Samsung Galaxy M-42: ಭರ್ಜರಿ ಬ್ಯಾಟರಿಯ ಆಕರ್ಷಕ 5ಜಿ ಫೋನ್

0
545

ಸ್ಯಾಮ್‌ಸಂಗ್ ಇತ್ತೀಚೆಗೆ ಮಧ್ಯಮ ಬಜೆಟ್‌ನಲ್ಲಿ ಎಂ ಸರಣಿಯ ಗ್ಯಾಲಕ್ಸಿ ಎಂ-42 ಸ್ಮಾರ್ಟ್‌ಫೋನ್ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪವರ್-ಗೇಮ್ ಬಳಕೆದಾರರನ್ನೇ ಗುರಿಯಾಗಿರಿಸಿಕೊಂಡು ಸಿದ್ಧವಾಗಿರುವ ಈ ಫೋನ್ ಹೇಗಿದೆ?

ವಿನ್ಯಾಸ
ಫೋನ್ ಮೊದಲ ನೋಟಕ್ಕೇ ಗಮನ ಸೆಳೆಯುವುದು ಅದರ ಗಾತ್ರ. 5000 mAh ಬ್ಯಾಟರಿ ಇದ್ದರೂ ಸ್ಲಿಮ್ ಆಗಿ ಸ್ಟೈಲಿಶ್ ಆಗಿದೆ. ಕಾಲಕ್ಕೆ ತಕ್ಕಂತೆ ಟ್ರೆಂಡಿಯಾಗಿಯೂ ಇದೆ. ತೂಕ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಾಡಿ ಬಳಸಲಾಗಿದೆ. ಹಿಂಭಾಗದ ಕವಚದಲ್ಲಿ ನಾಲ್ಕು ವಿಭಾಗಗಳ ವಿನ್ಯಾಸವಿದ್ದು, ಗ್ರೇಡಿಯೆಂಟ್ ಬಣ್ಣದಲ್ಲಿ ವ್ಯತ್ಯಾಸ ಕಾಣಿಸುತ್ತದೆ. ಇದು ಫೋನ್‌ಗೆ ವಿಶೇಷ ನೋಟವನ್ನು ಒದಗಿಸುತ್ತದೆ. ಸ್ಲೀಕ್ ಆಗಿದ್ದು, ಕೈಯಲ್ಲಿ ಹಿಡಿಯುವುದು ಸುಲಭ. ಎದುರುಭಾಗದಲ್ಲಿ 6.6 ಇಂಚಿನ HD+ 720×1600 ಪಿಕ್ಸೆಲ್ ರೆಸೊಲ್ಯುಶನ್ ಡಿಸ್‌ಪ್ಲೇ, ಮೇಲ್ಭಾಗದ ಮಧ್ಯದಲ್ಲಿ ಸೆಲ್ಫೀ ಕ್ಯಾಮೆರಾ, ಬಲ ಭಾಗದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳು, ಎಡಭಾಗದಲ್ಲಿ ಸಿಮ್ ಕಾರ್ಡ್ ಟ್ರೇ, ಕೆಳಭಾಗದಲ್ಲಿ ಆಡಿಯೋಗೆ 3.5 ಮಿಮೀ ಜ್ಯಾಕ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಹಾಗೂ ಲೌಡ್‌ಸ್ಪೀಕರ್ ಗ್ರಿಲ್‌ಗಳಿವೆ. 1ಟಿಬಿವರೆಗೂ ಮೆಮೊರಿ (ಮೈಕ್ರೋ ಎಸ್‌ಡಿ) ಕಾರ್ಡ್ ಹಾಕಿ, ಸ್ಟೋರೇಜ್ ವಿಸ್ತರಿಸಬಹುದು. ತೂಕ 193 ಗ್ರಾಂ.

60Hz ರೀಫ್ರೆಶ್ ರೇಟ್ ಮತ್ತು ದಪ್ಪನೆಯ ಬೆಝೆಲ್ (ಅಂಚುಗಳು) ಕೆಲವರಿಗೆ ಇಷ್ಟವಾಗಲಾರದು. ಆದರೆ, ಇದೇನೂ ದೊಡ್ಡ ಸಮಸ್ಯೆಯೂ ಅಲ್ಲ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಇರುವುದರಿಂದ, ಸುಲಭವಾಗಿ ಗೀರು ಆಗಲಾರದು. AMOLED ಡಿಸ್‌ಪ್ಲೇ ಮೂಲಕ ಬಣ್ಣಗಳು ಅತ್ಯಂತ ಸುಂದರವಾಗಿ, ಪ್ರಖರವಾಗಿ ಕಾಣಿಸುತ್ತವೆ. ಹೈಡೆಫಿನಿಶನ್ (ಹೆಚ್‌ಡಿ) ಗುಣಮಟ್ಟದ ವಿಡಿಯೊಗಳು ತುಂಬ ಚೆನ್ನಾಗಿ ಮೂಡಿಬರುತ್ತವೆ. ಎಂ ಸರಣಿಯಲ್ಲೇ ಮೊದಲ ಬಾರಿಗೆ ಡಿಸ್‌ಪ್ಲೇ (ಸ್ಕ್ರೀನ್) ಮೇಲೆಯೇ ಫಿಂಗರ್‌ಪ್ರಿಂಟ್ ಸೆನ್ಸರ್ ಅಳವಡಿಸಲಾಗಿದ್ದು, ಲಾಗಿನ್ ಸುರಕ್ಷಿತವಾಗಿರಿಸುತ್ತದೆ. ಇದು ಬೆರಳನ್ನು ಕ್ಷಿಪ್ರವಾಗಿ ಸ್ಕ್ಯಾನ್ ಮಾಡಿ ಸ್ಕ್ರೀನ್ ಅನ್‌ಲಾಕ್ ಆಗುತ್ತದೆ.

ಇದರ ವಿಶೇಷತೆಗಳಲ್ಲೊಂದು ಎಂದರೆ, ಎಡ್ಜ್ ಪ್ಯಾನೆಲ್ಸ್. ಅಂದರೆ ಸ್ಕ್ರೀನ್‌ನ ಎಡಭಾಗದಲ್ಲಿ ಒಂದು ಫಲಕ ಪಟ್ಟಿಯನ್ನು ಡಿಸ್‌ಪ್ಲೇಯಲ್ಲೇ ಪ್ರದರ್ಶಿಸಬಹುದು. ಇದರಲ್ಲಿ ಇತ್ತೀಚಿನ ಆ್ಯಪ್‌ಗಳು, ಸಂಪರ್ಕ ಸಂಖ್ಯೆಗಳು ಅಥವಾ ಬೇರೆ ಏನನ್ನಾದರೂ ನಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. ಉಳಿದಂತೆ ಸಾಮಾನ್ಯ ಸ್ಮಾರ್ಟ್ ಕಾರ್ಯಗಳಾದ, ಫೋನ್ ಎತ್ತಿಕೊಂಡಾಕ್ಷಣ ಸ್ಕ್ರೀನ್ ಆನ್ ಆಗುವುದು, ಡಬಲ್ ಟ್ಯಾಪ್ ಮಾಡಿದ ತಕ್ಷಣ ಸ್ಕ್ರೀನ್ ಆನ್ ಅಥವಾ ಆಫ್ ಆಗುವುದು, ಸ್ಕ್ರೀನನ್ನೇ ನೋಡುತ್ತಿರುವಾಗ ಸ್ಕ್ರೀನ್ ಲಾಕ್ ಆಗದಂತಹಾ ವ್ಯವಸ್ಥೆ, ಫೋನ್ ಮೇಲೆ ಕೈ ಅಡ್ಡಲಾಗಿ ಹಿಡಿದರೆ ಅಥವಾ ಮಗುಚಿದರೆ ರಿಂಗಿಂಗ್ ಧ್ವನಿ ನಿಲ್ಲುತ್ತದೆ.

ಕ್ಯಾಮೆರಾ
48 ಮೆಗಾಪಿಕ್ಸೆಲ್‌ನ ಪ್ರಧಾನ ಸೆನ್ಸರ್ ಜೊತೆಗೆ ನಾಲ್ಕು ಲೆನ್ಸ್‌ಗಳ ಕ್ಯಾಮೆರಾ ಸೆಟಪ್ ಹಿಂಭಾಗದಲ್ಲಿದೆ. 8MP ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್, 5MP ಡೆಪ್ತ್ ಹಾಗೂ 5MP ಮ್ಯಾಕ್ರೋ ಸೆನ್ಸರ್‌ಗಳಿವೆ. 20 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾವಿದ್ದು, ಉತ್ತಮ ಫೋಟೊಗಳನ್ನು ಒದಗಿಸುತ್ತದೆ. ಚಿತ್ರಗಳು ತೀರಾ ಸ್ಪಷ್ಟವಾಗಿ, ಬಣ್ಣಗಳು ಕೂಡ ನಿಖರವಾಗಿರುವಷ್ಟರ ಮಟ್ಟಿಗೆ ಸ್ಕ್ರೀನ್‌ನಲ್ಲಿ ಕಾಣಿಸಿದವು. ಹೊರಾಂಗಣಗಳಲ್ಲಂತೂ ಅತ್ಯುತ್ತಮ ಚಿತ್ರಗಳು, ವಿಡಿಯೊಗಳು ಮೂಡಿಬರುತ್ತವೆ. ಇದರಲ್ಲಿ ಪ್ರೋ, ಪನೋರಮಾ, ಪೋರ್ಟ್ರೇಟ್ ಮುಂತಾದ ಮೋಡ್‌ಗಳಿವೆ. ಚಿತ್ರಗಳನ್ನು ಬೇರೆ ಸಾಧನಗಳಿಗೆ ಅಥವಾ ಬೇರೆಯವರಿಗೆ ಕಳುಹಿಸುವಾಗ ಲೊಕೇಶನ್ ಡೇಟಾ (ಸ್ಥಳ ಮಾಹಿತಿ) ಅಳಿಸಿಹಾಕುವ ವ್ಯವಸ್ಥೆಯಿದೆ. ಅದೇ ರೀತಿ, ಸೆಲ್ಫೀ ತೆಗೆದುಕೊಳ್ಳಬೇಕಿದ್ದರೆ, ಸ್ಕ್ರೀನ್ ಮೇಲಿರುವ ಕ್ಯಾಮೆರಾ ಬಟನ್ ಒತ್ತುವ ಬದಲಾಗಿ ನಮ್ಮ ಅಂಗೈಯನ್ನು ತೋರಿಸಿ, ಎರಡು ಸೆಕೆಂಡಿನಲ್ಲಿ ಹಿಂತೆಗೆದುಕೊಂಡರಾಯಿತು. ಸೆಲ್ಫೀ ಕ್ಲಿಕ್ ಆಗಿರುತ್ತದೆ.

ಕಾರ್ಯನಿರ್ವಹಣೆ ಹೇಗಿದೆ?
6GB RAM ಹಾಗೂ ಒಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 750ಜಿ ಪ್ರೊಸೆಸರ್, 128ಜಿಬಿ ಮೆಮೊರಿ – ಈ ಸ್ಪೆಸಿಫಿಕೇಶನ್ ಜೊತೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ42ನ ಕಾರ್ಯನಿರ್ವಹಣೆಯು ಗಮನ ಸೆಳೆಯುತ್ತದೆ. ವಿಡಿಯೊ ಪ್ಲೇ ಆಗುವಾಗ ಮತ್ತು ವಿಶೇಷವಾಗಿ ಹೆಚ್ಚು ತೂಕದ (ಗ್ರಾಫಿಕ್ಸ್ ಇರುವ) ಗೇಮ್ಸ್ ಆಡುವಲ್ಲಿಯೂ ಯಾವುದೇ ವಿಳಂಬ (ಲ್ಯಾಗ್) ಆದ ಸಂದರ್ಭ ಎದುರಾಗಿಲ್ಲ. ಶಕ್ತಿಶಾಲಿ ಚಿಪ್‌ಸೆಟ್ ಇರುವುದರಿಂದ ಇದು ಸಾಧ್ಯವಾಗಿದೆ. ಫೋನ್‌ನಲ್ಲಿ ಕೆಲಸ ಮಾಡುವಾಗ ಸುಲಲಿತ ಎಂಬ ಭಾವನೆ ಬರುತ್ತದೆ. ಬ್ರೌಸರ್‌ನಲ್ಲಿ ಹಲವು ಟ್ಯಾಬ್‌ಗಳನ್ನು ತೆರೆದು ಕೆಲಸ ಮಾಡಿದರೂ, ಸಮಸ್ಯೆಯಾಗಲಿಲ್ಲ.

ಆಡಿಯೋ ಬಗ್ಗೆ ಹೇಳುವುದಾದರೆ, ಹಾಡುಗಳೆಲ್ಲವನ್ನೂ ಸ್ಪೀಕರ್ ಅಥವಾ ಹೆಡ್‌ಫೋನ್ ಮೂಲಕ ಸಮಾಧಾನಕರವಾಗಿಯೇ ಆಲಿಸಬಹುದು. ಕರೆ ಸ್ವೀಕರಿಸಿದಾಗ ಕರೆ ಮಾಡಿದವರ ಧ್ವನಿಯೂ ಕೆಲವೊಮ್ಮೆ ಕೇಳಿಸುವ ಮೂಲಕ, ಮೌನ ವಾತಾವರಣದಲ್ಲಿ ಒಂದಿಷ್ಟು ಖಾಸಗಿತನಕ್ಕೆ ಸಮಸ್ಯೆಯಾಗಬಹುದು. ಆಂಡ್ರಾಯ್ಡ್ 11 ಆಧಾರದಲ್ಲಿ ಸ್ಯಾಮ್‌ಸಂಗ್ ರೂಪಿಸಿರುವ ಒನ್ ಯುಐ ಕಾರ್ಯಾಚರಣಾ ವ್ಯವಸ್ಥೆ ಇದರಲ್ಲಿದೆ. ಇನ್ನು ಮೂರು (ಆವೃತ್ತಿಗಳ) ಅಪ್‌ಡೇಟ್ ಲಭ್ಯ ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ.

ಇದರ ಮತ್ತೊಂದು ವಿಶೇಷತೆ ಎಂದರೆ, ಸುರಕ್ಷತೆ. ನಮ್ಮ ಡೇಟಾದ ಗೌಪ್ಯತೆಗಾಗಿ ಅಥವಾ ಖಾಸಗಿತನಕ್ಕಾಗಿ ಅಂತರ್-ನಿರ್ಮಿತವಾಗಿರುವ ಆ್ಯಪ್ ಇದರಲ್ಲಿದೆ. ಫೋನ್‌ನಲ್ಲಿ ಬ್ಲಾಟ್‌ವೇರ್ (ಸ್ಯಾಮ್‌ಸಂಗ್ ಅಳವಡಿಸಿರುವ ಕೆಲವು) ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಲಾಗಿದೆಯಾದರೂ, ನಮಗೆ ಅನಗತ್ಯವೆಂದು ಕಂಡುಬಂದವನ್ನು ಅನ್-ಇನ್‌ಸ್ಟಾಲ್ ಮಾಡಬಹುದಾಗಿದೆ.

5000 mAh ಬ್ಯಾಟರಿ ಜೊತೆಗೆ 15W ವೇಗದ ಚಾರ್ಜಿಂಗ್ ವ್ಯವಸ್ಥೆಯಿದೆ. ಒಂದು ಬಾರಿ ಚಾರ್ಜ್ ಮಾಡಿ, ಇಡೀ ದಿನ ಹಾಟ್‌ಸ್ಪಾಟ್ ಆನ್ ಮಾಡಿಟ್ಟರೂ, ಶೇ.20 ಬ್ಯಾಟರಿ ಚಾರ್ಜ್ ಉಳಿದಿತ್ತು. ಇಂಟರ್ನೆಟ್ ಹಾಟ್‌ಸ್ಪಾಟ್ ಆನ್ ಮಾಡದಿದ್ದರೆ ಮತ್ತು ಸಾಮಾನ್ಯ ಬಳಕೆಯಲ್ಲಿ ಎರಡು ದಿನಕ್ಕೆ ಅಡ್ಡಿಯಿಲ್ಲ. 0ಯಿಂದ 100%ವರೆಗೆ ಪೂರ್ತಿಯಾಗಿ ಚಾರ್ಜ್ ಆಗಲು ಸುಮಾರು 2 ಗಂಟೆ ಬೇಕಾಗುತ್ತದೆ.

ಒಟ್ಟಾರೆ ಹೇಗಿದೆ?
ದೊಡ್ಡ ಸ್ಕ್ರೀನ್, ಆದರೆ ಸ್ಲಿಮ್ ಆಗಿರಬೇಕು; ಹೆಚ್ಚು ಬ್ಯಾಟರಿ ಇರಬೇಕು, ಆದರೆ ತೂಕ ಜಾಸ್ತಿ ಇರಬಾರದು; 5ಜಿ ತಂತ್ರಜ್ಞಾನಕ್ಕೆ ಸಿದ್ಧವಾಗಿರಬೇಕು. ಈ ಸ್ಪೆಸಿಫಿಕೇಶನ್‌ಗಳನ್ನು ಬಯಸುವವರಿಗೆ ಸೂಕ್ತವಾಗಿದೆ ಈ ಫೋನ್. ಬೆಲೆ. ರೂ. 21,999.

Samsung Galaxy M42 Gadget Review Published in Prajavani on 01/02 Jun 2021

LEAVE A REPLY

Please enter your comment!
Please enter your name here