ಕೊರೊನಾ ಲಾಕ್‌ಡೌನ್: ಪ್ರಕೃತಿ ಕಲಿಸಿದ ಪಾಠ ಕಲಿತೆವೇ?

0
450

ಹೌದು. ಭೂಮಿಯ ಮೇಲಿರುವುದು ಎಲ್ಲವೂ ನನ್ನದೇ, ಇದರ ಮೇಲೆ ನನಗಷ್ಟೇ ಸಂಪೂರ್ಣ ಅಧಿಕಾರವಿದೆ. ನಾನೇ ಶ್ರೇಷ್ಠ. ನಾನು ಮಾಡುವುದೆಲ್ಲವೂ ಸರಿಯೇ, ನನಗೆ ಜನಬಲವಿದೆ, ಧನ ಬಲವಿದೆ, ದೈವಬಲವೆಲ್ಲ ಇದೆ ಎಂದೆಲ್ಲ ಮೆರೆಯುತ್ತಿದ್ದ ಮಾನವನ ಬದುಕಿನ ಧಾವಂತವನ್ನು ಈ ಕಣ್ಣಿಗೆ ಕಾಣಿಸದಷ್ಟು ಪುಟ್ಟ ವೈರಸ್ ಒಂದು ಹಗ್ಗ ಹಾಕಿ ಜಗ್ಗಿ ನಿಲ್ಲಿಸಿದ್ದು ಸುಳ್ಳಲ್ಲ. ಈ ಜಗ್ಗುವಿಕೆಯಲ್ಲಿ ಅಹಂಕಾರ, ಮದ, ಮಾತ್ಸರ್ಯಗಳಿಲ್ಲದೆ, ಹಾಸಿಗೆಯಿದ್ದಷ್ಟು ಕಾಲುಚಾಚುವ ಮಂದಿಗಳ ಬದುಕು ಕೂಡ ದುಸ್ತರವಾದದ್ದು ಸುಳ್ಳಲ್ಲ. ಪ್ರವಾಹ ಬಂದಾಗ ಮೇಲು-ಕೀಳುಗಳೆಂಬ ಭೇದವಿಲ್ಲದೆ ಎಲ್ಲರೂ ಸಂತ್ರಸ್ತರಾಗುತ್ತಾರಲ್ಲವೇ? ಹಾಗೆ.

ಯಾವುದೇ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸದಾ ಕಾಲ ಆಚರಿಸುತ್ತಿರುವ ಸಂಸ್ಕೃತಿ, ಸಂಪ್ರದಾಯಗಳಿಗೆ ವೈಜ್ಞಾನಿಕ ತಳಹದಿಯೊಂದು ಇದ್ದೇ ಇರುತ್ತದೆ. ಮನೆಯಿಂದ ಹೊರ ಹೋದವರು ಒಳಗೆ ಬರುವಾಗ ಕೈಕಾಲು ಮುಖ ತೊಳೆದು ಒಳಬರಬೇಕು, ಉಗುರು ಕಚ್ಚಬಾರದು, ಮೂಗು-ಬಾಯಿ-ಕಿವಿಗೆ ಕೈ ಹಾಕಬಾರದು, ಹಾಕಿದರೂ ಪದೇ ಪದೇ ಕೈಗಳನ್ನು ತೊಳೆದುಕೊಂಡು ಹೈಜೀನಿಕ್ ಆಗಿರಬೇಕು; ಹೊತ್ತು ಹೊತ್ತಿಗೆ ಅನ್ನಾಹಾರ ಸೇವಿಸಬೇಕು, ಸಮಯಕ್ಕೆ ಸರಿಯಾಗಿ ಸೂಕ್ತವಾಗಿ ನಿದ್ದೆ ಮಾಡಬೇಕು; ಸದಾ ಕಾಲ ಆರೋಗ್ಯಕರ ಆಹಾರವನ್ನೇ ಸೇವಿಸುವುದು, ವ್ಯಾಯಾಮ ಮುಂತಾದ ದೈಹಿಕ ಶ್ರಮ – ಇವುಗಳಿಂದ ರೋಗನಿರೋಧಕ ಶಕ್ತಿ ಕಾಪಾಡಿಕೊಳ್ಳಬಹುದು; ಮನೆಯ ಪರಿಸರವನ್ನು ಶುದ್ಧ-ಸ್ವಚ್ಛವಾಗಿರಿಸಿಕೊಳ್ಳಬೇಕು; ಬಾಯಿಗೆ ಕೈ ಅಡ್ಡ ಹಿಡಿದು ವಿನೀತ ಭಾವದಿಂದ, ಗೌರವದಿಂದಲೇ ಬೇರೊಬ್ಬರ ಜೊತೆ ಮಾತನಾಡಬೇಕು (ಎಂಜಲಿನ ಕಣಗಳು ಸಿಡಿಯದಂತೆಯೂ, ಉಸಿರಿನ ಕಣಗಳು ಬೇರೊಬ್ಬರಿಗೆ ತಗುಲದಂತೆ) – ಈ ಎಲ್ಲ ಭಾರತೀಯ ಸಂಸ್ಕಾರಗಳು ನಮಗೆ ಒಂದಾನೊಂದು ಕಾಲದಲ್ಲಿ ಎಲ್ಲವೂ ಅರಿವಿದ್ದವಲ್ಲಾ!

ಆದರೆ, ಜಾಗತೀಕರಣದ ನೇತ್ಯಾತ್ಮಕ ಎಫೆಕ್ಟ್. ವಿದೇಶದ ನೆಲಕ್ಕಷ್ಟೇ ಹೊಂದಿಕೊಳ್ಳುವ, ಅಲ್ಲಿನ ಪರಿಸರಕ್ಕಷ್ಟೇ ಸೂಕ್ತವೆನಿಸುವ, ಅಲ್ಲಿನ ಸಂಪ್ರದಾಯಕ್ಕಷ್ಟೇ ಒಪ್ಪುವ ಎಲ್ಲವನ್ನೂ ನಾವಿಲ್ಲಿ ಅಪ್ಪಿಕೊಂಡೆವು. ಮನೆಯಲ್ಲಿ ಸ್ವಚ್ಛತೆಯೊಂದಿಗೆ ತಯಾರಿಸುವ ಆಹಾರಕ್ಕಿಂತ ಬೀದಿ ಬದಿ, ಕೊಳಚೆ ಹರಿಯುವ ಪಕ್ಕದಲ್ಲೇ ಇರಿಸಲಾದ, ತಯಾರಿಸಲಾದ ಆಹಾರಗಳೇ ನಮ್ಮ ನಾಲಿಗೆಗೆ ಇಷ್ಟವಾಗತೊಡಗಿದವು. ಭಾರತೀಯ ಮಣ್ಣಿಗೆ ಒಪ್ಪುವ ಆಹಾರವು ಸ್ನ್ಯಾಕ್ಸ್ ಆಗಿ ಪರಿವರ್ತಿತವಾದರೆ, ಹೊರ ದೇಶದ ಪಿಜ್ಜಾ, ಬರ್ಗರ್, ಮಂಚೂರಿಗಳೇ ಪ್ರಧಾನ ಆಹಾರದ ಸ್ಥಾನವನ್ನು ಅಲಂಕರಿಸಿದವು. ತತ್ಫಲವಾಗಿ, ಮಕ್ಕಳಿಂದ ಹಿಡಿದು ವಯಸ್ಕರವರೆಗಿನವರು ಅಡ್ಡಡ್ಡವಾಗಿಯೇ ಹೆಚ್ಚು ಬೆಳೆಯತೊಡಗಿದರು.

ಅಂತೆಯೇ, ಮಾತನಾಡುವಾಗ ಬಾಯಿಗೆ ಕೈ ಅಡ್ಡ ಹಿಡಿಯುವುದಿರಲಿ, ಓಡಾಡುವಾಗ ದಾರಿಯಲ್ಲೆಲ್ಲಾ ವ್ಯಾಕ್… ಥೂ ಎನ್ನುತ್ತಲೇ ಉಗುಳತೊಡಗಿದೆವು! ವಾಹನಗಳಿಂದಲೂ ಹೊರಗೆ ಉಗುಳುತ್ತಾ, ಹಿಂದಿನಿಂದ ಬರುವ ವಾಹನ ಸವಾರರ ಮೇಲೆ, ಪಾದಚಾರಿಗಳ ಮೇಲೆ ನಮ್ಮ ದಾರ್ಷ್ಟ್ಯವನ್ನು ಸಿಡಿಸಿದೆವು. ಸೀನು ಬರುವಾಗಲೂ ಮತ್ತೊಬ್ಬರಿಗೆ ತೊಂದರೆಯಾಗದಂತೆ ಕೈ ಅಡ್ಡ ಹಿಡಿದು ಸೀನುವ ಬದಲು ಜೋರಾಗಿಯೇ ಆ್ಯಕ್ಷೀ… ಎನ್ನತೊಡಗಿದೆವು.

ಪರಿಣಾಮ? ಸಿಕ್ಕ ಸಿಕ್ಕಲ್ಲೆಲ್ಲಾ ಥೂ ಎನ್ನುತ್ತಿದ್ದ ಅದೇ ಬಾಯಿಗೆ ಅಡ್ಡಲಾಗಿ ಸದಾ ಕಾಲ ಮುಖಗವಸು ಧರಿಸಬೇಕಾಯಿತು. ಪದೇ ಪದೇ ಕೈಗಳನ್ನು ಸ್ವಚ್ಛಗೊಳಿಸಬೇಕಾಯಿತು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರವನ್ನೇ ತಿನ್ನಬೇಕಾಯಿತು. ಇತರರ ಜೊತೆಗೆ ಮಾತನಾಡುವಾಗ ಗೌರವದಿಂದ ದೂರ ನಿಂತೇ ಮೆದುಸ್ವರದಲ್ಲಿ ಮಾತನಾಡುವಂತಾಯಿತು. ಹೊರಗಿನಿಂದ ತಂದ ತರಕಾರಿ ಮುಂತಾದ ಆಹಾರವನ್ನು ಸ್ವಚ್ಛಗೊಳಿಸಿದ ಬಳಿಕವೇ ತಿನ್ನಲು ಬಳಸಬೇಕಾಯಿತು. ಬೇರೊಬ್ಬರು ಮುಟ್ಟಿದ ಹಣವಾಗಲೀ, ಬಟ್ಟೆಯಾಗಲೀ, ಯಾವುದೇ ವಸ್ತುವಾಗಲೀ… ಸ್ವಚ್ಛಗೊಳಿಸದೆ ಮುಟ್ಟುವಂತಿಲ್ಲ ಎಂಬಂತಾಯಿತು. ಸ್ನೇಹಿತರು ಬಿಡಿ, ಮನೆಯವರು ಕೂಡ ಒಂದೇ ತಟ್ಟೆಗೆ ಕೈಹಾಕದಂತಾಯಿತು.

ಚೀನಾದಿಂದ ಬಂದು ಜಗತ್ತನ್ನೇ ಕಂಗೆಡಿಸಿದ್ದ ಕೊರೊನಾ ವೈರಸ್‌ನ ಹಾವಳಿಯ ಕೋವಿಡ್-19 ಮಹಾಮಾರಿ ವಕ್ಕರಿಸಿದ ಬಳಿಕ, ಉಳಿದ ದೇಶಗಳಂತೆಯೇ ಎಚ್ಚೆತ್ತುಕೊಂಡ ಭಾರತದಲ್ಲಿ ಬಲವಂತವಾಗಿ ಲಾಕ್‌ಡೌನ್ ಕಟ್ಟುಪಾಡುಗಳನ್ನು ಹೇರಿ ಮಾ.24ಕ್ಕೆ ಒಂದು ವರ್ಷ ಕಳೆಯಿತು.

ಈ ಕೋವಿಡ್ ಅಲೆಗೆ ಅದೆಷ್ಟೋ ಮಂದಿ ಅನ್ನಾಹಾರಗಳಿಲ್ಲದೆ ಬೀದಿಗೆ ಬಿದ್ದರು. ಉದ್ಯೋಗ ಕ್ಷೇತ್ರದಲ್ಲಿ, ಕಡಿಮೆ ಜನರಿಂದ ಹೆಚ್ಚು ಕೆಲಸ ಮಾಡಿಸಬೇಕಾದ ಅನಿವಾರ್ಯತೆಯ ಹಂತದಲ್ಲಿ, ಸಿಬ್ಬಂದಿ ಸಂಖ್ಯೆ ಕಡಿತವಾದಾಗ ಪ್ರಾಮಾಣಿಕವಾಗಿ ದುಡಿಯುವವರಿಗೆ ಕೋವಿಡ್ ಅಷ್ಟಾಗಿ ಕಾಟ ಕೊಡಲಿಲ್ಲ. ಅವರ ಜವಾಬ್ದಾರಿ ಹೆಚ್ಚಾಯಿತು. ಕಾರು-ಬೈಕುಗಳಲ್ಲಿ ಮೆರೆಯಲು ಕಚೇರಿಗೇ ಹೋಗಬೇಕೇ ಅಂತ ಕೇಳಿದ ಪ್ರಕೃತಿ, ಮನೆಯಿಂದಲೇ ಕೆಲಸ ಮಾಡಿ ನೋಡೋಣ, ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿತು. ಶುದ್ಧ ಆಮ್ಲಜನಕ ಸಾಕಾಗುತ್ತಿಲ್ಲ. ಎಲ್ಲವನ್ನೂ, ವಿಶೇಷವಾಗಿ ಪೆಟ್ರೋಲ್/ಡೀಸೆಲ್ ಸುಡುವ ಮೂಲಕ ಇಂಗಾಲದ ಡೈಆಕ್ಸೈಡ್ ಹೆಚ್ಚಾಗ್ತಿದೆ. ನಿಯಂತ್ರಿಸಿ. ಆಮ್ಲಜನಕ ಸೇವಿಸಿ ಅಂತನೂ ಪಾಠ ಮಾಡಿತು ಕೊರೊನಾ.

ಹಣ ಸುರಿದು ಪ್ರತಿಷ್ಠೆಗಾಗಿ ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸಿದರಷ್ಟೇ ಮಕ್ಕಳ ಭವಿಷ್ಯ ಭದ್ರ ಎಂದುಕೊಂಡವರಿಗೆ, ಆನ್‌ಲೈನ್ ಪಾಠದ ಮೂಲಕ ಸಮಾನತೆ ಸಾರಲಾಯಿತು. ಶಾಲೆಗೆ ಹೋಗಲೇಬೇಕಾಗಿಲ್ಲ, ಓದುವ ಮನಸ್ಸನ್ನು ಮಕ್ಕಳಲ್ಲಿ ಮೂಡಿಸುವುದು ಪೋಷಕರ ಜವಾಬ್ದಾರಿ ಎಂಬುದೂ ಅರಿವಿಗೆ ಬಂತು. ವಿದ್ಯಾರ್ಜನೆಯ ಹೆಸರಲ್ಲಿ ಸುಲಿಗೆ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಗಳೆಂಬ ಉದ್ಯಮಗಳು ನಲುಗಿದವು, ಆದರೆ ಅಲ್ಲಿ ನಿಜವಾದ ಶಿಕ್ಷಕರಿಗೆ ನಿಜವಾಗಿ ತೊಂದರೆಯಾಯಿತು.

ಕೋವಿಡ್ ಕಾಲದಲ್ಲಿ ಬಂಧುಗಳು-ಬಳಗದವರನ್ನೇ ನೋಡದಿದ್ದ ಹಲವರಿಗೆ ಬಂಧು-ಬಾಂಧವರ ಮತ್ತು ಕೂಡು ಕುಟುಂಬದ ಮೌಲ್ಯದ ಅರಿವಾದದ್ದೂ ಸುಳ್ಳಲ್ಲ. ದಿನ ಬೆಳಗ್ಗೆದ್ದು ಕೆಲಸ ಕೆಲಸ ಅಂತ ಧಾವಂತದಿಂದಲೇ ಆಫೀಸಿಗೆ ಹೋಗಿ, ತಲೆ ತುಂಬ ತುಂಬಿಕೊಂಡು ಕಚೇರಿಯಿಂದ ಬಂದು, ಸಂಗಾತಿ-ಮಕ್ಕಳಲ್ಲೂ ಮಾತನಾಡಲು ತ್ರಾಸ ಪಡುತ್ತಿದ್ದವರಿಗೆ ಹೊಸ ಲೋಕವೇ ತೆರೆಯಿತು. ತಮಗಾಗಿ, ಕುಟುಂಬಕ್ಕಾಗಿ ಒಂದಿಷ್ಟು ಸಮಯ ಕೊಟ್ಟರೆ ಸಿಗುವ ಆನಂದವೇನೆಂಬುದು ಅರಿವಾಯಿತು.

ಸಣ್ಣದಾಗಿ ಜ್ವರ, ತಲೆನೋವು, ಹೊಟ್ಟೆನೋವು ಬಂದರೂ ವೈದ್ಯರಲ್ಲಿಗೆ ಧಾವಿಸುತ್ತಿದ್ದವರು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಸಾಧ್ಯತೆಗಳತ್ತ ಒಂದಿಷ್ಟು ಗಮನ ಹರಿಸಿದರು. ಅಗತ್ಯವೇ ಇಲ್ಲದೆ ಔಷಧಿ ಸೇವಿಸುತ್ತಿದ್ದವರು ಅನಿವಾರ್ಯವಾಗಿ ಅವುಗಳನ್ನು ಬಿಡಬೇಕಾಯಿತು. ಆದರೀಗ? ನಿಧಾನವಾಗಿ ವೈದ್ಯರ ಕ್ಲಿನಿಕ್‌ನಲ್ಲಿ ಹಿಂದಿನಂತೆಯೇ ಜನಜಂಗುಳಿ ಹೆಚ್ಚಾಗುತ್ತಿದೆ.

ಕಲಿಸಿದ ಪಾಠ
ಮನುಷ್ಯರು ಪರಸ್ಪರ ಅಂತರ ಕಾಯ್ದುಕೊಂಡೇ ವ್ಯವಹರಿಸಬೇಕು, ಕೈಗಳ ಸ್ವಚ್ಛತೆ ಬಗ್ಗೆ ಕೊಂಚವೂ ನಿರ್ಲಕ್ಷಿಸುವಂತಿಲ್ಲ, ಮೂಗು-ಬಾಯಿಗೆ ಕೈಹಾಕುವುದು ಕೆಟ್ಟ ಚಾಳಿ, ಬಾಯಿ ಇರುವುದು ಉಗುಳುವುದಕ್ಕಲ್ಲ. ಉಗುಳು ಇರುವುದು ಬೇರೆಯವರಿಗಾಗಿ ಅಲ್ಲ, ನಮ್ಮದೇ ಆರೋಗ್ಯ ರಕ್ಷಣೆಗಾಗಿ, ಮತ್ತೊಬ್ಬರ ಜೊತೆ ಮಾತನಾಡುವಾಗ ಉಗುಳು ಸಿಡಿಯದಂತೆ ಕೈಗಳಿಂದ ಬಾಯಿ ಮುಚ್ಚಿ ವಿನೀತ ಭಾವದಿಂದಿರಬೇಕು, ಕುಳಿತಲ್ಲೇ ಹೆಚ್ಚು ಕಾಲ ಕುಳಿತಿರಬಾರದು, ದೈಹಿಕ ಚಟುವಟಿಕೆಯಿಂದಿರುವುದು ಮುಖ್ಯ – ಇವೆಲ್ಲವೂ ಪ್ರತಿಯೊಬ್ಬರ ಆರೋಗ್ಯದ ಒಳಿತಿನ, ಸ್ವಾಸ್ಥ್ಯ ಕಾಪಾಡಿಕೊಳ್ಳುವ ಸೂತ್ರಗಳು ಎಂಬುದನ್ನು ಮತ್ತೆ ನೆನಪಿಸಿತು ಕೊರೊನಾ. ಅದಕ್ಕೂ ಮಿಗಿಲಾಗಿ, “ಹುಲು ಮಾನವಾ! ಹೆಚ್ಚು ಮೆರೆಯಬೇಡ, ಪ್ರಕೃತಿಯ ಮೇಲೆ ದೌರ್ಜನ್ಯ ನಡೆಸಬೇಡ; ಕಣ್ಣಿಗೆ ಕಾಣಿಸದ ನಿಕೃಷ್ಟ ಕೀಟಾಣುವೊಂದೇ ಸಾಕು ನಿನ್ನ ದಾರ್ಷ್ಟ್ಯಕ್ಕೆ ಕಡಿವಾಣ ಹಾಕಲು!” ಎಂಬೊಂದು ಮಾತು ಎಲ್ಲೋ ಕೇಳಿ ಬಂದಂತಾಗಿದೆ!

ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಮ್ಮೊಳಗಿನ ದರ್ಪ-ಅಹಂಕಾರಗಳಿಗಿಂತ ನಯ-ವಿನಯಗಳೇ ಭೂಷಣ ಎಂಬುದು ಕೂಡ ಈ ಕಾಲದಲ್ಲೇ ಅರಿವಾಯಿತು. ನಿಜಕ್ಕೂ ನಮ್ಮವರು ಯಾರು, ನಮಗೆ ಆಸರೆಯಾಗುವವರು ಯಾರು ಅಥವಾ ನಾವು ಎಂಥವರಿಗೆ ಉಪಕಾರ ಮಾಡಬೇಕು ಎಂಬುದನ್ನು ಅರಿವಿಗೆ ತಂದುಕೊಟ್ಟು, ಮಾನವೀಯ ಮೌಲ್ಯಗಳನ್ನು ಮರೆತಿದ್ದ ನಮಗೆ ನೆನಪಿಸಿತು ಕೊರೊನಾ. ನಿಜವಾದ ಶ್ರಮಜೀವಿಗಳು ಅಂಡಲೆಯುತ್ತಾ, ಒಪ್ಪೊತ್ತಿನ ತುತ್ತಿಗೆ ತತ್ವಾರ ಪಡುತ್ತಿರುವಾಗ ಅಂಥವರಿಗಲ್ಲವೇ ನಾವು ಕರುಣೆ ತೋರಬೇಕಿರುವುದು? ಕೆಲವರು ಕೊರೊನಾ ಕಾಡಿ ಸಾವನ್ನಪ್ಪಿದರೆ, ಎಲ್ಲ ಆಪ್ತೇಷ್ಟರು, ಬಂಧು-ಬಳಗದವರಿಂದ ಸರಿಯಾಗಿ ಅಂತ್ಯ ಸಂಸ್ಕಾರ ಮಾಡಿಸಿಕೊಳ್ಳುವುದಕ್ಕೂ ಸಾಧ್ಯವಾಗದೇ ಇರುವುದು ಈ ಬದುಕಿನ ಅತಿದೊಡ್ಡ ದುರಂತಗಳಲ್ಲೊಂದು.

ನಗರ ಪ್ರದೇಶಗಳಲ್ಲಿರುವವರು ಇನ್ನೊಂದು ಗಮನಿಸಿದ್ದಿರಬಹುದು. ಬಿಗುವಾದ ಲಾಕ್‌ಡೌನ್ ದಿನಗಳನ್ನು ಹೊರತುಪಡಿಸಿ, ಮನೆ ಮನೆಗೆ ನಮಗೆ ಬೇಕಾದ, ಬೇಡವಾದ, ಪಕ್ಕದವರು ಕೊಳ್ಳುತ್ತಾರೆ-ನಾವೂ ಖರೀದಿಸಬೇಕು ಅಂತ ಪ್ರೇರೇಪಿಸುತ್ತಾ, ಅನವಶ್ಯವಾಗಿ ಹಣ ವ್ಯಯಿಸಲು ದಾರಿ ಮಾಡಿಕೊಡುತ್ತಿದ್ದ ಮಾರಾಟಗಾರರೆಲ್ಲರೂ ಎಲ್ಲಿ ಹೋದರು? ಲಾಕ್‌ಡೌನ್ ಸಡಿಲವಾಗಿದ್ದಾಗ ಅಥವಾ ಆ ದಿನಗಳಲ್ಲೂ ಜೀವನಕ್ಕೆ ಅಗತ್ಯವಿರುವ ಸಾಮಗ್ರಿಗಳ ಮಾರಾಟಗಾರರೇ ಅಲ್ಲವೇ ಕೊಂಚ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದು? ಮಾಲ್‌ಗಳೆಲ್ಲಾ ಬಂದ್ ಆದವು, ಪಕ್ಕದ ಬೀದಿಯ ಶೆಟ್ಟಿ ಅಂಗಡಿ ತೆರೆದಿತ್ತು! ಆರೋಗ್ಯಕ್ಕೆ ಪೂರಕವಾದ ತರಕಾರಿ ಮಾರುವವವನು ಪ್ರತಿದಿನವೂ ಬರುತ್ತಿದ್ದರೆ, ಜಂಕ್ ಫುಡ್ ಮಾರುವವರು/ಅನಗತ್ಯ ಅಥವಾ ಐಷಾರಾಮಿ, ಶೋಕಿಯ ವಸ್ತುಗಳನ್ನು ಮಾರುವವರು ಗಾಡಿಯಲ್ಲಿ ಕೂಗಾಡಿಕೊಂಡು ಬರಲೇ ಇಲ್ಲ! ಕೊಳ್ಳುಬಾಕ ಸಂಸ್ಕೃತಿಯನ್ನೇ ಮೈಪೂರ್ತಿ ಅಳವಡಿಸಿಕೊಂಡವರಿಗೆ, ‘ಸಾಕು ಸುಮ್ನಿರು, ಎಷ್ಟು ಬೇಕೋ ಅಷ್ಟೇ ತಗೋ’ ಅಂತ ಕೊರೊನಾ ಪಾಠ ಕಲಿಸಿಬಿಟ್ಟಿತು. ಆದರೆ ಕಲಿತೆವೇ? ಎಂಬುದು ಪ್ರಶ್ನಾರ್ಥಕ ಚಿಹ್ನೆ.

My Article Published in Prajavani on 25 Mar 2021

LEAVE A REPLY

Please enter your comment!
Please enter your name here