ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
ಅಂತ ಜಿ.ಪಿ.ರಾಜರತ್ನಂ ತಮ್ಮ ಕನ್ನಡ ಮನಸ್ಸನ್ನು ಬಿಚ್ಚಿಟ್ಟಿದ್ದರು.
ಇದೀಗ, ಕೈ ಕತ್ತರಿಸಿ, ನಾಲಿಗೆ ಸೀಳಿ, ಹೊಡಿ, ಬಡಿ, ಅಯೋಗ್ಯ, ಸುಳ್ಳ, ಭ್ರಷ್ಟಾಚಾರಿ, ಕಳ್ಳ ಎಂಬಿತ್ಯಾದಿ ಅತ್ಯಮೂಲ್ಯ ಪದ ಸಂಪತ್ತನ್ನು, ಕನ್ನಡದ ನುಡಿಗಳು ಹೊರಹೊಮ್ಮುವ ನಮ್ಮ ಜನ ನಾಯಕರ ಬಾಯಿಗಳ ಮೂಲಕ ಕೇಳಿಸಿಕೊಳ್ಳುತ್ತಲೇ ನಾವಿಂದು ಮಗದೊಂದು ಕನ್ನಡದ ಉತ್ಸವದ ಹೊಸ್ತಿಲಿಗೆ ತಲುಪಿದ್ದೇವೆ.
ಪ್ರತೀ ಬಾರಿ ಕನ್ನಡ ರಾಜ್ಯೋತ್ಸವ ಬಂದಾಗ ನಾವೆಲ್ಲಾ ಎಚ್ಚೆತ್ತುಕೊಂಡು, ಕನ್ನಡ ಉಳಿಸಿ, ಬೆಳೆಸಿ ಅಂತೆಲ್ಲಾ ಹಾರಾಡುತ್ತೇವೆ, ಹೋರಾಡುತ್ತೇವೆ ಮತ್ತು ‘ಹೋರಾಟ’ ಮಾಡಬೇಕು ಎಂದೆಲ್ಲಾ ಕರೆ ನೀಡುತ್ತೇವೆ. ಕನ್ನಡವೇ ಪ್ರಧಾನ ಭಾಷೆಯಾಗಿರುವ ರಾಜ್ಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮಾಡಿಕೊಂಡಿದ್ದೇವೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ, ಕನ್ನಡ ಸಾಹಿತ್ಯ ಪರಿಷತ್ತು ಇದೆ, ಅಲ್ಲಲ್ಲಿ ಕನ್ನಡ ಜಾಗೃತಿಗಾಗಿ ಅಭಿಯಾನಗಳು, ಕನ್ನಡದ ರಕ್ಷಣೆಯ ಹೆಸರಿನಲ್ಲಿ ಹೋರಾಟಗಳು ನಡೆಯುತ್ತಿವೆ… ಇಂಥ ಪರಿಸ್ಥಿತಿಗೆ ಕಾರಣವೇನು?
ಕನ್ನಡಕ್ಕಳಿವಿಲ್ಲ…
ಕರ್ನಾಟಕದಲ್ಲಿ ಕನ್ನಡದ ಬಳಕೆ ಕಡಿಮೆಯಾಗ್ತಿದೆ ಎಂಬುದು ನಿಜವಾಗಿದ್ದರೂ, ಕನ್ನಡ ಸಾಯುತ್ತಿದೆ ಎಂಬುದು ಮಾತ್ರ ಶುದ್ಧ ಸುಳ್ಳು. ಕನ್ನಡದ ಬಗೆಗಿನ ಅಭಿಮಾನ ನಮಗೆ ಕಡಿಮೆಯಾಗುತ್ತಿದೆ ಎಂಬುದು ಒಪ್ಪ ತಕ್ಕ ಮಾತೇ. ಇದಕ್ಕೊಂದೆರಡು ಉದಾಹರಣೆ ಇಲ್ಲಿದೆ.
ಎರಡು ವರ್ಷಗಳ ಹಿಂದೆ, ತುರ್ತು ಕಾರ್ಯ ನಿಮಿತ್ತ ಚೆನ್ನೈನಿಂದ ಕನ್ನಡದ ರಾಜಧಾನಿ ಬೆಂಗಳೂರಿಗೆ ಬಂದಿಳಿಯಬೇಕಾಗಿತ್ತು. ವಿಮಾನ ನಿಲ್ದಾಣದಿಂದ ಹೊರಬಂದು ಮುಂದಿನ ವಿಮಾನಕ್ಕೆ ಸಾಕಷ್ಟು ಸಮಯವಿದ್ದುದರಿಂದ ಮಧ್ಯಾಹ್ನದೂಟ ಪೂರೈಸೋಣವೆಂದು ದೊಮ್ಮಲೂರಿಗೆ ಟ್ಯಾಕ್ಸಿ ಹಿಡಿಯಲು ತೆರಳಿದೆ. ಅಲ್ಲಿ ನಾಲ್ಕೈದು ಮಂದಿ ಟ್ಯಾಕ್ಸಿವಾಲಾರನ್ನು ವಿಚಾರಿಸಿದಾಗ (ಬಾಯಿಗೆ ಬಂದ ರೇಟು… ಚರ್ಚೆ ಮಾಡೋದು ನಮ್ಮ ಕರ್ಮ!) ಅವರೆಲ್ಲಾ ಮಾತನಾಡಿದ್ದು ಅಚ್ಚ ತಮಿಳಿನಲ್ಲಿ! ಯಾಕಂದ್ರೆ ಚೆನ್ನೈ ವಿಮಾನದಿಂದ ಬಂದವರು ತಮಿಳರೇ ಅಂತ ಅವರಿಗೆ ಬಲವಾದ ನಂಬಿಕೆ!
ಊಟ ಮುಗಿಸಿ, ಮರಳಿ ವಿಮಾನ ನಿಲ್ದಾಣಕ್ಕೆ ಹೋಗಲೆಂದು ಆಟೋ ರಿಕ್ಷಾವನ್ನು ನಿಲ್ಲಿಸಿದೆವು. ‘ಕಹಾಂ ಜಾನಾ ಹೈ ಸಾಬ್’ ಅಂತ ಆಟೋ ಚಾಲಕನಿಂದ ಪ್ರಶ್ನೆ ಎದುರಾಯಿತು. ಬಹುಶಃ ನನ್ನನ್ನು ನೋಡಿ ಇದ್ಯಾರೋ ಮಾರ್ವಾಡಿ ಇಲ್ಲವೇ ಉತ್ತರ ಭಾರತೀಯ ಇರ್ಬೇಕೂಂತ ತೀರ್ಮಾನ ಮಾಡಿರಬೇಕು. ಯಾಕಂದ್ರೆ ಆಟೋ ರಿಕ್ಷಾದವರಿಗೆ ಚಹರೆ ನೋಡಿ ತಮ್ಮ ಸಂಭಾವ್ಯ ಗಿರಾಕಿಯನ್ನು ಕೈತಪ್ಪಿ ಹೋಗದಂತೆ ಮಾಡುವ ಕಲೆ ಬಹುಶಃ ಗೊತ್ತಿರಬೇಕು.
ಆಟೋದಲ್ಲಿ ಕುಳಿತ ಮೇಲೆ, ‘ಕೌನ್ಸಾ ಫ್ಲೈಟ್ ಹೈ ಸಾಬ್’ ಅಂತ ಆತ ಕೇಳಿದಾಗ, ‘ಮಂಗಳೂರು’ ಅಂತ ಅಚ್ಚಕನ್ನಡದಲ್ಲಿ ಉದ್ದೇಶಪೂರ್ವಕವಾಗಿ ಹೇಳಿದೆ. ಆಗ ಆತನಿಗೆ ಇವರು ಕನ್ನಡದವರೇ ಅಂತ ಜ್ಞಾನೋದಯವಾಯಿತು. ಮತ್ತೆ ಕನ್ನಡದಲ್ಲೇ ಮಾತು ಮುಂದುವರಿಸಿದೆವು.
ನಾನು ಕೇಳಿದೆ… ‘ಯಾಕಪ್ಪಾ ಬೆಂಗಳೂರಲ್ಲಿದ್ದುಕೊಂಡೂ ಕನ್ನಡದಲ್ಲಿ ಮಾತನಾಡಿಸೋದಿಲ್ಲ?’. ಅಂತ ಕೇಳಿದಾಗ ಆತ ಹೇಳಿದ್ದು: ‘ಸಾರ್, ನಾನು ಕನ್ನಡದೋನೇ. ಆದ್ರೆ ನನ್ನ ಆಟೋ ಏರೋರು ಯಾರು ಕೂಡ ಕನ್ನಡ ಮಾತಾಡಲ್ಲ. ಕನ್ನಡದವರೇ ಆದ್ರೂ ವಿಮಾನ ನಿಲ್ದಾಣಕ್ಕೆ ಹೋಗೋವಾಗಲಂತೂ ಅಪ್ಪಿತಪ್ಪಿಯೂ ಕನ್ನಡ ಮಾತಾಡಲೊಲ್ಲರು. ಯಾಕೆ ಗೊತ್ತೇ? ಅವರಿಗೆ ಕನ್ನಡ ಮಾತಾಡಿದ್ರೆ ತಮ್ಮ ಪ್ರೆಸ್ಟೀಜ್ ಕಡಿಮೆ ಅನ್ನೋ ಭಾವನೆ. ಠುಸ್ ಪುಸ್ ಇಂಗ್ಲೀಷೋ, ಹಿಂದಿನೋ… ಅಥವಾ ಕನ್ನಡ ಬಿಟ್ಟು ಬೇರಾವುದೇ ಭಾಷೆ ಮಾಡಿದ್ರೇನೇ ಆತ್ಮತೃಪ್ತಿ ಮತ್ತು ಪ್ರೆಸ್ಟೀಜ್ ವಿಷ್ಯ ಕೂಡ’.
ಇದನ್ನು ಕೇಳಿ, ನಮ್ಮ ನೆಲದಲ್ಲೇ ಕನ್ನಡ ಅವಜ್ಞೆಗೊಳಗಾಗುತ್ತಿದೆ ಎಂಬ ಮಾತಿನಲ್ಲಿ ಉತ್ಪ್ರೇಕ್ಷೆ ಇರಲಿಲ್ಲ ಎಂಬುದು ಖಚಿತವಾಯಿತು. ಮತ್ತು ಈ ಮನೋಭಾವವು ಭರ್ಜರಿಯಾಗಿಯೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಕನ್ನಡಾಭಿಮಾನ ಮೆರೆಯುತ್ತಿರುವ ಪಂಗಡಗಳಲ್ಲಿ ಒಂದಾಗಿರುವ ಆಟೋ-ಟ್ಯಾಕ್ಸಿ ಚಾಲಕರಿಗೆ ಸೀಮಿತವೂ ಅಲ್ಲ. ಕನ್ನಡದ ರಾಜಧಾನಿಯಲ್ಲಿ ಕನ್ನಡದ ಸ್ಥಿತಿ ಗತಿಯಿದು!
ಅದೇ ತಮಿಳುನಾಡು ನೋಡಿ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣವೇ ಆಟೋ ಅಥವಾ ಟ್ಯಾಕ್ಸಿಯವ ಮಾತಾಡೋದೇ ತಮಿಳಿನಲ್ಲಿ. ಅಲ್ಲಿ ಇದ್ದದ್ದು ಇಲ್ಲಿ ಯಾಕಾಗುವುದಿಲ್ಲ? ಯಾಕಾಗುತ್ತಿಲ್ಲ? ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.
ಮನಸ್ಸಿನ ಉದಾರತೆ ಹೆಚ್ಚೇ ಆಯಿತು…
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಚೆನ್ನೈಗೆ ಬಂದಿದ್ದಾಗ ಹೇಳಿದ್ದ ಮಾತು ನೆನಪಾಗುತ್ತಿದೆ. “ಕನ್ನಡದ ನೆಲದಲ್ಲಿಯೇ ಕನ್ನಡ ಯಾರಿಗೂ ಬೇಡವಾಗುತ್ತಿದೆ. ಶಿಕ್ಷಣದಲ್ಲಿ ಕನ್ನಡ ಕಡ್ಡಾಯ ಮಾಡುವ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನವೂ ಸರಕಾರದಿಂದ ಸಾಧ್ಯವಾಗಿಲ್ಲ” ಎಂದಿದ್ದ ಅವರು, “ಬೆಂಗಳೂರಿನಲ್ಲಿ ಶೇ.20 ಮಾತ್ರ ಕನ್ನಡ ಮಾತನಾಡುವವರಿದ್ದಾರೆ. ನಾವೋ, ಬೇರೆ ನಾಡಿಗೆ ಹೋದಾಗ ಅಲ್ಲಿನ ಭಾಷೆ ಕಲಿತುಕೊಳ್ಳಲು ಪ್ರಯತ್ನಿಸುತ್ತೇವೆ. ಆದರೆ, ಬೆಂಗಳೂರಿಗೆ ವಲಸೆ ಬಂದವರು ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆಯೇ ಹೊರತು ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ, ನಾವು ಅವರಿಗೆ ಅವರ ತಮಿಳು ಭಾಷೆಯಲ್ಲಿಯೇ ಉತ್ತರಿಸುವ ಪ್ರಯತ್ನ ಮಾಡುತ್ತೇವೆ.” ಎಂದಿದ್ದರು. ಕನ್ನಡಿಗರು ಉದಾರ ಹೃದಯಿಗಳು, ಅವರ ಉದಾರತೆ ಹೆಚ್ಚೇ ಆಗಿದೆ ಅನ್ನಿಸುವುದಿಲ್ಲವೇ?
ಪ್ರತಿಷ್ಠೆ ಬಿಟ್ಟು ಕನ್ನಡವನ್ನು ಪ್ರೀತಿಸ್ಬೇಕು...
ಹಿಂದೆಲ್ಲಾ ಕನ್ನಡಕ್ಕಾಗಿ ಸಾಕಷ್ಟು ಮಂದಿ ಹೋರಾಟ ಮಾಡಿದ್ದಾರೆ. ಅಂದು ಪರಿಸ್ಥಿತಿಯೇ ಬೇರೆ, ಈಗಿನ ಅನಿವಾರ್ಯತೆಯ ಸ್ಥಿತಿ ಬೇರೆ. ಅಂದು ಕನ್ನಡದ ರಕ್ಷಣೆಗಾಗಿ ಹೋರಾಟ ಬೇಕಿತ್ತು, ಇಂದು ಅದನ್ನು ಉಳಿಸಿಕೊಳ್ಳುವ ಹೋರಾಟ ಎನ್ನುವುದಕ್ಕಿಂತಲೂ ಇಚ್ಛಾಶಕ್ತಿ, ಪ್ರೀತಿ, ಕಳಕಳಿ ಬೇಕಿದೆ ನಮಗೆ.
ಕನ್ನಡದ ಪ್ರಜ್ಞೆ ಕಡಿಮೆ ಆಗುತ್ತಿದೆ, ಕನ್ನಡದ ಮನಸ್ಸುಗಳು ಸಂಕೋಚಗೊಳ್ಳುತ್ತಿವೆ. ಎಲ್ಲಿಯವರೆಗೆ ಎಂದರೆ, ಚೆನ್ನೈ-ಮಂಗಳೂರು ಅಥವಾ ಚೆನ್ನೈ-ಬೆಂಗಳೂರು ರೈಲಿನಲ್ಲಿ ಹೋಗುತ್ತಿದ್ದಾಗಲೂ, ಕನ್ನಡಿಗರನೇಕರು ತಮ್ಮ ಓದುವ ತುಡಿತ ಹತ್ತಿಕ್ಕಲಾರದೆ ಸುಧಾ, ತರಂಗ, ಮಯೂರ ಇತ್ಯಾದಿಗಳನ್ನು ಬೇರೆ ಆಂಗ್ಲ ಪತ್ರಿಕೆಯ ಮಧ್ಯೆ ಇಟ್ಟು ಓದಿನ ಹಸಿವು ತಣಿಸಿಕೊಳ್ಳುತ್ತಿದ್ದುದನ್ನು ಕಣ್ಣಾರೆ ಕಂಡಿದ್ದೇನೆ. ಅಂದರೆ ಕನ್ನಡ ಓದುವುದೆಂದರೆ ಪ್ರತಿಷ್ಠೆಯ ಕೊರತೆ ಎಂಬ ಭಾವನೆಯೋ ಇವರಿಗೆ? ಎಂಥ ಅಭಿಮಾನಶೂನ್ಯತೆ!
ಕುಂದುತ್ತಿದೆ ಭಾಷಾ ಪ್ರೇಮ...
ಕನ್ನಡದ ನಡು ನಡುವೆ ಪರಭಾಷೆಯ ಬಲವಂತ ಹೇರಿಕೆಯಾಗುತ್ತಿರುವುದನ್ನು ನಾವು ವೇದನೆಯಿಂದಲೇ ಗಮನಿಸುತ್ತಿದ್ದೇವೆ. ಎಲ್ಲಿಯವರೆಗೆ ಎಂದರೆ, ನಗರ ಪ್ರದೇಶ ಒತ್ತಟ್ಟಿಗಿರಲಿ, ಹುಯ್ಯೋ ಹುಯ್ಯೋ ಮಳೆರಾಯ ಅಂತೆಲ್ಲಾ ಮಳೆಯ ಬರುವಿಕೆಗಾಗಿ ಹೊಯ್ದಾಡುತ್ತಿದ್ದ ಗ್ರಾಮಾಂತರ ಪ್ರದೇಶದ ಮನಸ್ಸುಗಳು ಕೂಡ ಇಂದು ‘ರೈನ್ ರೈನ್ ಗೋ ಅವೇ’ ಅನ್ನೋ ಮಳೆಯನ್ನೇ ಓಡಿಸಿಬಿಡುವ ಪ್ರಾಸಕ್ಕೆ ಮರುಳಾಗಿ, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ಹಾಗಂತ, ಎಲ್ಲ ಕಡೆಗಳಲ್ಲಿ ಕನ್ನಡ ಕನ್ನಡ ಅಂತೇನೂ ಗಲಾಟೆ ಮಾಡಬೇಕಿಲ್ಲ. ಜೀವನೋಪಾಯಕ್ಕೆ ಇಂದು ಆಂಗ್ಲ ಭಾಷೆ ಅಗತ್ಯವಿದೆ, ಅದು ಇದ್ದರೆ ಆಧುನಿಕ ಯುಗದ, ಹೊಸ ತಂತ್ರಜ್ಞಾನದ, ಭರ್ಜರಿ ಸಂಪಾದನೆಯ ಉದ್ಯೋಗ ದೊರೆಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಕಂಪ್ಯೂಟರ್ ಯುಗದಲ್ಲಿ ಸಾಫ್ಟ್‌ವೇರ್ ಕ್ಷೇತ್ರ ಈ ಪರಿ ಬೆಳೆದಿದ್ದು ಇಂಗ್ಲಿಷ್ ಕೋಡಿಂಗ್‌ಗಳಿಂದ ಎಂಬುದು ಸತ್ಯ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಅವುಗಳಿನ್ನೂ ಅಭಿವೃದ್ಧಿಯ ಹಂತದಲ್ಲಿವೆ ಎಂಬುದು ಕೂಡ ಅಷ್ಟೇ ನಿಜ. ಜಾಗತಿಕ ಮಟ್ಟದಲ್ಲಿ ನಾವು ಸ್ಪರ್ಧಿಸಬೇಕಿದ್ದರೆ, ಇಂಗ್ಲಿಷ್ ಶಾಲೆಗಳು ಹೆಚ್ಚಬೇಕಾಗಿದೆ ಎಂದು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಹೇಳಿ ವಿವಾದ ಸೃಷ್ಟಿಸಿದ್ದನ್ನು ಕೂಡ ಇಲ್ಲಿ ನೆನಪಿಸಿಕೊಳ್ಳಬೇಕು.
ಕನ್ನಡ ಕಲಿತವನಿಗೆ ಕನ್ನಡ ನಾಡಿನಲ್ಲಿ ಒಳ್ಳೆಯ ಉದ್ಯೋಗ ದೊರೆಯುವುದಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದಾದರೂ ಹೇಗೆ? ಮತ್ತದೇ ಕಾರಣ ಧುತ್ತನೇ ಬಂದು ನಿಲ್ಲುತ್ತದೆ, ‘ರಾಜಕೀಯ ಇಚ್ಛಾಶಕ್ತಿಯ ಕೊರತೆ’! ಅದನ್ನು ದೂರಿಯೂ ಪ್ರಯೋಜನವಿಲ್ಲ, ದೂರದೆಯೂ ಪ್ರಯೋಜನವಿಲ್ಲ.
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ ಅಂತ ನಾವೆಲ್ಲಾ ಹುಚ್ಚೆದ್ದು ಕುಣಿದವರಿದ್ದೇವೆ. ಏನು ಪ್ರಯೋಜನ ಅಂತ ಕೇಳಿದ್ರೆ, ಕೇಂದ್ರದಿಂದ ಕೋಟಿ ಕೋಟಿ ಹಣ ಬರುತ್ತದಂತೆ ಎಂಬ ಉತ್ತರವನ್ನೂ ಕೇಳಿದ್ದೇವೆ. ಅಷ್ಟಕ್ಕೇ ಸುಮ್ಮನಾಗಿದ್ದೇವೆ.
ಕನ್ನಡದ ಸುಗಂಧ ಸರ್ವವ್ಯಾಪಿ…
ನಮ್ಮ ನಿಮ್ಮೆಲ್ಲರ ವೆಬ್‌ದುನಿಯಾ ಕನ್ನಡದ ಪುಟ್ಟ ತಂಡ ಇರುವುದು ತಮಿಳರ ನಾಡಿನಲ್ಲಿ. ಹೇಳಿ ಕೇಳಿ ಭಾಷೆಯ ಮೇಲೆ ವಿಪರೀತ ಅಭಿಮಾನವಿರುವ (ಕೆಲವೊಮ್ಮೆ ದುರಭಿಮಾನವನ್ನೂ ಕಾಣುತ್ತೇವೆ) ಅಲ್ಲಿ ಇದ್ಕೊಂಡು ಏನು ಕನ್ನಡದ ಸಾಧನೆ ಮಾಡ್ತೀರಾ ಅಂತ ಉಡಾಫೆಯ ಮಾತುಗಳನ್ನು ನಮ್ಮ ಕೆಲವು ಓದುಗರೂ ಕೇಳಿದ್ದಾರೆ. ಕನ್ನಡದ ಕೈಂಕರ್ಯ ಮಾಡಲು, ಕನ್ನಡದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಲು, ತಮಿಳರ ನಾಡಿನಲ್ಲಿದ್ದುಕೊಂಡು ಕನ್ನಡದ ಹೆಸರು ಹೇಳಿ ಅನ್ನ ತಿನ್ನುತ್ತೇವೆ ಎಂದು ಎದೆತಟ್ಟಿ ಹೇಳಿಕೊಳ್ಳಲು ದೇಶ-ಗಡಿ ಯಾವುದೂ ಅಡ್ಡಿಯಾಗುವುದಿಲ್ಲ ಎಂಬುದೇ ನಮ್ಮ ಉತ್ತರ. ಕನ್ನಡವೆಂಬುದು ಎಲ್ಲಿದ್ದರೂ ತನ್ನ ಸುಗಂಧ ಬೀರುತ್ತಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಆದರೆ ಹಾಗಂತ, ನಮ್ಮ ತಾಯ್ನುಡಿಯ ಬಗ್ಗೆ ನಮಗೆ ತಾತ್ಸಾರವಿರಬಾರದು, ನಾಚಿಕೆಯೂ ಇರಬಾರದು ಅಲ್ಲವೇ? ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳು ಸಮದಂಡಿಯಾಗಿದ್ದರೆ, ಒಂದು ಭಾಷೆಯು ಪ್ರೀತಿಗೆ ಮತ್ತೊಂದು ವ್ಯವಹಾರಕ್ಕೆ. ಪ್ರೀತಿ ಎಂಬುದು ಬಲವಂತವಾಗಿ ಹುಟ್ಟಲಾರದು ಎಂಬುದು ಯುವ ಜನಾಂಗದ ಅನುಭವ. ಹೀಗಾಗಿ ಕನ್ನಡ ಪ್ರೀತಿ ಮನಸ್ಸಿನೊಳಗೆ ಹುಟ್ಟಬೇಕು. ಅದು ಭಾವನಾತ್ಮಕವಾಗಿ ಬೆಳಯಬೇಕೇ ಹೊರತು, ವ್ಯಾವಹಾರಿಕವಾಗಿ ನಮ್ಮೊಳಗೆ ಮೊಳೆತುಕೊಂಡು ಬೆಳೆದರೆ ಖಂಡಿತಾ ಕನ್ನಡದ ಉದ್ಧಾರ ಸಾಧ್ಯವಿಲ್ಲ.
ಕನ್ನಡ ಬೆಳೆಯಬೇಕಿದ್ದರೆ, ಕನ್ನಡಿಗರು ಬೆಳೆಯಬೇಕು. ಹೀಗಾಗಿ ಉದ್ಯೋಗ ಕ್ಷೇತ್ರಗಳಲ್ಲಿ ಕಟ್ಟಾ ಕನ್ನಡಿಗರಿಗೆ ಮೀಸಲಾತಿ ನೀಡಬೇಕು, ಆದರೆ ಕನ್ನಡದ ಹೆಸರಲ್ಲಿ ಉದ್ಯೋಗ ಗಿಟ್ಟಿಸಿಕೊಂಡವರು ಕನ್ನಡದ ಅಭಿವೃದ್ಧಿಗೆ ಇಂಥದ್ದನ್ನು ಮಾಡಬೇಕು ಎಂಬ ಕಟ್ಟುಪಾಡು ಇರಬೇಕು. ಏನಂತೀರಿ?
ಕನ್ನಡ ಭಾಷೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನೆಲೆಗೊಳಿಸಲು ವಿಫಲವಾದರೆ ಅದು ಉಳಿಯುವ ಅವಶ್ಯಕತೆ ಇಲ್ಲ.
ಅವಿನಾಶ್ ರವರೆ, ಉತ್ತಮ ಬರವಣಿಗೆ. ಆದರೆ, ಕನ್ನಡಿಗರಿಗೇಕೆ ಕರ್ನಾಟಕದಲ್ಲಿ ಮೀಸಲಾತಿ? ನಿಮ್ಮ ಅರ್ಥದಲ್ಲಿ ಕನ್ನಡಿಗರು ತಮ್ಮ ಸ್ವಶಕ್ತಿಯಿಂದ ಕೆಲಸ ಗಿಟ್ಟಿಸಿಕೊಳ್ಳಲಾರರು ಎಂದೇ? ಆದಾಗ್ಯೂ, ಕನ್ನಡದ ಬಗೆಗಿನ ನಿಮ್ಮ ಅಭಿಮಾನ ಹೆಮ್ಮೆ ತರುವಂಥದ್ದು.
ಮಹೇಶ್ ರವರೆ, “ಹಾಲುಣಿಸಲಾರದ ತಾಯಿ, ಉಳಿಯುವ ಅವಶ್ಯಕತೆಯಿಲ್ಲ” – ಹೀಗಿದೆ ನಿಮ್ಮ ಅಭಿಪ್ರಾಯ. ಪುಟ್ಟ ಮಗುವಾಗಿ ಈ ಪ್ರಪಂಚಕ್ಕೆ ಬಂದಾಗ, ನಮ್ಮನ್ನು ಜೋಪಾನ ಮಾಡಿ ದೊಡ್ಡವರನ್ನಾಗಿ ಮಾಡಿರುವ ತಾಯಿಯ ಬಗ್ಗೆ ಪ್ರೀತಿ, ಅಭಿಮಾನ, ಗೌರವ ಮತ್ತು ಕಾಳಜಿಯನ್ನು ತೋರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನೀವು ಹೇಳಿರುವ ‘ಸ್ಪರ್ಧಾತ್ಮಕ ಜಗತ್ತು’ ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ? ಕನ್ನಡ ಭಾಷೆಯಿಂದ ನಾವೇಕೆ ಏನನ್ನಾದರೂ ಅಪೇಕ್ಷಿಸಬೇಕು? ಹೊರೆತಾಗಿ, ನಮ್ಮ ತಾಯ್ನಾಡಿಗಾಗಿ, ನಮ್ಮ ಭಾಷೆಗಾಗಿ ‘ಸ್ಪರ್ಧೆ’ಗಳ ಗೊಡವೆಯನ್ನು ಬಿಟ್ಟು ಒಟ್ಟಾಗಿ ಕೈಜೋಡಿಸಬಾರದೇಕೆ? ಯುವಜನರಲ್ಲಿ ನಿಮ್ಮ ಹೇಳಿಕೆಯಂತಹ ಭಾವನೆ ಇದ್ದಲ್ಲಿ, ಕನ್ನಡ ಭಾಷೆಯ ಉಳಿವು ಕಷ್ಟಸಾಧ್ಯ.
“ಬೆಂಗಳೂರಿನಲ್ಲಿ ಶೇ.20 ಮಾತ್ರ ಕನ್ನಡ ಮಾತನಾಡುವವರಿದ್ದಾರೆ. !!!
ಇದು ಸುಳ್ಳು. ಈ ರೀತಿ ಹೆದರಿಕೊಳ್ಳುವುದೇ ಕನ್ನಡಿಗರ ಮೊದಲ ವೀಕ್ನೆಸ್. ಯಾವ ಕಡೆಯಿಂದ ತಿರುಗಿಸಿ ನೋಡಿದರೂ ಬೆಂಗಳೂರಿನಲ್ಲಿ ಶೇ. 80 ಕನ್ನಡ ಮಾತಾಡುವವರಿದ್ದಾರೆ. ಶೇ. ೫೦ ಕನ್ನಡ ತಾಯಿನುಡಿಯವರಿದ್ದಾರೆ.
ಭಾಷೆಗಾಗಿ ನಾವಿಲ್ಲ, ಭಾಷೆ ನಮಗಾಗಿದೆ. ಪ್ರಶಾಂತ್ ರವರೇ, ಇದನ್ನೇ ನಾನು ನನ್ನ ತಾಣ http://www.jnanakosha.org ನಲ್ಲಿ ಪ್ರತಿಪಾದಿಸಿದ್ದೇನೆ. ಕೆಲವು ಸತ್ಯಗಳು ಕಹಿಯಾಗಿರುತ್ತವೆ.
ಮಹೇಶ್ ರವರೆ, ನಿಮ್ಮ ತರ್ಕಗಳು ಏನೇ ಇದ್ದರೂ ಅವು ಕೇವಲ ನಿಮ್ಮೊಟ್ಟಿಗಿರಲಿ. ನಿಮಗೆ ಕನ್ನಡ ಬೇಡವೆನಿಸಿದರೆ ಬಿಡಿ. ನಿಮಗೆ ಬೇಡವಾದ ನಮ್ಮ ಕನ್ನಡ ಭಾಷೆಯ ‘ಉಳಿವು-ಅಳಿವಿನ’ ಪ್ರಶ್ನೆ ನಿಮಗೇಕೆ? ಕನ್ನಡವನ್ನು ಉಳಿಸಿಕೊಳ್ಳುವ ಉಸ್ತುವಾರಿ ಸಮಸ್ತ ಕನ್ನಡಿಗರದ್ದು. ನಿಮಗೆ ಹಿತವಾಗಿರುವ ವಿಷವನ್ನು ಬೇರೆಯವರಿಗೆ ಉಣಬಡಿಸುವ ಪ್ರಯತ್ನ ಬೇಡ.
“ಕನ್ನಡ ಭಾಷೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನೆಲೆಗೊಳಿಸಲು ವಿಫಲವಾದರೆ ಅದು ಉಳಿಯುವ ಅವಶ್ಯಕತೆ ಇಲ್ಲ”. ಇದನ್ನು ಒಂದಲ್ಲ, ನೂರಲ್ಲ, ಸಾವಿರ ಸಾರಿ ಹೇಳುತ್ತೇನೆ. ಇನ್ನು ನನಗೆ ಕನ್ನಡ ಬೇಕೆ, ಬೇಡವೇ ಎನ್ನುವ ಪ್ರಶ್ನೆ. ಇದಕ್ಕೆ ನನ್ನ ಮುಂದಿರುವ ಒಂದು ಸಮಸ್ಯೆಯನ್ನು ಉದಾಹರಿಸುತ್ತೇನೆ. ನನಗೀಗ PHP ಸಿಂಫೋನಿ ಫ್ರೇಂವರ್ಕನ್ನು ಅರಿಯಬೇಕಾಗಿದೆ. ಇದಕ್ಕಾಗಿ ನಾನು ಖಂಡಿತ ಇಂಗ್ಲಿಷನ್ನು ಅವಲಂಬಿಸಲೇಬೇಕಾಗಿದೆ. ಈ ಫ್ರೇಂವರ್ಕನ ಡಾಕ್ಯುಮೆಂಟೇಶನ್ ಕನ್ನಡದಲ್ಲಿ ಇಲ್ಲ. ಒಮ್ಮೆ ಕನ್ನಡದಲ್ಲಿ ಇದ್ದಿದ್ದರೆ ನಾನು ಅದನ್ನು ಅರಿತುಕೊಳ್ಳುವ ವೇಗ ಇಂಗ್ಲಿಷಿನಲ್ಲಿ ಒದುವದಕ್ಕಿಂತ ಎಷ್ಟೋ ಪಟ್ಟು ಹೆಚ್ಚು. ಇರಲಿ, ಯಾವುದೇ ವಿಷಯ ಹೆಚ್ಚು ಹೆಚ್ಚು ಜಟಿಲವಾದಂತೆ ಅದು ಕನ್ನಡದಲ್ಲಿದ್ದರೆ ನಾನು ಅದನ್ನು ಅರಿತುಕೊಳ್ಳು ಸಾಮರ್ಥ್ಯ ಅದೇ ವಿಷಯ ಇನ್ನೊಂದು ಭಾಷೆಯಲ್ಲಿರುವದಕ್ಕಿಂತ ಹೆಚ್ಚು. ಅದರಲ್ಲೂ ವಿಜ್ಞಾನ, ತಂತ್ರಜ್ಞಾನ ವಿಷಯಗಳಿಗೆ ಇದು ಹೆಚ್ಚು ಅನ್ವಯಿಸುತ್ತದೆ. ಇದು ನಾನು. ನಾನಿರುವದು ಹೀಗೆ. ನನಗೆ ಹೀಗಿದೆಯೆಂದು ಇನ್ನೊಬ್ಬರಿಗೂ ಹೀಗೇ ಇರಬೇಕು ಎಂದೇನೂ ಇಲ್ಲ. ನನಗೆ ಬೇಕಾದ್ದನ್ನು ಸಾಧಿಸಿಕೊಳ್ಳುವದು ನನ್ನ ಹೊಣೆ. ಅದಕ್ಕಾಗಿಯೇ ನನ್ನ ತಾಣದ (www.jnanakosha.org) ಉದ್ದೇಶ. ನನ್ನ ಹಾಗೆಯೇ ಕನ್ನಡದಲ್ಲಿ ಹೆಚ್ಚು ವಿಷಯಗಳ ಅವಶ್ಯಕತೆ ಇರುವವರು ಅದಕ್ಕೆ ಸೇರುತ್ತಿದ್ದಾರೆ. ಕನ್ನಡದಲ್ಲಿ ನನಗೆ ಹೆಚ್ಚು ವಿಷಯಗಳು ಬೇಕು ಯಾಕೆಂದರೆ ಯಾವುದೇ ವಿಷಯ ಕನ್ನಡದಲ್ಲಿದ್ಲರೆ ಅದು ಆ ವಿಷಯದಲ್ಲಿ ನನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಪ್ರಶಾಂತ್ ರವರೇ ನನ್ನ ತರ್ಕವನ್ನು ವಿಷಕ್ಕೆ ಹೋಲಿಸಿದರಲ್ಲಾ ಹಾಗಾಗಿ ದೀರ್ಘವಾಗಿ ಬರೆಯಬೇಕಾಗಿ ಬಂತು. ನಾನು ಏನು ಹೇಳುತ್ತದ್ದೇನೆಂಬುದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.
ನನ್ನಂತವರ ಸಮಸ್ಯೆಯನ್ನು ಅರಿತುಕೊಳ್ಳಿ. ಜೀವನದಲ್ಲಿ ಭಾಷೆಯ ಅವಶ್ಯಕತೆ ಏನು ಅನ್ನುವದನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿ.
ಮಹೇಶ್ ರವರೆ, ನೀವು “ಕನ್ನಡ ಭಾಷೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನೆಲೆಗೊಳಿಸಲು ವಿಫಲವಾದರೆ ಅದು ಉಳಿಯುವ ಅವಶ್ಯಕತೆ ಇಲ್ಲ” ಎಂದು ಹೇಳುವುದಕ್ಕಿಂತ “ಕನ್ನಡ ಭಾಷೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನನ್ನನ್ನು ನೆಲೆಗೊಳಿಸಲು ವಿಫಲವಾದರೆ ಅದು ನನಗೆ ಅವಶ್ಯಕತೆ ಇಲ್ಲ” ಎಂದು ಹೇಳಿದಿದ್ದರೆ ನಾನು ಪ್ರತಿಕ್ರಿಯಿಸುತ್ತಲೇ ಇರಲಿಲ್ಲ. ಈ ನಿಮ್ಮ ಚಿಂತನೆಯನ್ನು ಹೊರಜಗತ್ತಿಗೆ ಪ್ರಸ್ತುತಪಡಿಸುವಾಗ ನೀವು ಖಂಡಿತವಾಗಿಯೂ ಎಡವಿದ್ದೀರಿ. ನಿಮಗೆ ವೈಯಕ್ತಿಕವಾಗಿ ಭಾಷೆ ಬೇಡವಾದರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ನಿಮಗೆ ಬೇಡವಾದ ಭಾಷೆ ಉಳಿಯುವ ಅವಶ್ಯಕತೆ ಇಲ್ಲ ಎಂಬ ವಾದ ಸರಿಯಲ್ಲ.
ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಕನ್ನಡ ಮಾತ್ರವಲ್ಲ, ಆಂಗ್ಲ ಭಾಷೆಯನ್ನು ಹೊರೆತುಪಡಿಸಿ ಇತರೆ ಯಾವುದೇ ಭಾಷೆಗಳಲ್ಲಿ ಗ್ರಂಥಗಳು ಲಭ್ಯವಿಲ್ಲ. ನಮ್ಮ ಭಾಷೆಯಲ್ಲಿ ಅಂಥಹ ಸಾಹಿತ್ಯ ಅಗತ್ಯವಿದ್ದಲ್ಲಿ ನಾವೇ ಅದನ್ನು ಅಭಿವೃದ್ಧಿಪಡಿಸಬೇಕೆ ಹೊರೆತು, ಭಾಷೆಯನ್ನು ಅನಗತ್ಯ ಎನ್ನುವುದು ಯಾವ ನ್ಯಾಯ? ಅಂಥಹ ನಿಟ್ಟಿನಲ್ಲಿ ನಿಮ್ಮ http://www.jnanakosha.org ಪ್ರಯತ್ನ ಪ್ರಶಂಸಾರ್ಹ.
ಪ್ರಶಾಂತ್ ರವರೇ, ಇಂಗ್ಲಿಷ್, ಫ್ರೆಂಚ್, ಜರ್ಮನ್ ಭಾಷೆಗಳನ್ನು ಅಲ್ಪ ಮಟ್ಟಿಗೆ ಅರಿತವನಾಗಿ ಈ ಮಾತನ್ನು ಹೇಳುತ್ತಿದ್ದೇನೆ, ಯಾರು ಹೇಳಿದ್ದು ನಿಮಗೆ ವಿಜ್ಞಾನ, ತಂತ್ರಜ್ಞಾನ ಇಂಗ್ಲಿಷ್ ಬಿಟ್ಟು ಇತರ ಭಾಷೆಗಳಲ್ಲಿ ಇಲ್ಲ ಎಂದು. ಜಗತ್ತಿನ ಬಹುತೇಕ ಸರ್ವಶ್ರೇಷ್ಠ ವಿಜ್ಞಾನಿಗಳು ತಮ್ಮ ಸ್ವಂತ ಭಾಷೆಯಲ್ಲೇ ವಿಜ್ಞಾನ, ತಂತ್ರಜ್ಞಾನ ಕಲಿತಿದ್ದಾರೆ ಮತ್ತು ತಮ್ಮ ಭಾಷೆಯಲ್ಲೇ ಸಿದ್ಧಾಂತ ಮಂಡನೆ ಮಾಡಿದ್ದಾರೆ. ಜಗತ್ತಿನ ಸರ್ವಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬನಾದ ಐನ್ ಸ್ಟೈನ್ ತನ್ನ ಸುಪ್ರಸಿದ್ದವಾದ ರಿಲೇಟಿವಿಟಿ ಸಿದ್ಧಾಂತವನ್ನು ಮಂಡಿಸಿದ್ದು ಜರ್ಮನ್ ಭಾಷೆಯಲ್ಲಿ. ಆ ಸಮಯದಲ್ಲಿ ಅವನ ಇಂಗ್ಲಿಷ್ ಜ್ಞಾನ ಅಷ್ಟಕಷ್ಚೆ. ಆಮೇಲೆ ಅದು ಇಂಗ್ಲಿಷ್ ಸೇರಿದಂತೆ ಇನ್ನಿತರ ಭಾಷೆಗಳಿಗೆ ಬೇರೆಯವರಿಂದ ಅನುವಾದಿಸಲ್ಪಟ್ಟಿದೆ.
ಇಂದೂ ಸಹ ಬಹುತೇಕ ಓಪನ್ ಸೋರ್ಸ್ ಟೆಕ್ನಾಲಜಿಗಳು ಇಂಗ್ಲಿಷ್ ಸೇರಿದಂತೆ ಹಲವಾರು ಭಾಷೆಗಳಲ್ಲಿ ಇರುವದನ್ನು ಕಾಣಬಹುದು. ತಮ್ಮ ಭಾಷೆಯಲ್ಲಿದ್ದರೆ ಅರ್ಥಮಾಡಿಕೊಳ್ಳುವದು ಸುಲಭ ಎನ್ನುವದೊಂದೇ ಇದಕ್ಕೆ ಕಾರಣ.
ಇಲ್ಲಿ ಭಾಷೆಯ ಅಳಿವು , ಉಳಿವಿನ ಪ್ರಶ್ನೆಗಿಂತ ನಮಗೆ ಇಂದು ಜೀವಿಸಲು ಯಾವ ಭಾಷೆಯ ಅವಶ್ಯಕತೆ ಇದೆ ಅನ್ನುವದೇ ಮುಖ್ಯ.
“ಕನ್ನಡ ಭಾಷೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನೆಲೆಗೊಳಿಸಲು ವಿಫಲವಾದರೆ ಅದು ಉಳಿಯುವ ಅವಶ್ಯಕತೆ ಇಲ್ಲ.”
“ಇಲ್ಲಿ ಭಾಷೆಯ ಅಳಿವು , ಉಳಿವಿನ ಪ್ರಶ್ನೆಗಿಂತ ನಮಗೆ ಇಂದು ಜೀವಿಸಲು ಯಾವ ಭಾಷೆಯ ಅವಶ್ಯಕತೆ ಇದೆ ಅನ್ನುವದೇ ಮುಖ್ಯ.”
ಮಹೇಶ್ ರವರೆ, ಮೇಲಿನ ನಿಮ್ಮ ಅನಿಸಿಕೆಗಳು ತದ್ವಿರುದ್ಧವಾಗಿ ಕಂಡುಬರುತ್ತವೆ. ಮೊದಲಿಗೆ ಕನ್ನಡ ಉಳಿಯುವ ಅವಶ್ಯಕತೆ ಇಲ್ಲ ಎನ್ನುವ ನೀವು, ಕೊನೆಗೆ ಉಳಿವು ಅಳಿವಿನ ಪ್ರಶ್ನೆ ಅಲ್ಲ ಎನ್ನುತ್ತೀರಿ. ಮೇಲಿನವು ದ್ವಂದ್ವ ಹೇಳಿಕೆಗಳಂತೆ ಕಂಡುಬರುತ್ತವಾದ್ದರಿಂದ ಮುಂದಿನ ತರ್ಕ ಅನಗತ್ಯ ಎಂದು ನನ್ನ ಅಭಿಪ್ರಾಯ.
ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕತೆ ಇಲ್ಲ, ಕನ್ನಡ ತಾಯಿಯ ಎದೆಯಲ್ಲಿ ಹಾಲಿಲ್ಲ. ಎಂದು ನೀವು ಅಸ್ಯೂಮ್ ಮಾಡಿಕೊಂಡಿದ್ದರೆ ಮಾತ್ರ ನಿಮಗೆ ನನ್ನ ಹೇಳಿಕೆಯಲ್ಲಿ ದ್ವಂದ್ವ ಕಾಣಸಿಗಲು ಸಾಧ್ಯ. ನೀವು ಅಂತರ್ಯದಲ್ಲಿ ಕನ್ನಡ ಭಾಷೆಯ ಬಗ್ಗೆ ಇಂತಹ ಭಾವನೆಯಿಟ್ಟುಕೊಂಡು ನಿಮ್ಮ ಪ್ರೀತಿ ಪಾತ್ರವಾದ ಕನ್ನಡವನ್ನು ಈಗಾಗಲೇ ಅರ್ಧ ಸಾಯಿಸಿದ್ದೀರಿ.
@ Prashanth,
“ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಕನ್ನಡ ಮಾತ್ರವಲ್ಲ, ಆಂಗ್ಲ ಭಾಷೆಯನ್ನು ಹೊರೆತುಪಡಿಸಿ ಇತರೆ ಯಾವುದೇ ಭಾಷೆಗಳಲ್ಲಿ ಗ್ರಂಥಗಳು ಲಭ್ಯವಿಲ್ಲ.” ಎಂದಿದ್ದೀರಿ.
ಜಗತ್ತಿನ ಹಲವಾರು ಭಾಷೆಗಳಲ್ಲಿ ಇಂಗ್ಲೀಷ್ ನಲ್ಲಿರುವಷ್ಟೇ ವಿಜ್ಞಾನ ತಾಂತ್ರಿಕ ಗ್ರಂಥಗಳಿವೆ. ಬೇರೆ ಹಲವು ವಿಷಯಗಳಲ್ಲಿ ಇಂಗ್ಲೀಷ್ ಗಿಂತಲೂ ಸಮೃದ್ಧ ಗ್ರಂಥಗಳಿವೆ. ನಮಗೆ ಆ ಭಾಷೆಗಳು ಬರುವುದಿಲ್ಲವಾದ ಕಾರಣ ನಮಗೆ ಅವುಗಳ ಪರಿಚಯವಿಲ್ಲ ಅಷ್ಟೆ. ನಮಗೆ ಗೊತ್ತಿಲ್ಲದೇ ಇರುವ ವಿಷಯಗಳು ಇಲ್ಲವೇ ಇಲ್ಲ ಎನ್ನುವುದು ಸರಿಯಲ್ಲ.
ಅಜಯ್ ರವರೆ,
ಹೌದು. ಬರೆಯುವಾಗ ನನ್ನಿಂದ ತಪ್ಪಾಗಿದೆ. ಆ ವಾಕ್ಯವನ್ನು ಬರೆಯುವಾಗ ನನ್ನ ಆಲೋಚನೆಯೆಲ್ಲಾ ಭಾರತೀಯ ಭಾಷೆಗಳ ಬಗ್ಗೆ ಇದ್ದಿತು. ಆ ವಾಕ್ಯವನ್ನು ಹೀಗೆ ಓದಿಕೊಳ್ಳಿ:
“ವಿಜ್ಞಾನ ಹಾಗೂ ತಂತ್ರಜ್ಞಾನಗಳಲ್ಲಿ ಕನ್ನಡ ಮಾತ್ರವಲ್ಲ, ಆಂಗ್ಲ ಭಾಷೆಯನ್ನು ಹೊರೆತುಪಡಿಸಿ ಇತರೆ ಯಾವುದೇ ಭಾರತೀಯ ಭಾಷೆಗಳಲ್ಲಿ ಗ್ರಂಥಗಳು ಅಗಾಧವಾಗಿ ಲಭ್ಯವಿಲ್ಲ.”
ನನ್ನ ಮೇಲಿನ ಪ್ರತಿಕ್ರಿಯೆ ಮಹೇಶ್ ರವರು ಚರ್ಚಿಸಿದ PHP Symphony Framework ವಿಷಯಕ್ಕಷ್ಟೇ ಸೀಮಿತವಾಗಿದೆ. ಹಾಗೆ ನೋಡಿಕೊಂಡರೆ, PHP ಅನ್ನು English ನಲ್ಲಿ ಬಿಟ್ಟು ಬೇರೆ ಭಾಷೆಯಲ್ಲಿ code ಮಾಡಲು ಸಾಧ್ಯವಿಲ್ಲ. ಅದನ್ನು ಉಪಯೋಗಿಸಲು ಸುಲಭವಾಗುವಂತೆ Documentation ಗಳು ಮಾತ್ರ ಅನುವಾದಗಳಲ್ಲಿ ಲಭ್ಯ. ಬೇರೆಯ ಭಾಷೆಯಲ್ಲಿ ಅನುವಾದ ಲಭ್ಯವಿರುವಂತೆ, ಕನ್ನಡಕ್ಕೆ ಅನುವಾದ ಮಾಡುವುದು ‘ಕನ್ನಡಿಗರಾದ ನಮ್ಮ ಜವಾಬ್ದಾರಿಯೇ ಹೊರೆತು ಕನ್ನಡ ಭಾಷೆಯದ್ದಲ್ಲ’ ಎಂದು ಹೇಳುವುದು ನನ್ನ ಆಶಯವಷ್ಟೇ.
ಮಹೇಶ್, ಪ್ರಶಾಂತ್, ಅಜಯ್,
ಕನ್ನಡ ಕುರಿತು ಎಲ್ಲ ಕನ್ನಡಿಗರಿಗೂ ಹೆಮ್ಮೆ ಇದೆ, ಇರಬೇಕು ಮತ್ತು ಜವಾಬ್ದಾರಿ ಇದೆ, ಇಲ್ಲವೆಂದಾದರೆ ಇರಬೇಕು. ಅನ್ನ ಕೊಡುವ ಕನ್ನಡದ ಬಗ್ಗೆ ಎಂದಿಗೂ ತಾತ್ಸಾರವಂತೂ ಸಲ್ಲದು. ಕನ್ನಡವೇ ನಮ್ಮನ್ನು ಬೆಳೆಸಬೇಕು ಎಂಬುದು ತಪ್ಪು. ನಾವು ನಮ್ಮ ಪ್ರಯತ್ನದಿಂದ ಕನ್ನಡವನ್ನು ಎಳೆದುಕೊಂಡು ಮುಂದೆ ಹೋಗಬೇಕು. ನೀನು ಬೆಳೆದರೆ ನಾನು ಬೆಳೆವೆನು ಎಂಬ ಭಾವ ನಮ್ಮದಾಗಬೇಕು.
ಚರ್ಚೆ ನಡೆಸಿದ್ದಕ್ಕೆ ಧನ್ಯವಾದಗಳು. ತಡವಾಗಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ.