ಮೊಬೈಲಿನಲ್ಲಿ ಕನ್ನಡ ಬರೆಯೋದು ಹೀಗೆ

0
695

ವಿಜಯ ಕರ್ನಾಟಕ ಅಂಕಣ “ಮಾಹಿತಿ@ತಂತ್ರಜ್ಞಾನ-10” (ಅಕ್ಟೋಬರ್ 29, 2012)

ಮೊಬೈಲ್‌ಗಳಲ್ಲಿ ಕನ್ನಡದ ವೆಬ್‌ಸೈಟುಗಳನ್ನು ನೋಡುವುದು ಹೇಗೆ ಅಂತ ಹಿಂದಿನ ಅಂಕಣವೊಂದರಲ್ಲಿ ತಿಳಿಸಿದ ಬಳಿಕ, ಕನ್ನಡ ಬರೆಯುವುದು ಹೇಗೆ ಹೇಳಿಕೊಡಿ ಅಂತ ಫೇಸ್‌ಬುಕ್‌ನಲ್ಲಿ ಹಲವರು ಕೇಳಿಕೊಂಡಿದ್ದರು. ಇಂಟರ್ನೆಟ್‌ನಲ್ಲಿ ಇಂಗ್ಲಿಷ್ ಲಿಪಿಯಲ್ಲಿ ಕನ್ನಡ (ಕಂಗ್ಲಿಷ್!) ಬರೆಯುತ್ತಾ, ಓದುವವರಿಗೂ ತ್ರಾಸ ಉಂಟುಮಾಡುತ್ತಿದ್ದಾರೆ, ‘ಒಂದೋ ಇಂಗ್ಲಿಷ್ ಭಾಷೆಯನ್ನೇ ಬಳಸಿ, ಇಲ್ಲವೇ ಪೂರ್ತಿ ಕನ್ನಡದಲ್ಲೇ ಬರೆಯಿರಿ, ಕಂಗ್ಲಿಷ್ ಮಾತ್ರ ಬೇಡ್ವೇಬೇಡ’ ಎಂಬ ಆತ್ಮೀಯ ಧಮಕಿಯನ್ನೂ ನೋಡಿದ್ದೇವೆ. ‘ಮೊಬೈಲಿನಲ್ಲಿ ಕನ್ನಡ ಬರುವುದಿಲ್ಲ, ಬರೆಯಲಾಗುವುದಿಲ್ಲ’ ಎಂಬುದು ಹೆಚ್ಚಿನವರು ಇದಕ್ಕೆ ನೀಡುವ ಕಾರಣ. ಇನ್ನು ಆ ಕಾರಣ ನೀಡುವಂತಿಲ್ಲ. ಟಚ್‌ಸ್ಕ್ರೀನ್ ಉಳ್ಳ ಮೊಬೈಲಿನಲ್ಲಿ ಕನ್ನಡ ಬರೆಯಲೂಬಹುದು. ಗೊತ್ತಿದ್ದವರು ಬಳಸುತ್ತಿದ್ದಾರೆ. ಗೊತ್ತಿಲ್ಲದವರಿಗಾಗಿ ಈ ಅಂಕಣ ಕನ್ನಡ ರಾಜ್ಯೋತ್ಸವದ ಕೊಡುಗೆ!

ಮೊದಲನೆಯದಾಗಿ ಮೊಬೈಲ್ ಫೋನ್‌ಗಳು ಕನ್ನಡವನ್ನು ಬೆಂಬಲಿಸಬೇಕಾಗುತ್ತದೆ. 2.3 ಆವೃತ್ತಿಯ ನಂತರದ ಆಂಡ್ರಾಯ್ಡ್ ಫೋನ್‌ಗಳು, ಐಫೋನ್, ಹೊಸ ವಿಂಡೋಸ್ ಫೋನ್‌ಗಳು ಕನ್ನಡವನ್ನು ಬೆಂಬಲಿಸುತ್ತವೆ. ಕನ್ನಡ ಬರೆಯಬೇಕಿದ್ದರೆ ಕೆಲವು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಮುಖ್ಯವಾಗಿ- AnySoft Keyboard ಮತ್ತು MultiLing Keyboard ಎಂಬೆರಡು ಅಪ್ಲಿಕೇಶನ್‌ಗಳ ಬಗ್ಗೆ ತಿಳಿದುಕೊಳ್ಳೋಣ.

AnySoft Keyboard: ಇದು ಕಗಪ (KaGaPa – ನುಡಿ) ಶೈಲಿಯಲ್ಲಿ ಟೈಪ್ ಮಾಡುವ ಅಭ್ಯಾಸವಿರುವವರಿಗೆ ಅತ್ಯುತ್ತಮ. ಇದನ್ನು App ಸ್ಟೋರ್‌ಗಳಿಂದ AnySoftKeyboard ಅಂತ ಸರ್ಚ್ ಮಾಡಿ ಸ್ಥಾಪಿಸಿಕೊಳ್ಳಿ. ಕೀಬೋರ್ಡ್ ಗಾತ್ರದ ಇತಿಮಿತಿಯಿಂದಾಗಿ ಕಂಪ್ಯೂಟರಿನಲ್ಲಿ ಟೈಪ್ ಮಾಡಿದಷ್ಟು ಸುಲಭವಲ್ಲವಾದರೂ, ಕಂಗ್ಲಿಷ್ ಬರೆಯುವವರಿಗೆ ಅನುಕೂಲಕರ. ಅದರ Settings ಗೆ ಹೋಗಿ ಭಾಷೆ ಮತ್ತು ಕನ್ನಡ ಕೀಬೋರ್ಡ್ ಅನ್ನು Enable ಮಾಡಿಕೊಳ್ಳಿ. ಬಳಿಕ, Select Input Method ಎಂಬಲ್ಲಿ AnySoftKeyboard ಆಯ್ದುಕೊಳ್ಳಬೇಕಾಗುತ್ತದೆ. ಅಷ್ಟೇ. ಟೈಪ್ ಮಾಡಲು ಹೊರಟಾಗ ಕಾಣಿಸಿಕೊಳ್ಳುವ ಆನ್‌ಸ್ಕ್ರೀನ್ ಕೀಬೋರ್ಡ್‌ನಲ್ಲಿ -ABC- ಅಂತ ಬರೆದಿರುವ ಕೀಲಿಯನ್ನು ಒತ್ತಿಹಿಡಿದರೆ, ಕನ್ನಡದ ಕೀಬೋರ್ಡ್ ಆಯ್ಕೆಗೆ ಬಟನ್ ಕಾಣಿಸಿಕೊಳ್ಳುತ್ತದೆ. ಒಂದು ಕೀಲಿಯಲ್ಲಿ ಎರಡು-ಮೂರು ಅಕ್ಷರಗಳಿರುತ್ತವೆ. ಕೀಲಿಯನ್ನು ಬೆರಳಿನಿಂದ ಮುಟ್ಟಿ ಹಿಡಿದುಕೊಂಡರೆ ನಿಮಗೆ ಬೇಕಾದ ಅಕ್ಷರ ಆರಿಸಿಕೊಳ್ಳಬಹುದು. ವ್ಯಂಜನಗಳಿಗೆ ಸ್ವರಗಳನ್ನು ಕೂಡಿಸಲು ಒಂದು ಉದಾಹರಣೆ: ಕ + ಎ = ಕೆ.

MultiLing ಕೀಬೋರ್ಡ್: ಇದನ್ನು ಅಳವಡಿಸಿಕೊಂಡರೆ, ದೇಶದ (ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಇತ್ಯಾದಿ) ಹಾಗೂ ಹೆಚ್ಚಿನ ವಿದೇಶೀ ಭಾಷೆಗಳಲ್ಲೂ ಬರೆಯಬಹುದು. App Store ಗಳಲ್ಲಿ MultiLing Keyboard ಸರ್ಚ್ ಮಾಡಿ, ಅಳವಡಿಸಿಕೊಳ್ಳಿ. ಇದಕ್ಕೆ ಪೂರಕವಾದ MyAlpha ಎಂಬ ಅಪ್ಲಿಕೇಶನನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಬೇಕಾಗುತ್ತದೆ. ಬಳಿಕ ಅಪ್ಲಿಕೇಶನ್ ಕ್ಲಿಕ್ ಮಾಡಿದಾಗ, ಅದರಲ್ಲಿ ಪ್ರಮುಖವಾಗಿ Enable Multiling ಮತ್ತು Switch IME to Multiling ಎಂಬಲ್ಲಿ MultiLing Keyboard ಆರಿಸಿ. ಕೊನೆಯದಾಗಿ Enable Languages ಎಂಬಲ್ಲಿ ಕ್ಲಿಕ್ ಮಾಡಿ, ತೀರಾ ಕೆಳಭಾಗದಲ್ಲಿರುವ ಭಾರತೀಯ ಭಾಷೆಗಳ ಪಟ್ಟಿಯಿಂದ ಕನ್ನಡ ಆರಿಸಿಕೊಳ್ಳಿ.

ಈ ಸೆಟ್ಟಿಂಗ್ ಆದ ಬಳಿಕ, ಸಂದೇಶ ಟೈಪ್ ಮಾಡಲು ಹೋಗುವಾಗ ಕಾಣಿಸಿಕೊಳ್ಳುವ ಆನ್‌ಲೈನ್ ಕೀಬೋರ್ಡ್‌ನ Space bar ಒತ್ತಿಹಿಡಿದುಕೊಂಡಾಗ, ಕನ್ನಡವನ್ನು (ಸ್ಕ್ರೀನ್‌ನಲ್ಲಿ ಬೆರಳನ್ನು ಜಾರಿಸುತ್ತಾ ಕನ್ನಡ ಎಂದಿರುವಲ್ಲಿ ಒತ್ತಿಬಿಡಿ) ಆಯ್ಕೆ ಮಾಡಿಕೊಳ್ಳುವ ಅವಕಾಶ ದೊರೆಯುತ್ತದೆ. Inscript ಶೈಲಿ ತಿಳಿದವರಿಗೆ ಈ ಕೀಬೋರ್ಡ್ ಸುಲಭ. ಮತ್ತೊಂದು ಅನುಕೂಲವೆಂದರೆ, ಹಲಂತ ಅಕ್ಷರಗಳು ಕೂಡಿಕೊಳ್ಳದಂತೆ ZWNJ (Zero Width Non Joiner) ಎಂಬ ಅದೃಶ್ಯ ಅಕ್ಷರ ಸೇರಿಸಲು ಸಾಧ್ಯ. ಉದಾ. ರಾಜ್ ಮತ್ತು ಕುಮಾರ್ ಅಂತ ಜೊತೆಯಾಗಿ ಬರೆದರೆ ರಾಜ್ಕುಮಾರ್ ಎಂದಾಗುತ್ತದೆ. ಇದು ರಾಜ್‌ಕುಮಾರ್ ಎಂದು ಕಾಣಿಸಬೇಕಿದ್ದರೆ, ಜ್ ಆದ ಬಳಿಕ ZWNJ ಸೇರಿಸಬೇಕಾಗುತ್ತದೆ. ಆಗ ಅದು ಜ್ಕು ಎಂದಾಗುವುದಿಲ್ಲ.

ಬೇರೆ ಕೀಬೋರ್ಡ್ ಅಪ್ಲಿಕೇಶನ್‌ಗಳೂ ಇವೆ. ಇವೆಲ್ಲ ಹಲವು ಸ್ಕ್ರೀನ್‌ಗಳಲ್ಲಿ ಕನ್ನಡದ ಅಕ್ಷರಗಳನ್ನು ಹಂಚಿರುವುದರಿಂದಾಗಿ ಟೈಪ್ ಮಾಡುವುದು ಕೊಂಚ ಕಷ್ಟ. ಹೀಗಾಗಿ ಮೇಲಿನೆರಡು ಕೀಬೋರ್ಡುಗಳನ್ನು ಬಳಸಿಕೊಳ್ಳಿ, ಮೊಬೈಲಿನಲ್ಲಿ ಕನ್ನಡದಲ್ಲೇ ಮೆಸೇಜ್ ಕಳುಹಿಸಿ, ಫೇಸ್‌ಬುಕ್‌ನಲ್ಲಿಯೂ ಕನ್ನಡದಲ್ಲೇ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ. ಜೈ ಕನ್ನಡಾಂಬೆ!

LEAVE A REPLY

Please enter your comment!
Please enter your name here