Wonder Kid !

6
559

ಛೋಟಾ ಬಚ್ಚಾ ಜಾನ್‌ಕೇ ನಾ ಕೋಯಿ ಆಂಖ್ ದಿಖಾನಾ ರೇ 

ಅಕಲ್ ಕಾ ಕಚ್ಚಾ ಸಮಝ್ ಕೇ ಹಮ್‌ಕೋ ನಾ ಸಮ್‌ಜಾನಾ ರೇ…

ಈ ಹಿಂದಿ ಹಾಡು ನೆನಪಿಗೆ ಬಂದಿದ್ದು ಆಕtabla-agam.jpgಸ್ಮಿಕವಾಗಿ ಒಂದು ಶಾಲಾ ಕಾರ್ಯಕ್ರಮಕ್ಕೆ ಹೋದಾಗ.

ಆ ಶಾಲೆಯಲ್ಲಿ ಮಕ್ಕಳ ಉತ್ಸವ “ಸ್ಕೂಲ್-06” ಅಲ್ಲಿ ನಡೆಯುತ್ತಿತ್ತು. 3 ದಿನಗಳ ಉತ್ಸವ ಕೊನೆಯ ದಿನವದು. ಭಾನುವಾರವಾದ ಕಾರಣ ಕಚೇರಿಯಲ್ಲಿ ಕಾರ್ಯದ ಒತ್ತಡ ಕಡಿಮೆಯಿದ್ದ ಕಾರಣ ಬೇಗನೇ ಹೊರಬಿದ್ದೆ.

ಒಂದಷ್ಟು ಶಾಪಿಂಗ್ ಮುಗಿಸಿ ಅತ್ತ ಇತ್ತ ಅಡ್ಡಾಡುತ್ತಿದ್ದಾಗ ವಸ್ತು ಪ್ರದರ್ಶನ ಮಾದರಿಯಲ್ಲಿ ಹಾಕಲಾಗಿದ್ದ ಪೆಂಡಾಲ್ ಇರುವ ಕಡೆಗೆ ಅದೇಕೋ ಕಾಲು ಎಳೆಯಿತು. ಅತ್ತ ಹೋಗಿ ನೋಡಿದರೆ ಪುಟ್ಟ ಮಕ್ಕಳು… ನಿಜಕ್ಕೂ wonder kids!

ಈ ಕಾರ್ಯಕ್ರಮದಲ್ಲಿ 5ರ ಹರೆಯದ ಪೋರನೊಬ್ಬನ ಅದ್ಭುತ ತಬಲಾ ವಾದನವೇ ಈ ಬರಹಕ್ಕೆ ಪ್ರೇರಣೆ.

ತಬಲಾದ ಹಿಂದೆ ಕಾಣಿಸದಷ್ಟು ಪುಟ್ಟ ದೇಹ, ಮೃದುವಾದ ಕೈಬೆರಳುಗಳು, ಹಾಲುಗೆನ್ನೆಯ ಈ ಪೋರ ತಬಲಾ ಎದುರು ಗಂಭೀರವಾಗಿ ಕುಳಿತು ತಬಲಾ ನುಡಿಸುತ್ತಿದ್ದರೆ, ಅಲ್ಲಿ ನೆರೆದಿದ್ದವರು ಮಂತ್ರ ಮುಗ್ಧರಾಗಿದ್ದರು.

ಪುಟ್ಟ ಬೆರಳುಗಳಿಂದ ಲಯಬದ್ಧವಾಗಿ ಕಿವಿಗಪ್ಪಳಿಸುವಂತೆ ಕೇಳಿಬರುವ ತಬಲಾದ ಠೇಂಕಾರ. ಬಾಯಲ್ಲೂ ಲೀಲಾಜಾಲವಾಗಿ ಹೊರಬರುವ ಬೋಲ್‌ಗಳು. ಝಕೀರ್ ಹುಸೈನ್‌ನಂತೆ ತಲೆ ಅಲ್ಲಾಡಿಸುತ್ತಾ ಆತ ಲಯಬದ್ಧವಾಗಿ ನುಡಿಸುತ್ತಿದ್ದರೆ, ಕೈ ನನಗರಿವಿಲ್ಲದಂತೆಯೇ ತಾಳ ಹಾಕುತ್ತಿತ್ತು. ಲಯ ಕಾಯ್ದುಕೊಳ್ಳಲು ಒಂದಷ್ಟು ಕುಳಿತಲ್ಲಿಂದ ಎದ್ದು ಎದ್ದು ನುಡಿಸುತ್ತಿದ್ದ ಪರಿ…

ಚಪ್ಪಾಳೆ ತಟ್ಟುವುದನ್ನೂ ಮರೆತು ಆ ಪುಟ್ಟಮಗುವನ್ನೇ ನೋಡುತ್ತಿದ್ದೆ. ಎಂಥಾ ಅನ್ಯಾಯವಾಗೋಯ್ತು, ನನ್ನ ಡಿಜಿಟಲ್ ಕ್ಯಾಮರಾವನ್ನು ರೂಮಲ್ಲೇ ಬಿಟ್ಟು ಬಂದೆನಲ್ಲಾ ಎಂದು ಕನಿಷ್ಠ 10 ಬಾರಿ ವ್ಯಥೆಪಟ್ಟೆ.

ಮೈಕೊರೆಯುವ ಚಳಿ ಇದ್ದರೂ ಅದರ ಪರಿವೆಯೇ ಇರಲಿಲ್ಲ ಎನ್ನುವಷ್ಟರ ಮಟ್ಟಿಗೆ ಆ ಹುಡುಗ ಪ್ರಭಾವ ಬೀರಿದ್ದ. (ಒಂದು ಕಾರಣವೆಂದರೆ, ನಾನೂ ತಬಲಾ ಕಲಿತಿದ್ದೇನೆ. ಗುರುವಿಲ್ಲದ ವಿದ್ಯೆಯದು. ನನ್ನ ನಿರ್ಲಕ್ಷ್ಯದಿಂದಾಗಿ ಅದು ಮುಂದುವರಿಸಲಿಲ್ಲ. ಅದರ ಬದಲು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗವೇ ನನ್ನನ್ನು ಗಟ್ಟಿಯಾಗಿ ಸೆಳೆದುಕೊಂಡಿತ್ತು.)

ಕಾರ್ಯಕ್ರಮ ಮುಗಿಯುವಾಗ ಏನನ್ನೋ ಕಳೆದುಕೊಂಡ ಮನೋಭಾವ. ಮನಸ್ಸು ತಡೆಯಲಿಲ್ಲ. ಬಹುಶಃ ನನ್ನ ಪತ್ರಿಕಾ ವೃತ್ತಿಯ ಒಳಮನಸ್ಸಿನ ಪ್ರೇರಣೆಯಿರಬೇಕು. ನೇರವಾಗಿ ಆ ಮಗುವೆಲ್ಲಿದೆ ಎಂದು ಹುಡುಕಿ ಹೋಗಿ ಆ ಹುಡುಗನ ಹಸ್ತಲಾಘವ ಮಾಡಿ ಅಭಿನಂದನೆ ಸಲ್ಲಿಸಿದೆ. ಐಸ್ ಕ್ರೀಮ್ ಮೆಲ್ಲುತ್ತಿದ್ದ ಆ ಪುಟಾಣಿ ಯಾವುದರ ಪರಿವೆಯೇ ಇಲ್ಲದೆ, ಬಲಗೈಯಲ್ಲಿ ಐಸ್ ಕ್ರೀಮ್ ತಿನ್ನುತ್ತಿದ್ದರೆ, ಎಡಗೈ ಮುಂದೆ ಚಾಚಿ ಥ್ಯಾಂಕ್ಯೂ ಎಂದು ಉಲಿಯಿತು.

ಪಕ್ಕದಲ್ಲಿದ್ದ ಮಗುವಿನ ತಾಯಿಯ ಬಳಿ ವಿಚಾರಿಸಿದಾಗ, ನನಗೆ ಆದ ಅಚ್ಚರಿ, ಕುತೂಹಲದಲ್ಲೇನೂ ವಿಶೇಷ ಇರಲಿಲ್ಲ ಅಂತ ಅನಿಸಿತು.

ಯಾಕೆ ಗೊತ್ತೇ? ಈ ಪೋರ ಈಗಾಗಲೇ ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ತನ್ನ ಹೆಸರು ಮೂಡಿಸಿದ್ದಾನೆ! ಮಾತ್ರವಲ್ಲ ಈಗಾಗಲೇ ಕನಿಷ್ಠ 45 ಕಡೆ stage ಕಾರ್ಯಕ್ರಮ ನೀಡಿದ್ದಾನೆ. ಮುಂದಿನ ತಿಂಗಳು ಅಮೆರಿಕಕ್ಕೆ “ಶಾಭಾಶ್ ಇಂಡಿಯಾ” ಕಾರ್ಯಕ್ರಮದಡಿ ಹೋಗುತ್ತಿದ್ದಾನೆ.

ಅತ್ಯಂತ ಎಳೆ ಪ್ರಾಯದಲ್ಲಿ (3 ವರ್ಷ 9 ತಿಂಗಳು) ತಬಲಾ ಕಾರ್ಯಕ್ರಮ ನೀಡಿದ ಈ ಹುಡುಗ ಇದೇ ಕಾರಣಕ್ಕೆ ಲಿಮ್ಕಾ ದಾಖಲೆ ಪುಸ್ತಕದಲ್ಲಿ ಸೇರಿಹೋಗಿದ್ದಾನೆ.

ಅವನು ಬಂದಿದ್ದು ಪಂಜಾಬಿನ ಅಮೃತಸರದಿಂದ. ಅಲ್ಲಿನ ಶ್ವೇತಾ-ಅಮಿತ್  ದಂಪತಿಯ ಪುತ್ರ. ತಾಯಿ ಶ್ವೇತಾ ಅವರನ್ನು ವಿಚಾರಿಸಿದಾಗ, ಆತ್ಮೀಯವಾಗಿಯೇ ಮಾತನಾಡುತ್ತಾ ಅವರು ಮಗನ ಬಗ್ಗೆ ಹೆಮ್ಮೆಯಿಂದಲೇ ಹೇಳಿದರು.

Youngest Tabla performer ಅಗ್ಗಳಿಕೆಯುಳ್ಳ ಈ ಹುಡುಗನ ಹೆಸರು ಆಗಮ್ ಶಾಂಗರಿ. ಹಾಲೂಡಿಸುವ ಸಂದರ್ಭದಲ್ಲೇ ಈ ಪೋರನ ಕೈಬೆರಳುಗಳು ಸುಮ್ಮನಿರುತ್ತಿರಲಿಲ್ಲವಂತೆ. ನಿದ್ರೆ ಮಾಡುತ್ತಿರುವಾಗಲೂ ಅವನ ಬೆರಳುಗಳು ಅಲ್ಲಾಡುತ್ತಲೇ ಇರುತ್ತಿದ್ದವು ಎನ್ನುತ್ತಾರೆ ತಾಯಿ.

ಇದು ದೈವದತ್ತ ಕಲೆ. ಹಾಗಾಗಿ ಎರಡುವರೆ ವರ್ಷದವನಿರುವಾಗ ಲಾಖಿ ಚಂದ್ ಎಂಬವರ ಬಳಿ ಈತನ ಕೈಬೆರಳುಗಳ ನರ್ತನಕ್ಕೆ ಸಮರ್ಪಕ “ಚೌಕಟ್ಟು” ಕಲ್ಪಿಸಲು ಬಿಡಲಾಯಿತು. ಅಮೃತಸರದ ಡಿಎವಿ ಪಬ್ಲಿಕ್ ಸ್ಕೂಲ್‌ನ ನರ್ಸರಿ ವಿದ್ಯಾರ್ಥಿಯಾಗಿರುವ ಶಾಂಗರಿ, ಈಗಾಗಲೇ ಝೀ ಟಿವಿಯ ಸರಿಗಮಪ ಮಾತ್ರವಲ್ಲದೆ ಹಲವು ಟಿವಿ ಚಾನೆಲ್ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾನೆ.

ಹಾಗಂತ ಬರೇ ತಬಲಾ ಮಾತ್ರವೇ? ಅಲ್ಲ ಎನ್ನುತ್ತಾರೆ ತಾಯಿ ಶ್ವೇತಾ ಹರ್ಷದಿಂದಲೇ. ಡೋಲಾಕ್, ಕಾಂಗೋ ನುಡಿಸುವ ಈ ಪೋರ, ಗಾಯನ ಚತುರನೂ ಹೌದು.

ಪುಟ್ಟ ಮಗು ತಬಲಾ ನುಡಿಸುವುದು ದೊಡ್ಡದಲ್ಲ, ಆದರೆ ಆ ಲಯ, ಆ ಗಾಂಭೀರ್ಯದೊಂದಿಗೆ ಪ್ರತಿಯೊಂದು ಪೆಟ್ಟುಗಳ ನಿಖರತೆ ಮತ್ತು ಸ್ಪಷ್ಟತೆಯೇ ನನ್ನನ್ನು ಪ್ರಬಲವಾಗಿ ಸೆಳೆದದ್ದು.

ಆ ಹುಡುಗನಿಗೆ ಭವ್ಯ ಭವಿಷ್ಯ ಹಾರೈಸಿ ಟಾಟಾ ಹೇಳಿದಾಗ ಮನಸ್ಸಿನಲ್ಲಿ “ಮತ್ತೊಂದು ಬಾರಿ ನಿನ್ನನ್ನು ಸಂದರ್ಶಿಸುವ ಅವಕಾಶ ಲಭ್ಯವಾಗಲಿ” ಅಂತ ಒಳಮನಸ್ಸು ನುಡಿದದ್ದು ಸುಳ್ಳಲ್ಲ.

6 COMMENTS

  1. ಅಬ್ಬಾ – ಇಷ್ಟು ಚಿಕ್ಕ ವಯಸ್ಸಿಗೇ ಅಪರಿಮಿತ ಪ್ರತಿಭೆ ತೋರಿದ ಮಗುವನ್ನು ನೀವು ಮಾತನಾಡಿಸಿದ್ರಾ? ಗ್ರೇಟ್, ನೀವಲ್ಲರೀ, ಆ ಮಗು. ಆ ಮಗುವಿಗೆ ಅಡ್ಡ ದಾರಿಗಳ್ಯಾವುದೂ ತೋರದಿರಲಿ. ರಾಜಮಾರ್ಗದಲ್ಲೇ ನಡೆದು, ಇಡೀ ಜಗತ್ತನ್ನೇ ರಂಜಿಸಿ, ಹೆಸರು ಗಳಿಸಲಿ. ಆ ಮಗುವಿನ ತಂದೆ ತಾಯಿಗಳಿಗೆ ಇದಕ್ಕಿಂತ ಬೇರೆ ಸ್ವರ್ಗ ಸುಖ ಬೇಕೇ? ಇಂತಹ ಮಕ್ಕಳು ಪ್ರತಿ ಮನೆಯಲ್ಲೊಂದು ಇದ್ದರೆ ಹೇಗೆ? ಹೇಗೆ? ಹಾಗಾಗೋದು ಬೇಡ, ಹಾಗಾದರೆ ಈ ಮಗುವಿನ ಪ್ರತಿಭೆ ಮಾಮೂಲಾಗಿ, ಕೇಳುವರಿಲ್ಲದಂತಾಗಬಹುದು. ಮಗು ಕಳೆಗುಂದಬಾರದು. ಒಳ್ಳೆಯ ಲೇಖನಕ್ಕೆ ನಿಮಗೆ ವಂದನೆಗಳು.

  2. ಶ್ರೀನಿವಾಸರೆ,
    ನಿಮ್ಮ ಹಾರೈಕೆ ಪ್ರಸ್ತುತವೇ. ಮಾತನಾಡಿಸಿದ ಕೊನೆಯಲ್ಲಿ ಆ ಮಗುವಿನ ಅಮ್ಮನಿಗೂ ಒಂದು ಮಾತು ಹೇಳಿ ಬಂದಿದ್ದೇನೆ. ಮಕ್ಕಳ ಮೇಲೆ ಮಾನಸಿಕ ಒತ್ತಡ ಹೇರದಿರಿ ಅಂತ.
    ಧನ್ಯವಾದ

  3. ಅವೀ,

    ಆ ಅದ್ಭುತ ಬಾಲ ಪ್ರತಿಭೆಯ ಅನ್ವೇಷಣೆಯಲ್ಲಿ ತಾವು ಹೋಗಿದ್ದು ನೋಡೀ ಸಾಕ್ಷಾತ್ ಅಸತ್ಯಿಗಳೇ ನೆನಪಾದರು :)))

    ಇರಲಿ..ಈ ಪ್ರತಿಭೆ ಬೆಳಗಾಲಿ..ಎಲ್ಲೆಲ್ಲೂ ಆತನ ತಬಲವಾದನಕ್ಕೆ ಜನ ತಲೆದೂಗಲಿ..

  4. ಶಿವ್ ಅವರೆ,
    ಯಾರ್‌ಯಾರೋ ಏನೇನೋ ಅನ್ವೇಷಣೆ ಮಾಡ್ತಾರೆ. ಅಂತೂ ನಮಗೆ ಅನ್ವೇಷಣೆ ಮಾಡದೆಯೇ ಅಚಾನಕ್ ಆಗಿ ಸಿಕ್ಕ ಬಾಲ ಪ್ರತಿಭೆಯಿದು.
    ನಿಮ್ಮ ಜತೆ ನನ್ನದೂ ಹಾರೈಕೆಯಿದೆ ಆ ಪುಟಾಣಿಗೆ.

LEAVE A REPLY

Please enter your comment!
Please enter your name here