ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ – 32 (ಏಪ್ರಿಲ್ 15, 2013)
ಅತ್ಯಂತ ಮಹತ್ವದ, ಸೂಕ್ಷ್ಮ ಮಾಹಿತಿಗಳಿರುವ ಇಮೇಲ್ ಖಾತೆಯನ್ನು ಉಪಯೋಗಿಸುವಾಗ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ. ಗೂಗಲ್ ಮೇಲ್ ಅಥವಾ ಜಿ-ಮೇಲ್ ಬಳಸುತ್ತಿರುವವರಿಗೆ ಒಂದು ಅನುಕೂಲ ಇದೆ. ಅದೆಂದರೆ, ನಿಮ್ಮ ಇಮೇಲ್ ಖಾತೆಯನ್ನು ಬೇರೆ ಯಾರಾದರೂ ಉಪಯೋಗಿಸುತ್ತಿದ್ದಾರಾ, ಹ್ಯಾಕರ್‌ಗಳು ಕನ್ನ ಹಾಕಿದ್ದಾರಾ, ಎಲ್ಲಿಂದ ನಿಮ್ಮ ಮೇಲ್‌ಗೆ ಲಾಗ್ ಇನ್ ಆಗಿದೆ ಮುಂತಾದ ವಿವರಗಳನ್ನು (ಕೊನೆಯ 10 ಚಟುವಟಿಕೆಗಳನ್ನು) ತಿಳಿದುಕೊಳ್ಳಬಹುದು.
ಜಿ-ಮೇಲ್‌ಗೆ ಲಾಗಿನ್ ಆದ ತಕ್ಷಣ ಕೆಳ ಭಾಗದ ಬಲ ಮೂಲೆಯಲ್ಲಿ “Last account Activity” ಅಂತ ಇರುತ್ತದೆ. ಎಷ್ಟು ಸಮಯದ ಹಿಂದೆ ಲಾಗಿನ್ ಆಗಿದೆ ಅಂತ ಅದು ತೋರಿಸುತ್ತದೆ. ಪಕ್ಕದಲ್ಲೇ Details ಕ್ಲಿಕ್ ಮಾಡಿದರೆ, ಒಂದು ವಿಂಡೋ ಪಾಪ್-ಅಪ್ ಆಗುತ್ತದೆ. ಯಾವ ರೀತಿ (ಬ್ರೌಸರ್, ಮೊಬೈಲ್/ಇಮೇಲ್ ಕ್ಲೈಂಟ್) ಆಕ್ಸೆಸ್ ಆಗಿದೆ, ಆ ಕಂಪ್ಯೂಟರ್‌ನ IP ವಿಳಾಸ (ಇಂಟರ್ನೆಟ್ ಪ್ರೋಟೋಕಾಲ್ – ಯಾವುದೇ ಕಂಪ್ಯೂಟರ್ ಎಲ್ಲಿದೆ, ಎಲ್ಲಿಂದ ಮೇಲ್ ಕಳುಹಿಸಲಾಗಿದೆ ಎಂಬಿತ್ಯಾದಿಯನ್ನು ತಿಳಿಯಲು ಬಳಸಲಾಗುತ್ತದೆ) ಯಾವುದು, ಯಾವ ಸಮಯ ಹಾಗೂ ಎಷ್ಟು ಕಾಲದ ಹಿಂದೆ ಅಂತೆಲ್ಲಾ ಇಲ್ಲಿ ಬರೆದಿರುತ್ತದೆ.
ಆಕ್ಸೆಸ್ ಮಾಡಿದ ಬ್ರೌಸರ್‌ಗಳ ಹೆಸರು (ಮೋಝಿಲ್ಲಾ, ಕ್ರೋಮ್, ಇಂಟರ್ನೆಟ್ ಎಕ್ಸ್‌ಪ್ಲೋರರ್ ಇತ್ಯಾದಿ) ಅಲ್ಲಿ ಕಾಣಿಸುತ್ತದೆ. POP3/IMAP ಅಂತ ಇದ್ದರೆ ನಿಮ್ಮ ಮೇಲ್‌ಗಳನ್ನು ಔಟ್‌ಲುಕ್, ಥಂಡರ್‌ಬರ್ಡ್, ಇಲ್ಲವೇ ಮೊಬೈಲ್ ಫೋನ್‌ಗಳಲ್ಲಿ ಲಭ್ಯವಿರುವ ಇಮೇಲ್ ಅಪ್ಲಿಕೇಶನ್ ಮುಂತಾದ ಇಮೇಲ್ ಕ್ಲೈಂಟ್ ಮೂಲಕ ಡೌನ್‌ಲೋಡ್ ಮಾಡಿದ್ದೀರಿ ಎಂದರ್ಥ. ಅಂತೆಯೇ, ನೀವೇನಾದರೂ ಮೇಲ್ ಫಾರ್ವರ್ಡಿಂಗ್ ಆಯ್ಕೆ (ಅಂದರೆ ನಿಮ್ಮ ಪ್ರಸ್ತುತ ಜಿಮೇಲ್‌ಗೆ ಬಂದಿರುವ ಸಂದೇಶಗಳನ್ನು ಬೇರೆ ಇಮೇಲ್ ಐಡಿಗೆ ಸ್ವಯಂಚಾಲಿತವಾಗಿ ಫಾರ್ವರ್ಡ್ ಮಾಡುವ ವ್ಯವಸ್ಥೆ) ಆಯ್ಕೆ ಮಾಡಿಕೊಂಡಿದ್ದರೆ ಅದು ಕೂಡ POP3 ಕೆಟಗರಿಯಲ್ಲಿ ಬರುತ್ತವೆ.
ನಿಮ್ಮ ಪ್ರಸ್ತುತ ಕಂಪ್ಯೂಟರಿನ ಐಪಿ ವಿಳಾಸ ಅಲ್ಲಿ ಕಾಣಿಸುತ್ತದೆ. ಆದರೆ ಕೆಲವೊಮ್ಮೆ ಬೇರೆ ಬೇರೆ ದೇಶಗಳು, ರಾಜ್ಯಗಳನ್ನು ತೋರಿಸುವ ಈ ಐಪಿ ವಿಳಾಸಗಳನ್ನು ನೋಡಿ ಗಾಬರಿ ಬೀಳಬೇಕಾಗಿಲ್ಲ. ಸಾಮಾನ್ಯವಾಗಿ ಮನೆಯಲ್ಲಿ ಇಂಟರ್ನೆಟ್ ಬಳಸುವವರು ಸ್ಥಿರ ಐಪಿ ವಿಳಾಸಗಳನ್ನು ಹೊಂದಿರುವುದಿಲ್ಲ. ನಿಮ್ಮ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ (ಬಿಎಸ್ಸೆನ್ನೆಲ್, ಏರ್‌ಟೆಲ್, ವೊಡಾಫೋನ್, ಡೊಕೊಮೊ, ರಿಲಯನ್ಸ್ ಇತ್ಯಾದಿ) ಯಾವ ಸರ್ವರ್‌ನ ಐಪಿ ವಿಳಾಸವನ್ನು ಬಳಸುತ್ತಿದೆಯೋ ಅದರ ವಿಳಾಸವನ್ನು ತೋರಿಸುತ್ತದೆ (ನೆನಪಿಡಿ, ಇದು ಆಗಾಗ್ಗೆ ಬದಲಾಗುತ್ತಾ ಇರುತ್ತದೆ). ಕಚೇರಿಗಳಲ್ಲಾದರೆ, ನಿರ್ದಿಷ್ಟ ಐಪಿ ವಿಳಾಸವನ್ನು ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳಿಂದ ಖರೀದಿ ಮಾಡಿ, ಪ್ರಾಕ್ಸಿ ಸರ್ವರ್ ಮೂಲಕ ಹಲವು ಕಂಪ್ಯೂಟರುಗಳಿಗೆ ಹಂಚಿರುತ್ತಾರೆ. ಹೀಗಾಗಿ ನಿಮ್ಮ ಕಂಪ್ಯೂಟರಿನ ಐಪಿ ವಿಳಾಸದ ಬದಲು ಮೂಲ ಐಪಿ ವಿಳಾಸವನ್ನಷ್ಟೇ ತೋರಿಸುತ್ತದೆ.
ಅದೇ ರೀತಿ, ಉದಾಹರಣೆಗೆ, ಜಿಮೇಲ್‌ನಿಂದ ಮೈಕ್ರೋಸಾಫ್ಟ್‌ನ ಔಟ್‌ಲುಕ್ ಡಾಟ್ ಕಾಂನಲ್ಲಿರುವ ನಿಮ್ಮ ಇಮೇಲ್ ವಿಳಾಸಕ್ಕೆ ಫಾರ್ವರ್ಡ್ ಆಗುವಂತೆ ಮಾಡಿಕೊಂಡಿದ್ದರೆ, ಆ 2ನೇ ಮೇಲ್ ಐಡಿ ಒದಗಿಸುವ ಸಂಸ್ಥೆಯ ಸರ್ವರ್ ಇರುವ ಯುನೈಟೆಡ್ ಸ್ಟೇಟ್ಸ್‌ನ ಐಪಿ ವಿಳಾಸ ಕಾಣಿಸುತ್ತದೆ.
ನಿಮಗೆ ಮತ್ತೂ ಸಮಾಧಾನವಾಗಿಲ್ಲವೇ? ಅಲ್ಲಿ ತೋರಿಸುವ ಐಪಿ ವಿಳಾಸವು ಯಾವ ಊರಿನದ್ದು, ಯಾರು ಅದರ ಒಡೆಯರು ಎಂಬಿತ್ಯಾದಿ ಸಂಪೂರ್ಣ ಮಾಹಿತಿಯನ್ನೂ ನೀವೇ ತಿಳಿದುಕೊಳ್ಳಬಹುದು. ಅದಕ್ಕಾಗಿ http://ip-lookup.net/ ಎಂಬ ತಾಣಕ್ಕೆ ಹೋಗಿ, ನಿಮಗೆ ದೊರೆತ ಐಪಿ ವಿಳಾಸವನ್ನು Lookup an IP address ಎಂದಿರುವಲ್ಲಿ ಹಾಕಿದರೆ ಎಲ್ಲ ವಿವರ ಲಭ್ಯ.
ಇನ್ನೊಂದು ಅನುಕೂಲ ಇಲ್ಲೇ ಇದೆ. ನಿಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಬೇರೆಲ್ಲಾದರೂ ಲಾಗಿನ್ ಆಗಿದ್ದರೆ, ಅದನ್ನು ಲಾಗಾಫ್ ಮಾಡಲು Sign out all other sessions ಎಂಬ ಆಯ್ಕೆ ಈ ವಿಂಡೋದ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ, ಬೇರೆಲ್ಲೇ (ಉದಾಹರಣೆಗೆ, ಸ್ಮಾರ್ಟ್‌ಫೋನ್‌ನಲ್ಲಿ) ಸದಾ ಲಾಗಿನ್ ಆಗಿಯೇ ಇದ್ದರೆ, ಲಾಗೌಟ್ ಆಗುತ್ತದೆ. ಮತ್ತೂ ಸಂಶಯ ಇದ್ದರೆ ಅಥವಾ ನಿಮಗೆ ಖಚಿತತೆ ಇಲ್ಲವೆಂದಾದರೆ ಪಾಸ್‌ವರ್ಡ್ ಬದಲಾಯಿಸುವುದೇ ಒಳಿತು.