ಡಾ.ರಾಜ್ ಕುಮಾರ್
ನೀವಿದ್ದಾಗ ನಿಮ್ಮನ್ನು ಪೂಜಿಸುತ್ತಾ, ನೀವಿಲ್ಲದಿದ್ದಾಗ ನಿಮ್ಮ ಮೇಲಿನ ಅಭಿಮಾನದ ಹೆಸರಿನಲ್ಲಿ ಹೆಸರಿಗೆ ಕಳಂಕ ತರುವ ಮತಿಗೆಟ್ಟವರ ಸಾಲಿಗೆ ನಾನು ಖಂಡಿತಾ ಸೇರುವುದಿಲ್ಲ. ಇದಕ್ಕೆ ಕಾರಣವಿದೆ. ಯಾಕೆಂದರೆ ನೀವಿದ್ದಾಗ ನಿಮ್ಮನ್ನು ಒಂದು ರೀತಿಯಲ್ಲಿ ವಿರೋಧಿಸುತ್ತಿದ್ದವನು. ಇಲ್ಲದಿದ್ದಾಗ ನೀವು ಆಪ್ತರಾಗಿದ್ದೀರಿ.
ಚಿತ್ರರಂಗಕ್ಕೆ, ನಟನಾ ಕ್ಷೇತ್ರಕ್ಕೆ, ನಾಡು-ನುಡಿಯ ಸಾಂಸ್ಕೃತಿಕ ಸಂಪತ್ತಿಗೆ ನಿಮ್ಮ ಕೊಡುಗೆ ಅಪಾರ. ಹಾಗಂತ ನೀವು ಬದುಕಿದ್ದಾಗ ನಿಮ್ಮ ಮೇಲಿನ ನನ್ನ ಪೂರ್ವಗ್ರಹಪೀಡಿತ ಭಾವನೆಗಳಿಗೆ ಕಾರಣ ಏನಿರಬಹುದು ಎಂದು ಅತ್ಮಾವಲೋಕನ ಮಾಡುತ್ತಿದ್ದೇನೆ. ನಿಮ್ಮ ಅಭಿಮಾನಿಗಳ ದುಂಡಾವರ್ತನೆಯ ಇತಿಹಾಸ, ನಿಮ್ಮ ಹೆಸರಿಗೆ ಕಪ್ಪುಚುಕ್ಕೆ ಬಳಿಯಬಲ್ಲಷ್ಟು ಪ್ರಭಾವ ಹೊಂದಿರುವ ನಿಮ್ಮ 'ತಾರಾ' ಮಕ್ಕಳ (ಎಲ್ಲರೂ ಅಲ್ಲ) ಆಟಾಟೋಪಗಳು ಮತ್ತವರ ಒಳ ದಂಧೆಗಳೂ ಇದಕ್ಕೆ ಕಾರಣವಿದ್ದಿರಬಹುದು.
ಆದರೆ ನೀವೇ ಇಲ್ಲದಂತಾದ ಬಳಿಕ, ಅದೇನು ಕೆಟ್ಟ ಮೇಲೆ ಬುದ್ಧಿ ಬಂತು ಅಂತಲೋ, ಒಟ್ಟಿನಲ್ಲಿ ನಿಮಗಾಗಿ ನನ್ನ ಹೃದಯ ಮಿಡಿದದ್ದಂತೂ ಸತ್ಯ. ಆಕಸ್ಮಿಕ ಚಿತ್ರದಲ್ಲಿ "ಬಾಳುವಂಥ ಹೂವೆ, ಬಾಡುವಾಸೆ ಏತಕೆ, ಹಾಡುವಂತ ಕೋಗಿಲೆ, ಅಳುವ ಆಸೆ ಏತಕೆ" ಎಂಬ ಹಾಡಿನ ಅಭಿನಯವೇ ನನ್ನ ಕಣ್ಮುಂದೆ ಬರುತ್ತಿದೆ. ಅಂಥ ಅಣ್ಣಾವ್ರು ಇನ್ನು ಇಲ್ಲ ಎನ್ನುವುದಕ್ಕಾಗಿಯೇ ಹೃದಯ ಕಣ್ಣೀರು ಸುರಿಸುತ್ತಿದೆ. ಆದರೆ ಜೀವನ ಚಕ್ರ ಎನ್ನುವುದು ಅನಿವಾರ್ಯ ಅನಿಷ್ಟವಾದರೂ, ನಾವದನ್ನು ಒಪ್ಪಿಕೊಳ್ಳಲೇಬೇಕು.
ಈ ಹಾಡನ್ನು ಟಿವಿಯಲ್ಲಿ ನೋಡಿ-ಕೇಳಿದ ನನ್ನ ಕಣ್ಣು ಒಂದು ಹನಿ ನೀರನ್ನು ತೊಟ್ಟಿಕ್ಕಿಸುವುದನ್ನು ತಡೆಯಲು ಸಾಧ್ಯವೇ ಆಗಲಿಲ್ಲ.
"Some people never die" ಎಂಬ ಉಕ್ತಿ ಸತ್ಯವಾದಂತೆ ತೋರುತ್ತಿದೆ.
ಭಾರ ಹೃದಯದ ಕಂಬನಿ ನಿಮಗೆ
ಇಂತಿ
ಅವಿ