ಎಸಿ ರೂಮಲ್ಲಿ ಕೂತೋರಿಗೇನ್ ಗೊತ್ತು 32 ರೂಪಾಯಿ ಬದುಕು?

2
338

32 ರೂಪಾಯಿಯಲ್ಲಿ ನಗರ ಜೀವನ ಮತ್ತು 26 ರೂಪಾಯಿಯಲ್ಲಿ ಗ್ರಾಮೀಣ ಮಟ್ಟದಲ್ಲಿ ಜೀವನ ಸಾಗಿಸಬಹುದು ಎಂಬ ಸುರೇಶ್ ತೆಂಡುಲ್ಕರ್ ಸಮಿತಿ ವರದಿಯನ್ನು ನಮ್ಮ ದೇಶದ ಮಹಮಹಾನ್ ಯೋಜನಾ ಆಯೋಗವು ಕಣ್ಣು ಮುಚ್ಚಿ ಸ್ವೀಕರಿಸಿ, ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವುದನ್ನು ನೋಡಿದರೆ, ಎಸಿ ಕೊಠಡಿಯೊಳಗೆ ಕುಳಿತವರು ಈ ದೇಶದ ಬಡ ಪ್ರಜೆಯ ಬದುಕಿನ ಬಗೆಗೆ ಎಷ್ಟರ ಮಟ್ಟಿಗೆ ಅರಿವು ಇದೆ ಎಂಬುದು ತಿಳಿಯಬಹುದು.

ಇವರೆಲ್ಲಾ ನಮ್ಮ ನೀತಿ ನಿರೂಪಕರು. ದೇಶದ ಭವಿಷ್ಯ ರೂಪಿಸುವವರು. ದೇಶವನ್ನು ಸೂಪರ್ ಪವರ್ ಆಗಿಸಲು ಹೊರಟವರು! ವಿಮಾನದಲ್ಲೇ ಪ್ರಯಾಣಿಸುತ್ತಾ, ಕಾರುಗಳಲ್ಲೇ ಓಡಾಡುತ್ತಾ, ಎಸಿ ಕೊಠಡಿಯೊಳಗೆ ಕುಳಿತು, ದಿನಕ್ಕೆ ಐದು ರೂಪಾಯಿಯ ಅಕ್ಕಿ, 2 ರೂಪಾಯಿ ಬೇಳೆ, 1 ರೂಪಾಯಿಯ ಸಾಂಬಾರ್ ಸಾಕಾಗುತ್ತದೆ ಎಂದೆಲ್ಲಾ ಲೆಕ್ಕ ಹಾಕಿದವರಿಗೇನೂ ಗೊತ್ತು ವಸ್ತು ಸ್ಥಿತಿ? ಸರಕಾರೀ ಆಸ್ಪತ್ರೆಗೆ ಹೋದ್ರೆ, ಒಳ್ಳೆಯ ಟ್ರೀಟ್‌ಮೆಂಟು ದೊರೆಯಬೇಕಿದ್ದರೆ ನೀಡಬೇಕಾಗಿರುವ ಲಂಚದ ಒಂದು ಪರ್ಸೆಂಟ್ ಕೂಡ ಅಲ್ಲ ಈ ದೈನಿಕ ಮೊತ್ತ 32 ರೂ.!

ಹೊರಗೊಮ್ಮೆ ಹೋಗಿ ನೋಡಿ, ಕಾಲು ಕಿಲೋ ತರಕಾರಿ 10 ರೂಪಾಯಿಗಿಂತ ಕಡಿಮೆಗೆ ಸಿಗುವುದಿಲ್ಲ. ಒಂದು ತೆಂಗಿನ ಕಾಯಿ ಬೆಲೆ 20 ರೂಪಾಯಿವರೆಗೂ ಏರಿಕೆಯಾಗಿದ್ದನ್ನು ನಾವು ನೋಡುತ್ತೇವೆ. ಅರ್ಧ ಲೀಟರು ಹಾಲು ತೆಗೆದುಕೊಳ್ಳಬೇಕಿದ್ದರೆ 20 ರೂಪಾಯಿಗಿಂತ ಹೆಚ್ಚು ನೀಡಬೇಕು! ಒಂದು ಕಿಲೋ ತಿನ್ನಬಹುದಾದ ಅಕ್ಕಿಯ ಬೆಲೆ 20-30 ರೂಪಾಯಿಯ ರೇಂಜ್‌ನಲ್ಲಿದೆ. ಬೇಳೆ ಕಾಳುಗಳು, ಇತರ ಮಸಾಲೆ ಸಂಬಾರ ಪದಾರ್ಥಗಳು… ಇವುಗಳ ಬೆಲೆ ಕೇಳುವುದೇ ಬೇಡ. ಇಂಥಹಾ ಪರಿಸ್ಥಿತಿಯಲ್ಲಿ, ಈ ಯೋಜನಾ ಆಯೋಗವೇ ಒಪ್ಪಿಕೊಂಡಂತೆ 32 ರೂಪಾಯಿಯಲ್ಲಿ ಕನಿಷ್ಠ ಸೌಲಭ್ಯದ ಜೀವನ ನಡೆಸಬಹುದು ಎಂಬುದನ್ನು, ಅದು ಕೂಡ ನಮ್ಮ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಹೊತ್ತು, ನಮ್ಮದೇ ತೆರಿಗೆಯಲ್ಲಿ ಸಂಬಳ ತೆಗೆದುಕೊಂಡು ಐಷಾರಾಮದ ಜೀವನ ನಡೆಸುತ್ತಿರುವವರ ಬಾಯಿಯಿಂದ ಕೇಳಿದರೆ ಯಾರಿಗೆ ತಾನೇ ಉರಿಯದೇ ಇದ್ದೀತು?

ನಮ್ಮನ್ನು ಆಳುವವರಿಗೆ ಒಂದು ಬದ್ಧತೆ ಇರಬೇಕಾಗುತ್ತದೆ. ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಹೇಗೆ, ಬೆಲೆ ಏರಿಕೆಯಿಂದ ಕಂಗಾಲಾಗಿಬಿಟ್ಟಿರುವ ಜನರ ಬವಣೆಯನ್ನು ಕಡಿಮೆ ಮಾಡುವುದು ಹೇಗೆ ಎಂದೆಲ್ಲಾ ಚರ್ಚೆ ನಡೆಸಬೇಕಾಗಿರುವ ಸಂಸತ್ತಿನಲ್ಲಿ ಇಲ್ಲ ಸಲ್ಲದ, ವ್ಯಕ್ತಿಗತ, ರಾಜಕೀಯ ಸೇಡಿನ ವಿಚಾರಗಳನ್ನೇ ಮುಂದಿಟ್ಟುಕೊಂಡು ಗುದ್ದಾಡುತ್ತಿರುವವರನ್ನೊಮ್ಮೆ ನೋಡಿದಾಗ, ಏನನ್ನಿಸುತ್ತದೆ? ಆಮೇಲೆ ಸಂಸತ್ ಕಲಾಪಕ್ಕೆ ದಿನಕ್ಕೆ ಇಷ್ಟು ಕೋಟಿ ಖರ್ಚಾಗುತ್ತದೆ, ಅದು ವ್ಯರ್ಥವಾಯಿತು ಅಂತ ಅವರೇ ಕೂಗಾಡುತ್ತಾರೆ! ಅವರಿಗೇನಾದರೇನು, ಸಂಸತ್ತಿನ ಕ್ಯಾಂಟೀನುಗಳಲ್ಲಿ 10 ಪೈಸೆಗೆ ಕಾಫಿ/ಚಹಾ, ಒಂದೆರಡು ರೂಪಾಯಿಗೆ ಭರ್ಜರಿ ಊಟ ಇತ್ಯಾದಿಯೆಲ್ಲವೂ ‘ಸಬ್ಸಿಡಿ’ ದರದಲ್ಲಿ ದೊರೆಯುತ್ತದೆ. ಅವರು ಕೂಡ ದಿನ ದೂಡುವುದು ನಮ್ಮ-ನಿಮ್ಮಂಥ ಜನಸಾಮಾನ್ಯರು ಕಟ್ಟಿದ ತೆರಿಗೆ ಹಣದಿಂದಲೇ. ಹೀಗಾಗಿ ಅವರಿಗೆ ಜನ ಸಾಮಾನ್ಯರ ಬವಣೆ, ಪಾಡು ಅರ್ಥವಾಗುವುದಿಲ್ಲ ಅಂತಲೇ ಅಂದುಕೊಳ್ಳಬೇಕಾಗುತ್ತದೆಯಲ್ಲವೇ?

ಇದೇ ವಿಷಯದ ಬಗ್ಗೆ ನಮ್ಮದೇ ಅಂಗಸಂಸ್ಥೆಯಾಗಿರುವ ತಮಿಳು ವೆಬ್‌ದುನಿಯಾ ಸಂಪಾದಕರಾದ ಅಯ್ಯನಾಥನ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದೆ. ಆಗ ನಮ್ಮಲ್ಲೇ ನಾವು ಮಾತನಾಡಿಕೊಂಡಿದ್ದೇನೆಂದರೆ, ಒಬ್ಬ ಮಂತ್ರಿಯನ್ನೋ, ಜನಪ್ರತಿನಿಧಿಯನ್ನೋ, ಒಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ದಿನಕ್ಕೆ 32 ರೂಪಾಯಿ ನೀಡಿ, ಮಾರುಕಟ್ಟೆ ದರದ ಆಧಾರದಲ್ಲಿಯೇ ಎಲ್ಲವನ್ನೂ ಒದಗಿಸಿ, “ಬದುಕಿ ತೋರಿಸಿ ನೋಡೋಣ” ಅಂತ ಸವಾಲು ಹಾಕುವುದು. ಕನಿಷ್ಠ ಒಂದು ವಾರ ಹೀಗೆಯೇ ಕಳೆದರೆ, ಆತ ದಿನಕ್ಕೆ ಏನಿಲ್ಲವೆಂದರೂ ಎರಡೆರಡು ರೂಪಾಯಿಯಂತೆ ಎರಡು ಬಾರಿ ‘ಸುಲಭ್’ ಶೌಚಾಲಯದ ಒಳಗೆ ಹೋಗಿ ಹೊರಬರಬೇಕಿದ್ದರೆ ನಾಲ್ಕು ರೂಪಾಯಿ ವ್ಯಯವಾಗುತ್ತದೆ. ಹೀಗಿರುವಾಗ, ಅನ್ನಾಹಾರ ಕಡಿಮೆಯಾಗಿ, ಹೊಟ್ಟೆಗೆ ಸೂಕ್ತ ಪೌಷ್ಟಿಕಾಂಶಯುಕ್ತ ಆಹಾರ ದೊರೆಯದ ಪರಿಣಾಮ ಭೇದಿಯೇ ಶುರುವಾದರಂತೂ ಹಲವು ಬಾರಿ ಹೋಗಿ ಬರಲು ಆ 32 ರೂಪಾಯಿಯನ್ನು ಪೂರ್ತಿಯಾಗಿ ಕೂಡ ಶೌಚಾಲಯಕ್ಕೇ ನೀಡಬೇಕಾದೀತು!

ಇದು ವ್ಯಂಗ್ಯ ಎನ್ನಬಹುದಾದರೂ ವಸ್ತು ಸ್ಥಿತಿಯೂ ಹೌದಲ್ಲಾ? ನಗರ ಪ್ರದೇಶದಲ್ಲಿ ದುಡಿಯುವ ಸಾಮರ್ಥ್ಯವಿಲ್ಲದೆ ಭಿಕ್ಷಾಟನೆಗಿಳಿದ ವ್ಯಕ್ತಿ ಕೂಡ 32 ರೂಪಾಯಿಗಿಂತ ಹೆಚ್ಚು ಸಂಪಾದಿಸಬಲ್ಲ. ಅಥವಾ ಅಷ್ಟು ಸಂಪಾದಿಸದೇಹೋದರೆ ಆತ ಬದುಕುವುದೂ ಸಾಧ್ಯವಿಲ್ಲ. ಅದೆಲ್ಲಾ ಬಿಡಿ, ಬೆಲೆ ಏರಿಕೆಯ ಈ ದಿನಗಳಲ್ಲಿ ಒಬ್ಬ ವ್ಯಕ್ತಿಯ ದಿನಗೂಲಿ ಪ್ರಮಾಣ ಎಷ್ಟು ಅಂತ ಯೋಚಿಸಿ ನೋಡಿ!

ಹಾಗೆ ಲೆಕ್ಕಾಚಾರ ಹಾಕಿದಾಗ, ಶ್ರೀಮಂತ ಖೈದಿ, ನಮ್ಮ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅಥವಾ ನಟ ದರ್ಶನ್‌ಗೆ ಜೈಲಿನಲ್ಲಿ ನೀಡುತ್ತಿರುವ ಗ್ರಾಂ ಅಳತೆಯಲ್ಲಿನ ಆಹಾರ ಪ್ರಮಾಣ ನೆನಪಾಗುತ್ತದೆ. 600 ಗ್ರಾಂ ಅನ್ನ, 100 ಗ್ರಾಂ ದಾಲ್, 250 ಗ್ರಾಂ ತರಕಾರಿ ನೀಡಲಾಗುತ್ತಿತ್ತು. ಹಾಗಿದ್ದರೆ ಈ 32 ರೂಪಾಯಿಯಲ್ಲಿ ಇಲ್ಲಿ ಬದುಕಿ ಸಾಯುವುದಕ್ಕಿಂತ ಜೈಲಿನಲ್ಲಿಯೇ “ಭರ್ಜರಿ” ಆಹಾರ ದೊರೆಯುತ್ತದೆ ಎಂಬ ಭಾವನೆ ಬಾರದಿದ್ದರೆ ಅದು ನಮ್ಮನ್ನಾಳುವವರ ಪುಣ್ಯ!

ಇದು ಬಡತನ ನಿವಾರಣೆಯೋ, ಬಡವರ ನಿವಾರಣೆಯೋ?
ಈ ಸರಕಾರದ ಹಣಕಾಸು ನೀತಿಯು ಎಲ್ಲೋ ದಾರಿತಪ್ಪಿ, ಸಿರಿವಂತರ ರಕ್ಷಣೆಗೆ, ಕಾರ್ಪೊರೇಟ್‌ಗಳ ಉನ್ನತಿಗೆ ಮೀಸಲಾಗಿಟ್ಟಂತೆ ತೋರುವುದರಲ್ಲಿ ಸಂದೇಹವಿಲ್ಲ ಬಿಡಿ. ಯಾಕೆ? ಹಣದುಬ್ಬರ ಕಡಿಮೆ ಮಾಡಲೇಬೇಕು ಎನ್ನುತ್ತಾ ಇದಕ್ಕಾಗಿ ಬಡ್ಡಿದರಗಳನ್ನು ಏರಿಸಿದರು. ಇದು ಯಾರ ಲಾಭಕ್ಕೆ? ಹಣ ಉಳ್ಳವರು ಬ್ಯಾಂಕಿನಲ್ಲಿ ಇರಿಸುವ ಠೇವಣಿಗೆ ಬಡ್ಡಿದರ ಹೆಚ್ಚು ಸಿಕ್ಕಿ, ಮತ್ತಷ್ಟು ಲಾಭವಾಗುತ್ತದೆ. ಅವರ ಶ್ರೀಮಂತಿಕೆ ಮತ್ತಷ್ಟು ಏರುತ್ತದೆ. ಇತ್ತ, ಮನೆಯೋ, ಶಿಕ್ಷಣವೋ, ಅಥವಾ ಬೇರಾವುದೇ ಮೂಲ ಸೌಕರ್ಯವನ್ನೋ ಮಾಡಿಕೊಳ್ಳಲೆಂದು ಸಾಲ ಸೋಲ ಮಾಡಿದ ಜನ ಸಾಮಾನ್ಯ, ಈ ಬಡ್ಡಿ ದರ ಹೆಚ್ಚಳದಿಂದಾಗಿ, ತಿಂಗಳ ಬಜೆಟಿನ ಮೇಲೆ ಮತ್ತಷ್ಟು ಹೊರೆಯಾಗಿ ಮತ್ತಷ್ಟು ಬಡವನಾಗುತ್ತಾನೆ. ಅಂದರೆ, ಜೇಬಿಗೆ ಬಂದ ವೇತನ ಎಲ್ಲಿ ಹೋಯಿತೆಂಬುದೇ ಗೊತ್ತಾಗದೆ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ. ಹಾಗಿದ್ದರೆ, ಈ ದೇಶದಲ್ಲಿ ಬಡವನ ಪರಿಸ್ಥಿತಿ ಎಲ್ಲಿಗೆ ಬಂತು ಮತ್ತು ಶ್ರೀಮಂತರು ಯಾವ ಮಟ್ಟಕ್ಕೇರುತ್ತಿದ್ದಾರೆ? ಉಳ್ಳವರು ಶಿವಾಲಯವ ಮಾಡುವರಯ್ಯಾ, ನಾನೇನು ಮಾಡಲಿ ಬಡವನಯ್ಯಾ ಅನ್ನೋ ಮಾತು ಬೇರೆಯೇ ಕಾರಣಕ್ಕೆ ಇಲ್ಲಿ ನೆನಪಾಗ್ತಿದೆ.

ನಮ್ಮನ್ನು ನಾವು ತೆರಿಗೆದಾರರು ಅಂತ ಹೇಗೆ ಕರೆದುಕೊಳ್ಳುವುದು ಅಂತ ಯೋಚಿಸುತ್ತಿರುವವರಿಗಾಗಿ ಈ ಒಂದು ಸಾಲು: ನಾವು-ನೀವು ಉಪಯೋಗಿಸುವ ಸಣ್ಣ ಬೆಂಕಿ ಪೆಟ್ಟಿಗೆ, ಚಾಕಲೇಟು, ಬೀಡಿ, ಸಿಗರೇಟಿಗೂ, ಕೊಡುವ ಹಣದಲ್ಲಿ ಒಂದಿಷ್ಟು ಹಣ ತೆರಿಗೆ ರೂಪದಲ್ಲಿ ಸರಕಾರಕ್ಕೆ ಸಂದಾಯವಾಗುತ್ತದೆ. ಪ್ರತಿಯೊಂದು ವಸ್ತುವಿನ ಬೆಲೆಯಲ್ಲಿಯೂ ಸರಕಾರಕ್ಕೆ ನೀಡುವ ತೆರಿಗೆ ಅಡಕವಾಗಿದೆ. ಹೀಗಾಗಿ ನಾವು ತೆರಿಗೆದಾರರು.

ಜನ ಸಾಮಾನ್ಯರೇನೋ, ಇಂತಿಷ್ಟು ಮಿತಿಗಿಂತ ಹೆಚ್ಚು ಆದಾಯ ಗಳಿಸಿದರೆ, ತಕ್ಷಣವೇ ಆದಾಯ ತೆರಿಗೆಯನ್ನು ವೇತನದಿಂದಲೇ ಕಡಿತ ಮಾಡಲಾಗುತ್ತದೆ. ಇದು ಕಡ್ಡಾಯವಾಗಿ ಸ್ವಯಂಚಾಲಿತವಾಗಿ ಸರಕಾರಕ್ಕೆ ಸಂದಾಯವಾಗುವಂತಹಾ ವ್ಯವಸ್ಥೆ ರೂಪಿಸಲಾಗಿದೆ. ಆದರೆ, ದೊಡ್ಡ ದೊಡ್ಡ ಕುಳಗಳು, ಬೃಹತ್ ಉದ್ಯಮಿಗಳೆಲ್ಲರೂ ಕೋಟಿ ಕೋಟಿ ಆದಾಯ ಸಂಗ್ರಹಿಸುತ್ತಾರಾದರೂ (ಅದು ಅವರು ಕಷ್ಟಪಟ್ಟು ಗಳಿಸಿದ ಹಣ ಎಂಬುದರಲ್ಲಿ ಸಂದೇಹವಿಲ್ಲ ಬಿಡಿ, ತಪ್ಪು ಕೂಡ ಅಲ್ಲ), ಸರಕಾರಕ್ಕೆ ತೆರಿಗೆ ಕಟ್ಟುವ ವಿಷಯ ಬಂದಾಗ, ಏನೇನೋ ತಂತ್ರಗಳನ್ನು ಮಾಡಿ, ತೆರಿಗೆ ತಪ್ಪಿಸಿಕೊಂಡಿದ್ದನ್ನು ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಇನ್ನು ಕೆಲವರು ಅಕ್ರಮವಾಗಿಯೂ ಸಾಕಷ್ಟು ದುಡ್ಡು ಮಾಡಿ ಮಾಡಿ, ಹಣವೆಲ್ಲವನ್ನೂ ವಿದೇಶೀ ಬ್ಯಾಂಕುಗಳಲ್ಲಿ (ಎಲ್ಲವೂ ಸ್ವಿಸ್ ಬ್ಯಾಂಕುಗಳು ಎಂದೇ ಜನ ಸಾಮಾನ್ಯರ ಭಾವನೆ) ಭದ್ರವಾಗಿ ಕಾಪಾಡುತ್ತಾರೆ. ಅದನ್ನು ಭಾರತಕ್ಕೆ ತರಲು ಪ್ರತಿಭಟನೆ ಮಾಡಿದವರ ಮೇಲೆ ಲಾಠಿ ಚಾರ್ಜ್ ಮಾಡಿಸುತ್ತಾರೆ!

ಈಗೇನು ಹೇಳುತ್ತಿದ್ದಾರೆ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಎಂಬ ನಮ್ಮ ದೇಶದ ಎಲ್ಲ ಯೋಜನೆಗಳ ರೂವಾರಿಯಾಗಿರುವ ಯೋಜನಾ ಆಯೋಗದ ಉಪಾಧ್ಯಕ್ಷರು? ಈ ವರದಿಗೂ, ಬಡವರಿಗೆ ದೊರೆಯಬೇಕಿರುವ ಸರಕಾರೀ ಸೌಲಭ್ಯದ ಲಭ್ಯತೆಗೂ ಯಾವುದೇ ಸಂಬಂಧವಿಲ್ಲ, ಈ ವರದಿಯು ಯೋಜನಾ ಆಯೋಗದ ಅಭಿಪ್ರಾಯವಲ್ಲ ಅಂದಿದ್ದಾರೆ. ಇದು ಸಮಾಧಾನಕರ ಸಂಗತಿಯಾದರೂ, ಗ್ರಾಮೀಣಾಭಿವೃದ್ಧಿ ಸಚಿವಾಲಯವು ಮತ್ತೊಂದು ಗಣತಿ ಮಾಡುತ್ತದೆ ಅಂತಲೂ ಹೇಳಿದ್ದಾರೆ. ಅಂದ್ರೆ, ಹಿಂದೆ ತೆಂಡುಲ್ಕರ್ ಸಮಿತಿ ವರದಿ ತಯಾರಿಗಾಗಿ ಸುರಿದ ನಮ್ಮ ನಿಮ್ಮ ತೆರಿಗೆಯ ಹಣ ದಂಡವಾಯಿತೆಂದೂ, ಈಗ ಮತ್ತೊಂದು ಸಮೀಕ್ಷೆಗಾಗಿ ಮತ್ತಷ್ಟು ಹಣ ವ್ಯಯವಾಗುತ್ತದೆ ಎಂಬ ಅರ್ಥವೇ? ಇದಕ್ಕೆ ಸರ್ಕಾರ ಉತ್ತರಿಸಬೇಕಿದೆ.
[ವೆಬ್‌ದುನಿಯಾಕ್ಕಾಗಿ]

2 COMMENTS

LEAVE A REPLY

Please enter your comment!
Please enter your name here