ಇಮೇಲ್‌ನಲ್ಲಿ ಸ್ಪ್ಯಾಮ್: ತಡೆಯುವುದೆಂತು?

0
652

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-14 (ನವೆಂಬರ್ 26, 2012) 
ಅಂತರಜಾಲದಲ್ಲಿ ತೊಡಗಿಸಿಕೊಂಡವರಿಗೆ ಇ-ಮೇಲ್ ಎಂಬುದೊಂದು ಐಡೆಂಟಿಟಿ. ಅದಿಲ್ಲದೆ ಯಾವುದೇ ವ್ಯವಹಾರಗಳೂ ಇಂದು ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿಯಿದೆ. ಆನ್‌ಲೈನ್‌ನಲ್ಲಿ ಲಭ್ಯವಾಗುವ ಯಾವುದೇ ಸೇವೆಗಳನ್ನು ಬಳಸಬೇಕಿದ್ದರೆ, ಉದಾಹರಣೆಗೆ, ಉದ್ಯೋಗದ ಹುಡುಕಾಟಕ್ಕಾಗಿ, ಏನನ್ನಾದರೂ ಖರೀದಿಸುವುದಕ್ಕೆ, ನಿಮ್ಮ ಫೈಲುಗಳನ್ನು ಸುರಕ್ಷಿತವಾಗಿ ಇರಿಸುವುದಕ್ಕೆ, ಪತ್ರಿಕೆಗಳನ್ನು ಓದುವುದಕ್ಕೆ… ಹೀಗೆ ಎಲ್ಲದಕ್ಕೂ ಇ-ಮೇಲ್ ಬೇಕೇಬೇಕು.

ಪರಿಸ್ಥಿತಿ ಹೀಗಿರುವಾಗ, ಯಾವುದೇ ಸೇವೆಯನ್ನು ಬಳಸಿದಾಗ ನೀವು ನಮೂದಿಸುವ ಇಮೇಲ್‌ಗಳನ್ನು ತಮ್ಮ ಉತ್ಪನ್ನಗಳ ಪ್ರಚಾರಕ್ಕಾಗಿ ಬಳಸಲಾಗುತ್ತದೆ ಅಥವಾ ವೈರಸ್ ತಂತ್ರಾಂಶವನ್ನು ರವಾನಿಸಿ, ಕಂಪ್ಯೂಟರುಗಳು ಕೆಟ್ಟುಹೋಗುವಂತೆ ಮಾಡುವ ವಿಘ್ನಸಂತೋಷಿಗಳೂ ಇರುತ್ತಾರೆ. ಇದರಿಂದಾಗಿ ನಿಮ್ಮ ಮೇಲ್‌ಬಾಕ್ಸ್ ಹಲವಾರು ಬೇಡವಾದ ಇಮೇಲ್‌ಗಳ ಮಹಾಪೂರದಿಂದ ತುಂಬಿ ಹೋಗಿರುತ್ತದೆ. ದಿನಕ್ಕೆ ನೂರಾರು ಮೇಲ್‌ಗಳನ್ನು ಚೆಕ್ ಮಾಡುವುದೇ ತ್ರಾಸದಾಯಕ ಕೆಲಸ. ಹೀಗಾಗದಂತೆ ತಡೆಯಲು ಒಂದಿಷ್ಟು ಟಿಪ್ಸ್ ಇಲ್ಲಿದೆ.

ಮೊದಲನೆಯ ಸಲಹೆ ಎಂದರೆ, ಸರಿಯಾಗಿ ಓದುವುದು! ಅಂದರೆ, ನಿಮ್ಮ ಇಮೇಲ್ ವಿಳಾಸ ನೀಡಬೇಕಾದಲ್ಲಿ ಏನು ಬರೆದಿದೆ ಎಂಬುದನ್ನು ಸರಿಯಾಗಿ ನೋಡಬೇಕು. ಅಗತ್ಯವಿದ್ದರೆ ಮಾತ್ರ ನಮೂದಿಸಿ.

ಇನ್ನೂ ಕೆಲವೆಡೆ ಇಮೇಲ್ ದಾಖಲಿಸಿದ ಬಳಿಕ, ‘ಈ ಉತ್ಪನ್ನದ ಕುರಿತ ನ್ಯೂಸ್‌ಲೆಟರ್‌ಗಳು, ಜಾಹೀರಾತು ಮೇಲ್‌ಗಳನ್ನು ಪಡೆಯಲಿಚ್ಛಿಸುತ್ತೇನೆ’ ಎಂಬರ್ಥದ ವಾಕ್ಯಗಳುಳ್ಳ ಚೆಕ್ ಬಾಕ್ಸ್ ಇರುತ್ತದೆ. ಅದು ಮೂಲತಃ (ಡೀಫಾಲ್ಟ್ ಆಗಿ) ಚೆಕ್ ಮಾರ್ಕ್ (ಗುರುತು) ಆಗಿಯೇ ಇರುತ್ತದೆ. ಅದನ್ನು ನೀವು ಅನ್‌ಚೆಕ್ ಮಾಡುವುದು ಜಾಣತನ. ಏನು ಬರೆದಿದೆಯೋ, ಎಲ್ಲವೂ ಸರಿ ಇದೆ, ಓದಲು ಪುರುಸೊತ್ತಿಲ್ಲ, ಕಂಪನಿಗಳವರು ಮೋಸ ಮಾಡುವುದಿಲ್ಲ ಎಂದೆಲ್ಲಾ ಅಸಡ್ಡೆ ವಹಿಸಿದರೆ, ನಿಮ್ಮ ಮೇಲ್‌ಬಾಕ್ಸ್ ಭರ್ತಿಯಾಗುವುದು ಗ್ಯಾರಂಟಿ!

ಇವೆರಡು ಮುನ್ನೆಚ್ಚರಿಕೆ ಮತ್ತು ಕಟ್ಟೆಚ್ಚರಿಕೆ ಕ್ರಮ ಕೈಗೊಂಡ ಬಳಿಕ ಈಗಾಗಲೇ ಕೆಲವು ವಿಶ್ವಾಸಾರ್ಹ ಸೈಟುಗಳಿಂದ ಬರುತ್ತಿರುವ ಸಂದೇಶಗಳು, ನ್ಯೂಸ್‌ಲೆಟರ್‌ಗಳು, ಉತ್ಪನ್ನ ಮಾಹಿತಿಗಳು, ಪ್ರಚಾರದ ಮಾಹಿತಿಗಳು (ಪ್ರಾಪರ್ಟಿ, ಉದ್ಯೋಗ, ಆಟೋಮೊಬೈಲ್, ಆನ್‌ಲೈನ್ ಖರೀದಿ ತಾಣಗಳು ಮುಂತಾದವುಗಳಿಂದ) ಬೇಡವೆಂದಾದರೆ, ಅವುಗಳೆಲ್ಲವೂ ಇಮೇಲ್‌ನ ತಳ ಭಾಗದಲ್ಲಿ Unsubscribe ಅನ್ನುವ ಒಂದು ಲಿಂಕ್ ಹೊಂದಿರುತ್ತವೆ. ಅದನ್ನು ಕ್ಲಿಕ್ ಮಾಡಿದರೆ, ಇಂಥವುಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಸಾಕಷ್ಟು ಗ್ರೂಪ್‌ಗಳಿಗೆ ನೀವು Subscribe ಆಗಿದ್ದಿದ್ದರೆ, ಅವುಗಳಲ್ಲಿ ಒಳ್ಳೊಳ್ಳೆ ಸಂದೇಶಗಳು ಫಾರ್ವರ್ಡ್ ಆಗುತ್ತಿರುತ್ತವೆ. ನಡುವೆ ಬೇಡವಾದದ್ದೂ ಬಂದುಬಿಡುತ್ತವೆ, ಅಥವಾ ನಿಮ್ಮ ಗ್ರೂಪಿನ ಮೇಲ್ ವಿಳಾಸವು ಬಹಿರಂಗವಾಗಿದ್ದರೆ, ಅದನ್ನು ಪ್ರಚಾರ ಕಂಪನಿಗಳು ಬಳಸಿಕೊಳ್ಳುತ್ತವೆ ಮತ್ತು ಆನ್‌ಲೈನ್‌ನಲ್ಲಿ ಕೆಲಸ ಇಲ್ಲದವರು ಮತ್ತು ಕೆಲಸ ಇರುವವರು ಕೂಡ, ಇಮೇಲ್‌ಗಳನ್ನು ಫಾರ್ವರ್ಡ್ ಮಾಡುತ್ತಿರುತ್ತಾರೆ. ಬೇಡವೆಂದಾದರೆ Unsubscribe ಆಗಿಬಿಡಿ.

ಆದರೆ ಕಸದ ನಡುವೆ ಕೆಲವು ರಸವತ್ತಾದ ಮೇಲ್‌ಗಳು ಕೂಡ ಬರುತ್ತವೆ, Unsubscribe ಆದರೆ ಅವೂ ಬರಲಾರವು ಎಂದುಕೊಳ್ಳುತ್ತಿರುವವರಿಗೆ ಮತ್ತು ಸಾಕಷ್ಟು ಪುರುಸೊತ್ತಿದೆ ಎಂದುಕೊಳ್ಳುವವರಿಗೆ ಒಂದು ಸಲಹೆಯೆಂದರೆ, ಬೇರೆಯೇ ಒಂದು ಇಮೇಲ್ ವಿಳಾಸ ಕ್ರಿಯೇಟ್ ಮಾಡಿಕೊಳ್ಳಿ. ನಿಮ್ಮ ಆಪ್ತರು ಹಾಗೂ ಅಧಿಕೃತವಾಗಿ ಬಳಸಲು ಒಂದು ಇಮೇಲ್ ವಿಳಾಸ ಇಟ್ಟುಕೊಳ್ಳಿ. ಇದನ್ನು ಬೇರೆ ಯಾವುದೇ ತಾಣಗಳಲ್ಲಿ ಕೊಡಲುಹೋಗಲೇಬೇಡಿ.

ಸ್ಮಾರ್ಟ್ ಫೋನುಗಳ ಸಾಫ್ಟ್‌ವೇರ್‌ಗಳಿಗೆ ನಿಮ್ಮ ಇಮೇಲ್ ವಿಳಾಸ ನೀಡುವುದು ಅನಿವಾರ್ಯ. ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ತಾಣಗಳಿಗೂ ನೀಡಬೇಕಾಗುತ್ತದೆ. ಇವುಗಳೆಲ್ಲವೂ ನಿಮ್ಮ ಪ್ರೈವೆಸಿಯನ್ನು ರಕ್ಷಿಸುವ ಭರವಸೆ ನೀಡುತ್ತವೆ. ಪ್ರೈವೆಸಿ ಸೆಟ್ಟಿಂಗ್ಸ್ ಅಂತ ಇರುತ್ತದೆ, ಅಲ್ಲಿ ಕೊಂಚ ಸಮಯ ವ್ಯಯಿಸಿ, ಕೂಲಂಕಷವಾಗಿ ಓದಿ, ಬೇಕಾಗಿರುವುದನ್ನು ಮಾತ್ರವೇ ಕ್ಲಿಕ್ ಮಾಡಿದರೆ, ಮುಂದೆ ಸಮಸ್ಯೆಯಾಗಲಾರದು. ಸ್ಪ್ಯಾಮ್‌ಗಾಗಿಯೇ ಬೇರೆ ಇಮೇಲ್ ಐಡಿ ರಚಿಸಿ, ನಿಮ್ಮ ಐಡೆಂಟಿಟಿಯನ್ನು ರಕ್ಷಿಸಿಕೊಳ್ಳಿ. ಅಂತರಜಾಲದ ಕಸದಿಂದ ಮುಕ್ತಿ ಪಡೆಯಿರಿ.

LEAVE A REPLY

Please enter your comment!
Please enter your name here