ಸ್ಮಾರ್ಟ್‌ಫೋನ್‌ಗಳಿಗೆ ಆ್ಯಂಟಿ ವೈರಸ್ ಆ್ಯಪ್: ಯಾಕೆ ಬೇಕು?

0
624

Antivirusಕಂಪ್ಯೂಟರ್‌ಗಳನ್ನು ವೈರಸ್, ಬ್ಲಾಟ್‌ವೇರ್, ಫೀಶಿಂಗ್ ಮುಂತಾದ ಮಾಲ್‌ವೇರ್‌ಗಳಿಂದ ರಕ್ಷಿಸಿಕೊಳ್ಳಲು ಆ್ಯಂಟಿವೈರಸ್ ಬೇಕಾಗುತ್ತದೆ. ಆದರೆ, ಮಿನಿ ಕಂಪ್ಯೂಟರ್ ಮಾದರಿಯಲ್ಲೇ ಕೆಲಸ ಮಾಡುವ ಸ್ಮಾರ್ಟ್‌ಫೋನುಗಳಲ್ಲಿ? ವೈರಸ್ ದಾಳಿಯಾಗುವ ಸಾಧ್ಯತೆಗಳಿವೆಯೇ ಎಂದು ಹಲವರು ಪತ್ರ ಮುಖೇನ ಕೇಳಿದ್ದಾರೆ.

ಯಾವುದನ್ನಾದರೂ ಕ್ಲಿಕ್ ಮಾಡುವ ಮುನ್ನ, ಕಾಣಿಸಿಕೊಳ್ಳುವ ಎಲ್ಲ ಪಾಪ್-ಅಪ್ ಸಂದೇಶಗಳನ್ನು ಸರಿಯಾಗಿ ಓದಿಯೇ ಮುಂದುವರಿಯುತ್ತಿದ್ದೀರಿ ಎಂದಾದರೆ ಆ್ಯಂಟಿ ವೈರಸ್ ಅಗತ್ಯವಿಲ್ಲ. ಅಷ್ಟು ಮಾತ್ರವಲ್ಲ, ಗೂಗಲ್‌ನ ಆಂಡ್ರಾಯ್ಡ್ ಸಿಸ್ಟಂನ ಸೆಕ್ಯುರಿಟಿ ವಿಭಾಗದ ಮುಖ್ಯಸ್ಥರೇ ಆಂಡ್ರಾಯ್ಡ್ ಸಿಸ್ಟಂಗಳಿಗೆ ಆ್ಯಂಟಿವೈರಸ್ ಅಗತ್ಯವಿಲ್ಲ, ಎಲ್ಲ ಆ್ಯಪ್‌ಗಳನ್ನು ಸರಿಯಾಗಿ ಪರಿಶೀಲಿಸಿಯೇ ಸ್ಟೋರ್‌ಗೆ ಅಳವಡಿಸುತ್ತೇವೆ ಎಂಬುದಾಗಿ ಒಂದು ಕಡೆ ಹೇಳಿದ್ದಾರೆ. ಆಂಡ್ರಾಯ್ಡ್ ಸಿಸ್ಟಂ ತುಂಬಾ ಸಂಕೀರ್ಣವಾಗಿರುವುದರಿಂದ, ಇದುವರೆಗೆ ಮಾಲ್‌ವೇರ್ ದಾಳಿಯಾದ ಕುರಿತಾಗಿ ಹೆಚ್ಚೇನೂ ಸಾಬೀತಾದ ವರದಿಗಳೂ ಇಲ್ಲ. ಆ್ಯಂಟಿವೈರಸ್ ಕಂಪನಿಗಳು ಜನರ ಆತಂಕವನ್ನು ಗಣನೆಗೆ ತೆಗೆದುಕೊಂಡು ಪ್ರೀಮಿಯಂ ಸೌಲಭ್ಯ ಹೆಸರಲ್ಲಿ ಹಣ ಮಾಡುತ್ತವೆ ಎಂದು ಹಿಂದೊಮ್ಮೆ ಗೂಗಲ್‌ನ ಓಪನ್ ಸೋರ್ಸ್ ವಿಭಾಗದ ಮುಖ್ಯಸ್ಥ ಕ್ರಿಸ್ ಡಿಬೋನ ಅವರೂ ಹೇಳಿದ್ದರು. ಇದಕ್ಕೆ ಕಾರಣ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವೈರಸ್ ಶೀಲ್ಡ್ ಹೆಸರಿನ ಆ್ಯಪ್ ಒಂದು ಪ್ರೀಮಿಯಂ ವೈರಸ್ ಸಂರಕ್ಷಣೆ ಅಂತ ಹೇಳಿಕೊಂಡು ಸಾಕಷ್ಟು ದುಡ್ಡು ಮಾಡಿತ್ತು. ಬಳಿಕ ಇದೊಂದು ನಕಲಿ ಆ್ಯಪ್ ಎಂಬುದು ಸಾಬೀತಾಗಿತ್ತು.

ಯಾವುದೇ ಆ್ಯಪ್‌ಗಳಲ್ಲಿ ಧುತ್ತನೇ ಜಾಹೀರಾತುಗಳ ಪಾಪ್-ಅಪ್ ಕಾಣಿಸುತ್ತವೆ. ಅನಗತ್ಯವಾಗಿ, ತಿಳಿದೋ ತಿಳಿಯದೆಯೋ ಅದನ್ನು ಕ್ಲಿಕ್ ಮಾಡಬಾರದು ಎಂಬುದು ಇಂಟರ್ನೆಟ್ ಬಳಕೆಯ ಮೂಲಭೂತ ನಿಯಮ. ಅಲ್ಲದೆ, ಗೂಗಲ್ ಪ್ಲೇ ಸ್ಟೋರ್ ಹೊರತಾಗಿ, ಬೇರೆ ಯಾವುದೇ ಅನ್ಯ ತಾಣಗಳಿಂದ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮುನ್ನ ಕಟ್ಟೆಚ್ಚರ ವಹಿಸಬೇಕು ಎಂಬ ಮತ್ತೊಂದು ನಿಯಮವನ್ನೂ ಪಾಲಿಸಿದರೆ, ನಮ್ಮ ಸ್ಮಾರ್ಟ್‌ಫೋನ್‌ಗಳು ಸುರಕ್ಷಿತ.

ಹಾಗಂತ, ಇಷ್ಟೊಂದು ಪ್ರಮಾಣದಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಂಟಿ ವೈರಸ್ ಆ್ಯಪ್‌ಗಳು ಇವೆಯಲ್ಲಾ, ಯಾಕೆ? ಎಂಬ ಸಂದೇಹ ನಿಮ್ಮದಾಗಿರಬಹುದು. ನೀವು ಗಮನಿಸಿರಬಹುದು, ಈ ಆ್ಯಂಟಿ ವೈರಸ್ ಆ್ಯಪ್‌ಗಳು, ಯಾವುದೇ ಆ್ಯಪ್‌ಗಳನ್ನು ಅಥವಾ ಸಿಸ್ಟಂ ಅನ್ನು ಸ್ಕ್ಯಾನ್ ಮಾಡುವ ಕೆಲಸವನ್ನಷ್ಟೇ ಮಾಡುವುದಿಲ್ಲ; ಬದಲಾಗಿ, ಜಂಕ್ ಫೈಲ್‌ಗಳನ್ನು ಅಳಿಸುವ, ಸಿಸ್ಟಂನಲ್ಲಿ ಅನಗತ್ಯವಾಗಿ ಹಿನ್ನೆಲೆಯಲ್ಲಿ ಚಾಲನೆಯಾಗುವ ಆ್ಯಪ್‌ಗಳನ್ನು ನಿಲ್ಲಿಸುವ, ಅದರ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸುವ, ಆ್ಯಪ್‌ಗಳನ್ನು ಲಾಕ್ ಮಾಡುವ ಹಾಗೂ Cache ಕ್ಲಿಯರ್ ಮಾಡಿ RAM ಹೆಚ್ಚಿಸುವ ಕ್ಲೀನಿಂಗ್ ಕೆಲಸವನ್ನು ಮಾಡುತ್ತವೆ. ಜತೆಗೆ, ತಮ್ಮದೇ ಆದ ಬ್ರೌಸರ್, ಬ್ಯಾಟರಿ ಸೇವರ್, ಸಿಸ್ಟಂ ಕೂಲರ್ ಮುಂತಾದ ಆ್ಯಪ್‌ಗಳ ಮಹಾಪೂರವನ್ನೇ ಒದಗಿಸುತ್ತವೆ.

ಮುಖ್ಯವಾಗಿ ವೆಬ್‌ಸೈಟ್‌ಗಳನ್ನು ಸಂದರ್ಶಿಸುವಾಗ ಸ್ವಯಂಚಾಲಿತವಾಗಿ ಕೆಲವು ಎಪಿಕೆ (ಅಪ್ಲಿಕೇಶನ್) ಫೈಲ್‌ಗಳು ಡೌನ್‌ಲೋಡ್ ಆಗಿ ಇನ್‌ಸ್ಟಾಲ್ ಆಗಬಹುದು. ಇವುಗಳು ಅಸುರಕ್ಷಿತ. ಇದಕ್ಕಾಗಿ, Settings ನಲ್ಲಿ, Install Apps from Unknown Sources ಅಂತ (ಅಥವಾ ಆ ರೀತಿಯಲ್ಲಿರಬಹುದಾದ) ಚೆಕ್ ಬಾಕ್ಸ್‌ನಲ್ಲಿ ಟಿಕ್ ಮಾರ್ಕ್ ಇಲ್ಲದಂತೆ ನೋಡಿಕೊಳ್ಳಿ. ಆದರೂ ಆ್ಯಂಟಿವೈರಸ್ ಇದ್ದರೆ ಸುರಕ್ಷಿತ ಎಂಬ ನೆಮ್ಮದಿಯ ಮನಸ್ಥಿತಿ ನಿಮ್ಮದಾಗಿದ್ದರೆ, ಈ ಕೆಳಗಿರುವ ಆ್ಯಂಟಿವೈರಸ್ ಸಹಿತ ಬಹೂಪಯೋಗಿ ಆ್ಯಪ್‌ಗಳನ್ನು ಮಾತ್ರ ಪರಿಗಣಿಸಿದರೆ ಸಾಕು. ನಾನು ಇವೆಲ್ಲವನ್ನೂ ಬಳಸಿ ನೋಡಿದ್ದೇನೆ ಮತ್ತು ಪ್ರಸ್ತುತ ನಾನು ಬಳಸುತ್ತಿರುವುದು ಅತ್ಯಂತ ಕಡಿಮೆ ಬ್ಯಾಟರಿ ಬಳಸಿಕೊಳ್ಳಬಲ್ಲ Hornet Antivirus ಎಂಬ ಆ್ಯಪ್‌ನ ಉಚಿತ ಆವೃತ್ತಿ.

ಬಳಕೆದಾರರೇ ನೀಡಿದ ರೇಟಿಂಗ್ ಆಧಾರದಲ್ಲಿ, ಮುಖ್ಯವಾಗಿ AVG, Kaspersky, Avast ಮತ್ತು CM Security ಎಂಬವುಗಳಲ್ಲಿ ಯಾವುದನ್ನಾದರೂ ಬಳಸಿ. ಈ ಎಲ್ಲ ಆ್ಯಪ್‌ಗಳು ಉಚಿತ ಆವೃತ್ತಿಯಲ್ಲದೆ, ಪ್ರೀಮಿಯಂ ಆವೃತ್ತಿಗಳನ್ನೂ ಹೊಂದಿವೆ. ಅಂದರೆ, ಹಣ ಪಾವತಿಸಿದರೆ, ಹೆಚ್ಚು ಅನುಕೂಲಗಳನ್ನು ಒದಗಿಸುತ್ತವೆ.

ಮತ್ತೊಂದು ಅನುಕೂಲ: ಇವುಗಳ ಸೆಟ್ಟಿಂಗ್‌ನಲ್ಲಿ ನಿರ್ದಿಷ್ಟ ಆ್ಯಪ್‌ಗಳಿಗೆ ಲಾಕ್ ಮಾಡಿಡುವ ವ್ಯವಸ್ಥೆಯಿದೆ. ಅನ್ಯರು ಯಾರಾದರೂ ಈ ಲಾಕ್ ಕೋಡನ್ನು ತಪ್ಪಾಗಿ ಎರಡು ಅಥವಾ ಹೆಚ್ಚು ಬಾರಿ ನಮೂದಿಸಿದರೆ, ಅವರ ಸೆಲ್ಫೀ ಫೋಟೋವನ್ನು (ಮುಂಭಾಗದ ಕ್ಯಾಮೆರಾದ ಮೂಲಕ) ಸ್ವಯಂಚಾಲಿತವಾಗಿ ತೆಗೆದು, ನೀವು ಮತ್ತೊಮ್ಮೆ ಆ ಆ್ಯಪ್ ತೆರೆದಾಗ, “ಈ ವ್ಯಕ್ತಿ ನಿಮ್ಮ ಆ್ಯಪ್ ತೆರೆಯಲು ಪ್ರಯತ್ನಿಸಿದರು” ಎಂದು ಫೋಟೋ ಸಹಿತ ನಿಮ್ಮ ಮುಂದೆ ಮಾಹಿತಿಯನ್ನು ಈ ಆ್ಯಪ್ ಒಪ್ಪಿಸುತ್ತದೆ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಫೆಬ್ರವರಿ 16, 2015]

LEAVE A REPLY

Please enter your comment!
Please enter your name here