ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

0
303

Infinix Note 5 fullಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ ಕಂಪನಿಯೂ ಒಂದು. ಇದರ ಭಾಗವೇ ಆಗಿರುವ ಇನ್ಫಿನಿಕ್ಸ್ ಮೊಬಿಲಿಟಿ ಕಂಪನಿಯು ಹೊಚ್ಚ ಹೊಸ ಆಂಡ್ರಾಯ್ಡ್ ಒನ್ ಆವೃತ್ತಿಯ ಇನ್ಫಿನಿಕ್ಸ್ ನೋಟ್ 5 (Infinix Note 5) ಬಿಡುಗಡೆ ಮಾಡಿದ್ದು, ಅದ್ಭುತ ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮ ಸೆಲ್ಫೀ ಫೋಟೋಗಳಿಗಾಗಿ ಗಮನ ಸೆಳೆಯಿತು. ಸುಲಭವಾಗಿ ಹೇಳುವುದಾದರೆ, 10 ಸಾವಿರ ರೂ. ಒಳಗೆ, ಫಿಂಗರ್‌ಪ್ರಿಂಟ್, 4500 mAh ಬ್ಯಾಟರಿ, 3 ಜಿಬಿ RAM ಇರುವ ವಿಶಿಷ್ಟ ಫೋನ್ ಇದು.

3 ಜಿಬಿ RAM ಹಾಗೂ 32 ಇಂಟರ್ನಲ್ ಮೆಮೊರಿ ಹೊಂದಿರುವ ಹಾಗೂ ಆಂಡ್ರಾಯ್ಡ್ ಒನ್ (ಮೂಲ ಆಂಡ್ರಾಯ್ಡ್) ಕಾರ್ಯಾಚರಣೆ ವ್ಯವಸ್ಥೆಯಿರುವ ಈ ಫೋನ್, ಆಕರ್ಷಕವಾಗಿದ್ದು, 18:9 ಫುಲ್ ವ್ಯೂ ಡಿಸ್‌ಪ್ಲೇ ಇದೆ. ಆಗಸ್ಟ್ 31ರಂದು ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಮಾರಾಟ ಕಂಡಿತ್ತು.

16 ಮೆಗಾಪಿಕ್ಸೆಲ್ ಫ್ರಂಟ್ (ಸೆಲ್ಫೀ) ಕ್ಯಾಮೆರಾವು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಗುಣಮಟ್ಟದ ಫೋಟೋ ನೀಡುತ್ತಿದ್ದು, ಇದು ಮೇಡ್ ಇನ್ ಇಂಡಿಯಾ ಉತ್ಪನ್ನ. ಹಿಂಭಾಗದ ಕ್ಯಾಮೆರಾ 12 ಮೆಗಾಪಿಕ್ಸೆಲ್ ರೆಸೊಲ್ಯುಶನ್ ಹೊಂದಿದೆ.

4500 mAh ಬ್ಯಾಟರಿಯೊಂದಿಗೆ 3 ದಿನ ಬ್ಯಾಟರಿ ಬಾಳಿಕೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದ್ದು, ನಿರಂತರ ಬಳಕೆ ಮಾಡಿದಾಗ ಬಹುತೇಕ ಇದು ನಿಜವಾಗಿದೆ. ಒಕ್ಟಾ ಕೋರ್ 2.0 GHZ ಪ್ರೊಸೆಸರ್ ಉತ್ತಮ ವೇಗಕ್ಕೆ ಸಹಾಯ ಮಾಡಿದೆ.

15.21 ಸೆ.ಮೀ. (5.99 ಇಂಚು) FHD+ ಫುಲ್ ವ್ಯೂ ಸ್ಕ್ರೀನ್, ಜತೆಗೆ ಎರಡು 4G ಸಿಮ್ ಕಾರ್ಡ್ ಹಾಗೂ ಹೆಚ್ಚುವರಿ ಮೆಮೊರಿಗಾಗಿ ಕಾರ್ಡ್ ಟ್ರೇ ಇದೆ.

ಮೊದಲ ನೋಟದಲ್ಲೇ ಗಮನ ಸೆಳೆದ ಫೋನ್ ಇದು. ಆಂಡ್ರಾಯ್ಡ್ ಒನ್ ಎಂಬ ಶುದ್ಧ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ, ಒಂದು ತಿಂಗಳ ಕಾಲ ಬಳಸಿದಾಗ ಫೋನ್ ಕಾರ್ಯಾಚರಣೆ ಸ್ಮೂತ್ ಮತ್ತು ಕ್ಲೀನ್ ಅಂತ ಹೇಳಬಹುದು.

ಫ್ಲಿಪ್‌ಕಾರ್ಟ್ ತಾಣದಲ್ಲಿ ಲಭ್ಯವಿರುವ ಈ ಫೋನ್‌ನ (3 ಜಿಬಿ RAM ಹಾಗೂ 32 ಜಿಬಿ ಇಂಟರ್ನಲ್ ಮೆಮೊರಿ) ಬೆಲೆ: ರೂ. 9,499/. ಇದರ 4ಜಿಬಿ/64ಜಿಬಿ ಆವೃತ್ತಿಗೆ 2 ಸಾವಿರ ರೂ. ಹೆಚ್ಚು.

ವಿನ್ಯಾಸ:
ಐಸ್ ಬ್ಲೂ, ಮಿಲಾನ್ ಬ್ಲ್ಯಾಕ್ ಹಾಗೂ ಬರ್ಲಿನ್ ಗ್ರೇ ಬಣ್ಣಗಳಲ್ಲಿ ಲಭ್ಯವಿರುವ ಇನ್ಫಿನಿಕ್ಸ್ ನೋಟ್ 5, ನೋಡಲು ಕೂಡ ಪ್ರೀಮಿಯಂ (ದುಬಾರಿ) ಫೋನ್‌ನಂತಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಮೇಲ್ಭಾಗದಲ್ಲಿ ಕ್ಯಾಮೆರಾ ಮತ್ತು ಫ್ಲ್ಯಾಶ್ ಇದೆ. ಹೊಳೆಯುವ ಪ್ಲಾಸ್ಟಿಕ್ ಬಾಡಿ ಆಗಿದ್ದರೂ, ಲೋಹದಂತೆಯೇ ಕಾಣಿಸುತ್ತದೆ. ತುದಿಗಳು ಕರ್ವ್ ಆಗಿರುವುದರಿಂದ ಹಿಡಿದುಕೊಳ್ಳುವುದು ಸುಲಭ. ಪವರ್, ವಾಲ್ಯೂಮ್ ಬಟನ್‌ಗಳು ಹಾಗೂ 2 ಸಿಮ್ ಕಾರ್ಡ್ + ಮೆಮೊರಿ ಕಾರ್ಡ್ ಟ್ರೇ ಬಲಭಾಗದಲ್ಲಿದೆ. 3.5 ಮಿಮೀ ಜ್ಯಾಕ್, ಚಾರ್ಜಿಂಗ್ ಪಾಯಿಂಟ್ ಮತ್ತು ಸ್ಪೀಕರ್‌ಗಳು ಫೋನ್‌ನ ತಳಭಾಗದಲ್ಲಿವೆ.

ಡಿಸ್‌ಪ್ಲೇ:
ಇನ್ಫಿನಿಕ್ಸ್ ನೋಟ್ 5 ಫೋನ್ 5.99-ಇಂಚಿನ (18:9) ಟಚ್ ಸ್ಕ್ರೀನ್ ಹೊಂದಿದ್ದು, 2160 x 1080 ರೆಸೊಲ್ಯುಶನ್‌ನಲ್ಲಿ ಚಿತ್ರ ಪ್ರದರ್ಶಿಸುತ್ತದೆ. IPS LCD ಸ್ಕ್ರೀನ್ ಯಾವುದೇ ಬೆಳಕಿನ ಪರಿಸ್ಥಿತಿಯಲ್ಲಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದಕ್ಕೆ ಅಡಾಪ್ಟಿವ್ ಬ್ರೈಟ್‌ನೆಸ್ ವೈಶಿಷ್ಟ್ಯ ಕಾರಣ. ಗೇಮ್ಸ್ ಆಡುವಾಗ, ವೀಡಿಯೊ ಪ್ಲೇ ಮಾಡಿದಾಗ, ಅದರ ಗುಣಮಟ್ಟ ಉತ್ತಮವಾಗಿ ಮೂಡಿಬಂದಿತ್ತು.

ಸಾಫ್ಟ್‌ವೇರ್ – ಕಾರ್ಯನಿರ್ವಹಣೆ, ಬ್ಯಾಟರಿ:
Infinix Note 5 ನಲ್ಲಿ MediaTek Helio P23 SoC ಪ್ರೊಸೆಸರ್ ಇದ್ದು, 3 GB RAM ಹಾಗೂ 32 GB ಸ್ಟೋರೇಜ್ ಇದೆ. ಆಂಡ್ಕಾಯ್ಡ್ 8.1 ಒರಿಯೋ ಹೊಚ್ಚ ಹೊಸದಾದ ಆಂಡ್ರಾಯ್ಡ್ ಒನ್ ಕಾರ್ಯಾಚರಣೆ ವ್ಯವಸ್ಥೆಯಿಂದಾಗಿ, ನ್ಯಾವಿಗೇಶನ್, ಟಚ್ ಕೆಲಸಗಳೆಲ್ಲವೂ ತುಂಬಾ ಸ್ಮೂತ್. ಆಂಡ್ರಾಯ್ಡ್ ಒನ್ ಆಗಿರುವುದರಿಂದ ಗೂಗಲ್‌ನಿಂದ ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮೊದಲು ಬರುವುದು ಈ ಫೋನ್‌ಗೇ. ಆಪರೇಟಿಂಗ್ ಸಿಸ್ಟಂಗೆ 9.72 GB ಸ್ಥಳಾವಕಾವಿದ್ದು, ಸುಮಾರು 22 ಜಿಬಿ ಬಳಕೆಗೆ ಸಿಗುತ್ತದೆ. 128 ಜಿಬಿವರೆಗೂ ಮೆಮೊರಿ ಕಾರ್ಡ್ ಮೂಲಕ ಹೆಚ್ಚು ಸ್ಟೋರೇಜ್ ಪಡೆಯಬಹುದು. ವೀಡಿಯೋ, ಗೇಮ್ಸ್, ವಾಟ್ಸ್ಆ್ಯಪ್, ಫೇಸ್‌ಬುಕ್ ಇತ್ಯಾದಿಗಳೊಂದಿಗೆ ಮಲ್ಟಿಟಾಸ್ಟಿಂಗ್ ವೇಳೆ ಲ್ಯಾಗಿಂಗ್ ಅನುಭವಕ್ಕೆ ಬಂದಿಲ್ಲ. ವಿಶೇಷವಾಗಿ 4500 mAh ಬ್ಯಾಟರಿ ಅದ್ಭುತ ಕಾರ್ಯಕ್ಷಮತೆ ತೋರಿದೆ. ವಿಶೇಷವೆಂದರೆ, ಬ್ಯಾಟರಿ ಸಾಮರ್ಥ್ಯ ಜಾಸ್ತಿ ಇದ್ದರೂ, ಫೋನ್‌ನ ತೂಕದ ಮೇಲೆ ಅಷ್ಟೇನೂ ಪ್ರಭಾವ ಬೀರಿಲ್ಲ.

ಕ್ಯಾಮೆರಾ:
12 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದಲ್ಲಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಜತೆಗಿನ ಆಟೋ ಸೀನ್ ಡಿಟೆಕ್ಷನ್ (ASD) ಎಂಬ ವೈಶಿಷ್ಟ್ಯ ಗಮನ ಸೆಳೆದಿದೆ. ಪ್ರೊಫೆಶನಲ್, ಪನೋರಮಾ, ನೈಟ್ ಹಾಗೂ ಟೈಮ್ ಲ್ಯಾಪ್ಸ್, ನಾರ್ಮಲ್, ಬ್ಯೂಟಿ ಹಾಗೂ ಪೋರ್ಟ್ರೇಟ್ ಎಂಬ ಮೋಡ್‌ಗಳು ಉತ್ತಮ ಚಿತ್ರಗಳನ್ನು ತೆಗೆಯಲು ಅನುಕೂಲ. ಸೆಲ್ಫೀ ಕ್ಯಾಮೆರಾವು ಪ್ರಧಾನ ಕ್ಯಾಮೆರಾಕ್ಕಿಂತ ಹೆಚ್ಚು ರೆಸೊಲ್ಯೂಶನ್ (16 ಮೆಗಾಪಿಕ್ಸೆಲ್) ಹೊಂದಿರುವುದು ವಿಶೇಷ. ಇದರಲ್ಲಿಯೂ ಎಐ ಬ್ಯೂಟಿ ಹಾಗೂ ಬೊಕೇ ಮೋಡ್‌ಗಳಿವೆ. ಬಳಸಿದ ಹಲವಾರು ಫೋನ್‌ಗಳಲ್ಲಿ, ಕಡಿಮೆ ಬೆಳಕಿನಲ್ಲಿ ಅತ್ಯುತ್ತಮ ಸೆಲ್ಫೀ ಚಿತ್ರ ಮೂಡಿಸಿದ ಫೋನ್ ಇದು.

ಒಟ್ಟಾರೆ ಹೇಗಿದೆ:
ಈ ಬೆಲೆಯ ಶ್ರೇಣಿಯ ಫೋನ್‌ಗಳಲ್ಲಿ ಪ್ರತಿಸ್ಫರ್ಧಿ ಕಂಪನಿಗಳು ನೀಡದಂತಹಾ ಸ್ಪೆಸಿಫಿಕೇಶನ್ ಈ ಫೋನ್‌ನಲ್ಲಿರುವುದು ವಿಶೇಷ. ಪರಿಶುದ್ಧ (ಸ್ಟಾಕ್) ಆಂಡ್ರಾಯ್ಡ್, ಕಡಿಮೆ ಬೆಳಕಿನಲ್ಲಿ ಅದ್ಭುತ ಸೆಲ್ಫೀ, ಫಿಂಗರ್ ಪ್ರಿಂಟ್, ಉತ್ತಮ RAM ಮತ್ತು ಅದ್ಭುತ ಬ್ಯಾಟರಿ. ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಬೆಲೆಯೂ, ಕ್ಯಾಮೆರಾ ಗುಣಮಟ್ಟವೂ ಹೆಚ್ಚು ಮಹತ್ವ ಪಡೆದಿರುವುದರಿಂದ, ಈ ಫೋನ್ ಗೆಲ್ಲಬಹುದು.

[ವಿಜಯ ಕರ್ನಾಟಕದಲ್ಲಿ]

LEAVE A REPLY

Please enter your comment!
Please enter your name here