ಬೆಳಗೊಳದಾ ಮಡಿಲಲ್ಲಿ: ಅವಳಿ ಸಂತೋಷ, ಮತ್ತೊಂದಿಷ್ಟು ವಿಷಾದ

0
723

Jpeg81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನನ್ನ ಮಟ್ಟಿಗೆ ಎರಡು ಸಂಗತಿಗಳಿಗೆ ಅತ್ಯಂತ ವಿಶೇಷವಾದದ್ದು. ಆದರೆ ಅಲ್ಲಿಗೆ ದಿಢೀರನೇ ಹೋಗಿ ನೋಡಿದಾಗ ಆದ ಅನುಭವವಂತೂ ನಮ್ಮ ತೆರಿಗೆ ಹಣ ಈ ಪರಿಯಾಗಿ ಪೋಲಾಗುತ್ತಿದೆಯಲ್ಲಾ ಎಂಬ ವಿಷಾದ ಭಾವ.

ಮೊದಲು ಆ ಎರಡು ವಿಷಯಗಳ ಬಗ್ಗೆ…
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಆಸ್ಥೆಯಿಂದ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ‘ವಿಜ್ಞಾನ ತಂತ್ರಜ್ಞಾನ’ಕ್ಕೂ ಅವಕಾಶ ಸಿಕ್ಕಿರುವುದು, ಬಹುಶಃ ಈ ಬರವಣಿಗೆಯ ಚರಿತ್ರೆಯಲ್ಲಿ ವಿಜ್ಞಾನ-ತಂತ್ರಜ್ಞಾನಕ್ಕೆ ಸಿಕ್ಕ ಮೊದಲ ಮಾನ್ಯತೆಯಿರಬಹುದೇನೋ. ಅಂಥಹಾ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯ 17 ಸಂಪುಟಗಳಲ್ಲಿ 14ನೇ ಸಂಪುಟವೇ ವಿJpegಜ್ಞಾನ ಮತ್ತು ತಂತ್ರಜ್ಞಾನ. ಇದರಲ್ಲಿ, ಜಿ.ಎನ್.ನರಸಿಂಹಮೂರ್ತಿ, ಡಾ.ಪವನಜ, ಬೇಳೂರು ಸುದರ್ಶನ, ಓಂಶಿವಪ್ರಕಾಶ್, ಟಿ.ಜಿ.ಶ್ರೀನಿಧಿ ಅವರೇ ಮೊದಲಾದ ಕ್ಷೇತ್ರ ಪರಿಣಿತರ ಜತೆ ನನ್ನದೂ ಒಂದು ಲೇಖನವಿದೆ ಎಂಬುದು ಹೆಮ್ಮೆಯ ವಿಷಯ.

700 ಪುಟಗಳ ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ ಅಂಗವಾಗಿ ಹೊರಬಂದಿದ್ದು, ಶ್ರವಣಬೆಳಗೊಳದಲ್ಲಿ ನಡೆದಿರುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಗೊಂಡಿದೆ. ನನ್ನ ಲೇಖನವಿರುವುದು ಸಾಮಾಜಿಕ ಜಾಲತಾಣಗಳು ಮತ್ತು ಸಾಮಾಜಿಕ ಪರಿಣಾಮದ ಕುರಿತು. ಇದೊಂದು ಸಂಭ್ರಮ ಮತ್ತು ಗೌರವವೆಂಬ ಹೆಮ್ಮೆ. ತಂತ್ರಜ್ಞಾನವೇನೂ ನಿಂತ ನೀರಲ್ಲ; ಅದು ಹರಿಯುತ್ತಿರುವ ತೊರೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತದೆ. ಹೀಗಾಗಿ ಐದಾರು ತಿಂಗಳ ಹಿಂದೆಯೇ ತಯಾರಿಸಿಕೊಟ್ಟಿದ್ದ ಲೇಖನದಲ್ಲಿನ ಕೆಲವು ಅಂಶಗಳು ಸಾಕಷ್ಟು ಅಪ್‌ಡೇಟ್ ಆಗಿದ್ದಿರಬಹುದು. 🙂 ಒಟ್ಟಿನಲ್ಲಿ ಟಿ.ಆರ್.ಅನಂತರಾಮು ಸಂಪಾದಕತ್ವದ ಈ ಸಂಗ್ರಹಯೋಗ್ಯ ಸಂಪುಟದಲ್ಲಿ ನನ್ನ ಹೆಸರು ನನಗೆ ಹೆಮ್ಮೆಯ ವಿಷಯ.

ಎರಡನೇ ವಿಷಯವೆಂದರೆ, ಸಾಹಿತ್ಯ ಸಮ್ಮೇಳನದಲ್ಲಿ ತಂತ್ರಜ್ಞಾನ ಮತ್ತು ಕನ್ನಡಕ್ಕೆ ಸಂಬಂಧಿಸಿದಂತೆ ಭರಪೂರ ಮೇವು ಸಿಗುತ್ತದೆ, ಹೋಗಬೇಕು ಅಂತಂದುಕೊಂಡಿದ್ದೆನಾದರೂ, ಕಾರ್ಯಬಾಹುಳ್ಯದಿಂದಾಗಿ ಹೋಗಲು 100 ಶೇಕಡಾ ಮನಸ್ಸು ಮಾಡಿರಲಿಲ್ಲ. ಅಚಾನಕ್ಕಾಗಿ, ತೆಂಕು-ಬಡಗು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾದ ನಾರಾಯಣ ಶಬರಾಯರು ಶನಿವಾರ ರಾತ್ರಿ ಫೋನ್ ಮಾಡಿ, ಒಂದು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದ್ದರು. ಭಾನುವಾರ ಸಂಜೆ ನಡೆಯುತ್ತಿರುವ ಗೋಪಿಕೋನ್ಮಾದ ಎಂಬ, ಡಾ.ರಾಧಾಕೃಷ್ಣ ಅವರು ರೂಪಿಸಿದ, ಶ್ರೀಕೃಷ್ಣ-ಗೋಪಿಕೆಯ ಸಂಬಂಧದ ಸೂಕ್ಷ್ಮಗಳನ್ನು ವಿವರಿಸುವ ಯಕ್ಷಗಾನ ರೂಪಕವೊಂದರಲ್ಲಿ ಮೃದಂಗ ವಾದನಕ್ಕೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನನಗೂ ಒಂದು ಪಾಲಿದೆ ಎಂದುಕೊಂಡವನೇ, ಬೇರೆಲ್ಲಾ ತುರ್ತು ಕೆಲಸಗಳನ್ನು ಲಗುಬಗನೇ ಮುಗಿಸಿ ಹೊರಟುಬಿಟ್ಟೆ. ಭಾನುವಾರ ರಾತ್ರಿ ನಿಗದಿತ ಸಮಯಕ್ಕಿಂತ ಗಂಟೆಗಟ್ಟಲೆ ತಡವಾಗಿ ನಮ್ಮ ಕಾರ್ಯಕ್ರಮ ಆರಂಭವಾಗಿತ್ತು. ಮನೆಗೆ ತಲುಪುವಾಗ ಜಾವ ಬದಲಾಗಿತ್ತು.

ಅವ್ಯವಸ್ಥೆಯ ಬಗ್ಗೆ

ಭಾಗವಹಿಸಿದ್ದು ಹೆಮ್ಮೆಯಾದರೂ, ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಸರಕಾರವು ನಾವೇ ಕಟ್ಟಿದ ತೆರಿಗೆ ಹಣವನ್ನು ಈ ಪ್ರಮಾಣದಲ್ಲಿ ಖರ್ಚು ಮಾಡುತ್ತಿರುವಾಗ, ಅದರ ಸಾರ್ಥಕ್ಯದ ಬಗ್ಗೆ ಶಂಕೆ ಮೂಡುವಷ್ಟು ಅವ್ಯವಸ್ಥೆ. ಪುಟಾಣಿ ಮಕ್ಕಳ ಅಚ್ಚುಕಟ್ಟಾದ ನೃತ್ಯವೈವಿಧ್ಯಗಳು ಗಮನ ಸೆಳೆದವು. ಕಲಾವಿದರಿಗೆ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ, ಗ್ರೀನ್ ರೂಂ ವ್ಯವಸ್ಥೆಯೂ ಇಲ್ಲ. ನೂರಾರು ಮಕ್ಕಳು ಎಲ್ಲೆಲ್ಲಿಯೋ ವೇಷ ಹಾಕಿಕೊಂಡು ಬರುತ್ತಿದ್ದರು ಮತ್ತು ಅವರಿಗೆ ನಿಲ್ಲುವುದಕ್ಕೂ ಜಾಗದ ವ್ಯವಸ್ಥೆ ಇರಲಿಲ್ಲ. ಧೂಳು ಧೂಳು ಧೂಳು. ಸಾಲದ್ದಕ್ಕೆ ಮೊಬೈಲ್ ಸಿಗ್ನಲ್ ಜಾಮರ್ ಅಳವಡಿಸಿದ್ದರೇನೋ ಎಂಬ ಶಂಕೆಯೂ ಮೂಡಿತು. ಊಟದ ವ್ಯವಸ್ಥೆಯೂ ಅಷ್ಟೇ. ಭಾನುವಾರ ಜನ ಜಾಸ್ತಿ ಬರ್ತಾರೆ. ಎಲ್ಲಿ ಕ್ಯೂ ನಿಲ್ಲುವುದು ಅನ್ನೋ ಬಗ್ಗೆ ಸಮರ್ಪಕ ಮಾಹಿತಿಯಿಲ್ಲದೆ, ಗೊಂದಲ. ಕೊನೆಗೂ ಕ್ಯೂ ಹಿಡಿದು, ಇಪ್ಪತ್ತೈದು ನಿಮಿಷ ನಿಂತಾಗಲೂ ಮುಂದೆ ಹೋಗಲಾಗಲಿಲ್ಲ. ಕಾರ್ಯಕ್ರಮಕ್ಕೆ ತಡವಾಗುತ್ತದೆಯೆಂಬ ಕಾರಣಕ್ಕೆ ಕ್ಯೂ ಮುರಿದು, ಹೊರಬಂದು ವೇದಿಕೆಯತ್ತ ಹೋಗಬೇಕಾಯಿತು. ಆ ದಾರಿಯಲ್ಲಿ ಬಿಸ್ಕತ್ತು, ಚುರುಮುರಿ.

ಮೂಡುಬಿದಿರೆಯಲ್ಲಿ ಪ್ರತಿವರ್ಷ ಕನ್ನಡ ಜಾತ್ರೆ ನಡೆಯುತ್ತದೆ. ಚೆನ್ನೈಯಲ್ಲಿದ್ದಾಗಲೂ ಮೂರು ವರ್ಷ ನಿರಂತರವಾಗಿ ‘ನುಡಿಸಿರಿ’ಗೆ ಬಂದಿದ್ದೆ. ಅಚ್ಚುಕಟ್ಟುತನ, ಆಯೋಜಕರು ಸಮಯಕ್ಕೆ ಕೊಡುವ ಮಹತ್ವ… (ಯಾವುದೇ ರಾಜಕಾರಣಿ ಬಂದರೂ, ನಿಗದಿತ ಸಮಯದಲ್ಲಿ ಮಾತು ನಿಲ್ಲಿಸದಿದ್ದರೆ, ಪ್ರೀತಿಪೂರ್ವಕವಾಗಿಯೇ ಸಮಯ ಮೀರುತ್ತಿದೆ ಎಂಬ ಸಂದೇಶ ರವಾನೆಯಾಗುತ್ತಿತ್ತು.) ಇದೆಲ್ಲ ನೆನಪಾಗಿ, ಸರಕಾರಿ ಕಾರ್ಯಕ್ರಮ ಇಷ್ಟೇನಾ ಎಂಬೊಂದು ವಿಷಾದ ಭಾವ.

ಕನ್ನಡದ ಹಬ್ಬವನ್ನು ಆಯೋಜಿಸುವಾಗ ಏನೆಲ್ಲಾ ಅವ್ಯವಸ್ಥೆಗಳು ಇರಬಾರದು, ಯಾವುದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದನ್ನು ನುಡಿಹಬ್ಬದ ಮುಂದಿನ ಆಯೋಜಕರಿಗೆ ಪಾಠ ಕಲಿಸಲಾಗಿದೆ ಎಂದಷ್ಟೇ ಹೇಳಬಲ್ಲೆ. ಸಮಯದ ಬಗ್ಗೆ ಹೆಚ್ಚು ಗಮನ ಹರಿಸುವ, ಪರವೂರಿನಿಂದ ಬಂದಿರುವ ಕಲಾವಿದರಿಗೆ ನೀರಿಗೆ ವ್ಯವಸ್ಥೆ ಮಾಡಬಹುದಿತ್ತು. ಕನ್ನಡಕ್ಕಾಗಿ ರಕ್ತ ಕೊಟ್ಟೇವು, ಆದರೆ ನೀರನ್ನೂ ಕೊಟ್ಟೇವು ಎನ್ನುವವರೂ ಇರಬೇಕಿತ್ತು 🙂

ಏನೇ ಆದರೂ, ನಮ್ಮ ಕನ್ನಡ ಹಬ್ಬ, ಜನರೆಲ್ಲ ಎಲ್ಲವುಗಳನ್ನೂ ಮರೆತು ಸಾವಿರ ಸಾವಿರ ಸಂಖ್ಯೆಯಲ್ಲಿ ಸಂಭ್ರಮದಿಂದಲೇ ಸೇರಿದ್ದರು. ಹೀಗಿರುವಾಗ ಈ ನುಡಿಯ ಹಬ್ಬದಲ್ಲಿ ನಾವೇಕೆ ಕೊಂಕು ನುಡಿಯಬೇಕು? ನಮ್ಮೆಲ್ಲರ ಕನ್ನಡ ಮನಸ್ಸುಗಳನ್ನು ಏಕೀಭವಿಸಿದ ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ ಜೈ!

LEAVE A REPLY

Please enter your comment!
Please enter your name here