Type in Kannada: ಐಫೋನ್, ಆಂಡ್ರಾಯ್ಡ್ ಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಈಗ ಮತ್ತಷ್ಟು ಸುಲಭ

0
206

How to Type in Kannada: ಅಂತರ್ಜಾಲದ ಸಂಪರ್ಕವಿರುವ ಸಾಮಾಜಿಕ ಮಾಧ್ಯಮಗಳಲ್ಲಿ ಅಥವಾ ಎಸ್ಎಂಎಸ್ ಕಳುಹಿಸುವಾಗ ಈಗಲೂ ಕನ್ನಡ ಲಿಪಿ ಬಳಕೆಯ ಬಗ್ಗೆ ಬಹುತೇಕರಿಗೆ ಅದೇನೋ ‘ರಾಕೆಟ್ ಸೈನ್ಸ್’ ಎಂಬ ಉಪೇಕ್ಷೆಯ ಭಾವನೆ ಇದೆ. ಈ ಕಾರಣಕ್ಕಾಗಿಯೇ ಕನ್ನಡವನ್ನು ಆಂಗ್ಲ ಲಿಪಿಯಲ್ಲಿಯೇ ಟೈಪ್ ಮಾಡಿ ಸಂದೇಶ ಕಳುಹಿಸುವವರು ಈಗಲೂ ಇದ್ದಾರೆ. ಇದನ್ನು ಕಂಗ್ಲಿಷ್ ಎಂದು ಕರೆಯಲಾಗುತ್ತದೆಯಾದರೂ, ಓದುವವರಿಗಂತೂ ಬಲುದೊಡ್ಡ ಹಿಂಸೆ. ಯಾಕೆಂದರೆ ಕನ್ನಡವನ್ನು ಸುಲಭವಾಗಿ ಬೆರಳಚ್ಚು ಮಾಡಲು ಸಾಕಷ್ಟು ತಂತ್ರಾಂಶಗಳು ಈಗಂತೂ ಧಂಡಿಯಾಗಿ ಲಭ್ಯ ಇವೆ.

ನಾವೆಲ್ಲ ಪ್ರತಿದಿನ ಬಳಸುವ ಮೊಬೈಲ್ ಫೋನ್‌ಗಳ ತಯಾರಕರೇ ಭಾರತದಲ್ಲಿ ಭಾಷಾ ಬಳಕೆದಾರರ ಪ್ರಗತಿಯನ್ನು ಮನದಟ್ಟು ಮಾಡಿಕೊಂಡು, ಕನ್ನಡ ಸಹಿತ ಭಾರತೀಯ ಭಾಷೆಗಳ ಕೀಬೋರ್ಡ್‌ಗಳನ್ನು ಅಳವಡಿಸಿಯೇ ಕೊಡುತ್ತಾರೆ. ಅದರ ಹೊರತಾಗಿ, ಇಂಗ್ಲಿಷಿನಲ್ಲಿ ಟೈಪ್ ಮಾಡಿದ್ದನ್ನು ಕನ್ನಡದಲ್ಲಿ ಮೂಡಿಸಬಲ್ಲ ಹಲವಾರು ಖಾಸಗಿ ಆ್ಯಪ್‌ಗಳು ಕೂಡ ಸಾಕಷ್ಟು ಲಭ್ಯ ಇವೆ. ಆಂಡ್ರಾಯ್ಡ್ ಫೋನ್‌ಗಳಲ್ಲಂತೂ ಜಸ್ಟ್ ಕನ್ನಡ, ಪದ ಕನ್ನಡ, ಗೂಗಲ್‌ನ ಜಿಬೋರ್ಡ್, ಸ್ವರಚಕ್ರ, ಎನಿಸಾಫ್ಟ್, ಪಾಣಿನಿ, ಬ್ರಾಹ್ಮೀ, ಸ್ಪರ್ಶ್, ಮಲ್ಟಿಲಿಂಗ್, ಇಂಡಿಕ್ ಕೀಬೋರ್ಡ್ ಮೊದಲಾದ ಸಾಕಷ್ಟು ಕೀಲಿಮಣೆ ಆ್ಯಪ್‌ಗಳಿವೆ.

ಅಲ್ಲದೆ, ಇವುಗಳಲ್ಲಿ ಟೈಪಿಂಗ್ ಮಾಡಲು ನಮಗೆ ಹೆಚ್ಚು ಅನುಕೂಲವಿರುವ ಲೇಔಟ್ ಆಯ್ಕೆ ಮಾಡಿಕೊಳ್ಳುವುದಕ್ಕೂ ಅವಕಾಶಗಳಿವೆ. ಮುಖ್ಯವಾಗಿ ಹಿಂದಿನಿಂದ ಚಾಲ್ತಿಯಲ್ಲಿರುವ ಇನ್‌ಸ್ಕ್ರಿಪ್ಟ್ ಲೇಔಟ್ (ಕಡಿಮೆ ಕೀ ಬಳಕೆಯಿಂದ ವೇಗದ ಟೈಪಿಂಗ್ ಸಾಧ್ಯ), ಈಗ ಜನಸಾಮಾನ್ಯರಲ್ಲಿ ಹೆಚ್ಚು ಬಳಕೆಯಲ್ಲಿರುವ ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ) ಎಂದರೆ, ಇಂಗ್ಲಿಷ್ ಕೀಬೋರ್ಡಿನಲ್ಲಿ ಟೈಪ್ ಮಾಡಿದ್ದನ್ನು ಕನ್ನಡದ ಲಿಪಿಗೆ ಪರಿವರ್ತಿಸುವ ಧ್ವನ್ಯಾತ್ಮಕ (Phonetic) ಲೇಔಟ್.

ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಎಲ್ಲ ಮಾದರಿಯ ಕೀಬೋರ್ಡ್‌ಗಳನ್ನು ಕನ್ನಡದ ಟೆಕೀ ಮನಸ್ಸುಗಳು ಅದಾಗಲೇ ಜನರಿಗೆ ಉಚಿತವಾಗಿ ನೀಡಿವೆ. ಆದರೆ, ಆ್ಯಪಲ್ ಕಂಪನಿಯ ಐಒಎಸ್ ಇರುವ ಐಫೋನ್, ಐಪ್ಯಾಡ್ (ಟ್ಯಾಬ್ಲೆಟ್) ಮತ್ತು ಮ್ಯಾಕ್ (ಕಂಪ್ಯೂಟರು)ಗಳಲ್ಲಿ ಕನ್ನಡ ಟೈಪ್ ಮಾಡುವುದಕ್ಕೆ ಇತ್ತೀಚಿನವರೆಗೂ ಸಮಸ್ಯೆಯಿತ್ತು. ಇತ್ತೀಚೆಗೆ ಬಿಡುಗಡೆಯಾದ ಹೊಸ ಐಒಎಸ್ 17ರಲ್ಲಿ (ಕಾರ್ಯಾಚರಣಾ ವ್ಯವಸ್ಥೆಯ ಹೊಸ ಆವೃತ್ತಿ) ಈ ಸಮಸ್ಯೆ ನಿವಾರಣೆಯಾಗಿದೆ. 2017ರಲ್ಲಿ ಬಿಡುಗಡೆಯಾದ ಐಒಎಸ್ 11 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಕನ್ನಡ ಇನ್‌ಸ್ಕ್ರಿಪ್ಟ್ ವಿನ್ಯಾಸದ ಕೀಬೋರ್ಡ್ ಅಂತರ್-ನಿರ್ಮಿತವಾಗಿ ಲಭಿಸಿದ್ದರೆ, ಮೊನ್ನೆ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಹೊಸ ಐಒಎಸ್ 17 ಆವೃತ್ತಿಯಲ್ಲಿ ಟ್ರಾನ್ಸ್‌ಲಿಟರೇಶನ್ (ಲಿಪ್ಯಂತರ) ಲೇಔಟ್ ಇರುವ ಕೀಲಿಮಣೆಯನ್ನೂ ಒದಗಿಸಿರುವುದು ಕನ್ನಡಿಗರಿಗೆ ಖುಷಿ ತಂದಿದೆ. ಬಹುಶಃ ಇದರ ಪ್ರಚಾರ ಆಗಿದ್ದು ಕಡಿಮೆ. ಇದು ಅಂತರ್-ನಿರ್ಮಿತವಾಗಿಯೇ ಬಂದಿದೆ. ಇದನ್ನು ಹಲವು ದಿನಗಳಿಂದ ಬಳಸಿದ್ದು, ಬಳಕೆಗೆ ಸುಲಭ ಎಂಬುದು ಅರಿವಿಗೆ ಬಂದಿದೆ. ಕನ್ನಡ ಟೈಪಿಂಗ್ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ಐಫೋನ್ ಬಳಕೆದಾರರು ಹೆಚ್ಚಾಗಿ ಕಂಗ್ಲಿಷನ್ನೇ ಬಳಸುತ್ತಿದ್ದರು. ಈಗ ಅದರ ಅಗತ್ಯವಿಲ್ಲ.

ಇದನ್ನು ಎನೇಬಲ್ ಮಾಡಲು ಹೀಗೆ ಮಾಡಿ: ಸೆಟ್ಟಿಂಗ್ಸ್‌ನಲ್ಲಿ ಜನರಲ್ >ಕೀಬೋರ್ಡ್ > ಕೀಬೋರ್ಡ್ಸ್ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿಯೇ ಹೊಸ ಕೀಬೋರ್ಡ್ ಸೇರಿಸಿಕೊಳ್ಳುವ ಬಟನ್ ಕಾಣಿಸುತ್ತದೆ. ಅದನ್ನು ಒತ್ತಿ ಕನ್ನಡ ಸರ್ಚ್ ಮಾಡಿದಾಗ, ಎರಡು ಕೀಲಿಮಣೆ ವಿನ್ಯಾಸಗಳ ಆಯ್ಕೆ ಗೋಚರಿಸುತ್ತದೆ. ‘ಟ್ರಾನ್ಸ್‌ಲಿಟರೇಶನ್’ ಅಥವಾ ‘ಕನ್ನಡ-ಸ್ಟ್ಯಾಂಡರ್ಡ್’ (ಇದು ಇನ್‌ಸ್ಕ್ರಿಪ್ಟ್ ಲೇಔಟ್ ಹೊಂದಿರುತ್ತದೆ). ಟ್ರಾನ್ಸ್‌ಲಿಟರೇಶನ್ ಆಯ್ಕೆ ಮಾಡಿಕೊಂಡು, ಕನ್ನಡದಲ್ಲಿ ಟೈಪ್ ಮಾಡಿಕೊಳ್ಳಬೇಕಿದ್ದರೆ ಆನ್‌ಸ್ಕ್ರೀನ್ ಕೀಬೋರ್ಡ್‌ನ ಕೆಳ ಎಡ ಭಾಗದಲ್ಲಿ ಕಾಣಿಸುವ ಗ್ಲೋಬ್ (ಭೂಗೋಳ) ಬಟನ್ ಒತ್ತಿದರಾಯಿತು. ಇಂಗ್ಲಿಷಲ್ಲಿ ಟೈಪ್ ಮಾಡಬೇಕಾದರೆ ಮರಳಿ ಗ್ಲೋಬ್ ಬಟನ್ ಒತ್ತಿದರಾಯಿತು.

ಇದಕ್ಕೆ ಹೊರತಾಗಿ ಐಫೋನ್‌ಗಳಲ್ಲಿ ಕನ್ನಡ ಟೈಪಿಂಗ್ ಸುಲಭವಾಗಿಸುವ ಸಾಕಷ್ಟು ಖಾಸಗಿ ಕೀಬೋರ್ಡ್‌ಗಳೂ ಇವೆ. ಜನಪ್ರಿಯವಾಗಿರುವ ಜಸ್ಟ್ ಕನ್ನಡ ಈಗ ಮರಳಿ ಆ್ಯಪ್ ಸ್ಟೋರ್‌ನಲ್ಲಿ ಸೇರಿಕೊಂಡಿದೆ. ಪದ ಕನ್ನಡವೂ ಇದೆ. ಇದಲ್ಲದೆ, ತೇಜಸ್ವಿ ಕನ್ನಡ ಎಂಬ ಕೀಬೋರ್ಡ್ ಚೆನ್ನಾಗಿದೆ. ಇಂಡಿಕ್ ಕೀಬೋರ್ಡ್, ಸಂಗಮ್, ದೇಶ್ ಕನ್ನಡ – ಇವುಗಳನ್ನು ಕೂಡ ಐಫೋನ್ ಬಳಕೆದಾರರು ಕನ್ನಡ ಟೈಪಿಂಗ್ ಮಾಡಲು ಉಪಯೋಗಿಸುತ್ತಿದ್ದಾರೆ.

ಹೆಚ್ಚಿನ ಆ್ಯಪ್‌ಗಳು ಇಂಗ್ಲಿಷಿನ QWERTY ಕೀಬೋರ್ಡ್ ವಿನ್ಯಾಸ ಶೈಲಿಯನ್ನೇ ಅನುಸರಿಸುವ ಕೆ.ಪಿ.ರಾವ್ (ನುಡಿ/ಕ.ಗ.ಪ) ಎಂಬ ಫೋನೆಟಿಕ್ (ಧ್ವನ್ಯಾತ್ಮಕ) ಮಾದರಿಯಲ್ಲಿ ಟೈಪಿಂಗ್‌ಗೆ ಅನುಕೂಲ ಮಾಡಿಕೊಡುತ್ತವೆ. ಮತ್ತೆ ಕೆಲವು ಹಿಂದಿನಿಂದಲೂ ಬಳಕೆಯಲ್ಲಿರುವ ಇನ್‌ಸ್ಕ್ರಿಪ್ಟ್(inscript) ಮಾದರಿಯ ಕೀಬೋರ್ಡ್ ವಿನ್ಯಾಸದಲ್ಲಿರುತ್ತವೆ. ನಿಮಗೆ ಟೈಪ್ ಮಾಡಲು ಯಾವುದು ಅನುಕೂಲವೋ ಅದನ್ನು ಪ್ರಯತ್ನಿಸಬಹುದು. ಈಗಿನ ಹೆಚ್ಚಿನ ಆ್ಯಪ್‌ಗಳು ನಾವು ಟೈಪ್ ಮಾಡುತ್ತಿರುವಂತೆಯೇ ಹಲವಾರು ಪದಗಳನ್ನು ಅಲ್ಲೇ ತೋರಿಸುತ್ತವೆ (ಊಹಾತ್ಮಕ ಪದ-ಸಲಹೆ). ನಾವು ಟೈಪ್ ಮಾಡಬೇಕೆಂದಿರುವವನ್ನು ಆಯ್ಕೆ ಮಾಡಿಕೊಂಡರೆ, ಬರವಣಿಗೆ ವೇಗವಾಗುತ್ತದೆ.

ಒಟ್ಟಿನಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಟೈಪ್ ಮಾಡುವುದು ತೀರಾ ಸುಲಭ. ಇನ್ನಂತೂ ನೆಪ ಹೇಳುವಂತೆಯೇ ಇಲ್ಲ. ಕಂಗ್ಲಿಷ್ ಬಿಟ್ಟು ಕನ್ನಡದಲ್ಲೇ ಟೈಪ್ ಮಾಡುತ್ತೇನೆಂದು ಈ ಕನ್ನಡ ರಾಜ್ಯೋತ್ಸವ ದಿನದಿಂದಲೇ ಶುರು ಹಚ್ಚಿಕೊಳ್ಳೋಣ.

Gadget Tips- How to write Kannada in Mobile Phones by Avinash B Published in Prajavani on 01 Nov 2023

LEAVE A REPLY

Please enter your comment!
Please enter your name here