ಆನ್‌ಲೈನ್ ಖರೀದಿ ಧಮಾಕ: ಇನ್ನು ಕೆಲವೇ ಗಂಟೆ ಮಾತ್ರ

2
848

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ಕಂಪನಿಗಳು ಬರುವುದನ್ನು ವಿರೋಧಿಸುತ್ತೇವೇನೋ ಹೌದು. ಆದರೆ, ವಿದೇಶೀ ಮಾಲುಗಳ ಮೋಹವಂತೂ ಯಾರನ್ನೂ ಬಿಟ್ಟಿಲ್ಲ. ನಮ್ಮಲ್ಲಿ ಹೆಚ್ಚಾಗಿರುವ ಕೊಳ್ಳುಬಾಕ ಸಂಸ್ಕೃತಿಯ ಬೆಂಕಿಗೆ ತುಪ್ಪ ಎರೆಯಲು ಭಾರತದಲ್ಲಿ ಇದೇ ಮೊದಲ ಬಾರಿಗೆ ಇಂಟರ್ನೆಟ್ ದೈತ್ಯ ಗೂಗಲ್ ಮೂಲಕ ಇದೋ ಬಂದಿದೆ ‘ಗ್ರ್ಯಾಂಡ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್’; ಮತ್ತು ಇದು ಇಂದು ರಾತ್ರಿ 12 ಗಂಟೆಯವರೆಗೆ ಮಾತ್ರ.

ಕ್ರಿಸ್ಮಸ್-ಹೊಸ ವರ್ಷದ ಸಡಗರದಲ್ಲಿರುವ ಪಾಶ್ಚಾತ್ಯ ದೇಶಗಳಲ್ಲಿ ನವೆಂಬರ್ – ಡಿಸೆಂಬರ್ ಬಂದಿತೆಂದರೆ ಭರ್ಜರಿ ಡಿಸ್ಕೌಂಟ್‌ಗಳು, ವಿಶೇಷ- ‘ಜೀವಮಾನದಲ್ಲೊಮ್ಮೆ’ ಎಂದೆಲ್ಲಾ ಹೇಳಿಕೊಳ್ಳಬಹುದಾದ ಕೊಡುಗೆಗಳೊಂದಿಗೆ ಶಾಪಿಂಗ್ ಹುರುಪು ಮೇರೆ ಮೀರಿರುತ್ತದೆ. ಈ ಶಾಪಿಂಗ್ ಸಂಸ್ಕೃತಿ ಭಾರತವನ್ನೂ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಈ ಸರಕು ವ್ಯಾಮೋಹವನ್ನು ಚೆನ್ನಾಗಿ ಅರಿತುಕೊಂಡಿರುವ ಗೂಗಲ್ ಇಂಡಿಯಾ, ಹಲವಾರು ಇ-ಕಾಮರ್ಸ್ (ಆನ್‌ಲೈನ್ ಮಾರಾಟ ಮಾಡುವ) ಸೈಟುಗಳನ್ನು ಒಟ್ಟು ಸೇರಿಸಿಕೊಂಡು ಈ ಇಪ್ಪತ್ತನಾಲ್ಕು ಗಂಟೆಗಳ ಅಪೂರ್ವ ಶಾಪಿಂಗ್ ಉತ್ಸವವನ್ನು ಮಂಗಳವಾರ ಮಧ್ಯರಾತ್ರಿಯಿಂದೀಚೆಗೆ (12-12-12) ಆರಂಭಿಸಿದೆ. ಬುಧವಾರ ಮಧ್ಯರಾತ್ರಿವರೆಗೆ ಇದು ಜಾರಿಯಲ್ಲಿರುತ್ತದೆ.

ಗ್ಯಾಜೆಟ್-ಎಲೆಕ್ಟ್ರಾನಿಕ್ಸ್ ವಸ್ತುಗಳು, ಗೃಹೋಪಯೋಗಿ ಉಪಕರಣಗಳು, ಉಡುಗೆ-ತೊಡುಗೆ, ಆಭರಣ, ಪುಸ್ತಕಗಳು, ಫ್ಯಾಶನ್ ವಸ್ತುಗಳು, ಪ್ರವಾಸದ ವಿಶೇಷ ಪ್ಯಾಕೇಜ್‌ಗಳು… ಅಡುಗೆ ಮನೆ ಸಾಮಗ್ರಿಗಳಿಂದ ಹಿಡಿದು ಪಾದರಕ್ಷೆಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿರುತ್ತದೆ. ಅದೆಲ್ಲಾ ಒತ್ತಟ್ಟಿಗಿರಲಿ, ಉದ್ಯೋಗವೂ, ಬ್ಯಾಂಕ್ ಸಾಲಗಳೂ, ಸೆಕೆಂಡ್ ಹ್ಯಾಂಡ್ ವಸ್ತುಗಳೂ ಆನ್‌ಲೈನ್‌ನಲ್ಲಿ ಸಿಗಲಿವೆ!

ಈ ಗ್ರ್ಯಾಂಡ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ (ಜಿಒಎಸ್‌ಎಫ್)ನಲ್ಲಿ ಜನಪ್ರಿಯವಾಗಿರುವ ವಿಶ್ವಾಸಾರ್ಹ ವೆಬ್‌ಸೈಟುಗಳು ಭಾಗವಹಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಇಂಡಿಯಾ ಟೈಮ್ಸ್ ಶಾಪಿಂಗ್, ಇಂಡಿಯಾ ಪ್ರಾಪರ್ಟಿ, ಫ್ಲಿಪ್ ಕಾರ್ಟ್, ಇಬೇ, ಮೇಕ್ ಮೈ ಟ್ರಿಪ್, ಗೋಐಬಿಬೋ, ಟ್ರಾಡಸ್, ಯಾತ್ರಾ, ಕ್ವಿಕರ್, ಸ್ನ್ಯಾಪ್‌ಡೀಲ್, ಶಾದಿ, ಶಾಪರ್ಸ್ ಸ್ಟಾಪ್, ಸುಲೇಖಾ, ರೆಡ್‌ಬಸ್, ಮಾನ್‌ಸ್ಟರ್, ಎಚ್‌ಡಿಎಫ್‌ಸಿ, ಹೋಂಶಾಪ್18, ಸ್ಮಾರ್ಟ್‌ಬಯ್, ಭಾರತ್ ಮ್ಯಾಟ್ರಿಮನಿ, ಕ್ರೋಮಾ, ಏರ್‌ಟೆಲ್, ಇ-ಝೋನ್, ಐಸಿಐಸಿಐ, ಸೋಹಾಲಿಕ್, ನ್ಯಾಪ್‌ಟಾಲ್, ಇನ್ಫಿಬೀಮ್ ಮುಂತಾದ ಪ್ರಖ್ಯಾತ ಆನ್‌ಲೈನ್ ತಾಣಗಳು ನಿಮ್ಮ ಬರುವಿಕೆಗಾಗಿ ಕಾಯುತ್ತಿವೆ.

ಚಿಲ್ಲರೆ ಮಾರಾಟದ ಮಳಿಗೆಗಳಿಗಿಂತಲೂ ಆನ್‌ಲೈನ್‌ನಲ್ಲಿ ವಸ್ತುಗಳು ಕಡಿಮೆ ಬೆಲೆಗೆ ದೊರೆಯುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾದುದರಿಂದ ಇನ್ನೇನು, ಕೆಲವೇ ಗಂಟೆಗಳಿವೆ ಈ ಭರ್ಜರಿ ಡಿಸ್ಕೌಂಟುಗಳಿಗೆ, http://www.gosf.in/ ಗೆ ಲಾಗಿನ್ ಆಗಿಬಿಡಿ.

ಪರಿಕಲ್ಪನೆ ಬಂದಿದ್ದು ಹೇಗೆ…
ಇಂಥದ್ದೊಂದು ಪರಿಕಲ್ಪನೆಗೆ ಅಮೆರಿಕದಲ್ಲಿ ಆಚರಣೆಯಲ್ಲಿರುವ ಬ್ಲ್ಯಾಕ್ ಫ್ರೈಡೇ ಮತ್ತು ನಂತರ ಬರುವ ಸೈಬರ್ ಮಂಡೇ ಎಂಬ ಶಾಪಿಂಗ್ ಉತ್ಸವಗಳೇ ಪ್ರೇರಣೆ. ಪಾಶ್ಚಾತ್ಯರು ಥ್ಯಾಂಕ್ಸ್‌ಗಿವಿಂಗ್ ಡೇ ಅಂತ ಪ್ರತಿ ವರ್ಷ ನವೆಂಬರ್ ತಿಂಗಳ 4ನೇ ಗುರುವಾರ ಆಚರಿಸುತ್ತಾರೆ. ಅಮೆರಿಕದಲ್ಲಿ ದಾಸ್ಯ ವಿಮೋಚಗನೆಗಾಗಿ ಅಂತರ್ಯುದ್ಧ ನಡೆಯುತ್ತಿದ್ದ ಸಂದರ್ಭ, 1863ರಲ್ಲಿ ಅಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ‘‘ಸ್ವರ್ಗದಲ್ಲಿರುವ ನಮ್ಮ ದೇವರಿಗೆ ಧನ್ಯವಾದ ಸಮರ್ಪಿಸುವ ದಿನ’’ವಾಗಿ ನವೆಂಬರ್ 26ನ್ನು ಥ್ಯಾಂಕ್ಸ್‌ಗಿವಿಂಗ್ ಡೇ ಅಂತ ಅಧಿಕೃತವಾಗಿ ಘೋಷಿಸಿದ್ದರು. ಅಂದಿನಿಂದ ಇದು ಬರೇ ರಜಾದಿನ ಮಾತ್ರವಲ್ಲ, ರಜಾ ‘ಉತ್ಸವ’ವಾಗಿ ಆಚರಣೆಯಾಗುತ್ತಾ ಬಂದಿದೆ. ಧನ್ಯವಾದ ಸಮರ್ಪಣೆ ಅಂದರೆ ಉಡುಗೊರೆಗಳ ಮಹಾಪೂರವೇ ಅಲ್ಲವೇ?

ಮತ್ತೊಂದಿದೆ. ಕ್ರಿಸ್ಮಸ್ (ಡಿ.25) ಮರುದಿನವನ್ನು ಬಾಕ್ಸಿಂಗ್ ಡೇ ಅಂತ ಕರೆಯಲಾಗುತ್ತದೆ. (ಆ ದಿನ ನಡೆಯುವ ಕ್ರಿಕೆಟ್ ಟೆಸ್ಟ್ ಪಂದ್ಯ ಬಾಕ್ಸಿಂಗ್ ಡೇ ಟೆಸ್ಟ್ ಅಂತಲೇ ಖ್ಯಾತಿ ಗಳಿಸಿದೆ). ಮುಷ್ಟಿಯುದ್ಧ ಬಾಕ್ಸಿಂಗ್‌ಗೂ ಇದಕ್ಕೂ ಸಂಬಂಧವಿಲ್ಲ. ಇದು ಕ್ರಿಸ್ಮಸ್ ಉಡುಗೊರೆಗಳ ಬಾಕ್ಸ್‌ಗೆ ಸಂಬಂಧಿಸಿದ್ದಾಗಿದ್ದು, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಭ್ರಮದ ರಜಾದಿನ.

ಈಗ ಥ್ಯಾಂಕ್ಸ್ ಗಿವಿಂಗ್ ದಿನದ ನಂತರ ಬರುವ ಶುಕ್ರವಾರವನ್ನು ಬ್ಲ್ಯಾಕ್ ಫ್ರೈಡೇ ಆಗಿಯೂ, ಆ ಬಳಿಕ ಬರುವ ಸೋಮವಾರವನ್ನು ಸೈಬರ್ ಮಂಡೇ ಎಂದೂ ಭರ್ಜರಿಯಾಗಿಯೇ ಆಚರಿಸತೊಡಗಿದರು ಅವರು. ಯಾಕೆಂದರೆ, ಧನ್ಯವಾದ ಸಮರ್ಪಿಸಲು ಬಾಕಿ ಉಳಿದಿದ್ದರೆ ಆ ದಿನಗಳಲ್ಲಿ ಉಡುಗೊರೆ ಖರೀದಿಸಿ ಸಮರ್ಪಿಸಬಹುದು ಎಂಬ ವ್ಯಾವಹಾರಿಕ ಲೆಕ್ಕಾಚಾರ. ಸೈಬರ್ ಮಂಡೇ ಎಂಬುದು 2008ರ ನವೆಂಬರ್ ತಿಂಗಳಲ್ಲಿ ಆನ್‌ಲೈನ್ ಶಾಪಿಂಗ್‌ಗಾಗಿಯೇ ವ್ಯಾಪಾರಿಗಳು ಹುಟ್ಟುಹಾಕಿಕೊಂಡ ವ್ಯವಸ್ಥೆ. ಅದಕ್ಕಾಗಿಯೇ ಸೈಬರ್‌ಮಂಡೇ ಡಾಟ್ ಕಾಂ ಎಂಬ ವೆಬ್‌ಸೈಟನ್ನೇ ರಚಿಸಲಾಗಿದೆ.

ದಿನಕ್ಕೆ ಶತಕೋಟಿ ಡಾಲರ್ ವಹಿವಾಟು!
ವರದಿಯೊಂದರ ಪ್ರಕಾರ, ಈ ವರ್ಷ ನವೆಂಬರ್-ಡಿಸೆಂಬರ್ ಶಾಪಿಂಗ್ ಮಾಸದ ಮೊದಲ 37 ದಿನಗಳಲ್ಲಿ 26.6 ಶತಕೋಟಿ ಡಾಲರ್ (ಸುಮಾರು 1463 ಶತಕೋಟಿ ರೂಪಾಯಿ) ಆನ್‌ಲೈನ್ ಶಾಪಿಂಗ್ ವಹಿವಾಟು ನಡೆದಿದೆ. ಆರ್ಥಿಕ ಹಿಂಜರಿತ ಇದೆ ಎಂಬ ಕೂಗಾಟವಿದ್ದರೂ ಕಳೆದ ವರ್ಷಕ್ಕಿಂತ ಇದು ಶೇ.13ರಷ್ಟು ಹೆಚ್ಚು. ಡಿ.3, 4, 5ರಂದು ದಿನಕ್ಕೆ ಒಂದೊಂದು ಶತಕೋಟಿಗೂ ಹೆಚ್ಚು ಕೊಳ್ಳುಬಾಕತನದ ವಹಿವಾಟು ನಡೆದಿದೆ! ಬಹುಶಃ ಗೂಗಲ್ ಇಂಡಿಯಾಗೆ ಇದುವೇ ಪ್ರೇರಣೆಯಾಗಿರಬೇಕು.

12-12-12
ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಯಾವ ರೀತಿ ಓದಿದರೂ ಒಂದೇ ರೀತಿಯಾಗಿರುವ ಸಂಖ್ಯೆ, ಪದ ಅಥವಾ ವಾಕ್ಯಕ್ಕೆ ಪ್ಯಾಲಿಂಡ್ರೋಮ್ ಎನ್ನುತ್ತಾರೆ. 2012ರ ಡಿಸೆಂಬರ್ 12ನೇ ತಾರೀಕು ಅಂಥದ್ದೊಂದು ಪ್ಯಾಲಿಂಡ್ರೋಮ್ ಸಂಖ್ಯೆಗೆ ಉದಾಹರಣೆ.

ಆನ್‌ಲೈನ್‌ನಲ್ಲಿ ಏನೆಲ್ಲ ಲಭ್ಯ?
* ಗ್ಯಾಜೆಟ್‌ಗಳು, ಮೊಬೈಲ್ ಫೋನ್, ಸ್ಮಾರ್ಟ್‌ಫೋನ್‌ಗಳು
* ಎಲೆಕ್ಟ್ರಾನಿಕ್ ವಸ್ತುಗಳು
* ಉಡುಗೆಗಳು
* ಪೀಠೋಪಕರಣಗಳು
* ಪ್ರವಾಸದ ಕೊಡುಗೆಗಳು
* ಬ್ಯಾಂಕಿಂಗ್ ಸಾಲಗಳು
* ವೈವಾಹಿಕ ಸಂಬಂಧಗಳು
* ವೆಬ್‌ಸೈಟ್ ಹೋಸ್ಟಿಂಗ್
* ಆಭರಣಗಳು
* ಮನೆ, ಆಸ್ತಿ
* ಅಡುಗೆಮನೆ ಉಪಕರಣಗಳು
* ಬಸ್, ವಿಮಾನ ಟಿಕೆಟುಗಳು
* ಪುಸ್ತಕಗಳು

2 COMMENTS

    • ಚೆನ್ನಾಗಿ ಆಗಿದೇಂತ ಸುದ್ದಿ ಬಂದಿದೆ… ಸೋ ಮುಂದಿನ ವರ್ಷ ಮತ್ತಷ್ಟು ಜೋರಾಗಿ ನಡೆಯಬಹುದು…

LEAVE A REPLY

Please enter your comment!
Please enter your name here