ವರ್ಕ್ ಫ್ರಂ ಹೋಂ: ಮೊಬೈಲನ್ನೇ ವೇಗದ Wi-Fi hotspot ಮಾಡುವುದು ಹೇಗೆ?

0
372

ಕೋವಿಡ್-19 ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಈಗ ಹೆಚ್ಚಿನ ಸಂಸ್ಥೆಗಳು ಮರಳಿ ಜಾರಿಗೆ ತಂದಿವೆ. ಮಕ್ಕಳ ಆನ್‌ಲೈನ್ ಕ್ಲಾಸಿಗೂ ಇಂಟರ್ನೆಟ್ ಬೇಕು. ಇಂಥ ಸಂದರ್ಭದಲ್ಲಿ ಇಂಟರ್ನೆಟ್ ಸಂಪರ್ಕದ್ದೇ ಸಮಸ್ಯೆ ಬಹುತೇಕರಿಗೆ. ಲ್ಯಾಪ್‌ಟಾಪ್ ಅಥವಾ ವೈಫೈ ಬೆಂಬಲಿತ ಡೆಸ್ಕ್‌ಟಾಪ್ ಕಂಪ್ಯೂಟರಿಗೆ ಇಂಟರ್ನೆಟ್ ಸೌಕರ್ಯ ದೊರಕಿಸಬೇಕೆಂದರೆ, ಒಂದೋ ಬ್ರಾಡ್‌ಬ್ಯಾಂಡ್/ಆಪ್ಟಿಕಲ್ ಫೈಬರ್ ಕೇಬಲ್ ವ್ಯವಸ್ಥೆಯನ್ನು ಅವಲಂಬಿಸಬೇಕು. ಅದಕ್ಕೆ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲದವರಿಗೆ, ಸ್ಮಾರ್ಟ್‌ಫೋನನ್ನೇ ವೈಫೈ ಹಾಟ್‌ಸ್ಪಾಟ್ ಆಗಿ ಮಾರ್ಪಡಿಸಿ ಇಂಟರ್ನೆಟ್ ಸಂಪರ್ಕ ಪಡೆಯಬಹುದು. ಇದು ಹೇಗೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಅಷ್ಟೇ ಅಲ್ಲ, ಈ ವೈಫೈ ಹಾಟ್‌ಸ್ಪಾಟ್ ಮೂಲಕ ಹೆಚ್ಚು ವೇಗದಲ್ಲಿ ಇಂಟರ್ನೆಟ್ ಸಂಪರ್ಕ ಬಳಸುವುದರ ಮಾಹಿತಿಯೂ ಹೆಚ್ಚಿನವರಿಗೆ ಇಲ್ಲ.

ಉಚಿತ ವೈಫೈ ಉಪಯೋಗಿಸುವುದಂತೂ ಯಾವತ್ತೂ ಸುರಕ್ಷಿತವಲ್ಲ. ಇಂಥ ಸಂದರ್ಭದಲ್ಲಿ ಆಂಡ್ರಾಯ್ಡ್ ಫೋನ್ ಮೂಲಕ ನಮ್ಮದೇ ವೈಫೈ ನೆಟ್‌ವರ್ಕ್ ಅಥವಾ ಹಾಟ್‌ಸ್ಪಾಟ್ ರಚಿಸುವುದು ಹೇಗೆ? ಅದರ ವೇಗ ಹೆಚ್ಚಿಸುವುದು ಹೇಗೆ ಎಂಬ ಇಲ್ಲಿದೆ ಮಾಹಿತಿ.

ಆಂಡ್ರಾಯ್ಡ್ ಫೋನ್‌ನಲ್ಲಿ ಮೊಬೈಲ್ ಹಾಟ್‌ಸ್ಪಾಟ್ ಸೆಟ್ ಮಾಡುವುದು ತುಂಬ ಸುಲಭ. ಡೇಟಾ (ಮೊಬೈಲ್ ಇಂಟರ್ನೆಟ್ ಸಂಪರ್ಕ) ಆನ್ ಇರಲಿ. ಸೆಟ್ಟಿಂಗ್ ಆ್ಯಪ್ ತೆರೆಯಿರಿ. ಅಲ್ಲಿ ‘ಸೆಟ್ಟಿಂಗ್ಸ್ > ವೈ-ಫೈ & ನೆಟ್‌ವರ್ಕ್ > ಹಾಟ್‌ಸ್ಪಾಟ್ & ಟಿದರಿಂಗ್’ ಎಂಬಲ್ಲಿ ಕ್ಲಿಕ್ ಮಾಡಿ, ವೈಫೈ ಹಾಟ್‌ಸ್ಪಾಟ್ ಒತ್ತಿ, ಅದನ್ನು ಸಕ್ರಿಯಗೊಳಿಸಿ. ಇದಕ್ಕೆ ಸುರಕ್ಷಿತವಾದ ಪ್ರಬಲ ಪಾಸ್‌ವರ್ಡ್ ಹೊಂದಿಸಲೇಬೇಕು. ಇಲ್ಲವಾದಲ್ಲಿ, ಬೇರೆಯವರೂ ಇದೇ ವೈಫೈ ನೆಟ್‌ವರ್ಕ್‌ಗೆ ಸಂಪರ್ಕಿಸಿ, ನಿಮ್ಮ ಡೇಟಾ ಪ್ಯಾಕ್ ಖಾಲಿ ಮಾಡಿಬಿಡುವ ಅಪಾಯವಿದೆ. ಹೆಚ್ಚು ಸಾಧನಗಳು ಸಂಪರ್ಕವಾದರೆ, ಮೊಬೈಲ್ ಡೇಟಾ ವೇಗ ಕಡಿಮೆಯಾಗುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳಲ್ಲಾದರೆ, ಇದನ್ನು ಸಕ್ರಿಯಗೊಳಿಸಲು ಶಾರ್ಟ್‌ಕಟ್ ಮಾರ್ಗವಿದೆ. ನೋಟಿಫಿಕೇಶನ್ ಟ್ರೇಯನ್ನು ಕೆಳಕ್ಕೆ ಎಳೆದಾಗಲೇ ಹಾಟ್‌ಸ್ಪಾಟ್ ಬಟನ್ ಇರುತ್ತದೆ. ಆನ್ ಮತ್ತು ಆಫ್ ಮಾಡುವುದಕ್ಕೂ ಇದೇ ಬಟನ್ ಒತ್ತಬಹುದು.

ಇಂಟರ್ನೆಟ್ ವೇಗ ಹೆಚ್ಚಿಸುವುದು
ಹಾಟ್‌ಸ್ಪಾಟ್ & ಟಿದರಿಂಗ್ ಎಂಬುದನ್ನು ನೇರವಾಗಿ ಆಯ್ಕೆ ಮಾಡಿದರೆ, ವೈಫೈ ಮೂಲಕವೇ ಸಂಪರ್ಕ ಏರ್ಪಡುತ್ತದೆ. ಆದರೆ, ಅಲ್ಲೇ ಮತ್ತೊಂದು ಆಯ್ಕೆಯಿದೆ. ಅದು ಯುಎಸ್‌ಬಿ ಟಿದರಿಂಗ್. ಅಂದರೆ, ಸ್ಮಾರ್ಟ್‌ಫೋನ್‌ನ ಜೊತೆಗೆ ಬಂದಿರುವ ಯುಎಸ್‌ಬಿ ಕೇಬಲ್ ಅನ್ನು ಕಂಪ್ಯೂಟರಿಗೆ ಯುಎಸ್‌ಬಿ ಪೋರ್ಟ್ ಮೂಲಕ ಜೋಡಿಸಿದರೆ ನಿಸ್ತಂತು ಸಂಪರ್ಕಕ್ಕಿಂತಲೂ ಹೆಚ್ಚು ವೇಗದ ಇಂಟರ್ನೆಟ್ ಪಡೆಯಬಹುದು. ಯುಎಸ್‌ಬಿ ಕೇಬಲ್ ಮೂಲಕ ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್‌ಫೋನನ್ನು ಬೆಸೆದ ಬಳಿಕ, ‘ಸೆಟ್ಟಿಂಗ್ಸ್ > ವೈ-ಫೈ & ನೆಟ್‌ವರ್ಕ್ > ಹಾಟ್‌ಸ್ಪಾಟ್ & ಟಿದರಿಂಗ್ > ಯುಎಸ್‌ಬಿ ಟಿದರಿಂಗ್’ ಎಂಬಲ್ಲಿ ಇದನ್ನು ಸಕ್ರಿಯಗೊಳಿಸಿದರಾಯಿತು.

ಆದರೆ ಇಂಟರ್ನೆಟ್ ವೇಗವು ನೀವಿರುವ ಪ್ರದೇಶದಲ್ಲಿ ನೆಟ್‌ವರ್ಕ್ ಮತ್ತು ಫೋನ್/ಕಂಪ್ಯೂಟರ್ ಬೆಂಬಲಿಸುವ ಯುಎಸ್‌ಬಿ ಕೇಬಲ್‌ನ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಈಗ ಯುಎಸ್‌ಬಿ 2.0, ಯುಎಸ್‌ಬಿ 3.0 ಹಾಗೂ ಇತ್ತೀಚೆಗೆ ಯುಎಸ್‌ಬಿ 3.1 ಆವೃತ್ತಿಗಳು ಬಂದಿವೆ. ಯುಎಸ್‌ಬಿ 3.1ರಲ್ಲಿ ಇಂಟರ್ನೆಟ್ ಡೇಟಾ ವಿನಿಮಯದ ವೇಗ ಗರಿಷ್ಠವಾಗಿರುತ್ತದೆ. ಆದರೆ, ಹೊಚ್ಚಹೊಸ ಆವೃತ್ತಿಯ ಕೇಬಲ್ ಖರೀದಿಸುತ್ತೀರೆಂದಾದರೆ, ಅದು ಸ್ಮಾರ್ಟ್‌ಫೋನ್‌ಗೆ ಮತ್ತು ಕಂಪ್ಯೂಟರಿಗೆ ಹೊಂದಿಕೊಳ್ಳುತ್ತದೆಯೇ ಎಂಬುದನ್ನು ಮೊದಲೇ ಖಚಿತಪಡಿಸಿಕೊಳ್ಳುವುದು ಸೂಕ್ತ.

ಮತ್ತಷ್ಟು ವೇಗವಾಗಿಸಲು
ಸಾಮಾನ್ಯವಾಗಿ ಮೊಬೈಲ್ ಹಾಟ್‌ಸ್ಪಾಟ್ ಆನ್ ಮಾಡಿದಾಗ, ಡೇಟಾ ವರ್ಗಾವಣೆಯ ವೇಗವು ಡೀಫಾಲ್ಟ್ ಆಗಿ 2.4GHz ನಲ್ಲಿರುತ್ತದೆ. ಆಯ್ಕೆ ಇರುವ ಆಧುನಿಕ ಮೊಬೈಲ್ ಫೋನ್‌ಗಳಲ್ಲಿ ಇದನ್ನು 5GHz ಗೆ ಬದಲಾಯಿಸಿದರೆ, ಇಂಟರ್ನೆಟ್ ವೇಗವು ಮತ್ತಷ್ಟು ಹೆಚ್ಚಾಗುತ್ತದೆ.

ಬ್ಲೂಟೂತ್ ಟಿದರಿಂಗ್ ಎಂಬ ವ್ಯವಸ್ಥೆಯನ್ನೂ ಇದೇ ರೀತಿ ಬಳಸಿಕೊಳ್ಳಬಹುದು. ಆದರೆ, ಇದಕ್ಕೆ ಹೆಚ್ಚಿನ ಬ್ಯಾಟರಿ ಚಾರ್ಜ್ ಅಗತ್ಯವಿರುತ್ತದೆ ಎಂಬುದು ಗಮನದಲ್ಲಿರಲಿ. ಯುಎಸ್‌ಬಿ ಟಿದರಿಂಗ್ ವ್ಯವಸ್ಥೆ ಬಳಸುವುದರ ಮತ್ತೊಂದು ಲಾಭ ಎಂದರೆ, ಅದನ್ನು ಜೋಡಿಸಿದ ಕಂಪ್ಯೂಟರ್/ಲ್ಯಾಪ್‌ಟಾಪ್, ನಿಮ್ಮ ಫೋನನ್ನು ಚಾರ್ಜ್ ಕೂಡ ಮಾಡುತ್ತಿರುತ್ತದೆ.

My article Published in Prajavani on 11/12 Jan 2022

LEAVE A REPLY

Please enter your comment!
Please enter your name here