Samsung Galaxy A54 Review: ಮಧ್ಯಮ ಶ್ರೇಣಿಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳ ಆಂಡ್ರಾಯ್ಡ್ ಫೋನ್

0
288

Samsung Galaxy A54 Review: ಗ್ಯಾಲಕ್ಸಿ ಎ ಸರಣಿಯ ಫೋನ್‌ಗಳು ಜನಪ್ರಿಯವಾಗಿರುವಂತೆಯೇ ಇದೇ ಸರಣಿಯಲ್ಲಿ ಇತ್ತೀಚೆಗೆ ಎರಡು ಫೋನ್‌ಗಳನ್ನು ಸ್ಯಾಮ್‌ಸಂಗ್ ಭಾರತೀಯ ಮಾರುಕಟ್ಟೆಗೆ ಘೋಷಿಸಿದೆ. ಎ54 ಹಾಗೂ ಎ34. ಎರಡು ಕೂಡ 5ಜಿ ಬೆಂಬಲಿಸುವ ಫೋನ್‌ಗಳೇ. ಬಿಡುಗಡೆಗೆ ಮುನ್ನ ಪ್ರಜಾವಾಣಿಗೆ ದೊರೆತ A54 5ಜಿ ಸಾಧನ ಹೇಗಿದೆ? ಎರಡು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ವಿನ್ಯಾಸ
ವಿನೂತನ ವಿನ್ಯಾಸದಲ್ಲಿ ಬಂದಿರುವ ಎ54, ಗ್ಯಾಲಕ್ಸಿ ಎಸ್23 ಪ್ರೀಮಿಯಂ ಫೋನನ್ನೇ ಹೋಲುವಂತಿದೆ. 6.4 ಇಂಚಿನ ಅಮೋಲೆಡ್ ಸ್ಕ್ರೀನ್, 120Hz ರೀಫ್ರೆಶ್ ರೇಟ್ ಇರುವ ಎ54 ಫೋನ್‌ನ ಹಿಂಭಾಗದಲ್ಲಿಯೂ ಗೊರಿಲ್ಲಾ ಗ್ಲಾಸ್ ಇದ್ದು, ಆಕರ್ಷಕವಾಗಿದೆ. ಮತ್ತು ಆಕಸ್ಮಿಕವಾಗಿ ಕೈಯಿಂದ ಕೆಳಗೆ ಬಿದ್ದರೂ ಈ ಗೊರಿಲ್ಲಾ ಗಾಜು, ಸಾಧನಕ್ಕೆ ರಕ್ಷಣೆ ಒದಗಿಸುತ್ತದೆ. ಸ್ಕ್ರೀನ್ ಗಾತ್ರವು ಬಹುಶಃ ದೊಡ್ಡ ಸ್ಕ್ರೀನ್ ಮತ್ತು ಚಿಕ್ಕ ಸ್ಕ್ರೀನ್ ಬಯಸುವ- ಉಭಯರಿಗೂ ಇಷ್ಟವಾಗುವಂತೆ ಎರಡರ ನಡುವಿದೆ ಎನ್ನಬಹುದು. ಐಪಿ67 ರೇಟಿಂಗ್ ಮೂಲಕ ದೂಳಿನಿಂದ ರಕ್ಷಣೆಯಿದೆ ಹಾಗೂ 1 ಮೀಟರ್ ಆಳದಲ್ಲಿನ ನೀರಿನ ಒತ್ತಡವನ್ನು ಅರ್ಧ ಗಂಟೆ ಕಾಲ ತಾಳಿಕೊಳ್ಳಬಲ್ಲದು. ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆನ್ಸರ್‌ಗಳು ಲಂಬವಾಗಿ ಜೋಡಣೆಯಾಗಿದ್ದು, ಪಕ್ಕದಲ್ಲೊಂದು ಫ್ಲ್ಯಾಶ್ ಇದೆ. ಚೌಕಟ್ಟು ನಾಲ್ಕೂ ಮೂಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿದ್ದು, ಚಂದದ ನೋಟ ಹೊಂದಿದೆ. ಮುಂಭಾಗದ ಸ್ಕ್ರೀನ್‌ನ ಮೇಲ್ಭಾಗದ ಡ್ರಾಪ್ ನಾಚ್‌ನಲ್ಲಿ ಸೆಲ್ಫೀ ಕ್ಯಾಮೆರಾ ಸ್ಥಿತವಾಗಿದೆ. ಕೈಯಲ್ಲಿ ಹಿಡಿದುಕೊಳ್ಳಲು ಅನುಕೂಲಕರವಾಗಿದ್ದು, ತೂಕವೂ ಕಡಿಮೆ.

ಡಿಸ್‌ಪ್ಲೇಯಲ್ಲಿ ಸ್ಕ್ರೀನ್‌ನ ಸುತ್ತಲೂ ಸ್ವಲ್ಪ ಬೆಝೆಲ್ ಇದೆ. 1000 ನಿಟ್ಸ್ ಪ್ರಖರತೆಗೆ ಹೊಂದಿಕೊಳ್ಳುವುದರಿಂದ, ಬಿರು ಬಿಸಿಲಿನಲ್ಲಿಯೂ ಸ್ಕ್ರೀನ್ ಸ್ಪಷ್ಟವಾಗಿ ಕಾಣಿಸುತ್ತದೆ.

ಕ್ಯಾಮೆರಾಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ54ನಲ್ಲಿ 50 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಪ್ರಧಾನ ಸೆನ್ಸರ್ ಜೊತೆಗೆ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್ ಇದೆ. 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆ್ಯಂಗಲ್ ಲೆನ್ಸ್ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೊ ಲೆನ್ಸ್ ಇದ್ದು, ಸೆಲ್ಫೀ ಕ್ಯಾಮೆರಾ 32 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದೆ. ಎ54 ಸಾಧನದ ಕ್ಯಾಮೆರಾ ಸೆಟಪ್ ಚೆನ್ನಾಗಿದ್ದು, ವಿಭಿನ್ನ ಬೆಳಕಿನ ಪರಿಸ್ಥಿತಿಗಳಲ್ಲಿ ಉತ್ತಮ ಫೋಟೊಗಳನ್ನೇ ಒದಗಿಸುತ್ತದೆ. ವಿಡಿಯೊ ಕೂಡ ಚೆನ್ನಾಗಿ ರೆಕಾರ್ಡ್ ಆಗುತ್ತದೆ.

ಫೋನ್‌ನಲ್ಲಿರುವ ಸ್ವಯಂಚಾಲಿತ ರಾತ್ರಿ ಮೋಡ್ ವಿಶೇಷವಾಗಿ ಗಮನ ಸೆಳೆದಿದೆ. ಅಂದರೆ, ಬೆಳಕು ಕಡಿಮೆಯಿದ್ದಾಗ ಸ್ವಯಂಚಾಲಿತವಾಗಿ ಕ್ಯಾಮೆರಾ ಈ ಮೋಡ್‌ಗೆ ಬದಲಾಗುತ್ತದೆ ಮತ್ತು ವಿಷಯವಸ್ತುವಿನ ಮೇಲೆ ಹೆಚ್ಚು ಬೆಳಕು ಇರುವಂತೆ ನೋಡಿಕೊಳ್ಳುವುದರಿಂದ ಚಿತ್ರಗಳು ಸ್ಪಷ್ಟವಾಗಿ ಮೂಡಿಬರುತ್ತವೆ.

ಕಾರ್ಯಾಚರಣೆ
ಎಕ್ಸಿನೋಸ್ 1380 ಪ್ರೊಸೆಸರ್, 8 ಜಿಬಿ RAM ಹಾಗೂ 256 ಜಿಬಿ ಸ್ಟೋರೇಜ್ ಇರುವ ಎ54 ಫೋನ್ ದೈನಂದಿನ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗಿಲ್ಲ. ಸಿಒಡಿ, ಆಸ್ಫಾಲ್ಟ್ 8 ಮುಂತಾದ ಗೇಮ್‌ಗಳನ್ನು ಆಡುವಾಗಲೂ ಯಾವುದೇ ಲ್ಯಾಗ್ ಅಥವಾ ವಿಳಂಬವಾಗಲೀ, ಸ್ಥಾಗಿತ್ಯವಾಗಲೀ ಗಮನಕ್ಕೆ ಬರಲಿಲ್ಲ. ಆಂಡ್ರಾಯ್ಡ್ 13 ಒಎಸ್ ಆಧಾರಿತ ಒನ್‌ಯುಐ 5.1 ಕಾರ್ಯಾಚರಣಾ ವ್ಯವಸ್ಥೆಯಿದ್ದು ಹಲವು ವೈಶಿಷ್ಟ್ಯಗಳು ಗಮನ ಸೆಳೆಯುತ್ತವೆ. ಫಿಂಗರ್‌ಪ್ರಿಂಟ್ ಸೆನ್ಸರ್ ಸ್ಕ್ರೀನ್ ಮೇಲೆಯೇ ಇದ್ದು, ಮುಖ ಗುರುತಿಸುವ ತಂತ್ರಜ್ಞಾನವೂ ಚೆನ್ನಾಗಿ ಕೆಲಸ ಮಾಡುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಈ ಬಾರಿ ಸ್ಯಾಮ್‌ಸಂಗ್ ನಾಲ್ಕು ಆಂಡ್ರಾಯ್ಡ್ ಅಪ್‌ಗ್ರೇಡ್ಸ್ ಮತ್ತು ಐದು ವರ್ಷಗಳ ಸುರಕ್ಷತಾ ಅಪ್‌ಡೇಟ್‌ಗಳನ್ನೂ ನೀಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ನಾಲ್ಕೈದು ವರ್ಷ ಬಳಸಲು ಇಚ್ಛಿಸುವವರಿಗೆ ಯಾವುದೇ ಸಮಸ್ಯೆಯಾಗದು. ಕೆಲವು ಬ್ಲಾಟ್‌ವೇರ್‌ಗಳಿವೆ ಮತ್ತು ಅವುಗಳಲ್ಲಿ ಕೆಲವನ್ನು ಅನ್‌ಇನ್‌ಸ್ಟಾಲ್ ಮಾಡಬಹುದು.

5ಜಿ ನೆಟ್‌ವರ್ಕ್‌ನಲ್ಲಿ ಸಮಸ್ಯೆಯಾಗಿಲ್ಲ. 5000mAh ಬ್ಯಾಟರಿ ಇದ್ದು, ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಯಾವುದೇ ತೊಂದರೆಯಾಗಿಲ್ಲ. ಹೆಚ್ಚು ಗೇಮಿಂಗ್ ಅಥವಾ ಹೆಚ್ಚು ವಿಡಿಯೊ ಪ್ಲೇ ಮಾಡಿದರೆ ಹಾಗೂ ಸೋಷಿಯಲ್ ಮೀಡಿಯಾ ಬ್ರೌಸ್ ಮಾಡಿದರೆ ಬ್ಯಾಟರಿ ಚಾರ್ಜ್ ಸಹಜವಾಗಿ ಬೇಗನೇ ಕಡಿಮೆಯಾಗಬಹುದು. 25W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುವುದರಿಂದ ಒಂದುವರೆ ಗಂಟೆಯೊಳಗೆ ಶೂನ್ಯದಿಂದ ಪೂರ್ತಿವರೆಗೆ ಚಾರ್ಜ್ ಮಾಡಬಹುದು. ಬಾಕ್ಸ್‌ನಲ್ಲಿ ಚಾರ್ಜರ್ ನೀಡಲಾಗಿಲ್ಲ, ಆದರೆ ಟೈಪ್ ಸಿ ಕೇಬಲ್ ಇದೆ.

ವಿಶೇಷತೆಗಳು
ಎಂದಿನಂತೆ ಫೋಟೊದಿಂದ ಅನಗತ್ಯ ಭಾಗಗಳನ್ನು ಅಳಿಸಿ, ಹಿನ್ನೆಲೆಯನ್ನು ಸ್ವಯಂಚಾಲಿತವಾಗಿ ಸರಿಪಡಿಸಬಲ್ಲ ಆಬ್ಜೆಕ್ಟ್ ಇರೇಸರ್ ಎಂಬ ತಂತ್ರಜ್ಞಾನವು ಇದರಲ್ಲಿ ಮತ್ತಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ. ಅಂತೆಯೇ, ಫೋಟೊದಲ್ಲಿ ಇರಬಹುದಾದ ನೆರಳನ್ನು ಅಥವಾ ಪ್ರತಿಬಿಂಬವನ್ನು ಕೂಡ ಅಳಿಸಬಹುದಾಗಿದೆ. ಹಳೆಯ ಫೋಟೊಗಳಿಗೆ ಹೊಸತನದ ಸ್ಪರ್ಶ ನೀಡಲು ಇದು ಅನುಕೂಲ. ಜೊತೆಗೆ, ಯಾಂತ್ರಿಕ ಬುದ್ಧಿಮತ್ತೆ (ಎಐ) ಆಧಾರಿತವಾದ ಫೋಟೊ ಎನ್‌ಹ್ಯಾನ್ಸರ್ ತಂತ್ರಜ್ಞಾನವು ಚಿತ್ರಗಳ ಮೌಲ್ಯವರ್ಧನೆ ಮಾಡಿ, ಅವುಗಳನ್ನು ಮತ್ತಷ್ಟು ಆಕರ್ಷಕವಾಗಿಸುತ್ತದೆ.

ಇನ್ನೊಂದು ಗಮನಿಸಿದ ವೈಶಿಷ್ಟ್ಯವೆಂದರೆ, ಇದರಲ್ಲಿ ಪ್ರಾಯೋಗಿಕವಾಗಿ ಅಳವಡಿಸಿರುವ ವಾಯ್ಸ್ ಫೋಕಸ್ ಎಂಬ ತಂತ್ರಜ್ಞಾನ. ಇದು ನಾವು ಗದ್ದಲದ ವಾತಾವರಣದಲ್ಲಿ ಮಾತನಾಡುತ್ತಿದ್ದರೂ, ನಮ್ಮ ಧ್ವನಿಯನ್ನಷ್ಟೇ ಸ್ವೀಕರಿಸಿ, ಕರೆಯ ಮತ್ತೊಂದು ಭಾಗದಲ್ಲಿರುವವರಿಗೆ ತಲುಪಿಸುತ್ತದೆ. ಅಂದರೆ, ನಮ್ಮ ಸುತ್ತಲಿನ ಸದ್ದುಗಳೆಲ್ಲ ಫಿಲ್ಟರ್ ಆಗಿ, ನಮ್ಮೊಂದಿಗೆ ಮಾತನಾಡುತ್ತಿರುವವರಿಗೆ ನಮ್ಮ ಧ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ.

ಫೋನ್‌ನಲ್ಲಿರುವ ಡೇಟಾ ಡ್ಯಾಶ್‌ಬೋರ್ಡ್ ಮೂಲಕ ಡೇಟಾ (ಇಂಟರ್ನೆಟ್) ಅನ್ನು ಬೇರೆ ಫೋನ್‌ಗಳೊಂದಿಗೆ ಹಂಚಿಕೊಳ್ಳುವ ಸಂದರ್ಭದಲ್ಲಿ (ಟಿದರಿಂಗ್) ಡೇಟಾಕ್ಕೆ ಮಿತಿಯನ್ನೂ ಹೇರಬಹುದಾಗಿದೆ.

ಗೇಮಿಂಗ್, ವಿಡಿಯೊ ಹಾಗೂ ಉತ್ತಮ ಕ್ಯಾಮೆರಾದ ಫೋನ್ ಬೇಕೆಂದುಕೊಳ್ಳುವವರಿಗೆ 40 ಸಾವಿರ ರೂ. ಒಳಗಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ54 5ಜಿ ಫೋನ್ ಇಷ್ಟವಾಗಬಹುದು. ಪ್ರಸ್ತುತ ಇದರ ಬೆಲೆ 8ಜಿಬಿ+128GB ಮಾದರಿಗೆ ₹38,999 ಹಾಗೂ 8ಜಿಬಿ+256GB ಮಾದರಿಗೆ ₹40,999. ಮೂರು ಆಕರ್ಷಕ ಬಣ್ಣಗಳಲ್ಲಿ (ಲೈಮ್, ಗ್ರಾಫೈಟ್ ಹಾಗೂ ಸಿಲ್ವರ್) ಲಭ್ಯ.

Gadget Review by me (Avinash B) Published in Prajavani on 11/12 April 2023

LEAVE A REPLY

Please enter your comment!
Please enter your name here