ಭಾರತದ ಹೊರಗೆ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆ

0
292

ದೇಶದಲ್ಲಿ ಡಿಜಿಟಲ್ ಕ್ರಾಂತಿಗೆ ಹೆಚ್ಚು ಒತ್ತು ನೀಡಲಾಗುತ್ತಿರುವ ಹಂತದಲ್ಲಿ ಬಳಕೆದಾರರನ್ನು ಸೆಳೆದುಕೊಳ್ಳಲು ಸಾಕಷ್ಟು ತಂತ್ರಜ್ಞಾನ ಕಂಪನಿಗಳು ತಮ್ಮದೇ ಆದ ಡಿಜಿಟಲ್ ವ್ಯಾಲೆಟ್ ಮೂಲಕ ಪ್ರಯತ್ನ ನಡೆಸುತ್ತಲೇ ಬಂದಿವೆ. ಭಾರತದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಸಂವಹನಾ ಆ್ಯಪ್ ‘ವಾಟ್ಸ್ಆ್ಯಪ್’ನ ಪೇಮೆಂಟ್ ಬ್ಯಾಂಕ್ ಕುರಿತು ಸಾಕಷ್ಟು ಕುತೂಹಲಗಳಿದ್ದವು. ಇದೀಗ ಹೊಚ್ಚ ಹೊಸ ಸುದ್ದಿಯೆಂದರೆ, ವಾಟ್ಸ್ಆ್ಯಪ್ ಪೇ ಎಂಬ ಪಾವತಿ ವ್ಯವಸ್ಥೆಯು ಇನ್ನಾರು ತಿಂಗಳಲ್ಲಿ ಭಾರತ ಹೊರತಾಗಿ ಆರು ದೇಶಗಳಿಗೆ ಲಭ್ಯವಾಗಲಿದೆ.

ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ ತನ್ನ ಪಾವತಿ ವ್ಯವಸ್ಥೆಯನ್ನು ಪೈಲಟ್ ಯೋಜನೆ ರೂಪದಲ್ಲಿ ಭಾರತದಲ್ಲಿ ಸುಮಾರು ಹತ್ತು ಲಕ್ಷ ಮಂದಿಗೆ ಒದಗಿಸುವ ಮೂಲಕ ಪರೀಕ್ಷೆಗೊಳಪಡಿಸಿತ್ತು. ಅದರಲ್ಲಿರಬಹುದಾದ ಸಮಸ್ಯೆಗಳನ್ನು

ಸರಿಪಡಿಸಿಕೊಳ್ಳಲು ಈ ಪೈಲಟ್ ಯೋಜನೆಯಲ್ಲಿ ಅವಕಾಶವಿತ್ತು. ಅನಧಿಕೃತವಾಗಿ ಇದನ್ನು ವಾಟ್ಸ್ಆ್ಯಪ್ ಪೇ ಎಂದೇ ಕರೆಯಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಭಾರತದ ಹೊರಗೆಯೂ ಇದನ್ನು ವಿಸ್ತರಿಸಲಾಗುತ್ತದೆ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೊಂಡಿದ್ದಾರೆ.

ಭಾರತದಲ್ಲಿಯೂ ಈ ವ್ಯವಸ್ಥೆಯ ಜಾರಿಗೆ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ಗಳು ಮುಂದಿಟ್ಟಿರುವ ಕೆಲವೊಂದು ಷರತ್ತುಗಳನ್ನು ಪೂರೈಸಲು ವಾಟ್ಸ್ಆ್ಯಪ್ ಶ್ರಮಿಸುತ್ತಲೇ ಇದೆ. ಅವುಗಳಲ್ಲೊಂದು, ಭಾರತೀಯರ ದತ್ತಾಂಶವನ್ನು ಭಾರತದೊಳಗಿರುವ ಸರ್ವರ್‌ನಲ್ಲೇ ಶೇಖರಿಸಿಡಬೇಕೆಂಬುದು. ಅದುವರೆಗೂ ಅನುಮತಿ ವಾಟ್ಸ್ಆ್ಯಪ್ ಪೇಮೆಂಟ್ ಬ್ಯಾಂಕ್‌ಗೆ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿರುವುದರಿಂದ, ಈ ಪೈಲಟ್ ಯೋಜನೆಯೂ ಸದ್ಯಕ್ಕೆ ಸ್ಥಗಿತವಾಗಿದೆ. ಈ ರೀತಿಯ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ಭಾರತ ರಾಷ್ಟ್ರೀಯ ಪಾವತಿ ನಿಗಮ (NPCI) ನಿಭಾಯಿಸುತ್ತದೆ.

ಆದರೆ, ಸ್ಥಳೀಯ ಸರ್ವರ್‌ಗಳಲ್ಲಿ ಈ ದತ್ತಾಂಶವನ್ನು ಕಾಯ್ದುಕೊಳ್ಳುವಂತಾದರೆ, ಅಂತರರಾಷ್ಟ್ರೀಯ ಪಾವತಿಯ ಸುಲಲಿತ ವಹಿವಾಟಿಗೆ ಸಮಸ್ಯೆಯಾಗುತ್ತದೆ ಎಂಬುದು ವಾಟ್ಸ್ಆ್ಯಪ್ ವಾದ. ಈಗಾಗಲೇ ವಿದೇಶೀ ಕಂಪನಿಗಳಾದ ಗೂಗಲ್, ಅಮೆಜಾನ್, ಒರೇಕಲ್, ಮೈಕ್ರೋಸಾಫ್ಟ್ ಅಜ್ಯೂರ್ ಮುಂತಾದವುಗಳು ತಮ್ಮ ಸರ್ವರ್‌ಗಳನ್ನು ಭಾರತದಲ್ಲೇ ಸ್ಥಾಪಿಸುವ ಮೂಲಕ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ವಾಟ್ಸ್ಆ್ಯಪ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದರ ಮೇಲೆ ಅದರ ಪಾವತಿ ವ್ಯವಸ್ಥೆಯು ನಿಂತಿದೆ.

ಪ್ರಜಾವಾಣಿಯಲ್ಲಿ 01 ಫೆ. 2020 ಪ್ರಕಟ

LEAVE A REPLY

Please enter your comment!
Please enter your name here