್ಸ್‌ಮನ್’ ಎಂಬುದಕ್ಕೆ ಭಾರತೀಯ ಪರ್ಯಾಯ ಪದವನ್ನು 1963ರಲ್ಲೇ (ಏಪ್ರಿಲ್ 3) ಕಾಯಿನ್ ಮಾಡಿದವರು ಅಂದು ಜೋಧ್‌ಪುರ ಲೋಕಸಭಾ ಕ್ಷೇತ್ರದ ಸದಸ್ಯರಾದ, ಪಕ್ಷೇತರ ನಾಯಕ, ಪದ್ಮಶ್ರೀ ಪುರಸ್ಕೃತ ಲಕ್ಷ್ಮೀ ಮಲ್ ಸಿಂಘ್ವಿಯವರು. ಬರಹಗಾರ, ನ್ಯಾಯವಾದಿ, ರಾಜತಾಂತ್ರಿಕ ಅಧಿಕಾರಿಯೂ ಆಗಿದ್ದ ಎಲ್.ಎಂ.ಸಿಂಘ್ವಿ ಬಳಿಕ 1998ರಿಂದ 2004ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದರು. ಅವರಿಂದ ಅಂದಿನ ಪ್ರಧಾನಿ ನೆಹರೂಗೆ ಈ ಸಲಹೆ ಬಂದ ದಿವಸವು ಮೂರ್ಖರ ದಿನದ (ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಮೊದಲ 3 ದಿನ) ವ್ಯಾಪ್ತಿಗೆ ಬರುತ್ತದೆಯಾದರೂ, ಅದೇನೂ ಜೋಕ್ ಆಗಿರಲಿಲ್ಲ. ಈಗ ಅದೇ ರಾಜಕಾರಣಿಯ ಪುತ್ರ, ಕಾಂಗ್ರೆಸ್ ಸಂಸದರೂ, ವಕ್ತಾರರೂ ಆಗಿ ಈಗ ಪ್ರಸಿದ್ಧಿ ಪಡೆದಿರುವ ಅಭಿಷೇಕ್ ಮನು ಸಿಂಘ್ವಿ ಅವರೇ ಲೋಕಪಾಲ ವಿಧೇಯಕದ ಕರಡು ರೂಪಿಸುವ ಸಂಸದೀಯ ಸ್ಥಾಯಿ ಸಮಿತಿಯ ಮುಖ್ಯಸ್ಥ ಆಗಿದ್ದಾರೆಂಬುದು ಕಾಕತಾಳೀಯ!
‘‘ಒಳ್ಳೆಯ ಕಟ್ಟು ನಿಟ್ಟಾದ ಮಸೂದೆ ಕೊಡಿ, ನೀವು ಬೇಕಾಬಿಟ್ಟಿಯಾಗಿ ರಾಜಕೀಯ ಕಾರಣಕ್ಕೋಸ್ಕರ ಬಳಸಿಕೊಳ್ಳುತ್ತಿರುವ, ತಥಾಕಥಿತ ‘ಸ್ವತಂತ್ರ’ ತನಿಖಾ ಮಂಡಳಿ ಎಂದೆಲ್ಲಾ ಹೇಳಲಾಗುತ್ತಿರುವ ಸಿಬಿಐಯನ್ನು ಲೋಕಪಾಲ ವ್ಯಾಪ್ತಿಗೆ ತನ್ನಿ, ಕೆಳ ಮಟ್ಟದ ಸರಕಾರಿ ಅಧಿಕಾರಿಗಳನ್ನೂ ಸೇರಿಸಿ’’ ಎಂದೆಲ್ಲಾ ಒತ್ತಾಯಿಸುತ್ತಿರುವುದು ಒಬ್ಬ ಅಣ್ಣಾ ಹಜಾರೆಯೇನಲ್ಲ. ಅಧಿಕಾರದಲ್ಲಿದ್ದವರು ತಿಂದದ್ದೇ ಬಂತು. ಪ್ರತಿದಿನವೂ ನರಳಬೇಕಾಗಿರುವುದು ಬಡ ಪ್ರಜೆ-ಜನ ಸಾಮಾನ್ಯ.
ಹಜಾರೆ ವ್ಯಕ್ತಿಗತವಾಗಿ ಭ್ರಷ್ಟರೇ ಆಗಿರಲಿ (ಅವರ ಮೇಲೆ ಆರೋಪ ಹೊರಿಸುವ ಪ್ರಯತ್ನಗಳು ನಡೆದು, ತನಿಖೆಯೂ ಆಗಿದೆ), ಅಥವಾ ಕೆಟ್ಟ ನಡವಳಿಕೆಯವರೇ ಆಗಿರಲಿ; ಜನ ಸಾಮಾನ್ಯರ ಒಡಲ ಕೂಗಿಗೆ ಧ್ವನಿಯಾಗಿದ್ದಾರಲ್ಲಾ… ಮತ್ತು ಪ್ರಜೆಗಳ ಒಕ್ಕೊರಳ ಹೋರಾಟವನ್ನು ಕೇಂದ್ರೀಕರಿಸುವ ಶಕ್ತಿಯಾಗಿದ್ದಾರಲ್ಲಾ… ಇದನ್ನಾದರೂ ರಾಜಕಾರಣಿಗಳು ಅರಿತುಕೊಳ್ಳಬೇಕು.
ಈಗ ಲೋಕಪಾಲಕ್ಕೆ ಮೈನಾರಿಟಿ ಕೋಟಾ ಸೇರಿಸಲಾಗಿದೆ ಹಾಗೂ ರಾಜ್ಯಗಳೂ ಕೂಡ ಈ ಕಾಯಿದೆಯಡಿ ಕಡ್ಡಾಯವಾಗಿ ಲೋಕಾಯುಕ್ತವನ್ನು ರಚಿಸಬೇಕು ಎಂಬ ಉಲ್ಲೇಖಗಳಿವೆ. ಇವು ಎರಡೂ ಕೂಡ ಈ ಫೆಡರಲ್ ವ್ಯವಸ್ಥೆಯಲ್ಲಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅರ್ಹವಾಗಿರುವ ವಿಚಾರಗಳೇ. ಮೀಸಲು ವ್ಯವಸ್ಥೆಯನ್ನು ಉಲ್ಲೇಖಿಸಿರುವುದರ ಹಿಂದೆ ‘ಒಂದೇಟಿಗೆ ಎರಡು ಹಕ್ಕಿ’ ಎಂಬ ತಂತ್ರವಿದೆ. 5 ರಾಜ್ಯಗಳ, ವಿಶೇಷವಾಗಿ ಉತ್ತರ ಪ್ರದೇಶ ಚುನಾವಣೆಗಳು ಮುಂದಿವೆ; ಒಂದೆಡೆ ಅಲ್ಪಸಂಖ್ಯಾತರ ಮತ ನಿಧಿಯನ್ನು ಸೆಳೆಯಲು ಇದನ್ನು ಎಳೆದು ತರಲಾಗಿದ್ದರೆ, ಇದು ವಿವಾದಕ್ಕೆ ಕಾರಣವಾಗಿ, ಕೋರ್ಟ್ ಮೆಟ್ಟಿಲೇರಿದರೆ, ಲೋಕಪಾಲದ ಆಗಮನ ಖಂಡಿತ ವಿಳಂಬವಾಗುತ್ತದೆ. ಗೊತ್ತಿದ್ದೂ ಗೊತ್ತಿದ್ದೂ ಯಾರಾದರೂ ನೇಣಿಗೆ ಕೊರಳೊಡ್ಡಿಕೊಳ್ಳುತ್ತಾರೆಯೇ?
ದುರ್ಬಲ ಅಂತ ಹೇಳಿದ್ದೇಕೆಂದರೆ, ಹಿಂದಿನ ಲೋಕಪಾಲ ವಿಧೇಯಕದಲ್ಲಿ, ಸ್ವತಂತ್ರ ತನಿಖಾ ಅಧಿಕಾರವೂ ಲೋಕಪಾಲರಿಗಿತ್ತು. ಕರ್ನಾಟಕದ ಲೋಕಾಯುಕ್ತರಿಗಿರುವ ಸಮಗ್ರ ತನಿಖಾ ಅಧಿಕಾರವು ‘ಹೊಸ’ ಲೋಕಪಾಲರಿಗಿಲ್ಲ. ಬರೇ ಪ್ರಾಥಮಿಕ ತನಿಖೆ ಮಾತ್ರ ನಡೆಸಬಹುದು! ಇನ್ನು ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿರಬೇಕು ಎಂದು ಆಡಳಿತಾರೂಢರು ಏನೇ ಸಮರ್ಥನೆ ನೀಡಿದರೂ, ಇದುವರೆಗೆ ಸಿಬಿಐಯನ್ನು ಅಧಿಕಾರಸ್ಥರೆಲ್ಲರೂ ಬಳಸಿಕೊಂಡಿರುವ ಪರಿ ನಮ್ಮ ಕಣ್ಣ ಮುಂದೆಯೇ ಇದೆಯಲ್ಲ! ಅದನ್ನೇಕೆ ಲೋಕಪಾಲ ವ್ಯಾಪ್ತಿಗೆ ತರುವುದಿಲ್ಲ?
ಒಟ್ಟಾರೆಯಾಗಿ, ಐತಿಹಾಸಿಕ ಕ್ಷಣವಾಗಬೇಕಿದ್ದ ಚರ್ಚೆಯೊಂದು ಲಾಲು ಪ್ರಸಾದ್ ಯಾದವ್‌ರಂತಹಾ ‘ಜನಪ್ರಿಯ’ ವಾಗ್ಮಿಗಳ ಜೋಕ್‌ಗೆ ಆಹಾರವಾಯಿತು, ಲೋಕಪಾಲದ ಗಂಭೀರತೆಯ ಹರಣವೂ ಆಯಿತು. ಕೊನೆ ಕ್ಷಣದಲ್ಲಿ ತಿದ್ದುಪಡಿಗಳನ್ನು ಮಾಡಿದ ಬಳಿಕ ವಿಧೇಯಕ ಮಂಡಿಸುವ ಮೂಲಕ, ಅದರೊಳಗೇನಿದೆ ಎಂದು ಸರಿಯಾಗಿ ಅರ್ಥೈಸಿಕೊಳ್ಳದೆಯೇ ಸಂಸತ್ತಿನಲ್ಲಿ ಚರ್ಚೆ ಮಾಡಬೇಕಾದ ಅನಿವಾರ್ಯತೆ ಸಂಸದರದಾಗಿತ್ತು.
ಏನೇ ಆದರೂ, ಜನರ ಕೈಗೆ ಇದುವರೆಗೆ ರಾಜಕಾರಣಿಗಳಿಂದ ಅಧಿಕಾರಿಗಳವರೆಗೆ ‘ಫಿಲ್ಟರ್’ ಆಗಿ ಬರುತ್ತಿರುವ ಸವಲತ್ತುಗಳು, ಪರಿಹಾರಗಳು ನೇರವಾಗಿ ಅವರವರ ಕೈಗೇ ಸಿಗುವಂತಾಗಲಿ. ಭಾರತದ ಅಸ್ತಿತ್ವವನ್ನೇ ಅಲುಗಾಡಿಸುತ್ತಿರುವ ರಾಜಕೀಯ ಭ್ರಷ್ಟಾಚಾರವೆಂಬ ರಾಕ್ಷಸನ ನಿಯಂತ್ರಣಕ್ಕಾಗಿ, ನಾಲ್ಕು ದಶಕಗಳಿಂದ ಇಂಥದ್ದೊಂದು ಕಾಯಿದೆಗೆ ಕಾದಿದ್ದೇವೆ. ಅಣ್ಣಾ ಹಜಾರೆ ಸುಮ್ಮನಾಗಿ, ಕಾಯಿದೆ ಬಂದ ಮೇಲೆ ತಿದ್ದುಪಡಿಗಾಗಿ ಹೋರಾಟ ಮಾಡಲಿ. ಇಲ್ಲವಾದರೆ, ಈ ಸರಕಾರದ ನೀತಿಯನ್ನು ನೋಡಿದರೆ, ವಿಧೇಯಕವು ಮತ್ತಷ್ಟು ದುರ್ಬಲವಾಗುತ್ತಲೇ ಹೋಗುವ ಸಾಧ್ಯತೆಗಳೂ ಇವೆ!