ಕಂಪ್ಯೂಟರಿನಿಂದ ಮೆಸೆಂಜರ್, ವಾಟ್ಸಾಪ್, ಇಮೇಲ್‌ಗೆ ಉತ್ತರಿಸಲು ಪುಷ್‌ಬುಲೆಟ್

0
744

Pushbulletನಾವೇನೋ ಕೆಲಸ ಮಾಡುತ್ತಿರುತ್ತೇವೆ, ದಿಢೀರನೇ ಫೋನ್‌ಗೆ ಬಂದ ಸಂದೇಶವು ನಮ್ಮ ಮನಸ್ಸನ್ನು ಬೇರೆಡೆ ಸೆಳೆದು, ಅದರತ್ತ ಕೈಚಾಚಲು ಪ್ರೇರೇಪಿಸಬಹುದು. ಇದರಿಂದ ಕೆಲಸಕ್ಕೆ ಅಡಚಣೆಯಾಗಬಹುದು. ಇಂತಹಾ ಸಂದರ್ಭದಲ್ಲಿ, ಸಂದೇಶಗಳೆಲ್ಲವೂ ಕಂಪ್ಯೂಟರ್ ಪರದೆಯಲ್ಲೇ ಕಾಣಿಸಿದರೆ, ಹಿಡಿದ ಕೆಲಸ ಅರ್ಧಕ್ಕೆ ಬಿಡಬೇಕಾಗಿಲ್ಲ. ಅಲ್ಲವೇ?

ಮೊಬೈಲ್ ಕೈಗೆತ್ತಿಕೊಳ್ಳದೆ ಮತ್ತು ಅದರ ಪುಟ್ಟ ಕೀಬೋರ್ಡ್‌ನಲ್ಲಿ ಟೈಪ್ ಮಾಡಲು ತ್ರಾಸ ಪಡುವ ಬದಲು, ಇಮೇಲ್, ವಾಟ್ಸಾಪ್, ಗೂಗಲ್ ಹ್ಯಾಂಗೌಟ್ಸ್, ಎಫ್‌ಬಿ ಮೆಸೆಂಜರ್, ಲೈನ್ ಹಾಗೂ ಟೆಲಿಗ್ರಾಂ ಮುಂತಾದ ಸೇವೆಗಳನ್ನು ಕಂಪ್ಯೂಟರಿನಿಂದಲೇ ಬಳಸಲು ನೆರವಾಗುವ ಪುಟ್ಟ ತಂತ್ರಾಂಶವೇ ಪುಷ್‌ಬುಲೆಟ್. ಈ ಉಚಿತ ತಂತ್ರಾಂಶವನ್ನು ಅಳವಡಿಸಿಕೊಂಡರೆ, ವಿಭಿನ್ನ ಆ್ಯಪ್‌ಗಳ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಸಂದೇಶಗಳನ್ನು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಿಂದಲೇ ಓದಬಹುದು ಮತ್ತು ಉತ್ತರಿಸಬಹುದು.

ಹೇಗೆ ಮಾಡಿಕೊಳ್ಳುವುದು?: ಆಂಡ್ರಾಯ್ಡ್ ಸಾಧನಗಳಲ್ಲಾದರೆ 4.4 (ಕಿಟ್‌ಕ್ಯಾಟ್) ಹಾಗೂ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಇದು ಕೆಲಸ ಮಾಡುತ್ತದೆ ಎಂಬುದು ನೆನಪಿರಲಿ. ಆ್ಯಪಲ್ ಸಾಧನಕ್ಕೂ ಇದರ ಸೇವೆ ಲಭ್ಯ. Pushbullet.com ಎಂಬ ತಾಣಕ್ಕೆ ಹೋದರೆ, ಅಲ್ಲಿ ನೀವು ಬಳಸುತ್ತಿರುವ ಬ್ರೌಸರ್‌ನ (ಇಂಟರ್ನೆಟ್ ಎಕ್ಸ್‌ಪ್ಲೋರರ್, ಫೈರ್‌ಫಾಕ್ಸ್, ಗೂಗಲ್ ಕ್ರೋಮ್ ಅಥವಾ ಆ್ಯಪಲ್ ಸಫಾರಿ) ಐಕಾನ್ ಕ್ಲಿಕ್ ಮಾಡಿದರೆ, ಪ್ಲಗ್ ಇನ್ ಒಂದನ್ನು ಅಳವಡಿಸಿಕೊಳ್ಳುವ ಲಿಂಕ್ ದೊರೆಯುತ್ತದೆ. ಇದನ್ನು ಬ್ರೌಸರ್‌ಗೆ ಇನ್‌ಸ್ಟಾಲ್ ಮಾಡಿಕೊಂಡ ಬಳಿಕ, ನಿಮ್ಮ ಬ್ರೌಸರ್‌ನ ಅಡ್ರೆಸ್ ಬಾರ್ ಬಲಭಾಗದಲ್ಲಿ ಫೋನನ್ನು ಪುಷ್‌ಬುಲೆಟ್‌ಗೆ ಲಿಂಕ್ ಮಾಡುವ ಬಟನ್ ಒಂದು ಗೋಚರಿಸುತ್ತದೆ. ಅದನ್ನು ಕ್ಲಿಕ್ ಮಾಡಿದ ಬಳಿಕ, ಆಂಡ್ರಾಯ್ಡ್ ಫೋನ್‌ಗೆ ನೀವು ಲಾಗಿನ್ ಆಗಲು ಬಳಸಿದ ಜಿಮೇಲ್ ಐಡಿ ಮೂಲಕವೇ ಲಾಗಿನ್ ಆಗಿಬಿಡಿ.

ಮತ್ತೊಂದು ವಿಧಾನವೆಂದರೆ, ಅದೇ ತಾಣದಲ್ಲಿ ಪುಷ್‌ಬುಲೆಟ್‌ನ ಡೆಸ್ಕ್‌ಟಾಪ್ ಆವೃತ್ತಿಯೂ ಲಭ್ಯವಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿಕೊಂಡರಾಯಿತು.

ನಂತರ ಸ್ಮಾರ್ಟ್‌ಫೋನ್‌ನಲ್ಲಿಯೂ ಪುಷ್‌ಬುಲೆಟ್ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡು, ಅದರಲ್ಲಿ ಜಿಮೇಲ್ ಮೂಲಕ ಲಾಗಿನ್ ಆಗಿ. ಅಲ್ಲಿಗೆ, ಎರಡೂ ತಂತ್ರಾಂಶಗಳು ಪರಸ್ಪರ ಸಂಪರ್ಕಗೊಂಡವು. ಇನ್ನು ಮುಂದೆ, ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ನೋಟಿಫಿಕೇಶನ್‌ಗಳೆಲ್ಲವೂ ಕಂಪ್ಯೂಟರಿನಲ್ಲಿಯೇ ಧುತ್ತನೇ ಕಾಣಿಸಿಕೊಳ್ಳುತ್ತವೆ. ಕಂಪ್ಯೂಟರಿಗೆ ಬಂದ ನೋಟಿಫಿಕೇಶನ್ ಕ್ಲಿಕ್ ಮಾಡಿದರೆ, ರಿಪ್ಲೈ ಆಯ್ಕೆ ದೊರೆಯುತ್ತದೆ.

ಇಷ್ಟೇ ಅಲ್ಲ, ಇನ್ನೂ ಒಂದು ಉಪಯೋಗವಿದೆ. ನಿಮ್ಮ ಕಂಪ್ಯೂಟರಿನಲ್ಲಿರುವ ಯಾವುದೇ ಫೈಲನ್ನು (ಫೋಟೋ, ಹಾಡು, ವೀಡಿಯೋ ಮುಂತಾದವು) ಪುಷ್‌ಬುಲೆಟ್ ಮೂಲಕವೇ ಸ್ಮಾರ್ಟ್‌ಫೋನ್‌ಗೆ ಕಳುಹಿಸಬಹುದು. ಇದಕ್ಕೆ ಬ್ಲೂಟೂತ್ ಅಥವಾ ವೈರ್‌ಲೆಸ್ ಆನ್ ಮಾಡಿಕೊಳ್ಳಬೇಕಾಗಿಲ್ಲ. ಯಾವುದೇ ಸಂವಹನಕ್ಕೆ ಫೋನ್ ಮತ್ತು ಕಂಪ್ಯೂಟರ್ – ಎರಡರಲ್ಲಿಯೂ ಇಂಟರ್ನೆಟ್ ಸಂಪರ್ಕ ಇರಬೇಕಾಗುತ್ತದೆ ಎಂಬುದು ನೆನಪಿರಲಿ. ಡೆಸ್ಕ್‌ಟಾಪ್ ಅಪ್ಲಿಕೇಶನ್ ಅಳವಡಿಸಿಕೊಂಡರೆ, ಫೋನ್‌ಗೆ ಕಳುಹಿಸಬೇಕಾದ ಫೈಲಿನ ಮೇಲೆ ರೈಟ್-ಕ್ಲಿಕ್ (ಮೌಸ್‌ನ ಬಲ ಬಟನ್ ಕ್ಲಿಕ್) ಮಾಡಿದಾಗ, ಪುಷ್‌ಬುಲೆಟ್ ಮೂಲಕ ಶೇರ್ ಮಾಡುವ ಆಯ್ಕೆ ಲಭ್ಯವಾಗುತ್ತದೆ.

ಪುಷ್‌ಬುಲೆಟ್‌ನಲ್ಲಿ ಗೂಗಲ್ ಹ್ಯಾಂಗೌಟ್ಸ್ ಬಳಸಬೇಕಿದ್ದರೆ ಮಾತ್ರ ಹೆಚ್ಚುವರಿ ಆ್ಯಪ್ ಅಗತ್ಯವಿದೆ. ಇದಕ್ಕೆ ನೀವು ಆಂಡ್ರಾಯ್ಡ್ ವೇರ್ (Android Wear) ಎಂಬ ಇನ್ನೊಂದು ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಸ್ಮಾರ್ಟ್‌ವಾಚನ್ನು ಸ್ಮಾರ್ಟ್‌ಫೋನ್‌ಗೆ ಬ್ಲೂಟೂತ್ ಮೂಲಕ ಸಂಪರ್ಕಿಸುವ ಆ್ಯಪ್ ಇದು. ನಿಮ್ಮಲ್ಲಿ ಸ್ಮಾರ್ಟ್‌ವಾಚ್ ಇರಲೇಬೇಕೆಂದಿಲ್ಲ ಅಥವಾ ಈ ಆ್ಯಪ್ ಅನ್ನು ಓಪನ್ ಮಾಡಬೇಕಾಗಿಯೂ ಇಲ್ಲ. ಇನ್‌ಸ್ಟಾಲ್ ಮಾಡಿಕೊಂಡರೆ ಸಾಕಾಗುತ್ತದೆ.

ಎಲ್ಲ ನೋಟಿಫಿಕೇಶನ್‌ಗಳನ್ನು ಕಂಪ್ಯೂಟರಿಗೆ ಪುಷ್ ಮಾಡಬೇಕೇ ಅಥವಾ ಕೆಲವೇ ಕೆಲವನ್ನು ಮಾತ್ರವೇ ಎಂಬುದನ್ನು ನೀವೇ ಆಯ್ದುಕೊಳ್ಳಬಹುದು. ನಿರ್ದಿಷ್ಟ ಮೂಲದಿಂದ ಬರುವ ನೋಟಿಫಿಕೇಶನ್‌ಗಳನ್ನು ಮ್ಯೂಟ್ ಮಾಡುವ ಆಯ್ಕೆಯೂ ಇದೆ.

ಪುಷ್‌ಬುಲೆಟ್ ಮತ್ತು ಸ್ವಲ್ಪ ಮಟ್ಟಿಗೆ ಇದೇ ಮಾದರಿ ಕೆಲಸ ಮಾಡುವ ವಾಟ್ಸಾಪ್‌ನ ವೆಬ್ ಆವೃತ್ತಿಯನ್ನು ಉಪಯೋಗಿಸಿ ನೋಡಿದ್ದೇನಾದರೂ, ಏರ್‌ಡ್ರಾಯ್ಡ್ (AirDroid) ಎಂಬ ಆ್ಯಪ್ ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನನ್ನು ಪರಸ್ಪರ ಸಂಪರ್ಕಿಸಿ, ಫೈಲುಗಳ ವರ್ಗಾವಣೆಗೆ, ನೋಟಿಫಿಕೇಶನ್ ಪಡೆಯಲು ಮತ್ತು ಉತ್ತರಿಸಲು ಹೆಚ್ಚು ಅನುಕೂಲ ಹೊಂದಿದೆ. ಸೀಮಿತ ಕೆಲಸ ಸಾಕು ಎಂದುಕೊಳ್ಳುವವರಿಗೆ ಪುಷ್‌ಬುಲೆಟ್ ಸೂಕ್ತ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. [ವಿಜಯ ಕರ್ನಾಟಕ ಅಂಕಣ ಫೆಬ್ರವರಿ 23, 2015]

LEAVE A REPLY

Please enter your comment!
Please enter your name here