ಫೋನ್‌ನ ಬ್ಯಾಟರಿ ಬೇಗನೇ ಚಾರ್ಜ್ ಆಗುತ್ತಿಲ್ಲವೇ? ಇತ್ತ ಗಮನಿಸಿ…

0
629

Avi-Mahiti@Tantrajnanaಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ ಹಲವರು ಹೇಳಿರುವುದನ್ನು ಕೇಳಿದ್ದೇನೆ.

ಇಂತಹಾ ಸಮಸ್ಯೆ ಬಂದಾಕ್ಷಣ ಕೆಲವರು ಅಗ್ಗದ ದರದ ಚಾರ್ಜರ್‌ಗಳನ್ನು ಖರೀದಿಸಿದವರಿದ್ದಾರೆ, ಸಮಸ್ಯೆ ಮತ್ತೆ ಮುಂದುವರಿಯುತ್ತಲೇ ಇತ್ತು. ಈ ಅನುಭವದ ಆಧಾರದಲ್ಲಿ, ಚಾರ್ಜಿಂಗ್‌ನಲ್ಲಿ ಕೂಡ ನಾವು ಕೆಲವೊಂದು ಮೂಲಭೂತ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಎಂಬುದನ್ನು ತಿಳಿಸಿಕೊಡಲು ಈ ಲೇಖನ.

ಹೆಚ್ಚಿನ ಚಾರ್ಜಿಂಗ್ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ ಅಡಾಪ್ಟರ್‌ಗೆ ಜೋಡಿಸಲ್ಪಟ್ಟಿರುವ ಯುಎಸ್‌ಬಿ ಕೇಬಲ್‌ನದು. ಈಗ ಎಲ್ಲ ಮೊಬೈಲ್ ತಯಾರಕರು ಕಂಪ್ಯೂಟರ್ ಹಾಗೂ ಚಾರ್ಜರ್ – ಎರಡಕ್ಕೂ ಅನುಕೂಲವಾಗುವ ಯುಎಸ್‌ಬಿ ಕೇಬಲ್ ಹಾಗೂ ಚಾರ್ಜಿಂಗ್‌ಗೆ ಪ್ರತ್ಯೇಕವಾದ ಅಡಾಪ್ಟರ್ ನೀಡುತ್ತಾರೆ. ಫೋನ್ ಜತೆಗೆ ಬಂದಿರುವ, ಅವರ ಬ್ರ್ಯಾಂಡ್‌ನ ಚಾರ್ಜರನ್ನೇ ಬಳಸುವುದು ಅತ್ಯಂತ ಸೂಕ್ತ. ಅಗ್ಗದ ಬೆಲೆಗೆ ಸಿಗುವ, ಬ್ರ್ಯಾಂಡ್ ಅಲ್ಲದ ಚಾರ್ಜರ್ ಅಥವಾ ಡೇಟಾ ಕೇಬಲ್ ಬಳಸಿದರೆ, ಅದರಲ್ಲಿ ಬಳಸಲಾದ ತಂತಿ ಮತ್ತು ಪೋರ್ಟ್‌ಗಳು ಅಗ್ಗದ ಗುಣಮಟ್ಟದ್ದಾಗಿರುವ ಸಾಧ್ಯತೆಯಿರುವುದರಿಂದ, ಚಾರ್ಜಿಂಗ್ ವಿಳಂಬವಾಗುತ್ತದೆ ಮತ್ತು ಸಾಧನದ ಚಾರ್ಜಿಂಗ್ ಪೋರ್ಟ್‌ಗೂ ಹಾನಿಯಾಗುವ ಸಾಧ್ಯತೆಗಳಿವೆ.

ಇನ್ನು, ಮೊಬೈಲ್‌ನ ಮೈಕ್ರೋ ಯುಎಸ್‌ಬಿ ಪೋರ್ಟ್‌ನಲ್ಲಿ ಧೂಳು ಅಥವಾ ಕೊಳೆ ತುಂಬಿರಬಹುದು ಅಥವಾ ಬೇರೇನಾದರೂ ಸಮಸ್ಯೆಯಿರಬಹುದು. ಪದೇ ಪದೇ ಚಾರ್ಜರ್ ತೆಗೆಯುವುದು-ಹಾಕುವುದು ಮಾಡಲೇಬೇಕಾಗುತ್ತದೆ. ಈ ಸಂದರ್ಭ ಪೋರ್ಟ್‌ನಲ್ಲಿರುವ ಲೋಹದ ಮೇಲ್ಮೈ ಸವೆತ ಅಥವಾ ಅಜಾಗರೂಕತೆಯಿಂದ ಬಳಸಿದ ಪರಿಣಾಮ, ಚಾರ್ಜರ್ ಹಾಗೂ ಈ ಪೋರ್ಟ್‌ಗಳ ಮಧ್ಯೆ ಸರಿಯಾಗಿ ಸಂಪರ್ಕ ಏರ್ಪಡಲು ಕಷ್ಟವಾಗಬಹುದು. ಈ ಸಂದರ್ಭದಲ್ಲಿ ನೀವು ಮಾಡಬಹುದಾದ ಕೆಲಸವೆಂದರೆ, ಮೊಬೈಲ್ ಆಫ್ ಮಾಡಿ, ತೆಗೆಯಬಹುದಾಗಿದ್ದರೆ ಬ್ಯಾಟರಿಯನ್ನೂ ತೆಗೆಯಿರಿ. ನಂತರ, ಟೂತ್ ಪಿಕ್‌ನಂತಹಾ ಪುಟ್ಟ ತುಣುಕೊಂದನ್ನು ತೆಗೆದುಕೊಂಡು, ಮೊಬೈಲ್‌ನ ಯುಎಸ್‌ಬಿ ಪೋರ್ಟ್‌ನೊಳಗೆ ಕಾಣಿಸುವ ಪುಟ್ಟ ಹಲಗೆಯಂತಹಾ ಭಾಗವನ್ನು ಕೊಂಚವೇ ಮೇಲಕ್ಕೆತ್ತಿ. ಆದರೆ ತೀರಾ ಜಾಗರೂಕತೆಯಿಂದ ಮತ್ತು ಅತ್ಯಂತ ಮೆದುವಾಗಿ ಇದನ್ನು ಮಾಡಬೇಕು. ಬಲ ಪ್ರಯೋಗ ಬೇಡವೇ ಬೇಡ. ನಂತರ ಮೊಬೈಲ್‌ಗೆ ಬ್ಯಾಟರಿ ಹಾಕಿ, ಪುನಃ ಆನ್ ಮಾಡಿ, ಚಾರ್ಜಿಂಗ್‌ಗೆ ಇಡಿ. ಹೆಚ್ಚಿನ ಸಂದರ್ಭಗಳಲ್ಲಿ ಚಾರ್ಜಿಂಗ್ ಸಮಸ್ಯೆ ಪರಿಹಾರವಾಗಿರುತ್ತದೆ.

ಕೇಬಲ್‌ನಲ್ಲಿ ಸಮಸ್ಯೆಯಿಲ್ಲವೆಂದಾದರೆ ಚಾರ್ಜಿಂಗ್ ಅಡಾಪ್ಟರ್‌ನಲ್ಲಿ ತೊಂದರೆಯಿರಬಹುದು. ಆಗ ಮಾತ್ರ ಕಂಪನಿಯ ಅಡಾಪ್ಟರ್‌ಗಳನ್ನೇ ಬದಲಿಸಬಹುದು.

ಇನ್ನು, ಅತಿಯಾದ ಅವಧಿಗೆ (ರಾತ್ರಿಯಿಡೀ) ಚಾರ್ಜ್ ಮಾಡುವುದೂ ಸೂಕ್ತವಲ್ಲ. ಸಾಧನವು ಪೂರ್ಣವಾಗಿ ಚಾರ್ಜ್ ಆದ ಬಳಿಕ, ವಿದ್ಯುತ್ ಸಂಪರ್ಕ ಕಡಿದುಹೋಗುವ ವ್ಯವಸ್ಥೆಯನ್ನು ಮೊಬೈಲ್ ಕಂಪನಿಗಳು ಒದಗಿಸಿದ್ದರೂ, ಕೆಲವೊಮ್ಮೆ ಈ ವ್ಯವಸ್ಥೆ ಕೆಲಸ ಮಾಡದಿರಬಹುದು, ಇದರಿಂದಾಗಿ ಬ್ಯಾಟರಿಯ ಸಾಮರ್ಥ್ಯ ಸವಕಳಿಯಾಗಬಹುದು. ಯಾವುದೇ ಬ್ಯಾಟರಿಗೂ ಇಂತಿಷ್ಟು ಬಾರಿ ಚಾರ್ಜ್-ಡಿಸ್‌ಚಾರ್ಜ್ ಮಾಡಬಹುದು ಎಂಬ ಮಿತಿ ಇರುತ್ತದೆ. ಹೀಗಾಗಿ ಅತಿಯಾಗಿ ಚಾರ್ಜ್ ಮಾಡುವುದು ಹಿತಕರವಲ್ಲ.

ಸಾಧನವು ಹಳೆಯದಾಗಿದ್ದರೆ, ಬ್ಯಾಟರಿಯ ಬಾಳಿಕೆ ಮುಗಿದು, ಅದನ್ನು ಬದಲಾಯಿಸಬೇಕಾಗಬಹುದು. ಬದಲಾಯಿಸಲೇಬೇಕಾಗಿ ಬಂದಾಗ, ವಾರಂಟಿ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ; ಉಚಿತವಾಗಿಯೂ ಬದಲಾಯಿಸಿಕೊಳ್ಳಬಹುದು. ಬ್ಯಾಟರಿ ಊದಿಕೊಂಡಿದ್ದರೆ, ಅಥವಾ ಅದರಿಂದ ಏನಾದರೂ ಸೋರಿಕೆಯಾಗುತ್ತಿದೆ ಎಂದಾದರೆ ಕಂಪನಿಯ ಬ್ಯಾಟರಿ ಜತೆಗೆ ಬದಲಾಯಿಸಿ.

ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಗೋಡೆಯ ಪ್ಲಗ್‌ಗೆ ಸಿಕ್ಕಿಸಿ ಚಾರ್ಜ್ ಮಾಡಿದರೆ, ಕೆಲಸ ಬೇಗ ಆಗುತ್ತದೆ; ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮೂಲಕ ಚಾರ್ಜ್ ಮಾಡಿದರೆ ತೀರಾ ವಿಳಂಬವಾಗುತ್ತದೆ.

ಸಾಧನವನ್ನು ಆಫ್ ಮಾಡಿದಾಗ ಅಥವಾ ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿದಾಗ ಶೀಘ್ರವಾಗಿ ಚಾರ್ಜ್ ಆಗುತ್ತದೆ ಎಂಬುದು ನೆನಪಿನಲ್ಲಿರಲಿ. ಮತ್ತೊಂದು ಸಲಹೆಯೆಂದರೆ, ವಾರಕ್ಕೊಮ್ಮೆಯಾದರೂ ನಿಮ್ಮ ಸಾಧನವನ್ನು ಸ್ವಿಚ್ ಆಫ್ ಮಾಡಿ, ಮರಳಿ ಆನ್ ಮಾಡಿರಿ. ಸಾಧನದ ಕಾರ್ಯಕ್ಷಮತೆ ಹೆಚ್ಚುತ್ತದೆ.

ಸಲಹೆ: ಸ್ಕ್ರೀನ್‌ನ ಪ್ರಕಾಶ (ಬ್ರೈಟ್‌ನೆಸ್) ಕಡಿಮೆ ಇರಿಸಿಕೊಂಡರೆ, ನಿರಂತರವಾಗಿ ಮೊಬೈಲ್ ಇಂಟರ್ನೆಟ್ ಬಳಸದೇ ಇದ್ದರೆ (ವೈಫೈ ಲಭ್ಯವಿದ್ದರೆ ಅದನ್ನೇ ಬಳಸಿ), ಸಾಧನವನ್ನು ಬಿಸಿ ಇರುವ ಪ್ರದೇಶದಲ್ಲಿ ಇರಿಸದಿದ್ದರೆ ಬ್ಯಾಟರಿಯಲ್ಲಿ ಸಾಕಷ್ಟು ಉಳಿತಾಯ ಮಾಡಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಮಾರ್ಚ್ 16, 2015]

LEAVE A REPLY

Please enter your comment!
Please enter your name here