ಸಾಮಾಜಿಕ ಜಾಲ ತಾಣಗಳು, ವಿಶೇಷವಾಗಿ ಫೇಸ್‌ಬುಕ್ ತೆರೆದುಕೊಂಡು ಕೂತರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಕೇವಲ ಹತ್ತು ನಿಮಿಷ ನೋಡಿ ಬಿಡ್ತೀನಿ ಅಂತ ಕೂತುಬಿಟ್ರೆ, ಸ್ಕ್ರಾಲ್ ಮಾಡುತ್ತಾ ಕೆಳಗೆ ಕೆಳಗೆ ಹೋಗುತ್ತಿರುವಂತೆ ಗಂಟೆ ಸರಿದದ್ದೇ ಗೊತ್ತಾಗುವುದಿಲ್ಲ. ಮೊಬೈಲ್ ಆದರೆ, ಫೋನ್ ಬಿಸಿಯಾಗುತ್ತದೆ, ಬ್ಯಾಟರಿ ಚಾರ್ಜ್ ಕೂಡ ಬೇಗನೇ ಖಾಲಿಯಾಗುತ್ತದೆ. ಆದರೆ, ಈ ಅವಸರದ ಯುಗದಲ್ಲಿ ಸಮಯ ಹಾಗೂ ಬ್ಯಾಟರಿಯ ವ್ಯಯಕಾರಕವಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತು ವಾಟ್ಸ್ಆ್ಯಪ್‌ಗಳನ್ನು ನೋಡುವುದರಲ್ಲೇ ನಮ್ಮ ದಿನದ ಬಹುತೇಕ ಅವಧಿಯು ಕಳೆದು ಹೋಗುತ್ತಿದೆ, ಬೇರೆ ಯಾವುದೇ ಕೆಲಸಗಳಿಗೆ ‘ಪುರುಸೊತ್ತೇ ಇಲ್ಲ’ ಅಂತ ಹಲುಬುವುದು ಕೂಡ ಹೆಚ್ಚಾಗುತ್ತಿದೆ. ಅತಿಯಾದರೆ ಅಮೃತವೂ ವಿಷವಾಗಿ ಪರಿಣಮಿಸುತ್ತದೆ ಎಂಬುದು ಈ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲ ತಾಣಗಳಿಗೆ ಪಕ್ಕಾ ಅನ್ವಯವಾಗಿಬಿಡುತ್ತದೆ. ಈ ಫೇಸ್‌ಬುಕ್ ಚಾಳಿಯಿಂದ ಹೊರಬರಲು ಒಂದು ಪರಿಹಾರೋಪಾಯವಿದೆ.
ಜತೆಗೆ, ನಮ್ಮ ಖಾಸಗಿ ಸಂಗತಿಗಳು ಫೇಸ್‌ಬುಕ್, ಗೂಗಲ್ ಮತ್ತಿತರ ಸಾಮಾಜಿಕ ತಾಣಗಳಲ್ಲಿ (ಸೂಕ್ತವಾದ ಮುನ್ನೆಚ್ಚರಿಕೆ ವಹಿಸಿಕೊಳ್ಳದಿದ್ದರೆ) ಬಟಾಬಯಲಾಗಿರುತ್ತವೆ ಎಂಬ ಪ್ರೈವೆಸಿ ಆತಂಕವೂ ಇದೆ. ಎಚ್ಚರಿಕೆ ವಹಿಸಿದರೂ, ಡೇಟಾ ಕದಿಯುವಿಕೆ, ಸೋರಿಕೆ ಇತ್ಯಾದಿಗಳ, ವಂಚನೆಯ ಮೂಲಕ ನಮ್ಮ ಖಾಸಗಿ ಮಾಹಿತಿಯ ಮಾರಾಟ ಮುಂತಾದ ವರದಿಗಳನ್ನು ನಾವು ಓದುತ್ತಲೇ ಇರುತ್ತೇವೆ. ಈ ಎರಡು ಕಾರಣಗಳಿಗೆ, ಫೇಸ್‌ಬುಕ್ ಸಹವಾಸವೇ ಬೇಡ ಅಂತಂದುಕೊಳ್ಳುವವರಿಗೆ ಫೇಸ್‌ಬುಕ್ ಖಾತೆಯನ್ನು ಸಂಪೂರ್ಣವಾಗಿ ಅಳಿಸುವ ಅಥವಾ ತಾತ್ಕಾಲಿಕವಾಗಿ ಡಿ-ಆ್ಯಕ್ಟಿವೇಟ್ ಮಾಡುವ ಆಯ್ಕೆಯೂ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.
ಡಿಆ್ಯಕ್ಟಿವೇಟ್ ಮಾಡುವುದು:
ಯಾಕೆ ಮಾಡಬೇಕು? ಬೇರೆ ಪ್ರಮುಖ ಕೆಲಸಗಳಿಗೆ ಸಮಯವೇ ಇಲ್ಲ ಅಂತ ನಿಮಗನಿಸುತ್ತಿದ್ದರೆ, ಒಂದು ವಾರ ಕಾಲ ಫೇಸ್‌ಬುಕ್ ಖಾತೆಯನ್ನು ಡಿಆ್ಯಕ್ಟಿವೇಟ್ ಮಾಡಿ ನೋಡಿ. ಬೇರೆಲ್ಲ ಕೆಲಸಗಳೂ ಹೆಚ್ಚು ವೇಗವಾಗಿ ಆಗುತ್ತಿದೆ, ಕಚೇರಿ, ಮನೆಯ ಕೆಲಸಕಾರ್ಯಗಳು ಸುಸೂತ್ರವಾಗಿ ಆಗತೊಡಗುತ್ತಿವೆ ಎಂಬುದು ಗಮನಕ್ಕೆ ಬಂದು, ಫೇಸ್‌ಬುಕ್‌ಗೆ ವ್ಯಯಿಸುವ ಸಮಯವನ್ನು ನಿಯಂತ್ರಿಸಬಲ್ಲೆ ಎಂಬ ಧೈರ್ಯವಿದ್ದರೆ, ಪುನಃ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಅಂಥ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ನೀವು ಹಂಚಿಕೊಂಡಿರುವ ಫೋಟೋ, ವೀಡಿಯೊ, ಲೇಖನ ಮತ್ತಿತರ ಪೋಸ್ಟ್‌ಗಳು ಹಾಗೆಯೇ ಗುಪ್ತವಾಗಿ ಇರುತ್ತವೆ. ಇದನ್ನು ಮಾಡಲು ಹೀಗೆ ಮಾಡಿ: ಫೇಸ್‌ಬುಕ್‌ಗೆ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ತಲೆಕೆಳಗಾದ ತ್ರಿಕೋನಾಕಾರದ ಪುಟ್ಟ ಮೆನು ಐಕಾನ್ ಒತ್ತಿದಾಗ, ಕೆಳಗಡೆ ‘ಲಾಗೌಟ್’ನ ಮೇಲ್ಭಾಗದಲ್ಲಿ ‘ಸೆಟ್ಟಿಂಗ್ಸ್’ ಕಾಣಿಸುತ್ತದೆ. ನಂತರ ಎಡ ಮೇಲ್ಭಾಗದಲ್ಲಿ ‘ಯುವರ್ ಫೇಸ್‌ಬುಕ್ ಇನ್ಫಾರ್ಮೇಶನ್’ ಅಂತ ಇರುವುದನ್ನು ಕ್ಲಿಕ್ ಮಾಡಿ. ಬಲಭಾಗದಲ್ಲಿರುವ ಆಯ್ಕೆಗಳಲ್ಲಿ ಕೊನೆಯದು – ‘ಡಿಲೀಟ್ ಯುವರ್ ಅಕೌಂಟ್ ಆ್ಯಂಡ್ ಇನ್ಫಾರ್ಮೇಶನ್’ ಅಂತ ಕ್ಲಿಕ್ ಮಾಡಿ. ಏನೂ ಆಗಲ್ಲ, ಭಯಬೇಡ, ತಕ್ಷಣ ಡಿಲೀಟ್ ಆಗುವುದಿಲ್ಲ. ಅಳಿಸುವ ಮುನ್ನ ಮತ್ತೊಮ್ಮೆ ಯೋಚಿಸಲು ಮುಂದೆ ನಿಮಗೆ ಮೂರು ಆಯ್ಕೆಗಳು ಗೋಚರಿಸುತ್ತವೆ. ಬರೇ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಸಕ್ರಿಯವಾಗಿದ್ದುಕೊಂಡು, ಫೇಸ್‌ಬುಕ್ ಪುಟದ ಉಸಾಬರಿ ಬೇಡ ಅಂದುಕೊಂಡರೆ, ಖಾತೆಯನ್ನು ನಿಷ್ಕ್ರಿಯಗೊಳಿಸಲು ‘ಡಿಆ್ಯಕ್ಟಿವೇಟ್ ಅಕೌಂಟ್’ ಕ್ಲಿಕ್ ಮಾಡಿ.
ಡಿಲೀಟ್ ಮಾಡುವುದು:
ಒಂದು ವಾರ ಫೇಸ್‌ಬುಕ್ ಸಂನ್ಯಾಸದಿಂದ ಸಿಕ್ಕಾಪಟ್ಟೆ ಸಮಯ ಉಳಿತಾಯವಾಗಿದೆ, ಫೇಸ್‌ಬುಕ್‌ನಿಂದ ಏನೂ ಪ್ರಯೋಜನವಿಲ್ಲ, ಸಮಯ ಹಾಳು, ವ್ಯರ್ಥ ಚರ್ಚೆಗಳು, ಇದೇ ಸಮಯವನ್ನು ಪ್ರೊಡಕ್ಟಿವ್ ಸಮಯವಾಗಿ ಪರಿವರ್ತಿಸಿಕೊಳ್ಳುತ್ತೇನೆ ಅಂತ ಮನಸ್ಸು ಗಟ್ಟಿ ಮಾಡಿಕೊಂಡರೆ, ಕೊನೆಯಲ್ಲಿರುವ ‘ಡಿಲೀಟ್ ಅಕೌಂಟ್’ ಎಂಬ ನೀಲಿ ಬಟನ್ ಕ್ಲಿಕ್ ಮಾಡಬಹುದು. ಅದಕ್ಕೆ ಮುನ್ನ, ನಿಮ್ಮ ಫೇಸ್‌ಬುಕ್‌ನಲ್ಲಿ ಇದುವರೆಗೆ ಇರುವ ಅಮೂಲ್ಯವಾದ ಫೋಟೋ/ವೀಡಿಯೊ ಹಾಗೂ ಲೇಖನಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ‘ಡೌನ್‌ಲೋಡ್ ಯುವರ್ ಇನ್ಫಾರ್ಮೇಶನ್’ ಕ್ಲಿಕ್ ಮಾಡಿ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂಬುದು ಗಮನದಲ್ಲಿರಲಿ.
ಫೇಸ್‌ಬುಕ್ ಡಿಲೀಟ್ ಮಾಡಿದರೂ, ಅದಕ್ಕೆ ಲಿಂಕ್ ಆಗಿರುವ ಅದೇ ಕಂಪನಿ ಒಡೆತನದ ಇನ್‌ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್‌ನಲ್ಲಿಯೂ ನಿಮ್ಮ ಖಾಸಗಿ ಮಾಹಿತಿ ಇದೆ ಎಂಬುದು ಗಮನದಲ್ಲಿರಿಸಿಕೊಳ್ಳಿ. ನಿರ್ಗಮಿಸಬೇಕೇ, ಬೇಡವೇ ಯೋಚಿಸಿ ತೀರ್ಮಾನ ಕೈಗೊಳ್ಳಿ.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 04 ಫೆಬ್ರವರಿ 2019