Google Photos: ಡಿಲೀಟ್ ಆದ ಫೋಟೋ ಮರಳಿ ಪಡೆಯುವುದು ಹೇಗೆ?

0
578

ನಮ್ಮ ಆಂಡ್ರಾಯ್ಡ್ ಅಥವಾ ಆ್ಯಪಲ್ ಐಫೋನ್‌ಗಳಲ್ಲಿ ಸ್ಟೋರೇಜ್ ಜಾಗ ಕಡಿಮೆ ಇದ್ದಾಗ, ಫೋಟೋ ಮತ್ತು ವಿಡಿಯೊಗಳನ್ನು ಕ್ಲೌಡ್‌ನಲ್ಲಿ ಅಂದರೆ ಆನ್‌ಲೈನ್ ಸರ್ವರ್‌ನಲ್ಲೇ ಉಳಿಸಲು ಗೂಗಲ್ ಒಂದೊಳ್ಳೆಯ ಆಯ್ಕೆಯನ್ನು ಒದಗಿಸಿದೆ. ಅದು ಕೂಡ ಉಚಿತವಾಗಿ! ‘ಗೂಗಲ್ ಫೋಟೋಸ್’ ಎಂಬ ಆ್ಯಪ್ ಮೂಲಕ ಇದು ಸಾಧ್ಯ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಇದು ಮೊದಲೇ ಅಳವಡಿಕೆಯಾಗಿ ಬರುತ್ತದೆ. ಐಫೋನ್‌ನಲ್ಲಾದರೆ ನಾವೇ ಆ್ಯಪ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ನಮ್ಮ ಗೂಗಲ್ ಮೇಲ್ (ಜಿಮೇಲ್) ಐಡಿಗೆ ಸಂಪರ್ಕವಾಗಿರುವ ಈ ಆ್ಯಪ್‌ನಲ್ಲಿ ನಮ್ಮ ಇಮೇಲ್, ಅದರಲ್ಲಿರುವ ಅಟ್ಯಾಚ್‌ಮೆಂಟ್‌ಗಳು ಎಲ್ಲವನ್ನೂ ಸೇರಿ ಒಟ್ಟು 15 ಜಿಬಿ ಸ್ಟೋರೇಜ್ ಈಗ ಉಚಿತವಾಗಿ ದೊರೆಯುತ್ತಿದೆ. ಇದಕ್ಕಿಂತ ಹೆಚ್ಚು ಸ್ಥಳಾವಕಾಶ ಬೇಕಿದ್ದರೆ, ಹಣ ಪಾವತಿಸಿ ಸ್ಪೇಸ್ ಖರೀದಿಸಬಹುದಾಗಿದೆ. ತಿಂಗಳಿಗೆ 130 ರೂ. ನೀಡಿದರೆ 100 ಜಿಬಿ ಸ್ಪೇಸ್ ಲಭ್ಯ. ಇಲ್ಲೂ ಮತ್ತೊಂದು ಸೌಕರ್ಯವಿದೆ. ನಮ್ಮ ಫೋನ್‌ನಲ್ಲಿನ ಫೋಟೋಗಳ ಗುಣಮಟ್ಟವನ್ನು ಇದ್ದದ್ದು ಇದ್ದಂತೆಯೇ ಅಂದರೆ ಗರಿಷ್ಠ ಗುಣಮಟ್ಟದಲ್ಲಿ ಕ್ಲೌಡ್‌ನಲ್ಲಿ ಸಂಗ್ರಹಿಸಬೇಕಿದ್ದರೆ 15 ಜಿಬಿ ಮಾತ್ರ. ಕೊಂಚ ಕುಗ್ಗಿಸಿದ ಗುಣಮಟ್ಟದಲ್ಲಿ ಸಂಗ್ರಹಿಸಬೇಕಿದ್ದರೆ ಅಪರಿಮಿತ ಸ್ಟೋರೇಜ್ ನಮಗೆ ದೊರೆಯುತ್ತದೆ. ನಮ್ಮ ಫೋಟೋಗಳ ಬ್ಯಾಕಪ್ ಇರಿಸಿಕೊಂಡು, ಮೊಬೈಲ್ ಫೋನ್‌ನಿಂದ ಅವುಗಳನ್ನು ಡಿಲೀಟ್ ಮಾಡಿದಲ್ಲಿ, ಫೋನ್‌ನಲ್ಲಿ ಬೇರೆ ಫೈಲ್/ಆ್ಯಪ್‌ಗಳಿಗೆ ಸ್ಥಳಾವಕಾಶ ಹೆಚ್ಚು ದೊರೆಯುತ್ತದೆ.

ವಿವಿಧ ಕಂಪನಿಯ ಫೋನ್‌ಗಳಲ್ಲಿ ಗ್ಯಾಲರಿ ಎಂಬ ಆ್ಯಪ್ ಕೂಡ ಇರುತ್ತದೆ. ಆದರೆ ಗೂಗಲ್ ಫೋಟೋಸ್ ಬಳಸಿದರೆ ಆನ್‌ಲೈನ್‌ನಲ್ಲಿ ಫೋಟೋ, ವಿಡಿಯೊ ಉಳಿಸಿಕೊಳ್ಳುವ ಆಯ್ಕೆ ದೊರೆಯುತ್ತದೆ ಎಂಬುದನ್ನು ಗಮನಿಸಿ.

ಅಳಿಸಿದ ಫೋಟೋ ಹಿಂಪಡೆಯುವುದು
ಆಕಸ್ಮಿಕವಾಗಿ ‘ಗೂಗಲ್ ಫೋಟೋಸ್’ನಿಂದ ಯಾವುದಾದರೂ ಒಂದು ಫೋಟೋ ಡಿಲೀಟ್ ಆದರೆ ಮತ್ತು ಅದು ನಮಗೆ ಅಗತ್ಯವಾಗಿ ಬೇಕಿದ್ದರೆ, ಅದನ್ನು ಮರಳಿ ಪಡೆಯುವುದು ಹೇಗೆ? ಅದಕ್ಕೂ ಸುಲಭವಾದ ಅನುಕೂಲ ಈ ‘ಗೂಗಲ್ ಫೋಟೋಸ್’ ಆ್ಯಪ್‌ನಲ್ಲಿದೆ. ಆಂಡ್ರಾಯ್ಡ್, ಐಫೋನ್‌ನ ಆ್ಯಪ್‌ನಲ್ಲಿ ಮಾತ್ರವಲ್ಲದೆ ಗೂಗಲ್ ಫೋಟೋಸ್‌ನ ವೆಬ್ ತಾಣದಲ್ಲಿಯೂ (photos.google.com) ಈ ಆಯ್ಕೆ ದೊರೆಯುತ್ತದೆ.

ಡಿಲೀಟ್ ಆದ ಫೋಟೋಗಳನ್ನು ಮರಳಿ ಪಡೆಯಲು ಹೀಗೆ ಮಾಡಿ: ‘ಗೂಗಲ್ ಫೋಟೋಸ್’ ಆ್ಯಪ್ ತೆರೆದಾಗ, ಎಡ ಮೇಲ್ಭಾಗದಲ್ಲಿ ಮೂರು ಗೆರೆಗಳ ಮೆನು ಕಾಣಿಸುತ್ತದೆ. ಅದನ್ನು ಸ್ಪರ್ಶಿಸಿದಾಗ, Trash ಹೆಸರಿನ ಒಂದು ಫೋಲ್ಡರ್ ಕಾಣಿಸುತ್ತದೆ. ನೀವು ಅಳಿಸಿದ ಫೈಲ್‌ಗಳು ಅದರಲ್ಲಿರುತ್ತವೆ. ಯಾವ ಫೋಟೋ ನಿಮಗೆ ಮರಳಿ ದೊರೆಯಬೇಕೋ, ಅದನ್ನು ಒತ್ತಿ ಹಿಡಿದಾಗ ‘ರೈಟ್’ ಮಾರ್ಕ್ ಜೊತೆಗೆ ಅದು ಆಯ್ಕೆಯಾಗುತ್ತದೆ ಮತ್ತು ‘Restore’ ಎಂಬ ಬಟನ್ ಗೋಚರಿಸುತ್ತದೆ. ಅದನ್ನು ಒತ್ತಿದರಾಯಿತು, ನಿಮಗೆ ಬೇಕಾದ ಫೋಟೋ, ಪ್ರಧಾನ ಫೋಲ್ಡರ್‌ಗೆ ಮರಳುತ್ತದೆ. ಆದರೆ, ಇಲ್ಲಿ ನೆನಪಿಡಬೇಕಾದ ವಿಚಾರವೊಂದಿದೆ. ಫೋಟೋ ಡಿಲೀಟ್ ಆದ 60 ದಿನಗಳೊಳಗೆ ಮಾತ್ರ ಅದನ್ನು ಹಿಂಪಡೆಯುವುದು ಸಾಧ್ಯವಾಗುತ್ತದೆ.

ಪ್ರಜಾವಾಣಿ ಪತ್ರಿಕೆಯಲ್ಲಿ 22 ಮೇ 2020 ರಂದು ಪ್ರಕಟ by ಅವಿನಾಶ್ ಬಿ.

LEAVE A REPLY

Please enter your comment!
Please enter your name here