ಶ್ರೀಶ ಯಕ್ಷೋತ್ಸವ: ಹಳ್ಳಿ ಮಕ್ಕಳಿಗೆ ಶಾಲೆಯಿಲ್ಲದ ದಿನಗಳ ಸದುಪಯೋಗಕ್ಕೆ ನೆರವಾಯಿತು ಯಕ್ಷಗಾನ

0
650

ಕೋವಿಡ್-19 ಮಹಾಮಾರಿ ವಕ್ಕರಿಸಿದಂದಿನಿಂದ ಕಲಾವಿದರು ಎದುರಿಸಿದ ಪಾಡು ದೇವರಿಗೇ ಪ್ರೀತಿ. ಅದರಲ್ಲಿಯೂ ಕಲೆಯಿಂದಲೇ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಯಕ್ಷಗಾನ ಕಲಾವಿದರು ಕೆಲಸವಿಲ್ಲದೆ, ದುಡಿಮೆ ಮತ್ತು ಸಂಪಾದನೆ – ಎರಡರಿಂದಲೂ ವಂಚಿತರಾಗಿ ಆಕಾಶಮುಖಿಯಾದ ಸಂದರ್ಭ. ಇತ್ತ ಶಾಲೆಗೆ ಹೋಗಲಾರದ ಪುಟ್ಟ ಮಕ್ಕಳಿಗೆ, ಓರಗೆಯವರೊಂದಿಗೆ ಬೆರೆಯದೇ ಮಂಕುಬಡಿದ ಸ್ಥಿತಿ.

ಇಂಥ ಸಂದರ್ಭದಲ್ಲಿ ಮಂಗಳೂರಿನಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ, ಬಜಪೆ ವಿಮಾನ ನಿಲ್ದಾಣಕ್ಕೆ ಆತುಕೊಂಡಂತಿರುವ ಪುಟ್ಟ ಹಳ್ಳಿ ತಲಕಳದಲ್ಲಿ ನಿರಂತರವಾಗಿ ಒಂದು ತಿಂಗಳು ಯಕ್ಷಗಾನದ ಚೆಂಡೆ-ಮದ್ದಳೆ ಸದ್ದು ಮಾಡಿದ್ದು ವಿನೂತನ ದಾಖಲೆಯಾಗಿ ಉಳಿದಿದೆ.

ಬಸ್ಸು ಬಾರದ ಊರು
ಇದು ಬಜಪೆ ಸಮೀಪದ ಕೊಳಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ ತಲಕಳ ಎಂಬ ಪುಟ್ಟ ಹಳ್ಳಿ. ತಲಕಳ ಕಾಶಿ ವಿಶ್ವನಾಥೇಶ್ವರ ಹಾಗೂ ಮಹಾಗಣಪತಿಯ ದೇವಸ್ಥಾನ, ಅದರ ಸುತ್ತ ಕೂಗಳತೆ ದೂರದಲ್ಲಿ ಚದುರಿಕೊಂಡಂತಿರುವ ಒಂದು ಹತ್ತಿಪ್ಪತ್ತು ಮನೆಗಳು. ಆಕಡೆ ಸುಂಕದಕಟ್ಟೆ ಈ ಕಡೆಯಿಂದ ಅದ್ಯಪಾಡಿ ದೇವಸ್ಥಾನಗಳನ್ನು ಬೆಸೆಯುವ ಸಂಪರ್ಕ ರಸ್ತೆಯಿದೆ. ಆದರೆ ಇಲ್ಲಿಗೆ ಬಸ್ಸು ಇನ್ನೂ ಬರುತ್ತಿಲ್ಲ.

ಈ ಗ್ರಾಮಕ್ಕೆ ನೀರು, ಕರೆಂಟ್, ಅಂಗನವಾಡಿ ಮುಂತಾದ ಮೂಲಭೂತ ಸೌಕರ್ಯಗಳಿವೆ. ಇದಕ್ಕೆ ಪ್ರಮುಖವಾಗಿ ಕಾರಣರಾದವರು ಯಕ್ಷಗಾನ ಕ್ಷೇತ್ರದಲ್ಲಿ ಸದ್ದಿಲ್ಲದೆ ಭಾರಿ ಸಾಧನೆ ಮಾಡಿದ್ದ ದಿವಂಗತ ಕೆ.ತಿಮ್ಮಪ್ಪ ಗುಜರನ್. ಇವರು ಕೊಳಂಬೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಸದಸ್ಯರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ತಲಕಳ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿಯೂ ಇವರ ಪಾತ್ರ ಮಹತ್ತರವಾದದ್ದು.

ಅದಕ್ಕೂ ಹೆಚ್ಚು, ಈ ಊರಿನವರಿಗೆ ಆಟದ (ಸ್ಥಳೀಯ ಭಾಷೆಯಲ್ಲಿ ಯಕ್ಷಗಾನವನ್ನು ಕರೆಯುವುದೇ ಹಾಗೆ) ಹುಚ್ಚು ಹಿಡಿಸಿದವರು ಇತ್ತೀಚೆಗಷ್ಟೇ ಇಹಲೋಕ ತ್ಯಜಿಸಿದ ಈ ತಿಮ್ಮಪ್ಪ ಗುಜರನ್. ಅವರು ವೇಷಧಾರಿಯಾಗಿ, ಯಕ್ಷಗಾನ ಸಂಘಟಕರಾಗಿ, ಮೇಳಗಳ ಯಜಮಾನನಾಗಿ, 40ಕ್ಕೂ ಹೆಚ್ಚು ತುಳು ಪ್ರಸಂಗಗಳನ್ನು ರಚಿಸಿದ ಪ್ರಸಂಗಕರ್ತೃವಾಗಿ ಮಾಡಿದ ಯಕ್ಷಗಾನ ಕಲಾಸೇವೆಯನ್ನು ಗುರುತಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿಯು 2020-21ನೇ ಸಾಲಿನ ಮರಣೋತ್ತರ ಗೌರವ ಪ್ರಶಸ್ತಿಯನ್ನು ಘೋಷಿಸಿದೆ. ದೇವಸ್ಥಾನದಲ್ಲಿ ಏನೇ ಪ್ರಮುಖ ಕಾರ್ಯಕ್ರಮವಿದ್ದರೂ ಅಲ್ಲಿ ಯಕ್ಷಗಾನ ನಡೆಯುವಂತೆ ಮಾಡುತ್ತಿದ್ದರು ಗುಜರನ್.

ಇಷ್ಟೊಂದು ಹಿನ್ನೆಲೆಯೊಂದಿಗೆ, ಇಲ್ಲಿ ಕಳೆದೊಂದು ತಿಂಗಳು ನಡೆದ ನಿರಂತರ ಯಕ್ಷಗಾನದ ಬಗ್ಗೆ ತಿಳಿಯೋಣ.

ಇದೇ ದಿ.ತಿಮ್ಮಪ್ಪ ಗುಜರನ್ ಅವರ ಪುತ್ರ ‘ಶ್ರೀಶ ತಲಕಳ’ ಎಂಬ ಕಾವ್ಯನಾಮದೊಂದಿಗೆ ಲೇಖನಗಳನ್ನು ಬರೆಯುತ್ತಿದ್ದ, ಸ್ವತಃ ಯಕ್ಷಗಾನದ ಸವ್ಯಸಾಚಿಯಾಗಿ ಮಿಂಚುತ್ತಿದ್ದವರು ಯೋಗೀಶ್ ತಲಕಳ. ಅವರು ಪ್ರವರ್ಧಮಾನಕ್ಕೆ ಬರುವ ಮೊದಲೇ ತಾರುಣ್ಯದಲ್ಲೇ ಅಕಾಲಿಕ ಮರಣಕ್ಕೆ ತುತ್ತಾದವರು. ಪುತ್ರನ ನೆನಪಿನಲ್ಲಿ ಕೆ.ಟಿ.ಗುಜರನ್ ಅವರು ಪ್ರತೀವರ್ಷ ‘ಶ್ರೀಶ ಯಕ್ಷೋತ್ಸವ’ ಎಂಬ ಏಳು ದಿನಗಳ (ಸಪ್ತಾಹ) ಯಕ್ಷಗಾನ ಕಾರ್ಯಕ್ರಮ ಆಯೋಜಿಸುತ್ತಿದ್ದರು.

ಆದರೆ, ಯಕ್ಷಗಾನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಗುಜರನ್ ಅವರು ಈ ವರ್ಷ ಅದೇಕೋ, ‘ಒಂದು ತಿಂಗಳಿಡೀ ಮಾಡೋಣ, ಗುರುಗಳಿಗೆ ಸನ್ಮಾನಿಸೋಣ’ ಎಂಬ ಸಂಕಲ್ಪ ಕೈಗೊಂಡಿದ್ದರು. ಉಳ್ಳಾಲ ಚೀರುಂಭಾ ಭಗವತಿ ಮೇಳ ಹಾಗೂ ತಲಕಳ ಕಾಶಿ ವಿಶ್ವನಾಥೇಶ್ವರ ಮೇಳಗಳ ಸಂಚಾಲಕರಾಗಿ, ಅದೆಷ್ಟೋ ಯಕ್ಷಗಾನ ಕಲಾವಿದರಿಗೆ ಅನ್ನಕ್ಕೆ ದಾರಿ ಮಾಡಿಕೊಟ್ಟಿದ್ದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿಯೇ 2020 ಡಿ.2ರಂದು ಯಕ್ಷೋತ್ಸವ ಆರಂಭಿಸಿಬಿಟ್ಟರು. ಅವರ ಈ ಕನಸಿಗೆ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸಂಪೂರ್ಣ ಪ್ರೋತ್ಸಾಹ ನೀಡಿದ್ದರು.

ಗುಜರನ್ ಮನೆ ಮತ್ತು ಯಕ್ಷಗಾನದ ಹಿರಿಯ ಗುರು-ದಂಪತಿ ಲೀಲಾ – ಹರಿನಾರಾಯಣ ಬೈಪಾಡಿತ್ತಾಯರ ಮನೆಯೂ ಎದುರುಬದುರು. ಆ ಮನೆಯಲ್ಲೇ ಯೋಗೀಶ ಹಾಗೂ ಪುತ್ರಿ ಯೋಗಾಕ್ಷಿ ಯಕ್ಷಗಾನದ ಹಿಮ್ಮೇಳ ಕಲಿತವರು. ಯೋಗಾಕ್ಷಿಯ ಇಬ್ಬರು ಪುತ್ರಿಯರಿಗೂ ಚೆಂಡೆ-ಮದ್ದಳೆ-ಭಾಗವತಿಕೆ ತರಬೇತಿ ಕೊಡಿಸಿದ್ದರು ಗುಜರನ್. ಅಕ್ಕಪಕ್ಕದ ಕೆಲವು ಮನೆಗಳ ಮಕ್ಕಳು ಕೂಡ ಜೊತೆ ಸೇರಿದ್ದರು. ನಾಟ್ಯ ಗುರುವಾಗಿ ಹಿರಿಯ ಯಕ್ಷಗಾನ ಕಲಾವಿದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ಅಲ್ಲಿನ ಹಲವು ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಈ ಮಕ್ಕಳೆಲ್ಲರೂ ರಂಗದಲ್ಲಿ ಪ್ರದರ್ಶನ ನೀಡುವಷ್ಟು ಅನುಭವ ಪಡೆದಿದ್ದಾರೆ. ಮೇಳದ ಕಲಾವಿದರೊಂದಿಗೆ ಈ ಬಾಲ ಕಲಾವಿದರೂ ಜೊತೆ ಸೇರಿದರು ಯಕ್ಷಮಾಸದ ಅಭಿಯಾನಕ್ಕೆ.

ಆದರೆ, ಡಿಸೆಂಬರ್ 05, 2020ರ ಆ ದುರ್ದಿನದಂದು, ಸಾಯಂಕಾಲ ತಮ್ಮ ಮಹದಾಕಾಂಕ್ಷೆಯಂತೆ ಈ ಮಕ್ಕಳಿಂದಲೇ ಯಕ್ಷಗಾನದ ಸರ್ವಾಂಗೀಣ ಪ್ರದರ್ಶನ (ಕೇಳಿ, ಪೂರ್ವರಂಗ, ಪ್ರಸಂಗ ಪೀಠಿಕೆ, ಯಕ್ಷಗಾನ ಪ್ರಸಂಗ) ನೋಡಿ ಆನಂದ ತುಂದಿಲರಾಗಿದ್ದರು. ಮೇಳದ ಚೌಕಿಯಲ್ಲೇ (ಬಣ್ಣದ ಮನೆ) ಮಕ್ಕಳ ಯಕ್ಷಗಾನ ಪ್ರದರ್ಶನದ ಸುಖವನ್ನು ಆಲಿಸುತ್ತಾ ಒರಗಿದ್ದರು. ಎದೆನೋವಿನಿಂದ ಕುಸಿದವರನ್ನು ಮಂಗಳೂರಿನ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮಧ್ಯರಾತ್ರಿ ಕಳೆದ ಬಳಿಕ ಯಕ್ಷಗಾನಕ್ಕಾಗಿಯೇ ಮುಡಿಪಾಗಿದ್ದ ಜೀವವೊಂದು ಯಕ್ಷಗಾನೀಯ ಪರಿಸರದಲ್ಲೇ ಇಹಲೋಕ ಯಾತ್ರೆ ಮುಗಿಸಿತ್ತು.

ಅಲ್ಲಿಗೆ ಅನಿವಾರ್ಯವಾಗಿ ಈ ಯಕ್ಷೋತ್ಸವವನ್ನು ನಿಲ್ಲಿಸಬೇಕಾಯಿತು. ನಾಗರಾಜ ಶೆಟ್ಟಿಯವರ ಸೂಚನೆಯೊಂದಿಗೆ ಮೇಳದ ಕಲಾವಿದರು, ಊರವರು ಈ ಯಕ್ಷೋತ್ಸವವನ್ನು ಗುಜರನ್ ಇಚ್ಛೆಯಂತೆಯೇ ಒಂದು ತಿಂಗಳು ನಡೆಸಿ, ಕೊನೆಯಲ್ಲಿ ಜೋಡಾಟ ಆಡಿಸುವ ಗಟ್ಟಿ ನಿರ್ಧಾರ ಮಾಡಿದರು. ಅಂತ್ಯಕ್ರಿಯಾದಿಗಳು ಮುಗಿಸಿ 13 ದಿನಗಳ ಅಂತರದ ಬಳಿಕ ಡಿ.18ರಿಂದ ಯಕ್ಷೋತ್ಸವ ಮತ್ತೆ ಆರಂಭವಾಯಿತು.

ಕಲಾವಿದರು, ಅಭಿಮಾನಿಗಳ ಬೆಂಬಲ
ಕರಾವಳಿಯಲ್ಲಿ ನವೆಂಬರ್ ತಿಂಗಳಲ್ಲೇ ಬಹುತೇಕ ವೃತ್ತಿ, ಬಯಲಾಟ ಮೇಳಗಳು ಗೆಜ್ಜೆ ಕಟ್ಟಿ ತಿರುಗಾಟ ಆರಂಭಿಸಿವೆ. ಹರಕೆ ಮೇಳಗಳಲ್ಲಿ ರಾತ್ರಿಯಿಡೀ ನಡೆಯುವ ಪ್ರದರ್ಶನವದು. ಅದರಲ್ಲಿ ಹೆಸರಾಂತ ಕಲಾವಿದರಿದ್ದಾರೆ. ಬಹುತೇಕ ಕಲಾವಿದರಿಗೆ ತಿಮ್ಮಪ್ಪ ಗುಜರನ್ ಆತ್ಮೀಯರೇ ಆಗಿದ್ದರು. ಯಾಕೆಂದರೆ, ತಲಕಳ ಮೇಳದಲ್ಲಿ ಬಾಲ ಕಲಾವಿದರಾಗಿ ಗೆಜ್ಜೆ ಕಟ್ಟಿದವರೇ ಇಂದು ಬಹುತೇಕ ಮೇಳಗಳಲ್ಲಿ ಪ್ರಸಿದ್ಧಿಗೆ ಬಂದಿದ್ದಾರೆ.

ಇಲ್ಲಿನ ಯಕ್ಷಗಾನವು ಕಾಲಮಿತಿಯಲ್ಲಿ ಸಂಜೆ 7ರಿಂದ 10ರವರೆಗೆ ಮಾತ್ರ ನಡೆಯುತ್ತಿದ್ದುದರಿಂದ, ಬಯಲಾಟ ಮೇಳಗಳ ಕಲಾವಿದರು ಕೂಡ ತಿಮ್ಮಪ್ಪ ಗುಜರನ್ ಮೇಲಿನ ಪ್ರೀತಿಯಿಂದ ಕಲಾಸೇವೆ ಮಾಡಿ, ತಮ್ಮ ಮುಂದಿನ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು. ಹಿರಿಯ ಯಕ್ಷಗಾನ ಕಲಾವಿದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರ ನಿರ್ದೇಶನದಲ್ಲಿ ನಾಟ್ಯಾಭ್ಯಾಸ ಮಾಡಿದ, ತಲಕಳ, ಕತ್ತಲ್‌ಸಾರ್ ಪರಿಸರದ ಮಕ್ಕಳು ಮುಮ್ಮೇಳ ಹಾಗೂ ಬೈಪಾಡಿತ್ತಾಯರ ಶಿಷ್ಯರು ಹಿಮ್ಮೇಳಕ್ಕೆ ಆಧಾರವಾದರು. ಎರಡೂ ಮೇಳಗಳ ಕಲಾವಿದರೂ ಕೈಜೋಡಿಸಿದರು. ಅಲ್ಲಿಗೆ ಜನವರಿ 14ರವರೆಗೂ 30 ದಿನಗಳ ಯಕ್ಷೋತ್ಸವ ಸಾಂಗವಾಗಿ ನೆರವೇರಿತು.

ತಿಮ್ಮಪ್ಪರ ಆಸೆಯಂತೆ ಕೊನೆಯ ದಿನ ಗಣ್ಯರ ಉಪಸ್ಥಿತಿಯಲ್ಲಿ ಮೂವರು ಯಕ್ಷಗಾನ ಗುರುಗಳು, ದೇವಸ್ಥಾನದ ಅರ್ಚಕ ದಿನೇಶ್ ಭಟ್ ಕುಟುಂಬ ಹಾಗೂ ಚೌಕಿಯಲ್ಲಿ ಸಹಕರಿಸಿದ ಚಂದ್ರ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅವರ ಕೊನೆಯಾಸೆಯಂತೆ ಎರಡು ರಂಗಸ್ಥಳಗಳಲ್ಲಿ ಎರಡು ಮೇಳಗಳ ಜೋಡಾಟವೂ ನಡೆದು ಹೊಸ ದಾಖಲೆಯಾಯಿತು.

https://www.facebook.com/maithrishrinivas/posts/3597442570344111

ಯಕ್ಷಗಾನ ಚರಿತ್ರೆಯಲ್ಲಿ ಹೊಸ ದಾಖಲೆ ಬರೆದಿದ್ದ ಪ್ರಸಂಗ ದೇವಿಮಹಾತ್ಮ್ಯೆ. ಹರಕೆ ಮೇಳಗಳಲ್ಲಿ ಸೇವಾಕರ್ತರು ಆಟ ಆಡಿಸುವುದು ಇದೇ ಪ್ರಸಂಗವನ್ನು. ಈ ಅದ್ಭುತ ಕಥಾನಕದ ಮೊದಲ ಭಾಗವಾದ ಮೇದಿನಿ ನಿರ್ಮಾಣ – ಮಧು-ಕೈಟಭ ವಧೆ ಪ್ರಸಂಗವನ್ನು ಹಿಂದಿನ ದಿನ (ಜ.13ರಂದು) ಪ್ರದರ್ಶಿಸಲಾಗಿದ್ದರೆ, ‘ಶ್ರೀಶ ಯಕ್ಷೋತ್ಸವ’ದ ಸಮಾರೋಪದಂದು, ಮಕರ ಸಂಕ್ರಾಂತಿಯ ದಿನ ಎರಡು ರಂಗಸ್ಥಳಗಳಲ್ಲಿ ‘ಮಹಿಷಾಸುರ ಮರ್ದಿನಿ’ ಪ್ರಸಂಗವು ಏಕಕಾಲದಲ್ಲಿ ಜರುಗಿತು. ಎರಡು ರಂಗಸ್ಥಳಗಳಲ್ಲಿ ಎರಡೆರಡು ದೇವೇಂದ್ರಾದಿ ದೇವತೆಗಳು, ಎರಡೆರಡು ಮಾಲಿನಿ, ಮಹಿಷಾಸುರ, ಶ್ರೀದೇವಿ ವೇಷಗಳ ಮಧ್ಯೆ, ಎರಡೂ ವೇದಿಕೆಗಳಲ್ಲಿ ಚೆಂಡೆ-ಮದ್ದಳೆಗಳ ಸದ್ದಿನೊಂದಿಗೆ ಜೋಡಾಟವಂತೂ ಕಣ್ಣಿಗೆ ಹಬ್ಬವಾಯಿತು. ಇಲ್ಲಿ ನೋಡುವಂಥದ್ದು ಮಾತ್ರ, ಕೇಳುವಂತದ್ದೇನಿರಲಿಲ್ಲ. ಯಾಕೆಂದರೆ ಎರಡೂ ರಂಗಸ್ಥಳಗಳಲ್ಲಿ ಚೆಂಡೆ-ಮದ್ದಳೆಯ ನಿನಾದವೇ ಹೆಚ್ಚು.

ಒಂದು ತಿಂಗಳ ಯಕ್ಷಗಾನ ಉತ್ಸವಕ್ಕೆ ಮಕ್ಕಳನ್ನು ತಯಾರು ಮಾಡುವಲ್ಲಿ, ಪ್ರಸಂಗದ ಮಾರ್ಗದರ್ಶನದಲ್ಲಿ ದುಡಿದವರು 75ರ ಹರೆಯದ ಹರಿನಾರಾಯಣ ಬೈಪಾಡಿತ್ತಾಯ, ಲೀಲಾ ಬೈಪಾಡಿತ್ತಾಯ ದಂಪತಿ. ಹಿಮ್ಮೇಳದ ಸಂಪೂರ್ಣ ಜವಾಬ್ದಾರಿ ಅವರದ್ದೇ. ಶಿಷ್ಯರನ್ನೇ ತಯಾರುಗೊಳಿಸಿದ್ದರು ಅವರು. ಪ್ರಮುಖ ಸಂದರ್ಭಗಳಲ್ಲಿ ಅವರೇ ರಂಗವೇರುತ್ತಿದ್ದರು.

ವಿಶೇಷವೆಂದರೆ ಒಂದು ತಿಂಗಳ ಪ್ರದರ್ಶನಕ್ಕೆ ಯಾವುದೇ ಕೊರತೆಯಾಗದಂತೆ ಗುಜರನ್ ಅವರು ಎಲ್ಲ ವ್ಯವಸ್ಥೆಯನ್ನೂ ಮೊದಲೇ ಮಾಡಿದ್ದರು. ಹೀಗಾಗಿ ತಿಂಗಳ ಕಾಲ ಯಾವುದೇ ಸಮಸ್ಯೆಯಿಲ್ಲದೆ ಈ ಯಕ್ಷೋತ್ಸವ ನಡೆಯುವುದು ಸಾಧ್ಯವಾಯಿತು. ಆ ಊರಿನ ಮಂದಿ, ಪರವೂರಿನಿಂದ ಬಂದವರು ಕೂಡ ರಾತ್ರಿ 10ರೊಳಗೆ ಮುಗಿಯುತ್ತಿದ್ದುದರಿಂದ ಆಟ ನೋಡಿ ಮರಳುತ್ತಿದ್ದರು. ಕೊನೆಯ ದಿನ, ಮಕರ ಸಂಕ್ರಾಂತಿಯ ಹಬ್ಬ. ಆ ದಿನವಂತೂ ಈ ಪುಟ್ಟ ಹಳ್ಳಿಯಲ್ಲಿ ಜಾತ್ರೆಯ ವಾತಾವರಣವಿತ್ತು. ಬಂದ ಪ್ರೇಕ್ಷಕರೆಲ್ಲರಿಗೂ ದೇವಸ್ಥಾನದಲ್ಲಿ ರಾತ್ರಿ ಅನ್ನಪ್ರಸಾದ ಏರ್ಪಾಟು ಮಾಡಲಾಗಿತ್ತು.

https://www.facebook.com/maithrishrinivas/videos/3593590147396020/

ಸ್ವತಃ ಯಕ್ಷಗಾನ ಕಲಾವಿದೆಯೂ ಆಗಿರುವ ಯೋಗಾಕ್ಷಿ ಗಣೇಶ್ ಅವರು ಅನಿವಾರ್ಯವಾಗಿ ಎರಡೂ ಮೇಳಗಳ ಸಂಚಾಲಕತ್ವ ವಹಿಸಿಕೊಳ್ಳಬೇಕಾಗಿ ಬಂದಿತ್ತು. ಅಪ್ಪನ ಕನಸು ಈಡೇರಿಸಿದ ಧನ್ಯತಾ ಭಾವದೊಂದಿಗೆ ಅವರು ಹಿರಿಯ ಕಲಾವಿದರಾದ ಸಂಜಯ್ ಕುಮಾರ್, ಕೇಶವ ಶಕ್ತಿನಗರ, ಮೋಹನ ಕಲಂಬಾಡಿ, ಬಿ.ಟಿ.ಕುಲಾಲ್ ಹಾಗೂ ಇತರೆಲ್ಲ ಹಿರಿಯ, ಕಿರಿಯ ಕಲಾವಿದರ ತುಂಬುಮನದ ಸಹಕಾರವನ್ನು ಮನದುಂಬಿ ಸ್ಮರಿಸಿಕೊಂಡಿದ್ದಾರೆ. ಬೇರೆ ಮೇಳಗಳ ಮತ್ತು ಹವ್ಯಾಸಿ ಕಲಾವಿದರಾದ ಬೆಳ್ಳಾರೆ ಮಂಜುನಾಥ್ ಭಟ್, ವಾದಿರಾಜ ಕಲ್ಲೂರಾಯ, ಉದಯ ಧರ್ಮಸ್ಥಳ, ರವಿ ಅಡ್ಯಾರ್, ಲೋಕೇಶ್ ಮಲ್ಲೂರು, ಸಿದ್ಧಕಟ್ಟೆ ಮಲ್ಲಿಕಾ ಶೆಟ್ಟಿ, ಸಚ್ಚಿದಾನಂದ ಪ್ರಭು, ಜನಾರ್ದನ ಬೆಳಾಲು, ಕಿಶೋರ್ ಕುಮಾರ್, ತಾರಾನಾಥ ಹೆಗ್ಡೆ, ನರೇಶ್ ಭಟ್, ಕರುಣಾಕರ ಮುಂಡ್ಕೂರು, ಶರಣ್, ಸತೀಶ್ ಆಚಾರ್ಯ ಮಾಣಿ, ಸಂತೋಷ್ ಕುಲಶೇಖರ, ಅಶ್ವತ್ಥ್ ಮೂಡಬಿದಿರೆ, ಶ್ರೀಪತಿ ನಾಯಕ್ ಅಜೇರು, ದಯಾನಂದ ಕೋಡಿಕಲ್ ಮುಂತಾದವರು ಕೂಡ ಭಾಗವಹಿಸಿದ್ದರು.

ಶಾಲೆಯಿಲ್ಲದೆ ನೊಂದಿದ್ದ ಮಕ್ಕಳಿಗೆ ದೊರೆತ ಭಾಗ್ಯ
ಬಾಲ ಕಲಾವಿದರೆಲ್ಲರೂ ಮುಂದಿನ ಪ್ರಬುದ್ಧ ಕಲಾವಿದರಾಗಿ ರೂಪುಗೊಳ್ಳಲು ಈ ಯಕ್ಷೋತ್ಸವವು ವೇದಿಕೆಯಾಯಿತು. ಅಭ್ಯಾಸವೇ ಯಕ್ಷಗಾನ ಕಲೆಯ ಸಾಧನೆಯ ಶಿಖರವೇರುವಲ್ಲಿ ಮೆಟ್ಟಿಲು ಆಗಿರುವುದರಿಂದ, ಬಯಸದೇ ಬಂದ ಆ ಅವಕಾಶವನ್ನು ಮಕ್ಕಳು ಚೆನ್ನಾಗಿಯೇ ಬಳಸಿಕೊಂಡರೆಂಬುದು ಗಮನಿಸಬೇಕಾದ ಅಂಶ.

https://www.facebook.com/maithrishrinivas/videos/3593505010737867/

ಕರಾವಳಿ, ಮಲೆನಾಡು ಭಾಗದಲ್ಲಿ ಯಕ್ಷಗಾನವೊಂದು ಜನರ ಅವಿಭಾಜ್ಯ ಅಂಗವಾಗುವುದು, ಮಕ್ಕಳಿಗೂ ಪುರಾಣ ಜ್ಞಾನ, ಭಾಷಾ ಜ್ಞಾನ ಹೆಚ್ಚುವುದು ಇದೇ ಕಾರಣಕ್ಕೆ. ಮೊಬೈಲ್ ಫೋನ್‌ಗಳಲ್ಲೇ ಕಾಲ ಕಳೆಯುತ್ತಾ ನೈಜ ಬದುಕಿನ ಸೌಂದರ್ಯಗಳನ್ನು ಆಸ್ವಾದಿಸುವುದರಿಂದ ವಂಚಿತರಾಗಿರುವ ಅನ್ಯ ಮಕ್ಕಳಿಗಿಂತ ಹಳ್ಳಿಗಾಡಿನ ಮಕ್ಕಳನ್ನು ಕಲೆಯೊಂದು ಪೋಷಿಸುವುದೆಂದರೆ ಇದೇ. ಮನರಂಜನೆಯಷ್ಟೇ ಅಲ್ಲದೆ, ಮಾಹಿತಿಯನ್ನೂ, ಜ್ಞಾನವನ್ನೂ, ಸಂಸ್ಕಾರವನ್ನೂ ನೀಡುವ ಯಕ್ಷಗಾನ ಕಲೆಯಲ್ಲಿ ತಮ್ಮ ಮಕ್ಕಳೂ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಪೋಷಕರು ಕೂಡ ಸಂಪೂರ್ಣವಾಗಿ ಶ್ರಮಿಸಿರುವುದು ಗಮನಿಸಬೇಕಾದ ಅಂಶ. ಮಾಧ್ಯಮಿಕ ಶಾಲೆಯಿಂದ ಕಾಲೇಜು ಹೋಗುತ್ತಿರುವ ಹಂತದ ಈ ಮಕ್ಕಳಲ್ಲಿ ಹುಡುಗಿಯರೇ ಹೆಚ್ಚು! ಚೆಂಡೆ, ಮದ್ದಳೆ, ಭಾಗವತಿಕೆಯಲ್ಲಿ ಮಿಂಚುವ ಈ ಹುಡುಗಿಯರು, ಆ ಬಳಿಕ ವೇಷ ಧರಿಸಿ ರಂಗಸ್ಥಳದಲ್ಲಿ ಕುಣಿತ, ಮಾತುಗಾರಿಕೆಗೂ ಸೈ.

https://www.facebook.com/maithrishrinivas/videos/3593460694075632/

ಯಕ್ಷಗಾನವೆಂದರೆ, ಅದೊಂದು ಸರ್ವಾಂಗೀಣ ಕಲೆ. ಇಲ್ಲಿ ಕುಣಿತವಿದೆ, ಮಾತುಗಾರಿಕೆಯಿದೆ, ಬಣ್ಣ ಹಾಕಿಕೊಳ್ಳುವ ಕಲೆಯಿದೆ, ವೇಷಭೂಷಣಗಳಿವೆ, ವಾದ್ಯ ವಾದನ ಸಾಮರ್ಥ್ಯವಿದೆ, ಶ್ರುತಿ ಇದೆ, ಲಯ ಇದೆ ಮತ್ತು ಜ್ಞಾನ ಸಿಗುತ್ತದೆ. ಇದೆಲ್ಲದಕ್ಕೂ ಕಲಶಪ್ರಾಯವಾಗಿ ಯಕ್ಷಗಾನವು ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಬೆಳೆಸಿ ಅವರಲ್ಲಿ ಸಂಸ್ಕಾರ ಮೂಡಿಸುತ್ತದೆ.

ಕೋವಿಡ್ ಸಂಕಷ್ಟದ ಕಾಲವನ್ನು, ಶಾಲೆಯಿಲ್ಲದ ಮಕ್ಕಳು ಈ ಪರಿಯಾಗಿ ಸಮರ್ಥವಾಗಿ ಬಳಸಿಕೊಂಡರೆಂಬುದು ಹೆಮ್ಮೆಯ ವಿಚಾರ. ಬುದ್ಧಿಗೆ ಮಂಕು ಆವರಿಸಲು ಕಾರಣವಾಗುವ ಮೊಬೈಲ್ ಫೋನ್‌ಗಳಲ್ಲಿ ಆಟವಾಡುತ್ತಾ ಸಮಯ ವ್ಯರ್ಥ ಮಾಡುವ ಬದಲು, ಬುದ್ಧಿಯನ್ನು ವಿಕಸಿಸುವ ಕಲೆಗಳಲ್ಲಿ ತೊಡಗಿಸಿಕೊಂಡ ಮಕ್ಕಳಿಗೆ ಶಾಲೆ ಇಲ್ಲದಿರುವುದು ಒಂದು ರೀತಿಯಲ್ಲಿ ವರವಾಯಿತೆನ್ನಬಹುದು. ಈ ಸಮಯವನ್ನು ಯಕ್ಷಗಾನದ ಕುಣಿತ, ಚೆಂಡೆ-ಮದ್ದಳೆ ವಾದನದ ಅಭ್ಯಾಸಕ್ಕೇ ಮೀಸಲಾಗಿಟ್ಟು, ಆ ಬಳಿಕ ಸಂಜೆಯ ವೇಳೆಗೆ ರಂಗದಲ್ಲಿ ಉತ್ತಮ ಪ್ರದರ್ಶನ ನೀಡಲು ಬಳಸಿಕೊಂಡರು ಈ ಮಕ್ಕಳು.

ಹಿಮ್ಮೇಳದಲ್ಲಿ ಭಾಗವಹಿಸಿದ ಮಕ್ಕಳೆಂದರೆ ಸಮರ್ಥ್ ಉಡುಪ ಕತ್ತಲ್‌ಸಾರ್, ಶ್ರಾವ್ಯ ಕೆ. ತಲಕಳ, ಶಮಾ ಕೆ. ತಲಕಳ, ಮಹತಿ ಶೆಟ್ಟಿ ಅಂಡಾಲ, ಚೈತ್ರ ತಲಕಳ, ಚೈತನ್ಯ ತಲಕಳ, ಚೇತನ್ ಕುಮಾರ್ ಕತ್ತಲ್‌ಸಾರ್, ಶ್ರವಣ್ ಉಡುಪ ಕತ್ತಲ್‌ಸಾರ್, ಶ್ರೀರಾಮ ಶರ್ಮಾ ತಲಕಳ, ಆದ್ಯಾ ವಿ.ಪೂಜಾರಿ ತಲ್ಲದಬೈಲು, ಅಭಿಷೇಕ್ ಬಿ., ವಿವೇಕ್, ಜಾಹ್ನವಿ ಹಾಗೂ ಪ್ರಾಣೇಶ್ ಮುಂತಾದವರು. ಮುಮ್ಮೇಳದಲ್ಲಿ ಸಾಯಿಸುಮಾ ನಾವಡ, ಅನನ್ಯಾ ಎಸ್.ಸುವರ್ಣ ಮುರನಗರ, ಖುಷಿ ಕತ್ತಲ್‌ಸಾರ್, ಕೌಶಿಕ್ ಕತ್ತಲ್‌ಸಾರ್, ನವ್ಯಾ ಕತ್ತಲ್‌ಸಾರ್, ಅಭಿಷೇಕ್ ಕತ್ತಲ್‌ಸಾರ್, ದೀಕ್ಷಾ ಪೆರಾರ, ಕೌಶಿಕ್ ಪೆರಾರ, ದಿವ್ಯಾ ತಲಕಳ ಮುಂತಾದವರಿದ್ದರು. ತಿಂಗಳಿಡೀ ನೇಪಥ್ಯದಲ್ಲಿ ಕೃಷ್ಣಪ್ಪ ಮಣೇಲು ಹಾಗೂ ರವಿಕುಮಾರ್ ತಲಕಳ (ಲೈಟಿಂಗ್) ಸಹಕರಿಸಿದ್ದರು.

ಸಮಾರೋಪದ ದಿನ, ಕಳೆದೊಂದು ತಿಂಗಳಿಂದ ಒಂದೇ ಮನೆಯ ಸದಸ್ಯರಂತೆ ಆಡುತ್ತಾಡುತ್ತಾ ಬೆರೆತಿದ್ದವರ ಕಣ್ಣುಗಳು ತೇವಗೊಂಡಿದ್ದವು. ಒಂದು ತಿಂಗಳ ಕಾಲ ಇವರೆಲ್ಲರ ಮುಖದಲ್ಲಿಯೂ ಶಾಲೆಗೆ ಬಂದಷ್ಟೇ ಖುಷಿಯಿತ್ತು. ಪ್ರಧಾನವಾಗಿ ತಲಕಳ ಹಾಗೂ ಸ್ವಲ್ಪ ದೂರದ ಕತ್ತಲ್‌ಸಾರ್‌ನಿಂದ ಮಕ್ಕಳು ಬಂದು ಒಂದೇ ಶಾಲೆಯವರಂತಿದ್ದರು.

ಒಂದು ತಿಂಗಳು ಕಳೆದದ್ದೇ ಗೊತ್ತಾಗಲಿಲ್ಲ. ನಾಳೆಯಿಂದ ಈ ಸಮಯವನ್ನು ಕಳೆಯುವುದು ಹೇಗೆ? ಎಂಬುದು ಚೆಂಡೆ ಹಾಗೂ ಮದ್ದಳೆ ವಾದನವನ್ನು ಒರೆಗೆ ಹಚ್ಚಿ ಉತ್ತಮ ಕಲಾವಿದನಾಗುವ ಭರವಸೆ ಮೂಡಿಸಿರುವ ಕತ್ತಲ್‌ಸಾರ್‌ನ ಸಮರ್ಥ್ ಉಡುಪ ಎಂಬ 8ನೇ ತರಗತಿ ಹುಡುಗನ ಪ್ರಶ್ನೆ. ಈತನ ತಂದೆ ತಾಯಿ ಕೂಡ ಶ್ರೀಶ ಯಕ್ಷೋತ್ಸವಕ್ಕೆ ಸಾಕಷ್ಟು ಸಹಕರಿಸಿದ್ದಾರೆ.

ಕೋವಿಡ್ ಕಾಲದಲ್ಲೂ ಒಂದು ಊರನ್ನೇ ಯಕ್ಷಗಾನವು ಬೆಳಗಿದ್ದು ಹೀಗೆ.

My Article Published in Prajavani on 17 Jan 2021

LEAVE A REPLY

Please enter your comment!
Please enter your name here