ಆಕರ್ಷಕ ವಿನ್ಯಾಸದ ಬಜೆಟ್ ಫೋನ್ – ನೋಕಿಯಾ 3.4: ಹೇಗಿದೆ?

0
267

ಕೋವಿಡ್ ಕಾಟದಿಂದಾದ ಲಾಕ್‌ಡೌನ್ ಘೋಷಣೆಯಾಗಿ ಒಂದು ವರ್ಷವಾಗಿರುವಂತೆಯೇ, ವಿವಿಧ ಸ್ಮಾರ್ಟ್‌ಫೋನ್ ಕಂಪನಿಗಳು ಕೂಡ ಹೊಸ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಧಾವಂತದಿಂದ ಬಿಡುಗಡೆ ಮಾಡಲಾರಂಭಿಸಿವೆ. ಇತ್ತೀಚೆಗಷ್ಟೇ ನೋಕಿಯಾ 2.4 ಬಿಡುಗಡೆ ಮಾಡಿದ್ದ ಹೆಚ್ಎಂಡಿ ಗ್ಲೋಬಲ್ ಕಂಪನಿ, ಇದೀಗ ನೋಕಿಯಾ 3.4 ಹಾಗೂ ನೋಕಿಯಾ 5.4 ಬಿಡುಗಡೆಗೊಳಿಸಿದ್ದು. ಪ್ರಜಾವಾಣಿಗೆ ದೊರೆತ ನೋಕಿಯಾ 3.4 ಸಾಧನ ಹೇಗಿದೆ? ಇಲ್ಲಿದೆ ವಿಮರ್ಶೆ.

ವೈಶಿಷ್ಟ್ಯಗಳು ಮತ್ತು ವಿನ್ಯಾಸ
ನೋಕಿಯಾ 2.4 ಕೈಯಲ್ಲಿ ಹಿಡಿಯಲು ಕೊಂಚ ದೊಡ್ಡದಾಯಿತು ಎಂದುಕೊಂಡಿದ್ದವರಿಗೆ ಕೊಂಚ ಚಿಕ್ಕದಾಗಿರುವ ನೋಕಿಯಾ 3.4 ಹಿಡಿಸಬಹುದು. ಕೈಗೆಟಕುವ ಬೆಲೆಯಲ್ಲಿರುವ (ರೂ.11,999) ಈ ಆಧುನಿಕ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್ ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 460 ಪ್ರೊಸೆಸರ್ ಅನ್ನು ಬಳಸುತ್ತಿದ್ದು, 4000 mAh ಬ್ಯಾಟರಿ ಹೊಂದಿದೆ. ಪ್ಯೂರ್ ಆಂಡ್ರಾಯ್ಡ್ ಅಂದರೆ ಯಾವುದೇ ಅನ್ಯ ಆ್ಯಪ್‌ಗಳಿಲ್ಲದೆ ಪರಿಶುದ್ಧವಾದ ಆಂಡ್ರಾಯ್ಡ್ 10 ಕಾರ್ಯಾಚರಣಾ ವ್ಯವಸ್ಥೆ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಲೆನ್ಸ್ ಹಾಗೂ ಪ್ರಧಾನ ಕ್ಯಾಮೆರಾದಲ್ಲಿ 13 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿರುವ ಲೆನ್ಸ್‌ನ ಕ್ಯಾಮೆರಾಗಳಿವೆ.

6.39 ಇಂಚು ಸ್ಕ್ರೀನ್, ಹೋಲ್ ಪಂಚ್ ವಿನ್ಯಾಸದ ನಾಚ್ (ಸ್ಕ್ರೀನ್ ಮೇಲೆ ಸೆಲ್ಫೀ ಕ್ಯಾಮೆರಾಕ್ಕಾಗಿ ಇರುವ ಮುಕ್ತ ಸ್ಥಳ) ಸ್ಕ್ರೀನ್‌ನ ಎಡಮೂಲೆಯಲ್ಲಿದೆ. ಸುತ್ತಲೂ ಸ್ವಲ್ಪ ಮಟ್ಟಿಗೆ ಬೆಝೆಲ್ ಇದೆ, ಕೆಳಭಾಗದಲ್ಲಿ ನೋಕಿಯಾ ಲೋಗೋ ಇರುವಷ್ಟು ಬೆಜೆಲ್ ಜಾಗವಿದೆ.

ಉಳಿದಂತೆ ಪವರ್ ಮತ್ತು ವಾಲ್ಯೂಮ್ ಬಟನ್‌ಗಳು ಬಲಭಾಗದಲ್ಲೂ, ಗೂಗಲ್ ಅಸಿಸ್ಟೆಂಟ್ ಬಟನ್ ಹಾಗೂ ಸಿಮ್ ಕಾರ್ಡ್, ಮೈಕ್ರೋ ಎಸ್‌ಡಿ ಕಾರ್ಡ್ ಟ್ರೇ ಎಡಭಾಗದಲ್ಲೂ ಇದ್ದು, ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟಪ್‌ಗಿರುವ ವೃತ್ತಾಕಾರದ ಮಾಡ್ಯೂಲ್ ಆಕರ್ಷಕವಾಗಿದೆ. ಜೊತೆಗೆ ಫ್ಲ್ಯಾಶ್ ಕೂಡ ಇದೆ. 180 ಗ್ರಾಂ ತೂಕವಿದ್ದು, ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇದೆ. 3.5 ಮಿಮೀ ಹೆಡ್‌ಫೋನ್ ಜಾಕ್ ಇದ್ದು, ಹಿಂಭಾಗದ ಕವಚವು ಆಕರ್ಷಕ ವಿನ್ಯಾಸದೊಂದಿಗೆ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದೆ.

ಫುಲ್ ಹೆಚ್‌ಡಿ+ ರೆಸೊಲ್ಯುಶನ್ ಡಿಸ್‌ಪ್ಲೇ, 4ಜಿಬಿ RAM ಹಾಗೂ 64GB ಸಂಗ್ರಹಣಾ ಸಾಮರ್ಥ್ಯವಿದ್ದು, ಒಂದೇ ಮಾಡೆಲ್ ಮಾರುಕಟ್ಟೆಗೆ ಬಂದಿರುವುದು ವಿಶೇಷ. ಮೈಕ್ರೋಎಸ್‌ಡಿ ಕಾರ್ಡ್ ಮೂಲಕ ಸಂಗ್ರಹಣೆ ಹೆಚ್ಚಿಸಿಕೊಳ್ಳಬಹುದು. ಡ್ಯುಯಲ್ ನ್ಯಾನೋ ಸಿಮ್‌ಗಳಿದ್ದು, ಆಂಡ್ರಾಯ್ಜ್ 11 ಪಡೆಯಲು ಫೋನ್ ಸಜ್ಜಾಗಿದೆ ಎಂದು ಹೆಚ್‌ಎಂಡಿ ಗ್ಲೋಬಲ್ ತಿಳಿಸಿದೆ. ಯೂಸರ್ ಇಂಟರ್ಫೇಸ್ ಕ್ಲೀನ್ ಆಗಿದೆ.

ಕಾರ್ಯನಿರ್ವಹಣೆ ಹೇಗಿದೆ
ಈ ಕಾಲದ ದೈನಂದಿನ ಅಗತ್ಯಗಳನ್ನು ಪೂರೈಸಲು ಯಾವುದೇ ರೀತಿಯಲ್ಲಿಯೂ ತೊಡಕಾಗಲಿಲ್ಲ. 4ಜಿಬಿ RAM ಇರುವುದರಿಂದಾಗಿ ಎಲ್ಲೂ ವಿಳಂಬವಾಗಲೀ, ನಿಧಾನಗತಿಯ ಕಾರ್ಯವಾಗಲೀ ಗೊತ್ತಾಗಲಿಲ್ಲ. ಸ್ನ್ಯಾಪ್‌ಡ್ರ್ಯಾಗನ್ 460 ಪ್ರೊಸೆಸರ್ ಸಣ್ಣ ಆ್ಯಪ್‌ಗಳು ಕ್ಷಿಪ್ರವಾಗಿಯೇ ಲೋಡ್ ಆಗಲು ಉತ್ತಮವಾಗಿಯೇ ಸಹಕರಿಸಿದೆ. ಆದರೆ ಸ್ವಲ್ಪ ಹೆಚ್ಚು ತೂಕವಿರುವ ಆ್ಯಪ್‌ಗಳು ಲೋಡ್ ಆಗಲು ಕೊಂಚ ಸಮಯ ಬೇಕಾಯಿತು.

ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅಂತೂ ತುಂಬ ವೇಗವಾಗಿ ಕೆಲಸ ಮಾಡಿದೆ. ಅದೇ ರೀತಿ ಮುಖ ಗುರುತಿಸುವ ಫೇಸ್ ರೆಕಗ್ನಿಶನ್ ತಂತ್ರಜ್ಞಾನ ಸುಲಲಿತವಾಗಿ ಕೆಲಸ ಮಾಡಿದೆ. 4000 mAh ಬ್ಯಾಟರಿ ಈಗಿನ ಪರಿಸ್ಥಿತಿ ಮತ್ತು ಅತ್ಯಗತ್ಯ ವೈಶಿಷ್ಟ್ಯಗಳ ನಡುವೆ ಕಡಿಮೆ ಅಂತ ಆರಂಭದಲ್ಲಿ ಅನ್ನಿಸಿದರೂ, ಎರಡು ದಿನಗಳ ಕಾಲ ಬ್ರೌಸಿಂಗ್, ವಾಟ್ಸ್ಆ್ಯಪ್, ಫೇಸ್‌ಬುಕ್, ಇಮೇಲ್, ದಿನಕ್ಕೊಂದು ಗಂಟೆ ವಿಡಿಯೊ, ಫೋಟೊ ತೆಗೆಯುವುದು ಮುಂತಾದವುಗಳಿಗೆ ಬಳಸಿದ ಬಳಿಕವೂ ಶೇ.10 ಚಾರ್ಜ್ ಉಳಿದಿತ್ತು. 5W ಚಾರ್ಜರ್ ಜೊತೆಗೆ ನೀಡಲಾಗಿದ್ದು, ಚಾರ್ಜಿಂಗ್‌ನ ವೇಗವು ಈಗಿನ ಅಗತ್ಯತೆಗೆ ಪೂರಕವಾಗಿಲ್ಲ ಅಂತನ್ನಿಸಿತು. ಪೂರ್ತಿ ಚಾರ್ಜ್ ಆಗಲು ಸುಮಾರು ಎರಡುವರೆ ಗಂಟೆಗೂ ಹೆಚ್ಚು ಸಮಯ ಬೇಕಾಯಿತು.

ಕ್ಯಾಮೆರಾ
13 ಮೆಗಾಪಿಕ್ಸೆಲ್ ಪ್ರಧಾನ ಸೆನ್ಸರ್, 5 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಆ್ಯಂಗಲ್ ಹಾಗೂ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಡೆಪ್ತ್ ಸೆನ್ಸರ್ ಇರುವ ಕ್ಯಾಮೆರಾ ವ್ಯವಸ್ಥೆ ಇದರಲ್ಲಿದೆ. ಸೆಲ್ಫೀಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಸಾಮಾನ್ಯ ಕ್ಯಾಮೆರಾ ಆ್ಯಪ್ ಇದ್ದು, ಹಲವು ಶೂಟಿಂಗ್ ಮೋಡ್‌ಗಳಿವೆ. ಜೊತೆಗೆ ಫೊಟೊಗಳನ್ನು ಸುಂದರವಾಗಿಸಲು ಬ್ಯೂಟಿಫಿಕೇಶನ್ ಎಫೆಕ್ಟ್ ನೀಡುವ ಆಯ್ಕೆಯೂ ಇದೆ. ಫೋಟೊಗಳು ಚೆನ್ನಾಗಿಯೇ ಬಂದವು. ಬೇರೆ ಸಾಧನಗಳಲ್ಲಿ ಅದನ್ನು ದೊಡ್ಡದಾಗಿಸಿ ನೋಡಿದಾಗ, ಶಾರ್ಪ್‌ನೆಸ್ ಕಡಿಮೆ ಎನಿಸಿತು. ಸಮೀಪದ ಶಾಟ್‌ಗಳಲ್ಲಿ ಹಿನ್ನೆಲೆ ಮಸುಕಾಗಿ, ವಸ್ತು (ಸಬ್ಜೆಕ್ಟ್) ಸ್ಪಷ್ಟವಾಗಿ ಕಾಣಿಸುವ ವ್ಯವಸ್ಥೆ ಉತ್ತಮವಾಗಿದೆ. ನಾವು ತೆಗೆದ ಫೋಟೋಗಳಿಗೆ ಲೋಗೋ ರೀತಿಯಲ್ಲಿ ನಮ್ಮದೇ ಮುದ್ರೆ ಬಳಸುವ ಆಯ್ಕೆ ವಿಶೇಷವಾಗಿ ಗಮನ ಸೆಳೆಯುತ್ತದೆ.

ಕ್ಯಾಮೆರಾದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಕಡಿಮೆ ಬೆಳಕನ್ನು ಕ್ಷಿಪ್ರವಾಗಿಯೇ ಗುರುತಿಸುತ್ತದೆ. ಉತ್ತಮ ಬೆಳಕಿನಲ್ಲಿ ಚಿತ್ರಗಳ ಗುಣಮಟ್ಟವೂ ಹೆಚ್ಚು ಸ್ಪಷ್ಟವಾಗಿರುತ್ತದೆ.

ಒಟ್ಟಿನಲ್ಲಿ, ಹೊಸ ಆಂಡ್ರಾಯ್ಡ್ ಅಪ್‌ಡೇಟ್‌ಗಳಿರುವ, ಬ್ಲಾಟ್‌ವೇರ್‌ಗಳಿಲ್ಲದ ಶುದ್ಧ ಕಾರ್ಯಾಚರಣಾ ವ್ಯವಸ್ಥೆಯ ನೋಕಿಯಾ 3.4 ಅತ್ಯಾಧುನಿಕ ತಂತ್ರಾಂಶಗಳನ್ನು ಹೊಂದಿದೆ. ಅತ್ಯುತ್ತಮ ಬಿಲ್ಡ್ ಗುಣಮಟ್ಟ, ಆಕರ್ಷಕ ವಿನ್ಯಾಸ ಹೊಂದಿದ್ದು, ನಿತ್ಯದ ಸ್ಮಾರ್ಟ್ ಫೋನ್ ಸಂಬಂಧಿತ ಚಟುವಟಿಕೆಗಳಿಗೆ ಅನುಕೂಲಕರವೇ ಆಗಿದೆ.

My Review Published in Prajavani on 23/24 Mar 2021

LEAVE A REPLY

Please enter your comment!
Please enter your name here