ನಿಮ್ಮ Google ಚಟುವಟಿಕೆಯ ಜಾಡು ಅಳಿಸುವುದು ಹೇಗೆ?

0
409

ನಿಮ್ಮ ಅಂಕಣ 6ನೇ ವರ್ಷಕ್ಕೆ
ಮಾಹಿತಿ ತಂತ್ರಜ್ಞಾನದ ಕೆಲವೊಂದು ಸುಲಭ ತಂತ್ರೋಪಾಯಗಳು ಆ ವಿಷಯದ ಬಗ್ಗೆ ಓದಿದವರಿಗಷ್ಟೇ ಅಲ್ಲ, ಜನ ಸಾಮಾನ್ಯರಿಗೂ ತಲುಪುವಂತಾಗಲಿ ಎಂಬ ಉದ್ದೇಶದಿಂದ ವಿಜಯ ಕರ್ನಾಟಕದಲ್ಲಿ 27 ಆಗಸ್ಟ್ 2012ರಂದು ಆರಂಭಿಸಿದ ‘ಮಾಹಿತಿ@ತಂತ್ರಜ್ಞಾನ’ ಅಂಕಣ 5 ವರ್ಷಗಳನ್ನು ಪೂರೈಸಿದ ಶುಭ ಘಳಿಗೆ. ಫೋನ್, ಇಮೇಲ್ ಹಾಗೂ ನೇರ ಭೇಟಿಯಾದ ಸಂದರ್ಭದಲ್ಲಿ ತಮ್ಮಸಂದೇಹಗಳನ್ನು ಕೇಳುತ್ತಲೇ ‘ಮೇವು’ ಒದಗಿಸುತ್ತಾ, ಪ್ರತಿ ವಾರದ ಈ ಅಂಕಣವು ರೂಪುಗೊಳ್ಳಲು ಸಹಕರಿಸಿದ ಓದುಗರು, ಸಹೋದ್ಯೋಗಿಗಳೆಲ್ಲರಿಗೂ ಧನ್ಯವಾದಗಳು. ಒಬ್ಬರ ಸಮಸ್ಯೆ ಪರಿಹಾರವಾದ ರೀತಿಯಲ್ಲೇ ಉಳಿದ ಓದುಗರಿಗೂ ಅಂಥದ್ದೇ ಸಮಸ್ಯೆ ಇರಬಹುದು, ಅವರೂ ತಿಳಿದುಕೊಳ್ಳಲಿ ಎಂಬ ಆಶಯದೊಂದಿಗೆ ಸುಲಭಗ್ರಾಹ್ಯ ರೀತಿಯಲ್ಲಿ ಅಂಕಣದಲ್ಲಿ ಮತ್ತು ‘ಟೆಕ್‌ಟಾನಿಕ್’ ಮೂಲಕ ನೀಡಿದ ಸಲಹೆಗಳು ಉಪಯುಕ್ತವಾಗಿದೆಯೆಂದಾದರೆ ಶ್ರಮ ಸಾರ್ಥಕ್ಯದ ಖುಷಿ.
-ಅವಿನಾಶ್ ಬಿ.
——
Google activity article

ಪ್ರೈವೆಸಿ ಅಥವಾ ಗೋಪ್ಯತೆ ಎಂಬುದು ನಮ್ಮ ಮೂಲಭೂತ ಹಕ್ಕು, ಅದರ ರಕ್ಷಣೆಗೆ, ವಿಶೇಷವಾಗಿ ಪ್ರಜೆಗಳ ಡಿಜಿಟಲ್ ಮಾಹಿತಿಗಳ ರಕ್ಷಣೆಗೆ ಸೂಕ್ತ ಕಾನೂನು ರೂಪಿಸಿ ಅಂತ ಸುಪ್ರೀಂ ಕೋರ್ಟು ಕೇಂದ್ರ ಸರಕಾರಕ್ಕೆ ಕಳೆದ ವಾರ ಸಲಹೆ ನೀಡಿತ್ತು. ಈ ಫೇಸ್‌ಬುಕ್ – ಗೂಗಲ್ – ವಾಟ್ಸಾಪ್ ಯುಗದಲ್ಲಿ ನಾವು ಅಂತರ್ಜಾಲದಲ್ಲಿ ಮಾಡಿದ್ದೆಲ್ಲವೂ ಟ್ರ್ಯಾಕ್ ಆಗುತ್ತದೆ. ಕಂಪ್ಯೂಟರ್ ಆನ್ ಮಾಡಿಟ್ಟುಕೊಂಡು ಇಂಟರ್ನೆಟ್‌ನಲ್ಲಿ ಏನೇನು ಮಾಡಿದೆವು ಎಂಬುದರ ಜಾಡು ಹಿಡಿಯುವುದು ಸುಲಭ. ಇದು ಕೂಡ ಖಾಸಗಿತನಕ್ಕೆ ಧಕ್ಕೆ ತಂದಂತೆಯೇ.

ಆಂಡ್ರಾಯ್ಡ್ ಫೋನ್‌ನಲ್ಲಿ ನಾವೇನು ಮಾಡುತ್ತೇವೋ, ಅವೆಲ್ಲವೂ ಒಂದೆಡೆ ದಾಖಲಾಗಿರುತ್ತದೆ. ಇದರಲ್ಲಿ ಜಿಮೇಲ್ ಮೂಲಕ ಗೂಗಲ್‌ಗೆ ಲಾಗಿನ್ ಆಗುವುದು ಕಡ್ಡಾಯ. ಗೂಗಲ್ ಮ್ಯಾಪ್, ಜಿಪಿಎಸ್, ಗೂಗಲ್ ಕ್ರೋಮ್, ಗೂಗಲ್ ಸರ್ಚ್, ಗೂಗಲ್ ಫೋಟೋಸ್, ಯೂಟ್ಯೂಬ್… ಇವೆಲ್ಲವೂ ಆನ್‌ಲೈನ್‌ನಲ್ಲಿ ನಮ್ಮ ಹೆಜ್ಜೆಗುರುತನ್ನು ಮೂಡಿಸಿರುತ್ತವೆ. ನಾವು ಎಲ್ಲಿ ಹೋದೆವು, ಏನು ನೋಡಿದೆವೆಂಬುದು ಗೂಗಲ್‌ಗೆ ಗೊತ್ತಿರುತ್ತದೆ. ಉದಾಹರಣೆಗೆ, ಬೆಂಗಳೂರಿನ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುತ್ತೀರಿ, ಅಲ್ಲಿಗೆ ಹೋದ ತಕ್ಷಣ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ, ‘ನೀವೀಗ ಕಬ್ಬನ್‌ಪಾರ್ಕ್‌ನಲ್ಲಿದ್ದೀರಿ, ಅಲ್ಲಿನ ಸುಂದರ ಕ್ಷಣಗಳ ಫೋಟೋ ಅಪ್‌ಲೋಡ್ ಮಾಡಿ’ ಅಂತ ನೋಟಿಫಿಕೇಶನ್ ಕಾಣಿಸಿಕೊಳ್ಳಬಹುದು. ಅಥವಾ ಯಾವುದೋ ಪ್ರಸಿದ್ಧ ಹೋಟೆಲ್‌ಗೆ ಹೋಗಿರುತ್ತೀರಿ. ಆ ಹೋಟೆಲ್ ಹೇಗಿದೆ ಅಂತ ಟಿಪ್ಪಣಿ ಬರೆಯಿರಿ ಎಂದೂ ನೋಟಿಫಿಕೇಶನ್ ಕೇಳಿಕೊಳ್ಳುತ್ತದೆ. ಕ್ಯಾಮೆರಾ ಬಳಸಿ ಫೋಟೋ ತೆಗೆದಿರೋ… ನಿಮ್ಮ ಫೇಸ್‌ಬುಕ್ ತೆರೆದಾಕ್ಷಣ, ಈ ‘ಫೋಟೋಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಿ’ ಅಂತ ಬರೆದಿರುವುದನ್ನು ಕೂಡ ನೀವು ನೋಡಿರಬಹುದು.

ಅಂದರೆ, ನಿಮ್ಮ ಅಂತರ್ಜಾಲದ ಜಾಲಾಟವೆಲ್ಲವೂ ಗೂಗಲ್ ಸರ್ವರ್‌ನಲ್ಲಿ ದಾಖಲಾಗಿರುತ್ತದೆ. ಬ್ರೌಸರ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ ನೋಡಿದರೆ, ಅದರಲ್ಲಿ ನೀವು ಯಾವ ದಿನ ಯಾವೆಲ್ಲ ವೆಬ್ ತಾಣಗಳನ್ನು ಸಂದರ್ಶಿಸಿದಿರಿ, ಏನೆಲ್ಲಾ ಡೌನ್‌ಲೋಡ್ ಮಾಡಿದಿರಿ ಎನ್ನುವ ಇತಿಹಾಸವೇ ಪಟ್ಟಿಯಾಗಿರುತ್ತದೆ.

ಅದೇ ರೀತಿ, ಗೂಗಲ್ ಸರ್ಚ್ ಬಳಸಿ ನಾವು ದಿನಕ್ಕೆ ನೂರಾರು ವಿಷಯಗಳನ್ನು, ಫೋಟೋ, ವೀಡಿಯೋಗಳನ್ನು ಹುಡುಕಿರುತ್ತೇವೆ. ನಿರ್ದಿಷ್ಟವಾದ ದಿನ ಏನೆಲ್ಲಾ ಸರ್ಚ್ ಮಾಡಿದಿರಿ ಎಂಬುದು ಕೂಡ ದಾಖಲಾಗುತ್ತಾ ಹೋಗುತ್ತದೆ. ನಮ್ಮದೇ ಕಂಪ್ಯೂಟರ್ ಆಗಿದ್ದರೂ, ಸೈಬರ್ ಕೆಫೆಯೋ ಅಥವಾ ಅನ್ಯರ ಕಂಪ್ಯೂಟರ್ ಆಗಿದ್ದರೂ, ಈ ಮಾಹಿತಿಗಳನ್ನು ಅಳಿಸಿಹಾಕುವುದು ಮುಖ್ಯ. ಇಲ್ಲವೆಂದಾದರೆ, ಇದನ್ನು ಬೇರೆಯವರು ದುರ್ಬಳಕೆ ಮಾಡುವುದು ಸಾಧ್ಯವಾಗುತ್ತದೆ. ನಿಮ್ಮ ಗೂಗಲ್ ಖಾತೆಗೆ (ಜಿಮೇಲ್) ಸಂಪರ್ಕಗೊಂಡಿರುವ ಯಾವುದೇ ಆಂಡ್ರಾಯ್ಡ್ ಫೋನ್ ಹಾಗೂ ಕಂಪ್ಯೂಟರ್ ಬ್ರೌಸರ್‌ನಿಂದ ನಿಮ್ಮ ಬ್ರೌಸಿಂಗ್ ಚರಿತ್ರೆಯನ್ನೇ ತಿಳಿಸಬಲ್ಲ ಈ ಜಾಡನ್ನು ಒಮ್ಮೆಗೇ ಅಳಿಸಿಹಾಕುವುದು ಹೇಗೆ?

ಇದಕ್ಕಾಗಿಯೇ ‘ಮೈ ಆಕ್ಟಿವಿಟಿ’ ಎಂಬ ಸೇವೆಯನ್ನು ಗೂಗಲ್ ಒದಗಿಸಿದೆ. ಅಲ್ಲಿ ನಮ್ಮೆಲ್ಲ ಆನ್‌ಲೈನ್ ಚಟುವಟಿಕೆಗಳು ದಾಖಲಾಗಿರುತ್ತವೆ. ಜಿಮೇಲ್ ಖಾತೆಗೆ ಲಾಗಿನ್ ಆದ ಬಳಿಕ ಡೆಸ್ಕ್‌ಟಾಪ್/ಲ್ಯಾಪ್‌ಟಾಪ್ ಕಂಪ್ಯೂಟರ್‌ನಲ್ಲಿ ಮಾಡುವ ಬ್ರೌಸಿಂಗ್ ಚಟುವಟಿಕೆಗಳೂ ಇಲ್ಲಿರುತ್ತವೆ. ಯಾವೆಲ್ಲ ವಿಷಯ ಹುಡುಕಿದಿರಿ, ಯಾವ ಸೈಟುಗಳಿಗೆ ಭೇಟಿ ನೀಡಿದಿರಿ ಮಾಹಿತಿ ಇಲ್ಲಿರುತ್ತದೆ. ಜತೆಗೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಯಾವ ಆ್ಯಪ್ ಸರ್ಚ್ ಮಾಡಿದಿರಿ, ಎಷ್ಟು ಆ್ಯಡ್ಸ್ ಕ್ಲಿಕ್ ಮಾಡಿದಿರಿ ಮುಂತಾದವುಗಳ ಮಾಹಿತಿ ಇರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ನಿರ್ದಿಷ್ಟ ಆ್ಯಪ್‌ಗಳನ್ನು ಎಷ್ಟು ಬಾರಿ ಬಳಸಿದಿರಿ, ಫೇಸ್‌ಬುಕ್‌ನಲ್ಲಿ ಏನು ನೋಡಿದಿರಿ ಮುಂತಾದ ಪ್ರವರಗಳು ಇಲ್ಲಿರುತ್ತವೆ.

ಅವನ್ನು ಅಳಿಸಲು, ಕಂಪ್ಯೂಟರಿನಲ್ಲಾದರೆ, myactivity.google.com ಗೆ ಗೂಗಲ್ ಖಾತೆಯ ಮೂಲಕ ಲಾಗಿನ್ ಆಗಿ, ಎಡಭಾಗದಲ್ಲಿ ಗೋಚರಿಸುವ Delete Activity By ಎಂಬುದನ್ನು ಕ್ಲಿಕ್ ಮಾಡಿ, ಯಾವ ದಿನ ಅಂತಲೋ, ಇಡೀ ತಿಂಗಳ ಇತಿಹಾಸವನ್ನೋ ಆಯ್ಕೆ ಮಾಡಿಕೊಳ್ಳಬಹುದು. ನಂತರ ‘Product’ ಕ್ಲಿಕ್ ಮಾಡಿ ಸರ್ಚ್, ಇಮೇಜ್ ಸರ್ಚ್ ಆಯ್ಕೆಗಳನ್ನು ಸೆಲೆಕ್ಟ್ ಮಾಡಿಕೊಂಡು, ಡಿಲೀಟ್ ಮಾಡಿಬಿಡಿ.

ಮೊಬೈಲ್ ಫೋನ್‌ನಲ್ಲಾದರೆ, ಗೂಗಲ್ ಆ್ಯಪ್‌ನಲ್ಲೇ My Activity ಅಂತ ಸರ್ಚ್ ಮಾಡಿ ಇಲ್ಲವೇ myactivity.google.com ಗೆ ಹೋಗಿ. ಸ್ಕ್ರೀನ್ ಮೇಲ್ಭಾಗದಲ್ಲಿರುವ ಮೂರು ಗೆರೆಗಳುಳ್ಳ ಮೆನು ಐಕಾನ್ ಒತ್ತಿ. ನಂತರ Delete Activity By ಎಂದಿರುವಲ್ಲಿ, ಮೇಲಿನಂತೆಯೇ ಮುಂದುವರಿಯಿರಿ.

ಎಡಭಾಗದಲ್ಲಿರುವ Activity Control ಎಂಬುದನ್ನು ಕ್ಲಿಕ್ ಮಾಡಿ, ನಿಮ್ಮ ಲೊಕೇಶನ್ (ಎಲ್ಲಿಗೆ ಹೋಗುತ್ತೀರಿ ಎಂಬುದನ್ನು), ಸಾಧನದ ಮಾಹಿತಿ, ಯೂಟ್ಯೂಬ್ ಸರ್ಚ್ ಇತಿಹಾಸ… ಇವೆಲ್ಲವನ್ನು ಟ್ರ್ಯಾಕ್ ಮಾಡುವುದು ಬೇಡವೆಂದಾದರೆ ಅದನ್ನು ‘ಆಫ್’ ಮಾಡುವ ಸ್ಲೈಡರ್ ಬಟನ್ ಆಯ್ಕೆ ಗೋಚರಿಸುತ್ತದೆ. ಅದನ್ನು ಬಳಸಿಕೊಳ್ಳಿ.

ನಿಮ್ಮ ಮೊಬೈಲ್ ಹಾಗೂ ಕಂಪ್ಯೂಟರಿನಲ್ಲಿ ಇಂಟರ್ನೆಟ್ ಜಾಲಾಟದ ಜಾಡನ್ನು ಈ ಮೂಲಕ ಅಳಿಸಿಹಾಕಬಹುದು. ಇದು ನಮ್ಮ ಪ್ರೈವೆಸಿ ಕಾಪಾಡಿಕೊಳ್ಳುವುದಕ್ಕಷ್ಟೇ ಅಲ್ಲದೆ, ನಮ್ಮ ಡಿಜಿಟಲ್ ಸಾಧನಗಳನ್ನು ಬಳಸಿದ ಮಕ್ಕಳು ಏನೆಲ್ಲಾ ಹುಡುಕಿದರು, ಯಾವ ವೆಬ್ ತಾಣಗಳನ್ನು ಸಂದರ್ಶಿಸಿದರು ಇತ್ಯಾದಿ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೂ ಸಾಧ್ಯವಾಗುತ್ತದೆ. ಇದರಿಂದ ಅವರು ದಾರಿ ತಪ್ಪುವ ಸುಳಿವು ಸಿಕ್ಕರೆ ಎಚ್ಚರಿಕೆಯಿಂದ ಇಂಟರ್ನೆಟ್ ಬಳಸುವಂತೆ ತಿಳಿಹೇಳುವುದಕ್ಕೂ ಅನುಕೂಲವಾಗುತ್ತದೆ.

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ, 28 ಆಗಸ್ಟ್ 2017: ಅವಿನಾಶ್ ಬಿ.

LEAVE A REPLY

Please enter your comment!
Please enter your name here