ನೀನಿರುವುದೇ ನನಗಾಗಿ ಮಾತ್ರ….!

0
547

‘ನಿನ್ನನ್ನು ಬೇರೆ ಯಾರಾದರೂ ನೋಡಿದರೆ ಹೊಟ್ಟೆ ಉರಿಯುತ್ತದೆ. ಭಾರೀ ಕಷ್ಟಪಟ್ಟು ನನ್ನ ಹೃದಯವನ್ನು ನಾನು ಸಮಾಧಾನ ಮಾಡಿಕೊಳ್ಳುತ್ತೇನೆ.’

ಹೌದು, ಹೆಚ್ಚಿನವರ ಪ್ರೇಮ-ಪ್ರೀತಿಯಲ್ಲಿ ಇದೇ ಪರಿಸ್ಥಿತಿ ಇರುತ್ತದೆ. ನನ್ನ ಪ್ರೀತಿ ನನಗೆ ಮಾತ್ರವೇ, ಕೇವಲ ನನಗಾಗಿ ಇರಬೇಕು ಅಂತ ಹಪಹಪಿಸುತ್ತದೆ ಮನಸ್ಸು. ಅವಳು/ನು ಬೇರೆಯವರೊಡನೆ ನಗು ನಗುತ್ತಾ ಮಾತನಾಡಿದರಂತೂ ಅಷ್ಟೇ. ಮುಗಿದೇ ಹೋಯಿತು. ಅವಳನ್ನು ಕೊಂದೇಬಿಡುವಷ್ಟು ಕೆಟ್ಟ ಕೋಪ.

ಹಾಗಂತ ಇದು ದ್ವೇಷವಲ್ಲ. ಪ್ರೀತಿಯ ಪರಾಕಾಷ್ಠೆಯೋ…? ಗೊತ್ತಿಲ್ಲ.

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಪರಸ್ಪರರ ಮೇಲೆ ತನಗೆ ಅಧಿಕಾರ ಇದೆ ಎಂಬ ಭಾವನೆ ಬರುವುದು ಸಹಜವೇ. ಆದರೆ ಈ ಅಧಿಕಾರದ ಭಾವನೆಯಿದೆಯಲ್ಲ, ಅದಕ್ಕೊಂದು ಗಡಿ, ಸೀಮೆ ಇದ್ದರೆ ಚೆನ್ನ. ಈ ಪ್ರೀತಿ ಅಥವಾ ಈ ಸ್ವಯಂ ಅಧಿಕಾರವು ಯಾರದೇ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತದೆ ಅಂದಾಕ್ಷಣ ತಿಳಿದುಕೊಳ್ಳಿ… ಮುಂದೆ ಅಪಾಯ ಕಾದಿದೆ.

ಯಾವುದೇ ಸಂಬಂಧಗಳ ನಡುವೆ ಉಸಿರಾಡುವಷ್ಟು ಜಾಗ ಇರಬೇಕು. ಅದುವೇ Breathing space. ಇದು ಎಲ್ಲರಿಗೂ ಅತ್ಯಗತ್ಯ. ಈ ಅವಕಾಶಕ್ಕೆ ಜಾಗ ಇಲ್ಲ ಎಂದಾದರೆ, ಸಂಬಂಧದಲ್ಲಿ ಬಿರುಕು ಮೂಡಲಾರಂಭಿಸುತ್ತದೆ. ಅದೂ ಹೌದು. ಯಾರಾದರೂ ನಿಮ್ಮನ್ನು ಪ್ರೀತಿಸಿ, ಇಡೀ ಜಗತ್ತಿನೊಂದಿಗೆ ಸಂಬಂಧ ಕಳಚಿಕೊಳ್ಳಬೇಕು ಅಂತ ಬಯಸುವುದರಲ್ಲಿ ಏನರ್ಥವಿದೆ? ಸಂಬಂಧವನ್ನು ಕಾಯ್ದುಕೊಳ್ಳುವಲ್ಲಿ ಸ್ವಾತಂತ್ರ್ಯ ಮತ್ತು ಅಧಿಕಾರದ ಭಾವನೆಯಲ್ಲಿ ಸಮತೋಲನ ಇರಬೇಕು ಅನ್ನುತ್ತಾರೆ ಮನಃಶಾಸ್ತ್ರಜ್ಞರು. ಈ ಸಮತೋಲನ ಯಾವಾಗ ತಾಳ ತಪ್ಪುತ್ತದೋ, ಸಂಬಂಧವೂ ಲಟಪಟ ಮುರಿಯುವ ಸದ್ದು ಕೇಳಿಸಲಾರಂಭಿಸುತ್ತದೆ.

ಈ ಪೊಸೆಸಿವ್‌ನೆಸ್ ಅನ್ನೋದಿದೆಯಲ್ಲಾ… ಅದು ಸಂಬಂಧಗಳನ್ನು ಯಾವಾಗಲೂ ಮುರಿಯಬೇಕೆಂದಿಲ್ಲ… ಸಂಬಂಧಗಳನ್ನು ಜೋಡಿಸುವಲ್ಲಿಯೂ ನೆರವಾಗುತ್ತದೆ. ಈ ಪೊಸೆಸಿವ್‌ನೆಸ್ ಭಾವನೆಯು ಒಬ್ಬರಿಗೆ ಮತ್ತೊಬ್ಬರ ಬಗೆಗಿನ ಅಭಿಮಾನವನ್ನೂ ಪ್ರಕಟೀಕರಿಸುತ್ತದೆ. ಪ್ರತಿಯೊಬ್ಬರಿಗೂ ತನ್ನ ಬಗ್ಗೆ ಮತ್ತೊಬ್ಬರು ಕಾಳಜಿ ತೋರಬೇಕು, ವಿಶೇಷ ಆಸ್ಥೆ ಹೊಂದಿರಬೇಕು ಎಂಬಿತ್ಯಾದಿ ಭಾವನೆಗಳಿರುತ್ತವೆ. ಮತ್ತೊಬ್ಬರಿಗೆ ಯಾವ ಸಮಯದಲ್ಲಿ ಈ ರೀತಿಯ ಗಮನ ನೀಡಬೇಕಾದ/ಪಡೆಯಬೇಕಾದ ಅವಶ್ಯಕತೆಯಿದೆ ಎಂಬುದನ್ನಷ್ಟೇ ನಾವು ತಿಳಿದುಕೊಂಡಿರಬೇಕು.

ಸಂಬಂಧಗಳು ಯಾವುದೇ ರೀತಿಯಾಗಿರಲಿ. ಈ ಅಧಿಕಾರ ಚಲಾವಣೆ ಎಂಬುದು ಅತ್ಯಂತ ಸೂಕ್ಷ್ಮ ವಿಚಾರ. ಸಮತೋಲನೆ ಮಾಡಿಕೊಂಡು ಮುಂದುವರಿಯುವುದು ಅತ್ಯಂತ ಅವಶ್ಯಕ. ಅವರ ಪೊಸೆಸಿವ್‌ನೆಸ್‌ನಲ್ಲಿ ಸಾಕಷ್ಟು ಪ್ರೀತಿಯೂ ಅಡಗಿರಬಹುದು. ಆದರೆ ಈ ಭಾವನೆಯು ಸಂಬಂಧವೊಂದಕ್ಕೆ ಸಂಬಂಧಿಸಿ ನಕಾರಾತ್ಮಕವಾಗಿಯೂ ಪರಿಣಮಿತವಾಗಬಹುದು. ಈ ಪ್ರೀತಿಯ ಸಂಬಂಧಗಳ ಬಗ್ಗೆ ಹೇಳುವುದಾದರೆ, ಈ ಸಂಬಂಧದಲ್ಲಿ ಪೊಸೆಸಿವ್‌ನೆಸ್ ಎಂಬುದು ಸಾಮಾನ್ಯ. ಯಾಕೆಂದರೆ ಇಲ್ಲಿ ಬೇರೊಬ್ಬರು ತಮಗೆ ಮತ್ತು ಕೇವಲ ತಮಗೆ ಮಾತ್ರ ಸೀಮಿತವಾಗಿರಬೇಕು ಎಂಬ ಭಾವನೆ ಇರುತ್ತದೆ. ಆದರೆ ಇಲ್ಲಿ, ಬೇರೊಬ್ಬರ ಕುರಿತಾಗಿನ ಕಾಳಜಿಯು ಮೇರೆ ಮೀರುವಷ್ಟು ಆಗುತ್ತಿದೆಯೇ ಎಂಬುದನ್ನು ಮಾತ್ರ ಆಗಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಬೇಕು.

ಸಂಬಂಧಗಳು ಪ್ರೀತಿ-ಪ್ರೇಮದ್ದಾಗಿರಲಿ, ಅಥವಾ ಬೇರಾವುದೇ ಇರಲಿ, ಅದು ಮುಷ್ಟಿಯೊಳಗಿಟ್ಟುಕೊಂಡಿರುವ ಮರಳಿನಂತೆ. ಈ ಮರಳನ್ನು ತೆರೆದ ಕೈಗಳಲ್ಲಿ ಹಿಡಿದುಕೊಂಡರೆ ಅದು ಕೈಯಲ್ಲೇ ಇರುತ್ತದೆ. ಆದರೆ ಅದನ್ನು ಬಲವಾಗಿ ಮುಷ್ಟಿ ಬಿಗಿಹಿಡಿದು ಮುಚ್ಚಿಕೊಂಡಿರಲು ಬಯಸಿದರೆ, ಮರಳಿನ ಕಣಗಳು ಕೈಯಿಂದ ತೂರಿಕೊಂಡು ಸೋರಿ ಹೋಗುತ್ತವೆ. ಸಂಬಂಧಗಳು ಕೂಡಾ ಹೀಗೆಯೇ. ತುಂಬಾ ನಾಜೂಕು. ಗೌರವ ಮತ್ತು ಸ್ವಾತಂತ್ರ್ಯದ ಮುಕ್ತ ಕರಗಳಿಂದ ಸಂಬಂಧಗಳನ್ನು ನಿಭಾಯಿಸಿದರೆ ಅವುಗಳು ಸರಿಯಾಗಿ ಉಳಿಯುತ್ತವೆ. ಬಲ ಪ್ರಯೋಗ ಮಾಡಿದರೆ, ಕೈಯಲ್ಲಿದ್ದ ಮರಳು ಚೆಲ್ಲಿಹೋಗುವಂತಿರುತ್ತವೆ. ಹಾಗಾಗಿ, ಪ್ರೇಮ ಸಂಬಂಧದಲ್ಲಿ ಪೊಸೆಸಿವ್‌ನೆಸ್ ಇರಲಿ. ಆದರೆ ಅದಕ್ಕೊಂದು ಪರಿಮಿತಿ ಇರಲಿ.

LEAVE A REPLY

Please enter your comment!
Please enter your name here