ವಾಟ್ಸಾಪ್‌ನಲ್ಲೀಗ ಉಚಿತವಾಗಿ ಕರೆ: ನೀವೂ ಮಾಡಿ ನೋಡಿ

0
624

ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ಬಳಿಕ ಈಗ ಜನ ಸಾಮಾನ್ಯರಲ್ಲಿ ಕ್ಷಿಪ್ರ ಸಂದೇಶ ವಿನಿಮಯಕ್ಕೆ ನೆರವಾಗುತ್ತಿರುವುದು ವಾಟ್ಸಾಪ್ ಎಂಬ ಕಿರು ತಂತ್ರಾಂಶ. ಸ್ಮಾರ್ಟ್ ಫೋನ್‌ಗಳಲ್ಲಿ ಇದನ್ನು ಅಳವಡಿಸಿಕೊಂಡರೆ, ಇಂಟರ್ನೆಟ್ ಸಂಪರ್ಕದ ಮೂಲಕ ಚಿತ್ರ, ವೀಡಿಯೋ, ಆಡಿಯೋಗಳನ್ನು ಹಂಚಿಕೊಳ್ಳಲು ಮತ್ತು ಉಚಿತವಾಗಿಯೇ ಚಾಟಿಂಗ್ ನಡೆಸಲು ಸಾಧ್ಯ. ಇದರಲ್ಲಿಯೂ ಸಾಕಷ್ಟು ಗುಂಪುಗಳು ಸಕ್ರಿಯವಾಗಿ, ನಿರ್ದಿಷ್ಟ ವಿಷಯದ ಕುರಿತು ಮಾಹಿತಿ ವಿನಿಮಯದಲ್ಲಿ ತೊಡಗಿವೆ. ಕಳೆದ ವಾರದಿಂದೀಚೆಗೆ ಉಚಿತ ಕರೆ ವ್ಯವಸ್ಥೆಯೂ ವಾಟ್ಸಾಪ್‌ನಲ್ಲಿ ಕಾಣಿಸಿದೆ. ಬಹುತೇಕ ಎಲ್ಲರ ಸ್ಮಾರ್ಟ್ ಫೋನ್‌ಗಳಲ್ಲಿ ಈ ಕರೆ ವ್ಯವಸ್ಥೆ ಸಕ್ರಿಯವಾಗಿದೆ. ಕೆಲವರು ಬಳಸುತ್ತಿದ್ದಾರೆ, ಇನ್ನು ಕೆಲವರಿಗೆ ಕರೆ ಮಾಡುವುದು ಹೇಗೆಂಬುದು ತಿಳಿದಿಲ್ಲ. ಉಪಯೋಗಿಸುವುದು ಕಷ್ಟವೇನಿಲ್ಲ. ಹೇಗೆಂಬ ಮಾಹಿತಿ ಇಲ್ಲಿದೆ.

ಸದ್ಯಕ್ಕೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳಿಗೆ ಈ ಸೌಕರ್ಯ ಲಭ್ಯವಿದ್ದು, ವಿಂಡೋಸ್ ಹಾಗೂ ಆ್ಯಪಲ್ ಸಾಧನಗಳಿಗೆ ಶೀಘ್ರವೇ ಬರಬೇಕಿದೆ. ಮೊದಲು, ನಿಮ್ಮ ಮೊಬೈಲ್‌ನಲ್ಲಿರುವ ವಾಟ್ಸಾಪ್ ಆ್ಯಪ್, ಹೊಚ್ಚ ಹೊಸ ಆವೃತ್ತಿಗೆ ಅಪ್‌ಡೇಟ್ ಆಗಿದೆಯೇ ನೋಡಿಕೊಳ್ಳಿ. ನಿಮ್ಮಲ್ಲಿರುವ ಸ್ಮಾರ್ಟ್ ಫೋನ್‌ನಲ್ಲಿ ಯಾವ ಆವೃತ್ತಿ ಇದೆ ಎಂಬುದನ್ನು ನೋಡಲು, ವಾಟ್ಸಾಪ್ ಓಪನ್ ಮಾಡಿ, ಬಲ ಮೇಲ್ಭಾಗದಲ್ಲಿ ಲಂಬವಾಗಿ ಮೂರು ಚುಕ್ಕೆ ಗುರುತುಗಳಿರುವ ಬಟನ್ ಒತ್ತಿ. ಡ್ರಾಪ್ ಡೌನ್ ಮೆನು ಕಾಣಿಸಿಕೊಳ್ಳುತ್ತದೆ, ಅಲ್ಲಿ Settings ಆಯ್ಕೆ ಮಾಡಿಕೊಳ್ಳಿ. ನಂತರ Help ಹಾಗೂ ಬಳಿಕ About ಅಂತ ಒತ್ತಿ ನೋಡಿದಾಗ ಯಾವ Version ಎಂದು ತೋರಿಸುತ್ತದೆ. ವಾಟ್ಸಾಪ್‌ನ ಲೇಟೆಸ್ಟ್ ಆವೃತ್ತಿ 2.12.5 ಮೇಲ್ಪಟ್ಟು ಇದ್ದರೆ ಕರೆ ಸೌಕರ್ಯ ಅಡಕವಾಗಿರುತ್ತದೆ. ವಾಟ್ಸಾಪ್ ಅಪ್‌ಡೇಟ್ ಆಗಿಲ್ಲವೆಂದಾದರೆ, ಗೂಗಲ್ ಪ್ಲೇ ಸ್ಟೋರ್‌ನಿಂದ ಅದನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

ಆರಂಭದಲ್ಲಿ ಕೆಲವೇ ಬಳಕೆದಾರರ ಫೋನ್‌ಗಳಿಗೆ, ಆಹ್ವಾನದ ಆಧಾರದಲ್ಲಿ ಈ ಅಪ್‌ಡೇಟ್ ಅನ್ನು ಸಕ್ರಿಯಗೊಳಿಸಲಾಗಿತ್ತು. ವಾಟ್ಸಾಪ್ ತೆರೆದು ನೋಡಿದಾಗ, ಮೇಲ್ಭಾಗದಲ್ಲಿ CALLS, CHATS ಮತ್ತು CONTACTS ಎಂಬ ಮೂರು ಟ್ಯಾಬ್‌ಗಳು ಗೋಚರಿಸಿದರೆ ನಿಮ್ಮಲ್ಲಿ ಲೇಟೆಸ್ಟ್ ಆವೃತ್ತಿ ಇದೆ ಎಂದರ್ಥ. ಅದರಲ್ಲಿ CALLS ಟ್ಯಾಬ್ ಒತ್ತಿದಾಗ, ಅದಕ್ಕೂ ಬಲಮೇಲ್ಭಾಗದಲ್ಲಿ ದೂರವಾಣಿಯ ರಿಸೀವರ್ ಇರುವ ಚಿಹ್ನೆಯು ಪ್ಲಸ್ ಸಂಕೇತದೊಂದಿಗೆ ಕಾಣಿಸಿಕೊಳ್ಳುತ್ತದೆ. ಅದನ್ನು ಒತ್ತಿದರೆ, ವಾಟ್ಸಾಪ್ ಹೊಂದಿರುವ ನಿಮ್ಮ ಸ್ನೇಹಿತರ ಪಟ್ಟಿ ಕಾಣಿಸಿಕೊಳ್ಳುತ್ತದೆ. ಯಾರೊಂದಿಗೆ ಉಚಿತವಾಗಿ ಮಾತನಾಡಬೇಕೋ, ಆ ಹೆಸರನ್ನು ಕ್ಲಿಕ್ ಮಾಡಿದರೆ, ಸಾಮಾನ್ಯವಾಗಿ ಕರೆ ಮಾಡುವಂತೆಯೇ ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ. WHATSAPP CALL ಎಂದು ಬರೆದಿರುತ್ತದೆ. ಕರೆ ಮಾಡಬೇಕಿದ್ದರೆ ಇಂಟರ್ನೆಟ್ ಸಂಪರ್ಕ, ಸಿಗ್ನಲ್ ಚೆನ್ನಾಗಿರಬೇಕಾಗುತ್ತದೆ. ನಿಮ್ಮ ಮಾತು ಇನ್ನೊಬ್ಬರಿಗೆ, ಅಥವಾ ಅವರ ಮಾತು ನಿಮಗೆ ಕೇಳಿಸಲು ನಾಲ್ಕೈದು ಸೆಕೆಂಡು ವಿಳಂಬವಾಗುತ್ತದೆ ಎಂಬುದು ನೆನಪಿರಲಿ.

ವಾಟ್ಸಾಪ್ ಆ್ಯಪ್ ಅಪ್‌ಡೇಟ್ ಮಾಡಿಕೊಂಡಿದ್ದ ಈ ವ್ಯವಸ್ಥೆ ಕಾಣಿಸುವುದಿಲ್ಲವೇ? ಸೌಕರ್ಯವಿದ್ದವರು ನಿಮ್ಮ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಕರೆ ಮಾಡಿದರೆ, ನಿಮ್ಮ ವಾಟ್ಸಾಪ್‌ನಲ್ಲಿಯೂ ಕರೆ ಸೇವೆಯು ಸಕ್ರಿಯವಾಗುತ್ತದೆ. ಆದರೆ, ಮಿಸ್ಡ್ ಕಾಲ್ ಕೊಡಬಾರದು, ಕರೆ ಸ್ವೀಕರಿಸಲೇಬೇಕು!

ಆ್ಯಪ್ ಅಪ್‌ಡೇಟ್ ಬಗ್ಗೆ ತಿಳಿಯದವರಿಗಾಗಿ: ನಮ್ಮ ಸ್ಮಾರ್ಟ್ ಫೋನ್‌ನಲ್ಲಿ ನಾವು ಅಳವಡಿಸಿಕೊಂಡ ಆ್ಯಪ್‌ಗಳಿಗೆ ಅದರ ತಯಾರಕರು ಕಾಲಕಾಲಕ್ಕೆ ಹೊಸ ಸೌಕರ್ಯಗಳನ್ನು ಸೇರಿಸುತ್ತಾರೆ. ಇಲ್ಲವೇ, ಬಳಸಿದವರು ನೀಡಿದ ದೂರುಗಳ ಆಧಾರದಲ್ಲಿ ಸಮಸ್ಯೆಯೇನಾದರೂ ಇದ್ದರೆ ಅದನ್ನು ಪರಿಹರಿಸಿ, ಅಪ್‌ಡೇಟ್ ಆಗಿರುವ ಆವೃತ್ತಿಯನ್ನು ರೂಪಿಸುತ್ತಾರೆ ಮತ್ತು ಪ್ಲೇ ಸ್ಟೋರ್‌ನಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತಾರೆ. ಇಂಟರ್ನೆಟ್ ಸಕ್ರಿಯವಾಗಿರುವ ಫೋನ್‌ಗಳಲ್ಲಿ ಆ್ಯಪ್ ಅಪ್‌ಡೇಟ್ ಆಗಿರುವ ಬಗ್ಗೆ ನೋಟಿಫಿಕೇಶನ್ ಕಾಣಿಸುತ್ತದೆ. ಉದಾಹರಣೆಗೆ, Update is available ಅನ್ನೋ ರೀತಿಯ ಸಂದೇಶವು ಕಾಣಿಸಿಕೊಳ್ಳಬಹುದು. ಅದನ್ನು ಕ್ಲಿಕ್ ಮಾಡಿದರೆ, ಆ್ಯಪ್‌ಗಳು ಹೊಸ ಸೌಕರ್ಯಗಳೊಂದಿಗೆ, ನಿಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಬಂದು ಕೂರುತ್ತವೆ. ನೋಟಿಫಿಕೇಶನ್ ಬಂದಿಲ್ಲವೆಂದಾದರೆ, Play Store ಆ್ಯಪ್ ಕ್ಲಿಕ್ ಮಾಡಿ, My Apps ಎಂಬುದನ್ನು ಒತ್ತಿದರೆ, ಯಾವೆಲ್ಲಾ ಆ್ಯಪ್‌ಗಳಿಗೆ ಅಪ್‌ಡೇಟ್‌ಗಳು ಲಭ್ಯವಿದೆ ಎಂಬುದರ ಪಟ್ಟಿಯೇ ಕಾಣಿಸುತ್ತದೆ. ಕ್ಲಿಕ್ ಮಾಡಿ ಅಪ್‌ಡೇಟ್ ಮಾಡಿಕೊಳ್ಳಿ.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಏಪ್ರಿಲ್ 6, 2015

LEAVE A REPLY

Please enter your comment!
Please enter your name here